Saturday, March 05, 2016

ಮಾರ್ಚ್ 3ರ ಕನ್ಹಯ್ಯ ಭಾಷಣ :ಸ್ವಾತಂತ್ರ್ಯ ಬೇಕು; ಭಾರತದಿಂದಲ್ಲ, ಭಾರತದ ಒಳಗೆ…ಕನ್ಹಯ್ಯ ಕುಮಾರ್, ಮಾರ್ಚ್ 3, 2016; ಜಾಮೀನಿನ ಮೇಲೆ ಬಿಡುಗಡೆಯ ನಂತರ, ಜೆ ಎನ್ ಯು ಕ್ಯಾಂಪಸ್ಸಿನಲ್ಲಿ ಮಾಡಿದ ಭಾಷಣ

ಅನುವಾದ : ಚೇತನಾ ತೀರ್ಥಹಳ್ಳಿ


ಸಂಗಾತಿಗಳೇ,
ಜೆ ಎನ್ ಯು ಎಸ್ ಯು ಅಧ್ಯಕ್ಷನಾಗಿ ನಾನು, ನಮ್ಮನ್ನು ಬೆಂಬಲಿಸಿದ ಈ ದೇಶದ ಸಮಸ್ತ ಜನತೆಗೆ ನಿಮ್ಮೆಲ್ಲರ ಪರವಾಗಿ ಇಲ್ಲಿ ನೆರೆದಿರುವ ಮಾಧ್ಯಮಗಳ ಮೂಲಕ ಧನ್ಯವಾದ ಸಮರ್ಪಿಸುತ್ತೇನೆ. ನಮ್ಮ ಜೊತೆ ನಿಂತ ಪ್ರತಿಯೊಬ್ಬರಿಗೂ ನನ್ನ ಸಲಾಮ್.
ಜಗತ್ತಿನ ಬೇರೆ ಬೇರೆ ಭಾಗಗಳ ಜನ ಕೂಡ ಜೆ ಎನ್ ಯು ಜೊತೆ, ಬಂಧಿತರಾದವರ ಜೊತೆ ನಿಂತು, ನಮಗಾಗಿ ದನಿ ಎತ್ತಿದ್ದಾರೆ. ಅವರೆಲ್ಲರಿಗೂ ನಿಮ್ಮ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.

ಮೀಡಿಯಾದ ಮೂಲಕ ನಮಗೆ ಬೆಂಬಲ ಸೂಚಿಸಿದ ಎಲ್ಲರಿಗೂ, ಪತ್ರಕರ್ತರು, ಸಾಹಿತಿಗಳು, ರಾಜಕಾರಣಿಗಳು, ರಾಜಕಾರಣದಿಂದ ಹೊರತಾಗಿರುವವರು – ಹೀಗೆ ಯಾರೆಲ್ಲ ಜೆ ಎನ್ ಯು ಗೆ ನ್ಯಾಯ ದೊರಕಿಸಿಕೊಡಲು ಹೋರಾಡ್ತಿದ್ದಾರೋ, ರೋಹಿತ್ ವೇಮುಲನ ಸಾವಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿದ್ದಾರೋ ಅವರೆಲ್ಲರಿಗೂ ಲಾಲ್ ಸಲಾಮ್ ಸಲ್ಲಿಸುವ ಮೂಲಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.

ಹಾಗೇ ಪಾರ್ಲಿಮೆಂಟಿನಲ್ಲಿ ಕುಳಿತು ಯಾವುದು ಸರಿ, ಯಾವುದು ತಪ್ಪು ಅಂತ ನಿಶ್ಚಯಿಸುವ ಈ ದೇಶದ ದೊಡ್ಡ ದೊಡ್ಡ ಮಹಾನುಭಾವರಿಗೆ ಧನ್ಯವಾದ, ಅವರ ಪೊಲೀಸರಿಗೆ ಧನ್ಯವಾದ, ಅವರ ಮುಖವಾಣಿಯಂತಿರುವ ಮೀಡಿಯಾದ ಆ ಚಾನೆಲ್ಲುಗಳಿಗೂ ನನ್ನ ಧನ್ಯವಾದ. ನಮ್ಮ ಕಡೆ ಒಂದು ಮಾತಿದೆ. ಹೆಸರು ಹಾಳಾದರೇನು ಹೋಯ್ತು? ಹೆಸರಂತೂ ಬಂತು!! ಜೆ ಎನ್ ಯುವಿನ ಹೆಸರುಗೆಡಿಸೋಕೆಂದೇ ಅವರು ಪ್ರೈಮ್ ಟೈಮಿನಲ್ಲಿ ಜಾಗ ಕೊಟ್ಟರು. ಅವರಿಗೂ ನನ್ನ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.

ನಮಗೆ ಯಾರ ಕುರಿತೂ ದ್ವೇಷವಿಲ್ಲ. ಅದರಲ್ಲೂ ಎಬಿವಿಪಿ ಕುರಿತು ಇಲ್ಲವೇ ಇಲ್ಲ. ಬದಲಿಗೆ ಸಹಾನುಭೂತಿಯಿದೆ. ನಮ್ಮ ಕ್ಯಾಂಪಸ್ಸಿನಲ್ಲಿರುವ ಎಬಿವಿಪಿ ಹೊರಗಿನ ಎಬಿವಿಪಿಗಿಂತ ಹೆಚ್ಚು ರ್ಯಾಷನಲ್ ಆಗಿದೆ. ಚರ್ಚೆಯಲ್ಲಿ ನಾವು ಹೇಗೆ ಅವರ ನೀರಿಳಿಸಿದೆವೆಂದು ನೀವು ನೋಡಿದ್ದೀರಿ. ಅವರ ಬಗ್ಗೆ ನಮಗೆ ಯಾವುದೇ ಕೆಟ್ಟ ಭಾವನೆ ಇಲ್ಲ. ಅವರಿಗಿಂತ ಹೆಚ್ಚು ನಾವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿದ್ದೀವಿ. ನಾವು ನಿಜಕ್ಕೂ ಸಂವಿಧಾನದಲ್ಲಿ ನಂಬಿಕೆ ಇರಿಸಿದ್ದೀವಿ. ಆದ್ದರಿಂದ ಎಬಿವಿಪಿಯನ್ನು ಶತ್ರುವಿನಂತೆ ನೋಡದೆ ವಿರೋಧ ಪಕ್ಷವೆಂದು ಪರಿಗಣಿಸ್ತೀವಿ. ಎಬಿವಿಪಿ ಗೆಳೆಯರೇ, ನಾನು ನಿಮ್ಮನ್ನು ಬೇಟೆಯಾಡೋದಿಲ್ಲ. ಶಿಕಾರಿಗೆ ಲಾಯಕ್ಕಾದವರನ್ನು ಮಾತ್ರ ಶಿಕಾರಿ ಮಾಡಲಾಗ್ತದೆ.

ಜೆ ಎನ್ ಯು ಮೊದಲ ಬಾರಿಗೆ ಇಷ್ಟು ದೊಡ್ಡ ದನಿಯಾಗಿ ಎದ್ದು ನಿಂತಿದೆ. ಸರಿಯನ್ನು ಸರಿಯೆಂದೂ ತಪ್ಪನ್ನು ತಪ್ಪೆಂದೂ ಗಟ್ಟಿಯಾಗಿ ಕೂಗಿ ಹೇಳುವ ಎದೆಗಾರಿಕೆ ತೋರಿದೆ. ಇದು ಜೆ ಎನ್ ಯುವಿನ ತಾಖತ್ತು. ನಮಗೆ ಆಜಾದಿ ಬೇಕು. ಹೌದು. ಆಜಾದಿ ಬೇಕು ಅಂತ ಕೇಳೋದು ತಪ್ಪೇನು? ಈ ದೇಶದ ನೆಲದಲ್ಲಿ ನಿಂತು ಸರಿಯನ್ನು ಸರಿ ತಪ್ಪನ್ನು ತಪ್ಪು ಅಂತ ಹೆಳುವ ಆಜಾದಿ ನಮಗೆ ಬೇಕು. ಒಂದು ಮಜದ ವಿಷಯ ಗೊತ್ತಾ? ನಮ್ಮದು ಆಯಾ ಕ್ಷಣದ ಪ್ರತಿಕ್ರಿಯೆ. ಆಯಾ ಸಂದರ್ಭಗಳಿಗೆ ತಕ್ಕಂಥ ಸ್ಪಾಂಟೆನಸ್ ಆದ ಪ್ರತಿಕ್ರಿಯೆ. ಆದರೆ ಅವರದ್ದು ಪೂರ್ತಿ ಉಲ್ಟಾ. ಅವರದ್ದೆಲ್ಲ ಪೂರ್ವ ನಿಯೋಜಿತೆ. ಆದರೆ ನಮ್ಮದು ಆಯಾ ಹೊತ್ತಿಗೆ ನಮ್ಮ ಒಳಗಿನಿಂದ ಹೊಮ್ಮುವ ಪ್ರತಿಕ್ರಿಯೆ. ಅದಕ್ಕೇ ನಮ್ಮ ದನಿ ಗಟ್ಟಿಯಾಗಿದೆ. ನ್ಯಾಯವಾಗಿದೆ. ಈ ದೇಶದ ಸಂವಿಧಾನದಲ್ಲಿ, ದೇಶದ ಕಾನೂನಿನಲ್ಲಿ, ಈ ದೇಶದ ನ್ಯಾಯ ಪ್ರಕ್ರಿಯೆಯಲ್ಲಿ ನಮಗೆ ಭರವಸೆ ಇದೆ. ಹಾಗೇ, ಬದಲಾವಣೆಯೇ ಸತ್ಯ ಅನ್ನೋ ಮಾತಿನಲ್ಲೂ ಭರವಸೆ ಇದೆ. ಎಲ್ಲವೂ ಬದಲಾಗುತ್ತವೆ. ನಾವು ಬದಲಾವಣೆಯ ಪಕ್ಷದಲ್ಲಿ ನಿಂತಿದ್ದೀವಿ. ಬದಲಾವಣೆ ಸಾಧಿಸಿ ತೋರಿಸ್ತೀವಿ. ಸಂವಿಧಾನದ ಮೇಲೆ ನಮಗೆ ಸಂಫೂರ್ಣ ಭರವಸೆ ಇದೆ. ಸಂವಿಧಾನದ ಆಶಯಗಳ ಜೊತೆ ನಾವು ಗಟ್ಟಿಯಾಗಿ ನಿಲ್ತೀವಿ. ಪ್ರಸ್ತಾವನೆಯಲ್ಲಿ ಹೇಳಲಾಗಿರುವ ಅದರ ಎಲ್ಲ ಧಾರೆಗಳ ಜೊತೆ ಪ್ರವಹಿಸ್ತೀವಿ. ಸಮಾಜವಾದ, ಧರ್ಮನಿರಪೇಕ್ಷತೆ, ಸಮಾನತೆ – ಇವುಗಳ ಜೊತೆ ಬೆಸೆದುಕೊಂಡಿದ್ದೀವಿ.

ನಾನು ಈ ಹಿಂದೆಲ್ಲ ಸಾಕಷ್ಟು ಪ್ರಶ್ನೆಗಳನ್ನ ಕೇಳ್ತಿದ್ದೆ. ನಾನಿವತ್ತು ಭಾಷಣ ಮಾಡೋದಿಲ್ಲ. ನನ್ನ ಅನುಭವಗಳನ್ನ ನಿಮ್ಮ ಜೊತೆ ಹಂಚಿಕೊಳ್ತೀನಿ. ಮೊದಲು ಭಾಷಣಕ್ಕೆ ಮುಂಚೆ ಸಿಕ್ಕಾಪಟ್ಟೆ ಓದ್ತಾ ಇದ್ದೆ, ವ್ಯವಸ್ಥೆಯನ್ನು ಛೇಡಿಸ್ತಿದ್ದೆ. ಈ ಸಲ ಓದಿದ್ದು ಕಡಿಮೆಯಾಗಿದೆ ಮತ್ತು ಛೇಡಿಸೋಕೆ ಸಾಕಷ್ಟಿದೆ. ಒಬ್ರು ಹೇಳ್ತಾರೆ, ಜೆ ಎನ್ ಯು ನ ಜಾಲಾಡಿದೀನಿ ಅಂತ. ಅವರೊಂದಷ್ಟು ದಾಖಲೆ ಕೊಡ್ತಾರೆ. ಫಸ್ಟ್ ಹ್ಯಾಂಡ್ ಇನ್ಫರ್ಮೇಷನ್ ಇದೆ ಅಂತ ಹೇಳ್ತಾರೆ! ಈಗ ನ್ಯಾಯಾಲಯದ ಅಧೀನದಲ್ಲಿರೋ ಸಂಗತಿ ಬಗ್ಗೆ ನಾನು ಏನೂ ಹೇಳೋದಿಲ್ಲ. ಆಂದ್ರೆ ಒಂದು ಮಾತು, ಸಂವಿಧಾನವನ್ನ ನಿಜಕ್ಕೂ ಪ್ರೀತಿಸುವ, ಬಾಬಾ ಸಾಹೇಬರ ಕನಸುಗಳನ್ನ ಸಾಕಾರಗೊಳಿಸಲು ಬಯಸುವ ಈ ದೇಶದ ಜನತೆ, ನಾನು ಏನು ಹೇಳಬಯಸ್ತಿದ್ದೀನಿ ಅನ್ನೋದನ್ನ ಇಷಾರೆಗಳಲ್ಲೇ ಅರ್ಥ ಮಾಡಿಕೊಂಡಿರುತ್ತೆ.

ಪ್ರಧಾನ ಮಂತ್ರಿ ಟ್ವೀಟ್ ಮಾಡಿದಾರೆ; ಹೇಳಿದಾರೆ, “ಸತ್ಯಮೇವ ಜಯತೆ!”. ನಾನೂ ಹೇಳ್ತೀನಿ, “ಪ್ರಧಾನ ಮಂತ್ರೀ ಜೀ, ನಿಮ್ಮ ಜೊತೆ ಬಹಳವೇ ಮತಭೇದವಿದೆ. ಆದ್ರೆ ಸತ್ಯಮೇವ ಜಯತೆಯ ಘೋಷ ಬರೀ ನಿಮ್ಮ ಪಾಲಿಗಲ್ಲ, ಈ ದೇಶದ ಪಾಲಿಗೂ ಇದೆ, ಸಂವಿಧಾನದ ಪಾಲಿಗೂ ಇದೆ. ನಾನೂ ಕೂಡ ಹೇಳ್ತೀನಿ, ಸತ್ಯಮೇವ ಜಯತೇ!” ಮತ್ತು ಸತ್ಯಕ್ಕೆ ಜಯವಾಗುತ್ತೆ, ಮತ್ತು ಈ ಹೋರಾಟದಲ್ಲಿ ತೊಡಗಿಕೊಂಡಿರುವ ಸಮಸ್ತ ಜನತೆಗಾಗಿ ನನ್ನ ಅನುಭವಗಳನ್ನ ಹಂಚಿಕೊಳ್ತೀನಷ್ಟೆ.

ಮೊದಲನೆಯದಾಗಿ, ಕೆಲವು ವಿದ್ಯಾರ್ಥಿಗಳ ಮೇಲೆ ಒಂದು ರಾಜಕೀಯ ಅಸ್ತ್ರವಾಗಿ ದೇಶದ್ರೋಹದ ಆಪಾದನೆ ಹೊರಿಸಲಾಗಿದೆ ಅಂತ ಅಂದುಕೊಳ್ಬೇಡಿ. ಅದನ್ನ ತಿಳಿಯಬೇಕಿರೋದು ಹೀಗೆ. ನಾನಿದನ್ನ ಈ ಹಿಂದೆಯೂ ಬಹಳ ಸಲ ಹೇಳಿದೀನಿ. ನಾವು ಹಳ್ಳಿಯಿಂದ ಬಂದವರು. ನಿಮಗೆ ಈಗಾಗ್ಲೇ ನನ್ನ ಮನೆಜನರ ಪರಿಚಯವಾಗಿರಬೇಕು. ನಮ್ಮ ಕಡೆ ರೈಲ್ವೇ ಸ್ಟೇಷನ್ ಹತ್ರ ಆಗಾಗ ಜಾದೂ ಪ್ರದರ್ಶನ ನಡೀತಾ ಇರತ್ತೆ. ಜಾದೂಗಾರ ಜಾದೂ ತೋರಿಸ್ತಾನೆ, ಹೆಬ್ಬೆಟ್ಟಿನ ಮಂದಿ ಅದನ್ನ ನೋಡ್ತಾರೆ. ಜಾದೂ ತೋರಿಸಲು ಅವರು ಬಳಸೋದು ನಮ್ಮೆಲ್ಲರ ಮೆಚ್ಚಿನ ಉಂಗುರವನ್ನ. ಉಂಗುರ ಮುಷ್ಟಿಯಲ್ಲಿ ಹಿಡಿದು ಛೂಮಂತರ್ ಅಂದ್ರೆ ಅದು ಮಾಯವಾಗುತ್ತೆ. ಇಲ್ಲಾ, ಮಾಯವಾದ ುಂಗುರ ಬಂದುಬಿಡತ್ತೆ. ಈ ದೇಶ ಆಳೋರ ಕಥೆಯೂ ಹೀಗೇನೇ. ಅವ್ರು ಹೇಳ್ತಿದ್ರು, ಕಪ್ಪು ಹಣ ಬರುತ್ತೆ ಅಂತ. “ಹರ ಹರ ಮೋದಿ!! ಬೆಲೆ ಏರಿಕೆ ಗಗನ ಮುಟ್ಟಿದೆ. ಎಷ್ಟೂಂತ ಸಹಿಸ್ತೀರಿ? ಈ ಸಲ ಮೋದಿಯನ್ನ ಆರಿಸಿ” “ಸಬ್ ಕಾ ಸಾಥ್ ಸಬ್ ಕ ವಿಕಾಸ್” ಅಂತೆಲ್ಲ. ಆ ಎಲ್ಲ ಆಶ್ವಾಸನೆಗಳನ್ನ ಜನ ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ನಾವು ಭಾರತೀಯರು ಬಹಳ ಬೇಗ ಮರೀತೇವೆ. ಆದ್ರೆ ಈಸಲದ ತಮಾಷೆ ಎಷ್ಟು ಜೋರಿತ್ತು ಅಂದ್ರೆ, ಅದನ್ನ ಮರೆಯೋದಕ್ಕೇ ಆಗ್ತಿಲ್ಲ. ಈ ಜುಮ್ಲಾಗಳನ್ನ ಜನ ಮರೆಯುವಂತೆ ಮಾಡೋಕೆ ಅವರು ಪ್ರಯತ್ನಿಸ್ತಿದ್ದಾರೆ. ಮೊದಲು ಸುಳ್ಳುಗಳನ್ನ ಸೃಷ್ಟಿಸೋದು. ಆಮೇಲೆ ಈ ದೇಶದಲ್ಲಿ ಯಾರೆಲ್ಲ ರಿಸರ್ಚ್ ಸ್ಕಾಲರುಗಳಿದ್ದಾರೋ ಅವರ ಫೆಲೋಷಿಪ್ ನಿಲ್ಲಿಸಿಬಿಡೋದು. ಜನ ಆಗ ಏನ್ಮಾಡ್ತಾರೆ? “ಫೆಲೋಷಿಪ್ ಕೊಟ್ಬಿಡಿ, ಫೆಲೋಷಿಪ್ ಕೊಟ್ಬಿಡಿ” ಅಂತ ಬೆನ್ನು ಬೀಳ್ತಾರೆ. ಇವ್ರು ಹೇಳ್ತಾರೆ, ಮೊದಲೇನು ಕೊಡ್ತಿದ್ವೋ ಐದರಿಂದ ಎಂಟು ಸಾವಿರ… ಅಷ್ಟನ್ನೇ ಮುಂದುವರೆಸ್ತೀವಿ ಅಂತ. ಇದರರ್ಥ, ಹೆಚ್ಚಿಸೋ ಮಾತಿಗೆ ಅವಕಾಶವೇ ಇಲ್ಲ ಅಂತ. ಈಗಯಾರು ಮಾತಾಡೋದು? ಜೆ ಎನ್ ಯು!
ಆದ್ರಿಂದ ನಿಮಗೆ ಬೈಗುಳ ಬೀಳ್ತಾ ಇದ್ರೆ ಚಿಂತೆ ಮಾಡ್ಬೇಡಿ. ಏನನ್ನ ಗಳಿಸಿದೀವೋ ಅದನ್ನೇ ತಿನ್ತಾ ಇದ್ದೀವಿ ನಾವಿವತ್ತು. ಈ ದೇಶದಲ್ಲಿ ಜನವಿರೋಧಿ ಸರ್ಕಾರವಿದೆ. ಈ ಜನವಿರೋಧಿ ಸರ್ಕಾರ ಆದೇಶ ಕೊಟ್ರೆ ಸಾಕು, ಅದರ ಸೈಬರ್ ಸೆಲ್ ಏನ್ಮಾಡತ್ತೆ ಹೇಳಿ? ಅದು ಡಾಕ್ಟರ್ಡ್ ವಿಡಿಯೋ ತಯಾರಿಸುತ್ತೆ!! ನಿಮ್ಮ ಮೇಲೆ ಬೈಗುಳಗಳ ಮಳೆ ಸುರಿಸುತ್ತೆ. ಮತ್ತು ಅದು ನಿಮ್ಮ ಡಸ್ಟ್ ಬಿನ್ನಿನಲ್ಲಿ ಎಷ್ಟು ಕಾಂಡೋಮ್ ಇವೆ ಅಂತ ಗಣತಿಗೆ ಶುರುವಿಡತ್ತೆ!

ಈಗ ಸಮಯ ಬಹಳ ಗಂಭೀರವಾಗಿದೆ. ಈ ಗಂಭೀರ ಸಮಯದಲ್ಲಿ ನಾವು ಯೋಚಿಸಬೇಕಿರೋದು ಬಹಳ ಇದೆ. ಜೆ ಎನ್ ಯು ಮೇಲೆ ನಡೆಸಿದ ದಾಳಿ ಒಂದು ನಿಯೋಜಿತ ದಾಳಿಯಾಗಿತ್ತು ಅನ್ನೋದನ್ನ ನಾವು ಅರ್ಥ ಮಾಡಿಕೊಳ್ಳಬೇಕಿದೆ. ನಾವು ಅಕ್ಯುಪೈ ಯುಜಿಸಿ ಚಳವಳಿಯನ್ನ ಮುಂದುವರೆಸೋಕೆ ಬಯಸಿದ್ದರಿಂದಲೇ ಈ ದಾಳಿ ರೂಪುಗೊಳಿಸಲಾಗಿದೆ. ರೋಹಿತ್ ವೇಮುಲನ ಸಾವಿಗೆ ನ್ಯಾಯ ದೊರಕಿಸುವ ಹೋರಾಟವನ್ನ ಕೈಗೆತ್ತಿಕೊಂಡಿದ್ದೇವಲ್ಲ, ಈ ಹೋರಾಟವನ್ನ ಮುಗಿಸಿಬಿಡುವ ಉದ್ದೇಶದಿಂದ ಈ ದಾಳಿ ರೂಪಿಸಲಾಗಿದೆ.

ನೀವು ಜೆ ಎನ್ ಯು ಸಂಗತಿಯನ್ನು ಪ್ರೈಮ್ ಟೈಮಿಗೆ ತಂದಿರೋದೇ ಈ ಕಾರಣಕ್ಕೆ ಅಂತ ನಮಗೆ ಗೊತ್ತಿದೆ ಮಾನನೀಯ ಎಕ್ಸ್ ಆರೆಸ್ಸೆಸ್… ನೀವು ಈ ದೇಶದ ಜನರ ಮನಸಿನಿಂದ ಸಾಕಷ್ಟು ವಿಷಯಗಳನ್ನ ಅಳಿಸಿಹಾಕುವ ಹುನ್ನಾರದಲ್ಲಿದ್ದೀರಿ. ಈ ದೇಶದ ಪ್ರಧಾನಿ ಪ್ರತಿಯೊಬ್ಬರ ಖಾತೆಯಲ್ಲಿ ಹದಿನೈದು ಲಕ್ಷ ರುಪಾಯಿ ಜಮೆ ಮಾಡುವ ಮಾತಾಡಿದ್ದರು. ಆದರೆ ಒಂದು ಮಾತು ಹೇಳೋಕೆ ಬಯಸ್ತೀನಿ. ಜೆ ಎನ್ ಯು ನಲ್ಲಿ ಪ್ರವೇಶ ಪಡೆಯೋದು ಸುಲಭದ ಮಾತಲ್ಲ. ಜೆ ಎನ್ ಯು ನಲ್ಲಿರುವವರ ಬಳಿ ಮಾತು ಮರೆಸೋದು ಕೂಡ ಸುಲಭವಲ್ಲ. ನೀವು ಬಯಸೋದಾದ್ರೆ ನಾವು ಮರೆತುಹೋಗ್ತೀವಿ. ಆದ್ರೆ ನಾವೂ ನಿಮಗೆ ಮತ್ತೆ ಮತ್ತೆ ನೆನಪಿಸೋಕೆ ಇಷ್ಟಪಡ್ತೀವಿ, ಯಾವಾಗೆಲ್ಲ ಈ ದೇಶದ ಆಡಳಿತ ಯಂತ್ರ ಅತ್ಯಾಚಾರ ನಡೆಸಿದೆಯೋ ಆಗೆಲ್ಲ ಜೆ ಎನ್ ಯು ನಿಂದ ಗಟ್ಟಿಯಾದ ದನಿ ಮೊಳಗಿದೆ. ಮತ್ತು ನಾವು ಈಗ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ, ಈ ಮಾತನ್ನು ನಾನು ಮತ್ತೆಮತ್ತೆ ಹೇಳಲು ಬಯಸ್ತೀನಿ. ನೀವು ನಮ್ಮ ಹೋರಾಟವನ್ನ ದುರ್ಬಲಗೊಳಿಸೋಕೆ ಸಾಧ್ಯವಿಲ್ಲ.


ನೀವೇನು ಹೇಳ್ತೀರಿ? ಒಂದು ಕಡೆ ದೇಶದ ಯುವಕರು ಗಡಿಗಳಲ್ಲಿ ಕಾದಾಡಿ ಜೀವ ಕೊಡ್ತಿದ್ದಾರೆ. ಅವರೆಲ್ಲರಿಗೆ ನನ್ನ ವಂದನೆಗಳನ್ನ ಸಲ್ಲಿಸ್ತೀನಿ. ನನ್ನದೊಂದು ಪ್ರಶ್ನೆಯಿದೆ. ನಾನು ಜೈಲಲ್ಲಿ ಒಂದು ಪಾಠ ಕಲಿತುಬಂದೆ. ವಿಚಾರಧಾರೆಯ ಸವಾಲುಗಳನ್ನು ಎತ್ತುವಾಗ ಸುಖಾಸುಮ್ಮನೆ ಯಾರೊಬ್ಬ ವ್ಯಕ್ತಿಗೂ ಪಬ್ಲಿಸಿಟಿ ಕೊಡಕೂಡದು ಅಂತ. ಆದ್ದರಿಂದ ನಾನು ಆ ಲೀಡರ್ ನ ಹೆಸರು ಹೇಳೋದಿಲ್ಲ. ಬಿಜೆಪಿಯ ಒಬ್ಬ ನೇತಾ ಲೋಕಸಭೆಯಲ್ಲಿ ಹೇಳಿದ್ರು ಈ ದೇಶದ ಗಡಿಗಳಲ್ಲಿ ಯುವಕರು ಸಾಯ್ತಿದ್ದಾರೆ ಅಂತ. ಅವರಿಗೆ ನಾನು ಕೇಳ್ತೀನಿ, ಅವರು ನಿಮ್ಮ ತಮ್ಮಂದಿರೇನು? ಈ ದೇಶದೊಳಗೆ ಕೋಟ್ಯಂತರ ರೈತರು ಸಂಕಟ ಪಡ್ತಿದ್ದಾರೆ. ನಮಗಾಗಿ ಅನ್ನ ಬೆಳೆಯುವವರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಗಡಿಯಲ್ಲಿ ನಿಂತಿರುವ ಆ ಯುವಕರ ತಂದೆಯಂದಿರೂ ಅಂಥವರಲ್ಲಿ ಸೇರಿದ್ದಾರೆ. ಈ ಜನರ ಬಗ್ಗೆ ನೀವು ಏನು ಹೇಳ್ತೀರಿ? ಹೊಲದಲ್ಲಿ ದುಡಿಯುವ ರೈತ ನನ್ನಪ್ಪ. ನನ್ನ ಅಣ್ಣ ಸೇನೆಗೆ ಸೇರಿಕೊಳ್ತಾನೆ. ರೈತನಾದ ನನ್ನಪ್ಪನೂ ಸಾಯುತ್ತಾನೆ, ಗಡಿಯಲ್ಲಿ ನಿಂತ ಅಣ್ಣನೂ ಸಾಯ್ತಾನೆ. ಇದ್ಯಾವುದಕ್ಕೂ ಸಂಬಂಧವೇ ಇಲ್ಲದ ನೀವು ಇದನ್ನೊಂದು ಸರಕಾಗಿಸ್ಕೊಂಡು ವಾಗ್ವಾದ ಶುರುಹಚ್ಚಬೇಡಿ. ನನ್ನ ಜನರು ದೇಶದ ಒಳಗೂ ಸಾಯ್ತಾರೆ. ನನ್ನ ಜನರು ದೇಶದ ಗಡಿಯಲ್ಲೂ ಸಾಯ್ತಾರೆ. ನನ್ನ ಪ್ರಶ್ನೆ ಇದೆ ನಿಮಗೆ, ಪಾರ್ಲಿಮೆಂಟಿನಲ್ಲಿ ನಿಂತು ಯಾರಿಗೋಸ್ಕರ ರಾಜಕೀಯ ಮಾಡ್ತಿದ್ದೀರಿ? ಅಲ್ಲಿ ಸಾಯ್ತಿರುವವರ ಜವಾಬ್ದಾರಿ ಯಾರು ಹೊರುತ್ತಾರೆ? ಸಾಯುವವರು ಜವಾಬ್ದಾರರಲ್ಲ, ಯುದ್ಧಕ್ಕೆ ಹಚ್ಚುವವರು ಜವಾಬ್ದಾರರು. ನನ್ನ ತಂದೆ, ನನ್ನ ಅಣ್ಣ ಇವರೆಲ್ಲ ಹೇಗೆ ಸಾಯ್ತಿದ್ದಾರೆ ನೋಡಿ. ಪ್ರೈಮ್ ಟೈಮಿನಲ್ಲಿ ಕೂತವರು ಎರಡು ಕಾಸಿನ ಸ್ಪೀಕರ್ ಮುಂದೆ ಕಿರುಚಾಡುತ್ತಾರಷ್ಟೆ. ಇಂಥವರಿಗೆ ನನ್ನ ಪ್ರಶ್ನೆಗಳಿವೆ.
ದೇಶದೊಳಗೆ ಸಮಸ್ಯೆಗಳಿವೆ. ಈ ಸಮಸ್ಯೆಗಳಿಂದ ಮುಕ್ತಿ ಬಯಸೋದು ತಪ್ಪಾ? ಅವರು ಕೇಳ್ತಾರೆ, “ಯಾರಿಂದ ಆಜಾದಿ (ಸ್ವಾತಂತ್ರ್ಯ) ಕೇಳ್ತಿದ್ದೀಯ?” ಅಂತ. “ನೀನೇ ಹೇಳು, ಭಾರತ ಯಾರನ್ನಾದ್ರೂ ಗುಲಾಮರನ್ನಾಗಿ ಮಾಡಿಟ್ಟುಕೊಂಡಿದೆಯೇನು? ಹೇಳು ನೋಡೋಣ?” ಇಲ್ಲ… ನಾವು ಭಾರತದಿಂದ ಸ್ವಾತಂತ್ರ್ಯ ಕೇಳ್ತಿಲ್ಲ. ಸರಿಯಾಗಿ ಕೆಳಿಸ್ಕೊಳ್ಳಿ, ನಾವು ಭಾರತದಿಂದ ಸ್ವಾತಂತ್ರ್ಯ ಕೇಳ್ತಿಲ್ಲ… ಭಾರತದಲ್ಲಿ ಸ್ವಾತಂತ್ರ್ಯ ಕೆಳ್ತಿದ್ದೀವಿ. ಇಂದ ಮತ್ತು ಅಲ್ಲಿ – ಈ ಪ್ರತ್ಯಯಗಳಲ್ಲಿ ವ್ಯತ್ಯಾಸವಿದೆ. ಬ್ರಿಟಿಷರಿಂದ ಸ್ವಾತಂತ್ರ್ಯ ಕೇಳ್ತಿಲ್ಲ. ಈ ದೇಶದ ಜನ ಅದನ್ನು ಹೋರಾಡಿ ಪಡೆದಿದ್ದಾರೆ.

ಈಗ ನಾನು ನನ್ನ ಅನುಭವ ಹೇಳ್ತೀನಿ ಕೇಳಿ. ಪೊಲೀಸರು ಕೇಳಿದ್ರು, “ನೀವು ಲಾಲ್ ಸಲಾಮ್, ಲಾಲ್ ಸಲಾಮ್ ಅಂತ ಕೂಗ್ತಿದ್ರಲ್ಲ ಯಾಕೆ?” ಅದೇನೂ ಔಪಚಾರಿಕ ವಿಚಾರಣೆಯಾಗಿರಲಿಲ್ಲ. ನನ್ನನ್ನ ಊಟ ತಿಂಡಿಗೆ, ಮೆಡಿಕಲ್ ಚೆಕಪ್ಪಿಗೆ ಕರೆದ್ಕೊಂಡು ಹೋಗುವಾಗ ಅವೆಲ್ಲ ಮಾತಾಡ್ತಿದ್ವಿ. ನನಗಂತೂ ಸುಮ್ಮನಿರೋಕೇ ಬರೋದಿಲ್ಲ. ನಾವು ಜೆ ಎನ್ ಯು ನವರು ಸುಮ್ಮನೆ ಇರಬಲ್ಲೆವಾದ್ರೂ ಹೇಗೆ!? ನಾನು ಅವರೊಂದಿಗೆ ಹರಟುತ್ತಿದ್ದೆ. ಮಾತುಮಾತಲ್ಲೆ ನನಗೆ ಗೊತ್ತಾಯ್ತು, ಆ ಮನುಷ್ಯನೂ ನನ್ನ ಥರದವರೇ ಅಂತ. ಪೊಲೀಸ್ ಇಲಾಖೆಯಲ್ಲಿ ಯಾರು ಕೆಲಸ ಮಾಡ್ತಾರೆ ಹೇಳಿ? ರೈತರ ಮಕ್ಕಳು, ಕಾರ್ಮಿಕರ ಮಕ್ಕಳು, ಹಿಂದುಳಿದ ವರ್ಗಗಳಿಂದ ಬಂದವರು – ಇಂಥವರೇ ಪೊಲೀಸ್ ನೌಕರಿಗೆ ಸೇರೋದು. ನಾನು ಕೂಡ ಈ ದೇಶದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದಾದ ಬಿಹಾರದಿಂದ ಬಂದವನು. ನಾನೂ ಬಡ, ರೈತ ಕುಟುಂಬದಿಂದ ಬಂದವನು. ಪೊಲೀಸ್ ಇಲಾಖೆಯಲ್ಲೂ ಬಡ ಪರಿವಾರದ ಜನರೇ ಹೆಚ್ಚು ಕೆಲಸ ಮಾಡೋದು. ನಾನು ಕಾನ್ಸ್ಟೆಬಲ್, ಹೆಡ್ ಕಾನ್ಸ್ಟೆಬಲ್, ಇನ್ಸ್ಪೆಕ್ಟರ್ ವರೆಗಿನವರ ಬಗ್ಗೆ ಹೇಳ್ತಿದೀನಿ. ಐಪಿಎಸ್ ಮಾಡಿದ ಸಾಹೇಬರೊಂದಿಗೆ ನನಗೆ ಹೆಚ್ಚು ಮಾತುಕತೆಯಿಲ್ಲ. ಅಲ್ಲಿದ್ದ ಸಿಪಾಯಿಗಳೊಂದಿಗೆ ನಾನು ಮಾತಾಡಿದೆ. ನಾನು ಹೇಳೋಕೆ ಹೊರಟಿರೋದು ಆ ಮಾತುಕತೆಯ ತುಣುಕುಗಳನ್ನೇ.

ಒಬ್ಬ ಸಿಪಾಯಿ ಕೇಳಿದ, “ಈ ಲಾಲ್ ಸಲಾಮ್ ಲಾಲ್ ಸಲಾಮ್ ಏನು!?” ನಾನೇಳಿದೆ, “ಲಾಲ್ ಅಂದ್ರೆ ಕ್ರಾಂತಿ. ಸಲಾಮ್ ಅಂದ್ರೆ ಕ್ರಾಂತಿಗೊಂದು ಸಲಾಮು” ಅಂತ. ಅವನಿಗೆ ಅರ್ಥವಾಗ್ಲಿಲ್ಲ. “ನಿಮಗೆ ಇಂಕ್ವಿಲಾಬ್ ಜಿಂದಾಬಾದ್ ಗೊತ್ತಾ?” ಅಂತ ಕೇಳಿದೆ. ಅವನು ತಲೆಯಾಡಿಸ್ತಾ ಹೇಳಿದ, “ಕ್ರಾಂತಿಯನ್ನ ಉರ್ದುವಿನಲ್ಲಿ ಇಂಕ್ವಿಲಾಬ್ ಅಂತಾರೆ ಅಲ್ವ? ಈ ಸ್ಲೋಗನ್ ಎಬಿವಿಪಿಯವ್ರೂ ಹಿಡ್ಕೊಂಡಿರ್ತಾರೆ!” ನಾನು ಹೇಳಿದೆ, “ಅದು ನಕಲಿ ಇಂಕ್ವಿಲಾಬ್. ನಮ್ಮದು ಅಸಲಿ ಇಂಕ್ವಿಲಾಬ್!!”
ಅವನು ಮತ್ತೂ ವಿಚಾರಿಸಿದ, “ಜೆ ಎನ್ ಯು ನಲ್ಲಿ ನಿಮಗೆ ಎಲ್ಲವೂ ಸಸ್ತಾದಲ್ಲಿ ಸಿಗ್ತವೆ ತಾನೆ?” ಅಂತ. ಅವನು ದಿನಕ್ಕೆ ಹದಿನೆಂಟು ಗಂಟೆ ಡ್ಯೂಟಿ ಮಾಡ್ತಿದ್ದನ್ನು ನಾನು ಗಮನಿಸಿದ್ದೆ. ಆದ್ರೂ ಓಟಿ ಪಡೆಯೋಕೆ ಪರದಾಡಬೇಕಿತ್ತು. ನಿನಗ್ಯಾಕೆ ಸಸ್ತಾದಲ್ಲಿ ಯಾವುದೂ ಸಿಗೋದಿಲ್ಲ ಅಂತ ನಾನು ಕೇಳಿದೆ. ಆತ ಅಷ್ಟು ಕೆಲಸ ಮಾಡಿಯೂ ಬಡ್ತಿ ಬೇಕು ಅಂದ್ರೆ, ಸವಲತ್ತುಗಳು ಬೇಕು ಅಂದ್ರೆ ಭ್ರಷ್ಟಾಚಾರಕ್ಕೆ ಒಳಗಾಗಬೇಕಿತ್ತು. ನಾನು ಅದನ್ನೇ ಹೇಳಿದೆ. “ಈ ಕಾರಣಗಳಿಗಾಗಿಯೇ ನಾವು ಆಜಾದಿ ಬೇಕು ಅಂತ ಕೆಳ್ತಿರೋದು. ಹಸಿವಿನಿಂದ ಆಜಾದಿ, ಭ್ರಷ್ಟಾಚಾರದಿಂದ ಆಜಾದಿ… ಇವುಗಳ ಬೇಡಿಕೆಯಿಂದಲೇ ಒಂದು ಆಂದೋಲನ ಶುರುವಾಗಿಬಿಡ್ತು. ನಿಮಗ್ಗೊತ್ತಾ, ದೆಹಲಿಯ ಬಹಳಷ್ಟು ಪೊಲೀಸರು ಹರ್ಯಾಣಾದಿಂದ ಬಂದವರಾಗಿರ್ತಾರೆ. ಅವ್ರು ತುಂಬಾ ಶ್ರಮಜೀವಿಗಳು. ಅವನು ಮಾತಾಡ್ತಾ ಹೇಳಿದ, “ಜಾತಿವಾದ ಬಹಳ ಕೆಟ್ಟದ್ದು”. ನಾನು ಹೇಳಿದೆ, “ನಾವು ಕೇಳ್ತಿರೋದು ಈ ಜಾತಿವಾದದಿಂದ ಆಜಾದಿ ಬೇಕು ಅಂತಲೇ!” ಅವನು ಹೇಳಿದ, ಇದೇನೂ ತಪ್ಪಲ್ವಲ್ಲ! ಇದು ದೇಶದ್ರೋಹ ಹೇಗಾಗತ್ತೆ? ನಾನು ಕೇಳಿದೆ, “ಹೇಳಿ ನೋಡೋಣ, ವ್ಯವಸ್ಥೆಯಲ್ಲಿ ಅತಿ ಹೆಚ್ಚು ಅಧಿಕಾರ ಇರೋದು ಯಾರಿಗೆ?” ಅವನು ಠೀವಿಯಿಂದ ಹೇಳಿದ “ನಮ್ಮ ದಂಡಕ್ಕೆ”. “ಸರಿಯೇ ಸರಿ. ನೀನು ಈ ದಂಡವನ್ನು ನಿಮ್ಮ ಇಚ್ಛೆಯಿಂದ ಚಲಾಯಿಸಬಲ್ಲೆಯೇನು?” “ಇಲ್ಲ” “ಹಾಗಾದ್ರೆ ಅಧಿಕಾರವೆಲ್ಲ ಯಾರ ಬಳಿ ಹೋಯ್ತು?” “ಭರ್ಜಿ, ಟ್ವೀಟ್ ಗಳ ಮೂಲಕ ಸ್ಟೇಟ್ಮೆಂಟ್ ಕೊಡೋರ ಹತ್ತಿರ!!” “ ಈ ಭರ್ಜಿ ಇಟ್ಕೊಂಡು, ಟ್ವೀಟ್ ಮಾಡಿಕೊಂಡು ಇರೋ ಸಂಘಿಗಳಿಂದ ಆಜಾದಿ ಬೇಕಂತಲೇ ನಮ್ಮ ಹೋರಾಟ ಇರೋದು!” ಅವನಂದ, “ಹಾಗಾದ್ರೆ ನಾನೂ ನೀನೂ ಈಗ ಒಂದೇ ಕಡೆ ನಿಂತಿದ್ದೀವಿ ಅಂತಾಯ್ತು!”.

ಇಲ್ಲೊಂದು ಅಡ್ಡಿ ಇದೆ. ನಾನು ಎಲ್ಲ ಮೀಡಿಯಾದವರಿಗೂ ಈ ಮಾತು ಹೇಳ್ತಿಲ್ಲ. ಎಲ್ಲರಿಗೂ ಅಲ್ಲಿಂದ ಕಪ್ಪ ಕಾಣಿಕೆ ಬರೋದಿಲ್ಲ. ಕೆಲವ್ರಿಗೆ ಮಾತ್ರ ಅದು ಬರೋದು. ಕೆಲವರು ಕುಳಿತಲ್ಲಿಯೆ ಕತೆ ಹೆಣೆದು ನನ್ನನ್ನು ಹೇಗೆ ಬಿಂಬಿಸಿದ್ರು ಅಂದ್ರೆ, ಆ ಸಿಪಾಯಿ ನನ್ನನ್ನು ಜೈಲಿಗೆ ಹಾಕಿದಾಗ ನನಗೆ ಸರಿಯಾಗಿ ಬಾರಿಸಬೇಕು ಅಂದ್ಕೊಂಡಿದ್ನಂತೆ. ಅದಕ್ಕಾಗೇ ನನ್ನ ಹೆಸರನ್ನ ಎಲ್ಲಕ್ಕಿಂತ ಮೇಲೆ ಬರೆದಿಟ್ಟುಕೊಂಡಿದ್ನಂತೆ. ನನ್ನ ಜೊತೆ ಮಾತುಕತೆಯಾಡಿದ ಮೇಲೆ ಅವನು ಹೇಳಿದ್ದನ್ನ ನಿಮಗೆ ಹೇಳ್ತೀನಿ ಕೇಳಿ. ಅವನೀಗ ಹಾಗೆಲ್ಲ ನನ್ನನ್ನು ಬಿಂಬಿಸಿದವನಿಗೆ ಒಂದು ಗತಿ ಕಾಣಿಸ್ಬೇಕು ಅಂತ ಯೋಚಿಸತೊಡಗಿದ್ದ. ಆ ಸಿಪಾಯಿ ನನ್ನ ಹಾಗೇ ಬಡ ಹಿಂದುಳಿದ ವರ್ಗದಿಂದ ಬಂದವನು. ಒಂದು ಕಾಲದಲ್ಲಿ ತಾನೂ ಉನ್ನತ ಶಿಕ್ಷಣ ಪಡೀಬೇಕು ಅನ್ನೋ ಆಸೆ ಇದ್ದವನು. ಆದರೆ ಹಣದ ಅಭಾವ ಅವನ ಆಸೆಯನ್ನ ಪೂರೈಸಲಿಲ್ಲ. ಅವನಲ್ಲಿ ಸಾಮರ್ಥ್ಯವಿತ್ತು ಆದರೆ ಅದನ್ನು ಪೂರೈಸಿಕೊಳ್ಳುವ ಹಣಬಲವಿರಲಿಲ್ಲ. ಈ ಜನ ಇಂಥವರು ಉನ್ನತ ಶಿಕ್ಷಣ ಪಡೆಯೋದನ್ನ ತಡೀತಾರೆ. ಇವರಿಗೆ ನನ್ನ ಸಮುದಾಯದವರು, ಹಿಂದುಳಿದವರು ಪಿಎಚ್ಡಿ ಮಾಡೋದು ಬೇಕಿಲ್ಲ. ಯಾಕಂದ್ರೆ ನಮ್ಮ ಬಳಿ ವಿದ್ಯೆಯನ್ನ ಕೊಳ್ಳೋಕೆ ಹಣವಿರೋದಿಲ್ಲ. ಇಂಥವರಿಗಾಗಿ ಜೆ ಎನ್ ಯು ದನಿ ಎತ್ತಿದೆ, ಎತ್ತುತ್ತಲೇ ಇರುತ್ತೆ. ಅದು ರೈತನಿರಲಿ, ಕಾರ್ಮಿಕ…. ಜೆ ಎನ್ ಯು ಅವರಿಗಾಗಿ ಹೋರಾಡುತ್ತೆ.

ಬಾಬಾ ಸಾಹೇಬರು ಹೇಳಿದ್ದರು, ರಾಜನೈತಿಕ ಲೋಕತಂತ್ರದಿಂದಷ್ಟೆ ಕೆಲಸ ಆಗೋದಿಲ್ಲ, ನಾವು ಸಾಮಾಜಿಕ ಲೋಕತಂತ್ರವನ್ನ ಸ್ಥಾಪಿಸೋಣ ಅಂತ. ಆದ್ದರಿಂದಲೇ ನಾನು ಮತ್ತೆ ಮತ್ತೆ ಸಂವಿಧಾನದ ಮಾತಾಡೋದು. ‘ಡೆಮಾಕ್ರಸಿ ಇಸ್ ಇನ್ಡಿಸ್ಪೆನ್ಸಬಲ್ ಟು ಸೋಷಿಯಲಿಸಮ್’ ಅಂತಾನೆ ಲೆನಿನ್. ಆದ್ರಿಂದ್ಲೇ ನಾವು ಸಮಾಜವಾದದ ಮಾತಾಡ್ತೀವಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತಾಡ್ತೀವಿ. ಸಮಾನತೆಯ ಮಾತಾಡ್ತೀವಿ. ಒಬ್ಬ ಚಪ್ರಾಸಿಯ ಮಗ, ಒಬ್ಬ ರಾಷ್ಟ್ರಪತಿಯ ಮಗ – ಇಬ್ರೂ ಒಂದೇ ಸ್ಕೂಲಲ್ಲಿ ಜೊತೆಯಾಗಿ ವಿದ್ಯೆ ಪಡೆಯುವಂತಾಗಬೇಕು ಅನ್ನೋದು ನಮ್ಮ ಬಯಕೆ. ಅದಕ್ಕಾಗಿ ನಾವು ದನಿ ಎತ್ತುತ್ತೇವೆ. ಆದ್ರೆ ನೀವು, ನಮ್ಮ ಸದ್ದಡಗಿಸೋಕೆ ಯತ್ನಿಸ್ತಿದ್ದೀರಿ. ಆದರೆ ಎಂಥಾ ಪವಾಡ ನೋಡಿ! ವಿಜ್ಞಾನ ಹೆಳುತ್ತೆ, ನೀವು ಎಷ್ಟು ದಬಾಯಿಸಿ ತಳ್ತೀರೋ ಅಷ್ಟು ಹೆಚ್ಚಿನದಾಗಿ ಪುಟಿದೇಳುತ್ತೆ ಅಂತ. ವಿಜ್ಞಾನ ಓದೋದು ಒಂದು ಥರವಾದ್ರೆ, ವೈಜ್ಞಾನಿಕವಾಗಿರೋದು ಇನ್ನೊಂಥರ. ಎರಡೂ ಬೇರೆಬೇರೆ. ಯಾರು ವೈಜ್ಞಾನಿಕವಾಗಿ ಆಲೋಚಿಸಬಲ್ಲರೋ ಅವರಿಗೆ ಇವೆಲ್ಲ ಅರ್ಥವಾಗುತ್ತೆ. ಹಸಿವು ಮತ್ತು ಬಡತನಗಳಿಂದ ಆಜಾದಿ, ಭ್ರಷ್ಟಾವಚಾರ ಮತ್ತು ಅತ್ಯಾಚಾರಗಳಿಂದ ಆಜಾದಿ ಹಾಗೂ ಬಡವರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಅಧಿಕಾರಕ್ಕಾಗಿ ನಾವು ಆ ಆಜಾದಿಯನ್ನ ಪಡೆದೇ ತೀರುತ್ತೀವಿ. ಮತ್ತು ಅದನ್ನು ಇದೇ ಸಂವಿಧಾನದ ಅಡಿಯಲ್ಲಿ. ಇದೇ ಕಾನೂನಿನ ಅಡಿಯಲ್ಲಿ, ಇದೇ ನ್ಯಾಯ ಪ್ರಕ್ರಿಯೆಯ ಮೂಲಕ ಪಡೆದು ಈ ದೇಶಕ್ಕೆ ತೋರಿಸ್ತೀವಿ. ಇದು ನಮ್ಮ ದೃಢನಿಶ್ಚಯ.

ಇದು ನಮ್ಮ ರೋಹಿತನ ಕನಸೂ ಆಗಿತ್ತು. ಒಬ್ಬ ರೋಹಿತನನ್ನು ಕೊಂದಿರಿ. ಹೋರಾಟದ ಉಸಿರುಗಟ್ಟಿಸಲು ನೋಡಿದಿರಿ. ಅದೇ ಹೋರಾಟ ಈಗ ಎಷ್ಟು ವಿಸ್ತಾರವಾಗಿ ಹರಡಿಕೊಂಡಿದೆ ನೋಡಿ. ನನ್ನ ಜೈಲುವಾಸದ ಅನುಭವದಿಂದ ಹೇಳ್ತೀನಿ ಕೇಳಿ. ಇದನ್ನ ಸ್ವವಿಮರ್ಶೆ ಅಂದ್ಕೊಳ್ಳಿ. ನಾವು ಜೆ ಎನ್ ಯು ನವರು ತಳಮಟ್ಟದ ಸಂಗತಿಗಳಿಗಾಗಿ ಹೋರಾಡ್ತೀವಿ ಅನ್ನೋದೇನೋ ನಿಜವೇ. ಆದರೆ ನಾವು ಬಳಸುವ ಭಾಷೆ ಭಾರವಾಗಿರುತ್ತದೆ. ಇದು ದೇಶದ ಜನಸಾಮಾನ್ಯರನ್ನ ತಲುಪೋದಿಲ್ಲ. ಅವರಿಗೆ ಅರ್ಥವಾಗೋದಿಲ್ಲ. ಇದು ಅವರ ದೋಷವಲ್ಲ. ಅವರು ಸಜ್ಜನ, ಪ್ರಾಮಾಣಿಕ, ಬುದ್ಧಿವಂತ ಜನ. ಅವರ ಪರಿಕರಗಳ ಮೂಲಕವೇ ನಮ್ಮ ಮಾತುಗಳನ್ನ ಅವರಿಗೆ ತಲುಪಿಸಬೇಕಾಗುತ್ತೆ. ಅವರನ್ನು ಎಂಥವು ತಲುಪುತ್ತವೆ ಹೇಳಿ? “ಬೇಗ ಬೇಗ ಫಾರ್ವರ್ಡ್ ಮಾಡಿ, ಲೈನ್ ಉದ್ದವಾಗಿಬಿಡತ್ತೆ” ಅನ್ನುವಂಥ ಜಾಹೀರಾತುಗಳು. “ಬೇಗ ಬೇಗ ವಿಷಯ ಹರಡಿ, ಗ್ರೂಪ್ ಫಾರ್ವರ್ಡ್ ಮಾಡಿ” – ಇಂಥವು. ಆನ್ ಲೈನ್ ಮಾರಾಟ ಮಾಡ್ತಾರೆ, ಓಎಲೆಕ್ಸ್ ಮೂಲಕ ಮಾರಾಟ ಮಾಡ್ತಾರೆ. ನಮ್ಮ ದೇಶದಲ್ಲಿ ಮಾರಾಟ ಮಾಡುವುದೊಂದು ವ್ಯಸನ ಶುರುವಾಗಿದೆ. ಅಂಥ ಜನರೊಂದಿಗೆ ನಮಗೆ ಸಂವಾದ ಸಾಧ್ಯವಾಗಬೇಕು.

ಜೈಲಿನಲ್ಲಿರುವಾಗ ನನಗೆ ಇನ್ನೊಂದು ಅನುಭವವಾಯ್ತು. ಅಲ್ಲಿ ಊಟದ ತಟ್ಟೆಯಲ್ಲಿ ಎರಡು ಕಟೋರಿಗಳನ್ನ ಇಡುತ್ತಿದ್ದರು. ಒಂದರ ಬಣ್ಣ ನೀಲಿ, ಒಂದರ ಬಣ್ಣ ಕೆಂಪು. ನನಗೆ ಅದೃಷ್ಟದ ಮೇಲೆ ನಂಬಿಕೆಯಿಲ್ಲ. ದೇವರ ವಿಷಯ ನನಗೆ ಗೊತ್ತಿಲ್ಲ. ಆದರೆ ಆ ತಟ್ಟೆ ಮತ್ತು ಬಟ್ಟಲುಗಳನ್ನ ನೋಡಿ ನನಗೆ ಮತ್ತೆ ಮತ್ತೆ ಅನ್ನಿಸ್ತಾ ಇತ್ತು. ಈ ತಟ್ಟೆ – ಬಟ್ಟಲುಗಳು ಭಾರತದ ಒಳಿತನ್ನ ಸೂಚಿಸ್ತಿವೆಯೇನೋ ಅನಿಸುತ್ತಿತ್ತು. ನನಗೆ ತಟ್ಟೆ ಭಾರತದಂತೆಯೂ ನೀಲಿ ಬಟ್ಟಲು ಅಂಬೇಡ್ಕರ್ ಸೇನೆಯಂತೆಯೂ ಕೆಂಪು ಬಟ್ಟಲು ಕಮ್ಯುನಿಸ್ಟರಂತೆ. ಈ ಎರಡು ಶಕ್ತಿಗಳು ಈ ದೇಶದಲ್ಲಿ ಒಗ್ಗೂಡಿಬಿಟ್ಟರೆ ಅದರ ಕಥೆಯೇ ಬೇರೆ. ನಮ್ಮ ದೇಶಕ್ಕೆ ಮಾರಾಟಮಾಡುವವರು ಬೇಡ. ಮಾರಾಟಗಾರರನ್ನ ಕಳಿಸಬಿಡೋಣ. ಕೊಡುಕೊಳ್ಳುವಿಕೆಯ ಸೌಹಾರ್ದವನ್ನ ಮೂಡಿಸೋಣ. ಅಂಥ ಸರಕಾರವನ್ನ ರಚಿಸೋಣ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನುವ ಮಾತನ್ನ ನಾವು ವಾಸ್ತವದಲ್ಲೂ ನಿಜಗೊಳಿಸೋಣ. ನನಗೆ ಬಲವಾಗಿ ಅನಿಸ್ತಿದೆ, ನಾವಿದನ್ನ ಸಾಧಿಸ್ತೀವಿ. ಖಂಡಿತಾ ಮಾಡಿಯೇ ಮಾಡ್ತೀವಿ.

ಬಹಳ ಕಾಲದ ನಂತರ ಜೆ ಎನ್ ಯು ವಿದ್ಯಾರ್ಥಿಯನ್ನ ಜೈಲಿಗೆ ಕಳಿಸಲಾಗಿದೆ. ಹೆಳಿಕೊಳ್ಳುವಂಥ ಅನುಭವಗಳು ಸಾಕಷ್ಟಿದೆ. ಆದರಣೀಯ ಮಾನನೀಯ ಪ್ರಧಾನ ಮಂತ್ರಿಯವರು… ಹಾಗೆಲ್ಲ ಹೇಳಲೇಬೇಕು ತಾನೆ? ನಮ್ಮ ಪ್ರಧಾನಮಂತ್ರಿಯವರು ದೊಡ್ಡ ದೊಡ್ಡ ಮಾತಾಡ್ತಿದ್ದರು. ಒಳ್ಳೆಯ ದಿನಗಳ ಬಗ್ಗೆ ಹೇಳ್ತಿದ್ದರು. ನನಗೆ ಹಾಗೇ ಟೀವಿಯೊಳಗೆ ನುಗ್ಗಿಬಿಡೋಣ ಅನ್ನಿಸ್ತಿತ್ತು. ಮತ್ತು ಅವರ ಸೂಟ್ ಹಿಡಿದೆಳೆದು ಕೆಳಬೇಕನ್ನಿಸ್ತು, “ಮೋದಿ ಜೀ, ಸ್ವಲ್ಪ ಹಿಟ್ಲರನ ಮಾತುಗಳನ್ನಾಡಿ ನೋಡೋಣ!” “ಹಿಟ್ಲರನದು ಬಿಡಿ, ಕರಿ ಟೊಪ್ಪಿ ತೊಡುತ್ತಿದ್ದ ಮುಸೋಲಿನಿಯದಾದರೂ ಮಾತುಗಳನ್ನಾಡಿ ನೋಡೋಣ!! ಅವರನ್ನ ನಿಮ್ಮ ಗುರೂಜಿ ಗೋಳವಾಲ್ಕರ್ ಭೇಟಿ ಮಾಡಲು ಹೋಗಿದ್ದರಲ್ವಾ? ಮತ್ತು ಭಾರತೀಯ ಪರಿಭಾಷೆಯನ್ನು ಜರ್ಮನರಿಂದ ಕಲಿಯಲು ಹೊರಟಿದ್ದರಲ್ವಾ?” ಅಂತೆಲ್ಲ. ಈ ಹಿಟ್ಲರನ ಮಾತು, ಮುಸೋಲಿನಿಯ ಮಾತು, ಪ್ರಧಾನಮಂತ್ರಿಯ ಮಾತು ಇವೆಲ್ಲ ಒಂದೇ ಥರ ಅನಿಸ್ತಿತ್ತು. ಮೋದಿ ಮನ್ ಕಿ ಬಾತ್ - ಮನದ ಮಾತುಗಳನ್ನ ಆಡ್ತಾರೆ ಹೊರತು ಕೇಳಿಸ್ಕೊಳೋದಿಲ್ಲ.

ಒಂದು ಖಾಸಗಿ ವಿಷಯ. ಇವತ್ತು ಸುಮಾರು ಮೂರು ತಿಂಗಳ ನಂತರ ನನ್ನ ಅಮ್ಮನ ಜೊತೆ ಮಾತಾಡಿದೆ. ಜೆ ಎನ್ ಯುನಲ್ಲಿ ಇರುವಾಗ ನಾನು ಮನೆಗೆ ಕಾಲ್ ಮಾಡೋದು ಕಡಿಮೆ ಇತ್ತು. ಜೈಲಿಗೆ ಹೋದಾಗ ಅನ್ನಿಸ್ತು, ಇನ್ಮೇಲೆ ಆಗಾಗ ಮಾತಾಡ್ತಾ ಇರಬೇಕು ಅಂತ! ನೀವೆಲ್ಲರೂ ಕೂಡ ನಿಮ್ಮ ಮನೆಯ ಜನಗಳ ಜೊತೆ ಆಗಾಗ ಮಾತಾಡ್ತಾ ಇರಿ. ನಾನು ಅಮ್ಮಂಗೆ ಹೇಳಿದೆ, ನೀನು ಮೋದಿಯನ್ನ ಒಳ್ಳೆ ಪೀಕಲಾಟಕ್ಕೆ ತಳ್ಳಿದೆ ಅಂತ ಅಮ್ಮ ಹೇಳಿದ್ಲು, “ನಾನು ಪೀಕಲಾಟಕ್ಕೆ ನೂಕಿಲ್ಲ. ಅಂಥ ಕೆಲಸ ಮಾಡೋದು ವಿದೂಷಕರು. ನಗೋದು ನಗಿಸೋದು ಅವರ ಕೆಲಸ. ನಾವು ನಮ್ಮ ನೋವು ಹೇಳಿಕೊಳ್ತೀವಷ್ಟೆ. ಅವರಿಗೆ ನಮ್ಮ ಮಾತು ಅರ್ಥವಾಗೋದಿಲ್ಲ, ಆದ್ದರಿಂದ ನಕ್ಕು ಹಾರಿಸ್ತಾರೆ. ನನ್ನಲ್ಲಿ ನೋವಿತ್ತು. ಆದ್ರಿಂದ್ಲೇ ನಾನು ಹಾಗೆ ಮಾತಾಡಿದೆ. ಮೋದಿ ಕೂಡ ಒಬ್ಬ ತಾಯಿಯ ಮಗ. ನನ್ನ ಮಗನನ್ನು ದೇಶದ್ರೋಹದ ಆಪಾದನೆ ಹೊರೆಸಿ ಜೈಲಿಗೆ ಹಾಕಲಾಗಿದೆ. 
ಯಾವಾಗಲೂ ಮನದ ಮಾತಾಡ್ತಾರೆ, ಈಗಲಾದರೂ ಒಮ್ಮೆ ಮಾತೆಯ ಮಾತಾಡಲಿ…” ಅಂತ.

ಅವಳಿಗೆ ಉತ್ತರಿಸಲು ನನ್ನಲ್ಲಿ ಶಬ್ದಗಳಿರಲಿಲ್ಲ. ಈ ದೇಶದಲ್ಲಿ ಬಹಳ ಆತಂಕಕಾರಿಯಾದ ಸಂಗತಿಗಳು ಘಟಿಸ್ತಿವೆ. ಬಹಳ ಸೂಕ್ಷ್ಮವಾಗಿ ಅದು ನಡೀತಿದೆ. ಆದ್ದರಿಂದ ನಾನಿಲ್ಲಿ ಯಾವುದೋ ಒಂದು ಮೀಡಿಯಾ ಚಾನಲ್ ಬಗ್ಗೆ ಮಾತಾಡ್ತಿಲ್ಲ. ಸೈನಿಕರ ಬಗ್ಗೆ ಮಾತಾಡ್ತಿಲ್ಲ. ನಾನು ಇಡೀ ದೇಶದ ಬಗ್ಗೆ ಹೇಳ್ತಿದ್ದೀನಿ. ಇದು ಹೀಗೇ ನಡೆದರೆ ಈ ದೇಶ ಹೇಗಾಗುತ್ತೆ? ಈ ದೇಶದ ಜನ ಏನಾಗ್ತಾರೆ? ಜೆ ಎನ್ ಯು ಜೊತೆ ಯಾರೆಲ್ಲ ನಿಲ್ಲುತ್ತಿದ್ದಾರೋ ಅವರ ಹೆಜ್ಜೆಹೆಜ್ಜೆಗೂ ಸೆಲ್ಯೂಟ್ ಹೊಡೆಯಬೇಕಿದೆ. ಏಕೆಂದರೆ ಅವರಿಗೆ ಒಂದು ಮಾತು ಅರ್ಥವಾಗಿದೆ. ಜೆ ಎನ್ ಯುವಿಗೆ ಎಂಥವರು ಬರುತ್ತಾರೆ ಅನ್ನೋದನ್ನ ಅವರು ಅರ್ಥ ಮಾಡಿಕೊಂಡಿದ್ದಾರೆ. ಇಲ್ಲಿ ಶೇ.60ರಷ್ಟು ಹೆಣ್ಮಕ್ಕಳು ಇದ್ದಾರೆ. ಇಲ್ಲಿ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗ್ತಿದೆ. ಇಂಥ ಸಂಸ್ಥೆ ಅಪರೂಪದ್ದು. ನನ್ನ ಪರಿವಾರ 3 ಸಾವಿರ ರುಪಾಯಿಗಳಷ್ಟು ದುಡಿಯುತ್ತದೆ. ನನ್ನಂಥವರು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವಷ್ಟು ಅರ್ಹತೆ ಪಡೆಯಲು ಸಾಧ್ಯವಾ? ಹಾಗಿದ್ದೂ ನಾನಿಲ್ಲಿ ಓದಲು ಸಾಧ್ಯವಾಗಿದೆ. ಆದ್ದರಿಂದಲೇ ನಾನು ದೇಶದ್ರೋಹಿ ಅನ್ನಿಸಿಕೊಳ್ತಿದ್ದೀನಿ. ನನ್ನ ಬೆಂಬಲಕ್ಕೆ ನಿಂತ ಸಿತಾರಾಮ್ ಯೆಚೂರಿಯವರನ್ನೂ ದೇಶದ್ರೋಹಿ ಅನ್ನಲಾಗ್ತಿದೆ. ರಾಹುಲ್ ಗಾಂಧಿ, ರಾಜಾ ಮೊದಲಾದವರನ್ನೂ ನನ್ನ ಜೊತೆ ದೇಶದ್ರೋಹಿ ಅಂತ ಕರೆಯಲಾಗ್ತಿದೆ. ಜೆ ಎನ್ ಯು ಪರವಾಗಿ ನಿಂತವರೆಲ್ಲರನ್ನೂ, ಮೀಡಿಯಾದವರನ್ನೂ… ನಮ್ಮ ಪರವಾಗಿ ನಿಂತವರು ಅನ್ನೋದಕ್ಕಿಂತ ಸರಿಯಾದುದರ ಪರ ನಿಂತವರನ್ನು ಮತ್ತು ತಪ್ಪನ್ನು ತಪ್ಪೆಂದು ಖಂಡಿಸಿದವರನ್ನು ದೇಶದ್ರೋಹಿಗಳೆಂದು ಕರೆಯಲಾಗ್ತಿದೆ, ನಿಂದಿಸಿ ಬೆದರಿಕೆ ಹಾಕಲಾಗ್ತಿದೆ.

ನೀನು ನಿಜವಾಗಿ ಘೋಷಣೆ ಕೂಗಿದೆಯೇನು ಅಂತ ಸಿಪಾಯಿ ಕೇಳಿದ. ನಾನು ಹೌದು ಅಂದೆ. ಅದರಲ್ಲಿ ತಪ್ಪೇನಿದೆ ಅಂತ ಕೇಳಿದೆ. ಹಾಗೇ ನಾನು ಘೋಷಣೆ ಕೂಗಿದ್ದೇನು ಅಂತಲೂ ವಿವರಿಸಿದೆ. ಈ ಸರ್ಕಾರ ಬಂದು 2 ವರ್ಷಗಳಾದವು. ಇನ್ನೂ 3 ವರ್ಷ ಸಹಿಸಬೇಕು. ಅಷ್ಟು ಬೇಗ ಸಹನೆ ಕಳೆದುಕೊಳ್ಳುವಂತಿಲ್ಲ. ಈ ದೇಶದ 69% ಜನ ಅವರ ವಿರುದ್ಧ ಮತ ನೀಡಿದ್ದಾರೆ. ಇದನ್ನ ನಾವು ನೆನಪಿಟ್ಟುಕೊಳ್ಬೇಕು.

ನೂರು ಸಲ ಸುಳ್ಳನ್ನ ಸುಳ್ಳು ಅಂದು ಸಾಧಿಸಬಹುದು. ಆದರೆ ಇದು ಸುಳ್ಳಿನ ಜೊತೆ ಮಾತ್ರ ಸಾಧ್ಯ, ನಿಜದ ಜೊತೆ ಸಾಧ್ಯವಾಗೋದಿಲ್ಲ. ನೂರು ಸಲ ಸೂರ್ಯನನ್ನ ಚಂದ್ರ ಚಂದ್ರ ಅನ್ತಾ ಇದ್ದರೆ ಅದು ಚಂದ್ರವಾಗಿಬಿಡುತ್ತೇನು? ಸಾವಿರ ಸಲ ಹೇಳಿದರೂ ಅದು ಸೂರ್ಯನಾಗೇ ಇರುತ್ತೆ. ನೀವು ಸುಳ್ಳನ್ನಷ್ಟೆ ಸುಳ್ಳಾಗಿರಿಸಬಲ್ಲಿರಿ ಹೊರತು ಸತ್ಯವನ್ನು ಸುಳ್ಳಾಗಿಸಲಾರಿರಿ. ನೀವು ಸಂಸತ್ತಿನ ಒಳಗೆ ಏನೆಲ್ಲ ಪ್ರಸ್ತಾಪಗಳನ್ನಿಡ್ತೀರಿ, ಜನರ ಮನಸ್ಸು ಅತ್ತ ತಿರುಗದಂತೆ ಮಾಡಲು ಸುಳ್ಳುಗಳನ್ನ ಹೇರುತ್ತೀರಿ. ಇಲ್ಲಿ ಆಕ್ಯುಪೈ ಯುಜಿಸಿ ಚಳವಳಿ ನಡೀತಿತ್ತು, ಅಲ್ಲಿ ರೋಹಿತನ ಹತ್ಯೆಯಾಯ್ತು. ರೋಹಿತನಿಗಾಗಿ ಜೆ ಎನ್ ಯು ದನಿ ಎತ್ತಿದರೆ, “ನೋಡಿ! ನೋಡಿ!! ಎಂಥಾ ದೇಶದ್ರೋಹ! ಜೆ ಎನ್ ಯು ರಾಷ್ಟ್ರದ್ರೋಹಿಗಳ ಅಡ್ಡೆಯಾಗ್ಬಿಟ್ಟಿದೆ” ಅಂತ ಕಥೆ ಕಟ್ಟಲಾಯ್ತು. ಇದು ಕೂಡ ಜಾಸ್ತಿ ದಿನ ನಡೆಯೋದಿಲ್ಲ. ಹೊಸ ತಯಾರಿ ಮಾಡ್ಕೊಳ್ಳಿ. ರಾಮಮಂದಿರ ಮಾಡಿ.

ಇವತ್ತಿನ ಕತೆ ಹೇಳ್ತೀನಿ. ಜೈಲಿಂದ ಹೊರಡೋ ಮುಂಚೆ ಒಬ್ಬ ಸಿಪಾಯಿ ಮಾತಿಗೆ ಸಿಕ್ಕ. “ಧರ್ಮವನ್ನ ನಂಬ್ತೀಯಾ?” ನಾನೇಳಿದೆ, “ನನಗೆ ಹಾಗೆಂದರೇನು ಅಂತಲೇ ಗೊತ್ತಿಲ್ಲ”. ಮೊದಲು ಹಾಗಂದರೇನು ಅಂತ ಗೊತ್ತಾದರೆ ತಾನೆ ನಂಬುವ ಕೆಲಸ? “ಯಾವುದಾದ್ರೂ ಪರಿವಾರದಲ್ಲಂತೂ ಹುಟ್ಟೀರ್ತೀಯ!?” “ಹೌದು. ಪವಾಡವೆಂಬಂತೆ ಹಿಂದೂ ಪರಿವಾರದಲ್ಲಿ ಹುಟ್ಟಿಕೊಂಡಿದ್ದೀನಿ”. “ಈ ಬ್ರಹ್ಮಾಂಡವನ್ನ ಭಗವಂತ ಸೃಷ್ಟಿ ಮಾಡಿದಾನೆ. ಸೃಷ್ಟಿಯ ಕಣಕಣದಲ್ಲೂ ಭಗವಂತ ಇದ್ದಾನೆ. ಈ ಮಾತಿಗೆ ನೀನೇನು ಹೆಳ್ತೀ?” “ಖಂಡಿತಾ. ಎಲ್ಲರಲ್ಲೂ ಎಲ್ಲದರಲ್ಲೂ ಭಗವಂತ ಇರಬಹುದು. ಆದರೆ ಇಂಥಾ ಭಗವಂತನಿಗೂ ಒಂದು ಮಂದಿರ ಕಟ್ಟಿಸಿ ಇಡೋಕೆ ಕೆಲವರು ಪರದಾಡ್ತಿದ್ದಾರೆ. ಅಂಥವರ ಬಗ್ಗೆ ನೀನೇನು ಹೇಳ್ತೀ?” “ಬಹಳ ಕೆಟ್ಟ ಯೋಚನೆ ಇದು!” ಅವನಂದ. ಹೀಗೆ ಯೋಚಿಸುವ ಜನರನ್ನೂ ಅವರು ಪ್ರಚೋದಿಸ್ತಾರೆ. ಈ ದೇಶದೊಳಗೆ ಸದಾ ಪ್ರಕ್ಷುಬ್ಧತೆ ಇರಲೆಂದು ಅವರ ಬಯಸುತ್ತಾರೆ.

ನೀವಿವತ್ತು ಇಲ್ಲಿ ಕುಳಿತಿದ್ದೀರಲ್ಲ, ನಿಮಗನ್ನಿಸ್ತಿದೆ ತಾನೆ, ನಿಮ್ಮ ಮೇಲೆ ದೊಡ್ಡದೊಂದು ದಾಳಿ ನಡೆದಿದೆ ಅಂತ? ಆದರೆ ಈ ದಾಳಿ ಹೊಸತಲ್ಲ. ಇದು ಈಗಿನದ್ದೂ ಅಲ್ಲ. ನಿಮಗೆ ನೆನಪಿದೆಯಾ, ಆರೆಸ್ಸೆಸ್ಸಿನ ಮುಖವಾಣಿ ಆರ್ಗನೈಸರಿನಲ್ಲಿ ಜೆ ಎನ್ ಯು ಕುರಿತು ಕವರ್ ಸ್ಟೋರಿ ಮಾಡಲಾಗಿತ್ತು. ಸ್ವಾಮೀಜಿ ಜೆ ಎನ್ ಯು ಕುರಿತು ಸಾಕ್ಷ್ಯ ಹೇಳಿದ್ದರು. ಆದರೆ ನನಗೆ ಸಂವಿಧಾನದ ಮೇಲೆ ಭರವಸೆ ಇದೆ. ನನ್ನ ಎಬಿವಿಪಿ ಗೆಳೆಯರಿದ್ದರೆ ಕೇಳಿಸಿಕೊಳ್ಳಲಿ, ಒಂದು ಬಾರಿ ಆ ಸ್ವಾಮೀಜಿಯನ್ನು ಕರೆತರಲಿ. ಮುಖಾಮುಖಿಯಾಗಿ ಮಾತಿಗೆ ಕೂರಿಸಲಿ. ನಾವು ಸೋಲಿಸ್ತೀವಿ. ತಾರ್ಕಿಕವಾಗಿಯೇ ಸೋಲಿಸ್ತೀವಿ, ಕುತರ್ಕದಿಂದಲ್ಲ. ಹಾಗೇ ಅವರು ಕೂಡ ಜೆ ಎನ್ ಯುವನ್ನು ನಾಲ್ಕು ತಿಂಗಳ ಕಾಲ ಬಂದ್ ಮಾಡಬೇಕು ಅಂತ ತಾರ್ಕಿಕವಾಗಿಯೇ ಒಪ್ಪಿಸಲು ಸಫಲರಾದರೆ, ನಾನು ಅವರ ಪಾದಸೇವಕನಾಗ್ತೀನಿ. ಅವರಿಂದ ಸಾಧ್ಯವಾಗದೆ ಹೋದರೆ, ನಾನು ಅವರಲ್ಲಿ ಬಿನ್ನವಿಸಿಕೊಳ್ತೀನಿ, “ಮೊದಲು ಹೇಗೆ ನೀವು ಈ ದೇಶದಿಂದ ಹೊರಗಿರ್ತಿದ್ದರೋ ಈಗಲೂ ಹಾಗೇ ಹೊರಟುಹೋಗಿ” ಅಂತ.

ನಿಮಗೆ ಇನ್ನೊಂದು ಮಜದ ವಿಷಯ ಹೇಳಲಿಕ್ಕಿದೆ. ನೀವೆಲ್ಲ ಕ್ಯಾಂಪಸ್ಸಿನ ಒಳಗಿದ್ದುದರಿಂದ ನಿಮ್ಮ ಕಣ್ಣಿಗೆ ಬೀಳದೆ ಹೋಗಿರಬಹುದು. ಎಂಥಾ ಯೋಜನೆ ರೂಪಿಸ್ಕೊಂಡಿದ್ದರು… ಮೊದಲ ದಿನದಿಂದಲೂ ಪ್ರತಿಯೊಂದನ್ನೂ ಯೋಜಿತವಾಗಿಯೇ ನಡೆಸಿದ್ದರು. ಇಷ್ಟೆಲ್ಲ ತಲೆಕೆಡಿಸಿಕೊಂಡು ಪ್ಲಾನ್ ಮಾಡಬಾರದಿತ್ತು ಗೆಳೆಯರೇ! ಪೋಸ್ಟರ್ ಕೂಡ ಬದಲಿಸೊದಿಲ್ಲ ನೀವು!ಯಾವ ಸ್ಲೋಗನ್ ಇಟ್ಟುಕೊಂಡು, ಹ್ಯಾಂಡ್ ಬಿಲ್ ಇಟ್ಟುಕೊಂಡು ಹಿಂದೂಕ್ರಾಂತಿ ಸೇನೆ ಗಲಭೆ ನಡೆಸುತ್ತದೆಯೋ ಅದೇ ಸ್ಲೋಗನ್ ಇಟ್ಟುಕೊಂಡು ಎಬಿವಿಪಿ ಕೂಡ ಹೋರಾಡುತ್ತದೆ. ಅವೇ ಎಲ್ಲ ಪರಿಕರಗಳನ್ನು, ಘೋಷಣೆಗಳನ್ನು ಇಟ್ಟುಕೊಂಡು ಮಾಜಿ ಯೋಧರೊಂದಷ್ಟು ಜನ ಪ್ರತಿಭಟನೆಗೆ ಇಳಿಯುತ್ತಾರೆ. ಇದರರ್ಥ ಇವರೆಲ್ಲರ ಕಾರ್ಯಕ್ರಮಗಳನ್ನು ಒಮ್ಮೆಗೇ ನಾಗ್ಪುರದಲ್ಲಿ ಯೋಜಿಸಲಾಗಿರುತ್ತದೆ! ಅವರಾಡೋದೆಲ್ಲ ದೊಡ್ಡ ದೊಡ್ಡ ಮಾತುಗಳು. ಅಬ್ಬರದ ಮಾತುಗಳು. ಈ ದೇಶದ ಸಂಘರ್ಷವನ್ನ, ಪ್ರತಿಭಟನೆಯ ದನಿಯನ್ನ ಹೊಸಕಿಹಾಕುವಂಥ ಮಾತುಗಳು. ಈ ದೇಶದ ಜನರು ತಮ್ಮ ಜೀವನದ ಅಗತ್ಯಗಳಿಗಾಗಿ ಎತ್ತುವ ಪ್ರಶ್ನೆಗಳ, ನಡೆಸುವ ಚಿಂತನೆಗಳ ದಿಕ್ಕುತಪ್ಪಿಸುವ ಮಾತುಗಳು. ಅದೇ ಜೆ ಎನ್ ಯುನಲ್ಲಿಯೂ ದೊಡ್ಡ ದೊಡ್ಡ ಪ್ರಶ್ನೆಗಳಿವೆ. ನಾವು ಈ ಹೇರಲಾಗುವ ಭಾರದ ಮಾತುಗಳನ್ನ ಪ್ರಶ್ನಿಸ್ತೀವಿ. ನನ್ನ, ಉಮರನ, ಅನಿರ್ಬಾಣ್, ಆಶುತೋಶ್, ನಾಗ, ಶೆಹ್ಲಾ, ಯಾರೇ ಇರಲಿ ನಮ್ಮೆಲ್ಲರ ಗಂಟಲೊತ್ತುವ ಪ್ರಯತ್ನ ಅದೆಷ್ಟು ಮಾಡಿದರೂ ಅಷ್ಟೇ, ನಮ್ಮ ಸಂಘರ್ಷ ಮುಗಿಸಿಬಿಡಲು ಎಷ್ಟು ಹೆಣಗಾಡಿದರೂ ಅಷ್ಟೇ, ನಾವು ಹೋರಾಟದಿಂದ ಹಿಂದೆ ಸರಿಯೋದಿಲ್ಲ. ಸರಿಯಾಗಿ ಕೇಳಿಸಿಕೊಳ್ಳಿ, ನೀವೆಷ್ಟೋ ದಬ್ಬಿದರೂ ನಾವು ಮತ್ತೆಮತ್ತೆ ಎದ್ದುಬರುತ್ತೀವಿ. ನಮ್ಮ ಸಂಘರ್ಷವನ್ನು ನೀವು ಅದುಮಿಹಾಕಲು ಸಾಧ್ಯವಿಲ್ಲ. ನೀವೆಷ್ಟು ದಬ್ಬುತ್ತೀರೋ ನಾವು ಅಷ್ಟೇ ಪುಟಿದು ಬರುತ್ತೇವೆ. ಅಷ್ಟೇ ತೀವ್ರವಾಗಿ ಹೋರಾಟ ಮುಂದುವರೆಸುತ್ತೇವೆ.

ಇದು ಸುದೀರ್ಘ ಕದನ. ಎಲ್ಲಿಯೂ ನಿಲ್ಲದೆ, ಯಾರಿಗೂ ಬಾಗದೆ, ಉಸಿರು ಬಿಗಿಹಿಡಿದು ನಾವು ಇದನ್ನು ಮುನ್ನಡೆಸಬೇಕು. ಮತ್ತು ಈ ಕ್ಯಾಂಪಸ್ ಒಳಗಿನ ವಿಧ್ವಂಸಕ ಚಿಂತನೆಯ ಎಬಿವಿಪಿ ಜನರು, ಕ್ಯಾಂಪಸ್ ಹೊರಗಿನ ಈ ದೇಶವನ್ನು ಬರಬಾದ್ ಮಾಡಲು ಹವಣಿಸ್ತಿರುವ ಭಾಜಪದ ಜನರು ಅದ್ಯಾರೇ ಇದ್ದರೂ ನಾವು ಅವರೆಲ್ಲರ ವಿರುದ್ಧ ಒಗ್ಗಟ್ಟಿನಿಂದ ಎದ್ದು ನಿಲ್ಲುತ್ತೇವೆ. ಜೆ ಎನ್ ಯು ಎದ್ದು ನಿಲ್ಲುತ್ತದೆ. ಜೆ ಎನ್ ಯು ಗಾಗಿ ಶುರುವಾದ ಈ ಹೋರಾಟ, ರೋಹಿತ್ ವೇಮುಲಾನ ಸಾವಿನ ನ್ಯಾಯಕ್ಕಾಗಿ ಶುರುವಾದ ಈ ಹೋರಾಟ, ನಿಮ್ಮೆಲ್ಲರ ಕಳಕಳಿಯಿಂದ ಶುರುವಾದ ಈ ಹೋರಾಟ, ಈ ದೇಶದ ಸೌಹಾರ್ದ ಜೀವಿಗಳು, ಪ್ರಗತಿಪರರು ಶುರುಮಾಡಿದ ಈ ಹೋರಾಟವೇನಿದೆ, ಈ ಹೋರಾಟವನ್ನು ನಾವು ನಡೆಸ್ತೀವಿ, ಗೆದ್ದೇಗೆಲ್ತೀವಿ. ಇದು ನಮ್ಮ ವಿಶ್ವಾಸ.
***
ಕನ್ಹಯ್ಯನ ‘ಆಜಾದಿ ಕಾ ನಾರಾ’:
ಮನುವಾದದಿಂದ ಆಜಾದಿ
ಬ್ರಾಹ್ಮಣ್ಯವಾದದಿಂದ ಆಜಾದಿ
ಸಾಮ್ರಾಜ್ಯವಾದದಿಂದ ಆಜಾದಿ
ಅಸ್ಪೃಶ್ಯತೆಯಿಂದ ಆಜಾದಿ
ಜಾತಿಪದ್ಧತಿಯಿಂದ ಆಜಾದಿ
ಕೋಮುವಾದದಿಂದ ಆಜಾದಿ
ಭಯೋತ್ಪಾದನೆಯಿಂದ ಆಜಾದಿ
ಫ್ಯಾಸಿಸ್ಟ್ ವಾದದಿಂದ ಆಜಾದಿ
ಬಂಡವಾಳಶಾಹಿಯಿಂದ ಆಜಾದಿ
ಹಸಿವಿನಿಂದ ಆಜಾದಿ
ಅನಾರೋಗ್ಯದಿಂದ ಆಜಾದಿ
ಅನಕ್ಷರತೆಯಿಂದ ಆಜಾದಿ
ನಿರುದ್ಯೋಗದಿಂದ ಆಜಾದಿ
ಲಿಂಗ ಅಸಮಾನತೆಯಿಂದ ಆಜಾದಿ
ಶೋಷಣೆ-ವಂಚನೆ ಅನ್ಯಾಯಗಳಿಂದ ಆಜಾದಿ

1 comment:

  1. ಒಂದು ಕ್ಷಣ ದಂಗಾಗಿ ಹೋದೆ.ಇಂತಹ ಅನುವಾದ ನೀಡಿದ ಚೇತನಾಗೆ ಪ್ರಕಟಿಸಿದ ಬಸೂಗೆ ನಾನು ಯಾವ ಶಬ್ದಗಳಲ್ಲಿ ದನ್ಯವಾದ ಹೇಳಲಿ

    ReplyDelete

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...