Sunday, March 06, 2016

ಕಾದಂಬಿನಿ : ಎರಡು ಕವಿತೆಗಳು1
ಹಾಡುಗಳ ವಿಲಾಪ        
         
               
ಈ ಶತಮಾನಗಳೋ                                   
ಹುಸಿಯ ಕತೆಗಳನೂ
ನೋವಿನ ಹಾಡುಗಳನೂ
ಕೇಳುತ್ತಾ ಕೇಳುತ್ತಾ ಉರುಳುತ್ತಾ..
ಭ್ರಮಣ ಮದ್ಯವ ಕುಡಿದ ಹಾಗೆ..
ಕುಸಿಯ ಕತೆಗಳ ದರ‍್ಪದ ಪಾದಗಳ ಕೆಳಗೆ
ಪ್ರವಹಿಸುವ ನೋವಿನ ಹಾಡುಗಳ ಹರವು
ನೋಟದ ಉದ್ದಾನುದ್ದ.. ಬಾನಿನಗಲ.
ಹಾಡುಗಳಲ್ಲಿ ಜಿನುಗಿ ಮಡುಗುಟ್ಟುವ ಹನಿಗಳೋ
ಕಡಲುಗಳೇ ನಾಚಿ ನೀರಾಗಬೇಕು ಹಾಗೆ
ಸೂರ‍್ಯ ನಕ್ಷತ್ರರೂ ಉರಿದದ್ದೇ ಇಲ್ಲ
ಕಣ್ಣ ನೀರಿಗೆ ಒದ್ದೆಮುದ್ದೆಯಾಗಿ
ತಣ್ಣಗಾಗುವವು ಕ್ಷಣದೊಳಗೆ...

ನೋಡು.. ಆ ಕಣ್ಣ ನಕ್ಷತ್ರ
ಆ ಕಾಳಿಕೆಯ ಕಾಳ್ಗಪ್ಪು ಕಗ್ಗತ್ತಲಲಿ
ಮಿಣ ಮಿಣ ಮಿಣ ಮಿನುಗಿ
ಇನ್ನೇನು ಹೊತ್ತೊತ್ತಿ ಉರಿಉರಿದು
ಸನಿಹಕೆ ಸರಿ ಸರಿದು
ಸುಡು ಸೂರ‍್ಯನಾಗುವುದರಲ್ಲಿತ್ತು..
ಹುಸಿಯ ಕತೆಗಳ ವ್ಯಾಘಾತವಪ್ಪಳಿಸಿ
ನಕ್ಷತ್ರವೀಗ
ಕಮನೀಯ ಕಮನಚ್ಛದವಾಗಿ
ಬಾನಂಗಳದಲಿ ಸ್ವಚ್ಛಂದವಾಗಿ ಹಾರಿ
ಇರುಳಾಗಸ ನಿಶ್ಪಂದವಾಗಿ ಸೇರಿ..
ಈ ಕಾರಿರುಳ ಆಗಸದಲೀಗ
ನನ್ನಪ್ಪ, ನನ್ನಜ್ಜ, ನನ್ನಜ್ಜನಜ್ಜ,
ಹೆತ್ತಬ್ಬೆ, ಹಡೆದ ಕೂಸು, ಹಿರಿಯಜ್ಜಿ
ಮತ್ತೀಗ ಇವನೂ..
ನೋಡಲ್ಲಿ ನಕ್ಷತ್ರಗಳ ಲೆಕ್ಕ ಹೇಗೆ ಹೆಚ್ಚುತ್ತಲೇ ಇದೆ!

ಆ ಅಸಂಖ್ಯ ಹುಸಿಯ ಕತೆಗಳ ಅಬ್ಬರದಲಿ ಅಡಗಿ
ಅವುಡುಗಚ್ಚಿದ ನೋವಿನ ಹಾಡಿನ ಬಿಕ್ಕು
ಕಾರ‍್ಗಾಲದ ಮಳೆಯಾಗಿ
ಆ ಗುಡಿಸಲು, ಮನೆ ಮಾಡುಗಳಲ್ಲಿ ಸೋರಿದ
ಅಷ್ಟೂ ಅಲ್ಲಲ್ಲೇ ಮಡುಗಟ್ಟಿ
ತಣ್ಣಗೆ ಮರವಟ್ಟಿ ಹೆಪ್ಪುಗಟ್ಟಿದವು..

ಎಡಬಿಡಂಗಿ ಚಂದ್ರನೂ ಇದ್ದ ಸಾಕ್ಷಿಗೆ..
ಸೂರ‍್ಯನ ಬೆಳಕ ಸಾಲದ ಹಂಗಿನವನು
ಹುಸಿಯ ಕತೆಗೆ ಅರಳುತ್ತರಳುತ್ತ
ದಿನೇ ದಿನೇ ಬೆಳಗಿ, ದೊಡ್ಡವನಾಗುತ್ತಾ
ನೋವಿನ ಹಾಡ ಕೇಳುತ್ತ ಇನಿಸಿನಿಸೇ ಕ್ಷಯಿಸುತ್ತ
ಇಲ್ಲೇ ತರತಮವೆಸಗಿ ಕೊನೆಗೊಮ್ಮೆ ಕಾಣದಾಗಿ
ಅಂಥವನ ನಂಬುವುದಾದರೂ ಹೇಗೆ?

ಸೂರ‍್ಯರುರಿದು ಬೆಳಗಗೊಡದ ಜಗದೊಳಗೆ
ಹಗಲೂ ಮೂಡುವುದು ಎಂದಿನಂತೆ
ಹುಸಿಯ ಕತೆಗಳ ಪನ್ನತಿಕೆಯ ನಗ್ನ ನರ‍್ತನಕ್ಕೀಗ
ದಿಟದ ಸೋಗಿನುಡುಪು.
ಮೊಗವಿಲ್ಲದ ಅಸತ್ಯಕೆ ನುಣ್ಣನೆ ಮುಖವಾಡ
ಸುಖೋಲ್ಲಾಸ ವಿಲಾಸದಲಿ
ಕುಣಿದೂ, ನಲಿದೂ, ತುಳಿದೂ, ಥಳಿಸಿ
ಆಗೀಗ ಅಪರೂಪದ ಖಯಾಲಿಗೆ
ನೋವು, ಬೇಸರಿಕೆಯೆಳೆಯ ಜಾಡ ಹಿಡಿದರಸಿ
ನೋವುಭರಿತ ಹಾಡುಗಳ ಗುನುಗುತ್ತ
ಒಂದಷ್ಟು ದೂರ ಚಲಿಸಿ
ಅನುಭವದ ಗಟ್ಟಿ ನೆಲೆಗಟ್ಟಿನ ಮೇಲೆ ನಾಲ್ಕು ಕವಿತೆ ಗೀಚಿ..

ಮತ್ತವುಗಳ ಕಾಲ ಕೆಳಗೆ
ನೋವಿನ ಹಾಡುಗಳೂ ವಿವಶವಾಗಿ,
ವಿಲಾಪ, ವಿಪ್ರಲಾಪಗಳ ಎದೆಯೊಳಗೆ ಹುಗಿದಿಟ್ಟು
ನಾಭಿಯಾಳದ ಬಿಸಿಯುಸಿರ ನಿಡುಸುಯ್ದು ನಕ್ಕು ಪ್ರವಹಿಸುತ್ತಾ...
ಮತ್ತವಕೆ ಹಗಲು ರಾತ್ರಿಗಳೆಂಬ ಅರಿವೆಲ್ಲಿ?
ಶತ ಶತಮಾನಗಳು ಉರುಳಿ ಸಾಗುವ
ಪರಿಘಾತನ ಪರಿವೆಯೆಲ್ಲಿ?

  * * *


2
ಕಿಚ್ಚು ಹಚ್ಚುವ ಕನಸು

ನನಗೀಗ ಕಿಚ್ಚು ಹಚ್ಚುವ ಕನಸು...
ಮೇಲೆ ತೂಗುವ ಆ ಸ್ವರ‍್ಗಗಳ ನಗು ಕೇಕೆ ಗದ್ದಲ
ಹಾಡು ಕುಣಿತ ಚೆಲುವು ಚಿತ್ತಾರಗಳೆಲ್ಲ
ನನ್ನೊಳಗೆಂದೂ ಕಿಚ್ಚಿನ ಕಿಡಿ ಹೊತ್ತಿಸಿದ್ದಿಲ್ಲ
ಅಲ್ಲಿಂದ ತೂರಿಬರುವ ಅವರ ಮೋಜಿನ ಬೇಟೆಯ ಕಣ್ಣ
ಈಟಿ ಭರ‍್ಜಿ, ಬಾಣಗಳೂ ನಾಟಿದ್ದಿಲ್ಲ
ಅವರಾಟದ ಕೊಂಬು ಕೂರ‍್ದಸಿಗಳೆಂದೂ
ಈ ಎದೆಬಾಗಿಲ ತಿವಿದದ್ದಾಗಲೀ
ಆ ಕುಟಿಲ ಕೇಕೆ ಅಟ್ಟಹಾಸಗಳೆಂದೂ
ಈ ಕಿವಿಗಳ ಸೀಳಿದ್ದಾಗಲೀ ಇಲ್ಲ
ನನ್ನೊಳಗೆಂದೋ ಆರಿಹೋದ ಉರುವಲಿಗಂಟಿದ
ತಣ್ಣನೆ ಇದ್ದಲಿಗೆ ಕಿಡಿಚುಕ್ಕೆ ಮೂಡಿ
ಎದೆಯುಸಿರ ತಿದಿಯೂದಿ ಹೊಗೆಯೆದ್ದದ್ದು
ಧಗ್ಗನೆ ಬೆಂಕಿಹೊತ್ತಿ
ಎಲ್ಲ ಉರಿದುರಿದು ಬೂದಿಯಾದದ್ದು ಇಲ್ಲವೇ ಇಲ್ಲ!

ನಾನು ಶತ ಶತಮಾನಗಳ ಉದ್ದಕೂ
ಆ ಗುಡಿಸಲುಗಳಲಿ ನೋಟ ಊರಿ
ಗೋರ‍್ಕಲ್ಲ ಮೇಲೆ ಕಲ್ಲೇ ಆಗಿ ಕೂತಿದ್ದೇನೆ
ಅಮೃತಶಿಲೆಯ ಮಹಲುಗಳೇ
ಉದುರುದುರಿ ಮುದುರಿ ಮಣ್ಣು ಮುಕ್ಕಿದರೂ
ತುಸುವೂ ಸುಕ್ಕಾಗದ ಮುಕ್ಕಾಗದ ಸನಾತನ
ಗುಡಿಸಲುಗಳ ಕಂಡು ಬೆಕ್ಕಸ ಬೆರಗಾಗಿದ್ದೇನೆ!

ಆ ಗುಡಿಸಲುಗಳೋ..
ಶತ ಶತಮಾನಗಳ ಉದ್ದಕೂ ಆ ಮಣ್ಣ ತುಳಿ ತುಳಿದು
ಬಡಿದು ಗಟ್ಟಿಸಿದ ತಳಪಾಯದ ಮೇಲೆ
ನೋವು ಆಕ್ರಂದನಗಳ ಗೋಡೆಗಳು
ಅವಮಾನದ ಸೂರಿನಡಿ ನಡುಬಾಗಿ ಕಡುಗತ್ತಲಲ್ಲಿ
ಸರಿದಾಡುವ ಕಾಯಗಳ ಬೆನ್ನುಗಳಲ್ಲೆದ್ದ
ಜಡ್ಡು ತೊಗಲಿನ ಮಣಭಾರದ ಮೂಟೆಗಳು!
ದುಃಖದ ಬಿಕ್ಕುಗಳು ಮನೆ ಒಲೆಯಲ್ಲೆಲ್ಲ
ಹನಿ ಹನಿ ತೊಟ್ಟಿಕ್ಕಿ ಸೋರಿ ಸೋರಿ
ಎಂದೋ ಸತ್ತ ಬೆಂಕಿ ಗೋರಿ
ಆ ಗುಡಿಸಲುಗಳಲಿ ಕಿಡಿ ಹುಟ್ಟುವುದಿಲ್ಲ!

ಆ ಕಿಚ್ಚು ಹಚ್ಚುವ ಕನಸಿನ
ಎಚ್ಚರದ ದೀಪ ಎದೆಯಲ್ಲುರಿಸಿ ಕಾಯುವ
ನನ್ನೊಳಗಿನ ಕಿಚ್ಚಿನ ಕಿಡಿಯ ಹತಾಶೆ ನನಗೆ ತಿಳಿಯದ್ದೇನಲ್ಲ
ನನ್ನ ದೀಪದಿಂದ ಸಿಡಿದ ಆ ಕಿಡಿ
ಆ ಗುಡಿಸಲುಗಳತ್ತ ಹೊರಳುತ್ತ ಅಳುಕುತ್ತ ತೆವಳುತ್ತ
ಆರಿ ಸತ್ತು ಶವವಾಗುವುದ ನೋಟವೂರಿ ನಿಟ್ಟಿಸಿ
ನಿಡುಸುಯ್ದಮೇಲೂ ನನ್ನೊಳಗೆ ಆರದ
ಆ ನಿಗಿ ನಿಗಿ ಕಿಚ್ಚು ಹಚ್ಚುವ ಕನಸು!

ಅಳು, ಅವಮಾನಗಳೆಲ್ಲ ಹರಳುಗಟ್ಟಿ
ಆ ಹರಳ ರಾಶಿಯೊಳಗೆ ತಡಕಾಡಿ ಚಕಮಕಿಯ ಕಲ್ಲುಗಳಾಯ್ದು
ಒಂದರ ಮೇಲೊಂದು ಕುಟ್ಟಿ ಕುಟ್ಟಿ ಉಜ್ಜುಜ್ಜಿ
ಸಂಘರ‍್ಷದೊಳಗಿಂದ  ಸಟ್ಟನೊಂದು ಕಿಡಿಹುಟ್ಟಿ
ಜೀವದುಸಿರ ಬಸಿದು ಎದೆಯ ತಿದಿಯೂದಿ
ಕಿಡಿಯ ಕೆಂಡವಾಗಿಸಿ ಎದ್ದ ಹೊಗೆಗೆ
ಕೆಂಪಡರಿದ ಅಷ್ಟೂ ಕಣ್ಣುಗಳ ಉರಿಯಲು ಬಿಟ್ಟು
ಧಗ್ಗನೇಳುವ ಬೆಂಕಿಯ ಕೊಳ್ಳಿಯಿಟ್ಟು
ಆ ಸ್ವರ‍್ಗಗಳನ್ನಲ್ಲ; ಆ ಅಷ್ಟೂ ಗುಡಿಸಲುಗಳ
ಸುಟ್ಟು ಬೂದಿಯಾಗಿಸುವ ಕನಸು!
ಕಿಡಿ ಕೆಂಡವಾಗಿ, ಕಾಳ್ಗಪ್ಪನೆಯ ಹೊಗೆಯೆದ್ದು
ಬೆಂಕಿ ಶಿಖೆಗಳು ಎತ್ತರೆತ್ತರಕೆ ರಾಚಿ ರಾಚಿ
ಆ ಸ್ವರ‍್ಗಗಳ ಅಂಡು ಸುಡುವ ಹಾಗೆ
ನನಗೀಗ ಕಿಚ್ಚು ಹಚ್ಚುವ ಕನಸು!      

    

                                    
-ಕಾದಂಬಿನಿ, ಸೀಗಲ್ ಡೈವಿಂಗ್ ಕಂಪನಿ (ಅಂಡರ್ ವಾಟರ್ ಇಂಜಿನಿಯರ‍್ಸ್) ಇಲ್ಲಿ ಆಫೀಸ್ ಎಕ್ಸಿಕ್ಯೂಟೀವ್ ಆಗಿ ಕೆಲಸ ನಿರ‍್ವಹಿಸುತ್ತಿದ್ದಾರೆ. ವಾಸ ಸದ್ಯ ಶಿವಮೊಗ್ಗ ಜಿಲ್ಲೆಯ ಹುಲಿಕಲ್ ಘಾಟ್ ನಲ್ಲಿ. ಬಿಡುವಿದ್ದಾಗ ಫೇಸ್ಬುಕ್ಕಿನಲ್ಲಿ ಕವಿತೆ ಬರೆಯುವುದು ಹವ್ಯಾಸ. ಆಗೀಗ ಅಪರೂಪಕ್ಕೆ ಕೆಲವು ಪತ್ರಿಕೆಗಳಲ್ಲಿ ಕವಿತೆಗಳು ಪ್ರಕಟವಾಗಿವೆ. ಇದುವರೆಗೂ ಯಾವ ಪುಸ್ತಕ ಪ್ರಕಟವಾಗಿಲ್ಲ. ಪುಸ್ತಕ ಪ್ರಕಟಿಸುವ ಯಾವ ಆಲೋಚನೆಯೂ ಸದ್ಯಕ್ಕೆ ಅವರಿಗೆ ಇಲ್ಲ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...