Wednesday, March 02, 2016

ಕಾವ್ಯಾ ಕಡಮೆ ನಾಗರಕಟ್ಟೆ: ಎರಡು ಕವಿತೆಗಳು   
೧.    

ನಡೆಯಲಾರೆ ಹುಲ್ಲು ಹಾಸಿನ ಮೇಲೆ


ನಡೆಯಲಾರೆ ಹುಲ್ಲು ಹಾಸಿನ ಮೇಲೆ
ಟಾರು ರಸ್ತೆಯಲಿ ಸರಬರ ನಡೆದಂತೆ
ಚಿವುಟಲಾರೆ ಹಸಿರೆಲೆಯ ಚೆಂದ ಕಂಡಿತೆಂದು
ಹಿಂಡಲಾರೆ ಮಗುವ ಗಲ್ಲವ ಮುದ್ದಿನಿಂದಲೂ
ಹಿಚುಕಲಾರೆ ಹಕ್ಕಿ ಮೃದು ಮೈಯ
ಕಾಳುಕೊಡುವಾಟವಾಡಿ

ಇರುವೆಯ ದಾರಿಗಡ್ಡವಾಗಲಾರೆ ಕೊಂಬೆಗೆ
ಕೈ ಕೊಟ್ಟು ನಿಂತು ಕ್ಷೇಮವಾಗಿ ಗಿಡದಲ್ಲರಳಿ
ಹೊಳೆವ ಪುಷ್ಪವ ಕಿತ್ತು ಮುಡಿಯಲ್ಲಿಡಲಾರೆ

ಬಿಗಿಯಲಾರೆ ತಂದೆಯ ವಯದ ವ್ಹೇಟರ್
ನಿಗೆ ಟಿಪ್ಸು ಕೊಡುವಾಗ ಕಂಪಿಸಿದ ಕೈಯ
ಕೊಡಿಸಲಾರೆ ಹಸುಳೆಗೆ ಆಟಿಕೆಯ ಬಂದೂಕನು

ಗಾಜು ಹೊದಿಸಿದ ಗೋಡೆಗೆ ತುಟಿಯೊತ್ತಿ
ನಿಂತಾಗ ಬರಿಮೈ ಪುಟ್ಟಿ ಒಳಗೆ ಕೂತು
ಇನ್ನೂರೈವತ್ತರ ಮಸಾಲಾದೋಸೆ ಮೆಲ್ಲಲಾರೆ.

***


೨.    
ಅದು

ಅದೇಕೋ ಗೊತ್ತಿಲ್ಲ.

ನಾದಕ್ಕಂಟದ ಕೊಳಲು
ದನಿಗಂಟದ ಹಾಡು
ಬಣ್ಣಕ್ಕಂಟದ ಚಿತ್ರ
ನಟನೆಗಂಟದ ಪಾತ್ರ
ಅರ್ಥಕ್ಕಂಟದ ಪದ್ಯ
ಪಯಣಿಸುತ್ತವೆ ಜಗದಾಚೆಗೆ
ಒಂದಿನಿತೂ ಸದ್ದು ಮಾಡದೇ

ಅದೇ ಶಬ್ದಕ್ಕಂಟದ ಮೊನೆ ಮಾತ್ರ
ಸೀದಾ ಎದೆಯ ಬಗೆವುದು.
***

-ಕಾವ್ಯಾ ಕಡಮೆ ನಾಗರಕಟ್ಟೆ (೧೯೮೮) ಹುಬ್ಬಳ್ಳಿಯವರು. ಬಿಎಸ್ಸಿ ನಂತರ ಕರ್ನಾಟಕ ವಿವಿಯಿಂದ ಆರು ಚಿನ್ನದ ಪದಕಗಳೊಂದಿಗೆ ಪತ್ರಿಕೋದ್ಯಮ ಎಂ ಎ ಪದವಿ. ಮೊದಲ ಕವನ ಸಂಕಲನ ’ಧ್ಯಾನಕೆ ತಾರೀಖಿನ ಹಂಗಿಲ್ಲ’ ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗಿದೆ. ಸದ್ಯಕ್ಕೆ ಪತಿಯೊಡನೆ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸವಾಗಿದ್ದಾರೆ. ಪ್ರಕಟಿತ ಕವನ ಸಂಕಲನಕ್ಕೆ ೨೦೧೪ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಯುವ ಬರಹಗಾರರಿಗೆ ನೀಡುವ ೨೦೧೨ರ ಟೋಟೋ ಪುರಸ್ಕಾರ, ಹಲವು ಅಂತರ್ ಕಾಲೇಜು ಬಹುಮಾನಗಳು ಬಂದಿದೆ. ದೆಹಲಿಯಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿಯ ಆಲ್ ಇಂಡಿಯನ್ ಯಂಗ್ ರೈಟರ್ಸ್ ಮೀಟ್‌ನಲ್ಲಿ ‘ಇಶ್ಯೂಸ್ ಆಫ್ ನ್ಯೂ ಫಿಕ್ಶನ್’ ಪ್ರಬಂಧ ಮಂಡನೆ. ಮೊದಲ ಕಾದಂಬರಿ ’ಪುನರಪಿ’ ಅಚ್ಚಿನಲ್ಲಿದೆ.

50, Maple Court, Highland Park, New Jersey- 08904. kavya.kadame@gmail.com


1 comment:

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...