Tuesday, March 22, 2016

ಫ್ಯಾಸಿಸಂನತ್ತ ಹೊರಳುತ್ತಿರುವ ರಾಷ್ಟ್ರವಾದ

 
 
 
 
 
ಸೌಜನ್ಯ : ಪ್ರಜಾವಾಣಿ

‘ದೇಶಪ್ರೇಮ ಪುಂಡರ ಕೊನೆಯ ಆಶ್ರಯ’ ಎಂದು ಸ್ಯಾಮುಯೆಲ್ ಜಾನ್‌ಸನ್ ಹೇಳಿದ ಸಂದರ್ಭದಲ್ಲಿ ಬಹುಶಃ ಅವರೂ  ಇಂದು ಭಾರತದಲ್ಲಿರುವಂತಹ ಪರಿಸ್ಥಿತಿಯನ್ನು ಎದುರಿಸಿರಬೇಕು. ದೇಶಪ್ರೇಮದ ಬಗ್ಗೆ ಅಂದು ಜಾನ್‌ಸನ್ ಆಡಿದ ಮಾತು  ಭಾರತದಲ್ಲಿ ಇಂದು ನಿಜವಾಗುತ್ತಿದೆಯೇ ಎಂಬ ಆತಂಕ ಎದುರಾಗಿದೆ.

ರಾಷ್ಟ್ರವಾದ ಆರೂ ಭೂಖಂಡಗಳನ್ನು ಆವರಿಸಿದೆ ಹಾಗೂ ಇಂದು ಅದು ಅತ್ಯಂತ ಶಕ್ತಿಶಾಲಿ, ಪ್ರಭಾವಶಾಲಿ ಸಾಮಾಜಿಕ ಶಕ್ತಿಯಾಗಿದೆ ಎನ್ನುತ್ತಾರೆ ಸಮಾಜವಾದಿ ಚಿಂತಕ ಅಶೋಕ ಮೆಹ್ತಾ. ರಾಷ್ಟ್ರವಾದ ಸರ್ವರಾಷ್ಟ್ರಪ್ರೇಮಿಯೂ-cosmopolitan -  ಆಗಬಹುದು ಅಥವಾ ಅನ್ಯರಾಷ್ಟ್ರದ್ವೇಷಿಯೂ-  xenophobic - ಆಗಬಹುದು. ‘ಸರ್ವರಾಷ್ಟ್ರಪ್ರೇಮಿ ರಾಷ್ಟ್ರವಾದ’ ಎಂದರೆ ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರೂ, ಜಯಪ್ರಕಾಶ ನಾರಾಯಣ ಹೊಂದಿದ್ದ ರಾಷ್ಟ್ರವಾದ. ಭಾರತಕ್ಕೆ ಇಂತಹ ರಾಷ್ಟ್ರವಾದದ ಒಂದು ಭವ್ಯ ಪರಂಪರೆ ಇದೆ.

ರಾಷ್ಟ್ರವಾದ ತರ್ಕಹೀನ ಋಣಾತ್ಮಕ ತುಡಿತಗಳಿಂದ ಕೂಡಿರುತ್ತದೆ ಎನ್ನುವಾಗ ಜಾರ್ಜ ಆರ್ವೆಲ್ ಈ ಅನ್ಯರಾಷ್ಟ್ರದ್ವೇಷಿ ರಾಷ್ಟ್ರವಾದವನ್ನೇ ಗಮನದಲ್ಲಿಟ್ಟುಕೊಂಡು ಹೇಳಿದ್ದರು ಎನಿಸುತ್ತದೆ. ಇವೆರಡೂ ಥರದ ರಾಷ್ಟ್ರವಾದಗಳು ಪರಸ್ಪರ ವಿರೋಧಿ ಸ್ವಭಾವವನ್ನು ಹೊಂದಿದ್ದರೂ ಅವು ಹಲವೊಮ್ಮೆ ಒಂದರಿಂದ ಇನ್ನೊಂದಕ್ಕೆ ರೂಪಾಂತರವನ್ನೂ ಹೊಂದಬಹುದಾಗಿವೆ.
ಅನ್ಯರಾಷ್ಟ್ರದ್ವೇಷಿ ರಾಷ್ಟ್ರವಾದದಿಂದಾಗಿ ಎರಡು ಮಹಾಯುದ್ಧಗಳಲ್ಲಿ ಪರಸ್ಪರ ಹೋರಾಡಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದ್ದ ಯುರೋಪಿನ ದೇಶಗಳು ಇಂದು ಯುರೋಪಿಯನ್ ಯೂನಿಯನ್ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಪರಸ್ಪರ ಸ್ನೇಹದಿಂದ ಯುರೋಪಿನ ಏಳಿಗೆಗಾಗಿ ಪ್ರಯತ್ನಿಸುತ್ತ ಅನ್ಯರಾಷ್ಟ್ರದ್ವೇಷಿ ರಾಷ್ಟ್ರವಾದ ಸರ್ವರಾಷ್ಟ್ರಪ್ರೇಮಿ ರಾಷ್ಟ್ರವಾದವಾಗಿ ರೂಪಾಂತರ ಹೊಂದಿರುವುದಕ್ಕೆ ಉದಾಹರಣೆಯಾಗಿವೆ. ಹಾಗೆಯೇ ಈ ಸರ್ವರಾಷ್ಟ್ರಪ್ರೇಮಿ ರಾಷ್ಟ್ರವಾದ ಸುಲಭವಾಗಿ ಅನ್ಯರಾಷ್ಟ್ರದ್ವೇಷಿ ರಾಷ್ಟ್ರವಾದವಾಗಿಯೂ ರೂಪಾಂತರ ಹೊಂದಬಲ್ಲದು.

ಭಾರತದಲ್ಲಿಂದು ಇದೇ ಆಗುತ್ತಿದೆ. ಇಂದು ಕೋಮುವಾದಿಗಳ ಪ್ರಕಾರ ಭಾರತವನ್ನು ಪ್ರೇಮಿಸುವುದು ಎಂದರೆ ಪಾಕಿಸ್ತಾನವನ್ನು ದ್ವೇಷಿಸುವುದು ಎಂದಾಗಿದೆ. ಈ ಅನ್ಯರಾಷ್ಟ್ರದ್ವೇಷಿ ಹಾಗೂ ಅತಿರೇಕದ ರಾಷ್ಟ್ರವಾದವೇ ಫ್ಯಾಸಿಸಂ ಆಗಿ ಪರಿವರ್ತನೆ ಹೊಂದುತ್ತದೆ. ಭಾರತದಲ್ಲಿಯೂ ಈ ಪ್ರಕ್ರಿಯೆ ಪ್ರಾರಂಭವಾಗಿದೆ.

ಫ್ಯಾಸಿಸಂಗೆ ರಾಷ್ಟ್ರವಾದವೇ ಮೂಲ ಆಧಾರ ಎಂದು ತಮ್ಮ ಪುಸ್ತಕ ‘ವರ್ಲ್ಡ್ ಫ್ಯಾಸಿಸಂ: ಎ ಹಿಸ್ಟಾರಿಕಲ್ ಎನ್ಸೈಕ್ಲೋಪಿಡಿಯ’ದಲ್ಲಿ ಸೈಪ್ರಿಯನ್ ಬ್ಲೇಮೈರ್ಸ್‌ ಹೇಳುತ್ತಾರೆ. ತಮ್ಮ ಲೇಖನ ‘ರಿಅಪ್ರೈಸಲ್ಸ್‌ ಆಫ್ ಫ್ಯಾಸಿಸಂ’ನಲ್ಲಿ ಹೆನ್ರಿ ಆಶ್ಬಿ ಟರ್ನರ್ ಫ್ಯಾಸಿಸಂ ಅನ್ನು ‘ಮೂಲಭೂತವಾದಿ ಸರ್ವಾಧಿಕಾರವಾದಿ ರಾಷ್ಟ್ರವಾದ’ ಎಂದು ನಿರ್ವಚಿಸುತ್ತಾರೆ. ತಮ್ಮ ಪುಸ್ತಕ ‘ದ ನೇಚರ್ ಆಫ್ ಫ್ಯಾಸಿಸಂ’ನಲ್ಲಿ ರೋಜರ್ ಗ್ರಿಫಿನ್ ಅದನ್ನೊಂದು ‘ಜನಪ್ರಿಯ ಉಗ್ರವಾದಿ ರಾಷ್ಟ್ರವಾದ’ ಎನ್ನುತ್ತಾರೆ. ಇವರೆಲ್ಲರೂ ಫ್ಯಾಸಿಸಂ ಅನ್ನು ರಾಷ್ಟ್ರವಾದದೊಂದಿಗೆ ಜೋಡಿಸುತ್ತಿರುವುದು ಗಮನಾರ್ಹ.

ಪ್ರಪಂಚದ ಅತ್ಯಂತ ದೊಡ್ಡ ಫ್ಯಾಸಿಸ್ಟರಾದ ಬೆನಿಟೊ ಮುಸೊಲಿನಿ ತಮ್ಮ ಪಕ್ಷವನ್ನು ನ್ಯಾಷನಲ್ ಫ್ಯಾಸಿಸ್ಟ್‌ ಪಾರ್ಟಿ ಎಂದೂ, ಅಡಾಲ್ಫ್‌ ಹಿಟ್ಲರ್ ತಮ್ಮ ಪಕ್ಷವನ್ನು ನ್ಯಾಷನಲ್ ಸೋಷಲಿಸ್ಟ್‌ ಜರ್ಮನ್ ವರ್ಕರ್ಸ್‌ ಪಾರ್ಟಿ ಎಂದೂ ಕರೆದಿದ್ದರು ಎನ್ನುವುದು ಕಾರಣಹೀನವೇನಲ್ಲ.

ಜನತಂತ್ರವು ನಾಗರಿಕರ ಸಮಾನತೆಯ ತತ್ವವನ್ನು ಆಧರಿಸಿರುವುದರಿಂದ ಫ್ಯಾಸಿಸ್ಟ್‌ ಸಿದ್ಧಾಂತಿ ಇಟಲಿಯ ಜುವಾನಿ ಜೆಂತೀಲೆ ತನ್ನ ಪುಸ್ತಕ ‘ಡಾಕ್ಟ್ರಿನ್ ಆಫ್‌ ಫ್ಯಾಸಿಸಂ’ನಲ್ಲಿ ಜನತಂತ್ರವನ್ನು ತಿರಸ್ಕರಿಸುತ್ತಾನೆ ಹಾಗೂ ಆ ಕಾರಣದಿಂದ ಸಮಾನತೆಯ ಆದರ್ಶವನ್ನೇ ತಿರಸ್ಕರಿಸುತ್ತಾನೆ. ಇಂದು ನಮ್ಮ ದೇಶದಲ್ಲಿ ಈ ಎಲ್ಲ ಸೂಚನೆಗಳೂ ಕಂಡುಬರುತ್ತಿವೆ.
‘ರಾಜ್ಯ-ವ್ಯವಸ್ಥೆ’ ಒಂದು ಭೌಗೋಳಿಕ-ರಾಜಕೀಯ ಘಟಕ. ಅದು ಭೌಗೋಳಿಕ ವೈಶಿಷ್ಟ್ಯವನ್ನು ಹೊಂದಿರುತ್ತದೆ. ‘ರಾಷ್ಟ್ರ’ ಎನ್ನುವುದು ಒಂದು ಸಾಮಾಜಿಕ-ಸಾಂಸ್ಕೃತಿಕ ಘಟಕ ಹಾಗೂ ಜನಪದ ಅದರ ವೈಶಿಷ್ಟ್ಯ. ಇವೆರಡೂ ಪರಿಕಲ್ಪನೆಗಳು ಆಧುನಿಕ ಯುಗದಲ್ಲಿ ಪರಸ್ಪರ ಪೂರಕವಾಗಿ ಪರಿಣಮಿಸಿದವು ಹಾಗೂ ಪರಸ್ಪರ ತಮ್ಮ ಶಕ್ತಿಯನ್ನು ಹಂಚಿಕೊಳ್ಳುತ್ತ ‘ರಾಷ್ಟ್ರ-ರಾಜ್ಯ-ವ್ಯವಸ್ಥೆ’ಯ (nation-state) ರೂಪ ಪಡೆದು ಬಲಶಾಲಿಯಾದವು.

‘ಹಲವು ಬಾರಿ ರಾಜ್ಯ-ವ್ಯವಸ್ಥೆ ತನ್ನ ಭೌಗೋಳಿಕ ಕ್ಷೇತ್ರದಲ್ಲಿ ರಾಷ್ಟ್ರವಾದವನ್ನು ಹುಟ್ಟುಹಾಕುತ್ತದೆ ಹಾಗೂ ಹಲವು ಬಾರಿ ರಾಷ್ಟ್ರವಾದ ತನ್ನದೇ ರಾಜ್ಯ-ವ್ಯವಸ್ಥೆಯನ್ನು ಹುಟ್ಟುಹಾಕುತ್ತದೆ’ ಎನ್ನುತ್ತಾರೆ ಅಶೋಕ ಮೆಹ್ತಾ. ಭಾರತದಲ್ಲಿದ್ದ ಬ್ರಿಟಿಷರ ರಾಜ್ಯ-ವ್ಯವಸ್ಥೆ ತನ್ನ ಭೌಗೋಳಿಕ ಕ್ಷೇತ್ರದಲ್ಲಿ ರಾಷ್ಟ್ರವಾದವನ್ನು ಹುಟ್ಟು ಹಾಕಿತು. ಹಾಗೆಯೇ ಇಂದು ಭಾರತದಲ್ಲಿ ‘ಅನ್ಯರಾಷ್ಟ್ರದ್ವೇಷಿ ರಾಷ್ಟ್ರವಾದ’ ತನ್ನದೇ ಆದ ರಾಜ್ಯ-ವ್ಯವಸ್ಥೆಯನ್ನು ಹುಟ್ಟುಹಾಕಲು- ಹಿಂದೂ ರಾಷ್ಟ್ರವನ್ನು ಕಟ್ಟಲು - ಪ್ರಯತ್ನಿಸುತ್ತಿದೆ.
ರಾಜ್ಯ-ವ್ಯವಸ್ಥೆ ಹಾಗೂ ರಾಷ್ಟ್ರಗಳ ಒಟ್ಟುಗೂಡುವಿಕೆ ಹಾಗೂ ಆ ಮೂಲಕ ಬೆಳೆದು ಬರುವ ‘ರಾಷ್ಟ್ರ-ರಾಜ್ಯ-ವ್ಯವಸ್ಥೆ’ ಫ್ಯಾಸಿಸಂನ ಆಗಮನಕ್ಕೆ ವೇಗವರ್ಧಕವಾಗಿ ಪರಿಣಮಿಸುತ್ತದೆ. ಹಿಟ್ಲರನ ರಾಷ್ಟ್ರವಾದವನ್ನು ‘ಜನಾಂಗ ಕೇಂದ್ರಿತ ರಾಷ್ಟ್ರವಾದ‘ ಎನ್ನುವಂತೆ ಭಾರತದ ಫ್ಯಾಸಿಸ್ಟರ ಈ ರಾಷ್ಟ್ರವಾದವನ್ನು ‘ಧರ್ಮಕೇಂದ್ರಿತ ರಾಷ್ಟ್ರವಾದ’ ಎಂದು ಹೇಳಬಹುದು.

1923ರಷ್ಟು ಹಿಂದೆಯೇ ಸಾವರ್ಕರ್‌ ಅವರು ನಮ್ಮ ದೇಶದಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು ಎರಡು ವಿಭಿನ್ನ ರಾಷ್ಟ್ರಗಳು ಎಂಬ ದ್ವಿರಾಷ್ಟ್ರದ ಪರಿಕಲ್ಪನೆಯನ್ನು ಮುಂದಿಟ್ಟು ‘ಹಿಂದುತ್ವ’ ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದರು. ಇವರು ‘ಇನ್ನೊಂದು ರಾಷ್ಟ್ರ’ವಾದ ಮುಸ್ಲಿಮರಿಂದ ‘ನಮ್ಮ’ ರಾಷ್ಟ್ರಕ್ಕೆ ಅಪಾಯವೆಂದು ಪರಿಗ್ರಹಿಸುತ್ತಾರೆ.

ಭಾರತದ ವಿಭಜನೆಯಾದಾಗ 3.5 ಕೋಟಿಯಷ್ಟಿದ್ದ ಮುಸ್ಲಿಮರು ಇಂದು 18 ಕೋಟಿಯಷ್ಟು ಆಗಿದ್ದಾರೆ. ಇದನ್ನೇ ಉದಾಹರಿಸಿ ಹಿಂದುತ್ವವಾದಿಗಳು ಇನ್ನು 25 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಹಿಂದೂಗಳ ಜನಸಂಖ್ಯೆಯನ್ನು ಮೀರಿಸುತ್ತದೆ ಎಂದು ವಾದಿಸುತ್ತಾರೆ. ಜನಸಂಖ್ಯೆಯಲ್ಲಿ ಆಗಬಹುದಾದ ಈ ವ್ಯತ್ಯಯವನ್ನು ತಪ್ಪಿಸಲು ಅವರು ಎರಡು ವಿಧಾನಗಳನ್ನು ಬಳಸುತ್ತಿದ್ದಾರೆ. ಮೊದಲನೆಯದಾಗಿ ಗೋಮಾಂಸವನ್ನು ತಿನ್ನುವ ರಾಷ್ಟ್ರವಿರೋಧಿ ಜನರು ಭಾರತವನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳುತ್ತಿದ್ದಾರೆ. ಎರಡನೆಯದಾಗಿ ಪ್ರತಿಯೊಬ್ಬ ಹಿಂದೂ ಮಹಿಳೆ ಹೆಚ್ಚುಹೆಚ್ಚು ಮಕ್ಕಳನ್ನು ಹೆರಬೇಕು ಎಂದು ಹೇಳುತ್ತಿದ್ದಾರೆ.

ಈ ‘ಅನ್ಯರಾಷ್ಟ್ರದ್ವೇಷಿ ರಾಷ್ಟ್ರವಾದ’ ಫ್ಯಾಸಿಸಂ ಕಡೆಗೆ ತಿರುಗಲು ಪ್ರಾರಂಭವಾಗಿದ್ದು 1939ರಲ್ಲಿ, ಫ್ಯಾಸಿಸಂ ಬಗ್ಗೆ ಒಲವಿದ್ದ ಮ್ಯಾಕ್ಸಿಮಿನಿಯಾನಿ ಜ್ಯುಲಿಯಾ ಪೋರ್ಟಾಸ್ ಎಂಬ ಫ್ರೆಂಚ್‌ ಮಹಿಳೆ ಭಾರತಕ್ಕೆ ಬಂದು ಇಲ್ಲಿ ಮುಖರ್ಜಿ ಎಂಬುವರನ್ನು ಮದುವೆಯಾಗಿ ಸಾವಿತ್ರಿದೇವಿ ಎಂಬ ಹೆಸರನ್ನು ಸ್ವೀಕರಿಸಿ ‘ಹಿಂದೂಗಳಿಗೊಂದು ಎಚ್ಚರ’ (A warning to the Hindus) ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿದಾಗ.
ಭಾರತದಲ್ಲಿರುವ ರಾಷ್ಟ್ರವಾದಿಗಳನ್ನು ಹಿಂದೂರಾಷ್ಟ್ರವಾದಿಗಳನ್ನಾಗಿ ಪರಿವರ್ತಿಸುವುದೇ ಈ ಪುಸ್ತಕದ ಉದ್ದೇಶ ಎಂದು ಅವರು ಹೇಳಿದ್ದರು.

ಆರ್ಯ ಜನಾಂಗದ ಒಂದೇ ಅವಶೇಷವಾಗಿ ಉಳಿದಿರುವ ಭಾರತವನ್ನು ಹೊರಗಿನ ಸಂಸ್ಕೃತಿಯೊಂದು - ಅಂದರೆ ಮುಸ್ಲಿಂ ಸಂಸ್ಕೃತಿ - ಕಬಳಿಸಿಬಿಡಬಾರದು ಎಂದು ಅವರು ಹೇಳಿದ್ದರು. ಸಾವಿತ್ರಿದೇವಿಯವರ ಜೀವನಚರಿತ್ರೆಯನ್ನು ಬರೆದ ನೊಕೊಲಾಸ್ ಗೂಡ್ರಿಕ್-ಕ್ಲಾರ್ಕ್, ಪುಸ್ತಕದ ಹೆಸರನ್ನು ‘ಹಿಟ್ಲರನ  ಪುರೋಹಿತೆ: ಸಾವಿತ್ರಿದೇವಿ, ಹಿಂದೂ-ಆರ್ಯನ್ ಮಿಥ್ಯ ಹಾಗೂ ನವನಾಝಿವಾದ’ ಎಂದು ಇಟ್ಟಿದ್ದು ಆಕಸ್ಮಿಕವೇನಲ್ಲ. ಅವರ ವಿಚಾರಗಳನ್ನು ಅನುಮೋದಿಸಲು ಕೋನ್‌ರಾಡ್ ಎಲ್ಸ್ಟ್‌ ಅವರು ಬರೆದ, ಹಾಗೂ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿಯವರು ಹಲವಾರು ಬಾರಿ ಉಲ್ಲೇಖಿಸಿರುವ ಪುಸ್ತಕದ ಹೆಸರು ಕೂಡ ‘ದಿ ಸ್ಯಾಫ್ರನ್‌ ಸ್ವಸ್ತಿಕ: ಹಿಂದೂ ಫ್ಯಾಸಿಸಂನ ಪರಿಕಲ್ಪನೆ’ ಎಂದಿರುವುದೂ ಆಕಸ್ಮಿಕವಲ್ಲ. ಹೌದು, ಇಂದು ಈ ಭಗವಾ ಫ್ಯಾಸಿಸಂ ಭಾರತದಲ್ಲಿ ಪದಾರ್ಪಣ ಮಾಡಿದೆ. ಫ್ಯಾಸಿಸಂ-ವಿರೋಧಿ ಶಕ್ತಿಗಳೆಲ್ಲ ಒಗ್ಗೂಡಿ ಅದರ ಈ ‘ರಥ’ವನ್ನು ತಡೆಯುತ್ತವೆಯೋ, ಕಾಯ್ದು ನೋಡಬೇಕು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...