Tuesday, March 22, 2016

ಡಾ. ವಿನಯಾ : ಎರಡು ಕವಿತೆಗಳು

೧ 
ಅಗ್ನಿ ಪಥ


ಜೀಂ ಜೀಂ ಜೀರುಂಡೆಯ ಜಿರಿಜಿರಿ ದನಿ
ಸದ್ದಡಗಿದ ರಾತ್ರಿ ಪೂರಾ ತನ್ನದೆಂಬಂತೆ ಸೀಳುತ್ತಿದೆ
ಯಾತನೆಯ ಯಾವ ಹಸಕನು ಹೀಗೆ ಹಾಯುತ್ತಿದೆ?
ಆ ಟಿಟ್ಟಿಭ, ತೂಗುಗಾಳಿಯಲಿ ಮರನಂಬಿ
ಪತರುಗುಟ್ಟುವ ಮರಿಯನೊತ್ತಿ ಪಿಸುಗುತ್ತಿದೆ
‘ಕಲಿ ಕತ್ತಲೆಯ ದಾಟುವುದು’
ನರಿ ತನ್ನ ಮರಿಗಳ ಅನ್ನದ ಉತಾವಳಿಗೆ ತೂಕಡಿಸುತ್ತಲೇ ಎದ್ದು
ಊರ ನಾಯಿಗದ್ಯಾವ ದೆವ್ವದ ನೆಳಲೋ ಒರಲುತ್ತಿದೆ ಒಂದೇ ಸಮ
ನನ್ನದೆಂಬ ಈ ಎಲ್ಲವನೂ ತೆಕ್ಕೆಯಲಿಟ್ಟೇ ಹೆಜ್ಜೆ ಕಿತ್ತಬೇಕು

ಅನಾದಿಯ ಅದ್ಯಾವುದೋ ಗಳಿಗೆಯಲಿ ನಿನ್ನ ಬೆನ್ನು ಹತ್ತಿದೆ ನಾ
ಸುತ್ತುತ್ತಲೇ ಇರುವೆ ಸುರುಳಿ ಸುರುಳಿ ದಿಂಡಗೆ ಉದ್ದಕೆ
ಉರುಳುರುಳುತ್ತ, ಉರುಳಾಗುತ್ತ, ನಜರುಬಂದಿಗಳಾಗುತ್ತ
ಹೊಟ್ಟೆಯೊಳಗಿನ ಮಣ್ಣಿನ ಹೆಂಟೆಯ ಮಿದ್ದಿ ಮಿರುಗಿದವನೆ
ಮೊಲೆಗೆ ಹಾಲು ತುಂಬಿದ, ಸೂರ‍್ಯದೇವನೆ, ಎಲ್ಲಿ ಬಚ್ಚಿಡಲಿ ಈ ಪುಲಕಗಳ?
ನಿನ್ನ ಬೆನ್ನಿಗೆ ಬಿದ್ದ ಜೋಗಿಣಿ ನಾ
ಇದು ಮಣ್ಣಿಗಂಟಿದ ಬದುಕು
ಹುಳು ಹುಪ್ಪಟಿ ಕಾನು ಜೇನುಗಳ ಒಪ್ಪಂದ
ಈ ಪರಿಷೆಯಲಿ ಎಲ್ಲ ಕಲಕಲ ಕಲಸಿ
ಕಿನಾರೆಯಲಿ ಕೀವು ಕರೆಗಟ್ಟಿ
ನಿನ್ನ ಪ್ರೇಮದ ಹನಿಯೂ ಈ ಉಪ್ಪು ಮೈಯಲಿ
ಉಪ್ಪಾಗಿ, ನಿರಂತರ ಕುದಿವ ಜೀವಗುಣದ ಕಡಲು
ಈ ಒಡಲು, ಬೇನಾಮಿ ಭರತ ಇಳಿತ ಅನವರತ

ಎಷ್ಟು ಬಿಕ್ಕಿದರೇನೋ ಉಕ್ಕಲಾರೆನೊ ನಾನು
ಮಳೆಹೊಯ್ದು ಮಣ್ಣುಗಲಸಿ ಕೊಚ್ಚೆ ರಾಡಿಗಳೆಲ್ಲ ಹೊಕ್ಕರೂ
ಒಳಗೇ ಕುದ್ದುಕುದ್ದು ಶುದ್ಧವಾದವಳು
ಹೊಡಮರಳಿ ನರಳಿ ಮರಳಿ ಮರಳಿ
ತನ್ನ ಹೆಡೆ ತಾನೇ ಬಡಿದು ಸಾವ ಸರ್ಪದ ಹಾಗೆ
ಬಡಿದೂ ಬಡಿದೂ ಮೈ ತೋಲ ಮನವೂ ತೋಲ

ಈ ಸೃಷ್ಟಿ ತನ್ನದೆಂಬ ಜಂಬಗಾರನೆ
ನಿಲ್ಲಿಸು ಒಂದರಗಳಿಗೆ ನಿನ್ನ ಹೆಜ್ಜೆಗಳ
ಎತ್ತೆತ್ತ ತಿರುವಿದರೂ
ನಾನೊಂದು ಮಣ್ಣಿನ ಗುಪ್ಪೆ, ನಿನ್ನ
ಸ್ಪರ್ಶವಿಲ್ಲದೆ ಇಲ್ಲಿ ಹುಲ್ಲೂ ಹುಟ್ಟದು
ಅಗಣಿತ ಕನಸುಗಳು ಮಾತ್ರ ಚಿಗುರುತ್ತಿವೆ
ರೋಸಿ ಹೋಗಿದೆ ಸತಿಯಾಗಿ, ಸಾಧ್ವಿಯಾಗಿ
ನಿನ್ನೊಳಗೆ ಅರಗದೆ, ಪರಿಧಿಯೊಳಗೆ ಉರುಳುವುದೂ ತಪ್ಪದೆ
ಅನವರತ ಹಡೆವವಳ ಮೊಲೆತೊಟ್ಟು ಸೆಲೆತು ಬಾಣಂತಿಬೇನೆ
ಸೂರ‍್ಯನೆ, ಮತ್ತೂ ಮಿಸುಗುತ್ತಿದೆ ಆಳದ ಜೀವ ಜಿನುಗು ಮಳೆಗೆ

ಎಷ್ಟೆಷ್ಟು ಭ್ರೂಣಗಳ ಜೀವಗಳ ಕನಸುಗಳ ನೆನಪುಗಳ
ಪದರು ಪದರುಗಳ ಪೇರಿಸಿದ ಪರ್ವತವೇ ಆದರೂ
ಕಡಿದಷ್ಟೂ ಚಿಗಿವ ಜೀವಗುಣವೂ ಸೋತು
ಸೋಲ ಕುಣಿತಕ್ಕೆಂದೇ ಹೆಜ್ಜೆ ಹಾಕಿದವಳು
ಹೆತ್ತ ಮಕ್ಕಳೆಲ್ಲ ಕಾದಾಡಿ ಕಿತ್ತಾಡಿ ಮೈಗೆಲ್ಲ ನೆತ್ತರೊಕ್ಕಿ
ಸಾಕಿತ್ತು ತಂದೆ ಈ ಬೇನೆ, ಮತ್ಯಾಕೆ ಹುಗಿದರೋ
ಹಸಿ ಹೊಟ್ಟೆಯೊಳಗೆ ಗದಗುಡುವ ಅಣುಬಾಂಬುಗಳ
ತಕಾ, ತೋರು ನಿನ್ನ ಕಾಳಿಯವತಾರ ಎಂದು ಮೀಸೆ ತಿರುವುವ
ಯಜಮಾನ್ಯವೆ, ಮೊಲೆಯುಂಡ ನೆನಪು ಮಾಸಿದ
ಸಂತಾನವೆ, ನನ್ನ ಹಕ್ಕಲ ಈ ಒಕ್ಕಲಾಟದಲಿ
ಯಾರು ಸೋಲಿಸುವರಯ್ಯಾ ಸೋತವಳ
ಸೋಲಲೆಂದೇ ಸೆಣಸುವವಳ

ಕೋಪದ ಲಾವಾ ಆರುತ್ತಿದೆ ದೊರೆ
ನನಗೆ ನಾನೇ ಬೆಂಕಿಯುಕ್ಕುವ ಉರಿ ಸಾಕಾಗಿದೆ
ಬೆಂಕಿಯುಂಡೆಗಳು ಬೆಂದ ಮಣ್ಣಾಗಿ
ಗಿಡಕೆ ಮತ್ತೊಂದು ಕುಡಿ ಮೂಡಲಿ ಎಂದೇ
ಸೆಣಸುತ್ತಿದೆ ಒಡಲು
ಜೀರುಂಡೆ ಸದ್ದಿನಗುಂಟ ಸುತ್ತುತ್ತಿವೆ ಭಯ
ಭುಗಿಭುಗಿಲು ಭಯ
ನನ್ನ ಸಂತಾನವ ನಾನೇ ತಿಂದಂತೆ
ಎದೆ ನೆಡುವ ನೋವು
ಹಗಲು ಹಾಡೇ ಹಗಲು ಜೀವ ಜೀವದಾ ಬ್ಯಾಟಿ
ಪಾದಪಾದಗಳಂಚಲ್ಲಿ ಚೆದುರಿ ಚಲ್ಲಾಪಿಲ್ಲಿ
ಚಿಗರಿಗಂಗಳ ಚೆಲುವು
ಬಾಯಿ ಬ್ಯಾನಿಯ ಬದುಕು, ಕುಸಿಯುತ್ತಿರುವೆ
ಕೊಡು ಜತ್ತು ಜೀವಸಖನೆ

ತತ್ತಾ ಇಲ್ಲಿ ನಿನ್ನ ಕಣ್ಣಿಗೆ ಕಂಡ ಎಲ್ಲ ಹತ್ಯಾರಗಳ
ಬೇಷರತ್ತಾಗಿ ಹುಗಿ ನನ್ನ ಒಡಲಲ್ಲಿ
ತಾಯಿ ನಾ ನನ್ನ ಕಣ್ಣೀರ ಉರಿಯಲಿ ಸ್ಫೋಟಗೊಳ್ಳಲಿ ಎಲ್ಲ
ಆ ಪುಡಿಪುಡಿಗಳಿಗೆ ನಿನ್ನ ಪ್ರೇಮಜಲವನುಣಿಸು
ಮಣ್ಣ ಉಂಡೆಯನು ಉರುಳುರುಳಿಸಿ ಒಯ್ಯುತ್ತವೆ ಸಗಣಿ ಹುಳು

ಗೋಚರವೋ ಅಗೋಚರವೋ
ಅಪಮಾನದ ಗಾಯಗಳನೇಕೆ ಗೀರುತ್ತಿ
ಒಳಗಾಯ ಆರಿ ಹಕ್ಕಳೆಯುದುರಿ ಮತ್ತೆ ಕೀವಾಡಿ
ಸೃಷ್ಟಿಗೊಡೆಯನೆ, ಸುತ್ತೋಣ ಬಾ ಈ ಅಗ್ನಿಪಥ
ಹದವಾಗಲಿ ಜೀವ, ಕಾದು ಕಾದು
***
೨ 
ಆ ನೀಲಿ ಅಂಕಿಗಳು


(ಆಳ್ನಾವರ ಸ್ಟೇಷನ್ನಿನಲ್ಲಿ ಜೋಧಪುರ ಎಕ್ಸ್‌ಪೆಸ್ ಟ್ರೇನಿನಿಂದ ಜಿಗಿದು ಉರುಳಿದ ಪುಟ್ಟ ಯುವತಿಯೊಬ್ಬಳು ಪವಾಡದಂತೆ ಬದುಕಿದ್ದಳು. ಅವಳನ್ನು ಗುಜ್ಜರ ಮದುವೆ ಹೆಸರಲ್ಲಿ ಮಾರಾಟ ಮಾಡಲಾಗಿತ್ತು.)

ನಿಂತ ಮರವೆದ್ದು ನಡೆದು ಬಂದಂತೆ ಇದಿರು
ಕಂಡದ್ದ, ಕಾಣಿಸದ, ಅರಗಿದ್ದ ಅರುಹಲಾಗದ ಬೇಗೆ
ಕಣ್ಣಗಾಯದ ಉಸಿಲು
ಸತಾಯಿಸುತ್ತಿವೆ ಈಗಲೂ
ಆ ಪುಟ್ಟ ಬಿಳಿ ಅಂಗೈಯಲರಳಿದ್ದ ನೀಲಿ ಅಂಕಿಗಳು

ಬಾಲ್ಯದಂಗಳದ ‘ಚುಕುಬುಕು ಚುಕುಬುಕು
ರೈಲುಗಾಡಿಯ’ ಹಿಗ್ಗು ಹುರುಪಳಿಸಿ
ಅಸಹಾಯಕ ಮನಸನುಜ್ಜುತ್ತಲೇ ಇದೆ
ಕಿವಿ ಮುಚ್ಚಿದರೂ ಕೊರೆವ ಸೀಳುಕೂಗು

ಹುಚ್ಚಿಯೊಬ್ಬಳು ಅಲಾಯದ ಆವರಿಸಿಕೊಂಡಿರುವ
ಕಮಟುನಾತದ ಆ ಪ್ಲಾಟ್‌ಫಾರಂನ ಅಂಚಲ್ಲೇ
ದಿಂಡುರುಳಿದ್ದು, ನೀರವಿಷಕೆ ವಿಲಿಗುಟ್ಟಿ ಅಂಚಿಗೆ ಬಿದ್ದ ಮೀನ ಮರಿ
ಹದ್ದಿನ ಕಾಲಗಸೆಯಿಂದುರುಳಿದ ಕೋಳಿಮರಿಯಂತೆ
ಪತರುಗುಟ್ಟಿದೆ ಕಂಪನ, ಅಂಟಿದೆ ಈಗಲೂ
ಈ ತೋಳುಗಳಿಗೆ
ಅರಿಶಿಣವನೆ ಮಿಂದು ಹೊಂದುಡುಗೆಯನುಟ್ಟವಳ
ಕಣ್ಣೀರು ನನ್ನ ಬೆರಳ ತುದಿಯ ಹಚ್ಚೆಯಾಗಿದೆ

ನನ್ನ ಮದುವೆ ಸೀರೆಯ ಮೂರನೆ ಮಡಿಕೆಯಲ್ಲಿದೆ
ನೀ ಕೊಟ್ಟ ಸೊಟ್ಟ ಅಂಕಿಗಳ ಚೀಟಿ, ನಮ್ಮಿಬ್ಬರ
ಬೆವರಂಟಿ ಮುದ್ದೆಯಾಗಿ
ಎಂದೂ ಉತ್ತರಿಸದ ನಿನ್ನ ಮೆಲುದನಿಯ
ಮರುಕಳಿಸಿಕೊಳುವೆ ನನಗೆ ನಾನೇ
ನನ್ನ ನಿನ್ನ ನಡುವಿದ್ದ ಇಕ್ಕಟ್ಟಾದ ಕಾಲುದಾರಿಯಲೀಗ
ಹೂಳು ತುಂಬಿ

ಇಷ್ಟಕ್ಕೂ ನಿನ್ನೊಂದಿಗೆ ನನಗೇನು ಸಂಬಂಧ
ಅಗಣಿತ ಕಾಲಕೀರ್ದಿಯಲಿ
ಸರಿದ ನಿಮಿಷಗಳಿಗೆ ಅದೇನು ಎಳೆತ?
ಎಲ್ಲಕ್ಕೂ ಗುರುತಿನ ಚೀಟಿ ಲಗತ್ತಿಸಬೇಕಾದ
ಈ ಕಿನಾರೆಯಲಿ ನಾವೆಗಳು ಅದೆಷ್ಟು ಅನಾಥ?

‘ಕೊಟ್ಟ ಹಸು ಮತ್ತೆ ಕೊಟ್ಟಿಗೆಗೆ ಬಂದರೆ
ಬೆಟ್ಟಕ್ಕೆ ಹೊಡೆ’ ಎಂದ ನ್ಯಾಯದ ಹಿರೀಕರೆ
ಶರಣೆಂಬೆವು ನಿಮಗೆ ಇರಲಿ ಕೊಟ್ಟಿಗೆಯೂ ಬೆಟ್ಟವೂ

ಈ ಮೋಡಗಟ್ಟಿದ ಸಂಜೆ
ಒಲೆ ಮೇಲೆ ಸಾರು ಕುದಿಯೊಡೆವ ಹೊತ್ತಲ್ಲಿ
ಕಿಡಕಿಯಾಚೆಗಿನ ಗಾಳಿಸುಳಿಗೆ ಅದೇ ಪ್ರಶ್ನೆ
‘ಕ್ಷೇಮವೇ, ಆ ಪುಟ್ಟ ಅಭಿಸಾರಿಕೆ?’
ಬೆನ್ನಹಿಂದೆ ಹರಾಜಿಗಿಟ್ಟ ಕರುಳು
ತೊಡರಬಹುದೇ ಈಗಲೂ

ಪುಟ್ಟ ಬಿಳಿ ಅಂಗೈಯಲ್ಲರಳಿದ ನೀಲಿ ಅಂಕಿಗಳು
ನೆರಳಾಗಿ, ತೋಳಾಗಿ, ಅಪ್ಪುಗೆಯಾಗಿ
ಮೊಲೆಗೆ ಹಾಲಾಗಿ, ಮಡಿಲಿಗೆ ಮಗುವಾಗಿ
ದಿನದಿನದ ಹಾಲುಎಣ್ಣೆ ಸಂತೆಯಾಗಿ
ಸಾಗಿದವೇ, ಯಾವ ಅಗಸನ ಮಾತೂ ತಾಕದೇ?

ಬೆಂಕಿ ಹಾಯದೆಯೂ ಸೀದ ಜೀವಗಳ
ಜೀವಜೀವಾಳದ ಸಂತೆಯಿದು
ಸೂಜಿಮೊನೆಯಷ್ಟೇ ನೆಲಕಚ್ಚಿ ಹಂದರವಾಗುವ
ಬಳ್ಳಿ ದೈವವ ನೆನೆದವಳೆ,
ಕಿತ್ತು ಬಿಸುಟರೂ ಮುರಿದು ಎಸೆದರೂ
ಬೇರೊಡೆವ ಜಿಗುಟು ನೆನೆದವಳೆ,
ಉಧೊ ಉಧೊ ನಿನ ತ್ರಾಣಕ ಶರಣು
ಉಧೊ ಉಧೊ ನಿನ ಪಾದಕ ಶರಣು
***

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...