Friday, March 25, 2016

ನನ್ನದೂ ಲೋಹದ ಕಣ್ಣು




ಎಚ್.ಎಸ್.ರಾಮನಗೌಡ್ರ




Hanamanthgoud Ramanagoudar's photo.


ನಿನ್ನ ಅಂಗಾಂಗದ ಉಬ್ಬುತಗ್ಗು ತೊಗಲುತೊಳಿಯ
ಇಂಚಿಂಚನು ಜೂಮುಹಾಕಿ ಅಳೆದು ತೂಗುವ ನಾನು
ನಿನಗೇನಾಗಬೇಕು ಹೇಳು ಹುಡುಗಿ
ನೀನು ಅಣ್ಣನೆಂದರೂ ತಮ್ಮನೆಂದರೂ ಏನನ್ನಾದರೂ ಸರಿ

ಬೀದಿಯ ಮಹಾಪರೆದೆಯಲಿ ಎಲ್ಲ ಬಯಲಿಗಿಟ್ಟಂತೆ ಮೋಹ
ಬೀದಿಬೆದೆತನಕೆ ಬಾಯಾರಿ ನೆಲತೀಡಿನೋಡುವ ದಾಹ
ಮತ್ತೊಂದುಹಾಳೆ ಮತ್ತೊಂದುಕಿರುಪರದೆ ಮತ್ತೆ ಲೋಹದಕಣ್ಣು

ಗಂಧತೇದಿಟ್ಟ ಗಾಜಸಿಸೆಯಂತ ಮೋಹದಮಲು ಸಲ್ಲುಸಲ್ಲಿಗೆ
ಬಲುತಾರೀಪಿನ ಅಕ್ಷರಗಳ ಉರುಲಾಗಿಸಿ ಮಾರಿಬಿಡಬಲ್ಲೆ
ತಲೆ ತೀಡಿತೀಡಿ ಎಲ್ಲಸಲ್ಲಾಪಗಳ ತರಂಗವಾಗಿಸಿ ಹಾರಿಬಿಡಬಲ್ಲೆ
ಕದ್ದು ನೋಡಿದ ಚಿತ್ರಗಳ ಚಿತ್ತದಲಿ ತಿರುಗಿಸಿ ತೂರಿಬಿಡಬಲ್ಲೆ

ಅವಳೇ ಹೇಳುತ್ತಾಳೆ 'ಇವೆಂತ ಉರಿಉರಿಕಣ್ಣು ದೇಹದಲೆಗೆ '
'ಒಂದು ನಿಮಿಷ ...
ಒಂದೇ ಒಂದು ನಿಮಿಷ ಅವರು ಹೇಳಿಕಳುಹಿದ್ದಾರೆ
ನಾನುಡುವ ಬಟ್ಟೆಗೆ ತಮ್ಮನದೆ ನವವಿನ್ಯಾಸ ನೋಡುವಿರಂತೆ.'

ಎಲ್ಲೋ ದೇಹದಗ್ನಿಯಾಳದಲಿ ಕತ್ತಲು ಮನೆಹೂಡುತ್ತಿದೆ ಮಂಪರಿಳಿಸಿ
ಅಲ್ಲೇ ಕಳೆದುಹೋಗಿದೆ ಏನೊ ಹುಡುಕಹೋಗಿ ನಿಜದಕಣ್ಣು
ಅದಕಂಡು ಎದೆಯುಬ್ಬಿ ಹಿಗ್ಗುತ್ತಿದೆಯೆ ಲೋಹದಕಣ್ಣು?

ಕಣ್ಣುಗೆ ಮೈಲಿಗೆಯಂಬುದಿಲ್ಲ ನಿಜವಿದೀತು ಮನಕೆ ಸೂತುಕ
ಮನಕೆ ಸೂತುಕವಾದರೆ ತಪ್ಪದು ಮೈಯಲ್ಲ ಮೈಲಿಗೆ
ನೋಡು...ನೋಡು ಮತ್ತೆ ಮನ ಬಂದಿತೆಲ್ಲಿಗೆ
ಏಳುಗುಡ್ಡವಸುತ್ತಿ ಏಳುದಾರಿಯತುಳಿದು ಮತ್ತೆ..ಮತ್ತೆ ಇಲ್ಲಿಗೆ!

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...