Saturday, March 05, 2016

ಮೇಕಿಂಗ್ ಹಿಸ್ಟರಿ: ಮುನ್ನುಡಿ.
Making history
 
 
 
 
 
 
 
 
 
 
 
 
 
 
 
 
 
 
 
 
 
ಸಾಕೇತ್ ರಾಜನ್
 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಸೌಜನ್ಯ : ಹಿಂಗ್ಯಾಕೆ

 
 
‘ಮೇಕಿಂಗ್ ಹಿಸ್ಟರಿ’ ಮೊದಲ ಸಂಪುಟದ ಮುನ್ನುಡಿಯಲ್ಲಿ ಆ ಪುಸ್ತಕವನ್ನು ರಚಿಸುವ ಕಾರ್ಯದಲ್ಲಿ ಅನೇಕರ ಶ್ರಮವಿದೆ ಎಂದು ತಿಳಿಸಿದ್ದೆ. ಸಂಪುಟ – 2 ಬಿಡುಗಡೆಗೆ ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಅನಾಮಿಕರಾಗಿಯೇ ಉಳಿದು ಹೋಗಿದ್ದ ಅಂತಹ ಒಬ್ಬ ಲೇಖಕರ ಪರಿಚಯ ಮಾಡಿಕೊಡಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ಸಂತಸದ ಭಾವದೊಂದಿಗೆ ಮಾಡಿಕೊಡಬೇಕಾಗಿದ್ದ ಈ ಪರಿಚಯ ಸಂದರ್ಭಗಳು ಸೃಷ್ಟಿಸಿದ ವೈಪರೀತ್ಯಗಳಿಂದ ವಿಶಣ್ಣ ಭಾವನೆ ಪಡೆದುಕೊಂಡಿದೆ.
ಆಪ್ತ ಸಂಗಾತಿಗಳಿಂದ ‘ರಾಜಿ’ ಎಂದು ಕರೆಯಿಸಿಕೊಳ್ಳುತ್ತಿದ್ದಾಕೆ ಮಾರ್ಚ್ 20, 2001ರಂದು ಆಂಧ್ರದ ವಿಶಾಖಪಟ್ಟಣದ ಕೊತ್ತಪಲ್ಲಿ ಅರಣ್ಯಪ್ರದೇಶದಲ್ಲಿ ಪೋಲೀಸರ ಗುಂಡಿಗೆ ಬಲಿಯಾಗುತ್ತಾಳೆ. ಮಾರ್ಚ್ 20ರ ಮಧ್ಯಾಹ್ನ ವಿಶೇಷ ಪೋಲೀಸ್ ಪಡೆಯ 20 ಮಂದಿಯ ತಂಡ ರಾಜಿಯನ್ನು ಬಂಧಿಸಿ ನಾಲ್ಕು ಘಂಟೆಗಳಿಗೂ ಹೆಚ್ಚು ಕಾಲ ಹಿಂಸಿಸಿ ಕೊನೆಗೆ ತಲೆಯ ಹಿಂಭಾಗಕ್ಕೆ ಗುಂಡೊಡೆದುಬಿಡುತ್ತಾರೆ.
ಪೊದೆಯೊಂದರ ಹಿಂದೆ ಅಡಗಿ ಈ ದೃಶ್ಯವನ್ನು ನೋಡಿದ ಇಬ್ಬರು ಪುಟಾಣಿಗಳು ಬರ್ಬರತೆ ಸೃಷ್ಟಿಸಿದ ತಲ್ಲಣದಿಂದ ಮೂರು ದಿನ ಅನ್ನ ನೀರು ಮುಟ್ಟುವುದಿಲ್ಲ. ಆಘಾತದಿಂದ ಹೊರಬಂದ ಮಕ್ಕಳು ರಾಜಿಯ ಬಗೆಗಿನ ಗೌರವವನ್ನೆಚ್ಚಿಸುವ ಮಾತುಗಳನ್ನೇಳಿದರು. ಸಾಯುವ ಸಮಯದಲ್ಲಿ ‘ರಾಜಿ’ ರಾಜಿಯಾಗಲಿಲ್ಲ. ಕ್ರಾಂತಿಗೆ ಚಿರಾಯುವಾಗಲಿ ಎಂದು ಘೋಷಿಸುತ್ತಾ ಮರಣ ಹೊಂದಿದಳು.
ಕ್ರಾಂತಿಯ ಪರೀಕ್ಷೆಯಲ್ಲಿ ರಾಜಿ ಪೂರ್ಣಾಂಕದೊಂದಿಗೆ ಉತ್ತೀರ್ಣಳಾದಳು. ಗೋಧಿ ಬಣ್ಣದ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾದ ಶೋಷಿತರ ನಾಯಕಿಗೆ ‘ಮೇಕಿಂಗ್ ಹಿಸ್ಟರಿ’ಯ ಈ ಸಂಪುಟ ಅರ್ಪಣೆ.
ಈ ಪುಸ್ತಕದ ಬರವಣಿಗೆಗೆ ಮತ್ತು ಪ್ರಕಟಣೆಗೆ ರಾಜಿ ನೀಡಿದ ಕೊಡುಗೆ ಅಪಾರ.
ಮೊದಲ ಮತ್ತು ಎರಡನೇ ಸಂಪುಟದ ಕರಡು ಪುಟಗಳನ್ನು ಮೊದಲು ಕೇಳುತ್ತಿದ್ದುದೇ ರಾಜಿ. ಚಳಿದಿನಗಳ ಅಪರಾತ್ರಿ ಸಮಯದಲ್ಲಾಗಲೀ, ಕಡು ಬಿಸಿಲಿನ ಮಧ್ಯಾಹ್ನವಾಗಿರಲಿ ರಾಜಿಯ ತನ್ಮಯತೆಯಲ್ಲಿ ಏರಿಳಿತಗಳಿರುತ್ತಿರಲಿಲ್ಲ. ಓದಿದ್ದನ್ನು ಕೇಳಿದ ಮೇಲೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡು, ಪ್ರಶ್ನೆಗಳನ್ನು ಕೇಳುತ್ತಿದ್ದಳು; ತಿದ್ದುತ್ತಿದ್ದಳು. ಹೆಸರು ಬಯಸದೆ ಮೌನವಾಗಿಯೇ ಈ ಪುಸ್ತಕದ ಪುಟಗಳಲ್ಲಿ ತನ್ನ ಛಾಪನ್ನು ಒತ್ತಿದ್ದಾಳೆ ರಾಜಿ.
ಮೊದಲ ಸಂಪುಟ ರಾಜಿಗೆ ಬಹಳಷ್ಟು ಋಣಿಯಾಗಿದೆ. ಬೋರು ಹೊಡೆಸುವ ತಾಂತ್ರಿಕ ಕೆಲಸಗಳನ್ನೆಲ್ಲ ರಾಜಿ ಮಾಡಿ ಮುಗಿಸಿದಳು. ಕಂಪ್ಯೂಟರಿನಲ್ಲಿ ಟೈಪಿಸಿ, ಪೇಜ್ ಸೆಟ್ ಮಾಡಿ ತಯಾರಿಸಿದ್ದು ರಾಜಿ. ಪುಸ್ತಕ ಹೊರಬರುವಷ್ಟರಲ್ಲಿ ರಾಜಿ ಡಿ.ಟಿ.ಪಿ ತಜ್ಞೆಯಾಗಿದ್ದಳು!
ಎರಡನೇ ಸಂಪುಟ ಅವಳ ಕಲ್ಪನೆಯಾಗಿತ್ತು. ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ಕರ್ನಾಟಕದ ಜನತೆ ನಡೆಸಿದ ಸಶಸ್ತ್ರ ಹೋರಾಟದ ಬಗ್ಗೆ ರಾಜಿ ಆಗಾಗ್ಗೆ ಹೇಳುತ್ತಿದ್ದಳು. ನಮ್ಮ ಜನಪ್ರಿಯ ಇತಿಹಾಸದ ಅಮೂಲ್ಯ ಕ್ಷಣಗಳನ್ನು ಪುನರ್ ವೀಕ್ಷಿಸಿ ಸೃಷ್ಟಿಸುವ ಮಹತ್ವಾಕಾಂಕ್ಷೆಯಿಂದ ನಗರದ ಬಸ್ ಹಿಡಿದೆವು. ಐತಿಹಾಸಿಕ ನಗರ ರೈತ ಬಂಡಾಯಕ್ಕೆ ಸಾಕ್ಷಿಯಾದ ಕೋಟೆಯ ಪಳಯುಳಿಕೆಗಳನ್ನು ಅಲ್ಲಿ ಕಂಡೆವು. ಕೆಲವು ತಿಂಗಳ ನಂತರ ಸಮಯ ಹೊಂಚಿಕೊಂಡು ನಂದಗಡಕ್ಕೆ ಹೋದೆವು. ಜನರ ಬಳಿ ಸಂಗೊಳ್ಳಿ ರಾಯಣ್ಣನ ಬಗ್ಗೆ ಮಾತನಾಡಿದೆವು. ಅಲ್ಲಿನ ಶ್ರಮಜೀವಿಗಳ ಜೊತೆಗಿನ ಮಾತುಕತೆಯಲ್ಲಿ ಸಂಗೊಳ್ಳಿ ರಾಯಣ್ಣನ ಹೋರಾಟದ ಕಥೆಗಳನ್ನು ಕೇಳಿದೆವು. ರಾಯಣ್ಣ ತಪ್ಪಿಸಕೊಂಡ, ಹೋರಾಡಿದ ಜಾಗಗಳನ್ನು ನಮಗೆ ತೋರಿಸಿ ಅವರ ಗುಡಿಸಿಲಿಗೆ ಕರೆದೊಯ್ದು ಉಣಬಡಿಸಿದರು.
ಅವರ ಎದೆಯ ಉರಿಯುತ್ತಿದ್ದ ಬೂದಿ ಮುಚ್ಚಿದ ಕೆಂಡದ ಶಾಖ ರಾಜಿಗೆ ತಾಕಿತ್ತು.
‘ರಾಯಣ್ಣ ಈ ಜನಕ್ಕೆ ಅಂತರಾಳದಲ್ಲಿ ಸ್ಪೂರ್ತಿಯಾಗುತ್ತಿದ್ದಾನ?’ ರಾಜಿಗೆ ಕೇಳಿದೆ. ಶತಮಾನಗಳ ಬೂದಿಯನ್ನು ಆಕೆಯ ಬಿಸಿಯುಸಿರು ಹಾರಿಸಿತು. ಬೂದಿಯಾರಿದ ಮೇಲೆ ಕಂಡದ್ದು ಕೆಂಪಗೆ ನಿಗಿನಿಗಿ ಹೊಳೆಯುವ ಕೆಂಡದ ಬೆಳಕು. ರಾಜಿ ಹೇಳಿದಳು ‘ದಶಕಗಳ ನಂತರ ಹೊಸ ತಲೆಮಾರಿನ ಜನತೆ ಕ್ರಾಂತಿಗೀತೆಯನ್ನು ನಂದಗಡ ಮತ್ತು ನಗರದ ಕಾಡು ಮತ್ತು ಬಯಲಿನಲ್ಲಿ ಹಾಡುತ್ತಿದ್ದಾರೆ’.
ಜನವರಿ 2001ರಂದು ನೋಡಿದ್ದೇ ಕೊನೆ. ಹಸಿರು ಬಣ್ಣದ ಉಡುಪಿನಲ್ಲಿದ್ದಳು. ಬೆನ್ನಿನ ಮೇಲೊಂದು ಬ್ಯಾಗು. ಬ್ಯಾಗಿನಲ್ಲಿ ಕೆಲವು ಖಾಲಿ ಟೇಪುಗಳು, ನೋಟ್ ಪುಸ್ತಕಗಳು ಮತ್ತು ಫಿಲಮ್ಮುಗಳು. ಯಾವುದೇ ಶಸ್ತ್ರವಿರಲಿಲ್ಲ. ಮುಷ್ಟಿ ಮೇಲೆತ್ತಿ ಕೆಂಪು ವಂದನೆ ಸಲ್ಲಿಸಿ ಕಾಮ್ರೇಡ್ ರಾಜೇಶ್ವರಿ ಬೀಳ್ಗೊಂಡಿದ್ದಳು.
ಭಾರತದ ಚರಿತ್ರೆಯ ಇತಿಹಾಸ ಮತ್ತು ಭವಿಷ್ಯದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಸಾಮ್ಯತೆಗಳಿವೆ. ಮಧ್ಯಮವರ್ಗದ ಪ್ರಜಾಪ್ರಭುತ್ವ ಕ್ರಾಂತಿಯನ್ನು ಅರಿಯಲು ಕರ್ನಾಟಕದ ಇತಿಹಾಸವನ್ನೊಮ್ಮೆ ಅವಲೋಕಿಸಬೇಕು. ಕ್ರಾಂತಿಯ ಹಾದಿಯನ್ನು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕಾಲದ ಮೈಸೂರು ರಾಜ್ಯದಲ್ಲಿ ನಿರ್ಮಿಸಲಾಯಿತು. ಊಳಿಗಮಾನ್ಯ ಜಮೀನ್ದಾರಿ ಪದ್ಧತಿಯ ವಿರುದ್ಧದ ಹೋರಾಟ ಪ್ರಬುದ್ಧವಾಗುತ್ತಿದ್ದುದನ್ನು ಆ ದಿನಗಳಲ್ಲೇ ಕಾಣಬಹುದು. ನಂತರ ಹೋರಾಟ ವೇಗ ಪಡೆದುಕೊಂಡಿದ್ದು ನಂದಗಡ ಮತ್ತು ನಗರಗಳಲ್ಲಿ. ಊಳಿಗಮಾನ್ಯ ಪದ್ಧತಿ ಮತ್ತು ವಸಾಹತುಶಾಹಿಯ ವಿರುದ್ಧ ನಡೆದ ಜನರ ಜನಪ್ರಿಯ ಯುದ್ಧ ಬಿಡುಗಡೆ ಮತ್ತು ಪ್ರಜಾಪ್ರಭುತ್ವದೆಡೆಗಿನ ಅವರ ಪ್ರೀತ್ಯಾಸೆಯನ್ನು ಎತ್ತಿ ತೋರಿತ್ತು. ಬೂದಿ ಮುಚ್ಚಿದ ಕೆಂಡದಂತಿದ್ದ ಈ ಘಟನಾವಳಿಗಳು ‘ಮೇಕಿಂಗ್ ಹಿಸ್ಟರಿ’ಯಲ್ಲಿ ಬಂದಿದ್ದರೆ ಅದರ ಶ್ರೇಯಸ್ಸು ರಾಜಿಗೆ ಸಲ್ಲಬೇಕು.
ಅವಳ ಗುರಿ ಧ್ಯೇಯ ದೊಡ್ಡದಿತ್ತು. ಇತಿಹಾಸದ ನೆನಹುಗಳು ಭವಿಷ್ಯವನ್ನು ರೂಪಿಸಬೇಕೆಂಬ ಆಸೆಯಿತ್ತು. ಮಧ್ಯಮವರ್ಗದ ಪ್ರಜಾಪ್ರಭುತ್ವ ಕ್ರಾಂತಿಯ ಘಟನಾವಳಿಗಳನ್ನು ಗಮನಿಸಿ ಸುಮ್ಮನಾಗಿ ಬಿಡುವುದು ಅವಳ ಉದ್ದಿಶ್ಯವಾಗಿರಲಿಲ್ಲ. ಅವಳ ಬುದ್ಧಿಮತ್ತೆ ಜಡವಾಗಿರಲಿಲ್ಲ. ಶ್ರಮಿಕರ ಕ್ರಾಂತಿಯನ್ನು ಕಣ್ಣಾರೆ ನೋಡಿ, ಅನುಭವಿಸಿ ಹಂಚಿಕೊಳ್ಳಬೇಕೆಂದು ಆಶಿಸಿದ್ದಳು ರಾಜಿ.
ಕರ್ನಾಟಕದ ಇತಿಹಾಸದ ಪುಟಗಳು ಹಳೆಯ ಪ್ರಜಾಪ್ರಭುತ್ವ ಕ್ರಾಂತಿಯ ಸಾಧ್ಯತೆಗಳನ್ನು ತೋರಿದ್ದರೆ, ಆಂಧ್ರಪ್ರದೇಶದ ಜನರ ಯುದ್ಧ ನವ ಪ್ರಜಾಪ್ರಭುತ್ವ ಕ್ರಾಂತಿಯ ಹೊಳಹುಗಳನ್ನು ತೋರುತ್ತಿತ್ತು.
ಇತಿಹಾಸ ನೋಡಿದ ರಾಜಿಗೆ ಭವಿಷ್ಯ ವೀಕ್ಷಿಸುವ ತವಕವಿತ್ತು. ನವ ಪ್ರಜಾಪ್ರಭುತ್ವದ ಸ್ಥಾಪನೆಗೆ ನಡೆಯುತ್ತಿದ್ದ ಜನರ ಯುದ್ಧವನ್ನು ಅಭ್ಯಸಿಸಲು ಆಂಧ್ರಪ್ರದೇಶದ ಹಳ್ಳಿಗಳಿಗೆ ತೆರಳಿದಳು. ಅಭ್ಯಸಿಸಿ, ಸಂಗ್ರಹಿಸಿ ಕರ್ನಾಟಕದ ಜನತೆಗೆ ಆ ಹೋರಾಟದ ಕಿಡಿಯನ್ನು ತಲುಪಿಸಬೇಕೆಂದಿದ್ದಳು.
ನೂರಾರು ಜನರನ್ನು ಸಂದರ್ಶಿಸಿದಳು. ಕ್ರಾಂತಿ ಗೀತೆಗಳನ್ನು ಸಂಗ್ರಹಿಸಿದಳು. ಓದಿದ್ದು, ಕೇಳಿದ್ದನ್ನೆಲ್ಲಾ ನೋಟ್ ಮಾಡಿಕೊಂಡಳು. ಶೋಷಿತ ಆದಿವಾಸಿಗಳ ಮತ್ತವರ ಆಶಾಕಿರಣದಂತಿದ್ದ ಹಸಿರು ಬಟ್ಟೆ ತೊಟ್ಟಿದ್ದ ಯುವ ಗೆರಿಲ್ಲಾ ಹೋರಾಟಗಾರರ ಫೋಟೋ ತೆಗೆದುಕೊಂಡಳು.
ಮಾರ್ಚ್ 20ರಂದು ಮರದ ಕೆಳಗೆ ಬರೆಯುತ್ತ ಕುಳಿತಿದ್ದಳು ರಾಜಿ. ಗುಂಡಿನ ಶಬ್ದ ಮೊರೆಯಿತು. ಪೊದೆಯೊಳಗೆ ಮರೆಯಾಗಲು ಯತ್ನಿಸಿದಳು. ಅವರ ಕೊಳಕು ಕೈಗಳು ಅವಳ ಮೇಲೆ ಬಿದ್ದವು. ನಂತರದ್ದಲ್ಲೆವೂ ಕ್ಷಣಾರ್ಧದಲ್ಲಿ ನಡೆದು ಹೋಯಿತು. ಅವಳ ಮೆದುಳಿನ ಮೂಲಕ ಗುಂಡುಗಳು ಸಾಗಿದವು. ಕೆನ್ನೆಯ ಮೇಲೆ ರಕ್ತ; ಬಾಯ ಮೂಲಕ ರಕ್ತ. ಸಂಗ್ರಹಿಸಿ ಬರೆದ ಪುಸ್ತಕಗಳನ್ನು ರಾಜಿ ರಕ್ಷಿಸಲಾಗಲಿಲ್ಲ. ಕಾಡಿನ ನಡುವೆ ರಾಜಿ ವಿಶ್ರಾಂತಿಯೆಡೆಗೆ ಸಾಗಿದಳು.
ಇಂದವಳು ಗಾಢ ನಿದ್ರೆಯಲ್ಲಿದ್ದಾಳೆ.
ಮೇಕಿಂಗ್ ಹಿಸ್ಟರಿಯ ಎರಡನೇ ಸಂಪುಟ ರಾಜಿಗೆ ಅರ್ಪಣೆ. ಓದು ಸಾಗಿದಂತೆ ಚಿರನಿದ್ರೆಯಲ್ಲಿರುವ ರಾಜೇಶ್ವರಿ ಓದುಗರನ್ನು ಎಚ್ಚರಿಸುತ್ತಾಳೆ. ಭವ್ಯ ಇತಿಹಾಸದ ಹೊಳಹುಗಳನ್ನು ಅವಳ ಮುಖಾಂತರ ಕಾಣುತ್ತೇವೆ. ಅಷ್ಟು ಮಾತ್ರವಲ್ಲ, ಭವಿಷ್ಯತ್ತಿನ ದರ್ಶನವನ್ನೂ ಮಾಡಿಸುತ್ತಾಳೆ ರಾಜಿ. ಕ್ರಾಂತಿಯ ಪತಾಕೆಗಳು ಹರಡಲಾರಂಭಿಸಿದಂತೆ ಸತ್ತವರ ನೆನಪುಗಳನ್ನು ಬದುಕಿರುವವರ ಹೃದಯ ಮತ್ತು ಮನಸ್ಸುಗಳಿಂದ ಅಳಿಸಿಹಾಕುವುದು ಎಷ್ಟು ಕಷ್ಟ ಎಂಬ ಸಂಗತಿ ಶೋಷಕ ವರ್ಗ ಮತ್ತವರ ಸರಕಾರಗಳಿಗೆ ಅರಿವಾಗುತ್ತದೆ. ಇದೇ ಇತಿಹಾಸ – ವರ್ಗ ಹೋರಾಟದ ಇತಿಹಾಸ.
ರಾಜಿಗೆ ಇದರ ಅರಿವಿತ್ತು. ತನ್ನ ಬಳಿ ಇದ್ದ ಅತ್ಯಮೂಲ್ಯವಾದ ಒಂದೇ ಒಂದು ವಸ್ತುವನ್ನು – ತನ್ನ ಜೀವವನ್ನು – ಕಾಲ ಕೇಳಿದಾಗ ಕೊಟ್ಟುಬಿಟ್ಟಳು, ಶೋಷಿತರ ಪರ ಹೋರಾಟಕ್ಕಾಗಿ.
ಸಾಕಿ
ನವೆಂಬರ್ 1, 2002.

Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...