Sunday, March 06, 2016

ಕನ್ಹಯ್ಯಾ ಮರೆತ ಮಾತು

ಮೊನ್ನೆ, ಮಾರ್ಚ್ ಮೂರರ ರಾತ್ರಿ ಹತ್ತು ಗಂಟೆಯ ಬಳಿಕ,  ಈ ದೇಶ, ಈ ಲೋಕದ ಇನ್ನೂ ಅನೇಕಾನೇಕರಂತೆ,  ಟಿ.ವಿ. ಸೆಟ್ಟಿನ ಮುಂದೆ ಕಾದು ಕೂತಿದ್ದೆ. ಆ ಗಳಿಗೆ ಬಂತು. ಬಳಿಕ, ಸುಮಾರು ಒಂದು ಗಂಟೆಯ ಹೊತ್ತು ಬಿತ್ತರಗೊಂಡದ್ದು, ನೋಡಲು ಎರಡು ಕಣ್ಣು ಸಾಲದೆನ್ನುವಷ್ಟು ಚೆಲುವು-ರೋಚಕವಾದ ದೃಶ್ಯ; ಕೇಳಲು ಎರಡು ಕಿವಿ ಸಾಲದೆನ್ನುವಂತೆ ಮೈನವಿರೆಬ್ಬಿಸಿದ ಭಾಷಣ.

ಜೆಎನ್‌ಯು ವಿದ್ಯಾರ್ಥಿ ವೃಂದದ ಆ ದೊಡ್ಡ ಸಭೆಯನ್ನು ಕುರಿತು ಮತ್ತು ಅದರ ಸಂಘದ ಅಧ್ಯಕ್ಷ ಕನ್ಹಯ್ಯಾಕುಮಾರರು ಅಲ್ಲಿ ಮಾಡಿದ ಭಾಷಣವನ್ನು ಕುರಿತು ಹೇಳುತ್ತಿದ್ದೇನೆ! ಆ ಒಟ್ಟು ಕಾರ್ಯಕ್ರಮವು ಈಗ ಯೂಟ್ಯೂಬಿನಲ್ಲಿ, ಮತ್ತು The Wire ಎಂಬ ಅಂತರ್ಜಾಲ ಪತ್ರಿಕೆಯಲ್ಲಿ ಸಿಕ್ಕುತ್ತದೆ. ಅಂದು ಟಿ.ವಿ. ಮುಂದೆ ಕೂರಲಾಗದಿದ್ದವರು ಅದೆಲ್ಲವನ್ನೂ ಈಗ ಆ ತಾಣಗಳಿಗೆ ಹೋಗಿ ನೋಡಬಹುದು, ಕೇಳಬಹುದು.

ಅಂಥ ಕನ್ಹಯ್ಯಾಕುಮಾರರಿಗೆ ಜಾಮೀನು ಸಿಕ್ಕಿರುವುದು ತುಂಬ ಸಂತಸ ಮತ್ತು ಸಮಾಧಾನದ ಸಂಗತಿ ಹೌದು; ಆ ಜಾಮೀನು ಕೊಡುವಾಗ ದೆಹಲಿಯ ಹೈಕೋರ್ಟ್‌ ಒಡ್ಡಿರುವ ಷರತ್ತುಗಳು ಹಾಗೂ ಆಡಿರುವ ಮಾತುಗಳಿಂದಾಗಿ ನನಗೆ, ಮತ್ತು ನನ್ನಂಥ ಅನೇಕಾನೇಕರಿಗೆ ಬೇಸರ ಮತ್ತು ಆತಂಕವಾಗಿದೆ, ಹೌದು. ಆದರೆ, ಇಲ್ಲಿ ಈ ಸದ್ಯ, ಆ ಸಂಗತಿಯನ್ನು ಬೆಳೆಸದೆ, ಮೊನ್ನೆ ಕನ್ಹಯ್ಯಾರ ಆ ಭಾಷಣ ಕೇಳುತ್ತಿದ್ದಾಗ ತುಂಬ ತೀವ್ರವಾಗಿ ಅನ್ನಿಸಿದ್ದನ್ನು ಈಗ ಮುಂದಿಡುತ್ತೇನೆ.

ಅದಕ್ಕೆ ಮೊದಲು, ಒಂದು ಮಾತು. ಕನ್ಹಯ್ಯಾರಂತೆ ನಾನು ಕೂಡ ವಿದ್ಯಾರ್ಥಿದೆಸೆಯಿಂದಲೂ ಎಐಎಸ್ಎಫ್ ಮತ್ತು ಸಿಪಿಐ ಜೊತೆಗೆ ಇದ್ದವನು; ಹದಿನಾರು ವರ್ಷ ಆ ಪಕ್ಷದ ಸದಸ್ಯನಾಗಿದ್ದವನು. ನನ್ನೊಲವು ಈಗಲೂ ಅತ್ತತ್ತಲೇ, ಎಡಪಂಥೀಯತೆಯ ಎಡೆಗೇ; ಎದೆ ಒದ್ದೆಯಿರುವುದು ಅದರಿಂದಲೇ. ಅಷ್ಟಾಗಿಯೂ ಅಥವಾ ಅಂಥ ಆ ಹಿನ್ನೆಲೆಯು ಹೊರಿಸುವ ಜವಾಬ್ದಾರಿಯ ಅರಿವುಳ್ಳವನಾಗಿಯೇ, ಈ ಕೆಳಗೆ ಕೆಲವು ಮಾತು ಹೇಳಿಕೊಳ್ಳುತ್ತಿದ್ದೇನೆ.

ಇವತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸಂಘಪರಿವಾರಕ್ಕೆ ಸೇರಿದ ಬಿಜೆಪಿಯ ಸರ್ಕಾರ, ಈ ಪ್ರಕರಣದಲ್ಲಿ ಕನ್ಹಯ್ಯಾರಿಗೆ, ಜೆಎನ್‌ಯುಗೆ ಮತ್ತು ಸ್ಥೂಲವಾಗಿ ಹಾಗೂ ಒಟ್ಟಂದದಲ್ಲಿ ಎಲ್ಲ ಬಗೆಯ ಎಡಪಂಥೀಯರಿಗೆ, ಎಲ್ಲ ಬಗೆಯ ಸಮಾಜವಾದಿಗಳಿಗೆ, ಎಲ್ಲ ಬಗೆಯ ಅಂಬೇಡ್ಕರ್‌ವಾದಿಗಳಿಗೆ ಮತ್ತು ಅಂಥ ಜೀವನ ಹಾಗೂ ಚಿಂತನದ ಮಾದರಿಗಳ ಬೆಳಕಿನಲ್ಲಿ ನಡೆಯುವ ಎಲ್ಲ ಬಗೆಯ ಉದಾರಿವಾದಿಗಳಿಗೆ ಮಸಿ ಬಳಿಯಲು, ಅವರ ಬಾಯಿ ಮುಚ್ಚಿಸಲು ಹಾಗೂ ಹೆದರಿಸಲು ಪ್ರಯತ್ನಿಸಿತು ಮತ್ತು ಇನ್ನು ಮುಂದೆಯೂ ಪ್ರಯತ್ನಿಸುತ್ತದೆ ಅನ್ನುವುದು ಖಾತ್ರಿಯಾದ ವಿಷಯವೇ.

ಹಾಗಾಗಿ, ನಾವೆಲ್ಲ ಕಂಡಿರುವಂತೆ ಇಷ್ಟೆಲ್ಲ ಕಿರುಕುಳ ಅನುಭವಿಸಿದ ಕನ್ಹಯ್ಯಾಕುಮಾರರು, ಆ ಹೊತ್ತು ಅಷ್ಟು ಉತ್ಕಟವಾಗಿ, ಅಷ್ಟು ರೋಷದಿಂದ ಮಾತನಾಡಿದ್ದು ಸಾಧುವಾದದ್ದೇ. ಕನ್ಹಯ್ಯಾ  ಸೇರಿದಂತೆ, ಅಂದು ಅಲ್ಲಿ ನೆರೆದಿದ್ದ ಆ ಎಲ್ಲರ ಆ ಹರೆಯದ ಬಿಸಿರಕ್ತ ಮತ್ತು ಹುಮ್ಮಸ್ಸು ನಿಜಕ್ಕೂ ಚೆಲುವಾದುದು ಹೌದು. ಆದರೆ, ಕನ್ಹಯ್ಯಾ ಅವರು ಮತ್ತು ಅವರೊಂದಿಗಿರುವ ನಾವೆಲ್ಲ ನೆನೆಯಬೇಕಾದ ಕೆಲವು ಸಂಗತಿಗಳಿವೆ:

1.
ಮೊದಲಿಗೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಉಮರ್ ಖಾಲಿದ್ ಮತ್ತು ಅನಿರ್ಬಾಣ್‌ ಭಟ್ಟಾಚಾರ್ಯ ಎಂಬ ಇಬ್ಬರು ಹುಡುಗರು ಇನ್ನೂ ಪೊಲೀಸರ ಸೆರೆಯಲ್ಲಿದ್ದಾರೆ, ಮರೆಯದಿರೋಣ. ಆ ಇಬ್ಬರು ಹುಡುಗರು, ಕನ್ಹಯ್ಯಾರಂತೆ, ಎಡಪಂಥೀಯತೆಯ ಮುಖ್ಯವಾಹಿನಿ ಎನ್ನಬಹುದಾದ ಸಿಪಿಐ, ಸಿಪಿಐ (ಎಂ) ಮತ್ತು ಸಿಪಿಐ (ಎಂ-ಎಲ್), ಅಥವಾ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್‌ಗಳಿಗೆ ಸೇರಿದವರಲ್ಲ.

ಆ ಇಬ್ಬರು ಹುಡುಗರು ಕೊಂಚ ಉಗ್ರವಾದ (ಅಂದರೆ, ನನಗೆ ತಿಳಿದಮಟ್ಟಿಗೆ, ವಿಚಾರಧಾರೆಯಲ್ಲಿ, ಮತ್ತು ವಿಚಾರಧಾರೆಯಲ್ಲಿ ಮಾತ್ರ, ಸ್ವಲ್ಪ ಹೆಚ್ಚಾಗಿಯೇ ತಗಾದೆಕೋರತನದಿಂದ ಕೂಡಿದ!) ಎಡಪಂಥೀಯ ಬಣವೊಂದರ ಹುಡುಗರು. ಹಾಗಿರುವುದು ಖಂಡಿತಾ ದೊಡ್ಡ ಅಪರಾಧವಲ್ಲ; ಸರ್ಕಾರವು ಅವರ ಮೇಲೆ ದೇಶದ್ರೋಹದ ಆಪಾದನೆಯನ್ನು ಹೊರಿಸಲು ಬರಬಹುದಾದಂಥ ಅಪರಾಧವಂತೂ ಅಲ್ಲವೇ ಅಲ್ಲ.

ಆದರೂ, ಈಗ ಆ ಹುಡುಗರಿಗೆ ಬಹಳ ಕಷ್ಟವೊದಗುವ ಪರಿಸ್ಥಿತಿಯಿದೆ. ಕನ್ಹಯ್ಯಾ ಅವರೆಡೆಗೆ ಹರಿದುಬಂದಿರುವಷ್ಟು ಬೆಂಬಲ ಆ ಇಬ್ಬರು ಹುಡುಗರೆಡೆಗೆ ಹರಿದುಬಂದಿಲ್ಲ. ಹಾಗಾಗಿ, ಅವರನ್ನು ಈಗ ಬೆಂಬಲಿಸುವುದು, ಕನ್ಹಯ್ಯಾ ಅವರೂ  ಸೇರಿದಂತೆ, ನಮ್ಮೆಲ್ಲರ ಜವಾಬ್ದಾರಿ. ಹಾಗಾಗಿಯೆ ತಮ್ಮ ಆ ಭಾಷಣದಲ್ಲಿ ಕನ್ಹಯ್ಯಾ ಅವರು ಆ ಹುಡುಗರ ಪರವಾಗಿ ಒಂದಲ್ಲ ನಾಲ್ಕಾರು ಬಾರಿ ಗಟ್ಟಿಯಾಗಿ ಮಾತನಾಡಬೇಕಿತ್ತು. ಹಾಗಾಗಲಿಲ್ಲ; ಆದರೆ ಹಾಗೆ ಇನ್ನು ಮುಂದೆಯಾದರೂ ಆಗುತ್ತದೆ ಮತ್ತು ಆ ಹುಡುಗರು ಕೂಡ ಕನ್ಹಯ್ಯಾ ಅವರೊಂದಿಗೆ ಗೌರವಯುತವಾಗಿ ಖುಲಾಸೆಗೊಳ್ಳುತ್ತಾರೆ ಎಂದು ಆಶಿಸೋಣ.


2.
ಕನ್ಹಯ್ಯಾ ಅವರು ತಮ್ಮ ವಿಶ್ವವಿದ್ಯಾಲಯದ ಇಡೀ ವಿದ್ಯಾರ್ಥಿ ಸಂಘಕ್ಕೆ ಅಧ್ಯಕ್ಷರೇ ಹೊರತು ಕೇವಲ ಎಡಪಂಥೀಯ ವಿದ್ಯಾರ್ಥಿಗಳ ಅಧ್ಯಕ್ಷರಲ್ಲ. ಹಾಗಾಗಿ ಅವರು, ಕಡೆಯಪಕ್ಷ ಮೊನ್ನೆ ನಡೆದಂಥ ಸಭೆಯಲ್ಲಿ, ಇಡೀ ವಿದ್ಯಾರ್ಥಿವೃಂದದ ಪರವಾಗಿ ಮಾತನಾಡಬೇಕಿತ್ತು. ಅವರು ಹಾಗೆ ಮಾತನಾಡಿದ್ದಿದ್ದರೆ, ಎಬಿವಿಪಿ ಮತ್ತು ಸಂಘಪರಿವಾರಗಳಲ್ಲಿ ಇಷ್ಟು ದಿನವಿದ್ದು ಕೂಡ ನ್ಯಾಯಯುತವಾಗಿ, ಆರ್ದ್ರವಾಗಿ ಆಲೋಚನೆ ಮಾಡುವ ಅಲ್ಲಿನ ಹಲವು ಕೆಲವರು ತಮ್ಮ ಆ ಸಂಘಪರಿವಾರದ ಅನಿಷ್ಟ ಚಿಂತನೆಯನ್ನು ತೊರೆದು ಹೊರನಡೆಯುವಂತಾಗುತ್ತಿತ್ತೋ ಏನೋ.

ಜೆಎನ್‌ಯುನ ಎಬಿವಿಪಿ ಘಟಕದ ಮೂವರು ವಿದ್ಯಾರ್ಥಿ ನಾಯಕರು, ಈ ಒಟ್ಟು ಪ್ರಸಂಗದಲ್ಲಿ, ಸಂಘಪರಿವಾರ ಹಾಗೂ ಮೋದಿ ನೇತೃತ್ವದ ಸರ್ಕಾರದ ನಡೆನುಡಿಗಳಿಂದ ಬೇಸತ್ತು, ಬಹಿರಂಗವಾಗಿ ಪ್ರತಿಭಟಿಸಿ ತಮ್ಮ ವಿದ್ಯಾರ್ಥಿ ಸಂಘದಿಂದ ಹೊರನಡೆದಿದ್ದಾರೆ ಅನ್ನುವುದನ್ನು ನೆನೆಯೋಣ. ಅಂಥ ಲಕ್ಷಾಂತರ ಕಿರಿಯರನ್ನು ಮತ್ತು ಹಿರಿಯರನ್ನು, ಎಡಪಂಥ, ಸಮಾಜವಾದ ಮತ್ತು ಎಡಪಂಥೀಯ ಉದಾರವಾದಗಳು ತಮ್ಮತ್ತ ಸೆಳೆದುಕೊಳ್ಳುವಂತಾಗಬೇಕು. ‘ಎಬಿವಿಪಿಯವರು ನಮ್ಮ ಶತ್ರುಗಳಲ್ಲ.

ಅವರು ನಮ್ಮ ಎದುರು ಪಕ್ಷದವರು, ಅಷ್ಟೆ’ ಎಂಬಂಥ ಮಾತುಗಳನ್ನು ಕನ್ಹಯ್ಯಾ ಆಡಿದರು ಅನ್ನುವುದು ನಿಜವಾದರೂ, ಅವರ ಭಾಷಣದಲ್ಲಿ, ಅವರಂತೆಯೆ ವಿದ್ಯಾರ್ಥಿಗಳಾದ ಎಬಿವಿಪಿ ಹುಡುಗರನ್ನು ಚುಚ್ಚುವಂಥ ಮಾತುಗಳ ತೂಕವೇ ತುಸು ಹೆಚ್ಚಾಗಿತ್ತು.   

3.
ಶೆಹಲಾ ರಷೀದ್ ಶೋರಾ ಎಂಬ ಎಳೆಯಳು ಜೆಎನ್‌ಯು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ; ಸಿಪಿಐ (ಎಂ-ಎಲ್) ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ನಿನ ನಾಯಕಿ. ಕಾಶ್ಮೀರ ಮೂಲದ ಹುಡುಗಿಯಾದ ಈಕೆಯ ಭಾಷಣ ಹಾಗೂ ಸಂದರ್ಶನಗಳ ವಿಡಿಯೊಗಳನ್ನು ನೋಡಿದವರಿಗೆ ಈ ಹೆಣ್ಣುಮಗಳು ಎಂಥ ಜಾಣೆ, ಎಂಥ ಒಳ್ಳೆಯ ಮನಸ್ಸಿನವಳು ಮತ್ತು ಎಂಥ ಅದ್ಭುತವಾದ ವಾಗ್ಮಿ ಅನ್ನುವುದು ತಿಳಿಯುತ್ತದೆ.

ಕನ್ಹಯ್ಯಾ ಮತ್ತಿತರ ಹುಡುಗರು ಜೈಲು ಸೇರಿದಾಗಿನಿಂದ, ಈ ಇಡೀ ವಿದ್ಯಾರ್ಥಿ ಸಂಚಲನವನ್ನು ಬೆಳೆಸಿ, ನಿಭಾಯಿಸಿದವಳು ಈಕೆ. ಮೊನ್ನೆ, ಕನ್ಹಯ್ಯಾ ಅವರು, ಈಕೆಗೆ ಮತ್ತು ಜೆಎನ್‌ಯುನ ಬೇರೆ ಕೆಲವು ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳಿಗೆ, ಅವರವರ ಹೆಸರು ಹೇಳಿ ಧನ್ಯವಾದ ಅರ್ಪಿಸಿ, ಕಡೆಯ ಪಕ್ಷ ಶೆಹಲಾ ಒಬ್ಬಳಿಗಾದರೂ ಮೈಕುಕೊಟ್ಟು, ಐದು ನಿಮಿಷ ಮಾತನಾಡುವಂತೆ ಆಕೆಯನ್ನು ಕೇಳಿಕೊಳ್ಳಬೇಕಿತ್ತು.

ನಮ್ಮ ಎಲ್ಲ ಎಡಪಂಥೀಯರು, ಅಂಬೇಡ್ಕರ್‌ವಾದಿಗಳು, ಸಮಾಜವಾದಿಗಳು ಹಾಗೂ ಎಡಪಂಥೀಯ ಉದಾರವಾದಿಗಳ ನಡುವೆ ಈ ಇಂಥ ವಿಷಯಗಳಲ್ಲಿಯಾದರೂ, ಈ ಇಂಥ ಹೊತ್ತಿನಲ್ಲಾದರೂ, ಒಗ್ಗಟ್ಟನ್ನು ಉಂಟುಮಾಡಿ, ಬೆಳೆಸುವ ಮುತ್ಸದ್ದಿತನದ ದಾರಿ ಅದು ಮತ್ತು ಇವತ್ತು ಬಹಳ, ಬಹಳ ಅಗತ್ಯವಾದುದು. ಕೆಚ್ಚಿನ ರೋಮಾಂಚ ಬೇಕು; ಕರುಳು ಒದ್ದೆಯಿರಬೇಕು.

1 comment:

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...