Friday, March 25, 2016

ಮಹಿಳಾ ಚಳುವಳಿ: ಇಂದು-ಮುಂದುಡಾ. ಎಚ್. ಎಸ್. ಅನುಪಮಾ, ಕವಲಕ್ಕಿ.


ತೆರಣಿಯ ಹುಳದ ತಳಮಳ

ಮಹಿಳಾ ಚಳುವಳಿ ಎಂಬುದೊಂದು ಸಂಭವಿಸುತ್ತಿದೆಯೆ ಎಂಬ ಪ್ರಶ್ನೆ ಮತ್ತೆಮತ್ತೆ ಕೇಳಿಬರುತ್ತದೆ. ನಮ್ಮ ಹಲವಾರು ಸಂಗಾತಿಗಳು, ಸಮಾನ ಮನಸ್ಕರು ಈ ಪ್ರಶ್ನೆ ಎತ್ತುತ್ತಾರೆ. ಕೆಲ ಕುಹಕಿಗಳು ‘ನೀವು ಇಷ್ಟು ಹೋರಾಡಿದರೂ ದಿನನಿತ್ಯ ಅತ್ಯಾಚಾರ, ದೌರ್ಜನ್ಯಗಳು ಸಂಭವಿಸುತ್ತಿದೆಯಲ್ಲ? ಮಹಿಳಾ ಚಳುವಳಿ ಇಲ್ಲ ಎನ್ನಲು ಇದೇ ಸಾಕ್ಷಿಯಲ್ಲವೆ’ ಎಂದೂ ಕಟಕಿಯಾಡುತ್ತಾರೆ.

ನಿಜ. ಜನ್ಮಾಂತರಗಳಿಂದ ಒಳಗನ್ನು ಹೊರತೋರದೆ ಒತ್ತಿಒತ್ತಿ ಇಟ್ಟುಕೊಂಡವರು ಆಡುವುದು ಕಷ್ಟ, ಅವರು ಆಡಿದ್ದನ್ನು ಅರಗಿಸಿಕೊಳ್ಳುವುದೂ ಕಷ್ಟ. ಆದರೆ ಹಿಂದೆಯೂ ಇಂದಿಗೂ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರೆಲ್ಲ ಒಟ್ಟಾಗಿ ತಮ್ಮ ಕೊನೆಯಿರದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸಂಘಟಿತರಾಗಿ ಹೋರಾಟ ಕಟ್ಟಲಾಗಿಲ್ಲ. ಒಂದು ಸಿದ್ಧಾಂತ, ಪಕ್ಷ, ನಾಯಕತ್ವದಡಿ ಸಮಗ್ರ ಚಳುವಳಿ ರೂಪಿಸಲಾಗಿಲ್ಲ. ಚಳುವಳಿಯ ಮಾತು ಹೋಗಲಿ, ಬಹುಪಾಲು ಮಹಿಳೆಯರಿಗೆ ತಾರತಮ್ಯ ಇದೆಯೆಂದು, ತಾರತಮ್ಯದ ಮೂಲ ಯಾವುದಿರಬಹುದು ಎಂದು ಇನ್ನೂ ಅರ್ಥವಾಗಿಲ್ಲ. ತುಳಿದವರು ಮೇಲೇಳಬಾರದು ಎಂದೇ ದಮನದ ನೆಲೆಯನ್ನು ಅತ್ಯಂತ ಜಾಗರೂಕವಾಗಿ, ನಾಜೂಕಾಗಿ, ಆದರೆ ಗಟ್ಟಿಯಾಗಿ ಹೆಣೆಯಲಾಗಿದೆ. ‘ತೆರಣಿಯ ಹುಳು’ ತನಗರಿವಿಲ್ಲದೆ ತಾನೇ ಬಲೆ ನೇಯ್ದು ಬಂಧಿಸಿಕೊಳ್ಳುವಂತೆ ಹೆಣ್ಣು ಸಹಾ ತನ್ನ ಸುತ್ತ ಬೇಲಿಯನ್ನು ತಾನೇ ಬಿಗಿದುಕೊಳ್ಳುವಂತೆ ಮಾಡಲಾಗಿದೆ. ಪಿತೃಪ್ರಾಧಾನ್ಯದ ಸಕಲ ಭಾರಗಳನ್ನೂ ತನ್ನ ಮೇಲೆಳೆದುಕೊಂಡೇ ಬದುಕಬೇಕಿರುವುದರಿಂದ ಮಹಿಳೆ ತನ್ನ ದಮನದ ನೆಲೆಗಳು ಮತ್ತು ಬಿಡುಗಡೆಯ ಹೋರಾಟಗಳನ್ನು ಗುರುತಿಸುವುದೂ ಕಷ್ಟವಾಗಿದೆ.

ಈ ಹಿನ್ನೆಲೆಯಲ್ಲಿ ಮಹಿಳೆಯ ದೃಷ್ಟಿಯಿಂದ ಚಳುವಳಿ ಎಂದರೇನು? ಚಳುವಳಿಯ ವ್ಯಾಖ್ಯೆ, ಅರ್ಥ ಏನು ಎಂದು ಪರಿಶೀಲಿಸುವ ಅಗತ್ಯವಿದೆ.

ಭಾರತೀಯ ಸಮಾಜದ ಲಿಂಗತಾರತಮ್ಯ ಮಗು ತಾಯಿಯ ಹೊಟ್ಟೆಯಲ್ಲಿರುವಾಗಲೇ ಶುರುವಾಗುತ್ತದೆ. ಬೆಳೆಯುವ ಹೆಣ್ಣುಮಗು ಒಂದಲ್ಲ ಒಂದು ಹಂತದಲ್ಲಿ ತಾನು ಹೆಣ್ಣು, ಅದಕ್ಕೇ ಹೀಗಿರಬೇಕು; ತಾನು ಹೆಣ್ಣು, ಆ ಕಾರಣಕ್ಕೇ ಅವಕಾಶ ವಂಚಿತಳಾದರೂ ಸುಮ್ಮನಿರಬೇಕು ಎನ್ನುವುದನ್ನು ಹೆಜ್ಜೆಹೆಜ್ಜೆಗೂ ಅರಗಿಸಿಕೊಂಡು ಬದುಕಬೇಕಾಗಿದೆ. ಅವಳಿಗೆ ಶಿಕ್ಷಣಕ್ಕಿಂತ ವಿವಾಹವೇ ಮುಖ್ಯ. ಉದ್ಯೋಗಕ್ಕಿಂತ ಮನೆ ಕೆಲಸಗಳ ನಿಭಾಯಿಸಬಲ್ಲ ಕೌಶಲ್ಯವೇ ಮುಖ್ಯ. ಮದುವೆ-ಮನೆವಾಳ್ತೆ-ತಾಯ್ತನಗಳು ಹೊರಿಸುವ ಕೊನೆಮೊದಲಿಲ್ಲದ ಜವಾಬ್ದಾರಿಗಳ ನಡುವೆ ಕುಟುಂಬದ ಆರ್ಥಿಕ ಚಟುವಟಿಕೆಯಲ್ಲೂ ಪಾಲ್ಗೊಳ್ಳಬೇಕು. ಹೀಗೆ ಬಹುವಿಧದ ಹೊರೆಗಳಿಂದ ನಲುಗುವ ಹೆಣ್ಣಿಗೆ ಅದರ ನಡುವೆಯೇ ತನ್ನತನ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಒಂದು ಹೆಜ್ಜೆ ಹೊರಗಿಟ್ಟು ಸಂಘಟಿತಳಾಗಬೇಕು ಅನಿಸಿಬಿಟ್ಟರೆ ಅದೇ ಒಂದು ಹೋರಾಟ. ವ್ಯಕ್ತಿಗತ ನೆಲೆಯ ಈ ಹೋರಾಟ ನಿರಂತರ. ಕುಟುಂಬದ ಪ್ರತಿ ಸದಸ್ಯರ, ಸಮಾಜದ ಅನುಮಾನ, ಅರೆಸಮ್ಮತಿ, ಅಸಹಕಾರಗಳ ನಡುವೆಯೇ ಅವಳು ತನ್ನ ಸಾರ್ವಜನಿಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸಾರ್ವಜನಿಕ ರಂಗಕ್ಕೆ ಬಂದಮೇಲೂ ತಾರತಮ್ಯ, ಅಸಡ್ಡೆ, ಅಸುರಕ್ಷಿತತೆ, ಅವಕಾಶ ವಂಚನೆ, ದಬ್ಬಾಳಿಕೆಯನ್ನು ಹೆಜ್ಜೆಹೆಜ್ಜೆಗೂ ಎದುರುಗೊಳ್ಳಬೇಕು. ಹಾಗಾಗಿಯೇ ಭಾರತೀಯ ಸಮಾಜದ, ಅಷ್ಟೇ ಏಕೆ ಪ್ರಪಂಚದ ಬಹುಪಾಲು ಹೆಣ್ಮಕ್ಕಳು ಬಿಡುಗಡೆಯನ್ನು ವೈಯಕ್ತಿಕ ಹಾಗೂ ಸಾಮೂಹಿಕ ಎರಡೂ ನೆಲೆಗಳಲ್ಲಿ ಹೋರಾಡಿಯೇ ಪಡೆಯಬೇಕಾಗಿದೆ.

ಹಾಗಾದರೆ ಈಗ ಮಹಿಳಾ ಚಳುವಳಿ ನಡೆಯುತ್ತಿದೆಯೆ?

ಚಳುವಳಿ ಒಂದು ಸಮಸ್ಯೆಗೆ ಮೂಲ ಕಾರಣವಾದ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಹೊರಡುತ್ತದೆ. ದಮನದ ನೆಲೆ ನಿರಂತರವಾಗುಳಿವ ವ್ಯವಸ್ಥೆಯಲ್ಲಿ ಚಳುವಳಿಯೂ ನಿರಂತರವಾಗಿ ರೂಪಾಂತರ ಹೊಂದುತ್ತ ಚಾಲ್ತಿಯಲ್ಲಿರುತ್ತದೆ. ಒಂದು ಚಳುವಳಿ ಹುಟ್ಟಿಕೊಳ್ಳುವ ಕಾರಣ, ಅದರ ಸ್ವರೂಪ, ನಡೆಗಳನ್ನು ಆಯಾ ಕಾಲ, ಸಮಾಜಗಳೇ ನಿರ್ಧರಿಸುತ್ತವೆ. ಅದೊಂದು ನಿರಂತರ ಪ್ರಕ್ರಿಯೆ.

ಈ ಕಾಲದ ಮಹಿಳಾ ಸಮಸ್ಯೆಗಳಾದರೂ ಯಾವುವು? ಅದರ ವಿಸ್ತಾರ ಬಹುದೊಡ್ಡದು. ಸಮಾಜವನ್ನು ಕಾಡುವ ಎಲ್ಲ ಸಮಸ್ಯೆಗಳೂ ಮಹಿಳೆಯರನ್ನೇ ಅಂತಿಮವಾಗಿ ಬಾಧಿಸುತ್ತವೆ. ಎಂದೇ ಪರಿಸರ ನಾಶ, ಯುದ್ಧ, ನೆರೆ, ಬರ, ಜಾಗತೀಕರಣ, ನಿರುದ್ಯೋಗ, ಗಣಿಗಾರಿಕೆ, ಅನಕ್ಷರತೆ, ಬಡತನ, ಕೃಷಿ ಬಿಕ್ಕಟ್ಟು, ವಲಸೆ ಮುಂತಾದ ಸಮಾಜದ ಸಕಲೆಂಟು ಸಮಸ್ಯೆಗಳು ಮಹಿಳಾ ಸಮಸ್ಯೆಗಳೂ ಆಗಿವೆ. ಇದರ ಜೊತೆಗೆ ವರದಕ್ಷಿಣೆ, ವೇಶ್ಯಾವಾಟಿಕೆ, ಸ್ತ್ರೀ ಭ್ರೂಣಹತ್ಯೆ, ಮರ್ಯಾದಾ ಹತ್ಯೆ, ಎಚ್ಚೈವಿ ಕಾಯಿಲೆ, ಅತ್ಯಾಚಾರ, ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ವಿಧವಾ ಪದ್ಧತಿ, ಜಾತಿ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ವೇತನ ತಾರತಮ್ಯ, ದೇವದಾಸಿ ಪದ್ಧತಿ ಮೊದಲಾದವು ಹೆಣ್ಣು ತಾನು ಹೆಣ್ಣೆಂಬ ಕಾರಣಕ್ಕೇ ಅನುಭವಿಸುವ ತೊಂದರೆಗಳು. ಈ ಎಲ್ಲವನ್ನೂ ಒಂದು ಹೋರಾಟ, ಒಂದು ಪ್ರತಿಭಟನೆ, ಒಂದು ಸಂಘಟನೆ, ಒಬ್ಬ ವ್ಯಕ್ತಿಯ ಜೀವಮಾನ ಕಾಲದಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಎಂದೇ ಇವೆಲ್ಲವನ್ನೂ ಪ್ರತ್ಯೇಕವಾಗಿ ನೋಡುವ ಸಂಘಟನೆ, ಸಂಸ್ಥೆಗಳು ರೂಪುಗೊಂಡಿವೆ. ಆಳದಲ್ಲಿ ಅವೆಲ್ಲದರ ಉದ್ದೇಶ ಭಿನ್ನವಾಗಿದ್ದರೂ ಅವುಗಳ ಹೋರಾಟ ಲಿಂಗತಾರತಮ್ಯ ಹಾಗೂ ಅದರ ಮೂಲವಾದ ಪಿತೃಪ್ರಾಧಾನ್ಯವನ್ನೇ ಪ್ರಶ್ನಿಸುತ್ತವೆ.

ಸಡಿಲವಾದ ಅರ್ಥದಲ್ಲಿ ಈ ಬಹುನೆಲೆಯ ಹೋರಾಟಗಳು ಹಂಚಿಕೊಳ್ಳಲ್ಪಟ್ಟ ಮಹಿಳಾ ಸಮಸ್ಯೆಗಳು. ಆದರೆ ಈ ಎಲ್ಲ ವಿಷಯಾಧಾರಿತ ಸಂಘಟನೆ, ಹೋರಾಟಗಳ ಒಟ್ಟೂ ಪ್ರಯತ್ನವೇ ಮಹಿಳಾ ಚಳುವಳಿ. ಆದ್ದರಿಂದ ಚಳುವಳಿ ಎಂಬ ಪದವನ್ನು ಮಹಿಳಾ ಚಳುವಳಿಯ ವಿಷಯದಲ್ಲಿ ಮರುವ್ಯಾಖ್ಯಾನ ಮಾಡಬೇಕಾದ ಅವಶ್ಯಕತೆಯಿದೆ.

ಭಾರತದ ಮಹಿಳಾ ಚಳುವಳಿ

ಭಕ್ತಿ ಚಳುವಳಿಯ ಕಾಲದಿಂದಲೂ ಮಹಿಳೆ ಧಾರ್ಮಿಕ ಸಮಾನತೆ ಕೇಳಲು ಶಕ್ತಳಾಗಿದ್ದಳೇ ಹೊರತು ಸಾಮಾಜಿಕ ಸ್ಥಾನಮಾನಗಳಲ್ಲಿ ಯಾವ ಬದಲಾವಣೆಯೂ ಸಾಧ್ಯವಾಗಿರಲಿಲ್ಲ. ದೇವರ ಎದುರು ಸಮಾನತೆಯನ್ನು ಭಕ್ತಿಯ ನೆಪದಲ್ಲಾದರೂ ಸಾಧಿಸಲು ಹಲವು ಹೆಣ್ಮಕ್ಕಳು ಪ್ರಯತ್ನಪಟ್ಟರು. ಕೆಲ ಆಧ್ಯಾತ್ಮಿಕ ಪುರುಷರೂ ಹೆಣ್ಣಿನ ಸಂಕಷ್ಟಗಳ ಅರಿತು ಹಾಡಿದರು. ಕರ್ನಾಟಕದ ವಚನ ಚಳುವಳಿ ಹಲವು ಹೆಣ್ಣುಮಕ್ಕಳಿಗೆ, ಅದರಲ್ಲೂ ತಳ ಸಮುದಾಯದ ಹೆಣ್ಣುಮಕ್ಕಳಿಗೆ ಸಮಾಜದ ಆಗುಹೋಗುಗಳಲ್ಲಿ ನೇರ ಪಾಲ್ಗೊಳ್ಳುವ ಅವಕಾಶ ನೀಡಿತು. ಸಂಪ್ರದಾಯದ ಚೌಕಟ್ಟಿನೊಳಗೆ ಬಂಧಿತಳಾಗಿದ್ದರೂ ಅದರ ನಡುವೆಯೇ ಪ್ರತಿರೋಧದ ಪರೋಕ್ಷ ಪ್ರಯತ್ನಗಳು ಮಹಿಳೆಯರಿಂದ ಅಲ್ಲಿಲ್ಲಿ ಕಂಡುಬಂದಿದೆ. ಆದರೂ ಅದು ಚಳುವಳಿಯ ರೂಪ ಪಡೆದದ್ದು ೧೯ನೇ ಶತಮಾನದಿಂದೀಚಿಗೆ ಎಂದು ಗುರುತಿಸಲಾಗುತ್ತದೆ. ಒಟ್ಟಾರೆ ಭಾರತೀಯ ಮಹಿಳೆಯ ಸಾಮಾಜಿಕ ಸ್ಥಿತಿಗತಿಗಳಲ್ಲಿ ಈ ಮೂರ್ನಾಲ್ಕು ತಲೆಮಾರುಗಳಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದ್ದರೆ ಅದಕ್ಕೆ ಮಹಿಳಾ ಹೋರಾಟ ಮತ್ತದು ಅನಿವಾರ್ಯಗೊಳಿಸಿದ ಕಾನೂನು ಜಾರಿಯೂ ಒಂದು ಕಾರಣವಾಗಿದೆ. ಎಲ್ಲ ಮಹಿಳಾಪರ ಕಾನೂನುಗಳೂ ಲಿಂಗತಾರತಮ್ಯವನ್ನು ಗುರುತಿಸಿ ವಿರೋಧಿಸಿದ ಬಳಿಕವೇ ಜಾರಿಯಾಗಿವೆ.

ಭಾರತದ ಮಹಿಳಾ ಚಳುವಳಿ ಕೆಲವು ವಿಶೇಷತೆಗಳನ್ನು ಹೊಂದಿದೆ. ಕೈಗಾರಿಕಾ ಕ್ರಾಂತಿ ಮತ್ತು ವೈಜ್ಞಾನಿಕ ಆವಿಷ್ಕಾರಗಳು ಯೂರೋಪಿನಲ್ಲಿ ಸುಧಾರಣಾವಾದಿ ಚಿಂತನೆಗಳನ್ನು ಸೃಷ್ಟಿಸಿ ಹೋರಾಟ ಶುರುಮಾಡುವ ೭೫ ವರ್ಷ ಮೊದಲೇ ಭಾರತದಲ್ಲಿ ಮಹಿಳಾ ಚಳುವಳಿ ಶುರುವಾಯಿತು. ಇದು ಒಂದು ವಿಶೇಷವಾದರೆ ಶುರುಮಾಡಿದವರು ಪುರುಷರು ಎನ್ನುವುದು ಇನ್ನೊಂದು ವಿಶೇಷ. ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದ ಭಾರತೀಯ ಪುರುಷರು ಅಥವಾ ಭಾರತೀಯ ಸಮಾಜದಲ್ಲಿ ಆಸಕ್ತಿ-ಹಿತಾಸಕ್ತಿ ಹೊಂದಿದ್ದ ವಸಾಹತುಶಾಹಿ ಸಮಾಜಶಾಸ್ತ್ರಜ್ಞರು ಮಹಿಳಾ ಸಮಸ್ಯೆಗಳ ಸುಧಾರಣೆಯ ಹೋರಾಟಕ್ಕೆ ನಾಂದಿ ಹಾಡಿದರು. ಒಟ್ಟೂ ಭಾರತದ ಮಹಿಳಾ ಜಾಗೃತಿಯಲ್ಲಿ ೪ ಹಂತಗಳನ್ನು ಗುರುತಿಸಲಾಗಿದೆ:

೧.    ೧೯ನೇ ಶತಮಾನದ ಆದಿಭಾಗದಲ್ಲಿ ರಾಜಾರಾಮ್ ಮೋಹನರಾಯ್ ಅವರಿಂದ ಶುರುವಾದ ಜಾಗೃತಿಯು ಸಾಮಾಜಿಕ ಸುಧಾರಣಾ ಚಳುವಳಿಯ ಆರಂಭವೆನ್ನಬಹುದು. ೧೮೨೫ರ ವೇಳೆಗೆ ಶುರುವಾದ ಇದು ನಂತರ ಬಾಲ್ಯ ವಿವಾಹ ನಿಷೇಧ, ವಿಧವಾ ಪದ್ಧತಿ ನಿಷೇಧ, ವಿಧವಾ ಮರುವಿವಾಹಕ್ಕೆ ಅವಕಾಶದಂತಹ ಇತರ ವಿಷಯಗಳನ್ನು ಗಣನೆಗೆ ತೆಗೆದುಕೊಂಡಿತು. ಸರಿಸುಮಾರು ಇದೇ ವೇಳೆ ಈಶ್ವರಚಂದ್ರ ವಿದ್ಯಾಸಾಗರ ಅವರು ಬಾಲ್ಯವಿವಾಹ, ವಿಧವಾ ಪದ್ಧತಿ, ಬಹುಪತ್ನಿತ್ವದಂತಹ ವಿಷಯಗಳನ್ನು ವಿರೋಧಿಸಿ ಕಾನೂನಾತ್ಮಕ ಹೋರಾಟವನ್ನೂ ರೂಪಿಸಿದರು. ಆದರೆ ಈ ಎಲ್ಲ ಸುಧಾರಣೆಗಳು ಮೇಲ್ಜಾತಿ ಮಹಿಳೆಯರ ಸಮಸ್ಯೆಗಳನ್ನೇ ಮುಖ್ಯವಾಗಿ ಗುರಿಯಾಗಿಸಿಕೊಂಡಿದ್ದವು. ಆ ದೃಷ್ಟಿಯಿಂದ ಫುಲೆ ದಂಪತಿಗಳು ಭಾರತದ ಮಹಿಳಾ ಚಳುವಳಿಯ ಆದ್ಯರು ಎನ್ನಬಹುದು. ಫುಲೆ ದಂಪತಿಗಳು ೧೮೪೮ರಷ್ಟು ಹಿಂದೆಯೇ ಮಹಿಳೆಯರಿಗೆ ಮತ್ತು ಅಸ್ಪೃಶ್ಯರಿಗಾಗಿ ಶಾಲೆ ತೆರೆದು ಪ್ರಬಲ ವಿರೋಧದ ನಡುವೆಯೇ ಶಾಲೆ ನಡೆಸಿ ಮಹಿಳಾ ಸಬಲೀಕರಣಕ್ಕೆ ತಾತ್ವಿಕ ನೆಲೆಗಟ್ಟನ್ನು ಒದಗಿಸಿದರು. ಅಷ್ಟೇ ಅಲ್ಲ, ಸಮಾಜ ಬಹಿಷ್ಕರಿಸಿದ ಬಸುರಾದ ವಿಧವೆಯರು ಮಕ್ಕಳನ್ನು ಹೆರಲು ಹಾಗೂ ಅಂಥ ಮಕ್ಕಳನ್ನು ಸಾಕಲು ಆಶ್ರಮಗಳನ್ನು ಶುರುಮಾಡಿದರು. ಹೀಗೆ ತಿರಸ್ಕೃತ ಮಹಿಳೆಯರನ್ನು ಮುಖ್ಯವಾಹಿನಿಯಲ್ಲಿರುವಂತೆ ನೋಡಿಕೊಳ್ಳುವ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡರು. ಫುಲೆಗಳಿಂದ ಪ್ರಭಾವಿತಗೊಂಡಿದ್ದ ತಾರಾಬಾಯಿ ಶಿಂಧೆ ೧೮೮೨ರಲ್ಲಿ ‘ಸ್ತ್ರೀ ಪುರುಷ ತುಲನ’ ಎಂಬ ಭಾರತದ ಮೊತ್ತಮೊದಲ ಮಹಿಳಾ ಸಂವೇದನೆಯುಳ್ಳ ಹೊತ್ತಿಗೆಯನ್ನು ಪ್ರಕಟಿಸಿದಳು. ನಿರ್ಭಿಡೆಯಿಂದ ದೇವರನ್ನೂ, ಪುರಾಣ ಶಾಸ್ತ್ರಗ್ರಂಥಗಳನ್ನೂ ತರಾಟೆಗೆ ತೆಗೆದುಕೊಂಡಳು. ಆಗ ಪ್ರಕಟವಾಗಿದ್ದ ಪುಸ್ತಕವೊಂದರ ಕಥೆಗಳ ಸ್ತ್ರೀಪಾತ್ರ ಪೋಷಣೆ, ನಾಟಕಗಳ ಸ್ತ್ರೀ ಪಾತ್ರ, ಪುರಾಣದಲ್ಲಿ ಮಹಿಳೆಯ ಚಿತ್ರಣ, ದೇವಾನುದೇವತೆಗಳ ವರ್ತನೆಗಳು, ಅಂದಿನ ಸಮಾಜದಲ್ಲಿ ಪುರುಷರ ತಾರತಮ್ಯದ ನಡವಳಿಕೆಗಳು ಮುಂತಾದವನ್ನೆಲ್ಲ ತರಾಟೆಗೆ ತೆಗೆದುಕೊಂಡ ತಾರಾಬಾಯಿ ಆ ಲೇಖನವನ್ನು ಪುಸ್ತಕ ಮಾಡಿ ಅಚ್ಚು ಹಾಕಿದ್ದೇ ದೊಡ್ಡ ಹೋರಾಟವಾಗಿತ್ತು. ಮಹಿಳೆ ಧೈರ್ಯವಾಗಿ ತನ್ನ ಕುಲಕ್ಕಾಗುತ್ತಿರುವ ಅನ್ಯಾಯವನ್ನು ಅಷ್ಟು ಕಟುಮಾತುಗಳಲ್ಲಿ ಗಟ್ಟಿದನಿಯಲ್ಲಿ ಹೇಳಲು ಸಾಧ್ಯವಾಗಿಸಿದ್ದು ಫುಲೆಗಳು ತಂದ ಶಿಕ್ಷಣ, ಸಾಮಾಜಿಕ ಸುಧಾರಣೆ. ಅವರ ಸಮಕಾಲೀನಳಾಗಿದ್ದ ಪಂಡಿತಾ ರಮಾಬಾಯಿ ಎಂಬ ಬ್ರಾಹ್ಮಣ ಮಹಿಳೆ ಅಂತರ್ಜಾತಿ ವಿವಾಹವಾದದ್ದೇ ಅಲ್ಲದೆ ವಿಧವೆಯಾದ ನಂತರ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಳು. ಆಕೆ ೧೮೮೭ರಲ್ಲಿ ಬರೆದ ಹೈ ಕ್ಯಾಸ್ಟ್ ಹಿಂದೂ ವುಮನ್ ಪುಸ್ತಕವು ಹಿಂದೂ ಮೇಲ್ಜಾತಿಯಲ್ಲಿದ್ದ ಮಹಿಳಾ ವಿರೋಧಿ ಅಂಶಗಳನ್ನು ಢಾಳಾಗಿ ತೆರೆದಿಟ್ಟಿತು. ಅಲ್ಲಿಂದಾಚೆಗೆ ಹಲವು ಸುಧಾರಣಾಕಾರರು ವಿವಿಧ ವಿಷಯಗಳನ್ನೆತ್ತಿಕೊಂಡು ಬೇರೆಬೇರೆ ನೆಲೆಯಲ್ಲಿ ಮಹಿಳಾ ಸುಧಾರಣೆಗೆ ಪ್ರಯತ್ನಿಸಿದರು. ಇದು ಸುಧಾರಣೆಯ ಕಾಲ ಎನ್ನಬಹುದು.
೨.    ಎರಡನೆಯ ಹಂತದ ಮಹಿಳಾ ಚಳುವಳಿ ೧೯೧೫-೧೯೪೭ರವರೆಗಿನದು. ಇದು ಸ್ವಾತಂತ್ರ ಚಳುವಳಿಯ ಕಾವು ಉತ್ತುಂಗದಲ್ಲಿದ್ದ ಕಾಲ. ಮಹಿಳೆಯರ ರಾಜಕೀಯ ಜಾಗೃತಿಯ ಕಾಲ. ಆಗ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರನ್ನು ಗಾಂಧಿ ಹೆಚ್ಚೆಚ್ಚು ತೊಡಗಿಸಿಕೊಂಡರು. ಕ್ವಿಟ್ ಇಂಡಿಯಾ, ದಂಡಿ ಮುಂತಾದ ಚಳುವಳಿ-ಸತ್ಯಾಗ್ರಹಗಳ ಸಮಯದಲ್ಲಿ ಸಾಮಾನ್ಯ ಮಹಿಳೆಯರು ಕೂಡಾ ಭಾಗವಹಿಸಿದರು. ಅದೇವೇಳೆಗೆ ಅಂಬೇಡ್ಕರ್ ಡಿಪ್ರೆಸ್ಡ್ ಕ್ಲಾಸ್ ವುಮೆನ್ಸ್ ಅಸೋಸಿಯೇಷನ್ ಶುರುಮಾಡಿ ೧೯೨೭ರ ಹೊತ್ತಿಗೆ ಸಾವಿರಾರು ಹಿಂದುಳಿದ ಮಹಿಳೆಯರನ್ನು ಸಂಘಟಿಸಿದ್ದರು. ಮಹಿಳಾ ಶೋಷಣೆಯ ವಿವಿಧ ಮಗ್ಗುಲುಗಳ ಬಗ್ಗೆ ಆಳವಾಗಿ ಚಿಂತಿಸಿ, ಧಾರ್ಮಿಕ-ಸಾಮಾಜಿಕ-ರಾಜಕೀಯ ಹಕ್ಕುಗಳನ್ನು ಸಂವಿಧಾನದತ್ತವಾಗಿ ನೀಡಲು ಶ್ರಮಿಸಿದ ಮೊದಲ ವ್ಯಕ್ತಿ ಅಂಬೇಡ್ಕರ್. ‘ಯಾವುದೇ ಸಮುದಾಯದ ಏಳ್ಗೆಯನ್ನು ಅಳೆಯಬೇಕಾದರೆ ಆ ಸಮುದಾಯದ ಸ್ತ್ರೀಯರ ಏಳ್ಗೆಯನ್ನು ಪರಿಗಣಿಸಬೇಕು’ ಎಂದು ಮಹಿಳೆಯರ ಸ್ಥಿತಿಗತಿಯನ್ನು ಸಮಾಜದ ಏಳ್ಗೆಯ ಸೂಚ್ಯಂಕವಾಗಿ ಪರಿಗಣಿಸಿದ ಅಂಬೇಡ್ಕರ್ ಭಾರತದಲ್ಲಿ ಮಾನವ ಹಕ್ಕು ಹಾಗೂ ಮಹಿಳಾ ಹಕ್ಕು ಹೋರಾಟಗಳಿಗೆ ಕಾನೂನಿನ ಚೌಕಟ್ಟು ನೀಡಿದ ಮೊದಲ ನಾಯಕರಾಗಿದ್ದಾರೆ. ಅವರ ಕಾಲದಲ್ಲಿ ಮಹಿಳಾ ಶಾಲೆ, ಕಾಲೇಜು, ಹಾಸ್ಟೆಲುಗಳು ಶುರುವಾದವು. ಮಹಿಳೆಯರು ಪತ್ರಿಕೆ ಶುರುಮಾಡಿದರು. ಧಾರ್ಮಿಕವಾಗಿ ಬೌದ್ಧ ಧರ್ಮದ ಪ್ರಚಾರದಲ್ಲಿ ತೊಡಗಿಸಿಕೊಂಡರು. ಅಂಬೇಡ್ಕರ್ ಶುರುಮಾಡಿದ್ದ ಚಳುವಳಿಯು ಶೋಷಿತ ವರ್ಗದ ಮಹಿಳೆಯರಲ್ಲಿ ಹೊಸಜಾಗೃತಿಯನ್ನೇ ಮೂಡಿಸಿತು. ಹೀಗೆ ಸ್ವಾತಂತ್ರ್ಯ ಚಳುವಳಿಯ ಕಾಲದ ಎರಡು ಭಿನ್ನಧಾರೆಗಳಲ್ಲಿ ಸಾಕಷ್ಟು ಮಹಿಳೆಯರು ತೊಡಗಿಕೊಂಡು ಕೌಟುಂಬಿಕ ಜಗತ್ತಿನಾಚೆಗೂ ತಮ್ಮ ಕ್ರಿಯಾಶೀಲತೆಯ ಪರಿಧಿಯನ್ನು ವಿಸ್ತರಿಸಿಕೊಂಡರು. ಮಹಿಳಾ ಲಾಯರ್, ಡಾಕ್ಟರ್, ರಾಜಕಾರಣಿ, ಗಮನಾರ್ಹ ಬರಹಗಾರರೆಲ್ಲ ಈ ಅವಧಿಯಲ್ಲೇ ಬಂದರು.
೩.    ಮೂರನೆಯ ಹಂತ ಸ್ವಾತಂತ್ರ್ಯಾನಂತರದ ಹಂತ. ಆದರೆ ಸ್ವಾತಂತ್ರ ಬಂದ ಮೊದಲ ವರುಷಗಳಲ್ಲಿ ಮಹಿಳಾ ಚಳುವಳಿ ಕೊಂಚ ಮಂಕಾಯಿತು. ಸರ್ವರಿಗೂ ಸಮಾನತೆಯೊದಗಿಸಿದ ಸಂವಿಧಾನವು ಮಹಿಳೆಗೂ ಸಮಾನ ನಾಗರಿಕ ಹಕ್ಕುಗಳನ್ನು ನೀಡಿತು. ಮತದಾನದ ಹಕ್ಕು, ವಿಚ್ಛೇದನದ ಹಕ್ಕು, ಆಸ್ತಿ ಹಕ್ಕು, ದತ್ತು ಸ್ವೀಕಾರದ ಹಕ್ಕುಗಳೆಲ್ಲ ಕೊಡಲ್ಪಟ್ಟವು. ಆದರೆ ನಂತರ ವರದಕ್ಷಿಣೆ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ದೇವದಾಸಿ ಪದ್ಧತಿ, ಪ್ರಜನನ ಹಕ್ಕುಗಳು, ಉದ್ಯೋಗ ಸ್ಥಳದಲ್ಲಿ ಭದ್ರತೆಯಂತಹ ವಿಷಯಗಳು ಮುನ್ನೆಲೆಗೆ ಬಂದವು. ಪರಂಪರೆ, ರೂಢಿ, ಆಚರಣೆ, ಸಾಹಿತ್ಯ ಎಲ್ಲವನ್ನು ಮಹಿಳಾ ದೃಷ್ಟಿಕೋನದಿಂದ ನೋಡುವ ಪರಿಪಾಠ ಬೆಳೆಯಿತು. ಆಧುನಿಕ ಭಾರತವನ್ನು ಪ್ರಭಾವಿಸಿದ ಗಾಂಧಿ, ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್ ಮೊದಲಾದ ಅನೇಕ ಚಿಂತಕರು ಹೆಣ್ಮಕ್ಕಳ ಚಿಂತನೆ-ಹೋರಾಟಗಳನ್ನೂ ಪ್ರಭಾವಿಸಿದರು.

೧೯೭೨ರಲ್ಲಿ ಸಂಭವಿಸಿದ ಮಹಾರಾಷ್ಟ್ರದ ಆದಿವಾಸಿ ಬಾಲಕಿ ಮಥುರಾ ಅತ್ಯಾಚಾರ ಪ್ರಕರಣವು ಮಹಿಳಾ ಚಳುವಳಿಯ ಹೊಸ ಅಲೆ ಶುರುವಾಗಲು ಕಾರಣವಾಯಿತು. ಅತ್ಯಾಚಾರವನ್ನು ಮುಖ್ಯ ವಿಷಯವಾಗೆತ್ತಿಕೊಂಡು ಹೆಣ್ಣಿನ ಕುರಿತು ಸಮಾಜದ ದೃಷ್ಟಿಕೋನವನ್ನು ಪ್ರಶ್ನಿಸುತ್ತ ಕಾನೂನಿನ ಆಮೂಲಾಗ್ರ ಬದಲಾವಣೆಗೆ ಈ ಪ್ರಕರಣ ನಾಂದಿ ಹಾಡಿತು. ೧೯೭೫-೮೫ರ ದಶಕವನ್ನು ಮಹಿಳಾ ದಶಕವೆಂದು ಯುನಿಸೆಫ್ ಘೋಷಿಸಿದ್ದು ಹಲವು ಮಹಿಳಾ ವಿಷಯಗಳು ಮುನ್ನೆಲೆಗೆ ಬರಲು ಕಾರಣವಾಯಿತು. ಮಹಿಳಾ ಪ್ರಕಾಶನ ಹುಟ್ಟಿಕೊಂಡಿತು. ಮಹಿಳಾ ಚಳುವಳಿ ಹಾಗೂ ದೌರ್ಜನ್ಯ ವಿರೋಧ ಒಟ್ಟೊಟ್ಟಿಗೆ ಬೆಳೆದವು. ದೌರ್ಜನ್ಯ ಪ್ರಕರಣ, ತನಿಖೆ, ತೀರ್ಪು, ಶಿಕ್ಷೆಯ ಸ್ವರೂಪ, ಪ್ರಮಾಣ ಮತ್ತಿತರ ಕಾನೂನು ಪರಿಭಾಷೆ ಬದಲಾದವು. ದೇಶದ ಮೊತ್ತಮೊದಲ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ - ‘ಫೋರಂ ಅಗೇನ್ಸ್ಟ್ ರೇಪ್’ ಲೋತಿಕಾ ಸರ್ಕಾರ್ ಅವರಿಂದ ಶುರುವಾಯಿತು. ನಂತರ ಅದು ‘ಫೋರಂ ಅಗೇನ್ಸ್ಟ್ ಅಪ್ರೆಷನ್ ಆಫ್ ವುಮನ್’ ಎಂದಾಯಿತು. ಅದು ಒಂದು ರಾಷ್ಟ್ರೀಯ ಸಮ್ಮೇಳನ ಏರ್ಪಡಿಸಿ ಸಾಮಾನ್ಯ ಮಹಿಳೆಗೆ ನ್ಯಾಯಾಂಗ ಸಹಾಯ ಪಡೆಯುವುದು ಎಷ್ಟು ಅಸಾಧ್ಯವಾಗಿದೆ ಎಂದು ಪ್ರತಿಪಾದಿಸುತ್ತ ಅತ್ಯಾಚಾರ ಕಾನೂನು ಬದಲಾಗಬೇಕೆಂದು ಒತ್ತಾಯಿಸಿತು. ಆ ಸಮಯದಲ್ಲೇ ಸಹೇಲಿ ಗುಂಪು ಹುಟ್ಟಿಕೊಂಡಿತು. ಸೀಮಾ ಸಖಾರೆ ಅಖಿಲ ಭಾರತ ಮಟ್ಟದಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಸಂಘಟನೆಯಲ್ಲಿ ಸಕ್ರಿಯವಾದರು. ಒಮ್ಮೆ ಅತ್ಯಾಚಾರಕ್ಕೊಳಗಾದವಳು ವಿಚಾರಣೆಯ ವೇಳೆ ಪೊಲೀಸರಿಂದ, ನ್ಯಾಯಾಲಯದಿಂದ, ಮಾಧ್ಯಮದವರಿಂದ ಮತ್ತೆಮತ್ತೆ ಅತ್ಯಾಚಾರಕ್ಕೊಳಗಾಗುವಂತಹ ನ್ಯಾಯ ವ್ಯವಸ್ಥೆಯನ್ನು ಬಲವಾಗಿ ಟೀಕಿಸಿದರು. ಈ ಪ್ರಕರಣ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಬಲಿಪಶುವಿನ ಪರವಾಗಿ ನಿಂತು ಮಹಿಳೆ ಸಂಘಟಿತವಾಗಿ ಧ್ವನಿಯೆತ್ತುವಲ್ಲಿ ಹೊಸ ಯುಗವನ್ನೇ ತೆರೆಯಿತು. ದೇಶದ ಹಲವಾರು ಕಡೆ ಅತ್ಯಾಚಾರಕ್ಕೊಳಗಾದ ದುರ್ಬಲ ಮಹಿಳೆಯರ ಪರವಾಗಿ ಕೆಲಸ ಮಾಡುವ ಸಂಘಟನೆ, ವೇದಿಕೆಗಳು ಹುಟ್ಟಿಕೊಂಡವು.

ಆಮೇಲಿನ ಶಾಬಾನೊ ಪ್ರಕರಣ, ರೂಪ್ ಕನ್ವರ್ ಸತಿ ಪ್ರಕರಣ, ಭನವಾರಿ ದೇವಿಯ ಪ್ರಕರಣಗಳು ಮಹಿಳೆಯರ ಮೇಲಾಗುವ ಹಲವು ತೆರನ ಹಿಂಸೆಗಳನ್ನು ಮುನ್ನೆಲೆಯ ಚರ್ಚೆಗೆ ಬರುವಂತೆ ಮಾಡಿದವು. ರಾಜಸ್ಥಾನದ ಬಾಲ್ಯವಿವಾಹ ವಿರೋಧಿ ಆಂದೋಲನದ ಭನವಾರಿ ಅತ್ಯಾಚಾರಕ್ಕೊಳಗಾಗಿದ್ದು ತನ್ನ ಉದ್ಯೋಗದ ಕಾರಣಕ್ಕಾಗಿ. ಇದನ್ನು ಆಧಾರವಾಗಿಟ್ಟುಕೊಂಡು ವಿಶಾಖ ಹಾಗೂ ಇನ್ನಿತರ ನಾಲ್ಕು ಸಂಘಟನೆಗಳು ರಾಜಸ್ಥಾನ ಹಾಗೂ ಭಾರತ ಸರ್ಕಾರದ ವಿರುದ್ಧ ಕೋರ್ಟಿಗೆ ಹೋದವು. ಆ ಕೇಸಿನ ವಿಚಾರಣೆಯ ವೇಳೆ ಕೋರ್ಟ್ ‘ವಿಶಾಖ ಗೈಡ್‌ಲೈನ್ಸ್’ ನಿರೂಪಿಸಿದ್ದು ಅದನ್ನು ಇಂದಿಗೂ ಅನುಸರಿಸಲಾಗುತ್ತಿದೆ. ೧೯೯೭ರ ತೀರ್ಪು ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವ್ಯಾಖ್ಯೆ ನೀಡಿ ಅದನ್ನು ನಿಭಾಯಿಸುವುದರ ಕುರಿತು ನೀತಿ ನಿಯಮಾವಳಿ ರೂಪಿಸಿತು.

ಭಾರತೀಯ ಅರೆಸೇನಾಪಡೆ ಅಸ್ಸಾಂ ರೈಫಲ್ಸ್‌ನ ಯೋಧರು ತಂಗ್ಜಂ ಮನೋರಮಾ ಎಂಬ ೩೨ ವರ್ಷದ ಮಹಿಳೆಯನ್ನು ಇಂಫಾಲದ ಹೊರವಲಯದಲ್ಲಿದ್ದ ಅವಳ ಮನೆಯಿಂದ ಬಂಧಿಸಿ ಕರೆದೊಯ್ದರು. ಅವಳು ಸಶಸ್ತ್ರ ಕ್ರಾಂತಿಕಾರಿ ಗುಂಪಾದ ಪಿಎಲ್‌ಎನವಳು ಎನ್ನುವುದು ಬಂಧನಕ್ಕೆ ಕಾರಣ. ಮರುಬೆಳಿಗ್ಗೆ ಅಲ್ಲಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಅರೆನಗ್ನಾವಸ್ಥೆಯ ಅವಳ ಶವ ಪತ್ತೆಯಾಯಿತು. ಗುದದ್ವಾರ, ಯೋನಿಗಳಲ್ಲಿ ಕಲ್ಲುಗಳಿದ್ದವು, ಬುಲೆಟ್‌ಗಳಿದ್ದವು. ಐದು ದಿನಗಳ ನಂತರ ಮಣಿಪುರದ ಮೀರಾ ಪೈಬಿ ಮಹಿಳಾ ಹೋರಾಟಗಾರರ ಗುಂಪಿನ ಸುಮಾರು ಮೂವತ್ತು ನಡುವಯಸ್ಕ ಮಹಿಳೆಯರು ನಗ್ನರಾಗಿ ಮಣಿಪುರದ ರಾಜಧಾನಿಯ ಬೀದಿಗಳಲ್ಲಿ ನಡೆದು ಹೋಗಿ ‘ಭಾರತೀಯ ಸೇನೆಯೇ, ನಮ್ಮ ಮೇಲೆ ಅತ್ಯಾಚಾರವೆಸಗಿ, ನಾವು ಮನೋರಮಾ ತಾಯಂದಿರು’ ಎಂದು ಘೋಷಣೆ ಕೂಗಿದರು. ಈಗಲೂ ಮನೋರಮಾ ದೇಹ ಇಂಫಾಲದ ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಸೂಕ್ತ ಶವಪರೀಕ್ಷೆ ಆಗಿಲ್ಲವೆಂದು ಹಾಗೇ ಇದೆ. ಮರು ಶವಪರೀಕ್ಷೆಗಳಲ್ಲಿ ಹೊಸಹೊಸ ವಿಚಾರಗಳು ಬೆಳಕಿಗೆ ಬರುತ್ತಲೇ ಇವೆ. ಅವಳಂತೆ ಎಷ್ಟು ಜನ ಅತ್ಯಾಚಾರಕ್ಕೊಳಗಾದರೋ, ಕೊಲೆಯಾದರೋ ಯಾರಿಗೂ ಗಮನವೇ ಇರಲಿಲ್ಲ. ಆ ಅತ್ಯಾಚಾರದ ನಂತರ ದೇಶಾದ್ಯಂತ ಸಾರ್ವಜನಿಕರ ಗಮನ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯ ವಿರುದ್ಧವಾಗಿ, ವಿಶೇಷಾಧಿಕಾರ ದುರುಪಯೋಗಪಡಿಸಿಕೊಳ್ಳುವ ಸೈನ್ಯದ ಕುರಿತಾಗಿ ಹರಿಯಿತು. ಇರೋಂ ಶರ್ಮಿಳಾ ಉಪವಾಸ ಶುರು ಮಾಡಿ ಸಶಸ್ತ್ರ ಪಡೆಗಳ ದೌರ್ಜನ್ಯವನ್ನು ವಿರೋಧಿಸಿದರು. ಅವರ ಉಪವಾಸ ಇನ್ನೂ ಮುಂದುವರಿದೇ ಇದೆ.

ಇದಲ್ಲದೆ ಮಹಿಳಾ ಸಂಘಟನೆಗಳು ಮಹಿಳೆಗೆ ರಾಜಕೀಯ ಪ್ರಾತಿನಿಧ್ಯ, ಆಸ್ತಿ ಹಕ್ಕು, ಉದ್ಯೋಗ ಮತ್ತಿತರ ಅವಕಾಶಗಳಲ್ಲಿ ಮೀಸಲಾತಿ ಮುಂತಾದ ಬೇಡಿಕೆಗಳನ್ನಿಟ್ಟುಕೊಂಡು ಹೋರಾಟ ನಡೆಸಿದವು. ಅದರ ಫಲವೋ ಎಂಬಂತೆ ಹಲವಾರು ಮಹಿಳಾ ಪರ ಕಾನೂನುಗಳು ರೂಪುಗೊಂಡವು. ಈ ಅವಧಿಯ ಮಹಿಳಾ ಹೋರಾಟಗಳು ಮಹಿಳಾ ಪರ ಕಾನೂನು ರೂಪಿಸುವುದರಲ್ಲಿ ಹಾಗೂ ನ್ಯಾಯವ್ಯವಸ್ಥೆ ಸುಧಾರಣೆಯತ್ತ ಗಮನ ಕೊಟ್ಟವು. ಮಹಿಳಾ ದೃಷ್ಟಿಕೋನದಿಂದ ಕಲೆ, ಸಾಹಿತ್ಯ, ಘಟನೆ, ಪುರಾಣೇತಿಹಾಸಗಳನ್ನು ನೋಡುವ, ವಿಶ್ಲೇಷಿಸುವ ಪರಿಪಾಠ ಬೆಳೆಯಿತು.

ಜೊತೆಗೆ ದಲಿತ ಮಹಿಳಾ ಜಾಗೃತಿಯ ಹೊಸ ಅಧ್ಯಾಯ ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಶುರುವಾಯಿತು. ಅದುವರೆಗೆ ಮಹಿಳಾ ಚಳುವಳಿ ಹಿನ್ನೆಲೆಗೆ ಸರಿಸಿದ್ದ ಜಾತಿ ಪ್ರಶ್ನೆ ಮುಂಚೂಣಿಗೆ ಬರುವಂತಾಯಿತು. ಅರೆಕಾಲಿಕ ಹಾಗೂ ಗುತ್ತಿಗೆ ಆಧಾರಿತ ಮಹಿಳಾ ನೌಕರರ ಸಂಘಟನೆಗಳು ಕಾರ್ಮಿಕ ಹಕ್ಕುಗಳಿಗಾಗಿ ಹೋರಾಟ ನಡೆಸಿದವು. ಸಂಘಟಿತ ಹಾಗೂ ಅಸಂಘಟಿತ ವಲಯದ ಮಹಿಳಾ ಉದ್ಯೋಗಿಗಳ ಸಂಘಟನೆ, ಹಕ್ಕೊತ್ತಾಯಗಳು ಕೇಳಿಬಂದವು.

೪.    ಈಗೊಂದು ದಶಕದಿಂದ ನಾವು ನೋಡುತ್ತಿರುವುದು ಹೊಸ ಅಲೆಯ ಮಹಿಳಾ ಚಳುವಳಿ. ಸಂಪರ್ಕ ಕ್ರಾಂತಿಯ ಈ ಯುಗ ಜಾಗತೀಕರಣ, ಖಾಸಗೀಕರಣ, ಅಭಿವೃದ್ಧಿಯ ಯುಗವೂ ಆಗಿದ್ದು ಮಹಿಳೆಗೆ ಬಿಡುಗಡೆಯ ಭ್ರಮೆಯನ್ನೂ, ಅದರ ಬೆನ್ನಿಗೇ ನಾನಾ ಸಂಕಷ್ಟಗಳನ್ನು ತಂದೊಡ್ಡಿದೆ. ದೌರ್ಜನ್ಯದ ಜೊತೆಗೆ ಪರಿಸರ, ಸಮಾನ ಶಿಕ್ಷಣ, ಮಾತೃಭಾಷಾ ಶಿಕ್ಷಣ, ಉದ್ಯೋಗ ಹಕ್ಕು, ಮಾನವ ಸಾಗಾಟ, ಕನಿಷ್ಟ ವೇತನ, ಯುದ್ಧ, ವಲಸೆ, ಕೃಷಿಬಿಕ್ಕಟ್ಟು ಮೊದಲಾದ ಹತ್ತಾರು ಸಮಸ್ಯೆಗಳನ್ನಿಟ್ಟುಕೊಂಡು ಕೆಲಸ ಮಾಡುವ ಸ್ವಾಯತ್ತ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು ಹುಟ್ಟಿಕೊಂಡಿವೆ.

ಈಚಿನ ೨-೩ ದಶಕಗಳಲ್ಲಿ ಜಾಗತೀಕರಣ-ಅಭಿವೃದ್ಧಿ-ಕೋಮುವಾದದಿಂದ ತೊಂದೆಗೀಡಾದ ಮಹಿಳೆಯರ ಸಂಘಟನೆಗಳೂ ಬಂದಿವೆ. ಮೇಧಾ ಪಾಟ್ಕರ್ ಅವರ ನರ್ಮದಾ ಬಚಾವೋ ಆಂದೋಲನ, ಭೂಪಾಲಿನ ವಿಷಾನಿಲ ಸಂತ್ರಸ್ತರ ಮಹಿಳಾ ಸಂಘಟನೆ, ಬಾಬ್ರಿ ಮಸೀದಿ-ಗುಜರಾತ್ ನರಮೇಧದ ಬಳಿಕ ಹುಟ್ಟಿಕೊಂಡ ಮಾನವ ಹಕ್ಕು ಸಂಘಟನೆಗಳ ಮಹಿಳೆಯರು, ಮಹಾಶ್ವೇತಾದೇವಿ ಅವರ ಸಂಘಟನೆ-ಬರಹ, ದಂಡಕಾರಣ್ಯದ ಜನಸಂಗ್ರಾಮ ಪರಿಷದ್‌ನ ಅನುರಾಧಾ ಗಾಂಧಿ ಮತ್ತಿತರ ಎಡಪಂಥೀಯ ಹೋರಾಟಗಾರರು ಶುರುಮಾಡಿದ ಆದಿವಾಸಿ ಕ್ರಾಂತಿಕಾರಿ ಮಹಿಳಾ ಸಂಘಟನ್ ಮೊದಲಾದವನ್ನು ಇಲ್ಲಿ ಉದಾಹರಿಸಬಹುದು. ದೌರ್ಜನ್ಯ ತಡೆ, ಲಿಂಗಸೂಕ್ಷ್ಮ ಸಮಾಜಕ್ಕೆ ಒತ್ತಾಯ, ಮಹಿಳಾ ಸ್ನೇಹಿ ಪರ್ಯಾಯ ಅಭಿವೃದ್ಧಿ ಮಾದರಿ, ಕೃಷಿ ಬಿಕ್ಕಟ್ಟು ನಿರ್ವಹಣೆ, ಸ್ವಚ್ಛತೆ, ಮಹಿಳಾ ಮೀಸಲಾತಿ ಜಾರಿಯೂ ಸೇರಿದಂತೆ ಹಲವು ವಿಷಯಗಳನ್ನೆತ್ತಿಕೊಂಡು ಮಹಿಳೆಯರು ಸಂಘಟಿತರಾಗಿದ್ದಾರೆ. ಭಾರತದ ಮಹಿಳಾ ಚಳುವಳಿ ದೌರ್ಜನ್ಯ ವಿರೋಧದ ಜೊತೆಜೊತೆಗೆ ಸಮಾನ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಕ್ಕುಗಳನ್ನೂ ವ್ಯಾಖ್ಯಾನಿಸುತ್ತ ಸ್ಥಾಪಿಸಲೆತ್ನಿಸಿದೆ. ಸ್ತ್ರೀಭ್ರೂಣ ಹತ್ಯೆ, ಮರ್ಯಾದಾ ಹತ್ಯೆ, ಜಾತಿ ಪಂಚಾಯ್ತಿಯ ಮಹಿಳಾ ವಿರೋಧಿ ನೀತಿ, ಕೋಮುವಾದ, ಅಭಿವೃದ್ಧಿ ಮಾದರಿಗಳ ಮಹಿಳಾ ವಿರೋಧಿ ಅಂಶಗಳನ್ನು ಎತ್ತಿ ತೋರಿಸುತ್ತಲೇ ರಾಜಕೀಯ ಪ್ರಾತಿನಿಧ್ಯ, ಮಹಿಳೆಯ ದೇಹವನ್ನು ಸರಕೀಕರಣಗೊಳಿಸುವುದು, ವಸ್ತ್ರಸಂಹಿತೆ ವಿರೋಧ, ಅತ್ಯಾಚಾರ ತಡೆಗೆ ಕಠಿಣ ಕಾನೂನಿಗಾಗಿ ಒತ್ತಾಯಿಸಿ ಹೋರಾಟ ನಡೆದಿದೆ. ಗುಲಾಬಿ ಗ್ಯಾಂಗ್‌ನಂತಹ ಕೆಲವು ಸ್ವಾಯತ್ತ ಮಹಿಳಾ ಗುಂಪುಗಳು ಊರೂರುಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನಿಟ್ಟುಕೊಂಡು ಹೋರಾಟ ಮಾಡುತ್ತಿವೆ. ಒಟ್ಟಾರೆ ಬದಲಾದ ಕಾಲದಲ್ಲೂ ಇರುವ ಪಿತೃಪ್ರಾಧಾನ್ಯದ ನಾನಾಮುಖಗಳ ಆಳಗಲವನ್ನು ಇವೆಲ್ಲವು ಎತ್ತಿ ತೋರಿಸುತ್ತಿವೆ.

ಚಳುವಳಿಗೆ ಪೂರಕವಾಗಿ ಎಂಬಂತೆ ಸರ್ಕಾರವೂ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಅಧ್ಯಯನ ಕೇಂದ್ರಗಳು, ಮಹಿಳೆಯರಿಗೆಂದೇ ವಿಶಿಷ್ಟ ಕೋರ್ಸುಗಳು, ಮಹಿಳಾ ಬ್ಯಾಂಕು, ಮಹಿಳಾ ಠಾಣೆ, ಗ್ರಾಮೀಣ ಮಹಿಳೆಯರಿಗಾಗಿ ಸ್ತ್ರೀಶಕ್ತಿ ಮೊದಲಾದ ಯೋಜನೆಗಳನ್ನು ಹಾಕಿಕೊಂಡು ತಳವರ್ಗದ ಗ್ರಾಮೀಣ ಮಹಿಳೆಯರೂ ಜಾಗೃತರಾಗಿ ಕ್ರಿಯಾಶೀಲಗೊಳ್ಳಲು ಕಾರಣವಾಗಿದೆ. ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ.

ಮಹಿಳಾ ಚಳುವಳಿ: ಸವಾಲು-ಸಾಧ್ಯತೆಗಳು

ಇಷ್ಟೆಲ್ಲ ಹೋರಾಟ ನಡೆಯುತ್ತಿದೆಯೆಂದರೆ ೨೧ನೇ ಶತಮಾನದ ಮಹಿಳೆ ಆಧುನಿಕತೆಯನ್ನು ಮೈಗೂಡಿಸಿಕೊಂಡು ಲಿಂಗತಾರತಮ್ಯದ ಸಮಸ್ಯೆಗಳಿಲ್ಲದೆ ಬದುಕಲು ಸಾಧ್ಯವಾಗಿದೆಯೆ? ಖಂಡಿತ ಇಲ್ಲ. ಮೇಲೆ ಉದಾಹರಿಸಿದ, ಉದಾಹರಿಸದ ಇನ್ನೂ ಅನೇಕ ಸಂಘ, ಸಂಸ್ಥೆ, ಹೋರಾಟಗಳು ಮಾಡಿರುವ ಕೆಲಸ ಹೆಣ್ಣು ಎದುರಿಸುತ್ತಿರುವ ಸಮಸ್ಯೆಗಳಿಗೆ ಹೋಲಿಸಿದರೆ ಏನೇನೂ ಅಲ್ಲ. ಮಹಿಳಾ ಚಳುವಳಿಯೋ, ಹೋರಾಟವೋ, ಬಿಡುಗಡೆಯೋ, ಸಂಘಟನಾ ಕೆಲಸವೋ ಅಂತೂ ಮಹಿಳೆ ಇನ್ನೂ ಬಲಿತ ಹೆಜ್ಜೆಯನ್ನಿಟ್ಟು ಧೃಢವಾಗಿ ನಡೆಯುವುದು ಸಾಧ್ಯವಾಗಿಲ್ಲ.

ಸರ್ವಸಮಾನತೆ ಸಾರುವ ಸಂವಿಧಾನ ಬಂದು ೬೫ ವರ್ಷಗಳಾದ ನಂತರವೂ ಹಿಂದೂ ದೇವಾಲಯದೊಳಗೆ ಮಹಿಳೆಗೆ ಪ್ರವೇಶ ನೀಡಬೇಕೋ ಬೇಡವೋ ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಮಹಿಳಾ ಮೀಸಲಾತಿ ಕುರಿತು ದಶಕಗಳಿಂದ ಮಾತು ಕೇಳಿಬರುತ್ತಿದ್ದರೂ ಬೆರಳೆಣಿಕೆಯಷ್ಟು ಮಹಿಳಾ ರಾಜಕಾರಣಿಗಳಿದ್ದಾರೆ. ಕಾನೂನಿನ ಒತ್ತಾಯವಿಲ್ಲದಿದ್ದರೆ ರಾಜಕೀಯ ಪಕ್ಷಗಳಾಗಲೀ, ಸಮಾಜವಾಗಲೀ ಅವಕಾಶವಂಚಿತರಿಗೆ ಯಾವ ಅವಕಾಶವನ್ನೂ ಮೀಸಲಿಡುವುದಿಲ್ಲ ಎನ್ನುವುದು ಮತ್ತೆಮತ್ತೆ ಸಾಬೀತಾಗುತ್ತಿದೆ. ಕಾನೂನಿನ ಬೆಂಬಲವಿದ್ದರೂ ಅದನ್ನು ನಿರುಪಯೋಗಿಯಾಗಿಸುವ ರಾಜಕೀಯ ಹುನ್ನಾರಗಳೂ ದಿನನಿತ್ಯ ಸಂಭವಿಸುತ್ತಿವೆ. ಧರ್ಮಾಧಾರಿತ ಧೃವೀಕರಣದ ತಂತ್ರವಾಗಿ ದಲಿತರನ್ನು, ಮಹಿಳೆಯರನ್ನು ಕೋಮುವಾದ ದಿಕ್ಕು ತಪ್ಪಿಸುತ್ತಿದೆ. ಜನಸಾಮಾನ್ಯರ ಮಾತಂತಿರಲಿ, ದಲಿತ - ಮಹಿಳಾ ನಾಯಕಿಯರನ್ನೂ ಸಹಾ ಹಿಂದೂತ್ವದ ಜಾಲದೊಳಗೆ ಸೆಳೆಯಲಾಗಿದೆ. ತಮಗರಿವಿಲ್ಲದೆ ಜಾತಿ, ಧರ್ಮ ಮತ್ತು ರಾಜಕಾರಣಗಳು ಒಡ್ಡುವ ಭಾವುಕ ಹಾಗೂ ಲೌಕಿಕ ಬಲೆಯೊಳಗೆ ಮಹಿಳೆಯರು ಬೀಳುತ್ತ ಲಿಂಗಪ್ರಶ್ನೆ ಮರೆಗೆ ಸರಿಯುತ್ತಿದೆ. ಮಹಿಳಾ ಜಾಗೃತಿಯ ಕೊರತೆ ಹಾಗೂ ಪ್ರಮುಖ ಸ್ಥಾನಗಳಲ್ಲಿ ಮಹಿಳೆಯರ ‘ಇಲ್ಲದಿರುವಿಕೆ’ ಎದ್ದುಕಾಣುತ್ತಿದೆ. ಇದಕ್ಕೆ ಕಾರಣಗಳು ಹಲವಾರು.

    ಇಂದಿಗೂ ಹೆಣ್ಣು ತನಗೆ ವಿಧಿಸಲಾದ ಮಿತಿಗಳನ್ನು ದಾಟಿ ಬರುವುದರಲ್ಲಿ ನಾಲ್ಕು ಘಟ್ಟಗಳನ್ನು ಗುರುತಿಸಲಾಗಿದೆ:

o    ಅಸಹಾಯಕತೆಯ ಅರಿವು
o    ಸ್ಥಿತಿಗತಿಯ ಕುರಿತು ಪ್ರಶ್ನೆ ಕೇಳಿಕೊಳ್ಳುವುದು
o    ಆದ್ಯತೆಯ ಹುಡುಕಾಟ
o    ಸ್ವಾಯತ್ತತೆಯ ಕಡೆಗಿನ ಪಯಣ

ಇಷ್ಟೆಲ್ಲ ವರ್ಷಗಳ ಸ್ವಾತಂತ್ರ್ಯದ ನಂತರವೂ, ಇನ್ನೂ ಈ ನಾಲ್ಕರಲ್ಲಿ ಎರಡನೆಯ ಘಟ್ಟದ ಅನುಭವವನ್ನೂ ಗುರುತಿಸಲಾರದ ಕೋಟ್ಯಂತರ ದಮನಿತ ಮಹಿಳೆಯರಿದ್ದಾರೆ. ಸಮಾಜ ಈಗ ಹೆಣ್ಣು ಎಂದು ಯಾರನ್ನು ನೋಡುತ್ತಿದೆಯೋ ಅವಳು ನಿಜವಾದ ಹೆಣ್ಣಲ್ಲ. ಅದು ಪುರುಷಪ್ರಧಾನ ಸಮಾಜದ ಕಲ್ಪನಾ ವಿಲಾಸ ಹೆಣ್ಣು ಹೇಗಿರಬೇಕೆಂದು ವ್ಯಾಖ್ಯಾನಿಸಿದೆಯೋ ಆ ಚೌಕಟ್ಟಿಗೆ ಸರಿಯಾಗಿ ತನ್ನನ್ನು ರೂಪಿಸಿಕೊಂಡ ಹೆಣ್ಣು. ಗುಟ್ಟು ಕಾಪಾಡುವುದರಲ್ಲೇ ಹೆಣ್ತನವಿದೆ ಎಂದು ಭಾವಿಸಿದ, ತಾನು ಕಳೆದುಕೊಂಡಿರುವುದೇನೆಂದೇ ತಿಳಿಯದವರು ಅವರು. ಮುಳುಗಿದ ಅರಿವೇ ಇಲ್ಲದವರನ್ನು ಮೇಲೆತ್ತುವುದು ಹೇಗೆ? ಅಂಥವರನ್ನು ಸಂಘಟಿಸುವುದು ಹೇಗೆ?

ಅಮೆರಿಕನ್ ಆಫ್ರಿಕನ್ ಬರಹಗಾರ್ತಿ ಗ್ರಾಡಾ ಕಿಲೋಂಬಾ ತಮ್ಮ ಒಂದು ಲೇಖನದಲ್ಲಿ ಅವರ ಹಿರಿಯರಾದ ಕರಿಯ ಗುಲಾಮರು ತಮ್ಮ ನೆನಪಿನಿಂದ ಹೇಳುತ್ತಿದ್ದ ಸಂಕಟವನ್ನು ಪ್ರಸ್ತಾಪಿಸಿದ್ದಾರೆ. ಅಮೆರಿಕದ ಬಿಳಿಯ ಮಾಲೀಕರು ತಮ್ಮ ಎಸ್ಟೇಟು, ತೋಟ, ಮನೆಗಳಲ್ಲಿ ಕೆಲಸ ಮಾಡುವ ಕರಿಯ ಗುಲಾಮರ ಬಾಯಿಯಲ್ಲಿ ದವಡೆಗಳ ನಡುವೆ ಒಂದು ಕಬ್ಬಿಣದ ಕಚ್ಚುಕಂಬಿಯನ್ನಿಡುತ್ತಿದ್ದರು. ಗುಲಾಮರು ಪರಸ್ಪರ ಮಾತನಾಡುತ್ತ ಕಾಲ ವ್ಯಯಿಸಬಾರದು ಹಾಗೂ ಕಬ್ಬು, ಕಾಫಿ-ಕೋಕೋ ಬೀಜಗಳ ಅವರು ತಿನ್ನಬಾರದು ಎನ್ನುವುದು ಕಚ್ಚುಕಂಬಿಯ ಉದ್ದೇಶ. ಈ ಪದ್ಧತಿ ಸುಮಾರು ೩೦೦ ವರ್ಷ ಚಾಲ್ತಿಯಲ್ಲಿತ್ತು. ಅದು ಸೊಲ್ಲಡಗಿಸುವ, ಬಲವಂತದ ಮೌನ ಹೇರುವ ಕ್ರಮ. ಜನಸಮುದಾಯದ ಹಕ್ಕಿನ ನಿರಾಕರಣೆ. ಕರಿಯ ಗುಲಾಮರಂತೆ ಮಹಿಳೆಯರೂ ಸಾವಿರಾರು ವರ್ಷಗಳಿಂದ ಅದೃಶ್ಯ ಕಚ್ಚುಕಂಬಿಯನ್ನು ತಮ್ಮ ಬಾಯಲ್ಲಿಟ್ಟುಕೊಂಡೇ ಬದುಕಿದ್ದಾರೆ. ಅದನ್ನು ತೆಗೆಯಲಾಗಿದ್ದರೂ ಅದೃಶ್ಯವಾದದ್ದನ್ನು ಊಹಿಸಿಕೊಂಡೇ ಮೌನವಾಗಿದ್ದಾರೆ. ಹೀಗೆ ಹಲ್ಲು ಕಚ್ಚಿ ಸಹಿಸಿಕೊಂಡಿರುವವರ ಬಾಯಿ ಬಿಚ್ಚಿಸುವುದಕ್ಕೆ ಇರುವ ಸವಾಲುಗಳೇ ಮಹಿಳಾ ಚಳುವಳಿ ಕಟ್ಟಲು ಇರುವ ಮೊದಲ ತೊಡಕುಗಳಾಗಿವೆ.

ಸಮಾಜ ವೇಗವಾಗಿ ಚಲಿಸುತ್ತಿದೆ. ಅದಕ್ಕೆ ಕಾರಣ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಅದು ಸಾಧ್ಯವಾಗಿಸಿರುವ ಸಂವಹನ. ಆದರೆ ಈ ವೇಗದ ಹೊರತಾಗಿಯೂ ಕೌಟುಂಬಿಕ ಹಾಗೂ ನೈತಿಕ ಮೌಲ್ಯಗಳೆಂದು ಮಹಿಳೆಯ ಮೇಲೆ ಹೇರಿದ ಆದರ್ಶಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಇವತ್ತಿಗೂ ಕಲಿತ, ವೇತನ ತರುವ ಹೆಣ್ಣುಮಗಳು ಮನೆಯ, ಮಕ್ಕಳ ಕೆಲಸಗಳನ್ನೆಲ್ಲ ಸಂಪೂರ್ಣ ನಿಭಾಯಿಸುವ ಜವಾಬ್ದಾರಿಯನ್ನು ಮಾತಿಲ್ಲದೇ ಒಪ್ಪಿಕೊಳ್ಳಬೇಕಾಗಿದೆ. ಮುಮ್ಮುಖ ನೋಟ, ಹಿಮ್ಮುಖ ಚಲನೆಯ ಅನುಭವವನ್ನು ಮಹಿಳೆಗೆ ಈ ಸನ್ನಿವೇಶ ನೀಡುತ್ತಿದ್ದು ಅವಳಿಗೆ ತನ್ನ ನಿಜ ಸ್ಥಿತಿಗತಿಯ ಅರಿವು ಮೂಡುವುದೇ ದುಸ್ತರವಾಗಿದೆ. ಎಂದೇ ಚಳುವಳಿ, ಹೋರಾಟಗಳು ನಿರಂತರವಾಗಿರಬೇಕಾದ ಅನಿವಾರ್ಯತೆ ಹುಟ್ಟಿಕೊಂಡಿದೆ. ನಿರಾಶಾವಾದಕ್ಕೆ, ಸಿನಿಕತನಕ್ಕೆ ಈಡುಮಾಡುವ ಅಪಾಯಗಳ ನಡುವೆಯೇ ಸಂಘಟಿತಳಾಗಬೇಕಿರುವುದು ಮಹಿಳಾ ಚಳುವಳಿ ಎದುರಿಸುವ ಸವಾಲಾಗಿದೆ. ಸಂಘಟನೆ ಎಲ್ಲ ಕಾಲದಲ್ಲೂ ಮಹಿಳೆಗೆ ಕಷ್ಟ. ಸಿಮನ್ ದಿ ಬೊವಾ ಕೂಡಾ ಸಂಘಟನೆಯ ಕಷ್ಟಗಳ ಬಗ್ಗೆ ಮಾತನಾಡಿದ್ದರು. ಸಂಘಟನೆಯ ಅವಶ್ಯಕತೆ ಇದೆಯೆಂದು ಹೆಣ್ಣಿಗೆ ಅನಿಸುತ್ತಿಲ್ಲ. ಸಂಘಟಿತವಾಗಿ ಪ್ರಯತ್ನಿಸಬೇಕೆಂದು, ಪರಿಹಾರ ಕಂಡುಕೊಳ್ಳಬಹುದೆಂದು ಭರವಸೆಯಿಲ್ಲ. ಇದು ದಾಟಬೇಕಾದ ದೊಡ್ಡ ಅಂತರಂಗದ ಮಿತಿಯಾಗಿದೆ. ಮಹಿಳೆಯ ಈ ಮನಸ್ಥಿತಿ ರೂಪಿಸಿರುವ ಸಮಾಜವೂ ಸಮಗ್ರ ಮಹಿಳಾ ಚಳುವಳಿ ರೂಪುಗೊಳ್ಳದಿರುವುದಕ್ಕೆ ಜವಾಬ್ದಾರಿ ಹೊತ್ತುಕೊಳ್ಳಬೇಕಾಗಿದೆ.

    ಕೌಟುಂಬಿಕ ಅಡೆತಡೆಗಳನ್ನು ದಾಟಿಕೊಂಡು ಹೊರಬಂದ ನಂತರವೂ ಮಹಿಳೆ ಸಂಘಟನಾತ್ಮಕವಾಗಿ ಹಲವು ಗೊಂದಲಗಳನ್ನು ಎದುರಿಸಬೇಕಿದೆ. ಚಳುವಳಿಗಳಿಗೆ ಸಿದ್ಧಾಂತ ಮತ್ತು ಆಚರಣೆ ಎಂಬ ಎರಡು ಆಯಾಮಗಳಿರುತ್ತವೆ. ಚಳುವಳಿಯೊಂದು ಪ್ರಬುದ್ಧಾವಸ್ಥೆ ತಲುಪುವವರೆಗೆ ಕೇವಲ ಆಲೋಚನೆಗಳಿರುತ್ತವೆ. ಆಲೋಚನೆಗಳು ಆಚರಣೆಗಳನ್ನು ರೂಪಿಸುತ್ತವೆ. ಆಲೋಚನೆಗಳ ಆಚರಣಾತ್ಮಕ ಪರಿಪಕ್ವತೆಯಲ್ಲಿ ಸಿದ್ಧಾಂತ ರೂಪುಗೊಳ್ಳುತ್ತದೆ. ಮಹಿಳಾ ಚಳುವಳಿ ಆಲೋಚನೆ, ಆಚರಣೆಗಳ ಮಟ್ಟದಲ್ಲೇ ಇದ್ದು ಕಾಲಕ್ಕೆ ತಕ್ಕಂತೆ ಸೈದ್ಧಾಂತಿಕವಾಗಿ ಗಟ್ಟಿಗೊಳ್ಳುವುದು, ಒಟ್ಟುಗೂಡುವುದು ಅವಶ್ಯವಿದೆ. ಹಾಗಾಗದಂತೆ ವ್ಯವಸ್ಥೆಯಲ್ಲೆ ಅಡಕವಾಗಿರುವ ಹಲವು ದ್ವಂದ್ವಗಳು ತಡೆಯುತ್ತಿವೆ. ನಮ್ಮ ಸಂವಿಧಾನ ಮಹಿಳೆಯನ್ನು ಒಬ್ಬ ವ್ಯಕ್ತಿಯಾಗಿ ನೋಡುತ್ತದೆ. ಆದರೆ ಧರ್ಮ ಬೇರೆಯೇ ಚೌಕಟ್ಟು ವಿಧಿಸುತ್ತದೆ. ಸಂವಿಧಾನ ಧರ್ಮದ ಕುರಿತು ಮಾತನಾಡಬಯಸುವುದಿಲ್ಲ. ಅದು ವ್ಯಕ್ತಿಯ ಸ್ವಾತಂತ್ರ್ಯ ಎನ್ನುತ್ತದೆ. ಆದರೆ ಅದೇ ಸ್ವಾತಂತ್ರ್ಯ ಹೆಣ್ಣುಮಕ್ಕಳಲ್ಲಿ ಹಲವು ಗೊಂದಲಗಳನ್ನು ಸೃಷ್ಟಿಸಿದೆ. ಯಾವ ಜಾತಿ/ಧರ್ಮವು ನಿಮ್ಮನ್ನು ಸಂಕಲೆಯೊಳಗಿಟ್ಟಿದೆಯೊ ಅದನ್ನೆ ನಿಮ್ಮ ಸಂಸ್ಕೃತಿಯ ಮೂಲ ಎನ್ನಲಾಗುತ್ತದೆ. ಯಾವ ಜಾತಿ/ಧರ್ಮ ನಿಮ್ಮನ್ನು ಅಧಿಕಾರಹೀನರನ್ನಾಗಿಸಿದೆಯೊ ಅದನ್ನು ಬಿಟ್ಟು ಬದುಕಲು ಜನಸಾಮಾನ್ಯರಿಗೆ, ಮಹಿಳೆಯರಿಗೆ ಅವಕಾಶವೇ ಇಲ್ಲವಾಗಿದೆ.
    ಸಮಾಜವು ಜಾತಿ-ಧರ್ಮ-ಭಾಷೆಗಳಿಂದ ಛಿದ್ರವಾಗಿದೆ. ಎಲ್ಲ ತಾರತಮ್ಯಕ್ಕೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣವಾಗಿರುವುದು ಜಾತಿಪದ್ಧತಿ. ಭಾರತೀಯ ಸಮಾಜದ ಸಾಮಾಜಿಕ, ಆರ್ಥಿಕ ಅಸಮಾನ ರಚನೆಗಳೇ ಲಿಂಗತಾರತಮ್ಯದ ಮೂಲ ಕಾರಣವಾಗಿ ಇವತ್ತಿಗೂ ಮುಂದುವರೆದಿವೆ. ಅವಮರ್ಯಾದಾ ಹತ್ಯೆ-ಖಾಪ್ ಪಂಚಾಯ್ತಿಗಳು ಸಂಭವಿಸುತ್ತಿರುವುದೇ ಅದಕ್ಕೆ ಸಾಕ್ಷಿ. ವಾಸ್ತವ ಹೀಗಿದ್ದರೂ ‘ಸ್ತ್ರೀವಾದವೆಂಬುದೇ ಪಾಶ್ಚಾತ್ಯ ಪರಿಕಲ್ಪನೆ. ಭಾರತದಲ್ಲಿ ಲಿಂಗವಿಶಿಷ್ಟ ಜವಾಬ್ದಾರಿಗಳಿವೆ; ಲಿಂಗ ಅನನ್ಯತೆಯ ಕುರುಹಾದ ಆಚರಣೆಗಳಿವೆಯೇ ಹೊರತು ಲಿಂಗತಾರತಮ್ಯ ಇಲ್ಲ’ ಎನ್ನುವುದು ಸನಾತನ ಭಾರತ ಸಂಸ್ಕೃತಿಯ ಪ್ರತಿಪಾದಕರ ಆರೋಪವಾಗಿದೆ. ಹೀಗಿರುತ್ತ ಜಾತಿ-ಧರ್ಮಗಳನ್ನು ಬಿಡಲಾಗದೆ, ಅವನ್ನಿಟ್ಟುಕೊಂಡು ಸಮಾನತೆ ಸಾಧಿಸಲಾಗದೆ ಜನಸಾಮಾನ್ಯರು ಚಳುವಳಿಗಳ ತಾತ್ವಿಕ ಸಂಕಥನಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ. ಕೋಮುವಾದವು ಈ ನಿರ್ವಾತವನ್ನು ಬಳಸಿಕೊಂಡು ಮಹಿಳೆಯನ್ನು ದಾಳವಾಗಿ ಮಾಡಿಕೊಂಡಿದೆ. ಮಹಿಳೆಯರಲ್ಲಿ ಇದರ ಅರಿವು ಮೂಡಿಸಿ ಜಾತಿ-ಧರ್ಮಗಳೆಂಬ ಸಂಸ್ಥೆಗಳು ತಮ್ಮ ರಚನೆಯಲ್ಲಿಯೇ ಮಹಿಳಾ ವಿರೋಧಿಗಳೆಂದು ಅರ್ಥ ಮಾಡಿಸುವುದು ಚಳುವಳಿಯ ಎದುರಿಗಿರುವ ದೊಡ್ಡ ಸವಾಲಾಗಿದೆ.
    ಹೆಣ್ಣಿಗೆ ಹಲವು ಶೋಷಿತ ಐಡೆಂಟಿಟಿಗಳಿವೆ. ಸಂಘಟನೆ-ಹೋರಾಟದ ಹಲವು ನೆಲೆಗಳೂ ಇವೆ. ಜಾತಿ-ವರ್ಗಗಳನ್ನು ಪರಿಗಣಿಸಿದಾಗ ಮಹಿಳೆಯ ಕಷ್ಟಗಳು ಬೇರೆಬೇರೆ. ಎಂದೇ ಜಾತಿದೌರ್ಜನ್ಯದ ವಿರುದ್ಧ ಹೋರಾಡಲು ಜಾತಿ ಅಸ್ಮಿತೆ ಬೇಕಿದೆ. ಆದರೆ ಮಹಿಳಾ ಚಳುವಳಿ ಮೊದಲು ಹೊಟ್ಟೆ ತುಂಬಿದವರ ಚಳುವಳಿ ಎಂಬ ಅಪಹಾಸ್ಯಕೆ ಈಡಾಗಿತ್ತು. ಅವು ವರ್ಗ ಸಮಸ್ಯೆಯಷ್ಟು ಜಾತಿ ಸಮಸ್ಯೆಯನ್ನು, ಎಲ್ಲ ದೌರ್ಜನ್ಯ-ತಾರತಮ್ಯಕ್ಕಿರುವ ಜಾತಿ ಸಂಬಂಧವನ್ನು ಗುರುತಿಸುವಲ್ಲಿ ವಿಫಲವಾಗಿದ್ದವು. ಆದರೆ ಮೂರನೆಯ ಅಲೆಯ ಮಹಿಳಾ ಚಳುವಳಿಯ ಹೊತ್ತಿಗೆ ಹೆಣ್ಮಕ್ಕಳನ್ನು ಸೆಳೆದ ಅಂಬೇಡ್ಕರ್ ಚಿಂತನೆಗಳು ಹಾಗೂ ಪ್ರತ್ಯೇಕವಾಗಿ ರೂಪುಗೊಳ್ಳತೊಡಗಿದ ದಲಿತ ಮಹಿಳಾ ಚಳುವಳಿ ದಲಿತ ಮಹಿಳೆಯ ಸಮಸ್ಯೆಯನ್ನು ಎಲ್ಲ ಮಹಿಳಾಪರ ಮನಸುಗಳೂ ಪರಿಗಣಿಸುವಂತೆ, ಜಾತಿ ಎನ್ನುವುದು ಬಹುಮುಖ್ಯ ದಮನದ ನೆಲೆಯೆಂದು ಗುರುತಿಸುವಂತೆ ಮಾಡಿತು. ಐಡೆಂಟಿಟಿ ರಾಜಕಾರಣದ, ಜಾತಿ ರಾಜಕಾರಣ ದಿನಗಳಲ್ಲಿ ಇದೆಲ್ಲದರ ನಡುವೆಯೇ ಮಹಿಳೆ ಸಮನ್ವಯವನ್ನೂ, ಒಳಗೊಳ್ಳುವಿಕೆಯನ್ನೂ ಸಾಧಿಸುವುದು ದೊಡ್ಡ ಸವಾಲಾಗಿದೆ.
    ಸದಾ ಕೇಳಿಬರುವ ಒಂದು ಪ್ರಶ್ನೆ: ಮಹಿಳಾ ಚಳುವಳಿಯೆಂಬ ಪ್ರತ್ಯೇಕ ಚಳುವಳಿ ನಡೆಸುವುದು ಸಾಧುವೆ? ಹಾಗೆ ನೋಡಿದರೆ ಎಲ್ಲ ವಿಷಯಗಳೂ ಮಹಿಳೆಗೆ ಸಂಬಂಧಪಟ್ಟವೇ. ಬೆಲೆ ಏರಿಕೆ, ಎಸ್‌ಇಝಡ್, ಕೋಮುವಾದ, ಪರಿಸರ ನಾಶ, ಗಣಿ, ಭ್ರಷ್ಟಾಚಾರ ಇವೆಲ್ಲ ಮಹಿಳೆಗೆ ಸಂಬಂಧಿಸಿದ್ದೇ. ಎಂದೇ ಈ ಎಲ್ಲ ಹೋರಾಟಗಳ ತಾತ್ವಿಕತೆಯೊಟ್ಟಿಗೆ ಮಹಿಳೆ ಬೆರೆತುಕೊಳ್ಳಬೇಕು. ಅದೇ ವೇಳೆಗೆ ಎಲ್ಲ ಜನಪರ ಹೋರಾಟಗಳೂ ಮಹಿಳಾ ಸಮಸ್ಯೆಗಳನ್ನು ತಮ್ಮವಾಗಿ ಎತ್ತಿಕೊಳ್ಳಬೇಕು. ಜಾಗತೀಕರಣದ ದಿನಗಳಲ್ಲಿ ಚಳುವಳಿಗಳನ್ನಾಗಲೀ, ಅದರ ದಾರಿ-ಗುರಿಗಳನ್ನಾಗಲೀ ತುಂಡುತುಂಡಾಗಿ ನೋಡುವುದರಿಂದ ಒಟ್ಟಾರೆ ಸಾಮಾಜಿಕ ಬದಲಾವಣೆ ಸಾಧ್ಯವಾಗದೇ ಹೋದೀತು. ಹಾಗಾಗಿ ಮಹಿಳೆ ಎಲ್ಲ ಹೋರಾಟಗಳ ಭಾಗವಾಗಬೇಕು. ಎಲ್ಲ ಹೋರಾಟಗಳೂ ಮಹಿಳಾ ಸಮಸ್ಯೆಗಳನ್ನು ಪರಿಗಣಿಸಬೇಕು. ಅದು ನಿಜವಾದ ಮಹಿಳಾ ಸಬಲೀಕರಣದ ದಾರಿ ಹಾಗೂ ಜನಚಳುವಳಿಗಳ ಅಂತಿಮ ಗುರಿ. ಎಲ್ಲ ಮಾನವ ಜೀವಿಗಳಂತೆಯೇ ಹೆಣ್ಣಿಗೂ ಸ್ವಾತಂತ್ರ್ಯ ಮತ್ತು ಸ್ವಾಯತ್ತ ಬದುಕನ್ನು ಸಾಕಾರಗೊಳಿಸಬೇಕಾದದ್ದು ಮಾನವ ಸಮಾಜದ ಉಳಿವಿನ ದಾರಿ.

‘ಅಮೆಜಾನ್ ದಾಟಬಹುದು, ಅನುದಿನದ ಅಂತರಗಂಗೆಯನ್ನು ದಾಟುವುದು ಹೇಗೆ?’

ಭಾರತೀಯ ಮಹಿಳೆ ಜಾತಿ-ಧರ್ಮ-ಕುಟುಂಬಗಳು ಒಂದರೊಳಗೊಂದು ಹೆಣೆದುಕೊಂಡಿರುವ ಕಾರಣವಾಗಿ ಪರಿಣಾಮಕಾರಿ ಜಾತ್ಯತೀತ ಹೋರಾಟ ಕಟ್ಟುವುದು ಕಷ್ಟಸಾಧ್ಯವಾಗಿದೆ. ಒಂದು ಕಡೆ ಜಾತಿಧರ್ಮದ ಆಧಾರದ ಮೇಲೆ ಮನುಷ್ಯರನ್ನು ಒಡೆಯುವ ಕೋಮುವಾದವು ಅರಿವಿನ ಬೆಳಕಿನೆಡೆಗೆ ಒಯ್ಯಬಹುದಾದ ಧರ್ಮ ಎಂಬ ಸಂಸ್ಥೆಯನ್ನು ಸಂಪೂರ್ಣ ಢಾಂಭಿಕ ಆಚರಣೆಗಳಿಗಷ್ಟೆ ಸೀಮಿತಗೊಳಿಸಿದೆ. ಭಾರತ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ, ಹಿಂದೂತ್ವವನ್ನು ತನ್ನೆಲ್ಲ ಅಜೆಂಡಾಗಳ ಕಾರ್ಯಸೂಚಿಯಾಗಿಸಿಕೊಂಡಿರುವ ರಾಜಕಾರಣವು ಭಾರತೀಯ ಸಂಸ್ಕೃತಿಯನ್ನು ವೈಭವೀಕರಿಸುತ್ತ ಅದರ ಮುಖ್ಯ ವಕ್ತಾರಳಾಗಿ, ವಾಹಕಳಾಗಿ ಹೆಣ್ಣನ್ನು ಕಾಣಿಸುತ್ತ ಧಾರ್ಮಿಕ, ಸಾಂಸ್ಕೃತಿಕ ಸಂಕೇತಗಳಲ್ಲಿ ಹೆಣ್ಣನ್ನು ಬಳಸಿಕೊಳ್ಳುತ್ತಿದೆ. ಎಂದೇ ಬಹುಪಾಲು ಹೆಣ್ಮಕ್ಕಳು ಧರ್ಮ ಮತ್ತದು ವಿಧಿಸಿರುವ ಕೌಟುಂಬಿಕ-ಪಾರಂಪರಿಕ ಚೌಕಟ್ಟಿನಿಂದ ಹೊರಬರಲಾರದವರಾಗಿದ್ದಾರೆ.

ಇನ್ನೊಂದು ಕಡೆ ಮಾರುಕಟ್ಟೆ ಸೃಷ್ಟಿಸಿರುವ ಭ್ರಮಾತ್ಮಕ ಜಗತ್ತಿನಲ್ಲಿ, ಬಂಡವಾಳಶಾಹಿ ಲಾಭಕೋರತನದ ಕೊನೆಯ ಬಲಿಪಶು ಹೆಣ್ಣು ಮತ್ತವಳ ದೇಹವೇ ಆಗಿದೆ. ಎಲ್ಲವೂ ಸರಕಾಗಿರುವ ಕಾಲದಲ್ಲಿ ಹೆಣ್ಣು, ಹೆಣ್ತನ, ಗರ್ಭಕೋಶ, ಲೈಂಗಿಕತೆ, ಇಷ್ಟಾನಿಷ್ಟ, ಕಣ್ಣೀರು ಎಲ್ಲವೂ ಕಚ್ಛಾವಸ್ತುಗಳಾಗಿವೆ. ಸರಕೀಕರಣ ಸೃಷ್ಟಿಸಿರುವ ಕೊಳ್ಳುಬಾಕತನಕ್ಕೆ ಹಣವೇ ಮೌಲ್ಯ. ಅಲಂಕರಣವೇ ಸೌಂದರ್ಯ. ಆರೋಗ್ಯ, ನೈತಿಕತೆ, ಸಹಬಾಳ್ವೆ, ಚಿಂತನೆಗಳಿಗೆ ಬೆಲೆಯಿಲ್ಲ, ಸಮಯವೂ ಇಲ್ಲ.

ಹೀಗೆ ಧರ್ಮರಾಜಕಾರಣ ಮತ್ತು ಮಾರುಕಟ್ಟೆ ಹುಟ್ಟುಹಾಕಿರುವ ಅನೂಹ್ಯ ಸಾಮಾಜಿಕ ಬದಲಾವಣೆಗಳು ಮಹಿಳೆಯರ ಮತ್ತು ಶೋಷಿತರ ಚಳುವಳಿ ಕಟ್ಟಲು ದೊಡ್ಡ ತೊಡಕುಗಳಾಗಿವೆ. ‘ಧರ್ಮ-ಅರ್ಥ’ಗಳು ರಾಜಕಾರಣದೊಂದಿಗೆ ಹಸ್ತಕ್ಷೇಪ ಮಾಡುತ್ತಿರುವುದರಿಂದಲೇ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಜನತಂತ್ರ ದುರ್ಬಲಗೊಳ್ಳುತ್ತ, ಸಾಂಕೇತಿಕಗೊಳ್ಳುತ್ತ ಸಾಗುತ್ತಿದೆ. ಹೀಗಿರುತ್ತ ಡೆಮಾಕ್ರಸಿ, ಧರ್ಮ, ರಾಷ್ಟ್ರೀಯತೆ, ಮಾರುಕಟ್ಟೆ ಮತ್ತಿತರ ‘ಒಪ್ಪಿತ’ ವ್ಯವಸ್ಥೆಗಳನ್ನು ಪ್ರಶ್ನಿಸುತ್ತಲೇ ಅವನ್ನು ಅರ್ಥಪೂರ್ಣಗೊಳಿಸುವ ಜವಾಬ್ದಾರಿ ಮಹಿಳೆಯ ಮೇಲಿದೆ. ಮದುವೆ ಮತ್ತು ಕುಟುಂಬ ಎಂಬ ಸಾಮಾಜಿಕ ರಚನೆಗಳನ್ನು ಹಾಗೂ ಧರ್ಮ/ ರಾಜಕಾರಣಗಳನ್ನು ಚಲನಶೀಲಗೊಳಿಸುವ ಜವಾಬ್ದಾರಿಯೂ ಹೆಣ್ಮಕ್ಕಳ ಮೇಲಿದೆ.

ಭಾರತದಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ, ಯಾವುದೇ ಚಳುವಳಿಯನ್ನು ಮಹಿಳೆಯೊಬ್ಬಳು ಮುನ್ನಡೆಸಿಲ್ಲ. ಅಂಥ ಸಮರ್ಥ ಮಹಿಳಾ ನಾಯಕತ್ವ ಇನ್ನೂ ರೂಪುಗೊಂಡಿಲ್ಲ. ನಾಯಕತ್ವಕ್ಕೆ ಬೇಕಾದ ತ್ಯಾಗ ಮತ್ತು ಅರಿವು ಹೆಣ್ಣಿಗೆ ಸಾಧ್ಯವಾಗಲಿಕ್ಕಿಲ್ಲ ಎಂದೇ ಅನುಮಾನಿಸಲಾಗುತ್ತದೆ. ನಾಯಕತ್ವ ರೂಪುಗೊಳ್ಳದೇ ಇರುವುದರ ಮೂಲ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿದೆ. ಇದನ್ನು ಎದುರಿಸಿ ಮಹಿಳೆ ನಿಲ್ಲಬೇಕಾದರೆ ಸ್ವ ಬಿಡುಗಡೆ ಅತಿ ಮುಖ್ಯ ಘಟ್ಟವಾಗುತ್ತದೆ. ಇದು ಕತ್ತಿಯಂಚಿನ ದಾರಿ. ‘ನಾನು ಮಹಿಳೆ ಎನ್ನುವುದು ಗೊತ್ತು. ಆದರೆ ಅದು ಅದು ನನ್ನ ಮಿತಿಯಲ್ಲ ಎನ್ನುವುದೂ ಗೊತ್ತು’ - ಎನ್ನುವುದು ಮಹಿಳಾ ಘೋಷವಾಕ್ಯವಾಗಬೇಕು. ಭಾರತೀಯರ ಕೌಟುಂಬಿಕ ಹಾಗೂ ವೈಯಕ್ತಿಕ ಬದುಕಿನಲ್ಲಿ ಲಿಂಗಸೂಕ್ಷ್ಮ ಬದಲಾವಣೆ ತರುವತ್ತ ಜನಚಳುವಳಿಗಳು ಗಮನ ಹರಿಸಬೇಕು. ಅದರಲ್ಲೂ ಮಹಿಳೆಗೆ ಈಗ ಎರಡೆರಡು ಗಹನ ಜವಾಬ್ದಾರಿಗಳಿವೆ: ಒಂದು ಸೆಲ್ಫಿ ಮತ್ತು ಇನ್ನೊಂದು ಗ್ರೂಪಿ. ಕುಟುಂಬ ಮತ್ತು ಸಮಾಜ. ಈ ಎರಡನ್ನೂ ನಿಭಾಯಿಸುವ ಶಕ್ತಿಯನ್ನೂ, ಬೆಸೆಯುವ ಪ್ರೀತಿಯನ್ನೂ ಮಹಿಳೆ ಬೆಳೆಸಿಕೊಳ್ಳಬೇಕು.

ಗೂಡುಗಳ ಬೆಳಗುವ ಜೋತಮ್ಮನಾಗುತ್ತಲೆ ಲೋಕ ಬೆಳಗುವ ದೀವಟಿಗೆಯೂ ಆಗಬೇಕು. ಕಾಲದ ಅಗತ್ಯಕ್ಕೆ ತಕ್ಕಂತೆ ತನ್ನತನವನ್ನು ಮರುರೂಪಿಸಿಕೊಳ್ಳದೆ ಸಂಕಷ್ಟದಲ್ಲಿರುವ ಪುರುಷ ಸಮುದಾಯಕ್ಕೆ ತಾಯಿಯಾಗಿ ಅವರನ್ನೂ ದಾಟಿಸಬೇಕು. ಅದೇ ಮಹಿಳಾ ರಾಜಕಾರಣ. ಅದೇ ಸುಂದರ ನಾಳೆಗಳನ್ನು ತರಬಹುದಾದ ಆಶಾಕಿರಣ.


No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...