Sunday, March 20, 2016

ಸಂವರ್ತ 'ಸಾಹಿಲ್' : ಮೂರು ಅನುವಾದಿತ ಕವಿತೆಗಳು


1
ನಾವಿಬ್ಬರು ವಿದಾಯ ಹೇಳಿದ ಸೇತುವೆಯ ಮೇಲೆ
ವಾತಾವರಣ ನನ್ನೀ ಕಣ್ಗಳನ್ನು ಒದ್ದೆಯಾಗಿಸುತ್ತವೆ.
ಉಣ್ಣೆಯ ಕೈಚೀಲ ತೊಟ್ಟ ಬೆರಳಿಂದ ಕಣ್ಣೀರ ಒರೆಸಿಕೊಳ್ಳುತ್ತಾ
ಒಳಗೆ ಮೊಳಕೆಯೊಡೆದ ಪ್ರೇಮವನ್ನು ನಿರಾಕರಿಸುತ್ತೇನೆ.
ಸೇತುವೆಯ ಮೇಲ್ನಿಂತು ಅಂದುಕೊಳ್ಳುತ್ತೇನೆ:
ಇದೇನೂ ಅಲ್ಲ. ಸೊಬಗು, ಶರಾಬು ಅಮಲೇರಿಸಿದೆ.
ಆದರೆ ಹೃದಯ-ಕೊಳಲು ಉಸುರುವ ರಾಗ
ಬೇರೆಯದೇ ಆಗಿದೆ. ಅದು ಸುಳ್ಳಾಗಿರಲು ಎಲ್ಲಿ ಸಾಧ್ಯವಿದೆ?
ಗಾಳಿ ಕೂದಲ ನೇವರಿಸುತ್ತಿರಲು ಸಂಕದ ಮೇಲೆ ನಿಂತಿರುವೆ ನಾನು
ಜೀವ ತುಡಿದಿದೆ ಜಿಗಿಯಲು. ಮೂರ್ಖ ನೀನು. ನಿರ್ಲಕ್ಷಿಸುವೆ ನಾನು.
ಮನದ ಅಶ್ವ ಎತ್ತ ತಿರುಗಿದರೂ ಹೃದಯವೇ ಇಲ್ಲಿ ಸಾರಥಿ
ಒಪ್ಪಿಕೊಳ್ಳುವೆ ಅರ್ಧ ದಾರಿ ಸಾಗುವ ಮುನ್ನವೇ ನಾನು.

~ ವೆಂಡಿ ಕೋಪ್ 
ಕನ್ನಡಕ್ಕೆ: ಸಂವರ್ತ 'ಸಾಹಿಲ್'
***

2
 
ದೂರಾಗಿದ್ದರೂ ಕನಸಿನ ಬೀದಿಯಲ್ಲಿ ಮತ್ತೊಮ್ಮೆ ಸಿಗುವುದು ಸಾಧ್ಯ,
ಬಾಡಿದ ಹೂವು ಹಳದಿಯಾದ ಪುಟಗಳ ನಡುವೆ ಸಿಗುವುದು ಸಾಧ್ಯ.
ಒಡೆದು ಚೂರಾದ ಮಂದಿಯಲ್ಲಿ ಹುಡುಕು ಪ್ರೀತಿಯ ಮುತ್ತಿಗಾಗಿ ನೀನು,
ಪಾಳು ಬಿದ್ದ ಜಮೀನಿನ ನಡುವಿನಲ್ಲಿ ನಿನಗೀ ತೆನೆ ಸಿಗುವುದು ಸಾಧ್ಯ.
ಲೋಕದ ಬಗೆಗಿನ ನೋವು ಗೆಳೆಯರ ಕುರಿತ ದುಃಖವನ್ನೂ ಸೇರಿಸು,
ಮದಿರೆಗೆ ಮದಿರೆ ಸೇರಿದಾಗ ಬೇರೆಯದೇ ನಶೆ ಸಿಗುವುದು ಸಾಧ್ಯ.
ನೀನು ದೇವರೂ ಅಲ್ಲ ಮತ್ತೆ ನನ್ನೀ ಪ್ರೀತಿಯು ಯಕ್ಷಲೋಕದ್ದೂ ಅಲ್ಲ,
ರಕ್ತ ಮಾಂಸ ತುಂಬಿದ ಜೀವಗಳು ಪರದೆಯಿರದೆ ಸಿಗುವುದು ಸಾಧ್ಯ.
ಯಾವ ಮಾತಿಗಾಗಿ ನನ್ನನಿಂದು ಸಿಲುಬೆಗೇರಿಸಲಾಯಿತೋ,
ನಾಳೆ ಲೋಕಗೀತೆಯಲ್ಲಿ ನಿಮಗದು ಮತ್ತೆ ಸಿಗುವುದು ಸಾಧ್ಯ.
ಕಳೆದ ಕಾಲವೂ ಇಲ್ಲವೀಗ ಕಳೆದ ಕಾಲದ ನೀನೂ ಸಹ ಇಲ್ಲ 'ಫ಼ರಾಜ್',
ದಣಿದ ಜೀವಕ್ಕೆ ಇಂಥಾ ಮರಭೂಮಿಯಲಿ ಬಿಸಿಲ್ಗುದುರೆ ಸಿಗುವುದು ಸಾಧ್ಯ.

ಉರ್ದು ಮೂಲ: ಅಹ್ಮೆದ್ ಫ಼ರಾಜ್
ಕನ್ನಡಕ್ಕೆ: ಸಂವರ್ತ 'ಸಾಹಿಲ್'
 ***


3

ಮನೆಯನ್ನು ತೊರೆಯುವುದಿಲ್ಲ ಯಾರೂ
ಹಾಗೆ ಸುಮ್ಮನೆ
ಮನೆ ತಿಮಿಂಗಿಲದ ತೆರೆದ ಬಾಯಿ ಆಗದೆ.
ಸರಹದ್ದಿನತ್ತ ಓಡುವುದು
ಊರವರೆಲ್ಲಾ ಅತ್ತ ಧಾವಿಸುವುದನ್ನು
ನೋಡಿದಾಗಲೇ.
ನೆರಹೊರೆಯವರು ಗಂಟಲಲ್ಲಿ ಉಸಿರು
ಕಟ್ಟಿಕೊಂಡು
ನಿಮಗಿಂತ ವೇಗವಾಗಿ
ಓಡುವುದು 
ನಿಮ್ಮೊಂದಿಗೆ ಶಾಲೆಗೇ ಹೋಗುತ್ತಿದ್ದ
ಖಾರ್ಖನೆಯ ಹಿಂದೆ ಉತ್ಕಟವಾಗಿ 
ಚುಂಬಿಸಿದ ಹುಡುಗ 
ತನಗಿಂತ ಎತ್ತರದ ಬಂದೂಕನ್ನು ಹಿಡಿದಾಗ.
ಮನೆ ಬಿಟ್ಟು ಓಡುವುದು 
ಮನೆ ಇರಲು ಬಿಡದಾಗ.
ತೊರೆಯುವುದಿಲ್ಲ ಮನೆಯನ್ನು ಯಾರೂ
ಮನೆಯೇ ಅಟ್ಟಿಸದೇ ಹೋದರೆ
ಧರೆ ಹೊತ್ತಿ ಉರಿಯದೆ 
ಒಡಲ ರಕ್ತ ಕುದಿಯದೆ
ಕಾಯಿಸಿದ ಚೂರಿ ನಿಮ್ಮ 
ಕತ್ತನ್ನು ದಿಟ್ಟಿಸಿ ನೋಡದಿರೆ
ಆದರೂ ಹೊತ್ತಿಗೂ
ಉಸಿರುಸಿರು 
ರಾಷ್ಟ್ರಗೀತೆಯನ್ನು ಜಪಿಸುತಿತ್ತು
ವಿಮಾನ ತಾಣದ ಬಚ್ಚಲಲ್ಲಿ 
ಪಾಸ್ಪೋರ್ಟ್ ಹರಿದುಹರಿದು ಬಿಕ್ಕಳಿಸುವಾಗಲೂ
ಪ್ರತಿ ಹರಿದ ಕಾಗದ ಮರಳಲಾಗದ ಸೂಚನೆ
ಎಂದು ತಿಳಿದಿರುವಾಗಲೂ.
ತಿಳಿದಿರಬೇಕು ನಿಮಗೆ
ದೋಣಿಗೆ ತುಂಬುವುದಿಲ್ಲ ಯಾರೂ
ತಮ್ಮ ಮಕ್ಕಳನ್ನು 
ನಾಡು ನೀರಿಗಿಂತ ಭೀಕರವಾಗದೆ 
ನೀರು ನಾಡಿಗಿಂತ ಪ್ರಶಾಂತ ಎಂದನಿಸದೆ 
ಯಾರೂ ತಮ್ಮ ಅಂಗೈಯನ್ನು ಸುಟ್ಟುಕೊಳ್ಳುವುದಿಲ್ಲ
ರೈಲುಗಾಡಿಯ ಕೆಳಗಡೆ
ಲಾರಿಯ ಒಳಗಡೆ 
ಕಾಗದದ ಚೂರುಗಳನ್ನು
ತಿನ್ನುತ್ತಾ ಹಗಲಿರುಳು
ಕಳೆಯುವುದಿಲ್ಲ ಯಾರೂ 
ಕ್ರಮಿಸಿದ ದೂರ 
ದಾರಿಯ ಕಷ್ಟಕ್ಕಿಂತ 
ಹೆಚ್ಚು ಮುಖ್ಯವಾಗದೇ.
ಬೇಲಿಯ ಕೆಳಗಿನಿಂದ
ಯಾರೂ ನುಸುಳುವಿದಿಲ್ಲ 
ಒದೆ ತಿನ್ನಲು ಇಚ್ಚಿಸುವುದಿಲ್ಲ 
ನಿರಾಶ್ರಿತರ ಶಿಬಿರಕ್ಕೆ ಹಂಬಲಿಸುವುದಿಲ್ಲ 
ಗಾಯಗೊಂಡ ದೇಹದ ಭಾಗವ 
ತಪಾಸಣೆಗೆ ಒಳಪಡಿಸಲು ಹಿಂಜರಿಯುವುದಿಲ್ಲ 
ಕಾರಾಗ್ರಹಕ್ಕೆ ಹೆದರುವುದಿಲ್ಲ
ಬಂದೀಖಾನೆ
ಉರಿಯುತ್ತಿರುವ ಊರಿಗಿಂತ 
ಸುರಕ್ಷಿತವಾಗದೆ ಹೋದರೆ
ಇರುಳಿಡೀ ಒಬ್ಬ ಕಾವಲುಗಾರ
ತಂದೆಯ ವಯಸ್ಸಿನ 
ಒಂದು ಬಂಡಿ ಜನರು
ಪಹರೆ ನೀಡುವುದಕ್ಕಿಂತ 
ಉತ್ತಮ ಅನ್ನಿಸದೆ ಹೋದರೆ.
ಯಾರಿಂದಲೂ ಸಹಿಸಲಾಗದು
ಯಾರಿಂದಲೂ ಜೀರ್ಣಿಸಿಕೊಳ್ಳಲಾಗದು
ಚರ್ಮವನ್ನು ಅಷ್ಟು ದಪ್ಪ ಮಾಡಿಕೊಳ್ಳಲಾಗದು
ಎಂದು ಅನಿಸದೆ.
"ಹಿಂದೆ ಹೋಗಿ
ಕಪ್ಪು ಜನಗಳೇ
ನಿರಾಶ್ರಿತರೇ 
ಕೊಳಕು ಜನಗಳೆ
ವಲಸೆಗಾರರೆ
ಆಧಾರವನ್ನು ಇದುರು ನೋಡುವವರೇ
ನಮ್ಮ ದೇಶದ ಸವಲತ್ತನ್ನು ಹೀರುವವರೇ
ಕೈಯನ್ನು ನಾಚಿಕೆಯಿಲ್ಲದೆ ಮುಂದೆ ಒಡ್ಡುವವರೇ
ಗಬ್ಬು ನಾರುವವರೇ
ನಿಮ್ಮ ದೇಶವನ್ನು ಕೊಳಕು ಮಾಡಿ
ನಮ್ಮ ದೇಶದಲ್ಲಿ ಧೂಳೆಬ್ಬಿಸಲು ಬಂದವರೇ..."
ಇಂಥಾ ಮಾತುಗಳು 
ಜನರ ನಿರ್ದಯ ನೋಟ
ಇವ್ಯಾವನ್ನು ಕಡೆಗಣಿಸುವುದಿಲ್ಲ 
ಮಾತಿನ ವರಸೆ
ಹರಿದು ನೇತಾಡುತ್ತಿರುವ
ಭುಜಕ್ಕಿಂತ 
ಹಗುರ ಎಂದು ಅನುಭವ ಹೇಳದೆ.
ಅಥವಾ
ಕೊಚ್ಚುವ ಮಾತು
ತೊಡೆ ನಡುವೆ 
ಹದಿನಾಲ್ಕು ಮಂದಿಗಿಂತ ವಾಸಿ
ಎಂದು ಅನಿಸದೆ 
ಅವಮಾನಗಳನ್ನು 
ಹೊಟ್ಟೆಗೆ ಹಾಕಿಕೊಳ್ಳುವುದು ಸುಲಭ
ಮೂಳೆ
ಅವಶೇಷ 
ಛಿದ್ರಗೊಂಡ ಮಗುವಿನ ದೇಹವನ್ನು 
ನೋಡಬೇಕಾದ ಸ್ಥಿತಿಗಿಂತ ಅಡ್ಡಿಲ್ಲ
ಎಂದು ಅನಿಸದೆ ಹೋದರೆ
ಹೋಗಲಿಚ್ಚಿಸುತ್ತೇನೆ ಮನೆಗೆ
ಆದರೆ
ಮನೆ ಈಗ ತಿಮಿಂಗಿಲದ ತೆರೆದ ಬಾಯಿ
ಮನೆಯೀಗ ಬಂದೂಕಿನ ನಳಿ
ಮನೆಯನ್ನು ತೊರೆಯಲು ಇಚ್ಚಿಸುವುದಿಲ್ಲ ಯಾರೂ
ಮನೆಯೇ 'ಓಡು' ಎಂದೆನದೆ
ಮನೆಯೇ "ಬಟ್ಟೆ ತುಂಬಿಸುವಷ್ಟು ಸಮಯವಿಲ್ಲ
ಓಡು, ಮರಭೂಮಿಯ ಆಚೆಗೆ ಹೋಗು
ಸಮುದ್ರ ದಾಟು 
ಮುಳುಗು
ಹಸಿದಿರು 
ಭಿಕ್ಷೆ ಬೇಡು 
ಸ್ವಾಭಿಮಾನವ ಮರೆತು ಬಿಡು
ಪ್ರತಿಷ್ಠೆಯ ಮರೆತು ಬಿಡು
ಬದುಕುಳಿಯುವುದು ಮುಖ್ಯ"
ಎಂದೆನದೆ
ತೊರೆಯುವುದಿಲ್ಲ ಯಾರೂ ಮನೆಯನ್ನು
ಹೆದರಿ ದಣಿದ ಸ್ವರದಲ್ಲಿ ಮನೆಯೇ:
"
ಹೋಗು, ನನ್ನಿಂದ ದೂರ ಹೋಗು
ಇಲ್ಲೆನಾಗುತ್ತಿದೆಯೋ ತಿಳಿಯದು
ಆದರೆ ಜಗತ್ತಿನ ಯಾವ ಮೂಲೆಯೂ
ಇಲ್ಲಿಗಿಂತ ಹೆಚ್ಚು ಸುರಕ್ಷಿತ" ಎಂದು ಹೇಳದೆ ಇದ್ದರೆ.

ಮೂಲ: ವಾರ್ಸನ್ ಶೈರ್
ಕನ್ನಡಕ್ಕೆ: ಸಂವರ್ತ 'ಸಾಹಿಲ್'
***

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...