Wednesday, March 02, 2016

ವಾಲ್-ಇಯೂ ಪ್ರಸನ್ನರೂ ದೇಶಪ್ರೇಮವೂ...

---ಕ್ರೌಂಚವಾಲ್-ಇ ಎಂಬ ಸಿನೆಮಾ ನೋಡುವಾಗ, ಪ್ರಸನ್ನ ಎಂಬ ಹಿರಿಯರ ಸುಸ್ಥಿರ ಬದುಕಿನ ಪರಿಕಲ್ಪನೆಯ ಉದ್ದೇಶವನ್ನ ನೋಡುವಾಗ,  ಹೋರಾಟಗಾರ ಎಂಡಿಎನ್‌ರನ್ನ ನೆನೆಸುವಾಗ ’ದೇಶಪ್ರೇಮ’ ಎಂಬ ಸಾಂಕೇತಿಕತೆಗೆ ಹೆಚ್ಚಾಗುತ್ತಿರುವ ಗದ್ದಲವನ್ನ ಹೇಗೆ ನೋಡಬೇಕು?- ಈ ಪ್ರಶ್ನೆಯೊಂದಿಗೆ ಈ ಲೇಖನ ಶುರುಮಾಡುತ್ತಿದ್ದೇನೆ.

ಸಹನೆ ಅಸಹನೆಯೊಳಗಿನ ಹೋರಾಟದ ಕೂಗಿನಲ್ಲಿ ಯಾವಾಗಲೂ ಅನ್ನ ನೀಡುವ ಕೃಷಿ ಹಾಗೂ ಕೃಷಿಕನನ್ನ ನೋಡಬೇಕಾಗಿದೆ ಹಾಗೂ ಅದೇ ನೆಲೆಗಟ್ಟಿನಲ್ಲಿ ಎಲ್ಲವನ್ನೂ ನೋಡಬೇಕಿದೆ. ಇಲ್ಲಿ ಯಾವುದು ಈಗ ಮುಖ್ಯ ಎನ್ನುವುದು ಅಮುಖ್ಯವಾಗಿರುವ ಕಾರಣ ಆಡಳಿತ ಹಾದಿ ತಪ್ಪಿದೆ ಎಂದೇ ನಾನು ಭಾವಿಸುತ್ತೇನೆ. ಒಂದೆಡೆ ಕಳಸಾ ಬಂಡೂರಿ ಹೋರಾಟ ಮಾಡುತ್ತಿರುವ ರೈತರನ್ನ ಬಂಧಿಸಿ ಫಸಲ್ ಬಿಮಾ ಯೋಜನೆಯನ್ನ ತರುತ್ತಿರುವ ಆಡಳಿತವನ್ನ ಯಾವ ರೀತಿ ನಾವು ನೋಡಬೇಕು? ಇವತ್ತು ಕೋಟಿ ಕೋಟಿ ಬಂಡವಾಳವನ್ನ ತರುತ್ತಿರುವ ಮೇಕ್ ಇನ್ ಇಂಡಿಯಾ ಪರ ತುಂಬಾ ಜನರಿದ್ದಾರೆ. ಆದರೆ ಅದರಿಂದ ಎಷ್ಟು ಉದ್ಯೋಗ ನಿಜವಾಗಿ ಉದ್ಭವವಾಗಬಲ್ಲವು ಎಂಬ ಸಂದೇಹದೊಂದಿಗೆ ನಾವು ನಮ್ಮ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಎಷ್ಟು ಜನ ರೈತರು ಹಾಗೂ ಎಷ್ಟು ಜನ ಉದ್ಯಮಿಗಳು ಇದ್ದಾರೆ ಎಂಬುದನ್ನ ನೋಡಬೇಕಿದೆ.

ನಮ್ಮಲ್ಲಿ ಇವತ್ತು ಯಾವುದು ಸತ್ಯ ಎನ್ನುವುದು ತಿಳಿಯಬೇಕಿದೆ. ಸ್ವದೇಶಿ ಸ್ವದೇಶಿ ಎಂದೇ ಕಿರಿಚಾಡುತ್ತಿದ್ದ ಮಂದಿ ಮೇಕ್ ಇನ್ ಇಂಡಿಯಾ ಎನ್ನುತ್ತ ಖಾದಿ ಪ್ಯಾಂಟಿನ ಒಳಗೆ ವಿದೇಶಿ ಬ್ರ್ಯಾಂಡಿನ ಅಂಡರ್‌ವೇರ್ ಧರಿಸಿದ್ದಾರೆ. ಇದೆಲ್ಲದರ ನಡುವೆ ಪ್ರಸನ್ನರ ಸುಸ್ಥಿರ ಬದುಕಿನ ಅದಮ್ಯ ಅಭಿಲಾಷೆಯನ್ನ ಈ ತರಹದ ಜನರೇ ಮುಳುಗಿಸಿಬಿಟ್ಟಿದ್ದಾರೆ. ಅಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಛೇರಿ ಮುಂದೆ ಹತ್ತಿ ಬೆಳೆದ ರೈತರು ಹೋರಾಟ ನಡೆಸುತ್ತಿದ್ದಾರೆ. ರಾಸಸದ ಆಧಾರದ ಮೇಲೆ ಬೆಳೆದಿರುವ ಭಾಜಪ ಇವತ್ತು ಸರ್ಕಾರ ನಡೆಸುತ್ತಿದೆ. ಗಾಂಧಿಯನ್ನ ಸ್ವಚ್ಛಭಾರತಕ್ಕಾಗಿ ಕಿಡಿಯಂತೆ ಬಳಸುವ ಇವರಿಗೆ ಅದೇ ಗಾಂಧಿ ಬೆಂಕಿಯಾಗೋದು ಬೇಕಿಲ್ಲ. ಅದಕ್ಕೇನೆ ಗಾಂಧಿಯನ್ನ ಅಲ್ಲಿಗೆ ಸೀಮಿತಗೊಳಿಸಿದ್ದಾರೆ. ಒಬ್ಬ ಯೋಧನನ್ನ ಅಪ್ರತಿಮ ದೇಶಭಕ್ತ ಎನ್ನುವ ಜನ ರೈತನಿಗೆ ಆ ಸ್ಥಾನಮಾನ ನೀಡಲು ಹಿಂಜರಿಯುತ್ತಾರೆ. ಯೋಧನನ್ನ ಯೋಧನನ್ನಾಗಿಸಲು ಬೇಕಾಗುವ ಆಹಾರವನ್ನ ಉತ್ಪಾದಿಸುವ ರೈತ ಕೇವಲವಾಗಿಬಿಡುತ್ತಾನೆ. ಹಾಗಾದರೆ ರೈತ ದೇಶಪ್ರೇಮಿಯಲ್ಲವೇ?  ಈ ಹೊತ್ತಿನಲ್ಲೇ ನನಗೆ ಎಂಡಿಎನ್ ನೆನಪಾಗುತ್ತಾರೆ.
ರೈತ ಎಂದರೆ ಭಾರತ : ಭಾರತ ಎಂದರೆ ರೈತ
ರೈತರಿಗಿನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ : ರೈತರು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧರಾಗಬೇಕು
ಎಂಬ ಘೋಷಣೆಗಳು ಗುನುಗುನಿಸುತ್ತವೆ.

ಇಡೀ ವಿಶ್ವವೇ ಹೀಗೆ ಬದಲಾಗುತ್ತಿರುವಾಗ ನಾವೇಕೆ ಬದಲಾಗಬಾರದು ಎಂಬ ಉಡಾಫೆಯ ಪ್ರಶ್ನೆ ಕೇಳೋರಿಗೆ ನಾಚಿಕೆಯಾಗಬೇಕು. ಒಂದಿಷ್ಟು ದಿನ ರೈತರು ತರಕಾರಿ ಹಣ್ಣು ಹಂಪಲುಗಳನ್ನ ಹಾಲನ್ನ ನಗರಗಳಿಗೆ ಬರದಂತೆ ತಡೆದುಬಿಟ್ಟರೆ ಇವರಿಗೆ ರೈತರ ದೇಶಪ್ರೇಮ ಅರ್ಥವಾಗಬಹುದು. ಆ ಯೋಜನೆ ಈ ಯೋಜನೆ ಎನ್ನುವ ಸರ್ಕಾರ ವೈಜ್ಞಾನಿಕ ಬೆಲೆ ಕೊಡಲಿ ಬೆಳೆದಿರುವ ಬೆಳೆಗೆ. ರೈತರು ಏನು ಕೇಳುತ್ತಿದ್ದಾರೆ ಅದನ್ನ ಕೊಡಲಿ. ಬಂಡವಾಳಶಾಹಿತನ ಜನರನ್ನ ದಿಕ್ಕಿಲ್ಲದಂತೆ ಮಾಡುತ್ತಿದೆ. ನಾವು ಗಣಕಯಂತ್ರಗಳಿಂದ ಅನ್ನ ಬೆಳೆಯುವುದು ಸಾಧ್ಯವೇ? ಯಂತ್ರಗಳಿಂದ ಅನ್ನ ಬೆಳೆಯುವುದು ಸಾಧ್ಯವೇ? ಈ ದಿಕ್ಕಿಲ್ಲದ ಸಂಜಾತನನ್ನ ತಿನ್ನಲಾಗದ ಕಾಂಚಾಣದ ಮಾಯೆಯಾಳುತ್ತಿದೆ.

ವಾಲ್-ಇ ಎಂಬ ಸಿನೆಮಾ ನೋಡಬೇಕು. ಹೇಗೆ ಯಂತ್ರಪ್ರೇಮಿ ಮಾನವ (ಯಂತ್ರಪ್ರೇಮಿಯನ್ನ ಹಾಗೆ ಕರಿಯಬಹುದೆ?!! ) ಕೈಗಾರೀಕರಣದ ಹುಚ್ಚು ಹಪಾಹಪಿಗೆ ಬಿದ್ದ ಮೇಲೆ ಬೆಳೆಯುವ ತ್ಯಾಜ್ಯವನ್ನ ವಿಶ್ವವಾಗಿಸಿ ಭುವಿಯಿಂದ ಪಲಾಯನಗೈಯುತ್ತಾನೆ ಎಂದು. ತದನಂತರ ಭುವಿಯಲ್ಲಿ ಒಂದು ಸಸಿ ಸಿಕ್ಕುವ ಕಾರಣ ಚಲನೆ ಸಾಧ್ಯ ಎನ್ನಿಸಿ ಭುವಿಗೆ ವಾಪಾಸಾಗಿ ಗಿಡ ನೆಡಲು ಶುರುವಾಗುತ್ತಾನೆ. ಇವತ್ತು ಎಷ್ಟೋ ಟನ್ನುಗಳಷ್ಟು ಇ-ತ್ಯಾಜ್ಯವನ್ನ ಮುಂದುವರಿದ ದೇಶಗಳು ಏಷಿಯಾದ ಆಫ್ರಿಕಾದ ಹಿಂದುಳಿದ ಮುಂದುವರೆಯುತ್ತಿರುವ ದೇಶಗಳಿಗೆ ರಫ್ತು ಮಾಡುತ್ತಿವೆ. ಆದರೆ ನಾವು ಇಷ್ಟೆಲ್ಲ ಗೊತ್ತಿದ್ದರೂ ಯಾವ್ಯಾವುದೋ ಕ್ಷುಲ್ಲಕಗಳಿಗೆ ತಲೆಕೆಡಿಸಿಕೊಂಡಿದ್ದೆವೆ. ಮೇಕ್ ಇನ್ ಇಂಡಿಯಾದ ಮೂಲಕ ಕೈಗಾರಿಕಾ ಕ್ರಾಂತಿ ಮಾಡಲು ಹೊರಟಿರುವ ನಮ್ಮ ಪ್ರಧಾನಿಗೆ ನಾನು ಕೇಳಬೇಕಿದೆ- ವಿಷಾನಿಲವನ್ನ ಬಿಟ್ಟುಕೊಂಡು ನಮ್ಮಲ್ಲಿರುವ ಒಳ್ಳೆ ಗಾಳಿಯನ್ನ, ವಿಷದ್ರವ್ಯ ತ್ಯಾಜ್ಯ ಬಿಟ್ಟು ಒಳ್ಳೆಯ ನೀರನ್ನ ಯಾಕೆ ಕೆಡಿಸಿಕೊಳ್ಳೋದು?

ಇಷ್ಟಾದರೂ ಕೈಗಾರಿಕರಣವೇ ಬೇಕು ಎಂದಾದರೆ ಮೇಡ್ ಇನ್ ಇಂಡಿಯಾ ಮಾಡಲಿ. ಆದರೆ ಒಂದು ಮಾತನ್ನ ನಾವು ನೆನಪಿಟ್ಟುಕೊಳ್ಳಲೇಬೇಕು ಯಂತ್ರಗಳಿಲ್ಲದಿದ್ದರೂ ಮೋಟಾರುಗಳಿಲ್ಲದಿದ್ದರೂ ಕಂಪ್ಯೂಟರ್‌ಗಳಿಲ್ಲದಿದ್ದರೂ ಬದುಕಬಹುದು ಆದರೆ ಒಳ್ಳೆಯ ನೀರು ಒಳ್ಳೆಯ ಗಾಳಿ ಹಾಗೂ ಆಹಾರ ಇರದಿದ್ದರೇ?!....
 
ಕೈಗಾರಿಕೆಯಿಂದ ದುಡ್ಡು ಸಿಗುತ್ತೆ ಎಂದೇ ತಿಳಿದವರು ಗಾಳಿ ನೀರು ಮಣ್ಣು ಇವುಗಳ ನಿಜ ಬೆಲೆ ತಿಳೀಬೇಕು. ಇವತ್ತು ಕೆಲವು ಕಡೆ ಆಹಾರಕ್ಕಾಗಿ ಲೂಟಿ ನಡೆಯುತ್ತಿದೆ. ನಾಳೆ ಸೋ ಕಾಲ್ಡ್ ಮುಂದುವರೆದಿರುವ ಹಾಗೂ ಇದ್ದ ಕೃಷಿ ಕೆಡಿಸಿ ಮಣ್ಣು ನೀರು ಗಾಳಿಯನ್ನ ಕೆಡಿಸಿ ಕೈಗಾರಿಕೆಯಿಂದ ಬೆಳೀತೇವೆ ಎಂದುಕೊಂಡ ದೇಶಗಳು ದರೋಡೆಗಿಳಿಬೇಕಾಗುತ್ತದೆ. ಆಹಾರ ಅಭದ್ರತೆ ಜಗತ್ತನ್ನ ಜರ್ಜರಗೊಳಿಸುತ್ತದೆ. ಒಂದೊಂದು ತುತ್ತಿಗೂ ಹಾಹಾಕಾರ ಶುರುವಾಗುತ್ತದೆ. ಈಗಲೇ ತಿನ್ನುವ ಅನ್ನದಲ್ಲಿ ಗಾಳಿಯಲ್ಲಿ ನೀರಿನಲ್ಲಿ ವಿಷ ಸೇರುತ್ತಿದೆ. ಹೀಗೆ ಮುಂದುವರಿದಲ್ಲಿ ಯಾವುದೂ ಇವರ ರಕ್ಷಣೆಗೆ ನಿಲ್ಲಲಾರವು. ಏನು ಮಾಡೋದು? ಈಗಿನ ಸರ್ಕಾರ ಏನೇ ಮಾಡಿದರೂ ಸಮರ್ಥಿಸಿಕೊಂಡು ಬೊಬ್ಬೆ ಹೊಡಿಯುವ ಜನರಿದ್ದಾರೆ.

ಪ್ರಸನ್ನರೂ ಎಂಡಿಎನ್‌ರೂ ಗಾಂಧಿಯೂ ಹೀಗೆ ನೆನಪಗುತ್ತಾರೆ. ಆದರೆ ಇದನ್ನೆಲ್ಲ ತಿಳಿದೂ ಆತ್ಮಪರೀಕ್ಷೆಗಿಳಿಯದ ಮತ್ತೆ ಮತ್ತೆ ಅಗತ್ಯಕ್ಕಿಂತ ಹೆಚ್ಚಾಗಿ ಕೈಗಾರೀಕರಣವನ್ನೇ ಸಮರ್ಥಿಸುವ ಮುಖಗಳನ್ನ ಮೂರ್ಖರೆನ್ನದೆ ಬೇರೆ ದಾರಿಯಿಲ್ಲ.
ಇದು ಸ್ವದೇಶಿ ಮೇಕ್ ಇನ್ ಇಂಡಿಯಾ. ಇವತ್ತಿನ ಪರಿಸ್ಥಿತಿ ಎಲ್ಲಿಗೆ ಬಂದು ನಿಂತುಬಿಟ್ಟಿದೆ ಎಂದರೆ ಇವರ ಸ್ವದೇಶಿ ನಿಲುವುಗಳ ವಿರುದ್ಧ ಏನಾದರೂ ಮಾತನಾಡಿಬಿಟ್ಟರೆ ಕೆಟ್ಟ ಕೆಟ್ಟ ಹಿಂಸಾ ವಾಕ್ಯಗಳ ಸ್ಲೋಗನ್‌ಗಳನ್ನ ತೋರಿಸುತ್ತ ಜಾಥಾ ಹೊರಡುತ್ತಾರೆ. ನಡುವೆ ಎಲ್ಲಾದರೂ ಹೊಟ್ಟೆ ಹಸಿದರೆ ಡೊಮಿನೊಸ್ ಕೆಎಫ್‌ಸಿ ಮೆಕ್‌ಡೊನಾಲ್ಡ್ಸ್‌ನಲ್ಲಿ ತಿಂದು ಸ್ವದೇಶಿ ಸ್ವದೇಶಿ ಎಂದು ಕೂಗುತ್ತಾರೆ. ಇವರ ಬಂಡವಾಳವೆಂದರೆ ’ಸ್ವದೇಶಿ ಸ್ವದೇಶಿ’ ಎಂದು ಕೂಗುವಾಗ ಬಳಸುವ ಭಾಷೆಯಷ್ಟೇ. ಇಲ್ಲಿ ಅದೊಂದೇ ಸ್ವದೇಶಿ.

ನಮ್ಮ ದೇಶದ ಇಂದಿನ ದೇಶಪ್ರೇಮದ ಗದ್ದಲ ನೋಡಿದರೆ ನಗು ಬರುತ್ತದೆ. ಇಲ್ಲಿ ಭ್ರಷ್ಟಾಚಾರ ದೇಶವಿರೋಧಿಯಲ್ಲ, ಕ್ರಿಮಿನಲ್‌ಗಳು ಚುನಾವಣೆಗೆ ನಿಲ್ಲೋದು ದೇಶವಿರೋಧಿಯಲ್ಲ, ಅರಣ್ಯನಾಶ ದೇಶವಿರೋಧಿಯಲ್ಲ, ಕೈಗಾರೀಕರಣ ದೇಶವಿರೋಧಿಯಲ್ಲ, ಖಾಸಗೀಕರಣ....ಹೀಗೆ ಎಷ್ಟೋ ವಿಷಯಗಳಿವೆ. ಆದರೆ ಒಂದು ಘೋಷಣೆ ದೇಶ ವಿರೋಧಿಯಾಗುತ್ತದೆ. ನಮ್ಮ ದೇಶ ನಿರಂಕುಶವಾದದಡೆಗೆ ದಾಪುಗಾಲಿಡುತ್ತಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು. ಯಾರ ಮೇಲೂ ಯಾರಿಗೂ ಏನನ್ನೂ ಹೇರಲಾಗದು. ಸ್ವದೇಶಿ ಎಂಬ ಒಂದು ಹುನ್ನಾರದ ದನಿಯಿಂದ ಏಕಭಾಷೆ ಏಕಸಂಸ್ಕೃತಿಯನ್ನ ಹೇರಿಕೆ ಮಾಡಲಾಗದು. ಯಾವತ್ತೂ ಯುದ್ಧದಿಂದ ಶೋಕ ಹಾಗೂ ದ್ವೇಷವನ್ನಷ್ಟೇ ಗಳಿಸಬಹುದು ಆದರೆ ಪ್ರೀತಿ ಎಂಬುದಕ್ಕೆ ಮಾತ್ರ ಶಾಂತಿ ತರುವ ಶಕ್ತಿಯಿದೆ. ಇದು ತಿಳಿಯಲಾರದಷ್ಟೂ ಕಷ್ಟದ ಮಾತಲ್ಲ.

ಈ ಸಾಂಕೇತಿಕ ವಿಷಮವಲಯದಲ್ಲೇ ಸಾಯುವವರು ಚಲಿಸದ ಸಂಸ್ಕೃತಿಯಿಂದ ಅವನತಿಯಾಗುವ ಹುನ್ನಾರದಿಂದ ಸುಸ್ಥಿರ ಬದುಕಿಗಾಗಿ ಗಾಂಧೀ ಕನಸಿನ ಕೃಷಿ ಸಮಾಜವನ್ನ ಪರಿಸರಕ್ಕಾಗಿ ತುಡಿಯುವ ಸಮಾಜವನ್ನ ಕಟ್ಟಲು ಅಣಿಯಾಗಬೇಕಿದೆ. ಸಮತೋಲನಕ್ಕಾಗಿ ತುಡಿಯಬೇಕಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ನೀರು ಗಾಳಿ ಮಣ್ಣು ಇರುವವರೇ ಸೂಪರ್ ಪಾವರ್ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಇದು ಆಳುವವರಿಗೆ ತಿಳಿಯುವುದೇ ಎಂಬ ಪ್ರಶ್ನೆಯೊಂದಿಗೆ-ಕೊನೆಯ ಮಾತು-

ನಮ್ಮ ದೇಶದ ಎಲ್ಲ ವಿದ್ಯಾರ್ಥಿಗಳೂ ಚಿಂತಿಸಲೇಬೇಕಿದೆ. ಇವತ್ತು ದೆಹಲಿಯಲ್ಲಿ ನಡೆದ ಘಟನೆಯ ಸ್ಪಷ್ಟತೆ ಇರದಿದ್ದರೂ ವಿದ್ಯಾರ್ಥಿ ಮುಖಂಡರನ್ನ ಬಂಧಿಸಿಯಾಗಿದೆ. ಸರ್ಕಾರ ೫ ವರ್ಷಗಳಿಗೊಮ್ಮೆ ಬದಲಾಗುತ್ತದೆ. ಈಗ ಬಂಧಿಸಿರುವುದನ್ನ ಕುರುಡಾಗಿ ಕಿವುಡಾಗಿ ಸಮರ್ಥಿಸಿಕೊಂಡುಬಿಟ್ಟರೆ ಸರ್ಕಾರ ನಿರಂಕುಶವಾಗುತ್ತದೆ. ದೊಡ್ಡ ದುರಂತಕ್ಕೆ ಇದು ನಾಂದಿ ಹಾಡುತ್ತದೆ. ಇದೇ ಟ್ರೆಂಡ್ ಮುಂದೆಯೂ ಮುಂದುವರಿಯುತ್ತದೆ. ಮುಂದಿನ ಸರ್ಕಾರವೂ ತನ್ನ ಸಿದ್ಧಾಂತ ಯೋಚನೆಯನ್ನ ವಿರೋಧಿಸುವ ಶಕ್ತಿಗಳನ್ನ ವ್ಯವಸ್ಥಿತವಾಗಿ ಹಣಿಯುತ್ತವೆ. ಅರ್ಥ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಈ ದೇಶದಲ್ಲಿ ಮಾತನಾಡೋದೂ ಕಷ್ಟವಾದೀತು.


2 comments:

  1. nijavaglu vitamaan, ondu olleya alochane mattu ondu olleya sandeshvannu hondide e ninna sandesh!!

    ReplyDelete
  2. whittman idu heege kanappa...nee jothegirbekappa konevaregu....

    ReplyDelete

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...