Monday, March 21, 2016

ಎಂ.ಆರ್. ಕಮಲಾ : ಎರಡು ಅನುವಾದಿತ ಕವಿತೆಗಳುಅರಬ್ ಜಗತ್ತಿನ' ಹೆಣ್ಣು ಮಕ್ಕಳ ಕವಿತೆಗಳ ಅನುವಾದ ಫ್ರಂಚ್ ಮತ್ತು ಇಂಗ್ಲಿಶ್ ಭಾಷೆಯಿಂದ


Metikurke Ramaswamy Kamala's photo.


ಮಳೆ


ಮೊದಲ ಹನಿ
ಮಳೆ ಹನಿ ಹನಿವಾಗ
ಮಾತಾಡಬೇಡ
ಮಾತುಗಳು ಒದ್ದೆಯಾದೀತು

ಎರಡನೆಯ ಹನಿ

ಏನದು?
ನನ್ನ ಹೃದಯವೇ?
ಒಯ್ದು ಬಿಡು ಅದನ್ನು
ಈಗಲ್ಲಿ ಏನೂ ಮಿಡಿಯುವುದಿಲ್ಲ

ಮೂರನೆಯ ಹನಿ

ನನ್ನೊಳಗೊಂದು ಹೃದಯ
ಹೃದಯದಲ್ಲಿ -ಗೋಡೆಗಳು
ಗೋಡೆಗಳಲ್ಲಿ -ಬಿರುಕುಗಳು
ಬಿರುಕುಗಳಲ್ಲಿ-ಸತ್ತ ಗಾಳಿ

ನಾಲ್ಕನೆಯ ಹನಿ

ಕಾಫಿ ತಣ್ಣಗಿದೆ
ಏನು ಮಾಡಲಿ ಹೇಳು?
ಕುಣಿದು ಕುಪ್ಪಳಿಸಲು ಇಲ್ಲಿ ಜಾಗವಿಲ್ಲ
ಕಣ್ಣ ಹನಿಯಂತೆ
ಯಾವ ಹಕ್ಕಿಯು ಕೆಳಗಿಳಿಯುವುದಿಲ್ಲ
ಎದೆಯ ಹೊರತು ಮತ್ತೆಲ್ಲೂ ಹಸಿರಿಲ್ಲ
ಸೂರ್ಯಕಾಂತಿಯು ಇಂದು ಮುಖ ತಿರುಗಿಸುತ್ತಿಲ್ಲ
`ನಾನು' ಎಂಬುದನ್ನು ಬಿಟ್ಟು
ಬೇರಾವ ಸರ್ವನಾಮವನ್ನು ಭಾಷೆ ಗುರುತಿಸುತ್ತಿಲ್ಲ
ಗೆಳೆಯ ಏನು ಮಾಡಲಿ?
ಕಾಫಿ ಕೂಡ ಈಗ ತಣ್ಣಗಾಗಿದೆ

ಐದನೆಯ ಹನಿ

ಓಣಿಗಳಲ್ಲಿ ನನ್ನ ಎದೆ
ಬಾಗಿಲುಗಳಿಗೆ ತೆರೆದ ಓಣಿಗಳು
ಹಜಾರಗಳಿಗೆ ತೆರೆದ ಬಾಗಿಲುಗಳು
ಕಿಟಕಿಗಳಿಗೆ ತೆರೆದ ಹಜಾರಗಳು
ಎದೆಗೆ ತೆರೆದ ಕಿಟಕಿಗಳು

ಆರನೆಯ ಹನಿ

ನಿನ್ನ ಬಳಿಗೆ ಹಿಂದಿರುಗಿದ್ದೇನೆ
ಆದರೆ...
ನನ್ನಾತ್ಮದ ನೀಲಿಯನ್ನು
ತಂಟೆ-ತಕರಾರುಗಳ ಹಸಿರನ್ನು
ಮುಂಜಾನೆಯ ಕಪ್ಪನ್ನು
ತೂಕಡಿಕೆಯ ಬಿಳುಪನ್ನು
ಬರುವಾಗ ತರಲಿಲ್ಲ..
ನಿಜಕ್ಕೂ
ನಿನ್ನ ಬಳಿಗೆ ಹಿಂತಿರುಗಿದ್ದೇನೆಯೇ???


ದುನ್ಯಾ ಮಿಖೇಲ್ 
ಎಂ.ಆರ್. ಕಮಲಾ

***ಅಕ್ಕನನ್ನು ಹೊಗಳುತ್ತ


ಅಕ್ಕ ಕವಿತೆ ಬರೆಯುವುದಿಲ್ಲ
ದಿಢೀರನೆ ಬರೆದಾಳೆಂಬ ಖಾತ್ರಿಯೂ ಇಲ್ಲ.
ಎಂದೂ ಕವಿತೆ ಬರೆಯದ ಅಪ್ಪ, ಅಮ್ಮನ
ಸುಖವೇ ಅವಳಿಗೆ ಸರ್ವಸ್ವ.
ಅವಳ ಬೆಚ್ಚಗಿನ ಸೂರಲ್ಲಿ ನನ್ನ ನೆಮ್ಮದಿ
ಭಾವನಂತು ಕವಿತೆ ಬರೆಯುವುದಕ್ಕಿಂತ
ಸಾಯುವುದು ವಾಸಿ ಎನ್ನುತ್ತಾನೆ
ಹೇಳಿದ್ದೇ ಹೇಳುತ್ತಿದ್ದೇನೆ ಎಂದು ನಿಮಗನ್ನಿಸಿದರೂ
ಒಂದು ಮಾತ್ರ ಸೂರ್ಯ ಸತ್ಯ !
ನೆಂಟರಿಷ್ಟರ್ಯಾರು ಕವಿತೆ ಬರೆಯುವುದಿಲ್ಲ !

ಅಕ್ಕನ ಕಪಾಟನ್ನೆಲ್ಲ ಕೆದಕಿದರೂ
ಹಳೆಯ ಕವಿತೆಗಳು ಸಿಕ್ಕುವುದಿಲ್ಲ
ವ್ಯಾನಿಟಿ ಬ್ಯಾಗಲ್ಲಿ ಹೊಸ ಕಂತೆ ಕಾಣುವುದಿಲ್ಲ
ನನ್ನನ್ನು ಊಟಕ್ಕೆ ಕರೆದಾಗಲೂ
ಕವಿತೆ ಓದೆಂದು ಎಂದೂ ಒತ್ತಾಯಿಸುವುದಿಲ್ಲ
ಅವಳ ರುಚಿಕಟ್ಟಾದ ಅಡುಗೆಗೆ
ಕಾವ್ಯದ ಅಮೂರ್ತತೆಯಿಲ್ಲ
ಹಸ್ತಪ್ರತಿಯ ಮೇಲೆ ಕಾಫಿ ತುಳುಕಿಲ್ಲ.

ಕವಿತೆ ಬರೆಯದ ಎಷ್ತೋ ಕುಟುಂಬಗಳು
ನಮ್ಮ ಸುತ್ತ ಮುತ್ತೆಲ್ಲ ಇವೆ.
ಒಮ್ಮೆ ಈ ಸಾಂಕ್ರಾಮಿಕ ಅಂಟಿಕೊಂಡರೆ
ತಡೆಯುವುದು ಭಾರೀ ಕಷ್ಟ
ಜಲಪಾತದಂತೆ ಧುಮ್ಮಿಕ್ಕುತ್ತದೆ
ತಲತಲಾಂತರಕ್ಕೆ ಹರಿದು ಸುಳಿಗೆ ಸಿಕ್ಕಿಸುತ್ತದೆ

ಅಕ್ಕನ ಮಾತೆಂದರೆ ತಡೆಯಿಲ್ಲದ ಗದ್ಯ
ಬದುಕಿಡೀ ಅವಳು ಬರೆದಿದ್ದು
ಭರವಸೆಯ ಎರಡು ಸಾಲಿನ ಪತ್ರ!
ನಿನ್ನನ್ನು ಭೇಟಿಯಾದಾಗ ತುಂಬಾ,
ತುಂಬಾ ಮಾತನಾಡುವುದಿದೆ'!

 Metikurke Ramaswamy Kamala's photo.
ವಿಸಾವ ಸಿಂಬೋರ್ಸ್ಕ
ಕನ್ನಡಕ್ಕೆ: ಎಂ.ಆರ್.ಕಮಲ 
**** ಕವಿತೆಗಳ ಹಂಗಿಲ್ಲದೆ, ಅದನ್ನು ಬರೆಯದೆ, ಓದದೆ ಬದುಕನ್ನು ಸುಂದರವಾಗಿ ಕಟ್ಟಿಕೊಂಡವರೇ ನನ್ನಲ್ಲಿ ಹೆಚ್ಚು ಬೆರಗು, ಅಚ್ಚರಿಗಳನ್ನು ಮೂಡಿಸುತ್ತಾರೆ. ಕಾವ್ಯವನ್ನು ಬಿಟ್ಟು ಬೇರಾವ ಪ್ರಕಾರದಲ್ಲಿ ಅಭಿವ್ಯಕ್ತಿಸಿಕೊಳ್ಳಲು ಬಾರದ ನಾನೂ `ಕವಿತೆಯಿಲ್ಲದೆ ಬದುಕಲಾರೆ' ಎನ್ನುವ ಮಾತುಗಳನ್ನು ಆಡಲಾರೆ. ವಿಶಾಲ ಬದುಕಿನ ತೀರ ಸಣ್ಣ ಭಾಗ ಕಾವ್ಯ ಎಂದು ಒಪ್ಪಿಕೊಂಡು ಹಲವಾರು ವರುಷಗಳೇ ಕಳೆದಿವೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...