Sunday, March 06, 2016

ಮೋದಿ ಮಾತು, ಕನ್ಹಯ್ಯಾ ಭರವಸೆಹೊನಕೆರೆ ನಂಜುಂಡೇಗೌಡ


ಅಂದು ಅಕ್ಟೋಬರ್‌ 11. ಸಂಪೂರ್ಣ ಕ್ರಾಂತಿಯ ಹರಿಕಾರ ಲೋಕನಾಯಕ ಜಯಪ್ರಕಾಶ ನಾರಾಯಣರ 113ನೇ ಜನ್ಮದಿನ. ದೆಹಲಿಯಲ್ಲಿ ಕೇಂದ್ರ ಸರ್ಕಾರ ಜೆ.ಪಿ ಸ್ಮರಣೆ ಕಾರ್ಯಕ್ರಮ ಏರ್ಪಡಿಸಿತ್ತು. ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಹಾಗೂ ಶಿರೋಮಣಿ ಅಕಾಲಿ ದಳದ ಹಿರಿಯ ನಾಯಕ ಪ್ರಕಾಶ್‌ ಸಿಂಗ್‌ ಬಾದಲ್‌ ಭಾಗವಹಿಸಿದ್ದರು. ತುರ್ತು ಪರಿಸ್ಥಿತಿ ವಿರೋಧಿಸಿ ನಡೆದ ಚಳವಳಿಯಲ್ಲಿ ಭಾಗವಹಿಸಿ, ಜೈಲಿಗೆ ಹೋದವರು ಅಡ್ವಾಣಿ, ಬಾದಲ್. ಈ ಇಬ್ಬರೂ ಹಿರಿಯರನ್ನು ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿದರು.

ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಹೊಸ ನಾಯಕರು ಬೆಳೆದು ಬಂದಿದ್ದಾರೆ. ಜೆ.ಪಿ. ಪ್ರಯೋಗ ಶಾಲೆಯಲ್ಲಿ ಪಳಗಿರುವ ನಾಯಕರು ರಾಜಕಾರಣದಲ್ಲೂ ಮಿಂಚಿದ್ದಾರೆ. ಕೆಟ್ಟದರಿಂದ ಒಳ್ಳೆಯದು ಹುಟ್ಟುತ್ತದೆ ಎನ್ನುವುದಕ್ಕೆ ಈ ನಾಯಕರು ಸಾಕ್ಷಿ ಎಂದು ಪ್ರಧಾನಿ ಹೇಳಿದರು. ಜಯಪ್ರಕಾಶ ನಾರಾಯಣರ ನೇತೃತ್ವದ ಚಳವಳಿಯಲ್ಲಿ ತಯಾರಾದ ಅನೇಕ ನಾಯಕರು ರಾಜಕಾರಣಕ್ಕೆ ಬಂದಿದ್ದಾರೆ.

ಈಗಲೂ ಕೆಲವರು ಆಯಕಟ್ಟಿನ ಜಾಗಗಳಲ್ಲಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌, ಮಾಜಿ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಇವರೆಲ್ಲಾ ಇದೇ ಚಳವಳಿಯ ಬಳುವಳಿ. ಬೇರೆ ಬೇರೆ ರಾಜ್ಯಗಳಲ್ಲೂ ಅನೇಕರು ಬೆಳೆದು ಬಂದಿದ್ದಾರೆ. ಕೆಟ್ಟದ್ದರಿಂದ ಒಳ್ಳೆಯದೂ ಹುಟ್ಟಬಹುದೆಂಬ ಮೋದಿ ಅವರ ಮಾತು ಅಕ್ಷರಶಃ ನಿಜ. ಅವರು ಅನುಭವದಿಂದ ಈ ಮಾತು ಹೇಳಿದ್ದಾರೆ. ಅವರ ಮಾತಿಗೆ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಚಳವಳಿ ತಾಜಾ ಉದಾಹರಣೆ. ಕೆಲವು ದಿನಗಳಿಂದ  ಜೆಎನ್‌ಯುನಲ್ಲಿ ನಡೆಯುತ್ತಿರುವ ಚಳವಳಿಯಿಂದ ಬಿಹಾರದ ಹುಡುಗ ಕನ್ಹಯ್ಯಾ ಕುಮಾರ್‌ ಬೆಳಕಿಗೆ ಬಂದಿದ್ದಾರೆ. ಜೆಎನ್‌ಯು ವಿಷಯದಲ್ಲಿ ಎನ್‌ಡಿಎ ಸರ್ಕಾರ ಇಟ್ಟಿರುವ ಸಣ್ಣದೊಂದು ತಪ್ಪು ಹೆಜ್ಜೆಯಿಂದ ದೇಶ, ವಿದೇಶಗಳಲ್ಲಿ ಅವರು ಖ್ಯಾತರಾಗಿದ್ದಾರೆ.

ಕನ್ಹಯ್ಯಾ ದೇಶದ ದೊಡ್ಡ ನಾಯಕರಾಗಿ ಬೆಳೆಯಬಹುದೇ ಎಂದು ಈಗಲೇ ಭವಿಷ್ಯ ಹೇಳುವುದು ಕಷ್ಟ. ಆದರೆ, ಆ ಹಾದಿಯಲ್ಲಿ ಒಂದು ಸಣ್ಣ ಭರವಸೆಯನ್ನಂತೂ ಹುಟ್ಟಿಸಿದ್ದಾರೆ. ದೇಶದ್ರೋಹ ಆರೋಪದ ಮೇಲೆ 21 ದಿನ ಸೆರೆವಾಸ ಅನುಭವಿಸಿದ ಬಳಿಕ, ಮೊನ್ನೆ ಮಾರ್ಚ್‌ 3ರಂದು ತಿಹಾರ್‌ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕನ್ಹಯ್ಯಾ ಕ್ಯಾಂಪಸ್‌ನಲ್ಲಿ ಒಂದು ಗಂಟೆ ಮಾಡಿದ ಅಮೋಘ ಭಾಷಣ ಸಂಚಲನ ಉಂಟುಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಹೊಳೆಯೇ ಹರಿಯುತ್ತಿದೆ. ನಿತೀಶ್‌ ಕುಮಾರ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಪತ್ರಕರ್ತ ಪ್ರೀತಿಶ್‌ ನಂದಿ, ಜೆಎನ್‌ಯುನಲ್ಲೇ ತಯಾರಾದ ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್‌, ಪ್ರೊ. ಯೋಗೇಂದ್ರ ಯಾದವ್‌ ಮತ್ತಿತರರು ಕನ್ಹಯ್ಯಾ ಅವರ ಭಾಷಣವನ್ನು ಪ್ರಶಂಸಿಸಿದ್ದಾರೆ. ಅವರೊಬ್ಬ ಭವಿಷ್ಯದ ಭರವಸೆಯ ನಾಯಕ ಎನ್ನುವ ತೀರ್ಮಾನಕ್ಕೂ ಹಲವರು ಬಂದಿದ್ದಾರೆ. ಆದರೆ, ಮೀನಾಕ್ಷಿ ಲೇಖಿ, ಪರೇಶ್‌ ರಾವಲ್‌, ವಿ.ಕೆ.ಸಿಂಗ್‌, ವೆಂಕಯ್ಯ ನಾಯ್ಡು ಮತ್ತಿತರ ಬಿಜೆಪಿ ಮತ್ತು ಸಂಘ– ಪರಿವಾರದ ನಾಯಕರು ಅಷ್ಟೇ ಟೀಕೆಗಳನ್ನು ಮಾಡಿದ್ದಾರೆ. ಕನ್ಹಯ್ಯಾ ಅವರ ಭಾಷಣದಿಂದ ಅವರು ಗಲಿಬಿಲಿಗೊಂಡಂತೆ ಕಾಣುತ್ತಿದ್ದಾರೆ. ಕೆಲವರು, ಅವರನ್ನು ಹುಚ್ಚ, ತಲೆ ಕೆಟ್ಟವರೆಂದು ಜರಿದಿದ್ದಾರೆ. ತೆರಿಗೆದಾರರ ಹಣದಲ್ಲಿ ಬಿಟ್ಟಿ ಕೂಳು ತಿನ್ನುವವರೆಂದೂ ಲೇವಡಿ ಮಾಡಿದ್ದಾರೆ.

ಒಂದಿಬ್ಬರು ತಲೆ ತಿರುಕರು, ಅವರ ತಲೆಗೆ ₹ 11 ಲಕ್ಷ, ನಾಲಿಗೆಗೆ ₹ 5 ಲಕ್ಷ ಬೆಲೆ ಕಟ್ಟಿದ್ದಾರೆ. ರಾಷ್ಟ್ರ ಮಟ್ಟದ ಪಕ್ಷ ಹಾಗೂ ಅದರ ಸರ್ಕಾರ ವಿದ್ಯಾರ್ಥಿಯೊಬ್ಬನ ಭಾಷಣದ ಬಗ್ಗೆ ಇಷ್ಟು ತಲೆಕೆಡಿಸಿಕೊಂಡಿರುವುದು ಅಚ್ಚರಿ ಹುಟ್ಟಿಸಿದೆ. ಪರ– ವಿರುದ್ಧದ ಒಲವು, ನಿಲುವುಗಳ ಎಲ್ಲೆ ಮೀರಿ ಸಾಮಾನ್ಯ ಜನರು ಕನ್ಹಯ್ಯಾ ಅವರನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ಕನ್ಹಯ್ಯಾ, ಭಾಷಣದಲ್ಲಿ ಹೊಸ ವಿಚಾರವನ್ನೇನೂ ಬಿಚ್ಚಿಟ್ಟಿಲ್ಲ. ಹಳೇ ವಿಷಯಗಳನ್ನೇ ಹೇಳಿದ್ದಾರೆ. ಬಡವರು, ಆದಿವಾಸಿಗಳು,  ಹಿಂದುಳಿದವರು, ದಲಿತರ ಬವಣೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹಸಿವು, ಬಡತನ, ನಿರುದ್ಯೋಗ ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ದನಿ ಎತ್ತಿದ್ದಾರೆ. ಅಂಬೇಡ್ಕರ್‌, ಪೆರಿಯಾರ್‌, ಮಹಾತ್ಮ ಜ್ಯೋತಿಬಾ ಫುಲೆ ಮುಂತಾದವರ ಮಾತುಗಳನ್ನು ಉಲ್ಲೇಖಿಸಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಕನ್ಹಯ್ಯಾ ಅತ್ಯುತ್ತಮ ವಾಗ್ಮಿ. ಜನರ ಭಾಷೆಯಲ್ಲಿ ಮಾತನಾಡಬಲ್ಲರು. ಸ್ವಯಂ ಸ್ಫೂರ್ತಿಯಿಂದ ಗಂಟೆಗಟ್ಟಲೆ ಭಾಷಣ ಮಾಡುವ ತಾಕತ್ತು ಅವರಿಗಿದೆ.

ಸಕ್ರಿಯ ರಾಜಕೀಯದಲ್ಲಿರುವ ನಮ್ಮ ಯಾವುದೇ ಯುವ ನಾಯಕರಿಗೂ ಇಂಥ ಸಾಮರ್ಥ್ಯ ಇದ್ದಂತಿಲ್ಲ. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಕಳೆದ ವಾರ ಲೋಕಸಭೆಯಲ್ಲಿ ಮಾತನಾಡಿದರು. ಅವರು ಮಾತನಾಡಿದ್ದು ಬರೀ 30 ನಿಮಿಷ. ಮಾತಿನ ನಡುವೆ ಕನಿಷ್ಠ 30 ಸಲವಾದರೂ ತಾವು ತಂದಿದ್ದ ಟಿಪ್ಪಣಿ ನೋಡಿದರು.

ಒಮ್ಮೆ ಲೋಕಸಭೆ ಚುನಾವಣೆಗೆ ಮುನ್ನ ಪ್ರಮುಖ ಟಿ.ವಿ. ವಾಹಿನಿಗೆ ಸಂದರ್ಶನ ಕೊಟ್ಟ ರಾಹುಲ್‌ ಸಿಕ್ಕಾಪಟ್ಟೆ ದಿಗಿಲುಗೊಂಡಿದ್ದರು. ನಿರೂಪಕನ ಪ್ರಶ್ನೆಗಳಿಗೆ ಉತ್ತರಿಸಲು ಅವರು ಪರದಾಡಿದ್ದರು. ಇಲ್ಲಿ ಒಂದು ಮಾತು ಬರೆಯದಿದ್ದರೆ  ತಪ್ಪಾಗಬಹುದು. ರಾಹುಲ್‌ ಮೊದಲಿಗಿಂತ ಸುಧಾರಿಸಿದ್ದಾರೆ. ಈಗ ಅವರ ಆತ್ಮವಿಶ್ವಾಸ ಹೆಚ್ಚುತ್ತಿದೆ. ಕನ್ಹಯ್ಯಾ, ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮೂರ್ನಾಲ್ಕು ಟಿ.ವಿ. ವಾಹಿನಿಗಳಿಗೆ ಸಂದರ್ಶನ ನೀಡಿದ್ದಾರೆ. ಎಲ್ಲರ, ಎಲ್ಲ ಪ್ರಶ್ನೆಗಳಿಗೂ ಅತ್ಯಂತ ಜಾಣ್ಮೆಯಿಂದ ಉತ್ತರಿಸಿದ್ದಾರೆ. ಅದರಿಂದಾಗಿ ಅವರೊಬ್ಬ ಪ್ರಬುದ್ಧ ಸಂಶೋಧಕ ಹಾಗೂ ಮಾತುಗಾರ ಎಂದೂ ನಿರೂಪಿಸಿದ್ದಾರೆ. ಕನ್ಹಯ್ಯಾ ಕುಮಾರ್‌ ಅವರಿಗೆ ನಮ್ಮ ಭಾರತದ ಒಕ್ಕೂಟ ವ್ಯವಸ್ಥೆ ಕುರಿತು ಸ್ಪಷ್ಟವಾದ ತಿಳವಳಿಕೆ ಇದೆ. ರಾಷ್ಟ್ರೀಯತೆ ಬಗ್ಗೆ ನಿಖರ ಕಲ್ಪನೆಯಿದೆ.

ಸಂಘ– ಪರಿವಾರದ ನಾಯಕರು ಹಿಂದುತ್ವವನ್ನೇ ರಾಷ್ಟ್ರೀಯತೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಅದು ನಿಜವಾದ ರಾಷ್ಟ್ರೀಯತೆ ಅಲ್ಲ. ಭಾರತದ ರಾಷ್ಟ್ರೀಯತೆ ಅನೇಕ ಭಾಷೆ, ಸಂಸ್ಕೃತಿ, ಧರ್ಮಗಳನ್ನು ಒಳಗೊಂಡಿದೆ ಎಂದೂ ಅವರು ವ್ಯಾಖ್ಯಾನಿಸುತ್ತಿದ್ದಾರೆ. ಅದರಿಂದಾಗಿಯೇ ಜನರಿಗೆ ಅವರ ಮಾತು ಹಿಡಿಸುತ್ತಿರಬಹುದು.

ಗುಜರಾತಿನಲ್ಲಿ ನಡೆಯುತ್ತಿರುವ ಮೀಸಲಾತಿ ಚಳವಳಿಯ ಮುಂಚೂಣಿ ನಾಯಕ ಹಾರ್ದಿಕ್‌ ಪಟೇಲ್‌ ಅವರನ್ನೂ ದೇಶದ್ರೋಹ ಆರೋಪದ ಮೇಲೆ ಬಂಧಿಸಲಾಗಿದೆ. ಅವರಿಗೂ ದೊಡ್ಡ ಪ್ರಚಾರ ಸಿಕ್ಕಿದ್ದೇನೊ ಸತ್ಯ. ಜನ ಮಾತ್ರ ಅವರ ಬಗ್ಗೆ ಕೊಂಚವೂ ತಲೆಕೆಡಿಸಿಕೊಳ್ಳಲಿಲ್ಲ. ಬಹುಶಃ ಪಟೇಲ್‌ ಒಂದು ಜಾತಿ ನಾಯಕರಾಗಿ ಗುರುತಿಸಿಕೊಂಡಿದ್ದು ಅವರಿಗೆ ಅಡ್ಡಿಯಾಗಿರಬಹುದು.
ಫೆಬ್ರುವರಿಗೆ ಮೊದಲು ಕನ್ಹಯ್ಯಾ ಯಾರಿಗೂ ಗೊತ್ತಿರಲಿಲ್ಲ. ಕನ್ಹಯ್ಯಾ ಯಾರು ಎಂಬ ಕುತೂಹಲ ಹುಟ್ಟಿದ್ದು, ದೇಶ ದ್ರೋಹದ ಆರೋಪದ ಮೇಲೆ ಅವರನ್ನು ಬಂಧಿಸಿ, ಜೈಲಿಗೆ ಅಟ್ಟಿದ ಮೇಲೆ. ಫೆಬ್ರುವರಿ 9ರಂದು ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ಕಾಶ್ಮೀರಿ ಉಗ್ರ ಅಫ್ಜಲ್‌ ಗುರು ನೆನಪಿನ ಕಾರ್ಯಕ್ರಮದ ಬಳಿಕ. ಆ ಸಮಯದಲ್ಲಿ ಕೆಲವು ವಿದ್ಯಾರ್ಥಿಗಳು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರೆಂದು ಆರೋಪಿಸಿ, ಮೊಕದ್ದಮೆ ಹೂಡಲಾಯಿತು.

ಬಳಿಕ ಕನ್ಹಯ್ಯಾ ಅವರನ್ನು ಬಂಧಿಸಲಾಯಿತು. ಬಂಧನಕ್ಕೆ ಮೊದಲೇ ಕನ್ಹಯ್ಯಾ, ಇದಕ್ಕಿಂತಲೂ ಒಂದು ಕೈ ಮೀರಿಸುವಂತೆ ಭಾಷಣ ಮಾಡಿದ್ದಾರೆ. ಅದು ಹೆಚ್ಚಿನ ಜನರ ಕಿವಿಗೆ ಬಿದ್ದಿಲ್ಲ. ಎನ್‌ಡಿಎ ಸರ್ಕಾರ ಅವರನ್ನು ಬಂಧಿಸಿರದಿದ್ದರೆ ಈಗಲೂ ಎಲ್ಲೋ ಕ್ಯಾಂಪಸ್‌ ಮರಗಳ ಮರೆಯಲ್ಲಿ ಇರುತ್ತಿದ್ದರು. ಕನ್ಹಯ್ಯಾ ಅವರ ವಿಷಯದಲ್ಲಿ ಸರ್ಕಾರವೇ ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡಿದೆ.
ಉತ್ತರ ಪ್ರದೇಶ ಮೀರಠ್‌ನ ಸುಭಾರತಿ ಡೀಮ್ಡ್‌ ವಿಶ್ವವಿದ್ಯಾಲಯದಲ್ಲಿ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಕೆಲವು ಕಾಶ್ಮೀರಿ ವಿದ್ಯಾರ್ಥಿಗಳು ಭಾರತ ವಿರೋಧಿ ಘೋಷಣೆ ಕೂಗಿದ ಆರೋಪಕ್ಕೆ ಒಳಗಾಗಿದ್ದರು. ವಿಶ್ವವಿದ್ಯಾಲಯದ ಆಡಳಿತವೇ ಅವರನ್ನು ಉಚ್ಚಾಟಿಸುವ ತೀರ್ಮಾನ ಮಾಡಿತು. ಆ ಪ್ರಕರಣ ಹೆಚ್ಚು ಸುದ್ದಿ ಮಾಡಲಿಲ್ಲ.

ಕೇಂದ್ರದಲ್ಲಿ ಆಗಿನ್ನೂ ಯುಪಿಎ ಸರ್ಕಾರವಿತ್ತು.  ಅಖಿಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷದ ಸರ್ಕಾರ ಅದನ್ನು ವಿವಾದ ಮಾಡಲಿಲ್ಲ. ಅಕಸ್ಮಾತ್‌ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಇದ್ದಿದ್ದರೆ ಪರಿಸ್ಥಿತಿ ಬೇರೆ ಆಗಿರುತ್ತಿತ್ತು. ಏನಾಗುತ್ತಿತ್ತು ಎಂದು ವಿಶ್ಲೇಷಿಸುವ ಅಗತ್ಯವಿಲ್ಲ. ಸುಭಾರತಿ ವಿ.ವಿ.ಯಂತೆ ಜೆಎನ್‌ಯು ಕೂಡಾ ಕನ್ಹಯ್ಯಾ ಮತ್ತು ಅವರ ಗೆಳೆಯರ ಪ್ರಕರಣದಲ್ಲೂ ನಡೆದುಕೊಳ್ಳಬೇಕಿತ್ತು.

ವಿಶ್ವವಿದ್ಯಾಲಯದ ನಿಯಮಗಳಂತೆ ಆಂತರಿಕ ಸಮಿತಿಯಿಂದ ವಿಚಾರಣೆ ನಡೆಸಿ, ಅದು ಕೊಟ್ಟ ವರದಿಯ ಮೇಲೆ ಕ್ರಮ ಕೈಗೊಳ್ಳಬಹುದಿತ್ತು. ವಿ.ವಿ. ಆಡಳಿತ, ವಿದ್ಯಾರ್ಥಿಗಳ ವಿರುದ್ಧ ಕಠಿಣವಾಗಿ ವರ್ತಿಸಿತು. ಕೇಂದ್ರ ಸರ್ಕಾರ ಮತ್ತು ಅದರ ಅಧೀನದ ಪೊಲೀಸ್‌ ಇಲಾಖೆ ಜಿದ್ದಿಗೆ ಬಿದ್ದಂತೆ ನಡೆದುಕೊಂಡಿತು. ಅದರಿಂದ ಯಾರಿಗೂ ಲಾಭವಾಗಲಿಲ್ಲ. ಸರ್ಕಾರದ ವರ್ಚಸ್ಸೂ ಮಸುಕಾಯಿತು. ವಿದ್ಯಾರ್ಥಿಗಳೂ ಬೀದಿಗೆ ಬಂದರು.

ಜಯಪ್ರಕಾಶ ನಾರಾಯಣರ ವಿಚಾರಧಾರೆಯಿಂದ ಪ್ರಭಾವಿತರಾಗಿರುವುದಾಗಿ ಹೇಳುವ ಪ್ರಧಾನಿ ನರೇಂದ್ರ ಮೋದಿ,  ಬೇರೆ ಬೇರೆ ವಿದ್ಯಾರ್ಥಿ ಚಳವಳಿಯನ್ನು ಹೇಗೆ ಹತ್ತಿಕ್ಕುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ನಿದರ್ಶನ. ಘರ್‌ ವಾಪ್ಸಿ, ಗೋಮಾಂಸ ವಿವಾದ, ಅಸಹಿಷ್ಣುತೆ, ದಲಿತ ವಿದ್ಯಾರ್ಥಿ ರೋಹಿತ್‌ ವೇಮುಲ ಆತ್ಮಹತ್ಯೆ, ಜೆಎನ್‌ಯು ವಿವಾದ, ಪುಣೆ ಫಿಲ್ಮ್‌  ಇನ್‌ಸ್ಟಿಟ್ಯೂಟ್‌ ವಿದ್ಯಾರ್ಥಿಗಳ ಪ್ರತಿಭಟನೆ ಇವೆಲ್ಲ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ಕೆಲವು ಪಕ್ಷಗಳು ಹಾಗೂ ಅವುಗಳ ನಾಯಕರ ಧೋರಣೆಯನ್ನು ಅಣಕಿಸುವಂತಿವೆ.

ದೇಶದ ವೈವಿಧ್ಯ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡಲು ಬದ್ಧವಿರುವುದಾಗಿ ಹೇಳುವ ಪ್ರಧಾನಿ ಸಂದಿಗ್ಧ ಪರಿಸ್ಥಿತಿ ಎದುರಾದಾಗ ಮೌನವಾಗಿಬಿಡುತ್ತಾರೆ. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶದ ನೂರಿಪ್ಪತೈದು ಕೋಟಿ ಜನ, ಪ್ರಧಾನಿ ಏನು ಹೇಳುತ್ತಾರೆಂದು ಕೇಳಲು ತುದಿಗಾಲ ಮೇಲಿರುತ್ತಾರೆ. ಆದರೆ, ಜನರ ತುಡಿತಕ್ಕೆ ಅವರು ಸ್ಪಂದಿಸುವುದೇ ಇಲ್ಲ.
ರಾಷ್ಟ್ರಪತಿ ಭಾಷಣದ ಮೇಲೆ ನಡೆದ ಚರ್ಚೆಗೆ ಸಂಸತ್ತಿನಲ್ಲಿ ಉತ್ತರಿಸುವ ವೇಳೆಯಲ್ಲೂ ಪ್ರಧಾನಿ ಜೆಎನ್‌ಯು ಗದ್ದಲ ಹಾಗೂ ವೇಮುಲ ಆತ್ಮಹತ್ಯೆ ಕುರಿತು ಪ್ರಸ್ತಾಪಿಸಲಿಲ್ಲ. ಸಂದಿಗ್ಧ ಪರಿಸ್ಥಿತಿಯಲ್ಲಿ  ಮೌನವಾಗಿರುವುದು ಪ್ರಧಾನಿ ಅವರ ದೊಡ್ಡ ದೌರ್ಬಲ್ಯ ಎನ್ನುವ ಟೀಕೆಗಳು ಅವರದೇ ಪಕ್ಷದೊಳಗಿವೆ.

ಜೆಎನ್‌ಯು ಗದ್ದಲದಿಂದ ಯಾರಿಗೆ ಲಾಭವಾಗುವುದೋ ಗೊತ್ತಿಲ್ಲ. ಎಡ ಪಕ್ಷಗಳು ಮಾತ್ರ ರಾಜಕೀಯವಾಗಿ ಲಾಭ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿವೆ. ಪ್ರಬಲ ವಿದ್ಯಾರ್ಥಿ ನಾಯಕನಾಗಿ ಹೊರ ಹೊಮ್ಮಿರುವ ಕನ್ಹಯ್ಯಾ ಅವರನ್ನು ಮುಂದಿನ ತಿಂಗಳ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬಳಸಲು ಎಡ ಪಕ್ಷಗಳು ಆಲೋಚಿಸಿವೆ. ಈಗ ಬಂಗಾಳದಲ್ಲಿ ಸ್ಪರ್ಧೆ ಇರುವುದು ಎಡ ಪಕ್ಷಗಳು ಮತ್ತು ಟಿಎಂಸಿ ನಡುವೆ. ಆ ರಾಜ್ಯದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಚುನಾವಣೆಗೆ ಕನ್ಹಯ್ಯಾ ಅವರನ್ನು ಬಳಸಿ ಕೈಸುಟ್ಟುಕೊಳ್ಳುವ ಬದಲು, 2019ರ ಚುನಾವಣೆಗೆ ಬಳಸಿಕೊಳ್ಳುವುದು ಸಮಯೋಚಿತ ತೀರ್ಮಾನವಾಗಬಹುದು. ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ಪರ್ಯಾಯವಾಗಿ ಉಳಿದ ಪಕ್ಷಗಳು ವಿಶಾಲ ರಾಜಕೀಯ ವೇದಿಕೆ ಕಟ್ಟಿಕೊಂಡರೆ ಕನ್ಹಯ್ಯಾರಿಂದ ಹೆಚ್ಚು ಲಾಭ ಸಿಗಬಹುದು. ಈ ಬಗ್ಗೆ ಎಡ ಪಕ್ಷಗಳ ಮುಖಂಡರು ಮರು ಚಿಂತನೆ ನಡೆಸುವ ಅಗತ್ಯವಿದೆ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...