Tuesday, March 22, 2016

‘ನಮ್ಮ ವಕೀಲರು ನಾವೇ..’ಡಾ ಎಚ್. ಎಸ್. ಅನುಪಮಾ


ಭಗತ್ ಸಿಂಗ್ ಜೈಲ್ ಡೈರಿ- ಆರಂಭಿಕ ಭಾಗ
ಇತ್ತ ಭೂಗತನಾಗಿದ್ದ ಭಗತ್ ಸುಮ್ಮನಿರಲಿಲ್ಲ. ಕೆಲವು ದಿನ ನಾಟಕ ಕಲೆ ಉಪಯೋಗಿಸಿಕೊಂಡು ತನ್ನ ವಿಚಾರಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡತೊಡಗಿದ. ಮಾಯಾದೀಪವನ್ನು ಕೊಂಡು ತಂದು ಕ್ರಾಂತಿಕಾರಿ ಹುತಾತ್ಮರ ಸ್ಲೈಡ್ ಚಿತ್ರ ತೋರಿಸಿ ಕತೆ ಹೇಳತೊಡಗಿದ. ಜನರನ್ನು ಅವರ ದುಷ್ಟ ಆಳ್ವಿಕರ ವಿರುದ್ಧ ಎತ್ತಿಕಟ್ಟುವ ಕೆಲಸದಲ್ಲಿ ನಿರಂತರ ತೊಡಗಿದ. ಆದರೆ ಭೂಗತನಾಗಿ ಹೆಚ್ಚು ದಿನ ಕ್ರಿಯಾಶೀಲನಾಗಿರಲು ಸಾಧ್ಯವಿಲ್ಲ ಎಂದು ಅವನಿಗೆ ಗೊತ್ತಾಗಿತ್ತು. ಇರುವಷ್ಟು ಕಾಲದಲ್ಲಿ ಮಹತ್ಪರಿಣಾಮ ಬೀರುವ ಏನಾದರೂ ಮಾಡಬೇಕು ಎಂದು ತೀರ್ಮಾನಿಸಿದ. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಸಮಾಜವಾದವನ್ನು ತರಬೇಕೆಂಬ ಪ್ರಬಲ ಇಚ್ಛೆಯಿಂದ ಕಾಂಗ್ರೆಸ್ ಪಕ್ಷದ ಮಾದರಿಗಿಂತ ಭಿನ್ನವಾಗಿ ಜನರನ್ನು ತಲುಪಬೇಕು ಹಾಗೂ ಸಾಮ್ರಾಜ್ಯಶಾಹಿಯನ್ನು ಎಚ್ಚರಿಸಬೇಕೆಂದು ಭಾವಿಸಿದ.

ಆ ವೇಳೆಗೆ ಬ್ರಿಟಿಷ್ ಸರ್ಕಾರ ಪಬ್ಲಿಕ್ ಸೇಫ್ಟಿ ಬಿಲ್ ಹಾಗೂ ಟ್ರೇಡ್ಸ್ ಡಿಸ್ಪ್ಯೂಟ್ ಬಿಲ್ ಎಂಬ ಎರಡು ಮಸೂದೆಗಳನ್ನು ಸೆಂಟ್ರಲ್ ಅಸೆಂಬ್ಲಿಯಲ್ಲಿ ಮಂಡಿಸಲು ತಯಾರಿ ನಡೆಸಿತ್ತು. ಅವೆರೆಡೂ ಭಾರತೀಯರ ಹಕ್ಕುಗಳನ್ನು ಮೊಟಕುಗೊಳಿಸುವ ಜನವಿರೋಧಿ ಮಸೂದೆಗಳೆನ್ನುವುದು ಕ್ರಾಂತಿಕಾರಿಗಳ ಅಭಿಪ್ರಾಯವಾಗಿತ್ತು. ಗವರ್ನರ್ ಜನರಲ್‌ಗೆ ಭಾರತೀಯ ಪ್ರಜೆಗಳು ಅಥವಾ ಭಾರತೀಯ ರಾಜ್ಯದ ಪ್ರಜೆಗಳಾದ ಕ್ರಾಂತಿಕಾರಿಗಳನ್ನು ಭಾರತ/ಬ್ರಿಟನ್/ಮತ್ತಾವುದೇ ದೇಶದಿಂದ ಗಡೀಪಾರು ಮಾಡುವ/ಮಾಡಿಸುವ ಅಧಿಕಾರವನ್ನು ಪಬ್ಲಿಕ್ ಸೇಫ್ಟಿ ಬಿಲ್ ನೀಡುತ್ತಿತ್ತು. ಟ್ರೇಡ್ಸ್ ಡಿಸ್ಪ್ಯೂಟ್ ಬಿಲ್ ಟ್ರೇಡ್ ಯೂನಿಯನ್ ಮತ್ತು ಕಾರ್ಮಿಕರ ಹಕ್ಕುಗಳನ್ನು ಕಸಿಯುವಂಥದಾಗಿತ್ತು. ಇವೆರೆಡು ಮಸೂದೆಗಳನ್ನು ಭಾರತದ ಹಲವು ರಾಜಕೀಯ ನಾಯಕರೂ ವಿರೋಧಿಸಿದ್ದರು. ಆದರೂ ವೈಸರಾಯ್ ಅದನ್ನು ಸೆಂಟ್ರಲ್ ಅಸೆಂಬ್ಲಿಯಲ್ಲಿ ಮಂಡಿಸುವ ಸಿದ್ಧತೆ ನಡೆಸಿದರು.

ಅಸೆಂಬ್ಲಿ ಸೇರುವ ಆ ದಿನ ಯಾವುದೆಂದು ತಿಳಿದು ಅವತ್ತು ಗಮನ ಸೆಳೆಯುವ ಏನಾದರೂ ಮಾಡಬೇಕೆಂದು ಎಚ್‌ಎಸ್‌ಆರ್‌ಎ ಸದಸ್ಯರು ನಿರ್ಧರಿಸಿದರು. ಕೊನೆಗೆ ಅಸೆಂಬ್ಲಿಯೊಳಗೆ ಪ್ರವೇಶ ಪಡೆಯಬೇಕು; ಗ್ಯಾಲರಿಯಲ್ಲಿ ಕುಳಿತು ಜನರಿಲ್ಲದ ಜಾಗ ಯಾವುದೆಂದು ನೋಡಿ ಅಲ್ಲಿಗೆ ಬಾಂಬು ಒಗೆಯಬೇಕು; ಯಾರೂ ಸಾಯಬಾರದು ಹಾಗೂ ಯಾರನ್ನೂ ಗಾಯಗೊಳಿಸಬಾರದು; ಸ್ಫೋಟ ಸಂಭವಿಸಿ ಗಮನ ಸೆಳೆದು ನಂತರ ತಾವಾಗೇ ಬಂಧನಕ್ಕೊಳಗಾಗಬೇಕು; ವಿಚಾರಣೆಯ ಸಮಯವನ್ನು ಹಾಗೂ ಮಾಧ್ಯಮಗಳ ಗಮನವನ್ನು ತಮ್ಮ ಚಿಂತನೆಗಳನ್ನು ಪ್ರಚಾರಪಡಿಸಿಕೊಳ್ಳಲು ಬಳಸಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು.

ಲಾಹೋರಿನ ಸಾಂಡರ‍್ಸ್ ಪ್ರಕರಣದ ನಂತರ ಭೂಗತನಾಗಿದ್ದ ಭಗತ್‌ಗೆ ಅಪಾಯ ಇರುವುದರಿಂದ ಅವನು ಆ ಕೆಲಸಕ್ಕೆ ಬೇಡ ಎಂದು ಸಂಘಟನೆಯ ಸಭೆಯಲ್ಲಿ ನಿರ್ಧರಿಸಲಾಯಿತು. ಆದರೆ ಆ ದಿನ ಭಗತ್ ಗೆಳೆಯ ಸುಖದೇವ್ ಇರಲಿಲ್ಲ. ನಂತರ ಅವನಿಗೆ ವಿಷಯ ತಿಳಿದಿದ್ದೇ ಈ ಕೆಲಸಕ್ಕೆ ಭಗತನಿಗಿಂತ ಸೂಕ್ತ ವ್ಯಕ್ತಿ ಯಾರೂ ಇಲ್ಲ ಎಂದು ವಾದಿಸಿದ. ‘ನಿನಗೆ ಜೀವಭಯವೇ’ ಎಂದು ಭಗತನನ್ನು ಛೇಡಿಸಿದ. ಭಗತನಾದರೋ ಎಲ್ಲ ಕೆಲಸಕ್ಕೂ ಸಿದ್ಧನಿದ್ದ. ಆದರೆ ಸಂಘಟನೆಯ ಸಭೆಯ ನಿರ್ಣಯವನ್ನಷ್ಟೆ ಅವನು ಗೌರವಿಸಿದ್ದ. ಕೊನೆಗೆ ಭಗತ್ ಹಾಗೂ ಬಟು ಕೇಶ್ವರ ದತ್ತಾ (ಬಿ. ಕೆ. ದತ್ತಾ)ರನ್ನು ಆ ಕೆಲಸಕ್ಕೆ ನಿಯೋಜಿಸಲಾಯಿತು.

ಏಪ್ರಿಲ್ ೮, ೧೯೨೯. ನಿರಪಾಯಕಾರಿಯಾದ ಬಾಂಬ್ ಹಿಡಿದು ಭಗತ್ ಹಾಗೂ ದತ್ತಾ ಸೆಂಟ್ರಲ್ ಅಸೆಂಬ್ಲಿ (ಈಗಿನ ಸಂಸತ್ ಭವನ) ಒಳ ಹೋದರು. ಅಸೆಂಬ್ಲಿ ನೆರೆಯುವುದನ್ನೇ ಕಾದು ಕಲಾಪ ನಡೆಯುತ್ತಿದ್ದಾಗ ಜನರಿಲ್ಲದ ಕಡೆ ನೋಡಿ ಬಾಂಬ್ ಬಿಸಾಡಿದರು. ‘ಕಿವುಡನೂ ಕೇಳಿಸುವಂತೆ ಮಾಡಲು’ ಎಂಬ ಕರಪತ್ರವನ್ನು ಎಲ್ಲೆಡೆ ತೂರುತ್ತಾ, ‘ಸಾಮ್ಯಾಜ್ಯಶಾಹಿಗೆ ಧಿಕ್ಕಾರ’, ‘ಕ್ರಾಂತಿಗೆ ಜಯವಾಗಲಿ’ ಎಂದು ಕೂಗಿದರು.

ಆಗ ಎದ್ದ ಗದ್ದಲದಲ್ಲಿ ಎಲ್ಲ ಶಾಸಕರು, ಮಂತ್ರಿಗಳು, ಅಧಿಕಾರಿಗಳು, ಪತ್ರಿಕಾ ಪ್ರತಿನಿಧಿಗಳು ದಿಕ್ಕೆಟ್ಟು ಓಡತೊಡಗಿದರು. ಕೆಲವರು ಟೇಬಲ್ಲಿನ ಅಡಿ ಅವಿತರು. ಮೋತಿಲಾಲ್ ನೆಹರೂ, ಜಿನ್ನಾ, ಮದನ ಮೋಹನ ಮಾಳವೀಯ ಅವರಂಥ ಕೆಲವರಷ್ಟೇ ಶಾಂತ ರೀತಿಯಿಂದ ವರ್ತಿಸಿದರು. ಭಗತ್ ಹಾಗೂ ದತ್ತಾ ಕೈಯಲ್ಲಿ ಪಿಸ್ತೂಲುಗಳಿದ್ದವು. ಎಂದೇ ಅವರ ಬಳಿ ಹೋಗಿ ಕೂಡಲೇ ಬಂಧಿಸಲು ಪೊಲೀಸರೂ ಹೆದರಿದರು. ಅವರು ತಮ್ಮ ಪಿಸ್ತೂಲು ಆಚೆಯಿಟ್ಟು ತಾವೇ ಬಂಧನಕ್ಕೆ ಒಪ್ಪಿಸಿಕೊಂಡರು. ಅವರು ಅಲ್ಲಿ ಎಲ್ಲರಿಗೂ ಸಿಗುವಂತೆ ಬಿಸಾಡಿದ ಕರಪತ್ರದಲ್ಲಿ ಹೀಗೆ ಬರೆಯಲಾಗಿತ್ತು:


‘ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್
ನೋಟಿಸ್
ಕಿವುಡನೂ ಕೇಳುವಂತೆ ಮಾಡಲು..

ಕಿವುಡನೂ ಕೇಳಬೇಕೆಂದರೆ ಗಟ್ಟಿಧ್ವನಿಯಲ್ಲಿ ಮಾತನಾಡಬೇಕಾಗುತ್ತದೆ ಎಂಬ ಫ್ರೆಂಚ್ ಅರಾಜಕತಾವಾದಿ ವೇಲಿಯಂಟ್‌ನ ಈ ಮಾತು ಹೇಳುತ್ತ ನಾವು ನಮ್ಮ ಕೃತ್ಯವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದೇವೆ.

ಕಳೆದ ೧೦ ವರ್ಷಗಳ ಅವಮಾನಕಾರಕ ಸುಧಾರಣಾ ಕ್ರಮಗಳ ಚರಿತ್ರೆಯನ್ನು ಮತ್ತೆ ಎತ್ತಿ ಹೇಳದೇ; ಈ ಸದನದ ಮೂಲಕ ಸಾಮ್ರಾಜ್ಯಶಾಹಿಯು ಭಾರತ ದೇಶದ ಮೇಲೆಸಗಿರುವ ಅವಮಾನಗಳ ಕುರಿತು ಮಾತನಾಡದೇ, ನಾವು ನೋಡುತ್ತಿರುವುದನ್ನು ಮಾತ್ರ ಹೇಳುತ್ತೇವೆ; ಬ್ರಿಟಿಷ್ ಸರ್ಕಾರ ಸೈಮನ್ ಕಮಿಷನ್ ಸೂಚಿಸಿರುವಂತೆ ಜಾರಿಗೆ ತಂದ ಸುಧಾರಣಾ ಕ್ರಮಗಳು ಹಸಿದ ಜನರತ್ತ ಎಸೆಯುವ ಎಲುಬಿನ ಚೂರುಗಳಲ್ಲದೇ ಹೆಚ್ಚೇನಲ್ಲ. ಅದರಲ್ಲಿ ತಮ್ಮ ಪಾಲು ಕಿತ್ತುಕೊಳ್ಳಲು ನಮ್ಮ ಜನ ನಾನು ತಾನೆಂದು ಕಚ್ಚಾಡತೊಡಗಿದ್ದಾರೆ. ಪಬ್ಲಿಕ್ ಸೇಫ್ಟಿ ಮತ್ತು ಟ್ರೇಡ್ಸ್ ಡಿಸ್ಪ್ಯೂಟ್ಸ್ ಬಿಲ್‌ಗಳನ್ನು ಈ ಅಧಿವೇಶನದಲ್ಲಿ ಅಂಗೀಕರಿಸುವಂತೆ ಮಾಡುವ ಮೂಲಕ ಸರ್ಕಾರ ತನ್ನ ದಮನಿಸುವ ಕ್ರಮಗಳನ್ನು ಮುಂದುವರೆಸಿದೆ. ಬರುವ ಅಧಿವೇಶನದಲ್ಲಿ ಮಂಡಿಸಲು ಪ್ರೆಸ್ ಸೆಡಿಷನ್ ಬಿಲ್ ಅನ್ನು ಕಾಯ್ದಿರಿಸಿದೆ. ಹೊರಗೆ ಬಯಲಲ್ಲಿ ದುಡಿಯುತ್ತಿದ್ದ ಕಾರ್ಮಿಕ ನಾಯಕರನ್ನು ಬಂಧಿಸಿರುವುದರಲ್ಲೇ ಗಾಳಿ ಯಾವ ದಿಕ್ಕಿನತ್ತ ಬೀಸುತ್ತಿದೆ ಎಂದು ಹೇಳಬಹುದಾಗಿದೆ.

ಇಂತಹ ಅತಿ ಪ್ರಚೋದನಕಾರಿ ಸನ್ನಿವೇಶದಲ್ಲಿ ಎಚ್‌ಎಸ್‌ಆರ್‌ಎ ಗಂಭೀರವಾಗಿ, ಎಲ್ಲ ಸಾಧಕ ಬಾಧಕಗಳನ್ನು ಪರಿಗಣಿಸಿ ತನ್ನ ಕಾರ್ಯಕರ್ತರ ಪಡೆಯನ್ನು ಈ ಕೆಲಸದಲ್ಲಿ ತೊಡಗಿಸಿದೆ. ಅಸೆಂಬ್ಲಿಯೆಂಬ ಅಣಕವನ್ನು ನಿಲ್ಲಿಸಲು, ವಿದೇಶಿ ಅಧಿಕಾರಶಾಹಿ ತಮ್ಮಿಷ್ಟದಂತೆ ನಡೆದುಕೊಂಡಾಗ ಬೆತ್ತಲಾಗಿ ಅವರನ್ನು ಸಾರ್ವಜನಿಕರೆದುರು ನಿಲ್ಲಿಸಿ ಬಯಲು ಮಾಡಲು ಈ ಕ್ರಮವನ್ನು ಆಯ್ದುಕೊಳ್ಳಲಾಗಿದೆ.

ಇಲ್ಲಿ ನೆರೆದ ಜನ ಪ್ರತಿನಿಧಿಗಳು ತಂತಮ್ಮ ಕ್ಷೇತ್ರಗಳಿಗೆ ಹೋಗಿ ತಮ್ಮ ಕ್ಷೇತ್ರದ ಜನಸಾಮಾನ್ಯರನ್ನು ಕ್ರಾಂತಿಗೆ ಸಿದ್ಧಗೊಳಿಸಲಿ. ಆಳುವವರೇ, ಜನಸಾಮಾನ್ಯ ಭಾರತೀಯರ ಪರವಾಗಿ ಸರ್ಕಾರಕ್ಕೆ ನಾವು ಏನು ಹೇಳಹೊರಟಿದ್ದೇವೆಂದು ತಿಳಿದುಕೊಳ್ಳಿ: ಪಬ್ಲಿಕ್ ಸೇಫ್ಟಿ ಮತ್ತು ಟ್ರೇಡ್ಸ್ ಡಿಸ್ಪ್ಯೂಟ್ಸ್ ಬಿಲ್ ಅನ್ನು ವಿರೋಧಿಸುತ್ತ; ಲಾಲಾ ಲಜಪತರಾಯ್ ಅವರ ಬೇಜವಾಬ್ದಾರಿಯುತ ಕೊಲೆ ವಿರೋಧಿಸುತ್ತ ನಾವು ಚರಿತ್ರೆಯಲ್ಲಿ ಪುನರಾವರ್ತನೆಯಾದ ಪಾಠವನ್ನು ಮತ್ತೆ ಹೇಳಲು ಇಚ್ಛಿಸುತ್ತೇವೆ - ವ್ಯಕ್ತಿಯನ್ನು ಕೊಲ್ಲುವುದು ಸುಲಭ, ಆದರೆ ಚಿಂತನೆಗಳನ್ನಲ್ಲ.

ಮಹಾಸಾಮ್ರಾಜ್ಯಗಳು ಪತನಗೊಂಡವು, ಆದರೆ ಚಿಂತನೆಗಳು ಉಳಿದುಕೊಂಡವು. ಚಕ್ರವರ್ತಿಗಳು, ಸಾಮ್ರಾಟರು ನಶಿಸಿದರು, ಆದರೆ ಕ್ರಾಂತಿ ವಿಜಯಿಯಾಗಿ ಮುನ್ನಡೆಯಿತು.

ಮನುಷ್ಯ ಜೀವದ ಬಗೆಗೆ ಅತಿ ಗೌರವವುಳ್ಳವರಾಗಿ; ಮನುಷ್ಯ ಕುಲ ಸಂಪೂರ್ಣ ಸ್ವಾತಂತ್ರ್ಯ-ಶಾಂತಿಯನ್ನನುಭವಿಸುವ ಸುಂದರ ಭವಿಷ್ಯ ಒಂದಲ್ಲ ಒಂದು ದಿನ ಬರುವುದೆಂದು ಕನಸುವವರಾಗಿ ಈ ತೆರನ ರಕ್ತಪಾತದ ಕ್ರಮಕ್ಕೆ ಮುಂದಾಗಿರುವುದು ಖೇದವೆನಿಸಿದೆ. ಆದರೆ ಮನುಷ್ಯ ಮನುಷ್ಯನನ್ನು ಶೋಷಿಸುವುದು ಅಸಾಧ್ಯವಾಗುವಂತಹ ಮಹಾನ್ ಕ್ರಾಂತಿಯ ಪೂರ್ವ ತಯಾರಿಯಾಗಿ ಕೆಲವು ಜೀವಗಳ ಬಲಿದಾನ ಮಾಡುವುದು ಅನಿವಾರ್ಯವಾಗಿದೆ.

ಕ್ರಾಂತಿ ಚಿರಾಯುವಾಗಲಿ.

ಸಹಿ - ಬಾಲರಾಜ್
ಕಮ್ಯಾಂಡರ್ ಇನ್ ಚೀಫ್.’


ಇದನ್ನು ಭಗತನೇ ಬರೆದಿದ್ದ. ಅವನ ಗೆಳೆಯ ಶಿವವರ್ಮ ನಂತರ ನೆನಪಿಸಿಕೊಂಡಂತೆ ಸೀತಾರಾಂ ಬಜಾರಿನ ಗುಪ್ತಸ್ಥಳದಲ್ಲಿ ಅವರೆಲ್ಲ ಸೇರಿ ಇದನ್ನು ಸಿದ್ಧಪಡಿಸಿದ್ದರು. ಪಕ್ಷದ ಲೆಟರ್ ಹೆಡ್‌ನಲ್ಲಿ ೩೦-೪೦ ಪ್ರತಿಗಳನ್ನು ಭಗತನೇ ಟೈಪು ಮಾಡಿದ್ದ. ಅವತ್ತೇ ಸಂಜೆ ಹಿಂದುಸ್ತಾನ್ ಟೈಮ್ಸ್‌ನ ವಿಶೇಷ ಪುರವಣಿಯಲ್ಲಿ ಇಡೀ ಕರಪತ್ರ ಪ್ರಕಟವಾಯಿತು.

ಬಂಧನಕ್ಕೊಳಗಾದ ಭಗತ್ ಸಿಂಗ್ ಮತ್ತು ಸಹಚರರು ಬ್ರಿಟಿಷ್ ಕೋರ್ಟಿನಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳದೇ ತಾವು ‘ತಪ್ಪಿತಸ್ಥ’ರೆಂದೇ ವಾದ ಮಾಡಬೇಕೆಂದು ನಿರ್ಧರಿಸಿದರು. ಈ ವಿಚಾರಣೆಯನ್ನು ತಮ್ಮ ತತ್ವ, ಸಂದೇಶವನ್ನು ಸಮಾಜಕ್ಕೆ ಸಾರಲು ಬಳಸಿಕೊಳ್ಳಬೇಕು ಎಂದುಕೊಂಡರು. ರಾಷ್ಟ್ರವಾದಿ ವಕೀಲರ ಸಲಹೆಗಳನ್ನು ತೆಗೆದುಕೊಂಡರೂ ತಮ್ಮ ಪರ ವಾದಿಸಲು ಯಾವ ವಕೀಲರೂ ಬೇಡವೆಂದು ಹೇಳಿದರು. ಅವರ ವಕೀಲರು ಅವರೇ. ಭಗತ್ ಮತ್ತು ದತ್ತಾ ಜಂಟಿಯಾಗಿ ಬಾಂಬ್ ಸ್ಫೋಟದಂತಹ ಪ್ರಯೋಗವನ್ನು ತಾವು ಏಕೆ ಆಯ್ದುಕೊಂಡೆವು ಎಂದು ಹೇಳುತ್ತಾ ಮ್ಯಾಜಿಸ್ಟ್ರೇಟರಿಗೆ ನೀಡಿದ ಹೇಳಿಕೆಯಲ್ಲಿ ಹೀಗೆ ತಿಳಿಸಿದರು:

‘ನಾವು ಇತಿಹಾಸ ಮತ್ತು ವರ್ತಮಾನವನ್ನು ಗಂಭೀರವಾಗಿ ಅಭ್ಯಸಿಸುವ ನಮ್ರ ವಿದ್ಯಾರ್ಥಿಗಳಲ್ಲದೇ ಬೇರೆಯಲ್ಲ. ಬಾಂಬ್ ಬಿಸಾಡಿದ ಕ್ರಾಂತಿಕಾರಿಗಳ ಉದ್ದೇಶ ಜೀವಹಾನಿಯಾಗಿರಲಿಲ್ಲ. ಅವರ ಮಾನವ ಪ್ರೇಮ ಉಳಿದ ಯಾವುದೇ ಭಾರತೀಯನಿಗಿಂತ ಕಡಿಮೆ ಇಲ್ಲ. ಆಷಾಢಭೂತಿತನವನ್ನು ನಾವು ವಿರೋಧಿಸುತ್ತೇವೆ. ನಮ್ಮ ಪ್ರತಿಭಟನೆ ಈ ವ್ಯವಸ್ಥೆಯ ವಿರುದ್ಧ. ಯಾವ ವ್ಯವಸ್ಥೆ ತನ್ನ ಅಯೋಗ್ಯತೆಯನ್ನು, ಕೇಡಿಗತನವನ್ನೂ ಮೊದಲಿನಿಂದ ತೋರಿಸುತ್ತ ಬಂದಿದೆಯೋ; ಭಾರತವನ್ನು ಅವಮಾನಿಸುತ್ತ, ಅಸಹಾಯಕಗೊಳಿಸುತ್ತ ಬಂದಿದೆಯೋ; ಬೇಜವಾಬ್ದಾರಿಯ ನಿರಂಕುಶಪ್ರಭುತ್ವವನ್ನು ಭಾರತದ ಮೇಲೆ ಹೇರಿದೆಯೋ; ಅಧಿಕಾರ ಹುಡುಕುತ್ತ ಮೂಲೆಮೂಲೆಗೆ ಚಾಚಿಕೊಳ್ಳುತ್ತಿದೆಯೋ ಅಂಥ ದುಷ್ಟ ವ್ಯವಸ್ಥೆಯ ವಿರುದ್ಧ.

ನಾವು ಈ ಮಾರ್ಗ ಆಯ್ದುಕೊಂಡೆವು ಏಕೆಂದರೆ ಭಾರತ ದೇಶದ ಎಷ್ಟೋ ಅಸೆಂಬ್ಲಿಗಳಲ್ಲಿ, ಶಾಸನ ಸಭೆಗಳಲ್ಲಿ ಕಾಲಕಾಲಕ್ಕೆ ಜನಪ್ರತಿನಿಧಿಗಳು ಸ್ವರಾಜ್ಯಕ್ಕಾಗಿ ಕೊಟ್ಟ ಮನವಿ, ಜ್ಞಾಪನ ಪತ್ರಗಳು ಸಾಮ್ರಾಜ್ಯಶಾಹಿಯ ಕಸದ ಬುಟ್ಟಿ ಸೇರಿವೆ. ಎಷ್ಟೋ ಅಸೆಂಬ್ಲಿಗಳಲ್ಲಿ ಸ್ವೀಕರಿಸಲ್ಪಟ್ಟ ನಿರ್ಣಯಗಳು ಸೆಂಟ್ರಲ್ ಅಸೆಂಬ್ಲಿಯಲ್ಲಿ ಹೊಸಕಿ ಹಾಕಲ್ಪಟ್ಟಿವೆ. ಆಯ್ಕೆಯಾದ ಜನಪ್ರತಿನಿಧಿಗಳು ಕಳಿಸಿದ ಯೋಜನೆಯ ನೀಲನಕ್ಷೆ ಪೆನ್ನಿನಲ್ಲಿ ಕೇವಲ ಒಂದು ಗೆರೆಯೆಳೆಯುವ ಮೂಲಕ ನಿರಾಕರಿಸಲ್ಪಟ್ಟಿದೆ. ಲಕ್ಷಾಂತರ ಭಾರತೀಯರ ಬೆವರಿನ ಪ್ರತಿಫಲವನ್ನು ಸಾಮ್ರಾಜ್ಯಶಾಹಿಗಳು ಹೀರುವಾಗ; ಅವರನ್ನು ಬದಲಾಯಿಸಲು, ಗಮನ ಸೆಳೆಯಲು ಮಾಡಿದ ಉಳಿದ ಪ್ರಯತ್ನಗಳೆಲ್ಲ ವಿಫಲವಾದಾಗ; ಜನನಾಯಕರನ್ನೆಲ್ಲ ವಿವಿಧ ಕಾಯ್ದೆಗಳಡಿ ಬಂಧಿಸಿ ಜೈಲಿಗಟ್ಟುವಾಗ; ಟ್ರೇಡ್ ಡಿಸ್ಪ್ಯೂಟ್ ಬಿಲ್ ಹೆಸರಿನಲ್ಲಿ ಚಳುವಳಿ ನಿರತ ಕಾರ್ಮಿಕರ ಹೋರಾಟ ಸ್ಥಗಿತಗೊಳಿಸಹೊರಟಾಗ; ಎಲ್ಲರ ಗಮನ ಸೆಳೆಯಲು ಸೆಂಟ್ರಲ್ ಅಸೆಂಬ್ಲಿಯಲ್ಲಿ ನಿರಪಾಯಕಾರಿಯಾದ ಬಾಂಬ್ ಒಗೆಯುವುದಲ್ಲದೆ ಬೇರಾವ ದಾರಿಯಿತ್ತು ನಮಗೆ? ಎಂದೇ ಯಾವ ಬೆಲೆ ತೆತ್ತಾದರೂ ಸರಿ ನಾವು ಹೀಗೇ ಮಾಡುವುದೆಂದು ನಿರ್ಧರಿಸಿದೆವು ಹಾಗೂ ಆ ಮೂಲಕ ಸಾಮ್ರಾಜ್ಯಶಾಹಿ ಶೋಷಕರಿಗೆ ವ್ಯಕ್ತಿಯನ್ನು ಕೊಲ್ಲಬಹುದು ಆದರೆ ಆದರ್ಶಗಳನ್ನಲ್ಲ ಎಂದು ಹೇಳಬಯಸಿದೆವು. .. ಅತಿಯಾದ ಬಲ ಬಳಸುವುದು ಹಿಂಸೆಯಾಗುತ್ತದೆ. ನೈತಿಕವಾಗಿ ಅದನ್ನು ಸಮರ್ಥಿಸಿಕೊಳ್ಳುವುದೂ ಅಸಾಧ್ಯ. ಆದರೆ ಅಹಿಂಸೆ ಎಂಬ ಯುಟೋಪಿಯನ್ ಆದರ್ಶವೂ ಅಪಾಯಕರ.

ಹತ್ಯಾಕಾಂಡ ನಡೆಸುವುದೇ ನಮ್ಮ ಸಂಚಾಗಿದ್ದರೆ ಸಾಮ್ರಾಜ್ಯಶಾಹಿಗಳ ಬಾಡಿಗೆ ಸೈನಿಕರು ಯುದ್ಧದಲ್ಲಿ ಮಾಡುವಂತೆ ಅಡ್ಡಾದಿಡ್ಡಿ ದಾಳಿ ಮಾಡುತ್ತಿದ್ದೆವು. ಆದರೆ ನಾವು ಹಾಕಿದ ಬಾಂಬು ಕೆಲವು ಫರ್ನಿಚರುಗಳನ್ನು ಧ್ವಂಸಗೊಳಿಸಿ ಐದಾರು ಜನರಿಗೆ ತರಚು ಗಾಯ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಅದನ್ನು ಖಾಲಿ ಬೆಂಚು, ಡೆಸ್ಕುಗಳಿದ್ದ ಕಡೆಯೇ ನೋಡಿ ಬಿಸಾಡಿದ್ದೆವು. ಅದನ್ನು ಎಸೆದ ಜಾಗದಿಂದ ಎರಡು ಅಡಿ ದೂರ ಕುಳಿತವರಿಗೂ ಬರೀ ತರಚು ಗಾಯಗಳಷ್ಟೇ ಆದವು. ಅದರಲ್ಲಿ ಯಾವುದೇ ಉನ್ನತ ಸ್ಫೋಟಕ ತುಂಬಿರಲಿಲ್ಲ. ಅದನ್ನು ಅಧಿಕಾರವರ್ಗ ತುಂಬಿ ತುಳುಕುತ್ತಿದ್ದ ಬಾಕ್ಸ್ ಕಡೆಗೆ ಬಿಸಾಡಲಿಲ್ಲ. ಅಲ್ಲೇ ಇದ್ದ ಸರ್ ಜಾನ್ ಸೈಮನ್ ಕಡೆಗೂ ಬಿಸಾಡಲಿಲ್ಲ. ನಮ್ಮ ಉದ್ದೇಶ ಕಿವುಡನೂ ಕೇಳುವಂತೆ ಮಾಡುವುದು; ಸೂಕ್ತ ಸಮಯದಲ್ಲಿ ವ್ಯವಸ್ಥೆಯನ್ನು ಎಚ್ಚರಿಸುವುದು; ಅಪಾಯ ಚಿಹ್ನೆಯ ಬಾವುಟ ಹಾರಿಸುವುದು.’

ಕೆಳ ಕೋರ್ಟಿನಲ್ಲಿ ಕ್ರಾಂತಿ ಎಂದರೇನು ಎಂದು ಕೇಳಿದಾಗ ಅವರು ಕೊಟ್ಟ ಉತ್ತರ ಹೀಗಿತ್ತು:

‘ಕ್ರಾಂತಿಯೆಂದರೆ ರಕ್ತಪಾತದ ಸಂಘರ್ಷವೇ ಇರಬೇಕಿಲ್ಲ. ಅಲ್ಲಿ ವೈಯಕ್ತಿಕ ದ್ವೇಷಕ್ಕೆ ಯಾವುದೇ ಜಾಗವಿಲ್ಲ. ಅದು ಬಾಂಬು ಪಿಸ್ತೂಲುಗಳ ಪಂಥವಲ್ಲ. ಕ್ರಾಂತಿಯೆಂದರೆ ಪ್ರಸ್ತುತದ ಅನ್ಯಾಯದ ವ್ಯವಸ್ಥೆ ಬದಲಾಗಬೇಕು ಎಂದು ಬಯಸುವುದು. ಕಾಳು ಬೆಳೆವ ರೈತನ ಕುಟುಂಬ ಹಸಿವಿನಲ್ಲಿ ನರಳುತ್ತದೆ. ನೇಕಾರನ ಮನೆಯವರು ಮೈಮುಚ್ಚುವಷ್ಟು ಬಟ್ಟೆಯಿಲ್ಲದೆ ತಿರುಗಾಡುತ್ತಾರೆ. ಗಾರೆಯವ, ಬಡಗಿ, ಕಮ್ಮಾರರಂತಹ ಬೃಹತ್ ಮಹಲು-ಇಮಾರತುಗಳ ಕಟ್ಟುವವರು ಕೊಳೆಗೇರಿಗಳಲ್ಲಿ ವಾಸಿಸುತ್ತಾರೆ. ಮತ್ತೊಂದೆಡೆ ಇವರೆಲ್ಲರ ಶ್ರಮದ ಪ್ರತಿಫಲ ಅನುಭವಿಸುವ ಪರೋಪಜೀವಿಗಳಾದ ಸಿರಿವಂತರು ಮಿಲಿಯಾಧಿಪತಿಗಳಾಗಿ ಬದುಕುತ್ತಾರೆ. ಈ ಭಯಂಕರ ಅಸಮಾನತೆ ಹೆಚ್ಚು ದಿನ ನಿಲ್ಲಲು ಸಾಧ್ಯವಿಲ್ಲ. ಸಮಾಜ ಇನ್ನೇನು ಸಿಡಿದು ಉಕ್ಕಲಿರುವ ಜ್ವಾಲಾಮುಖಿಯ ಬಾಯ್ತುದಿಯಲ್ಲಿ ನಿಂತು ಹರ್ಷಿಸುತ್ತಿದೆ. ಈ ಇಡೀ ನಾಗರಿಕತೆ ಸೂಕ್ತ ಸಮಯದಲ್ಲಿ ರಕ್ಷಿಸಲ್ಪಡದಿದ್ದರೆ ಪತನಗೊಳ್ಳುತ್ತದೆ. ಒಂದು ತೀವ್ರವಾದ, ತತ್‌ಕ್ಷಣದ ಬದಲಾವಣೆ ಅತ್ಯಂತ ಅವಶ್ಯವಿದೆ. ಇದನ್ನು ಅರಿತವರು ಸಮಾಜವನ್ನು ಸಮಾಜವಾದದ ತತ್ವಗಳ ಆಧಾರದ ಮೇಲೆ ಪುನರ್ ಸಂಘಟಿಸುವ ಜವಾಬ್ದಾರಿ ಹೊರಬೇಕಾಗುತ್ತದೆ. ಇದು ಆಗದಿದ್ದರೆ, ಮನುಷ್ಯ ಮನುಷ್ಯನನ್ನು, ದೇಶ ದೇಶವನ್ನು ಶೋಷಿಸುವುದು ನಿಲ್ಲದಿದ್ದರೆ, ಅದನ್ನೇ ಮಾರುವೇಷದಲ್ಲಿ ಸಾಮ್ರಾಜ್ಯಶಾಹಿ ಮಾಡುತ್ತ ಬಂದರೆ; ಮಾನವಕುಲವನ್ನು ಅಪಾಯದಲ್ಲಿ ತಂದು ನಿಲ್ಲಿಸಿರುವ ಸಂಕಷ್ಟವನ್ನು ಎಂದಿಗೂ ತಡೆಯಲಾಗುವುದಿಲ್ಲ. ಯುದ್ಧವಿರೋಧಿ, ವಿಶ್ವಶಾಂತಿಯ ಮಾತುಗಳು ಅಪ್ರಾಮಾಣಿಕ ಬಡಬಡಿಕೆಯಲ್ಲದೆ ಬೇರೇನೂ ಆಗುವುದಿಲ್ಲ. ಕ್ರಾಂತಿ ಎನ್ನುವುದು ಮನುಷ್ಯ ಕುಲದ ಅವಿಚ್ಛಿನ್ನ ಹಕ್ಕು. ಸ್ವಾತಂತ್ರ್ಯ ಕಾನೂನು ವಿಧಿಯಿಂದ ಸಿಗುವುದಿಲ್ಲ, ಅದು ಎಲ್ಲರ ಆಜನ್ಮಸಿದ್ಧ ಹಕ್ಕು.

ಕ್ರಾಂತಿಯೆಂದರೆ ಕುಸಿಯಲಾರದಂತಹ ಒಂದು ಸಮಾಜ ಸೃಷ್ಟಿಸಲು ಸೂಕ್ತ ಬದಲಾವಣೆ ತರುವ ವ್ಯವಸ್ಥೆ. ಅಲ್ಲಿ ಶ್ರಮಿಕನ ಸಾರ್ವಭೌಮತ್ವವಿರುತ್ತದೆ. ಬಂಡವಾಳ ಮತ್ತು ಸಾಮ್ರಾಜ್ಯಶಾಹಿ ಯುದ್ಧದ ಹಿಂಸೆಯಿಂದ ಅದು ಮನುಷ್ಯಕುಲವನ್ನು ಮುಕ್ತಗೊಳಿಸುತ್ತದೆ. ಇದು ನಮ್ಮ ಆದರ್ಶ. ಈ ಆದರ್ಶವನ್ನು ಸ್ಫೂರ್ತಿಯಾಗಿಟ್ಟುಕೊಂಡು ಒಂದು ದೊಡ್ಡ ಎಚ್ಚರಿಕೆಯನ್ನು ನೀಡಿದ್ದೇವೆ. ಈ ಆದರ್ಶಕ್ಕಾಗಿ, ನಂಬಿಕೆಗಾಗಿ ಯಾವ ಕಷ್ಟ ಬಂದರೂ ಎದುರಿಸಲು ಸಿದ್ಧರಾಗಿದ್ದೇವೆ. ನಮ್ಮ ತಾರುಣ್ಯವನ್ನು ಧೂಪದಂತೆ ಉರಿಸಲು ಸಜ್ಜಾಗಿದ್ದೇವೆ. ಏಕೆಂದರೆ ಯಾವ ತ್ಯಾಗವೂ ಇಂತಹ ಉದಾತ್ತ ಆಶಯದ ಎದುರು ಮಹತ್ತಿನದಲ್ಲ. ಕ್ರಾಂತಿಗೆ ಜಯವಾಗಲಿ..’

ಈ ಪ್ರಕರಣದ ನಂತರ ‘ಇಂಕಿಲಾಬ್ ಜಿಂದಾಬಾದ್’ (ಕ್ರಾಂತಿಗೆ ಜಯವಾಗಲಿ) ಎನ್ನುವುದು ಹೆಚ್ಚುಕಡಿಮೆ ಎಲ್ಲ ಸಂಘಟನೆಗಳ ಘೋಷಣೆಯಾಯಿತು. ಆರ್‌ಎಸ್‌ಎಸ್, ಹಿಂದೂ ಮಹಾಸಭಾ, ಮುಸ್ಲಿಂಲೀಗಿನಂತಹ ಧಾರ್ಮಿಕ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಸಂಘಟನೆಗಳನ್ನು ಹೊರತುಪಡಿಸಿ ಮಿಕ್ಕವರೆಲ್ಲ ಆ ಘೋಷಣೆಯನ್ನು ಬಳಸಿಕೊಂಡರು.

ಅವರು ಎಸೆದಿದ್ದು ದೊಡ್ಡ ಗರ್ನಾಲಿನಂತಹ ಪಟಾಕಿಗಿಂತ ಮಿಗಿಲಾದ ಸ್ಫೋಟಕವಾಗಿರಲಿಲ್ಲ. ಅಸಲಿಗೆ ಅದು ಹಾನಿಕಾರಕ ಬಾಂಬೇ ಆಗಿರಲಿಲ್ಲ. ಗಮನ ಸೆಳೆಯುವುದಷ್ಟೇ ಅವರ ಉದ್ದೇಶವಾಗಿತ್ತು. ನಂತರ ಲಾರ್ಡ್ ಇರ್ವಿನ್ ಅವರ ಉದ್ದೇಶವನ್ನು ಸರಿಯಾಗಿ ಗ್ರಹಿಸಿ ಹೇಳಿಕೆ ಕೊಟ್ಟ: ‘ಅವರ ದಾಳಿ ವ್ಯಕ್ತಿಗಳ ವಿರುದ್ಧವಲ್ಲ, ಅದು ಇಡಿಯ ವ್ಯವಸ್ಥೆಯ ವಿರುದ್ಧ. ಸಾಮ್ರಾಜ್ಯದ ವಿರುದ್ಧ.’ ಭಾರತೀಯರಿಗೆ ಅರಿವಾಗಿತ್ತೋ ಇಲ್ಲವೋ, ಬ್ರಿಟಿಷರಿಗೆ ಭಗತ್ ಮತ್ತವನಂಥ ಗೆಳೆಯರ ಬದುಕಿನ ಬೆಲೆ ಏನೆಂದು ಸ್ಪಷ್ಟವಾಗಿ ತಿಳಿದುಹೋಯಿತು. ರಷಿಯನ್ ಕ್ರಾಂತಿ, ಏರುತ್ತಿರುವ ಕಮ್ಯುನಿಸಂನ ಜನಪ್ರಿಯತೆ, ಸಾಮ್ರಾಜ್ಯಶಾಹಿ ವಿರೋಧ ಇವೆಲ್ಲವನ್ನು ಗ್ರಹಿಸಿದ ಬ್ರಿಟಿಷರು ಭಾರತದಲ್ಲಿ ರಾಷ್ಟ್ರೀಯ ಹೋರಾಟದೊಳಗೆ ಕಮ್ಯುನಿಸಂ ಒಳಸೇರದಂತೆ ಮಾಡಬೇಕೆಂದು ಗಟ್ಟಿಯಾಗಿ ನಿರ್ಧರಿಸಿದರು. ಸಾಮ್ರಾಜ್ಯದ ವಿರುದ್ಧ ಇರುವವರನ್ನು ಮಟ್ಟ ಹಾಕಲು ವ್ಯೂಹ, ತಂತ್ರ ಹುಡುಕತೊಡಗಿದರು. ಹಲವರ ಬಂಧಿಸಿದರು. ಮಿಂಚಿನ ವೇಗದಲ್ಲಿ ವಿಚಾರಣೆ ನಡೆಸಿ ಲೆಕ್ಕವಿಲ್ಲದಷ್ಟು ತರುಣರನ್ನು ಗಲ್ಲಿಗೇರಿಸಿದರು, ಗಡೀಪಾರು ಮಾಡಿದರು.

ನ್ಯಾಯಾಲಯದಲ್ಲಿ ದತ್ತಾ ಪರವಾಗಿ ಅಸಫ್ ಅಲಿ ವಾದಿಸುವುದು, ಭಗತ್ ತನ್ನ ಕೇಸನ್ನು ತಾನೇ ವಾದಿಸುವುದು ಎಂದು ನಿರ್ಧಾರವಾಯಿತು. ವಿಚಾರಣೆಯನ್ನು ತುರ್ತಾಗಿ, ಸುರಕ್ಷಿತವಾಗಿ ಮುಗಿಸುವ ತರಾತುರಿಯಲ್ಲಿ ಭಗತ್ ಮತ್ತವನ ಗೆಳೆಯರನ್ನು ದೆಹಲಿಯಲ್ಲಿ ಒಂದಾದ ಮೇಲೆ ಮತ್ತೊಂದು ಜೈಲಿಗೆ ಸ್ಥಳಾಂತರಿಸಿದರು. ಮೇ ತಿಂಗಳಲ್ಲಿ ಆರಂಭಿಕ ವಿಚಾರಣೆ ನಡೆದು ಜೂನ್‌ನಲ್ಲಿ ತೀರ್ಪು ಬಂದು ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಯ್ತು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...