Tuesday, March 22, 2016

ಸ್ಫೂರ್ತಿ ಗಿರೀಶ್ : ನಾಲ್ಕು ಕವಿತೆಗಳು






೧. 
ಯಾರದೋ ಬೆರಳಿನ ನೆರಳು


ನಾನು ಎಲ್ಲಾವನ್ನು ಬಿಟ್ಟುಬಿಟ್ಟಿದ್ದೇನೆ
ನಾನು ಉಸಿರಾಡುವುದು ನನಗೂ
ಕೇಳುವುದಿಲ್ಲ
ಎಲ್ಲರೂ ನಡೆದ ದಾರಿ ನನ್ನದೂ ಸಹ
ಕೆಲವರು
ಧೂಳು ಸೀಳಿದಂತೆ ಓಡುವಾಗ
ಹಲವರು ತೆವಳಿಕೊಂಡು ಸಾಗುವಾಗ
ನಾನು ಹಿಂಬಾಲಿಸುತ್ತೇನೆ
ನನ್ನ ಬದುಕು ನನ್ನದಲ್ಲ ಯಾರದೋ ಬೆರಳಿನ ನೆರಳು
***



೨. 
ಮುಖವಾಡಗಳು

ಮುಖವಾಡಗಳನ್ನು ಮಾರಲಿದ್ದೇನೆ
ಕೊಳ್ಳಿರೋ
ಧ್ವನಿ ಕಿರಿದು
ಉಸಿರಿಡಿದು
ತೊದಲಿದ ನಾಲಿಗೆ ಬಿದ್ದುಹೋಗಿದೆ
ಕಳೆದುಹೋಗಿದೆ ಆತ್ಮಬಲ
ಬಲಿಗೆ ಸಿದ್ದ
ಬೆನ್ನು ಬಾಗಿದೆ
ಗುದ್ದಿ ತೀರಿಸಿಕೊಳ್ಳಲಿದು ಸಕಾಲ
ಒಳಮೈ ರಕ್ತ ಕುದಿಯುವ ಗಡಿಗೆ
ಕೆಂಡಮುಚ್ಚಿದ ಕಣ್ಣು
ತೆರೆಯದಂತೆ ಅದುಮಿರುವೆ
ಹೂವ ಕೆತ್ತಿದ ಚಿತ್ರ
ಮೃದು ಮಧುರ
ಮುಖವಾಡಗಳ ಮಾರಲಿದ್ದೇನೆ
ಕೊಳ್ಳಿರೋ
***


೩. 
ಓದಲೇಬೇಕಿದೆ

ಓದಲೇಬೇಕಿದೆ ನಾನು ಎಲ್ಲವನ್ನು
ವೃದ್ಧಾಪ್ಯದಿಂದ ಬಿಳುಚಿದ ಇತಿಹಾಸದ ಪುಸ್ತಕದಿಂದ
ಕಲ್ಪಿತಕಥೆಗಳನ್ನು
ಶೃಂಖಲೆಗಳ ಕಾನೂನುಗಳನ್ನು
ದುರಂತದ ಯಾತನೆ
ನಿರಾಸೆ ತುಂಬಿರುವ
ಜೀವನದ ಗೂಢಾರ್ಥ ಸಾರುವ ಗ್ರಂಥದ ಮೂಟೆಗಳನ್ನು
ಹಕ್ಕಿಗಳು ಆಕಾಶದಲ್ಲಿ ಎಲ್ಲೆ ಮೀರಿ ಹಾರುವಾಗ
ಎಲೆಗಳು ಗಾಳಿಯಲ್ಲಿ ತೊಯ್ಯುವಾಗ
ಝರಿಯ ಬದಿಯಲ್ಲಿ ಹೆಮ್ಮರಗಳು ಹೂ ತಳೆಯುವಾಗ
ಮಿಗಗಳು ಪ್ರಬುದ್ಧತೆಯ ಮುಖವಾಡ ಧರಿಸಿ
ಬದುಕುವುದಿಲ್ಲ
ಮತ್ತು  ಓದುವುದಿಲ್ಲ ಏನನ್ನೂ
ನಾನು
ಓದಲೇಬೇಕಿದೆ ಎಲ್ಲವನ್ನು
***

೪.  
ಹಕ್ಕಿಗಳನ್ನು ಬಿಟ್ಟು ಬಿಡಿ

ನಮ್ಮಯ ಹಕ್ಕಿಯನ್ನು ಬಿಟ್ಟೆವು
ನಿಮ್ಮವನ್ನು ಬಿಟ್ಟು ಬಿಡಿ
ಹಾರಿಕೊಂಡಿರಲಿ ರೆಕ್ಕೆ ಗಟ್ಟಿಯಿರುವವರೆಗೂ
ಹೇಗೋ ತೆವಳಿದರಾಯಿತು
ಬೆನ್ನುಮೂಳೆ
ಸವೆಯುವವರೆಗೂ
ನಮ್ಮ ಹಕ್ಕನ್ನು ಕಸಿದರು
ನಿಮ್ಮವನ್ನು ಕಸಿದುಕೊಂಡಾರು
ಯಾರದೋ ಭಿಕ್ಷೆಯ ಗುಕ್ಕಿಗೆ
ಅಡವಿಟ್ಟು
ನಮ್ಮ ಮನೆ
ನಮ್ಮ ಭಾಷೆ
ನಮ್ಮ ಹೊಲವ
ನಮ್ಮ ತನು ಮನ ಧನವ ಅರ್ಪಿಸಿ ನಿರಾಳವಾಗಿಹೆವು
ಉಳ್ಳವರ   ಹಿತಾಸಕ್ತಿಗಳು
ಹುತಾತ್ಮವಾಗುವುವು
ಯಾರೋ ನೆಟ್ಟ ಬಳ್ಳಿಗೆ
ನಾವು ನೇಣುಬಿಗಿದುಕೊಳ್ಳುವೆವು
 
ನಮ್ಮಯ ಹಕ್ಕಿಯನ್ನು ಬಿಟ್ಟೆವು
ನಿಮ್ಮವನ್ನು ಬಿಟ್ಟು ಬಿಡಿ
ಹಾರಿಕೊಂಡಿರಲಿ ರೆಕ್ಕೆ ಗಟ್ಟಿಯಿರುವವರೆಗೂ
ಹೇಗೋ ತೆವಳಿದರಾಯಿತು ಬೆನ್ನುಮೂಳೆ
ಸವೆಯುವವರೆಗೂ.
***
.
* ಸ್ಫೂರ್ತಿ ಗಿರೀಶ್ ಅವರ ಮೂಲ ಹೆಸರುವಿಶಾಲಾಕ್ಷಮ್ಮ. ಕವಿತೆ ಅವರಿಗೆ ತುಂಬ ಇಷ್ಟ. ನಿರಂತರವಾಗಿ ಬರೆಯುತ್ತಿರುವ ಸ್ಪೂರ್ತಿ ಇನ್ನು   ಕವನ ಸಂಕಲನ ತಂದಿರುವುದಿಲ್ಲ. ಬರವಣಿಗೆ ಅವರ ಬಹುಮುಖ್ಯ ಹವ್ಯಾಸ. ಸಧ್ಯ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತೆಯಾಗಿ ಮಂಡ್ಯದಲ್ಲಿ ಕೆಲಸ.
 

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...