Friday, March 25, 2016

ಬಾಗೇಶ್ರೀ ಅನುವಾದ:ಗೇಬ್ರಿಯಾಲ ಮಿಸ್ತ್ರಾಲ್ ನಾಲ್ಕು ಕವಿತೆಗಳು
ನಾವು ಅನೇಕ ತಪ್ಪುಗಳನ್ನು ಮಾಡಬಹುದು. ಆದರೆ ಮಕ್ಕಳ ಬಗ್ಗೆ ಅಸಡ್ಡೆ ತೋರುವುದು ಎಲ್ಲಕ್ಕಿಂತ ದೊಡ್ಡ ಅಪರಾಧ, ಜೀವನದ ತಳಹದಿಯ ಬಗ್ಗೆಯೇ ತಳೆವ ಉದಾಸೀನ. ಮಾಡಬೇಕಾದ ಅನೇಕ ಕೆಲಸಗಳನ್ನು ಆಮೇಲೆ ಮಾಡಿದರಾಯಿತು ಅಂತ ಮುಂದೆ ತಳ್ಳಬಹುದು. ಆದರೆ ಮಕ್ಕಳು ನಮಗಾಗಿ ಕಾಯುವುದಿಲ್ಲ. ಮಗುವಿನ ಮೂಳೆ ಬೆಳೆದು ಗಟ್ಟಿ ಆಗುತ್ತಿರುವುದು ಈಗ, ದೇಹದಲ್ಲಿ ರಕ್ತ ಉತ್ಪಾದನೆ ಆಗುತ್ತಿರುವುದು ಈಗ, ಪಂಚೇಂದ್ರಿಯಗಳು ಚುರುಕಾಗುತ್ತಿರುವುದು ಈಗ. ಮಗುವಿನ ಕರೆಗೆ “ನಾಳೆ ಬಾ” ಅನ್ನಲಾಗುವುದಿಲ್ಲ. ಯಾಕೆಂದರೆ ಕಂದನ ಹೆಸರೇ “ಇಂದು”


ಇದು ಚಿಲಿ ದೇಶದ ಕವಿಯತ್ರಿ, ಸ್ತ್ರೀವಾದಿ, ಚಿಂತಕಿ, ಲೇಖಕಿ, ಶಿಕ್ಷಣ ತಜ್ಞೆ ಗೇಬ್ರಿಯಾಲ ಮಿಸ್ತ್ರಾಲ್ (ಇದು ಆಕೆಯ ಕಾವ್ಯ ನಾಮ, ಮೂಲ ಹೆಸರು ತುಂಬಾ ಉದ್ದ!) ಹೇಳುವ ಮಾತು. ಈಕೆ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಲ್ಯಾಟಿನ್ ಅಮೇರಿಕಾದ ಮಹಿಳೆ.
 
ಸ್ಪಾನಿಶ್ ಬರಹಗಾರರ ಬಗ್ಗೆ ವಿಶೇಷ ಪ್ರೀತಿ ಇರುವ ಮಂದಿಗೂ ನೆರುಡಾ, ಮಾರ್ಕ್ವೆಸ್ ಹೀಗೆ ಒಂದು ಹತ್ತು ಹೆಸರುಗಳ ಆಚೆ ತಿಳಿದಿರುವುದು ಕಷ್ಟ. ಓ.ಎಲ್. ನಾಗಭೂಷಣಸ್ವಾಮಿ ಅವರು ಇತ್ತೀಚಿಗೆ ಒಂದಿಷ್ಟು ಮಿಸ್ತ್ರಾಲ್ ಕವಿತೆಗಳನ್ನು ಪರಿಚಯಿಸುವವರೆಗೆ ನನಗೆ ಈಕೆಯ ಬಗ್ಗೆ ಗೊತ್ತಿರಲಿಲ್ಲ. ನೆರುಡಾ ತನ್ನ ಆತ್ಮಚರಿತ್ರೆಯಲ್ಲಿ ನಾವು ಅರಿಯದ, ಪ್ರಾಯಶಃ ಅನುವಾದ ಆಗದ ಬಹಳಷ್ಟು ಸ್ಪಾನಿಶ್ ಬರಹಗಾರ ಬಗ್ಗೆ ಬರೆಯುತ್ತಾನೆ, ಅದರಲ್ಲಿ ಅವನಿಗೆ ಪಾಠ ಹೇಳಿದ ಮಿಸ್ತ್ರಾಲ್ ಕೂಡ ಒಬ್ಬಾಕೆ ಅಂತ ಓ.ಎಲ್.ಎನ್. ಹೇಳಿದರು.
 
ಬಹಳ ಕಷ್ಟದಲ್ಲಿ ಬೆಳೆದ ಮಿಸ್ತ್ರಾಲ್ ಟೀಚರ್ ಆದದ್ದು, ರಾಯಭಾರಿಯಾಗಿ ದೇಶ ವಿದೇಶ ಸುತ್ತಿದ್ದು, ಆಕೆ ವೈಯ್ಯಕ್ತಿಕ ಜೀವನದಲ್ಲಿ ಅನುಭವಿಸಿದ ಕಷ್ಟಗಳು (ತಾನು ಮದುವೆ ಆಗಬೇಕು ಎಂದುಕೊಂಡವನು ಆತ್ಮಹತ್ಯೆ ಮಾಡಿಕೊಂಡು ಸತ್ತ ಬಳಿಕೆ ಆಕೆ ಮದುವೆ, ಮಕ್ಕಳು ಎಲ್ಲ ಬೇಡ ಅಂತ ಇದ್ದುಬಿಟ್ಟಳು) ಎಲ್ಲವೂ ವಿಶಿಷ್ಟವಾದದ್ದು. ಈಕೆಯ ಕವಿತೆ, ಬರಹಗಳು ಬಹಳ ತೀವ್ರ ಅನುಭವ ಮತ್ತು ಭಾವನೆಗಳನ್ನು ಸರಳ ಮತ್ತು ಲಿರಿಕಲ್ ಶೈಲಿಯಲ್ಲಿ ಕಟ್ಟುವ ಬಗೆ ಮನಸ್ಸಿಗೆ ಮುಟ್ಟುತ್ತದೆ. “ಕವಿತೆ ನನ್ನ ಇಂದ್ರಿಯಕ್ಕೆ ಮತ್ತು ನಾವು ‘ಆತ್ಮ’ ಎಂದು ಹೆಸರಿಟ್ಟಿರುವ ನನ್ನತನಕ್ಕೆ ಒಂದು ಬಗೆಯ ನೆಮ್ಮದಿ ತರುತ್ತದೆ. ನನ್ನದೇ ಕವಿತೆಗಿಂತಲೂ ಬೇರೆಯರವ ಕವಿತೆಗಳು ತರುವ ನೆಮ್ಮದಿ ದೊಡ್ಡದು. ಕವಿತೆ ನನ್ನ ರಕ್ತ ಸಂಚಲವನ್ನು ನಿಯಮಿತಗೊಳಿಸುತ್ತದೆ, ನನ್ನೊಳಗೆ ಇನ್ನೂ ಉಳಿದಿರುವ ಬಾಲಕಿಯ ನೆನಪನ್ನು ಕಾಪಾಡುತ್ತದೆ, ಹೊಸಬಳನ್ನಾಗಿ ಮಾಡುತ್ತದೆ, ಪ್ರಪಂಚದ ಬಗ್ಗೆ ಕಲ್ಮಶರಹಿತ ಪ್ರೀತಿ ಹುಟ್ಟಿಸುತ್ತದೆ” ಅನ್ನುವ ಗೇಬ್ರಿಯಾಲಳ ಕಾವ್ಯಮಯ ಗದ್ಯ ಲೇಖನಗಳೂ ಚೆಂದ (ಆಕೆ ಅನಾನಸ್ ಹಣ್ಣಿನ ಬಗ್ಗೆ, ಮುತ್ತಿನ ಬಗ್ಗೆ ಬರೆದ ಪುಟ್ಟ ಲೇಖನಗಳನ್ನು ಓದಿ).  
 
ಈಕೆಯ ಬಗ್ಗೆ ಇಲ್ಲಿ ಒಂದು ವಿಸ್ತ್ರತ ಲೇಖನವಿದೆ: http://www.poetryfoundation.org/bio/gabriela-mistral
 
ಗೇಬ್ರಿಯಾಲಳ ಕೆಲ ಕವಿತೆಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡಿದ್ದೇನೆ. ಅರಿಯದ ಭಾಷೆಯ ಪದ್ಯಗಳನ್ನು ಇಂಗ್ಲೀಷಿನಲ್ಲಿ ಮಾತ್ರ ಓದಿಕೊಂಡು ಮಾಡುವ ಅನುಸರಣೆ/ಅನುವಾದ ಅದೆಷ್ಟರ ಮಟ್ಟಿಗೆ “ಮೂಲ”ದ ಅನುವಾದ ಅನ್ನಬಹುದೋ ನಾ ಕಾಣೆ. ಆದರೂ ಓ.ಎಲ್.ಎನ್. ಅವರೇ ಅಂದ ಹಾಗೆ ಅನುವಾದದ ನಂತರವೇ ಅಲ್ಲವೇ ಯಾವುದೇ ಪಠ್ಯಕ್ಕೆ “ಮೂಲ” ಅನ್ನುವ ಪಟ್ಟ ಸಿಗುವುದು?! ಇದು ಸಧ್ಯದ ಅನುವಾದ. ಮತ್ತೆ ಪರಿಷ್ಕರಿಸುತ್ತೇನೆ. 
 
ಹುಡುಗಿ 
 
ವಯಸ್ಸು ಹನ್ನೆರಡಿದ್ದಾಗ
ನಾಲ್ಕರ ಹುಡುಗಿಯ ಹಾಗಿವಳು ಅಂದರು
ಯಾಕಂದರೆ ನನ್ನ ವಯಸ್ಸಿಗೆ
ತಕ್ಕಂತೆ ನಾನಿರಲಿಲ್ಲ 
ಹೊಲಿಗೆ, ಅಡುಗೆ ಬರುತ್ತಿರಲಿಲ್ಲ
ಕಣ್ಣಲ್ಲಿ ಯಾವಾಗಲೂ ಕನಸು 
ಕತೆ, ಪದ್ಯ ಕೇಳುವ ಹುಚ್ಚು
ಪಾತ್ರೆ ಉಜ್ಜು ಅಂದರೆ ಉಹೂಂ
ಎಲ್ಲಕ್ಕಿಂತಾ ಹೆಚ್ಚು
ಹೀಗೆ ಕವನ ಕಟ್ಟುವುದೇ ಮೆಚ್ಚು!

ಮತ್ತೆ ನೋಡುವುದೆಂದರೆ 
 
ಇಲ್ಲ… ಇನ್ನೆಂದೆಂದೂ ಇಲ್ಲ
ನಡುಗುವ ತಾರೆಗಳ ರಾತ್ರಿಯಲ್ಲಿಲ್ಲ
ಇಣುಕುವ ಮುಂಜಾವಿನ ಬೆಳಕಿನಲ್ಲಿಲ್ಲ
ಮಟಮಟ ಮಧ್ಯಾಹ್ನದ ಅಗ್ನಿಕುಂಡದಲ್ಲಿಲ್ಲ
 
ಗದ್ದೆಯ ಸುತ್ತ ಸುತ್ತಿ ದೂರ ಮರೆಯಾಗುವ
ಕಾಲು ಹಾದಿಯ ಕೊನೆಯಲ್ಲಿಲ್ಲ 
ಬೆಳದಿಂಗಳ ಹಾಲಲ್ಲಿ ಮಿಂದು ಚಿಮ್ಮುವ
ಚಿಲುಮೆಯ ತುಟ್ಟತುದಿಯಲ್ಲಿಲ್ಲ
 
ಅವನ ಹೆಸರು ಕೂಗುತ್ತ, ಕತ್ತಲಲ್ಲಿ ಕರಗುತ್ತಾ
ಸುತ್ತಿದ ಕಾಡ ಹೆಮ್ಮರಗಳ ಅಡಿಯಲ್ಲಿಲ್ಲ
ನನ್ನ ರೋಧನದ ಮಾರ್ದನಿ ನನ್ನೊಡಲಿಗೆ 
ತಿರುಗೆಸೆವ ಗುಹಾಂತರ ದೇಗುಲದಲ್ಲಿಲ್ಲ 
 
ಓ… ಅವನನ್ನು ಮತ್ತೊಮ್ಮೆ ನೋಡಲಾರೆನೆ?
ಎಲ್ಲೋ ಎಂತೋ ಹೇಗಾದರೂ ಸರಿ 
ನರಕದ ಕರಿನೀರ ಸುಳಿಯಲ್ಲಿ, ಉರಿವ ಬಾಣಲೆಯಲ್ಲಿ
ತಣ್ಣನ ಚಂದಿರನಡಿ ರಕ್ತ ಹೆಪ್ಪುಗಟ್ಟುವ ಗಳಿಗೆಯಲ್ಲಿ
 
ಚಳಿ ಮಳೆ ಬಿರುಗಾಳಿ ಸುಡುಬೇಸಿಗೆಯಲ್ಲಿ 
ಅವನ ಆ ಎತ್ತಿದ ಕತ್ತ ಬಳಸಿದ
ಬಿರುಸು ಬಿಗಿದಪ್ಪುಗೆಯ ಮಿಲನದಲ್ಲಿ  
ಅವನೊಡನೆ ಮತ್ತೊಮ್ಮೆ ಇರುವುದೆಂದರೆ… 

ಜೋಗುಳ 
 
ಮಲಗು ನನ್ನ ಮುದ್ದು ಮಲಗು  
ಚಿಂತೆ ಭಯವಿಲ್ಲದೆ ಮಲಗು 
ನನ್ನಾತ್ಮಕ್ಕೆ ನಿದ್ದೆ ಬರದಿದ್ದರೆ ಬೇಡ 
ವಿಶ್ರಾಂತಿ ಇಲ್ಲದಿದ್ದರೆ ಹೋಗಲಿ
 
ಮಲಗು ನನ್ನ ಮುದ್ದು ಮಲಗು 
ರಾತ್ರಿಯ ನಿನ್ನ ಕನಸಿನ ಪಿಸುದನಿಗೆ  
ಹುಲ್ಲು ಹಾಸು, ಕುರಿಮರಿಯ ತುಪ್ಪಳ
ಮೀರಿದ ಮೃದುರೇಶಿಮೆಯ ಸ್ಪರ್ಷವಿರಲಿ
 
ನನ್ನ ಮೈ ಮನಗಳ ತಳಮಳ 
ನಿನ್ನ ಜೊತೆ ಮಂಪರಿಗೆ ಇಳಿಯಲಿ 
ನಿನ್ನಲ್ಲಿ ನನ್ನ ಕಣ್ಣು ಮುಚ್ಚಲಿ 
ನಿನ್ನಲ್ಲಿ ನನ್ನ ಎದೆ ವಿರಮಿಸಲಿ  
 
ಅಮ್ಮ ಮತ್ತು ಸಾವು 

ತಲೆ ಎಣಿಸುವ ತಂತ್ರಗಾರ್ತಿ
ಸಾವೆಂಬ ಚಾಲಕಿ ಮುದುಕಿಯೇ,
ನೀ ನಡೆವ ಹಾದಿಯಲ್ಲಿ
ನನ್ನ ಕಂದನ ನೆರಳೂ ಸುಳಿಯದಿರಲಿ

ಹಸಿಗೂಸುಗಳ ಮೂಸುತ್ತ
ಹಾಲ ಪಸೆ ಅರಸುತ್ತ ನಡೆವ ನಿನಗೆ
ಉಪ್ಪು, ಜೋಳದ ವಾಸನೆ ಬಡಿಯಲಿ
ನನ್ನೆದೆಯ ತೇವ ತೋರದಿರಲಿ

ಲೋಕದೆಲ್ಲ ಅಮ್ಮಂದಿರ ಗುಮ್ಮ
ಬುರುಡೆ ಮಾಲೆಗಳ ಅಜ್ಜಮ್ಮ
ನೀನಲೆವ ಕಡಲ ತಡಿಯಲ್ಲಿ
ನನ್ನ ಕಂದ ಕಾಲ್ತೊಡರದಿರಲಿ

ನನ್ನ ಕಂದನಿಗಿತ್ತ ಹೆಸರು
ಅವಳು ಮುಟ್ಟುವ ಹೂವ ಕಂಪು
ನಿನ್ನ ಜ್ಞಾಪಕ ಚಿತ್ರಪಟದಿಂದ
ಅಳಿಸಿ ನಿವಾಳಿಸಿ ಹೋಗಲಿ
 
ಉಪ್ಪು ಉಸುಕಿನ ಸುಂಟರಗಾಳಿಯೆದ್ದು
ತಲೆ ಕೆಡಿಸಿ, ಹುಚ್ಚು ಹಿಡಿಸಿ
ನಿನಗೆ ಪೂರ್ವಾಪರಗಳ
ಅರಿವೇ ಇಲ್ಲದಂತಾಗಿ ಹೋಗಲಿ
 
ಅಮ್ಮನಾರು ಕಂದನಾರೆಂದು ತೋಚದ
ಕಡಲ್ಯಾವುದು ಮೀನ್ಯಾವುದೆಂದು ಅರಿಯದ
ಆ ದಿನ, ಆ ಗಂಟೆ, ಆ ಗಳಿಗೆ
ನಾನು ಮಾತ್ರವೇ ನಿನ್ನ ಕಣ್ಣಿಗೆ ಬೀಳಲಿ
 
ಪುಟ್ಟ ಪಾದಗಳು 

ಮಗುವಿನ ಪುಟ್ಟ ಪಾದಗಳು
ಚಳಿಗೆ ನೀಲಿಗಟ್ಟಿದ ಪಾದಗಳು…
ಅಯ್ಯೋ ದೇವರೆ!
ಕಂಡೂ ಕೈಹಿಡಿಯದ ಈ ಮಂದಿ ಎಂಥವರು!
 
ಗಾಯಗೊಂಡ ಪುಟ್ಟ ಪಾದಗಳು
ಕಲ್ಲುಮುಳ್ಳು ಚುಚ್ಚಿ ಗಾಯವಾದ ಪಾದಗಳು
ಮಣ್ಣು ಹಿಮ ಮೆಟ್ಟಿ ಘಾಸಿಗೊಂಡ ಪಾದಗಳು
ಕುರುಡು ಮಂದಿಗೆ ನೀನು ಮೆಟ್ಟಿದ ನೆಲದಲ್ಲಿ
ಅರಳುವ ಬೆಳಕಿನ ಹೂವು ಕಾಣುವುದಿಲ್ಲ
ನಿನ್ನ ರಕ್ತಸಿಕ್ತ ಪುಟ್ಟ ಪಾದ ಇಟ್ಟಲ್ಲೆಲ್ಲ
ನಳನಳಿಸುವ ಕೆಂಗುಲಾಬಿ ತೋರುವುದಿಲ್ಲ
ನೇರ ದಾರಿಯಲ್ಲಿ ದಿಟ್ಟ ನಡೆವ
ನಿನ್ನ ಪಾದ ಎಡವುವ ಪ್ರಶ್ನೆ ಇಲ್ಲ ಮಗುವಿನ ಪುಟ್ಟ ಪಾದಗಳು
ಮರುಗುವ ಪುಟ್ಟ ರತ್ನಗಳು… 
ಕಂಡೂ ಕಾಣದ ಈ ಮಂದಿ ಎಂಥವರು! 
 
ಮುಸ್ಸಂಜೆ

ಈ ಮಧುರ ಗಳಿಗೆ 
ನನ್ನೆದೆ ಕರಗುವ ಮೊಂಬತ್ತಿ
ಧಮನಿಯಲಿ ಹರಿಯುತ್ತಿದೆ
ಮದಿರೆಯಲ್ಲ, ಮಂದ ತೈಲ 
ಬದುಕು ಚಿಗರೆಯಂತೆ ಚಂಗನೆ
ಸದ್ದು ಸುಳಿವಿಲ್ಲದೆ ಓಡಿದೆ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...