Tuesday, March 22, 2016

ಪ್ರಿಯ ಇಂತಿ ದೇವಾ..

ಡಾ ಎಚ್. ಎಸ್. ಅನುಪಮಾ



ಈಗತಾನೆ ಅರಳಿದ ಹೂವು
ಬಂಡೆ ಸೀಳಿನಿಂದ ತಂತಾನೆ ಸುರಿವ ಶುದ್ಧ ನೀರು
ಪರ್ವತಾಗ್ರದ ವಿರಳ ಗಾಳಿಯಲು 
ತೇಲಿಬರುವ ಅಯ್ಮಾರಾ ಹೆಣ್ಣಿನ ಹಾಡು
ಚಂಗನೆ ನೆಗೆವ ಮರಿ ಅಲ್ಪಾಕದ ತೊದಲ ಹೆಜ್ಜೆ

ನೋಟ ರುಚಿ ನಾದ ಹಿಮಬೆಳಗು..
ಪ್ರಿಯನೆ,
ಎದೆ ತುಂಬಿರುವ ಕುಂದಿರದ ಈ ಚೆಲುವೆಲ್ಲ
ನೀನಿತ್ತ ಮೊದಲ ಉಸಿರಿಗೇ ಅರ್ಪಣೆ

***

ಕಡಿದಾದ ಪರ್ವತ ಕಣಿವೆಗಳಲ್ಲಿ
ನಿಲದೆ ಹರಿವ ತಣ್ಣನೀರು
ಶಿಖರಾಗ್ರಗಳ ಮೇಲೆ
ಸೂರ್ಯ ಬಿಸಿಲಿಗೆ ಹೊಳೆವ ಹಿಮ
ಚಿಟಿಕೆ ಸದ್ದೂ ಮಾರ್ದನಿಗೊಳುವ 
ರಮ್ಯ ಏಕಾಂತ, ನಿಶ್ಶಬ್ದ..
ನಿನ್ನ ಚೆಲುವು ದೇಹ ಆತ್ಮಗಳ ಬೆಸೆದಿದೆ

ನಿನ್ನ ಬಿಟ್ಟೆ
ಹೊರಟುಬಿಟ್ಟೆ ಎನಬಹುದೆ?
ಚಿಟ್ಟೆ ಕೋಶರೆಕ್ಕೆಯ ಹೊತ್ತೆ ಹಾರುತ್ತಿದೆ
ಯಾವುದೋ ಆದಿಮ ಲೋಕದ 
ಧೂಳಿನ ನಡುವೆ ಪಾದ ಚಲಿಸುವಾಗಲೂ
ನೋಟ ನಿನ್ನೊಳಗೆ ಇದೆ

ಹಕ್ಕಿಯನ್ನು
ಬೆಟ್ಟದ ಹುಲಿಯನ್ನು
ಹಾವನ್ನು
ನೆಲಮುಗಿಲುನದಿಗಳನ್ನು
ಪೂಜಿಸುವವರ ನಡುವೆ ನಿಂತಿದ್ದೇನೆ
ನಿನ್ನ ಪ್ರೀತಿಸದಿರುವುದು ಹೇಗೆ?

ಮಳೆ ಬಿಸಿಲುಗಳ ಸಂಜೆ
ಧುತ್ತನೆ ಕಣ್ಣೆದುರೆ ಅರಳಿದ ಕಾಮನಬಿಲ್ಲು
ಎಷ್ಟು ಸಾವಿರ ಮೈಲು ದೂರವಿದ್ದರೇನು
ತಂದೆಯೇ, ನಿನ್ನ ಕರುಣೆ 
ನೆನೆಯದಿರಬಹುದೇ ನಾನು?

***


ವಿರಕೋಹಾ
ನಿನ್ನದೆ ಪವಿತ್ರ ಕಣಿವೆಯಿದು
ಗಣಿಗಾಯಗಳ ನೆತ್ತರಿಗೆ ವಿಲ್ಕಮಾಯು
ಕೆನ್ನೀರ ಹೊಳೆಯಾಗಿ ಹರಿಯುತಿಹುದು  
ಗರ್ಭಗುಡಿಗೆ ಜೇಡ ಬಲೆ ನೇಯುವಾಗ 
ಕಣ್ಣಲ್ಲಿ ಕಣ್ಣಿಟ್ಟು ನೋಡದವರು
ನಿನ್ನ ದೇವಾಲಯಗಳ ತುಂಬಿರುವರು 

ನೀಲಿ ಆಗಸ ಕೆಂಪಾಗಿದೆ
ಪುಟ್ಟ ಹಳದಿ ಹಕ್ಕಿ
ಬಾಗಿಲು ಬಡಿಯುತ್ತಿದೆ
ಋತು ಹೊರಳುತ್ತಿರುವ ಸೂಚನೆ
ದಾಟಬೇಕು ಎಲ್ಲವನ್ನೂ
ಬೇರುಗಳಿರುವ ಹಾಗೇ.
ಮರವೇ 
ಋತು ಹೊರಳುತ್ತಿದೆ
ನಿನಗೆ ರೆಕ್ಕೆಗಳಿವೆ..

ವಿಶ್ವಹೃದಯವು ಕಡಲ ಮೊರೆತವಾಗಿ
ಮಿಡಿಯುತಿದೆ..
ಇಂತಿ ದೊರೆಯೆ
ಬರಬಾರದೆ ನೀ ಬಯಲಿಗೆ?

***


(ಇಂತಿ = ಸೂರ್ಯ, ವಿರಕೋಹಾ = ಇಂಕಾ ಸೃಷ್ಟಿಕರ್ತ ದೇವತೆ, ವಿಲ್ಕಮಾಯು = ಪೆರುವಿನ ನದಿ, ಅಲ್ಪಾಕಾ = ತುಪ್ಪಳ ಕೊಡುವ ಕುರಿ ಜಾತಿಯ ಪರ್ವತಗಳ ಪ್ರಾಣಿ)

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...