Monday, April 25, 2016

ಮಾಯಾವತಿ ಅವರ ಕನ್ಹಯ್ಯನ ಮೇಲಿನ ದಾಳಿ ಸೈದ್ಧಾಂತಿಕ ದಿವಾಳಿತನವಲ್ಲದೆ ಮತ್ತೇನು?


ದಯಾನಂದ್. ಟಿ.ಕೆ.ಒಂದೆರಡು ದಿನಗಳಿಂದ ದಲಿತಪಕ್ಷ ಬಿಎಸ್ಪಿ ಮತ್ತು ಕಮ್ಯುನಿಷ್ಟ್ ಹಿನ್ನೆಲೆಯ ಕನ್ಹಯ್ಯರ ಸೈದ್ಧಾಂತಿಕತೆಗಳ ಬಗೆಗಿನ ಚರ್ಚೆ ನಡೆಯುತ್ತಿದೆ. ಕಮ್ಯುನಿಷ್ಟ್ ಕನ್ಹಯ್ಯ ದಲಿತಪರವಾದ, ಬಡವರ ಪರವಾದ ಪ್ರಶ್ನೆಗಳೆತ್ತುತ್ತಿರುವುದು ಬಿಎಸ್ಪಿ ಪಕ್ಷಕ್ಕೆ ಆಗಿ ಬರುತ್ತಿಲ್ಲ. ಇದಕ್ಕೆ ತಕ್ಕ ಲಾಜಿಕಲ್ ಕಾರಣಗಳನ್ನು ಒದಗಿಸದೆ ಕನ್ಹಯ್ಯನ ಭೂಮಿಹಾರ್ ಜಾತಿಯನ್ನು ಮುಂದಿಟ್ಟುಕೊಂಡು ಮಾಯಾವತಿಯವರು ಅಗ್ಗದ ಆರೋಪಗಳನ್ನು ಹೊರಿಸಿದ್ದಾರೆ. ಈ ಬಗೆಗಿನ ಚರ್ಚೆ ಮುಂದುವರೆದು ಕನ್ಹಯ್ಯನಷ್ಟೇ ಅಲ್ಲ, ದಲಿತರಲ್ಲದ ಯಾರೂ ಸಹ "ಜೈ ಭೀಮ್" ಘೋಷಣೆಯನ್ನು ಕೂಗಬಾರದೆಂದು ಬಿಎಸ್ಪಿಯ ಬೆಂಬಲಿಗರು ಫತ್ವಾ ಹೊರಡಿಸಿದ್ದೂ ಆಯಿತು. (ಬಿಎಸ್ಪಿ ಪಕ್ಷದ ಸಂಸ್ಥಾಪಕ ಕಾನ್ಷೀರಾಮರೇ ಕನ್ವರ್ಟೆಡ್ ಸಿಖ್ ಧರ್ಮೀಯರು) ಅಲ್ಲಿಗೆ ತಾಲಿಬಾನಿಗಳಿಗೂ, ಆರೆಸ್ಸೆಸ್ ಎಂಬ ಧರ್ಮದ ವಿಷ ಹಂಚುವ ಎನ್.ಜಿ.ಓಗೂ ಯಾವ ವ್ಯತ್ಯಾಸವೂ ಇಲ್ಲವೆಂದಾಯಿತು. ಎಲ್ಲ ಕಪ್ಪೆಗಳಿಗೆ ಅವರಿರುವ ಬಾವಿಯೇ ಜಗತ್ತು, ಅದರಾಚೆಗೊಂದು ಸಮುದ್ರವಿದೆಯೆಂಬ ಪರಿಜ್ಞಾನವಿದ್ದಂತಿಲ್ಲ.


ಕನ್ಹಯ್ಯನ ಗಲಾಟೆ, ಬಂಧನ, ಚಳವಳಿ ಎಲ್ಲವೂ ನಡೆದು ಹೋಗಿ ಹತ್ತತ್ತಿರ ಎರಡು ತಿಂಗಳುಗಳಾಗುತ್ತ ಬಂದವು. ಆಗಿಂದ ಕನ್ಹಯ್ಯನ ಬಗ್ಗೆ ತಕರಾರು ಇಲ್ಲದಿದ್ದ ಬಿಎಸ್ಪಿ ಪಕ್ಷಕ್ಕೆ ಇದ್ದಕ್ಕಿದ್ದಂತೆ ಕನ್ಹಯ್ಯನನ್ನು ದಲಿತರೆದುರು ಖಳನಾಯಕನಾಗಿರುವ ಜರೂರತ್ತು ಇವಾಗೇನಕ್ಕೆ ಬಂತು?

ಸ್ವಲ್ಪ ಗಮನಿಸಿ ನೋಡಿ, ಇಲ್ಲೊಂದು ಸೂಕ್ಷ್ಮ ವಿಚಾರವಿದೆ. ವೇಮುಲ ಸಾವಿನ ವಿಷಯದಲ್ಲಿ ದಲಿತ ವಿರೋಧಿಯೆಂದು ಹೆಸರು ಕೆಡಿಸಿಕೊಂಡ ಬಿಜೆಪಿ ಮತ್ತು ಮಂಗಪರಿವಾರಗಳು ತಮ್ಮ ದಲಿತ್ ವೋಟ್ ಬ್ಯಾಂಕನ್ನು ಮರುಸ್ಥಾಪಿಸಿಕೊಳ್ಳಲು ಸರ್ಕಸ್ ನಡೆಸುತ್ತಿರುವ ಹೊತ್ತು ಇದು. ಇಂಥ ಬಫೂನ್ ಸರ್ಕಸ್ಸಿನಲ್ಲಿ ಮೋದಿ, ಅಂಬೇಡ್ಕರ್ ಭಜನೆ ಮಾಡ್ತಾರೆ, ಆರೆಸ್ಸೆಸ್ ಅಂಬೇಡ್ಕರ್ ನಮ್ಮವರು ಅಂತ ಪುಂಗಿ ಊದಲು ಶುರುವಿಡುತ್ತದೆ, ಬೈಠಕ್ಕುಗಳಲ್ಲಿ ಅಂಬೇಡ್ಕರ್ ಗುಣಗಾನವಾಗುತ್ತದೆ..
ಇದ್ಯಾವುದೂ ಮಾಯಾವತಿಯವರಿಗೆ ಸಮಸ್ಯೆಯೇ ಆಗುವುದಿಲ್ಲ. ಯಾಕೆ? ಬದುಕಿದಷ್ಟೂ ದಿನ ಅಂಬೇಡ್ಕರರನ್ನು ಕಾಡಿದವರು ಅಂಬೇಡ್ಕರ್ ಪರವಾದ ಹುಸಿ ಕ್ಯಾಂಪೇನ್ ನಡೆಸುವುದು ಮಾಯಾವತಿಯವರಿಗೆ ಸಮಸ್ಯೆಯೇ ಆಗುವುದಿಲ್ಲ ಯಾಕೆ ? ಬಿಜೆಪಿ, ಆರೆಸ್ಸೆಸ್ ನಲ್ಲಿದ್ದು ದಲಿತರಲ್ಲದವರು ಅಂಬೇಡ್ಕರ್ ರನ್ನು ಪೊಲಿಟಿಕಲ್ ಪ್ರಾಫಿಟ್ ಗೆ ಬಳಸುತ್ತಿರುವ ಹೀನ ಕೆಲಸ ಮಾಯಾವತಿಯವರಿಗೆ ಸಮಸ್ಯೆ ಅನಿಸುತ್ತಿಲ್ಲವಲ್ಲ ಯಾಕೆ ? ಒಬ್ಬ ಯಕಶ್ಚಿತ್ ಸ್ಟೂಡೆಂಟ್ ನಾಯಕ ಕನ್ಹಯ್ಯ ಜೈಭೀಮ್ ಅಂದರೆ, ದಲಿತರ ಪರವಾದವಾದ ಕೂಗು ಎತ್ತುವುದು ಮಾತ್ರ ಮಾಯಾವತಿಯವರಿಗೆ ಸಮಸ್ಯೆ ಅನಿಸುತ್ತಿದೆಯಲ್ಲ ಯಾಕೆ ?

ಇವೆಲ್ಲವುಗಳ ಮಧ್ಯೆ ಇರುವ ಹಿಡನ್ ಲೈನ್ ಗಳನ್ನು ಓದಿಕೊಳ್ಳುವುದಾದರೆ, ಬಿಜೆಪಿ ಆರೆಸ್ಸೆಸ್ ನ ಅಂಬೇಡ್ಕರ್ ಭಜನೆಗೂ, ಮಾಯಾವತಿಯವರ ಕನ್ಹಯ್ಯನ ದ್ವೇಷಕ್ಕೂ ಒಂದು ಇನ್ವಿಸಿಬಲ್ ಲಿಂಕ್ ಇದೆ ಅಂತ ಅನ್ನಿಸೋದಿಲ್ವ ? ಮೋದಿ ಮತ್ತು ಮಂಗಪರಿವಾರಕ್ಕೆ ಕನ್ಹಯ್ಯನ ಮುಖ ಕಂಡರಾಗುವುದಿಲ್ಲ. ಯಾಕಂದ್ರೆ ಕನ್ಹಯ್ಯ ಕಟ್ಟರ್ ಬಿಜೆಪಿ ಆರೆಸ್ಸೆಸ್ ವಿರೋಧಿ. ಈ ಲೆಕ್ಕದಲ್ಲಿ ಬಹುಜನರ ಪರವಾದ ನಿಲುವಿನಲ್ಲೇ ಕನ್ಹಯ್ಯ ನಿಂತಿದ್ದಾನೆ. ಇಂಥಲ್ಲಿ ಮಾಯಾವತಿಯವರೇಕೆ ಬಿಜೆಪಿ ವಿರೋಧಿಯನ್ನು ತಮ್ಮ ವಿರೋಧಿ ಅಂತ ಡಿಕ್ಲೇರ್ ಮಾಡಿದ್ದಾರೆ ? ಬಿಎಸ್ಪಿ ಪಕ್ಷ ಬಿಜೆಪಿಯ ಜೊತೆಗೇಕೆ ನಿಂತು ತನ್ನ ಎದುರಾಳಿಯಲ್ಲದ ಕನ್ಹಯ್ಯನಿಗೆ ಕಲ್ಲು ಬೀರುತ್ತಿದೆ ? ಇಲ್ಲಿ ಬಿಜೆಪಿ ಮತ್ತು ಬಿಎಸ್ಪಿ ಎರಡೂ ಪಕ್ಷಗಳು ಒಳ ಒಪ್ಪಂದಗಳೇನಾದರು ಮಾಡಿಕೊಂಡಿವೆಯೇ? ಆಗಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಮಾಯಾವತಿಯವರ ಮೇಲ್ಜಾತಿ ಮೋಹ ಕಳೆದೆರಡು ಎಲೆಕ್ಷನ್ ಗಳಲ್ಲು ನಿಚ್ಚಳವಾಗಿ ಸಾಬೀತಾಗಿದೆ. ಬ್ರಾಹ್ಮಣರ ಸಮಾವೇಶ ಮಾಡುತ್ತ ಅವರ ಕೃಪಾಕಟಾಕ್ಷ ಪಡೆಯಲು ಅವರನ್ನು ಹೊಗಳಿಕೊಂಡು ತಿರುಗುವಷ್ಟರ ಮಟ್ಟಿಗೆ ಬಿಎಸ್ಪಿಯ ಸೈದ್ಧಾಂತಿಕತೆ ಹಳ್ಳ ಹಿಡಿದದ್ದನ್ನು ದೇಶವೇ ನೋಡಿದೆ. ಬಿಜೆಪಿ ಮತ್ತು ಬಿಎಸ್ಪಿ ಅಧಿಕಾರ ರಾಜಕಾರಣದ ವಂಚನೆಯ ಕೂಡಾವಳಿಗಳಲ್ಲಿ ಮೊದಲಿಂದಲೂ ಸಮಾನಮನಸ್ಕರು. ಮತ್ತೆ ಮಾಯಾವತಿಯವರ ಬಾಯಿಂದ ಬ್ರಾಹ್ಮಣ ಭಜನೆ ಶುರುವಾಗಿದೆ. ಅವರಿಗೆ ಅಧಿಕಾರ ಹಿಡಿಯಲು ಬ್ರಾಹ್ಮಣರು ಬೇಕೇ ಬೇಕು. ಹಾಗಾಗಿ ಬಿಜೆಪಿಯ ಶತ್ರುವಾದ ಕನ್ಹಯ್ಯ ಈಗ ಬಿಎಸ್ಪಿಗೂ ಶತ್ರುವಾಗ್ತಾನೆ. ಶತ್ರುವಿನ ಶತ್ರು ನಮಗೂ ಶತ್ರುವಾಗಬೇಕು ಅನ್ನೋದು ಬಿಎಸ್ಪಿ ಪಕ್ಷದ ಸದ್ಯದ ಹಾಸ್ಯಾಸ್ಪದ ನಿಲುವು.

ವೇಮುಲ ಸಾವಿನ ವಿಷಯದಲ್ಲಿ ಕನ್ಹಯ್ಯ ಒಂದು ಕಡೆಯಿಂದ ಪ್ರಭುತ್ವವನ್ನು ಕೆತ್ತಿಕೊಂಡು ಬರುತ್ತಿದ್ದಾಗ ಬಿಎಸ್ಪಿ ಪಕ್ಷ ಈ ಬಗ್ಗೆ ಕಾಟಾಚಾರಕ್ಕೆ ಒಂದೆರಡು ಹೇಳಿಕೆ ಕೊಟ್ಟು ಬಾಯಿಗೆ ಬೀಗ ಹಾಕಿಕೊಂಡಿದ್ದೇಕೆ ? ದಲಿತಪರವಾದ ನಿಲುವು ತಮ್ಮ ಮೇಲ್ಜಾತಿ ರಾಜಕಾರಣದ ಗೆಳೆಯರಿಗೆ ಬೇಸರ ತರಿಸುತ್ತದೆ ಅಂತಲಾ? ಘಟಾನುಘಟಿ ನಾಯಕರೆಲ್ಲ ವೇಮುಲನ ಸಾವಿನ ಸಂದರ್ಭದಲ್ಲಿ ಹೈದರಾಬಾದ್ ವಿ.ವಿಗೆ ಭೇಟಿ ನೀಡಿದರೂ ಮಾಯಾವತಿಯವರು ಮಾತ್ರ ಹೋಗಲಿಲ್ಲವೇಕೆ ? ವೇಮುಲನ ಸಾವಿನ ಬಗ್ಗೆ ಪಕ್ಷದ ವತಿಯಿಂದ ನಡೆದ ಫ್ಯಾಕ್ಟ್ ಫೈಂಡಿಂಗ್ ರಿಪೋರ್ಟನ್ನು ಜನರ ಮುಂದೆ, ಮಾಧ್ಯಮದ ಮುಂದೆ ಬಹಿರಂಗಗೊಳಿಸದೆ ಮುಚ್ಚಿಟ್ಟದ್ದು ಏಕೆ ?

ಇಲ್ಲಿ ಮೋದಿ ಅಂಬೇಡ್ಕರ್ ಮೇಲೆ ಪ್ರೀತಿ ತೋರಿಸುವುದು, ಅಲ್ಲಿ ಮಾಯಾವತಿ ಬ್ರಾಹ್ಮಣರ ಮೇಲೆ ಪ್ರೀತಿ ತೋರಿಸಿವುದು.. ಎರಡಕ್ಕೂ ಏನೋ ಕಾರ್ಯಕಾರಣ ಸಂಬಂಧವಂತೂ ಇದ್ದೇ ಇದೆ. ಇಲ್ಲದಿದ್ದರೆ, ಸುಖಾಸುಮ್ಮನೆ ಎರಡೂ ಒಂದೇ ಸಮಯದಲ್ಲಿ ಶುರುವಾಗುವುದಿಲ್ಲ. ಅಧಿಕಾರ ರಾಜಕಾರಣಕ್ಕೋಸ್ಕರ ಬಿಜೆಪಿ ಜೊತೆಗೆ ಸಲ್ಲಾಪಕ್ಕಿಳಿದಿರುವ ಬಿಎಸ್ಪಿಗೆ ತಾವು ಗಮನ ಹರಿಸಬೇಕಿರುವುದು ಕನ್ಹಯ್ಯನ ಕಡೆಗಲ್ಲ, ಈ ದೇಶದ ಸಾಮಾನ್ಯ ಬಡದಲಿತರ ಕಡೆಗೆ ಅನ್ನುವ ಕಾಮನ್ ಸೆನ್ಸ್ ಈ ಪಕ್ಷಕ್ಕೆ ಬರುವವರೆಗು ಬಿಎಸ್ಪಿ ಪಕ್ಷದ ಯಾವ ಬಾಯಿಮಾತಿನ ಸೈದ್ಧಾಂತಿಕತೆಯನ್ನೂ ನಂಬುವುದು ಅಪಾಯಕಾರಿಯೆಂದು ನನ್ನ ನಂಬಿಕೆ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...