Tuesday, June 07, 2016

ಮೇ ಸಾಹಿತ್ಯ ಮೇಳ ಜೂನ್ 5 ರ ಅವಲೋಕನ ಸಭೆಯ ಚರ್ಚೆ
ಧಾರವಾಡದಲ್ಲಿ ೨೮, ೨೯ ಮೇ, ೨೦೧೬ರಂದು ನಡೆದ ಮೇ ಸಾಹಿತ್ಯ ಮೇಳದ ಕುರಿತು ೫-೬-೧೬ ರಂದು ನಡೆದ ಅವಲೋಕನಾ ಸಭೆ:

ಮುಕ್ತಕಂಠದಿಂದ ಎಲ್ಲರೂ ಹೊಸ ಸ್ಪಂದನೆ, ಹೊಸ ಭರವಸೆ ಮೂಡಿಸುವಲ್ಲಿ ಮೇ ಸಾಹಿತ್ಯ ಮೇಳ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ಭಾವಿಸಿದರು.

ಅಲ್ಲಿ ಕೆಲವರು ಸೂಚಿಸಿದ ಸಲಹೆ-ಅಭಿಪ್ರಾಯಗಳು ಇಂತಿವೆ:

ಡಾ. ಎಚ್. ಬಿ. ಪೂಜಾರ್:

-    ಸಾಹಿತ್ಯ ಸಂಭ್ರಮಕ್ಕೆ ಹೋಗುವವನು ನಾನು. ಇಲ್ಲಿ ಹೋಗಬಹುದೋ ಇಲ್ಲವೋ ಎಂಬ ಗೊಂದಲ ಇತ್ತು. ಹಲವರಲ್ಲಿ ಇದು ಇತ್ತು. ಅದನ್ನು ಹೇಗೆ ನಿವಾರಿಸಿಕೊಳ್ಳುವುದೋ ಗೊತ್ತಿಲ್ಲ. ಆದರೆ ನಾನಾಗಲೀ, ನನ್ನ ಮಿತ್ರರು-ವಿದ್ಯಾರ್ಥಿಗಳಾಗಲೀ, ಇಲ್ಲಿ ಯಾರ‍್ಯಾರು ಬಂದಿದ್ದರೋ ಅವರೆಲ್ಲರೂ ಸ್ಫೂರ್ತಿ ಪಡೆದುಕೊಂಡು ಹೋದದ್ದಂತೂ ನಿಜ.
-    ಇದು ಇನ್ನಷ್ಟು ಒಳಗೊಳ್ಳುವಿಕೆ ಸಾಧಿಸಬೇಕು.

ಅನಿಲ್ ಅಣ್ಣಿಗೇರಿ:

-    ನಮ್ಮ ಗೆಳೆಯರ ಹತ್ತಿರ ಯಾರು ನಡೆಸುವವರು ಅಂತಂದ್ರ ಅವರು ಮಾಡ್ಲಿಕ್ಕತ್ತಾರ, ಹೋಗ್ರಿ, ನಾವೆಲ್ಲ ಮಾಡ್ತಿದೀವಿ ಹೋಗ್ರಿ ಅಂದರು. ಒಂದು ಗುರುತು ಇದ್ದರೆ, ಸಂಚಾಲಕ ಸಮಿತಿ ಇದ್ದರೆ ಒಳ್ಳೆಯದು.

ರಾಮಚಂದ್ರ ಹಂಸನೂರು:

-    ವಿದ್ಯಾರ್ಥಿಗಳ ಸಮಸ್ಯೆಗಳು ಬಹಳವಿವೆ. ಅವರಿಗಾಗಿಯೇ ಇನ್ನೊಂದು ಗೋಷ್ಠಿ ಮೀಸಲಿಡಬೇಕಿತ್ತು.

ಬಸವರಾಜ ಮ್ಯಾಗೇರಿ

-    ವಿದ್ಯಾರ್ಥಿ ಸಂಘಟನೆಗಳ ನಾಯಕರಷ್ಟೆ ಅಲ್ಲ, ಜಿಲ್ಲಾ/ತಾಲೂಕಾವಾರು ಪದಾಧಿಕಾರಿಗಳು ಹಾಗೂ ಬಿಡಿ ವಿದ್ಯಾರ್ಥಿಗಳು ಇನ್ನಷ್ಟು ಬಂದರೆ ಒಳ್ಳೆಯದಿತ್ತು.
-    ಒಂದು ವೆಬ್‌ಸೈಟ್ ಶುರು ಮಾಡಿ. ಅದರ ಮುಖೇನ ಮಾಹಿತಿ ಹಾಗೂ ರೆಜಿಸ್ಟ್ರೇಷನ್ ಮಾಡಿಕೊಳ್ಳುವಂತಿದ್ದರೆ ಒಳ್ಳೆಯದು.

ಎ. ಬಿ. ಹಿರೇಮಠ:

-    ಸಮಯಪಾಲನೆ ಆಗಿದ್ದರೆ ಒಳ್ಳೆಯದಿತ್ತು. ಎಲ್ಲರಿಗು ಅವರವರ ವಿಷಯದ ಕುರಿತು ಅವರು ಹೇಳಬೇಕಾದ್ದನ್ನು ಪೂರ್ಣ ಹೇಳಲಾಗಲಿಲ್ಲ. ಗೋಷ್ಠಿಗಳಲ್ಲಿ ಮಾತನಾಡುವವರ ಸಂಖ್ಯೆ ಕಡಿಮೆ ಇದ್ದರೆ ಒಳ್ಳೆಯದು.

ಚನ್ನಪ್ಪ ಅಂಗಡಿ:

-    ಗೋಷ್ಠಿ ಜಾಸ್ತಿ ಆದವು. ಅದರಲ್ಲಿದ್ದ ಸಂಪನ್ಮೂಲ ವ್ಯಕ್ತಿಗಳೂ ಜಾಸ್ತಿ ಆದರು. ಸಂವಾದ ಅದಕ್ಕೇ ಸಾಧ್ಯವಾಗಲಿಲ್ಲ. ಒಬ್ಬರು ಅಥವಾ ಇಬ್ಬರು ಮಾತನಾಡಬೇಕು. ಉಳಿದಂತೆ ಸಂವಾದ ಆಗುವ ಹಾಗೆ ನೋಡಿಕೊಳ್ಳಬೇಕು.
-    ಇದೇ ವಿಚಾರಧಾರೆ ಇದ್ದರೂ ಕೆಲವರು ಹೊರಗುಳಿದರು. ಬರಬೇಕಿದ್ದವರು ಬರಲಾಗಲಿಲ್ಲ. ಅವರನ್ನು ಒಳಗೊಳ್ಳಲು ಏನು ಮಾಡುವುದೋ ವಿಚಾರ ಮಾಡಬೇಕು.
-    ನಮ್ಮ ಬಳಿ ಪೊಟೆನ್ಶಿಯಲ್ ಬಹಳ ದೊಡ್ಡದಿದೆ. ಅದನ್ನು ಮುಂದಿನ ದಿನಗಳಲ್ಲಿ ಸೂಕ್ತ ಬಳಕೆ ಮಾಡಿಕೊಳ್ಳುವುದು ಹೇಗೆ? ಸ್ಥಳೀಯರನ್ನೂ ಒಳಗೊಳ್ಳುವುದು ಹೇಗೆ ಎಂಬ ಬಗೆಗೆ ಗಮನ ಹರಿಸಬೇಕು.

ಮಹಾದೇವ ಹಡಪದ:

-    ಗೋಷ್ಠಿ ಹೆಚ್ಚಾದವು. ಮೂರು ದಿನ ಮಾಡಿದ್ದರೆ ಚೆನ್ನಾಗಿತ್ತು.
-    ಕೃಷಿ ರೈತರ ಬಗೆಗೆ ಒಂದು ಗೋಷ್ಠಿ ಇರಲೇಬೇಕಿತ್ತು.
-    ಇದು ಇನ್ನೂ ಕೆಲವು ದಿನ ಧಾರವಾಡದಲ್ಲೇ ಆಗಬೇಕು.
-    ನೀಲಿ ಬಾನಿನಲ್ಲಿ ಕೆಂಪು ಸೂರ್ಯ ಹಿಡಿಸಲಿಲ್ಲ. ಎಲ್ಲ ಒಮ್ಮುಖವಾಗಿ ಮಾತನಾಡಿದರು. ಆ ಶೀರ್ಷಿಕೆಯೇ ಸರಿಯಿಲ್ಲ.

ಶಂಕರಗೌಡ ಸಾತ್ಮಾರ್:

-    ಭಾಗವಹಿಸಬೇಕಾದವರ ಸಂಖ್ಯೆ ಎಷ್ಟು ಆಗಬೇಕಿತ್ತೋ ಅಷ್ಟು ಆಗಿದೆ.
-    ಅಶಿಸ್ತು ಆಗಲಿಲ್ಲ, ವ್ಯವಸ್ಥಿತವಾಗಿ ಆಗಿದೆ.
-    ಜೆಎನ್‌ಯು ವಿಷಯಗಳು ಓವರ್‌ಲ್ಯಾಪ್ ಆದವು. ಹೆಚ್ಚಾಯಿತು ಎನಿಸಿತು.
-    ಊಟ ಇನ್ನಷ್ಟು ಸರಳ ಆಗಬಹುದಿತ್ತು.

ಹನಮಂತ ತೆಗ್ಗಳ್ಳಿ :

-    ಗದ್ದರ್ ಮಹಲಿಂಗಪುರಕ್ಕೆ ಬಂದಾಗ ಏನಾಗಿತ್ತೋ ಈಗಲೂ ಹಾಗೆಯೇ ಆಯಿತು. ಶೆಹ್ಲಾ ಪ್ರಭಾವ ಹಾಗಿತ್ತು.
-    ಇದನ್ನು ಧಾರವಾಡ ಅಷ್ಟೆ ಅಲ್ಲ, ಬೇರೆಬೇರೆ ಕಡೆ ನಡೆಸಿರಿ.

ರಾಜಕುಮಾರ ಮಡಿವಾಳರ :

-    ಹಾಡುಗಾರರನ್ನು ಟೀಂವೈಸ್ ಕರೆದು ಗೌರವಿಸಬೇಕು.
-    ಇದು ಇನ್ನಷ್ಟು ದಿನ, ಒಂದು ಗುಂಪಾಗಿ ಗಟ್ಟಿಗೊಳ್ಳುವವರೆಗೂ, ನಮ್ಮಗಳ ನಡುವೆ ಸಂಪರ್ಕ ಏರ್ಪಡುವವರೆಗೂ, ಧಾರವಾಡದಲ್ಲೇ ನಡೆಯಬೇಕು.

ವಿರುಪಾಕ್ಷ ಪಡಿಗೋದಿ:

-    ಪೂರ್ಣ ಯಶಸ್ವಿ ಆಗಿದೆ.
-    ಹಾವೇರಿಯಲ್ಲಿ ನಡೆದಾಗ ಬಿ. ಗಂಗಾಧರ ಮೂರ್ತಿ ಹೇಳಿದ್ದರು: ‘ಇನ್ನು ನಾನು ನೆಮ್ಮದಿಯಿಂದ ಸಾಯುತ್ತೇನೆ. ಯಾಕಂದ್ರೆ ಬಂಡಾಯದ ಆಶಯಗಳನ್ನು ನೀವು ಮುಂದುವರಿಸಿಕೊಂಡು ಹೋಗ್ತೀರಿ ಅನ್ನುವ ಭರವಸೆ ಬಂದಿದೆ’ ಎಂದು. ಅವರ ಭರವಸೆ ಮುಂದುವರೆಯುವ ಅನಿಸಿಕೆ ಹುಟ್ಟಿಸಿದೆ.
-    ಇದು ಬೇರೆಬೇರೆ ಕಡೆಯಲ್ಲೂ ಆಗಬೇಕು.
-    ಸಂವಾದಕ್ಕೆ ಆದ್ಯತೆ ಕೊಡಬೇಕು.

ಬಿ. ಎನ್. ಪೂಜಾರ್:

-    ವೈಚಾರಿಕ, ಪ್ರಗತಿಪರವಾಗಿ ಯೋಚಿಸುವವರಿಗೆ ಭರವಸೆ ಮೂಡಿಸಿರುವ ಸಮ್ಮೇಳನ. ನಿರಾಶೆಯ ಕಾರ‍್ಮೋಡದಲ್ಲಿ ಮಿಂಚು ಹುಟ್ಟಿಸಿದ ಹಾಗೆ ಸಮ್ಮೇಳನ ಕಂಡಿತು. ಪ್ರಗತಿಪರ ಚಿಂತನೆಗೆ ಭವಿಷ್ಯವಿದೆ ಎಂಬ ಆಶಯ ಮೂಡಿಸಿದೆ.
-    ಗಂಭೀರ ವಿಷಯದ ಗೋಷ್ಠಿಗಳು ಸಂವಾದವಾಗಿ ಮಾರ‍್ಪಡಬೇಕಿತ್ತು
-    ನೀಲಿಬಾನಿನಲ್ಲಿ.. ಗೋಷ್ಠಿ ಸರಿಯಾದ ತುದಿ ಮುಟ್ಟಲಿಲ್ಲ
-    ಮಹಿಳೆ ಕುರಿತು ಒಂದು ಗೋಷ್ಠಿ ಇಡಬಹುದಿತ್ತು.
-    ಮುಂದೆ ಒಂದು ಗೋಷ್ಠಿ ವಿದ್ಯಾಥಿಗಳಿಗೇ, ಒಂದು ರೈತರಿಗೇ, ಒಂದು ಮಹಿಳೆಯರಿಗೇ ಅಂತಿಟ್ಟುಕೊಳ್ಳುವ.
-    ಧಾರವಾಡದಲ್ಲೇ ಇನ್ನೊಂದೆರೆಡು ಸಲ ಮಾಡುವ.
ಬಿ. ಮಾರುತಿ

-    ಒಂದು ವರ್ಷದ ಮಟ್ಟಿಗೆ ಸಂಚಾಲಕರ ಸಮಿತಿ ಆಗಬೇಕು
-    ರಿಜಿಸ್ಟರ್ ಮಾಡಿಸಬಹುದೆ?
-    ಚಿತ್ರಕಲಾ ಶಿಬಿರ ಏರ್ಪಡಿಸಬಹುದು. ಇದರ ಜೊತೆಜೊತೆಗೇ ಜರುಗಿದರೆ ಕಲಾವಿರ ಜೊತೆಯೂ ನಿಮ್ಮ ಸಂಪರ್ಕ ಏರ್ಪಡುತ್ತದೆ. ಅದು ಕುತೂಹಲಕರ ಅಭ್ಯಾಸವೂ ಆಗುತ್ತದೆ.
-    ಪ್ರವೇಶ ಶುಲ್ಕ ಇಡುವ ಕುರಿತು ಯೋಚಿಸಬೇಕು
-    ವಿದ್ಯಾರ್ಥಿಗಳಿಗಲ್ಲದಿದ್ದರೂ, ಉಳಿದಂತೆ ಭಾಗವಹಿಸುವವರಿಗೆ.

ಡಾ. ಎಂ. ಡಿ. ವಕ್ಕುಂದ:

-    ಮಾತಾಡುವುದೇ ಅಪರಾಧ, ಮಾತಾಡಿದರೆ ಶಿಕ್ಷೆಯಾಗಬಹುದೋ ಏನೋ ಎಂದು ಮೌನ ಹೆಪ್ಪುಗಟ್ಟುವಾಗ ಇಂಥ ಸಮಾವೇಶಗಳು ನಡೆಯುವುದು ತುಂಬ ಅಗತ್ಯ. ಇದು ಯಶಸ್ವಿಯಾಗಿದೆ. ಇಲ್ಲಿಂದ ಮುಂದೆ ನಮ್ಮ ಮಾತುಗಳು ಶುರುವಾಗಬೇಕು.
-    ಇಂಥ ಹಲವು ಸಮಾವೇಶಗಳು ಈಗ ಕರ್ನಾಟಕದಾದ್ಯಂತ ನಡೆಯುತ್ತ ಜೀವಂತಿಕೆ ಹುಟ್ಟಿಸಿವೆ. ಆದರೆ ಮುಂದೆ? ಸಮಾವೇಶಕ್ಕೆ ಬರುತ್ತಾರೆ. ಚಳುವಳಿಗೆ? ಇದು ದೊಡ್ಡ ಬಿಕ್ಕಟ್ಟು. ಪ್ರಾಯೋಗಿಕವಾಗಿ ಹೇಗೆ ಮುನ್ನಡೆಯುವುದು ಎಂಬ ಬಗ್ಗೆ ನಾವು ಯೋಚಿಸಬೇಕು.
-    ಒಂದೆಡೆ ಎಲ್ಲ ಸೇರಿ ಸಮಾವೇಶ ಮಾಡುವ ಹಾಗೇ ತಳಮಟ್ಟದಲ್ಲಿ ಜನರ ಜೊತೆ ಎಷ್ಟು ಇದ್ದೇವೆ ಅಂತಲೂ ಕೇಳಿಕೊಳ್ಳಬೇಕು.
-    ಸಮಾವೇಶ ಅಂದುಕೊಂಡರೆ ಅದು ಹೀಗೇ ಆಗುವುದು. ಅದರ ರಚನೆಯಲ್ಲೇ ಬದಲಾವಣೆ ಮಾಡಿಕೊಳ್ಳಬೇಕು.
-    ಮೊದಲು ಏನಾದರೂ ಕಾರ್ಯಕ್ರಮ ಹಮ್ಮಿಕೊಂಡು ನಂತರ ಸಮಾವೇಶ ಮಾಡಿದರೆ ಒಳ್ಳೆಯದು.
-    ಎಲ್ಲ ಸಮಾವೇಶಗಳ ಸೇರಿಸಿ ವರ್ಷಕ್ಕೊಮ್ಮೆ ಎಲ್ಲರೂ ಮಹಾಸಮಾವೇಶ ಮಾಡಬೇಕು.
ಬಿ. ಎಸ್. ಸೊಪ್ಪಿನ :

-    ಮೀಡಿಯಾದವರು ಹೇಗೆ ನಿರ್ಲಕ್ಷಿಸುತ್ತಾರೆ, ನಡೆದುಕೊಳ್ಳುತ್ತರೆ ಗಮನಿಸಿ.
-    ಸುಮ್ಮನಿರುವ ಮೈಲ್ಡ್ ಕೋಮುವಾದಿಗಳನ್ನೂ ಗುರುತಿಸಬೇಕು
-    ಸಮಾವೇಶದಿಂದ ಸಮಾವೇಶ. ಮಧ್ಯ ಕೆಲ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳಬೇಕು
-    ಆಯ್ಕೆ ವಿಷಯ ಬಂದಾಗ ಸಾಹಿತ್ಯ ಸಂಭ್ರಮವೋ? ಮೇ ಮೇಳವೋ? ಬರಬರುತ್ತ ನಮಗೇ ಸ್ಪಷ್ಟತೆ ಹುಟ್ಟಬೇಕು.

ಬಸವರಾಜ ಹೂಗಾರ:

-ಮೇ ಸಾಹಿತ್ಯ ಅಂದಕೂಡಲೆ ಕಮ್ಯುನಿಸ್ಟರದು ಅನ್ನುವಂತಾಗುತ್ತದೆ. ಹೆಸರು ಬೇರೆ ಇಡಬಹುದೆ?
ಬೇರೆಬೇರೆ ಊರುಗಳಲ್ಲೂ ಮಾಡಬಹುದು.
ರಿಜಿಸ್ಟರ್ ಮಾಡಿಸಿದರೆ ಒಳ್ಳೆಯದು.

ಡಾ. ಎಚ್. ಎಸ್. ಅನುಪಮಾ:

-    ದಿನಕ್ಕೆ ೩ಕ್ಕಿಂತ ಹೆಚ್ಚು ಗೋಷ್ಠಿ ಇರಬಾರದು.
-    ಸಂವಾದ ಇರಲೇಬೇಕು, ಅದರಲ್ಲೂ ಬದ್ಧತೆಯನ್ನು ವೇದಿಕೆ ಮೇಲೆ ಹೇಳಿಕೊಳ್ಳುವಂತಹ ಸೆಷನ್‌ಗಳು ಅಗತ್ಯ.
-    ಉದ್ಘಾಟನೆ, ಸಮಾರೋಪ, ಅಧ್ಯಕ್ಷತೆ ಅಂತ ಯಾಕೆ ಬೇಕು? ಮಾತಾಡಲು ಶುರು ಮಾಡಿದರೆ ಉದ್ಘಾಟನೆ, ನಿಲ್ಲಿಸಿದಾಗ ಸಮಾರೋಪ.
-    ಜೆಎನ್‌ಯುನಲ್ಲಿ ವಿದ್ಯಾರ್ಥಿ ಚಳುವಳಿ ಸಫಲವಾಗಲು ಕಾರಣ ಅಲ್ಲಿನ ಬೋಧಕ ವೃಂದ (ಹಾಲಿ ಮತ್ತು ಮಾಜಿ) ನಿರಂತರ ವಿದ್ಯಾರ್ಥಿಗಳ ಬೆನ್ನ ಹಿಂದಿರುವುದು. ಅಂತಹ ವಿದ್ಯಾರ್ಥಿ-ಬೋಧಕ ಸಂಬಂಧವನ್ನು ಎಷ್ಟು ವಿ.ವಿ.ಗಳಲ್ಲಿ ನಿರೀಕ್ಷಿಸಬಹುದು?
-    ‘ನೀಲಿ ಬಾನಿನಲ್ಲಿ..’ ಗೋಷ್ಠಿ ಕನ್‌ಕ್ಲೂಡ್ ಆಗಲು ಸಾಧ್ಯವಿಲ್ಲ. ಯಾಕೆಂದರೆ ಅದಿನ್ನೂ ಆಶಯ, ಆಲೋಚನೆಯ ಹಂತದಲ್ಲಿದೆ. ನಂತರ ಆಚರಣೆಗೆ ಮೊದಲಾಗಬೇಕು. ಆ ನಂತರವಷ್ಟೇ ಸೈದ್ಧಾಂತಿಕವಾಗಿಯೂ ಅದು ಗಟ್ಟಿಗೊಳ್ಳಬೇಕು. ಇದೊಂದು ದೀರ್ಘ ಪ್ರಕ್ರಿಯೆ. ಒಂದು ಸೆಷನ್‌ನಲ್ಲಿ ಮುಗಿಯುವುದೇ ಅಲ್ಲ, ಮುಗಿಯಲೂಬಾರದು. ಹಾಗೆ ನೋಡಿದರೆ ತುಂಬ ಲೆಕ್ಕಾಚಾರದ ಮಾತುಗಳನ್ನಾಡಿದ್ದರೂ ದಿನೇಶ್ ಅಮಿನ್ ಮಟ್ಟು ಅಧ್ಯಕ್ಷೀಯ ನುಡಿಗಳಂತೇ ಮಾತಾಡಿದ್ದರು.
-    ಇದು ಧಾರವಾಡದಲ್ಲೆ ಆಗಬೇಕು. ಒಂದು ಬ್ರ್ಯಾಂಡ್ ಆಗಬೇಕು. ಉಳಿದ ಸ್ಥಳಗಳಲ್ಲಿ ಅಲ್ಲಲ್ಲಿಯವರು ಇದರಂತೇ ಸಮಾವೇಶಗಳ ಮಾಡಲಿ. ಎಲ್ಲ ಸಂಪರ್ಕದಲ್ಲಿರೋಣ. ಮಂಗಳೂರಿನಲ್ಲಿ ಜನನುಡಿ, ಸಹಯಾನ, ನಾವು ನಮ್ಮಲ್ಲಿ, ಮಹಿಳಾ ಒಕ್ಕೂಟದ ಕಾರ್ಯಕ್ರಮ - ಹೀಗೇ.


ಬಸೂ :    

    ಈ ಕಾರ್ಯಕ್ರಮ ಹೊಸ ಭರವಸೆ ಹುಟ್ಟಿಸುವಲ್ಲಿ ಶಕ್ತವಾಗಿದ್ದರೆ ಅದಕ್ಕೆ ಹಗಲು ರಾತ್ರಿ ಶ್ರಮಿಸಿದ ಎಲ್ಲ ಸಮಾನ ಮನಸ್ಕ ಗೆಳೆಯರ ಸಹೃದಯ ಶ್ರಮವೇ ಕಾರಣ. ತನುಮನಧನ ಹಲವರು ನೆರವಾಗಿದ್ದಾರೆ. ಎಲ್ಲರಿಗೂ ಶರಣು. ನಾವು ನಿರಂತರವಾಗಿ ಕಾರ‍್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವ ಹಿನ್ನಲೆಯಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಜನ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
    ಮೇ ಸಾಹಿತ್ಯ ಮೇಳ ‘ಸಾಹಿತ್ಯ ಸಂಭ್ರಮ..’ಕ್ಕೆ ಉತ್ತರವಾಗಿ ಹುಟ್ಟಿದ್ದಲ್ಲ. ಅದು ‘ಜನ ಸಾಹಿತ್ಯ ಸಮಾವೇಶ.’ ಆಶಯ ದೃಷ್ಟಿಯಿಂದಲೂ ಕ್ರಿಯೆ ರೂಪದಲ್ಲೂ ’ಸಾಹಿತ್ಯ ಸಂಭ್ರಮ’ದ ವಿರುದ್ಧ ದಿಕ್ಕಿನಲ್ಲಿ ನಾವಿದ್ದೇವೆ. ಇಲ್ಲಿ ಯಾರೂ ಬರಬಾರದೆಂದು ಹೊರಗಿಡುವಿಕೆ ಮಾಡಿಲ್ಲ, ಆದರೂ ಕೆಲವರು ತಾವೇ ಒಂದು ಅಂತರ ಸೃಷ್ಟಿಸಿಕೊಂಡು ಅದನ್ನು ಮುಂದುವರೆಸುತ್ತಾರೆ ಅಷ್ಟೆ. ಬಲಪಂಥೀಯರಲ್ಲದ, ಜೀವವಿರೋಧಿಗಳಲ್ಲದ ಎಲ್ಲರನ್ನು ಒಳಗೊಳ್ಳುವುದೇ ನಮ್ಮ ಆಶಯವೇ ಹೊರತು ಹೊರಗಿಡುವುದಲ್ಲ. ಸಾಹಿತ್ಯ ಸಂಭ್ರಮಕ್ಕಿಂತ ಒಂದು ವರ್ಷ ಮೊದಲೇ ಇದನ್ನು ಆಯೋಜಿಸಲಾಗಿತ್ತು. ಸಾಹಿತ್ಯ ಸಂಭ್ರಮಕ್ಕೆ ಬಲಪಂಥೀಯ ಗುಣಗಳಿವೆ.
    ಬರುವ ದಿನಗಳಲ್ಲಿ ಇದನ್ನು ಎಲ್ಲಿ ಮಾಡುವುದು ಎಂಬ ಬಗೆಗೆ ಮತ್ತೆ ಚರ್ಚಿಸೋಣ
    ವೆಬ್‌ಸೈಟ್ ಮಾಡಬೇಕೆನ್ನುವುದು, ವಿದ್ಯಾರ್ಥಿಗಳಿಗಾಗೇ ಒಂದು ಗೋಷ್ಠಿ ಇರಬೇಕೆನ್ನುವುದು ಉತ್ತಮ ಸಲಹೆ. ಬರುವ ದಿನಗಳಲ್ಲಿ ಈ ಕುರಿತು ಯೋಚಿಸೋಣ.
    ಕೆಲವು ಸಂಗಾತಿಗಳಿಂದ ಸಲಹೆಗಳು ಬಂದಿವೆ: ಇದಕ್ಕೆ ಒಂದು ಲಾಂಛನ ಇಡಿ, ರಿಜಿಸ್ಟರ್ ಮಾಡಿಸಿ, ಬೇರೆಬೇರೆ ಭಾಗಗಳಲ್ಲಿ ಮಾಡಿ, ಪ್ರವೇಶ ಶುಲ್ಕ ಇಡಿ, ಹಳೆಯ ಬಂಡಾಯದ ಜೀವಗಳನ್ನೂ ಜೊತೆಯಿಟ್ಟುಕೊಳ್ಳಿ, ಜಿಲ್ಲಾವಾರು ಸಭೆ-ಸಮಿತಿ ಮಾಡಿ ಇತ್ಯಾದಿ. ಇವುಗಳ ಕುರಿತೂ ನಂತರ ಪ್ರತ್ಯೇಕವಾಗಿ ಚರ್ಚಿಸೋಣ.
    ನೀಲಿಬಾನು.. ಗೋಷ್ಠಿಯ ಸಮನ್ವಯಕಾರರಾಗಿ ಜಿಆರ್ ಬಂದಿದ್ದರೆ ಸರಿ ಹೋಗುತ್ತಿತ್ತು, ಆದರೆ ಅನಾರೋಗ್ಯದ ಕಾರಣ ಅವರು ಬರಲಿಲ್ಲ.
    ಇದು ಒಂದು ಸಾಂಸ್ಕೃತಿಕ ಚಳುವಳಿ, ಚಳುವಳಿಗೆ ಪೂರಕವಾಗಿ ಸಂಭವಿಸುತ್ತಿರುವ ಒಂದು ಸಾಂಸ್ಕೃತಿಕ ಒಗ್ಗೂಡುವಿಕೆ. ಇದರ ಲಾಭವನ್ನು ಇಲ್ಲಿ ಸೇರುವ ಸಹಭಾಗಿ ಸಂಘಟನೆಗಳೆಲ್ಲ ಪಡೆದುಕೊಳ್ಳಬೇಕೆನ್ನುವುದು ನಮ್ಮ ಆಶಯ. ದಯವಿಟ್ಟು ಇದನ್ನು ಗಮನಿಸಬೇಕು.
    ಏನನ್ನೇ ಮಾಡಿದರೂ ಯಾರೇ ಮಾಡಿದರೂ ಅದಕ್ಕೆ ಒಂದು ಲೇಬೆಲ್ ಅಂಟಿಸುವುದು ಭಾರತೀಯ ಮನಸಿನ ಒಂದು ಕಾಯಿಲೆ. ಅದಕ್ಕಾಗಿ ನಾವು ಚಿಂತಿತರಾಗಬೇಕಿಲ್ಲ. ನಮ್ಮ ಆಶಯಗಳ ಬಗೆಗೆ ಸ್ಪಷ್ಟವಾಗಿದ್ದರೆ ಸಾಕು.
    ವಕ್ಕುಂದ ಹೇಳಿದಂತೆ ಎಲ್ಲ ಕಡೆ ನಡೆಯುವ ಸಮಾವೇಶಗಳೂ ಸೇರಿ ವರ್ಷಕ್ಕೆ ಒಂದೆಡೆ ದೊಡ್ಡ ಸಮಾವೇಶ ಮಾಡಬಹುದು ಎನ್ನುವುದು ಒಳ್ಳೆಯ ಸಲಹೆ. ಮುಂದಿನ ದಿನಗಳಲ್ಲಿ ಈ ಕುರಿತು ಪ್ರಯತ್ನಿಸೋಣ.
    ಖರ್ಚುವೆಚ್ಚಗಳನ್ನು, ಹಣಸಂಗ್ರಹ ಮಾಡಿದ ವಿವರಗಳನ್ನು ವಾಟ್ಸಪ್ ಮೂಲಕ ಎಲ್ಲರಿಗೂ ಕಳಿಸಲಾಗುವುದು,
    ಬರುವ ಸಭೆಯಲ್ಲಿ ಸಂಚಾಲಕ ಸಮಿತಿ, ಪ್ರಣಾಳಿಕೆ ಹಾಗೂ ಮುಂದಿನ ಕಾರ್ಯಕ್ರಮ ಕುರಿತು ಚರ್ಚಿಸೋಣ. ಜೆಎನ್‌ಯು ವಿದ್ಯಾರ್ಥಿ ನಾಯಕರು, ಎಫ್ ಟಿಟಿಐ ಪುಣೆ, ಚೆನ್ನೈ ಐಐಎಂ ಹಾಗೂ ಹೈದರಾಬಾದ್ ಕೇಂದ್ರೀಯ ವಿವಿ ಹುಡುಗರ ಒಂದು ತಂಡ ತಂದು ರಾಜ್ಯದ ಐದು ವಿಭಾಗಗಳಲ್ಲಿ ವಿದ್ಯಾರ್ಥಿಗಳ ಸಮಾವೇಶ ಮಾಡಬಹುದೆ ಎಂಬ ಬಗೆಗೆ ಯೋಚಿಸಿಕೊಂಡು ಬನ್ನಿ.
    ನಾವು ಕಾಲಕಾಲಕ್ಕೆ ಸಭೆ ಸೇರುತ್ತ ಇರೋಣ, ಸಂಪರ್ಕ ಇಟ್ಟುಕೊಂಡಿರೋಣ. ಮುಂದಿನ ಸಭೆ ೨೬ ಜೂನ್. ಎಲ್ಲರೂ ಬರಬೇಕು.
    ಜೈ ಭೀಮ್, ಲಾಲ್ ಸಲಾಂ. 
 

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...