Tuesday, June 07, 2016

ಹುಡುಗ ಮತ್ತು ಕವಿತೆ



ಮಂಜುಳಾ ಹುಲಿಕುಂಟೆ




ಎಂದೂ ಬರೆಯದ
ಅವನಿಗೆ ಹಳತನಿಸದ ಕವಿತೆಯೊಂದ ಬರೆಯಬೇಕಿದೆ ಹುಡುಗಿ
ಇಲ್ಲವಾದಲ್ಲಿ..
ಹುಡುಗಾ ಸುಮ್ಮನೆ ಸಿಡುಕ್ಕುತ್ತಾನೆ ...
ಅಲ್ಲಿಂದಲೇ ಆರಂಭಿಸುತ್ತಾಳೆ
ಬಣ್ಣತುಂಬಿದ ಬೆರಳ ತುದಿಯಿಂದ..

ಅಲ್ಲಿ
ಬೆರಳಿಗೆ-ಬೆರಳ ಬೆಸೆಯುವ ಕಾವ್ಯ ಅತೀ ಮಹತ್ವದ್ದು
ಮೋಹದ ಕದ ತೆರೆಯುವ ಎಲ್ಲಾ ಕವಿತೆಯೂ
ಹೀಗೆ ಬೆರಳ ಬೆಸುಗೆಯಿಂದಲೇ ಆರಂಭಿಸಬೇಕಂತೆ
ಇಲ್ಲವಾದಲ್ಲಿ
ಹುಡುಗಾ ಸುಮ್ಮನೆ ಸಿಡುಕ್ಕುತ್ತಾನೆ..

ಕುತ್ತಿಗೆಯ ಪಕ್ಕದಲ್ಲೊಂದು ಹೂಮುತ್ತು
ರೆಪ್ಪೆ ತೆರೆಯಲು ಚಡಪಡಿಸುವ ಕಣ್ಣಿನ ಮೇಲೊಂದು
ಪುಟ್ಟ ಮುತ್ತಿನ ಕವಿತೆ...
ಸಣ್ಣಗೆ ಇಳಿಯಬೇಕು... ಕವಿತೆ
ಇಳಿಸಂಜೆಯಲಿ ಇನಿಯನ ಹೆಗಲು ಸಿಕ್ಕಾಗ
ನಾಚಿ ಮೊಗ್ಗಾಗುತ್ತಾಳಲ್ಲ ಹಾಗೇ...
ಇಲ್ಲವಾದಲ್ಲಿ ..
ಹುಡುಗಾ ಸುಮ್ಮನೆ ಸಿಡುಕ್ಕುತ್ತಾನೆ..

ಸ್ಪರ್ಷ-ಸ್ಪರ್ಷದ ಬೆಂಕಿಗೆ
ಎದೆಯ ಹಣತೆಯಲ್ಲಿ
ದಿಗ್ಗನೇ ದೀಪವೊಂದು ತಂತಾನೆ ಬೆಳಗುತ್ತದೆ
ಸಣ್ಣಗೆ ಉರಿಯುತ್ತಲೇ
ಮೈಯ - ನರನರವೂ ನುರಿತಂತೆ
ತಂತಾನೆ ನಾದವೊಂದು ಮಿಡಿಯುತ್ತದೆ....
ಬಿಸಿ ಉಸಿರ ಆಳದಲ್ಲೊಂದು
ಸಣ್ಣ ನಡುಕ ಸುಮ್ಮನೆ ಸರಿದಾಡುತ್ತದೆ
ಗೆರೆ ದಾಟಬೇಡವೇ ಹುಡುಗಿ ..
ಇಲ್ಲಾ...ಹುಡುಗಾ ಸುಮ್ಮನೆ ಸಿಡುಕುತ್ತಾನೆ ..

ಕವಿತೆ ಮುಂದುವರೆಯಬೇಕು
ಆ ಹುಡುಗಿ ಅತೀ ನಾಚಿಕೆಯವಳೋ
ಹುಡುಗಾ...
ಸುಮ್ಮನೇ ಸಿಡುಕದೇ ನಿನ್ನ ಕವಿತೆಗಳ ಮುಂದುವರೆಸು ..

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...