Tuesday, June 07, 2016

ಮೇ ಸಾಹಿತ್ಯ ಮೇಳ ; ಮುಂದೇನು ? - ಕೆ. ಪಿ. ಸುರೇಶ


ಈ ಬಾರಿಯ ಮೇ ಸಾಹಿತ್ಯ ಮೇಳ ನಾನು ನಿರೀಕ್ಷಿಸಿದ್ದಕ್ಕಿಂತಲೂ ಚೆನ್ನಾಗಿತ್ತು. ಮುಖ್ಯತಃ ಯುವ ತಲೆಮಾರಿನ ಉತ್ಸಾಹ ನನ್ನಂಥ ಐವತ್ತು ದಾಟಿದವರಿಗೆ ಧೈರ್ಯ ಕೊಡುವಂತಿತ್ತು.

 ಇಷ್ಟಾಗಿಯೂ ಮುಂದಿನ ಬಾರಿಗೆ ರಿಪಿಟಿಟಿವ್ ಆಗುವ ಅಸ್ಪಷ್ಠ ಆತಂಕ ನನ್ನದು. ಫುಟ್‌ಬಾಲ್‌ನಲ್ಲಿ ಅತ್ಯುತ್ತಮ ಆಟ ಆಡಿದ ಮೇಲೆ ಈ ಯಶಸ್ಸೇ ಮುಂದಿನ ಆಟದ ಮೇಲೆ ಕರಿನೆರಳು ಬೀರುತ್ತೆ!!

 ಇದನ್ನು ಹೀಗೆ ಹೇಳಬಹುದು:
೧.    ಜೆಎನ್‌ಯು ವಿದ್ಯಮಾನಗಳ ಕಾರಣಕ್ಕೆ ಒಳಗಿನ ಅಶಾಂತಿ, ಕ್ರಿಯಾಶೀಲತೆ ಎರಡೂ ಎಚ್ಚರವಾಗಿರಬಹುದೇ?
೨.    ದೊಡ್ಡ ಅಪಾಯದ ಸೂಚನೆ ಸಿಕ್ಕಾಗ ಪ್ರತಿಕ್ರಿಯಿಸುವ ರೀತಿಗೊಂದು ಘೋಷಣಾತ್ಮಕತೆ ಇರುತ್ತದೆ. ತನಗೇ ಧೈರ್ಯ ತುಂಬುವ ಬಗೆ ಇದು.
ಈ ಅನಿಸಿಕೆಗೆ ಕಾರಣ:
೧.    ತುಂಬಾ ಹುಡುಗರು, ಪ್ರಗತಿಪರ ಈಡಿಯಂಗಳನ್ನು ತೀರಾ ಸಲೀಸಾಗಿ ವಿಜೃಂಭಣೆಯಿಂದ ಬಳಸುತ್ತಿದ್ದುದು.
೨.    ಮುಂದಿನ ದಾರಿ ಬಗ್ಗೆ ಕೂಡಾ ಸೈದ್ಧಾಂತಿಕ ಪ್ರೇರಣೆಯಿಂದ ಬರುವ ಜಾರ‍್ಗನ್‌ಗಳನ್ನು ಬಳಸುತ್ತಿದ್ದುದು. ಇದನ್ನು ಟಿರನಿ ಆಫ್ ಐಡಿಯಾಸ್ ಅನ್ನಬಹುದು! ಅಂದರೆ ತನ್ನ ನಿಜವಾದ ಅನಿಸಿಕೆ ಬದಲು ತಾನು ಮಾರುಹೋದ ಸಿದ್ಧಾಂತದ ಕನ್ನಡಕದ ಮೂಲಕವೇ ನೋಡುವ ಬಗೆ. ಉದಾ: ಜಾಗತೀಕರಣ, ಕೋಮುವಾದ, ದಲಿತ, ಮಹಿಳೆ, ಹಿಂದುಳಿದ, ದಮನಿತ ಮುಂತಾದ ಗುಂಪುಪದಗಳ ಬಳಕೆಯಲ್ಲಿ ಸಲೀಸುತನ ಕಂಡಿತು. ಇದರ ಅಪಾಯವೆಂದರೆ, ಅನುಭವಜನ್ಯ ಪುರಾವೆಗಳ ಮೂಲಕ ಸೈದ್ಧಾಂತಿಕ ನಿಲುವನ್ನು ರೂಪಿಸುವಲ್ಲಿ ಜಾಳುತನ ಬೆಳೆದೀತು.

ನೀಲಿ ಬಾನಿನಲ್ಲಿ ಕೆಂಪು ಸೂರ್ಯದ ಬಗ್ಗೆಯೇ ಇರುವ ಬಿಕ್ಕಟ್ಟು ತೀವ್ರವಾದದ್ದು. ಮುಖ್ಯತಃ ದಲಿತ ಪ್ರಶ್ನೆಯನ್ನು ಎದುರಿಸುವಲ್ಲಿ ಗಮನಿಸಬೇಕಾದದ್ದು- ಅವರು ರಾಜಕೀಯ ಮುಖ್ಯವಾಹಿನಿಯ ಭಾಗವಾಗಿರುವ ಕಾರಣ ಎಲ್ಲಾ ಪಕ್ಷಗಳೂ ಅವರನ್ನು ರುಚಿಗೆ ತಕ್ಕಂತೆ ಬಳಸುತ್ತಿರುವುದನ್ನು ನೋಡುತ್ತಿದ್ದೇವೆ. ಎಡ-ಬಲ ಮುಟ್ಠಾಳ ಜಿದ್ದಿನಲ್ಲಿ ಭಾಜಪ ಎಡಗೈಗೆ ಪ್ರಾಧಾನ್ಯತೆ ಕೊಟ್ಟು ಮೇಲ್ಗೈ ಪಡೆದಿದ್ದು ಮರೆಯಬಾರದು. ಚುನಾವಣಾ ರಾಜಕೀಯದಲ್ಲಿ ದಲಿತ ನಾಯಕತ್ವ ’ಸೂಡೋ’ ನಾಯಕರಲ್ಲಿರುವುದನ್ನೂ ನಾವು ಎದುರಿಸಬೇಕು.  ಇನ್ನು ಎಡಪಕ್ಷಗಳಲ್ಲಿ ಸಿಪಿಎಂ ಬಗ್ಗೆ ಕಡಿಮೆ ಮಾತಾಡಿದರೆ ಒಳ್ಳೆಯದು..!! ನನಗೆ ಎಡಪಕ್ಷಗಳ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ಎಂಥಾ ಅವಕಾಶವನ್ನೂ ಚೆಲ್ಲುವ ಅವರ ಪ್ರತಿಭೆ ಕಂಡು ನಾನು ದಂಗಾಗಿದ್ದೇನೆ. ಕಾಂಗ್ರೆಸ್‌ಗೆ ಇದರಲ್ಲಿ ಎರಡನೇ ಸ್ಥಾನ.
ಚಳವಳಿಗಳು ಹುಟ್ಟುವುದು ನೇರ ದಮನದ ಸಂದರ್ಭಗಳಲ್ಲಿ ಎಂಬ ಮಟ್ಟಿಗೆ ನಾವು ಬಂದಿದ್ದೇವೆ. ಇದು ಪ್ರತಿಕ್ರಿಯಾತ್ಮಕ ಚಹರೆ ಹೊಂದಿರುತ್ತದೆ. ಸೂಕ್ಷ್ಮ ಅಗೋಚರ ದಮನದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿಲ್ಲ. ಯುವಕರಿಗೂ ಇದರ ಸಿಕ್ಕುಗಳು ಗೊತ್ತಾದಂತಿಲ್ಲ. ಜಾತಿ ಮತ್ತು ಗ್ರಾಮೀಣ ಕೃಷಿಲೋಕದ ಸ್ಥಿತಿ ಇಂಥಾದ್ದು.
 ಇದನ್ನು ಎಷ್ಟೂ ಮುಂದುವರಿಸಬಹುದು.

 ನಾವು ಫಾಲೋ ಅಪ್ ಮಾಡಬೇಕಾದ ಅಗತ್ಯವಿದೆ.ಮುಖ್ಯತಃ ಯುವಕರಿಗೆ, ಮತ್ತು ನನ್ನಂಥಾ ಸೈದ್ಧಾಂತಿಕ ಅಸ್ಪಷ್ಠತ ಇರುವವರಿಗೂ!

 ಅಲ್ಲಲ್ಲಿ ತಿಂಗಳು ತಿಂಗಳು ಚರ್ಚೆ ಶಿಬಿರ ಮಾಡಲೇಬೇಕು. ತಾನು ಬಳಸುವ ಈಡಿಯಂಗಳಿಗೆ ಅನುಭವ ಜನ್ಯ ಪುರಾವೆಗಳನ್ನು ಪ್ರತಿಯೊಬ್ಬನೂ ಕಂಡುಕೊಳ್ಳುವುದು ಕಡ್ಡಾಯಗೊಳಿಸಬೇಕು. ಇದು ಅನೆಕ್‌ಡೋಟಲ್ ಆದರೂ ಪರವಾಗಿಲ್ಲ. ಪ್ರತೀ ಘಟನೆ, ಇಷ್ಯೂಗಳಿಗಿರುವ ಸಂಕೀರ್ಣತೆಯ ಆಯಾಮಗಳನ್ನು ಚರ್ಚಿಸಬೇಕು.  ಎಷ್ಟೋಬಾರಿ ಒಡ್ಡು ಒಡೆಯುವುದು ಎಲ್ಲಿ ಎಂದು ಗೊತ್ತೇ ಇರುವುದಿಲ್ಲ.  ಕನಿಷ್ಠ ಎರಡು ವಿಭಾಗಗಳನ್ನು ಮಾಡಿ. ಒಂದು  ಭೌತಿಕ ನೆಲೆಯಲ್ಲಿ ನಮ್ಮ ಸಂಕಷ್ಟದ ನೆಲೆಗಳಲ್ಲಿ ಅಷ್ಟು ದಿನ ಇದ್ದು ಅದರ ಸ್ವರೂಪಗಳ ಅಧ್ಯಯನ ಮಾಡಬೇಕು

 ಎರಡು, ಸಾಹಿತ್ಯದ ತೆಕ್ಕೆಗೆ ಬಂದಿರುವ ಯುವಕರಿಗೆ ಓದಲೇಬೇಕಾದ ಪಠ್ಯಗಳ ಪಟ್ಟಿ ಮಾಡಬೇಕು. ಇಲ್ಲವಾದರೆ ಬಂಡಾಯ ತಂದ ಬೌದ್ಧಿಕ ದಾರಿದ್ರ್ಯ ಮತ್ತೆ ಮುಂದುವರಿದೀತು.

 ಮುಖ್ಯತಃ ನನಗೆ ಕಂಡಿದ್ದು ಪರಸ್ಪರ ಒಪ್ಪಿತವಾಗಿರುವ ಮಂದಿಯ ಸೇರಿದಾಗ ಸೆಲಬೆರೇಷನ್ ಇರುತ್ತದೆ. ಆದರೆ ಮಿತಿಗಳ ಬಗ್ಗೆ ಪ್ರಶ್ನೆ ಹಾಕುವ ಮಂದಿ ಇರುವುದಿಲ್ಲ. ಫಣಿ ಬಳಿ ಅದನ್ನೇ ಹೇಳಿದ್ದೆ. ತೇಜಸ್ವಿ, ಯು.ಆರ್ ಎ ಅಥವಾ ಲಂಕೇಶ್ ಅವರಲ್ಲಿ, ಅವರ  ಎಲ್ಲಾ ಒಡಕುಗಳ ಹೊರತಾಗಿಯೂ ತಮ್ಮ ಸಲೀಸು ಓಟಕ್ಕೆ ತಡೆಯೊಡ್ಡುವ ಪ್ರಶ್ನೆಗಳನ್ನು ಹಾಕುವ ಶಕ್ತಿ ಇತ್ತ್ತು. ಇಂದು ಅಂಥಾ ವಿಶಿಷ್ಟ ನೆಲೆಗಳೇ ಇಲ್ಲ. ಫಣಿ ಬಿಟ್ಟರೆ ಇನ್ನಾರೂ ತೀವ್ರ ಆತ್ಮವಿಮರ್ಶೆಯ ಧಾಟಿಯಲ್ಲಿ ಮಾತಾಡಲಿಲ್ಲ. ಆದರೆ ಫಣಿ ಮತ್ತೆ ನಮ್ಮೊಳಗಿನ ಗುರು.!!

ವರ್ಷಕ್ಕೆ ಎರಡೋ ಮೂರೋ ಕಡೆ ಈ ರೀತಿ ಸೇರುವ ಕೆಲಸ ನಡೆಯುತ್ತಿರುವ ಕಾರಣ ಇದು ರಿಪಿಟಿಟಿವ್ ಆಗದಂತೆ ಮಾಡಬೇಕಲ್ಲವೇ.

ನಮ್ಮ ಅಂಡರ್ ಸ್ಟಾಂಡಿಂಗ್‌ನ್ನು ಕ್ರಾಸ್ ಚೆಕ್ ಮಾಡಿಕೊಳ್ಳುವ ಪುಟ್ಟ ಪುಟ್ಟ ಶಿಬಿರಗಳನ್ನು ಆಯೋಜಿಸಿದರೆ ಒಳಿತು. ಕರ್ನಾಟಕದ ಕಿರುಧಾರೆಗಳ ಹೋರಾಟ ಸ್ಥಿತಿಗತಿಗಳಿಂದ ಇದನ್ನು ಶುರು ಮಾಡಬಹುದು
ಉದಾ: ಕನ್ನಡ ಮಾಧ್ಯಮದ ಬಗ್ಗೆ ಮಾತಾಡುತ್ತೇವೆ. ಆದರೆ, ಅಪಾರ ಸಂಖ್ಯೆಯ ಕಿರು ಭಾಷೆಗಳನ್ನು ಮಾತಾಡುವ ಮಕ್ಕಳು ಅವರ ಪರಿಸರ, ಭಾಷೆಯ ಶ್ರೀಮಂತಿಕೆಯನ್ನು ಹಂಚಿಕೊಳ್ಳುವ ಬಗೆ ಹೇಗೆ. ಅದು ಕನ್ನಡವನ್ನೂಶ್ರೀಮಂತಗೊಳಿಸುವ ಪ್ರಕ್ರಿಯೆ ಹೇಗೆ ಇತ್ಯಾದಿ. ಬಂಜಾರಾ, ಜೇನುಕುರುಬ, ಕುಡುಬಿ, ಸಿದ್ದಿ ಹೀಗೆ ಈ ಭಾಷಾ ಸಂಪತ್ತಿನ ನೆಲೆಗಳನ್ನು ಗಮನಿಸಬಹುದು.

 ಆರ್ಥಿಕ ಬಲಾಢ್ಯತೆ ಇದ್ದರೆ ಕಿರುಭಾಷೆಗಳೆಲ್ಲಾ ಬಲಿಷ್ಠವಾಗುತ್ತವೆ ಗಮನಿಸಿ ಕರ್ನಾಟಕದ ಎರಡೇ ಎರಡು ಜಿಲ್ಲೆಗಳಲ್ಲಿ ಐದಯ ಭಾಷಾ ಅಕಾಡಮಿಗಳಿವೆ.!! ಉಳಿದ ದಿಕ್ಕೆಟ್ಟ ಜನರ ಭಾಷೆಗಳು?
 ಇವೆಲ್ಲಾ ಸಾಂದರ್ಭಿಕವಾಗಿ ನೆನಪಾಗಿದ್ದು.
-ಕೆ. ಪಿ. ಸುರೇಶ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...