Tuesday, June 07, 2016

ಬೇಂದ್ರೆ, ಶಂ.ಬಾ. ಇಲ್ಲದ ಧಾರವಾಡದಲ್ಲಿ ಎರಡು ದಿನ


ಸನತ್ ಕುಮಾರ್ ಬೆಳಗಲಿ


ಅರುಂಧತಿ ರಾಯ್ ಹೇಳಿದಂತೆ ಅತ್ಯಂತ ಕೆಟ್ಟ ಕಾಲದಲ್ಲಿ ನಾವಿದ್ದೇವೆ. ಜನತಂತ್ರದ ಕತ್ತು ಹಿಚುಕುವ ಫ್ಯಾಶಿಸ್ಟರು ಅಧಿಕಾರ ಸೂತ್ರ ಹಿಡಿದಿದ್ದಾರೆ. ಕೋಮು ದಂಗೆ ಆರೋಪಿಗಳು, ಬಾಂಬ್ ಸ್ಫೋಟದ ಭಯೋತ್ಪಾದಕರು ಬಿಡುಗಡೆಯಾಗಿ ಬರುತ್ತಿದ್ದಾರೆ. ಜನ ಚಳವಳಿಗಳನ್ನು ಹತ್ತಿಕ್ಕುವ ಷಡ್ಯಂತ್ರ ರೂಪುಗೊಳ್ಳುತ್ತಿದೆ. ಏಕತೆಯ ದಾರಿ ದುರ್ಗಮವಾಗುತ್ತಿದೆ. ಗುಜರಾತ್ ಹತ್ಯಾಕಾಂಡದಲ್ಲಿ ಅನ್ಯಾಯಕ್ಕೆ ಒಳಗಾದವರ ಪರವಾಗಿ ದನಿಯೆತ್ತಿದ ತೀಸ್ತಾ ಸೆಟಲ್ವಾಡ್ ಅವರ ಜೀವ ಅಪಾಯದಲ್ಲಿದೆ. ಯಾವಾಗ ಅವರ ಬಂಧನ ಆಗುವುದೋ ಗೊತ್ತಿಲ್ಲ. ಗಾಂಧಿವಾದಿ ಸಂದೀಪ್ ಪಾಂಡೆ ಮತ್ತು ಪತ್ರಕರ್ತ ಸಿದ್ಧಾರ್ಥ ವರದರಾಜನ್ ಅಂತಹವರು ಹಲ್ಲೆಗೆ ಗುರಿಯಾಗುತ್ತಿದ್ದಾರೆ. ವರ್ಷದ ಹಿಂದೆ ದಾದ್ರಿಯಲ್ಲಿ ಮತಾಂಧರಿಂದ ಕೊಲ್ಲಲ್ಪಟ್ಟ ಮುಹಮ್ಮದ್ ಅಖ್ಲಾಕ್ ಮನೆಯಲ್ಲಿದ್ದದ್ದು ಮಟನ್ ಅಲ್ಲ ಬೀಫ್ ಎಂದು ಹೊಸ ಸಂಶೋಧನೆ ನಡೆಯುತ್ತಿವೆ. ದಿಲ್ಲಿಯ ಅಕ್ಬರ್ ರಸ್ತೆ ಬದಲಾಯಿಸಲಾಗಿದೆ. ಬಿಜೆಪಿ ವಕ್ತಾರ ಎಂ.ಜೆ.ಅಕ್ಬರ್ ಹೆಸರು ಯಾವಾಗ ಬದಲಾಗುವುದೋ ಗೊತ್ತಿಲ್ಲ.

ಇಂತಹ ಕತ್ತಲಕೂಪದಲ್ಲಿ ಬೆಳಕಿನ ದಾರಿಯನ್ನು ಹುಡುಕುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಕಳೆದ ವಾರ ಧಾರವಾಡದಲ್ಲಿ ಅಂತಹದೊಂದು ಅಪರೂಪದ ಸಮಾವೇಶ ನಡೆಯಿತು. ಬಸೂ ಅವರ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ ಮತ್ತು ಧಾರವಾಡದ ಚಿತ್ತಾರ ಬಳಗ ಜಂಟಿಯಾಗಿ ಆಯೋಜಿಸಿದ್ದ ಮೇ ಸಾಹಿತ್ಯ ಮೇಳ. ಅಂಧಕಾರದಲ್ಲಿ ಆಶಾಕಿರಣ ಅನ್ನಿಸಿತು. ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ಮಾಡುತ್ತಿರುವ ಲಡಾಯಿ ಪ್ರಕಾಶನದ ಬಸೂ, ವೈದ್ಯಕೀಯ ಬರವಣಿಗೆ ಮತ್ತು ನಾನಾ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ದಿನದ ೨೪ ಗಂಟೆಯು ತೊಡಗಿಸಿಕೊಂಡಿರುವ ಡಾ.ಅನುಪಮಾ ಮತ್ತು ಕೆಲ ಮಿತ್ರರು ನಮ್ಮನ್ನೆಲ್ಲ ಧಾರವಾಡದ ಆಲೂರು ವೆಂಕಟರಾವ್ ಸಭಾಂಗಣದಲ್ಲಿ ಸೇರಿಸಿದ್ದರು. ಈ ಬಾರಿ ಧಾರವಾಡದ ಸಮಾವೇಶದಲ್ಲಿ ಪಾಲ್ಗೊಂಡಾಗ, ೭೦ರ ದಶಕದ ಧಾರವಾಡದ ನೆನಪಾಯಿತು.

ಸಂಯುಕ್ತ ಕರ್ನಾಟಕಕ್ಕೆ ಕೆಲಸಕ್ಕೆ ಸೇರಿ ಬಿಜಾಪುರ ಜಿಲ್ಲೆಯ ನಮ್ಮೂರು ಸಾವಳಗಿಯಿಂದ ಹುಬ್ಬಳ್ಳಿಗೆ ಬಂದಾಗ, ಧಾರವಾಡ ನಮಗೆ ಹಲವಾರು ಕಾರಣಗಳಿಂದ ಆಕರ್ಷಕವೆನಿಸಿತು. ಸಾಧನಕೇರಿಯಲ್ಲಿ ಕವಿ ಬೇಂದ್ರೆ ಮತ್ತು ಸಂಶೋಧಕ ಶಂ.ಬಾ.ಜೋಶಿ ಅವರು ಇದ್ದರು. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆಯುತ್ತಿದ್ದ ಅವರಿಬ್ಬರ ನಡುವಿನ ಜಗಳ, ಕರ್ನಾಟಕ ವಿಶ್ವವಿದ್ಯಾನಿಲಯದ ರೈಲ್ವೆ ಕ್ರಾಸಿಂಗ್ ಬಳಿ ಒಮ್ಮೆ ಬೇಂದ್ರೆ ಮತ್ತು ಚಂಪಾ ನಡುವೆ ನಡೆದ ಜಗಳ, ದ್ವೇಷಾತೀತವಾದ ವೈಚಾರಿಕ ಸಂಘರ್ಷಗಳ ನೆನಪಾಗಿ ಮತ್ತೆ ಆ ದಿನಗಳು ಬರಲಾರವೇ ಅನ್ನಿಸಿದಾಗ, ಮೇ ಸಾಹಿತ್ಯ ಸಮ್ಮೇಳನದಲ್ಲಿ ಅಂತಹ ಕೆಲ ಪ್ರಸಂಗಗಳನ್ನು ಕಾಣುವ ಅವಕಾಶ ದೊರೆಯಿತು. ಹುಬ್ಬಳ್ಳಿ-ಧಾರವಾಡ ನಡುವಿನ ಅಂತರ ಬರೀ ೧೯ ಕಿ.ಮೀ. ಒಂದು ವ್ಯಾಪಾರ ಕೇಂದ್ರವಾದರೆ, ಇನ್ನೊಂದು ವಿದ್ಯಾಕೇಂದ್ರ. ಒಂದು ಕೋಮುವಾದಿಗಳ ಚಟುವಟಿಕೆಯ ತಾಣವಾದರೆ, ಇನ್ನೊಂದು ಪ್ರಗತಿಪರ ಸಂಘಟನೆಗಳ ಸಂವಾದದ ಕೇಂದ್ರವಾಗಿದೆ. ಬೇಂದ್ರೆ, ಶಂ.ಬಾ.ಜೋಶಿ ಅನಂತರ ಚಂಪಾ ಬೆಂಗಳೂರಿಗೆ ಬಂದರು. ಆಗಾಗ ಗುಡುಗುತ್ತಿದ್ದ ಕಲ್ಬುರ್ಗಿಯವರ ಹತ್ಯೆಯಾಯಿತು. ಮೊದಲೇ ತಣ್ಣಗಿದ್ದ ಕಣವಿ, ಗಿರಡ್ಡಿ ಅವರು ಮತ್ತಷ್ಟು ತಣ್ಣಗಾಗಿದ್ದಾರೆ. ಸಿದ್ದಲಿಂಗ ಪಟ್ಟಣಶೆಟ್ಟರು ಮಾತ್ರ ವೃದ್ಧಾಪ್ಯದ ನಡುವೆಯೂ ಜೀವನೋತ್ಸಾಹ ಉಳಿಸಿಕೊಂಡಿದ್ದಾರೆ. ಯಾರೇ ಅಲ್ಲಿಂದ ನಿರ್ಗಮಿಸಿದರೂ ಧಾರವಾಡ ತನ್ನ ಸತ್ವ ಕಳೆದುಕೊಂಡಿಲ್ಲ. ಸಮುದಾಯದ ಗೆಳೆಯರು, ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಸಂಗಾತಿಗಳು ನೀರಿನಂತೆ ಎಲ್ಲೆಲ್ಲೋ ಹರಿದಾಡುತ್ತಿದ್ದಾರೆ. ಕಲಬುರ್ಗಿಯವರು ಹೊತ್ತಿಸಿದ ಕಿಡಿ ಆರದಂತೆ ಕೆಲ ಶಿಷ್ಯರು ನೋಡಿಕೊಳ್ಳುತ್ತಿದ್ದಾರೆ.

ಈ ಬಾರಿ ಮೇ ಸಾಹಿತ್ಯ ಸಮ್ಮೇಳನ ಇಡೀ ಉತ್ತರ ಕರ್ನಾಟಕದಲ್ಲಿ ವಿದ್ಯುತ್ ಸಂಚಾರ ಉಂಟು ಮಾಡಿತು. ಶಹೀದ್ ಭಗತ್ ಸಿಂಗ್ ಅವರ ಬಗ್ಗೆ ಸಂಶೋಧನಾತ್ಮಕ ಗ್ರಂಥಗಳನ್ನು ಬರೆದ ದಿಲ್ಲಿಯ ಜೆಎನ್ ಯು ಪ್ರಾಧ್ಯಾಪಕ ಚಮನಲಾಲ್, ಈಗ ಧಾರವಾಡದಲ್ಲೇ ನೆಲೆಸಿರುವ ಗುಜರಾತಿ ಲೇಖಕ ಗಣೇಶ್ ದೇವಿ, ಕಳೆದ ವರ್ಷ ಹತ್ಯೆಗೀಡಾದ ಗೋವಿಂದ್ ಪನ್ಸಾರೆಯವರ ಸೊಸೆ ಮೇಘನಾ ಪನ್ಸಾರೆ ಹಾಗೂ ಕನ್ಹಯ್ಯಾಕುಮಾರ್ ಬಂಧನವಾದಾಗ ದಿಲ್ಲಿಯ ಜೆಎನ್ ಯು ಹೋರಾಟ ಮುಂದುವರಿಸಿದ ಶೆಹ್ಲಾ ರಷೀದ್ ಬಂದಿದ್ದರು. ಶೆಹ್ಲಾ ರಷೀದ್ ಅವರನ್ನು ಭೇಟಿಯಾಗಲು ನೂರಾರು ವಿದ್ಯಾರ್ಥಿಗಳು ಆಗಮಿಸಿದ್ದರು. ಶೆಹ್ಲಾ ತಮ್ಮ ಮಾತಿನಲ್ಲಿ ಮೋದಿ ಸರಕಾರದ ಬಂಡವಾಳವನ್ನು ಬಯಲಿಗೆಳೆದರು.

ಧಾರವಾಡದ ಈ ಸಾಹಿತ್ಯ ಮೇಳದಲ್ಲಿ ಆಂಧ್ರಪ್ರದೇಶದ ಹೆಸರಾಂತ ತೆಲುಗು ಲೇಖಕ ರಾಣಿ ಶಿವಶಂಕರ ಶರ್ಮ ಬಂದಿದ್ದರು. ಇವರು ಬರೆದ ‘‘ಕೊನೆಯ ಬ್ರಾಹ್ಮಣ’’ ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದವಾಗಿದೆ. ಈ ಶರ್ಮ ಒಂದು ರೀತಿಯಲ್ಲಿ ಸಂಸ್ಕೃತ ಮತ್ತು ವೇದ ಪುರಾಣಗಳಿಗೆ ಸಂಬಂಧಿಸಿದಂತೆ ನಡೆದಾಡುವ ವಿಶ್ವಕೋಶವೆಂದು ಹೆಸರಾಗಿದ್ದಾರೆ. ಇವರ ತಂದೆ ಕರ್ಮಟ ಬ್ರಾಹ್ಮಣ, ಅಣ್ಣ ಶೃಂಗೇರಿ ಮಠದ ಮದ್ರಾಸ್ ಶಾಖೆಯ ಮುಖ್ಯಸ್ಥ. ಈ ಶರ್ಮ ಕಮ್ಯುನಿಸ್ಟ್ ಸಿದ್ಧಾಂತದತ್ತ ಒಲಿದು ವಿಪ್ಲವ ಲೇಖಕ ಸಂಘದ ಪ್ರಮುಖರಾಗಿದ್ದಾರೆ. ವರವರ ರಾವ್, ಗದ್ದರ್ ಜೊತೆ ಸೇರಿ ಕೆಲಸ ಮಾಡುತ್ತಿದ್ದಾರೆ. ಈ ಶರ್ಮರ ತಂದೆ ಮರಣ ಹೊಂದುವ ಮುನ್ನ ತನ್ನ ಅಂತ್ಯ ಸಂಸ್ಕಾರವನ್ನು ಕಮ್ಯುನಿಸ್ಟ್ ಪುತ್ರ ಮಾಡಬಾರದು, ಪಿಂಡ ಪ್ರದಾನ ಮಾಡಬಾರದು ಎಂದು ಹೇಳಿ ಸತ್ತಿದ್ದರಂತೆ. ಇಂತಹ ಶರ್ಮರ ಜೊತೆಗೆ ಮಾತನಾಡಲು ಧಾರವಾಡದಲ್ಲಿ ಅವಕಾಶ ದೊರೆಯಿತು.

ಮೇ ಸಾಹಿತ್ಯ ಮೇಳದಲ್ಲಿ ‘ನೀಲಿ ಬಾನಲ್ಲಿ ಕೆಂಪು ನಕ್ಷತ್ರ’ ಎಂಬ ವಿಷಯದ ಮೇಲೆ ಸುದೀರ್ಘ ವಿಚಾರಗೋಷ್ಠಿ ನಡೆಯಿತು. ದಿನೇಶ ಅಮೀನ್ಮಟ್ಟು, ವಿಕಾಸ ಮೌರ್ಯ, ಮಾವಳ್ಳಿ ಶಂಕರ್, ಕಿರಣ್ ಗಾಜನೂರು ಈ ಗೋಷ್ಠಿಯಲ್ಲಿ ಮಾತನಾಡಿದರು. ಇಷ್ಟು ದಿನ ಅಂಬೇಡ್ಕರ್ ಅವರನ್ನು ಮರೆತಿದ್ದ ಕಮ್ಯುನಿಸ್ಟರಿಗೆ ಈಗ ದಿಢೀರನೇ ಬಾಬಾ ಸಾಹೇಬ್ ನೆನಪಾದ ಬಗ್ಗೆ ಗೋಷ್ಠಿಯಲ್ಲಿ ಪಾಲ್ಗೊಂಡ ಗೆಳೆಯರು ಸ್ನೇಹಪೂರ್ವಕವಾದ ಆಕ್ಷೇಪ ಮಾಡಿದರು. ಚರಿತ್ರೆಯಲ್ಲಿ ಕಮ್ಯುನಿಸ್ಟರಿಂದ ತಪ್ಪುಗಳು ಆಗಿವೆ ನಿಜ. ಆದರೆ ಅಂಬೇಡ್ಕರ್ ಜೊತೆ ಕಮ್ಯುನಿಸ್ಟರು ಹೋರಾಡಿಲ್ಲವೆಂದಲ್ಲ. ಎಂಟು ದಶಕಗಳ ಹಿಂದೆ ಚೌದಾರ ಕೆರೆ ನೀರು ಮುಟ್ಟುವ ಹೋರಾಟದಲ್ಲಿ ಕಮ್ಯುನಿಸ್ಟ್ ನಾಯಕ ರಾಮಚಂದ್ರ ಮೋರೆಯವರು ಬಾಬಾ ಸಾಹೇಬ್ ಜೊತೆಗಿದ್ದರು. ಡಾ. ಅಂಬೇಡ್ಕರ್ ಮತ್ತು ಕಮ್ಯುನಿಸ್ಟ್ ನಾಯಕ ಡಾಂಗೆ ಸೇರಿ ೪೦ರ ದಶಕದಲ್ಲಿ ಮುಂಬೈ ಗಿರಣಿ ಕಾರ್ಮಿಕ ಮುಷ್ಕರ ಸಂಘಟಿಸಿದ್ದರು. ಆದರೆ ಈ ಏಕತೆ ಬಹಳ ಕಾಲ ಉಳಿಯಲಿಲ್ಲ. ಬಾಬಾ ಸಾಹೇಬರು ಚುನಾವಣೆಗೆ ಸ್ಪರ್ಧಿಸಿದ್ದಾಗ ಕಮ್ಯುನಿಸ್ಟರು ಬೆಂಬಲ ನೀಡಿರಲಿಲ್ಲ ಎಂದು ವಿಕಾಸ ಮೌರ್ಯ ನೆನಪಿಸಿದರು. ಆದರೆ ದಿನೇಶ್ ಅಮೀನ್ ಮಟ್ಟು ಅವರು ಮಾತನಾಡಿ, ಕಮ್ಯುನಿಸ್ಟರು ಈಗ ಬದಲಾಗಿದ್ದಾರೆ. ದಲಿತರು ಮತ್ತು ಎಡಪಂಥೀಯರು ಒಂದುಗೂಡಬೇಕಿದೆ ಎಂದು ಹೇಳಿದರು. ಆದರೆ ಸಮಾಜ ಬದಲಾವಣೆ ಹೋರಾಟದಲ್ಲಿ ದಲಿತರು ತಮ್ಮ ಜೊತೆ ಸೇರಬೇಕೆಂದು ಕೆಲ ಮಾರ್ಕ್ಸ್ ವಾದಿಗಳು ನೀಡುತ್ತಿರುವ ಆಹ್ವಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕವಯತ್ರಿ ಅನುಸೂಯ ಕಾಂಬಳೆಯವರು ಈ ಆಹ್ವಾನ ಭೂಮಾಲಕರು ತಮ್ಮ ಹೊಲದಲ್ಲಿ ಕೆಲಸ ಮಾಡಿ, ಊಟ ಮಾಡಿಕೊಂಡು ಹೋಗುವಂತೆ ದಲಿತ ಕೂಲಿಯಾಳುಗಳನ್ನು ಕರೆದಂತಿದೆ ಎಂದರು. ನೀಲಿ ಆಕಾಶದಲ್ಲಿ ಕೆಂಪು ಸೂರ್ಯ ಎಂಬ ಉಪಮೆ ಬಳಕೆ ಬಗ್ಗೆ ಕೆಲ ಸ್ನೇಹಿತರು ಆಕ್ಷೇಪ ವ್ಯಕ್ತಪಡಿಸಿದರು. ಆಗ ನಾನು ‘ಕೆಂಪು ಆಕಾಶದಲ್ಲಿ ನೀಲಿ ನಕ್ಷತ್ರ’ ಅಂಬೇಡ್ಕರ್ ಎಂಬ ಉಪಮೆ ಬಳಸಲು ಯಾರ ಅಭ್ಯಂತರವೂ ಇಲ್ಲ ಎಂದೆ.

ಕಮ್ಯುನಿಸ್ಟ್ ಚಳವಳಿಯ ನಾಯಕತ್ವದಲ್ಲಿ ದಲಿತರಿದ್ದರೆ ಬಹುಶಃ ಇಂತಹ ಆಕ್ಷೇಪಗಳು ಬರುತ್ತಿರಲಿಲ್ಲ. ಧಾರವಾಡದ ಸಾಹಿತ್ಯ ಮೇಳದಿಂದ ನನಗಾದ ಲಾಭವೆಂದರೆ, ತುಂಬಾ ದಿನಗಳಿಂದ ಗೆಳೆಯರು ಅಪರೂಪಕ್ಕೆ ಸಿಕ್ಕರು, ,೪೦ ವರ್ಷದ ಹಿಂದೆ ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದ ಕೆಲ ವಿದ್ಯಾರ್ಥಿ ಸ್ನೇಹಿತರು ನಾಲ್ಕು ದಶಕಗಳ ಅನಂತರ ಈ ಸಮಾವೇಶದಲ್ಲಿ ನನ್ನನ್ನು ಕಂಡು ಗುರುತು ಹಿಡಿದು ಮಾತನಾಡಿಸಿದರು. ಹೋರಾಟದ ಆ ದಿನಗಳನ್ನು ನೆನಪಿಸಿದರು. ಈಗ ಎಲ್ಲೆಲ್ಲೋ ಬದುಕನ್ನು ಕಟ್ಟಿಕೊಂಡಿರುವ ಅವರೊಂದಿಗೆ ಮಾತನಾಡಿ ಹಗುರಾಯಿತು. ಬದುಕಿನಲ್ಲಿ ಇದಕ್ಕಿಂತ ಧನ್ಯತೆ ಇನ್ನೇನಿದೆ.
ಸೌಜನ್ಯ : ವಾಭಾ ೬.೬.೨೦೧೬

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...