Saturday, June 18, 2016

ಕೃಷಿ ಮುಂದಿಟ್ಟುಕೊಂಡು ಕಾಲೇಜು ಅಲೆಯತ್ತ


ಕೆ. ಪಿ. ಸುರೇಶ


ನಮ್ಮ ಸಂದರ್ಭದ ಬಲು ದೊಡ್ಡ ಬಿಕ್ಕಟ್ಟೆಂದರೆ,  ನಾವು ಯಾರಿಗೆ ಹೇಳಬೇಕಿದೆಯೋ ಅವರು ನಮ್ಮಿಂದ ದೂರವಾಗುತ್ತಿರುವುದು.  ಜಾಗತೀಕರಣದ ಬಿಕ್ಕಟ್ಟು, ಕೃಷಿ ಬಿಕ್ಕಟ್ಟು, ಗ್ರಾಹಕ ಸಂಸ್ಕೃತಿಯ ಅಪಾಯ, ನಗರೀಕರಣದ ವೈಭವೀಕರಣ ಇವೆಲ್ಲವುಗಳ ಬಗ್ಗೆ ಮಾತಾಡುವಾಗ ನಾವು ಸದಾ ೧೬-೨೫ರ ತಲೆಮಾರನ್ನು ಮನಸ್ಸಿನಲ್ಲಿಟ್ಟುಕೊಂಡೇ  ಮಾತಾಡುತ್ತಿದ್ದೇವೆ.

 ಆದರೆ ಈ ಜಾಗತೀಕರಣ/ನಗರೀಕರಣದ ಅನಿವಾರ್ಯತೆಯನ್ನು ಒಪ್ಪಿಕೊಂಡು ಈ ತಲೆಮಾರು ಧಾವಿಸುವ ಪರಿ ಹೇಗಿದೆಯೆಂದರೆ ಅದೊಂದು ಸೋಲುವ ಆಟ ಎಂದು ನಮಗೂ ಅವರಿಗೂ ಎನ್ನಿಸಿ ವ್ಯಥೆಯಾಗುತ್ತದೆ.
 ಕನ್ನಡದ ಮಟ್ಟಿಗೆ ಇರುವ ಸಮಸ್ಯೆಯೆಂದರೆ ಈ ವಿಚಾರಗಳ ಬಗ್ಗೆ ಯುವಕರೊಂದಿಗೆ ಅನುಸಂಧಾನ , ಸಂವಾದ ಮಾಡುವುದೆಂದರೆ ಕೇವಲ ಸಾಹಿತ್ಯಿಕ / ಸಮಾಜಶಾಸ್ತ್ರೀಯ ಪರಿಭಾಷೆಯಲ್ಲಿ ಮಾತಾಡುವುದಾಗಿದೆ. ನಮ್ಮ ಮಾಧ್ಯಮಗಳಲ್ಲಿ ಪ್ರಕಟವಾಗುವ ಲೇಖನಗಳು ಪ್ರತಿಶತ ೯೦ ಇಂಥಾ ವರ್ಗಕ್ಕೆ ಸೇರಿದ್ದು. ಅದಕ್ಕೆ ತಕ್ಕಂತೆ  ಈ ಮಕ್ಕಳು ಗಿಜಿಗಿಜಿ ತುಂಬಿ ತುಳುಕಾಡುತ್ತಿರುವ ನಮ್ಮ ಕಾಲೇಜುಗಳಲ್ಲಿರುವ ಮೇಷ್ಟ್ರುಗಳು (ಮೇಷ್ಟ್ರುಗಳು ಅನ್ನಬಾರದು; ಅದು ತ.ಸು. ಶಾಮರಾಯರ ತಲೆಮಾರಿಗೇ ಮುಗಿಯಿತು!) ತಮ್ಮ ತಮ್ಮ ವಿಷಯಗಳನ್ನು ಸಾಮಾಜಿಕ ನಿಜದೊಂದಿಗೆ ಅನ್ವಯಿಕವಾಗಿ ಬೋಧಿಸುವ, ಅಥವಾ ಮಕ್ಕಳನ್ನು ಸಾಮಾಜಿಕ ನಿಜಕ್ಕೆ ಸಜ್ಜುಗೊಳಿಸುವ ಕೆಲಸ ಎಷ್ಟು ಮಾಡಿದ್ದಾರೆ ಎಂಬುದನ್ನು ಗಮನಿಸಬೇಕು.
ನಮ್ಮ ಸಾಹಿತ್ಯದ ಉಪನ್ಯಾಸಕರು ಬರೋಬ್ಬರಿ   ಭಾಷಣ ಮಾಡುತ್ತಾ ಹೋಗುತ್ತಿದ್ದರೆ, ಉಳಿದ ವಿಷಯಗಳ ಉಪನ್ಯಾಸಕರ ಬಗ್ಗೆ ಹೆಚ್ಚೇನೂ ಕೇಳಿಸುತ್ತಿಲ್ಲ. ಈ ಸಾಹಿತ್ಯಿಕ, ಸಾಂಸ್ಕೃತಿಕ ಸೆಮಿನಾರು, ಸಂವಾದಗಳು ಎಷ್ಟರ ಮಟ್ಟಿಗೆ ಪಕ್ಕಾ ಆಚರಣೆಯ ಮಟ್ಟಕ್ಕೆ ಬಂದಿವೆಯೆಂದರೆ, ಒಂದು ಕಾಲೇಜಿನ ಹಿಡಿಯೆಣಿಕೆಯ ಮಕ್ಕಳಿಗೂ ಇದು ತಾನು ಸ್ಪಂದಿಸಬೇಕಾದ ನಿಜ ಎನ್ನಿಸುತ್ತಿಲ್ಲ.

ಇವೆಲ್ಲಾ ಆಪಾದನೆ, ವ್ಯಂಗ್ಯದ ತರ ಕಂಡೀತು.

ಈಗ ಸ್ವಲ್ಪ ತಿಂಗಳ ಹಿಂದೆ ನಾನು ಮತ್ತು ಗೆಳೆಯ ಸಂತೋಷ ಕೌಲಗಿ  ಕೃಷಿ ಬಿಕ್ಕಟ್ಟಿನ ಬಗ್ಗೆ  ಅಲ್ಲಲ್ಲಿ ತಾಲೂಕು ಮಟ್ಟದ ಕಾಲೇಜುಗಳಲ್ಲಿ ಡಿಗ್ರಿ ಮಕ್ಕಳೊಂದಿಗೆ ಸಂವಾದ ನಡೆಸುವ ಕೆಲಸ ಶುರು ಮಾಡಿದೆವು. ಅದೇನು ನಾವೇ ಕಂಡುಹಿಡಿದ ಅಥವಾ ಮಾಡಿದ ಕೆಲಸವಲ್ಲ. ಈ ಹಿಂದೆ ಅಂಥಾದ್ದು ನಡೆದಿದೆ.  ಆದರೆ ನಮಗೆ ದಿಗ್ರ್ಭಮೆ ಹುಟ್ಟಿಸಿದ್ದು ಎರಡು ವಿಚಾರಗಳು. ೧. ಈ ಮಕ್ಕಳ ಬಗ್ಗೆ ಇರುವ ಸಾಮಾನ್ಯ ಅಭಿಪ್ರಾಯ. ೨. ಅವರ ಮಾನಸಿಕ ಜೋಮುತನದ ಹಿಂದಿರುವ ಹಿಂಸೆ.

 ಬಹುತೇಕ ಅಧ್ಯಾಪಕರು, ಅತ್ತಿತ್ತ ಓಡಾಡುವ ಸಾಮಾಜಿಕರ ಪ್ರಕಾರ ’ಈ ಹುಡುಗರೆಲ್ಲಾ ಮೊಬೈಲ್ , ಮತ್ತು ಸಿನೆಮಾದ ಲೋಲುಪತೆಗೆ ಬಿದ್ದಿರುವ  ಅಡನಾಡಿಗಳು’. ತಾಲೂಕು ಈಡಿಯಂನಲ್ಲಿ ಹೇಳುವುದಾದರೆ ವೇಸ್ಟ್ ಬಾಡಿಗಳು. ಇವರಿಗೆ ನಮ್ಮ ಸಂದರ್ಭದ ದುರಂತಗಳೇ ಗೊತ್ತಿಲ್ಲ,  ಹರಕೆಯ ಕುರಿಯ ಹಾಗೆ ಚಿಗುರು ಮೇಯುತ್ತಾ ದಿನ ಕಳೆಯುತ್ತಿದ್ದಾರೆ ಎಂಬ ತಾತ್ಸಾರದ ಮಾತುಗಳೆ.

 ಇದು ಸತ್ಯ. ಆದರೆ ಈ ಸತ್ಯದ ಹಿಂದೆ,   ದಶಕಗಳ ಹಿಂದೆ  ಆಫ್ರಿಕಾದ ಕರಿಯರ  ಪರಸ್ಪರ ಹಿಂಸೆಯ ಸಂದರ್ಭದಲ್ಲಿ  ಫೆನಾನ್ ಕಂಡ ರೋಗ ಲಕ್ಷಣ ಇದೆ. ಯಾವ ಭವಿಷ್ಯ, ಭರವಸೆಯಿಲ್ಲದ ಹಿಂದಣ ತಾಣ, ಮುಂದಿನ ತಾಣದ ಸ್ಥಿತಿಯಲ್ಲಿ  ಮಕ್ಕಳಿದ್ದಾರೆ. ಅವರ ಹಿನ್ನೆಲೆಯಾದ ಗ್ರಾಮೀಣ ಕೃಷಿ ಬದುಕಿನ ಬಗ್ಗೆ ಒಂದಕ್ಷರವೂ ಈ ಶಿಕ್ಷಣದಲ್ಲಿಲ್ಲ. ಕೃಷಿ ಬಿಕ್ಕಟ್ಟು ಜಾತಿ ಅಸಮಾನತೆಗಳ ಬಗ್ಗೆ ಅಲ್ಲೇನೂ ಇಲ್ಲ. ಜಾಗತೀಕರಣದ ವೈಖರಿ ಹೇಗಿದೆಯೆಂದರೆ ಅದು  ಪಾಶ್ಚಾತ್ಯ ಬಗೆಯ ಸರಳ ಸಮೀಕರಣಗಳನ್ನಷ್ಟು ಮುಂದಿಡುತ್ತದೆ. ಉದಾ: ಮಹಿಳೆಯ ಹಕ್ಕು ಸ್ಥಿತಿಗತಿ ಬಗ್ಗೆ ಅದರಲ್ಲೊಂದಷ್ಟಿದೆ. ಸದ್ಯ ಇಷ್ಟಾದರೂ ಕಿಂಡಿ ತೆರೆಯಿತಲ್ಲಾ  ಎಂಬ ಬಗ್ಗೆ ಸಮಾಧಾನ ಇದೆ. ಆದರೆ ಮಹಿಳಾ ಹಕ್ಕು ಸ್ವಾತಂತ್ರ್ಯದ ಬಗ್ಗೆ ಮಾತಾಡಲು ಪ್ರೋತ್ಸಾಹಿಸುವ ಶಿಕ್ಷಣ ಪದ್ಧತಿ, ಜಾತಿ ಬಗ್ಗೆ ಮಾತಾಡಲು ಎಲ್ಲೂ ಅವಕಾಶ ಕೊಡುವುದಿಲ್ಲ.

ಈ ಶಿಕ್ಷಣವೂ ಹಳ್ಳಿ ತೊರೆದು ನಗರ ಸೇರಿದರಷ್ಟೇ ಜೀವನ ಭಾಗ್ಯವೆಂದು ಸದಾ  ಹೇಳುತ್ತಲೇ ಇದೆ. ಕಾಲೇಜುಗಳ ವೃತ್ತಿ ಮಾರ್ಗದರ್ಶನ ಕೇಂದ್ರಗಳು, ಕೌಶಲ್ಯಾ ಕೇಂದ್ರಗಳು ಸತತವಾಗಿ ನಗರದಲ್ಲಿ ಕೆಲಸ ಪಡೆಯಲು ನಮ್ಮ ಮಕ್ಕಳು ಹೊಂದಬೇಕಾದ ತಯಾರಿ ಬಗ್ಗೆ ಹೇಳುತ್ತಲೇ ಇರುತ್ತವೆ. ನಮ್ಮ ಯುಜಿಸಿ ಸಂಬಳ ಪಡೆವ ಅಧ್ಯಾಪಕರೂ ಈ ಸುಪಾರಿ ಕೆಲಸ ಮಾಡುತ್ತಲೇ ಇದ್ದಾರೆ!

ಇತ್ತ ಕೃಷಿ ಲೋಕದಲ್ಲಿರುವ ಹೆತ್ತವರೂ ನಮ್ಮ ಮಕ್ಕಳೂ ನಗರ ಸೇರಲಿ, ಜಾಬ್ ಸೇರಲಿ ಎಂದು ಅನವರತ ಪ್ರಾರ್ಥಿಸುತ್ತಿದ್ದು ತಮ್ಮ ಎಲ್ಲವನ್ನೂ  ಈ ಉಡಾವಣೆಗೆ ಇಂಧನವಾಗಿ ತೆರುತ್ತಾರೆ.

 ವಾಸ್ತವ ಏನೆಂದರೆ, ತಾಲೂಕು ಕೇಂದ್ರಗಳಲ್ಲಿ ಬಿಎ, ಬಿಕಾಂ ಓದುವ ಹುಡುಗರಿಗೆ ನಗರದ ಉದ್ಯೋಗದಾತ ಬಯಸುವ ಯಾವ ಕೌಶಲ್ಯವೂ ಇರುವುದಿಲ್ಲ.  ನಾಳೆ ಈ ಮಕ್ಕಳಿಗೆ ನಗರಗಳ ಉದ್ಯೊಗಗಳಲ್ಲಿ  ಹೆಚ್ಚೆಂದರೆ ೬-೭ ಸಾವಿರ ಸಂಬಳ ಬರಬಹುದು  ಅಷ್ಟೇ.

 ಇದೆಲ್ಲವೂ ಆ ಹುಡುಗರ ಬಾಯಿಂದ ಹೊಮ್ಮುವುದನ್ನು ಕೇಳಬೇಕು, ಹುಣಸೂರು, ಪಾಂಡವಪುರ, ನಂಜನಗೂಡು.. ಪಿರಿಯಾ ಪಟ್ಟಣ.. ಎಲ್ಲಾ ಕಡೆಯೂ ಈ ವಾಸ್ತವದ ಅರಿವಿನ ಮಾತುಗಳು ಮಕ್ಕಳಿಂದಲೇ ಬರುವುದು ಕೇಳಿದರೆ  ಹೇಗೆ ನಾವು ಇವರನ್ನು ಕೈಬಿಟ್ಟೆವು ಎಂಬ ಲಜ್ಜೆ ಆವರಿಸುತ್ತದೆ.

  ಇತ್ತ ನಮ್ಮ  ಜನಪ್ರಿಯ ಗ್ರಹಿಕೆಗೆ ವ್ಯತಿರಿಕ್ತವಾಗಿ ಬಹುತೇಕ ಮಕ್ಕಳಿಗೆ ಕೃಷಿಯ ವಿವರಗಳು ಗೊತ್ತು. ಕುಂಟೆ ಹಿಡಿದಿದ್ದಾರೋ ಗೊತ್ತಿಲ್ಲ. ಆದರೆ ಕೃಷಿ ಹಂಗಾಮಿನ ಧಾವಂತ, ಅದರ ಸವಾಲುಗಳೆಲ್ಲಾ ಗೊತ್ತು. ಯಾವಾಗ, ಯಾಕೆ ಸಾಲ ಮಾಡಬೇಕಾಗಿ ಬರುತ್ತದೆ ಎಂದೂ ಗೊತ್ತು. ಅಪ್ಪ ಎಷ್ಟು ಸಾಲ ಮಾಡಿದ್ದಾನೆ ಎಂಬ ಸತ್ಯ ಮಾತ್ರಾ ಗೊತ್ತಿರುವುದಿಲ್ಲ. ಕೆ. ಆರ್ ಪೇಟೆ, ಮದ್ದೂರು, ಮಂಡ್ಯಗಳ ಆತ್ಮ ಹತ್ಯೆ ಪ್ರಕರಣಗಳನ್ನು ನೋಡಿದರೆ, ಸತ್ತ ಮೇಲಷ್ಟೇ ಈ ಹುಡುಗನಿಗೆ ಅಪ್ಪನ ಸಾಲದ ಪರಿ ಗೊತ್ತಾಗುವುದು. ಮತ್ತೆ ಅದೇ ’ಸಾಲ ಪೇರಿv’ ನೊಗಕ್ಕೆ ಕತ್ತು ಕೊಡುವ ಅನಿವಾರ್ಯತೆಗೆ ಅವನು ಸಿದ್ಧವಾಗಬೇಕು.
ಇದೆಲ್ಲಾ ಆಗುತ್ತಿರುವಾಗ, ಕಾಲೇಜಿನಲ್ಲಿ ಯುಜಿಸಿ ಗದರುತ್ತದೆ ಅಂತ ಕನ್ನಡ ಇಲಾಖೆಯವರು, ’ಕೆ. ಎಸ್. ನ ಕಾವ್ಯದಲ್ಲಿ ದಾಂಪತ್ಯ’, ’ಕುವೆಂಪು ಕಾದಂಬರಿಗಳಲ್ಲಿ ವರ್ಗ ಸಂಘರ್ಷ ಇತ್ಯಾದಿ ಸೆಮಿನಾರು ನಡೆಸುತ್ತಿರುತ್ತಾರೆ.!! ಅರ್ಥಶಾಸ್ತ್ರದವರು,  ಆರ್ಥಿಕ ಪುನಶ್ಚೇತನದಲ್ಲಿ ರಿಸರ್ವ್ ಬ್ಯಾಂಕಿನ ಪಾತ್ರ ಎಂದೋ, ವಾಣಿಜ್ಯ ಇಲಾಖೆಯವರು, ಸಾಲ ಕ್ಷೇತ್ರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಸವಾಲುಗಳು ಎಂದೋ ಯುಜಿಸಿ ಸೆಮಿನಾರು ನಡೆಸಿ ಅದರ ಫೋಟೋ ಜಾಗೃತೆ  ತೆಗೆದು ಆಲ್ಬಂ ಮಾಡಿ ನ್ಯಾಕ್ ಮೌಲ್ಯಮಾಪನಕ್ಕೆ ಇರಲಿ ಎಂದು ತೆಗೆದಿಡುತ್ತಾರೆ.

 ನಾವು ಹೋದ ಕಾಲೇಜುಗಳಲ್ಲೆಲ್ಲಾ ಬಂದ ಸಮಸ್ಯೆ ಎಂದರೆ, ಮತ್ತೆ ಸಮಾಲೋಚನೆಗೆ ಸಿಗುತ್ತೀರಾ ಎಂಬ ಪ್ರಶ್ನೆ.
 ’ಬರ‍್ತೀರಾ, ಭಾಷಣ ಮಾಡಿ ಹೋಗ್ತೀರಾ.., ನಮ್ ಕಾಲೇಜಿಗೆ ಹೀಗೆ ಬಂದು ಹೋಗ್ತಾನೇ ಇರ‍್ತಾರೆ.. ಸಾ.. ಎಂಬ ವ್ಯಂಗ್ಯದ  ಮಾತು ಕಿವಿಯೊಳಗೆ ಇನ್ನೂ ಕೂತಿದೆ.

 ನಾವು ಹೋಗಿ ಮಾತಾಡುವುದೂ  ಹರಿಕಥೆಯ ತರ ಆಗುತ್ತಿದೆ. ಇದೊಂದು ಮೂಲತಃ ಮಾನಸಿಕ ಸಮಾಲೋಚನೆ. ಒಂದು ಸಂವಾದಕ್ಕೆ ಬಗೆಹರಿಯುವ ಬಿಕ್ಕಟ್ಟಲ್ಲ. ಪದೇ ಪದೇ, ಮೈ  ಹ್ಞೂಂ ನಾ.. ಅನ್ನುವ ಪರಿಯಲ್ಲಿ ಸಿಗುತ್ತಿರಬೇಕು. ನಮ್ಮ ತಾಲೂಕು ಮಟ್ಟದ ಶಿಕ್ಷಕರು, ಸಾಮಾಜಿಕ ಅನುಸಂಧಾನಗಳಲ್ಲಿ ತೊಡಗಿರುವ ಗೆಳೆಯರು ಇಂಥಾ ಸಂವಾದಕ್ಕೆ ಸಮಾಲೋಚನೆಗೆ ಒಡ್ಡಿಕೊಳ್ಳಬೇಕು.

ಗಮನಿಸಿ; ಜೆಎನ್‌ಯು ಬಿಕ್ಕಟ್ಟಿಗೆ ನಮ್ಮ ಯಾವ ಯುನಿವರ್ಸಿಟಿಗಳಿಂದಲೂ ಗಮನಾರ್ಹ ಸಾಂಸ್ಥಿಕ ಪ್ರತಿಕ್ರಿಯೆ ಬರಲಿಲ್ಲ. ಅಷ್ಟೇಕೆ ಆ ರೀತಿಯ ದಬಾವಣೆ ನಮ್ಮಲ್ಲಾಗಿದ್ದರೆ, ಪುರಿ ಮೂಟೆಗಳ ತರ ನಮ್ಮ ವಿವಿಗಳೂ ಅದರ ಅಧ್ಯಾಪಕರು ಚೆಲ್ಲಾಪಿಲ್ಲಿ ಆಳುವವರ ಕಾಲಡಿ ಬಿದ್ದಿರುತ್ತಿದ್ದವೋ ಏನೋ.

ನಾವು ಹೋದ ಕಾಲೇಜೊಂದರಲ್ಲಿ, ಅಟೆಂಡರ್ ಒಬ್ಬ,  ಸಾರ್..  ಕಸ ಎತ್ತಿ ಕ್ಲೀನಾಗಿ ಇಟ್ಕೋಬೇಕು, ಅದ್ರಲ್ಲಿ ಗೊಬ್ಬರ ಮಾಡ್ಬೇಕು ಅಂತ ಹೇಳೋಕೂ ಯಾರೋ ಸೂಟು ಹಾಕಿದೋರು ಬರ‍್ತಾರೆ ಸರ.. ಕಾಲೇಜಿಗೆ ರೈತರನ್ನು ಕರೆಸ್ಬೇಕು ಸಾರ್, ಅನ್ನ ಹುಟ್ಟೋದು ಎಲ್ಲಿಂದ ಅಂತ ಗೊತ್ತಾಗೋಕೆ..  ಎಂದಿದ್ದ.

ನೆರುಡಾನ ಥರ ತಳಮಟ್ಟದ ಮುಲುಗುವಿಕೆಗೆ ಕಿವಿ ಕೊಟ್ಟು ಅದರೊಂದಿಗೆ ಸಂವಾದಿಸುತ್ತಾ  ಅದರ ದನಿಯಾಗುವ ಗುಣ  ನಮ್ಮಲ್ಲಿ ಜಡವಾಗುತ್ತಾ ಬಂದಿದೆ.. 

ಇದರಿಂದಾಚೆಗೆ  ಕೃಷಿ ಲೋಕದ ಬೆಳೆ ನಾಶ, ಕಳಪೆ ಬೀಜದ ಹೊಡೆತ, ಮಾರುಕಟ್ಟೆ ದೋಖಾ ನೋಡುತ್ತಿದ್ದರೆ, ಅಲ್ಲಿಗೆ ನಮ್ಮ ಒಬ್ಬನೇ ಒಬ್ಬ ಶಿಕ್ಷಿತ ಸಾಮಾಜಿಕ ಕಳಕಳಿಯ ಮನುಷ್ಯ ತಲೆ ಹಾಕಿದಂತೆ ಕಾಣಿಸುವುದಿಲ್ಲ. ಟೌನ್ ಹಾಲ್ ಮಾದರಿ ಒತ್ತಾಯ, ಪ್ರತಿಭಟನೆ, ಬೆಂಬಲಗಳಿಗಷ್ಟೇ ಸೀಮಿತವಾಗಿರುವ ಸಾಲಿಡಾರಿಟಿಯ ಉದಾಹರಣೆ ಇದೆ. ಕಳೆದಬಾರಿ ಬದನವಾಳುವಿನಲ್ಲಿ ಸುಸ್ಥಿರ ಅಭಿವೃದ್ಧಿ ಸಮಾವೇಶದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ’ಸುಸ್ಥಿರ ರಂಗಭೂಮಿ’ ಅಂತ ’ನಾಟಕ’ಗಳನ್ನು ಆಡಿದ್ದರು.
’ ಸಾರ್ , ಇಷ್ಟು ದಿನ, ಕಾಲಾವಧಿ ಪೀಸಲ್ಲಿ ಸ್ಟೇಜು ಕಟ್ಕೋತಿದ್ರಾ..? ಎಂದು ರೈತ ಸಂಘದ ಒಬ್ಬರು ನನ್ನಲ್ಲಿ ಕೇಳಿದ್ದರು. ’ಗೊತ್ತಿಲ್ಲಪ್ಪಾ ..!’ಎಂದಿದ್ದೆ ನಾನು.

 ಈ ದುರ್ಭರ ಬಿಕ್ಕಟ್ಟಿಗೆ ಉತ್ತರವಾಗಿ ತಿಪಟೂರಿನ ಗೆಳೆಯ ಗಂಗಾಧರಯ್ಯ ಮತ್ತವರ ಗೆಳೆಯರು, ’ಬೆಲೆ ಕಾವಲು ಸಮಿತಿ’ ಎಂಬ ಒಂದು ವೇದಿಕೆ ಮಾಡಿಕೊಂಡಿದ್ದಾರೆ. ಇಂಥಾ ಉದಾಹರಣೆ ಬೇರೆಡೆ ಇದ್ದರೆ ಒಳ್ಳೆಯದು.
 ಬಿಕ್ಕಟ್ಟು ದಟ್ಟವಾಗಿದೆ.  ಇದು ನಾಗರಿಕತೆಯ ಬಿಕ್ಕಟ್ಟು. ಬಿಡಿಬಿಡಿ ಕ್ಷೇತ್ರಗಳ ಸವಾಲು ಅಲ್ಲ. ಸದ್ಯಕ್ಕೆ ಪ್ರಸನ್ನ ಒಬ್ಬರು ಮಾತ್ರಾ ಈ ಬಗ್ಗೆ ಚರ್ಚಿಸುತ್ತಾ ಓಡಾಡುತ್ತಿದ್ದಾರೆ.

 ನಮ್ಮ ಹೊಣೆಗಾರಿಕೆ  ಬಗ್ಗೆ ಬಿಟಿ ಹತ್ತಿ ವೈಫಲ್ಯ ಕುರಿತಾದ ಅಧ್ಯಯನ ವರದಿಯಲ್ಲಿ   ನಾಗೇಶ್ ಹೆಗ್ಡೆಯವರು ಬರೆದದ್ದಕ್ಕಿಂತ ದಟ್ಟವಾಗಿ ಹೇಳಲು ಸಾಧ್ಯವಿಲ್ಲ.

ಆಧುನಿಕ ಕೃಷಿ ತಂತ್ರಜ್ಞಾನ ಎಂಬುದು ನಮ್ಮ ಗ್ರಾಮೀಣ ರೈತರಮಟ್ಟಿಗೆ ಹುಲಿ ಸವಾರಿಯಂತಾಗಿದೆ. ಹತ್ತಿ ಕೂತರೆ ಮುಂದೆ ಸಾಗುವುದು ಅಪಾಯ, ಕೆಳಕ್ಕಿಳಿದರೆ ಇನ್ನೂ ಅಪಾಯ. ಅದರಲ್ಲೂ ಕುಲಾಂತರಿ ತಂತ್ರಜ್ಞಾನವೆಂದರೆ ಅಲ್ಲಿ ನೂರಾರು ಸುರಕ್ಷಾ ಕ್ರಮಗಳಿರಬೇಕಾಗುತ್ತದೆ. ಬೀಜೋತ್ಪಾದನೆಯಿಂದ ಹಿಡಿದು ಬಿತ್ತನೆಯವರೆಗಿನ ಹಲವು ಹಂತಗಳಲ್ಲಿ ಎಚ್ಚರಿಕೆ ಇರಬೇಕಾಗುತ್ತದೆ. ಕೊನೆಯ ಹಂತದಲ್ಲಿ ಅಂಥ ಬೀಜಗಳನ್ನು ಬಳಸಬೇಕಾದ ರೈತ ಅಷ್ಟೇನೂ  ಸುಶಿಕ್ಷಿತ ಆಗಿರುವುದಿಲ್ಲ; ಇಂಗ್ಲಿಷೂ ಓದಲು ಬರುವುದಿಲ್ಲ; ಗ್ರಾಹಕ ಹಕ್ಕುಗಳ ಪರಿಜ್ಞಾನ ಇರುವುದಿಲ್ಲ. ಗ್ಯಾರಂಟಿ ವಾರಂಟಿಗಳ ಜಾರುಮಾರ್ಗಗಳ ಬಗ್ಗೆ ಆತ ತಿಳಿದುಕೊಂಡಿರಲು ಸಾಧ್ಯವಿಲ್ಲ. ರೋಗಪತ್ತೆಯ ಲಕ್ಷಣಗಳ ಬಗ್ಗೆ ಅವನಿಗೆ ತರಬೇತಿಯಾಗಲೀ ಸಲಕರಣೆಗಳಾಗಲೀ ಲಭ್ಯ ಇರುವುದಿಲ್ಲ. ಹವಾಗುಣದ ಏರುಪೇರುಗಳ ಕುರಿತು ಆತನಿಗೆ ಆಗಾಗ ಮುನ್ನೆಚ್ಚರಿಕೆ ಸಿಗುವುದಿಲ್ಲ. ಬೆಳೆವಿಮೆಯಂತಹ ಕ್ಲಿಷ್ಟ  ಸುರಕ್ಷಾಜಾಲಗಳ ಗಂಧಗಾಳಿಯೂ ಆತನನ್ನು ಮುಟ್ಟುತ್ತಿಲ್ಲ.

          ಅಂಥ ದುರ್ಬಲ, ಒಬ್ಬಂಟಿ ವ್ಯಕ್ತಿಯ ಹೊಲದಲ್ಲಿ ಕುಲಾಂತರಿ ಹೈಟೆಕ್ ಬೀಜಗಳನ್ನು ನುಗ್ಗಿಸುವಾಗ ಸಾಕ್ಷರ  ಸಮಾಜದ ಎ?ಂದು ನೆರವಿನ ಹಸ್ತಗಳು ರೈತನಿಗೆ ಬೇಕಿರುತ್ತದೆ. ಫಸಲು ಚೆನ್ನಾಗಿ ಬರಲೆಂದು ಎಂದು ಶ್ರಮ, ಸಮಯ, ಹಣವನ್ನು ವಿನಿಯೋಗಿಸಿದ ನಂತರ ಆತ ನಂಬಿದ್ದ ಬೀಜವೇ ಅವನನ್ನು ಮಖಾಡೆ ಮಲಗಿಸಿದಾಗ ಯಾರೂ ನೆರವಿಗೆ ಬಂದಿಲ್ಲವೆಂದರೆ ಇಡೀ ಅಕ್ಷರಸ್ಥ ಸಮಾಜ ತಪ್ಪಿತಸ್ಥ ಆಗಬೇಕಾಗುತ್ತದೆ.

           ಅಂಥದೊಂದು ಅಪರಾಧೀ ಪ್ರಜ್ಞೆಯಿಂದಲೇ ಎಂಬಂತೆ ಕೆ.ಪಿ. ಸುರೇಶ ಮತ್ತು ಗೆಳೆಯರು ಈ ಕಿರುಪುಸ್ತಕವನ್ನು ಹೊರತರುತ್ತಿದ್ದಾರೆ. (ಲಡಾಯಿ ಪ್ರಕಾಶನ ಪ್ರಕಟಿಸಿದ ಬಿಟಿ ಹತ್ತಿ.. ಕೃತಿಯ ’ಓದುವ ಮುನ್ನ’ ಟಿಪ್ಪಣಿ)No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...