Sunday, October 30, 2016

2016 ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ೨೦೧೬ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ೬೧ ಗಣ್ಯರನ್ನು ಆಯ್ಕೆ ಮಾಡಲಾಗಿದೆ.

* ಸ್ವಾತಂತ್ರ್ಯ ಹೋರಾಟಗಾರರು:

ಮಹದೇವ ಶಿವಬಸಪ್ಪ ಪಟ್ಟಣ, ಬೆಳಗಾವಿ

* ನ್ಯಾಯಂಗ:

Image result for ಶಿವರಾಜ ಪಾಟೀಲ

ಶಿವರಾಜ ಪಾಟೀಲ, ಬೆಂಗಳೂರು

* ಹೊರನಾಡು:


Image result for ಬೇಜವಾಡ ವಿಲ್ಸನ್‌

ಬೇಜವಾಡ ವಿಲ್ಸನ್‌, ದೆಹಲಿ

* ಸಾಹಿತ್ಯ:

Image result for ಸುಕನ್ಯಾ ಮಾರುತಿ

ಡಾ.ಸುಕನ್ಯಾ ಮಾರುತಿ, ಧಾರವಾಡ
ರಂ.ಶಾ.ಲೋಕಾಪುರ, ಬೆಳಗಾವಿ
ಬಿ.ಶಾಮಸುಂದರ, ಮೈಸೂರು

Image result for ಕೆ.ಟಿ.ಗಟ್ಟಿ,
ಕೆ.ಟಿ.ಗಟ್ಟಿ, ದಕ್ಷಿಣ ಕನ್ನಡ

* ರಂಗಭೂಮಿ:

ಮೌಲಾಸಾಬ್‌ ಇಮಾಂಸಾಬ್‌ ನದಾಫ್‌(ಅಣ್ಣಿಗೇರಿ), ದಾವಣಗೆರೆ
ಟಿ.ಹೆಚ್.ಹೇಮಲತಿ, ತುಮಕೂರು
ರಾಮೇಶ್ವರಿ ವರ್ಮಾ, ಮೈಸೂರು
ಉಮಾರಾಣಿ ಬಾರಿಗಿಡದ, ಬಾಗಲಕೋಟೆ
ಚಂದ್ರಕುಮಾರ್‌ ಸಿಂಗ್‌, ಬೆಂಗಳೂರು

* ಸಿನಿಮಾ ಕಿರುತೆರೆ

ರೇವತಿ ಕಲ್ಯಾಣ್‌ ಕುಮಾರ್‌, ಬೆಂಗಳೂರು

Image result for ಜ್ಯೂಲಿ ಲಕ್ಷ್ಮೀ

ಜ್ಯೂಲಿ ಲಕ್ಷ್ಮೀ, ಚೆನ್ನೈ
ಜಿ.ಕೆ.ಶ್ರೀನಿವಾಸ ಮೂರ್ತಿ, ಬೆಂಗಳೂರು ಗ್ರಾಮಾಂತರ
ಸಾ.ರಾ.ಗೋವಿಂದು, ಬೆಂಗಳೂರು
ಸೈಯ್ಯದ್‌ ಸತ್ಯಜಿತ್‌, ಧಾರವಾಡ

* ಸಂಗೀತ–ನೃತ್ಯ

ಕೆ.ಮುರಳೀಧರ ರಾವ್‌, ದಕ್ಷಿಣ ಕನ್ನಡ
ದ್ವಾರಕೀ ಕೃಷ್ಣಸ್ವಾಮಿ(ಕೊಳಲು), ಬೆಂಗಳೂರು
ಹೈಮಾವತಮ್ಮ(ಗಮಕ), ಬೆಂಗಳೂರು
ಪಂಡಿತ್ ನಾರಾಯಣ ಢಗೆ, ರಾಯಚೂರು
ವ್ಹಿ.ಜಿ.ಮಹಾಪುರುಷ(ಸಿತಾರ್‌), ಬಾಗಲಕೋಟೆ

* ಜಾನಪದ

ತಿಮ್ಮಮ್ಮ(ಸೋಬಾನೆ ಪದ), ಮಂಡ್ಯ
ಶಾರದಮ್ಮ(ತತ್ವಪದ), ಚಿಕ್ಕಮಗಳೂರು
ಮಲ್ಲಯ್ಯ ಹಿಡಕಲ್‌(ಭಜನೆ), ಬಾಗಲಕೋಟೆ
ಅಡಿವೆಪ್ಪ ಸಣ್ಣ ಬೀರಪ್ಪ ಕುರಿಯವರ(ಏಕತಾರಿ), ಹಾವೇರಿ
ಸೋಭಿನಾ ಮೋತೇಸ್‌ ಕಾಂಬ್ರೆಕರ್‌(ಡಮಾಮಿ), ಉತ್ತರ ಕನ್ನಡ
ಚಿಕ್ಕ ಮರಿಗೌಡ(ಪೂಜಾ ಕುಣಿತ), ರಾಮನಗರ

* ಯಕ್ಷಗಾನ ಬಯಲಾಟ

ಎಂ.ಆರ್‌.ರಂಗನಾಥರಾವ್‌(ಗೊಂಬೆಯಾಟ), ಬೆಂಗಳೂರು ಗ್ರಾಮಾಂತರ
ಪೇತ್ರಿ ಮಾಧವನಾಯ್ಕ, ಉಡುಪಿ
ಕಿನ್ನಿಗೋಳಿ ಮುಖ್ಯ ಪ್ರಾಣ ಶೆಟ್ಟಿಗಾರ, ಉಡುಪಿ
ಸುಜಾತಮ್ಮ(ಪಾರಿಜಾತ), ಬಳ್ಳಾರಿ
ದ್ಯಾನ್ಲೆಪ್ಪ ಚಾಂಪ್ಲೆಪ್ಪ ಲಮಾಣಿ(ದೊಡ್ಡಾಟ), ಗದಗ

* ಸಮಾಜ ಸೇವೆ

ತುಳಸಮ್ಮ ಕೆರೂರ, ಗದಗ
ಜಿ.ಎಂ.ಮುನಿಯಪ್ಪ, ಕೋಲಾರ
ಸೋಮಣ್ಣ ಹೆಗ್ಗಡ ದೇವನಕೋಟೆ, ಚಾಮರಾಜನಗರ
ನಜೀರ್‌ ಅಹಮದ್‌ ಯು.ಶೇಖ್, ಉತ್ತರ ಕನ್ನಡ

* ಸಂಕೀರ್ಣ

ಡಾ.ಎಂ.ಎನ್‌.ವಾಲಿ(ಜಾನಪದ ತಜ್ಞರು), ವಿಜಯಪುರ
ಆರ್‌.ಜೈಪ್ರಸಾದ್‌(ತಾಂತ್ರಿಕ ಸಲಹೆಗಾರರು), ಬೆಂಗಳೂರು
ಡಾ.ಶಕುಂತಲಾ ನರಸಿಂಹನ್‌(ಸಂಗೀತ ತಜ್ಞರು), ಬೆಂಗಳೂರು
ದೇವರಾಜ ರೆಡ್ಡಿ(ಅಂತರ್ಜಲ ತಜ್ಞರು), ಚಿತ್ರದುರ್ಗ

* ಶಿಲ್ಪಕಲೆ–ಚಿತ್ರಕಲೆ

ಧೃವ ರಾಮಚಂದ್ರ ಪತ್ತಾರ(ಶಿಲ್ಪ), ವಿಜಯಪುರ
ಕಾಶೀನಾಥ ಶಿಲ್ಪಿ(ಶಿಲ್ಪ), ಶಿವಮೊಗ್ಗ
ಬಸವರಾಜ್‌.ಎಲ್.ಜಾನೆ(ಚಿತ್ರಕಲೆ), ಕಲ್ಬುರ್ಗಿ
ಪಾರ್ವತಮ್ಮ ಕೌದಿ ಕಲೆ, ಯಾದಗಿರಿ

* ಕೃಷಿ–ಪರಿಸರ

ಎಲ್.ಸಿ.ಸೋನ್ಸ್‌(ಪರಿಸರ), ದಕ್ಷಿಣ ಕನ್ನಡ
ಜಿ.ಕೆ.ವೀರೇಶ್‌, ಹಾಸನ
ಕೆ.ಪುಟ್ಟಣ್ಣಯ್ಯ, ಮೈಸೂರು
ಡಾ.ಎಂ.ಎ.ಖಾದ್ರಿ, ಬೀದರ್‌

* ಮಾಧ್ಯಮ

Image result for indudhar honnapur


ಇಂಧೂದರ ಹೊನ್ನಾಪುರ, ಬೆಂಗಳೂರು
ಎಂ.ಎಂ.ಮಣ್ಣೂರ, ಕಲ್ಬುರ್ಗಿ
ಭವಾನಿ ಲಕ್ಷ್ಮಿನಾರಾಯಣ, ಚಿಕ್ಕಬಳ್ಳಾಪುರ
Image result for ಈಶ್ವರ ದೈತೋಟ
ಈಶ್ವರ ದೈತೋಟ, ಬೆಂಗಳೂರು

ಇರುಳು ಬೆಳಕು : ಹದಿನೈದು ದ್ವಿಪದಿಗಳು


Image result for paintings on light and darkness

1
ಇಬ್ಬರದೂ ಆ ಕತ್ತಲಲ್ಲಿ ಹುಡುಕಾಟವಿತ್ತು
ಇಬ್ಬರಲ್ಲೂ ಬೆಳಕು ಏಕಕಾಲದಲಿ ಹುಟ್ಟಿತು
2
ಕಳೆದ ವರ್ಷದಷ್ಟೇ ಹಣತೆ ಬೆಳಗಿಸಿದರೂ ಲೆಕ್ಕದಲ್ಲಿ ಒಂದು ಕಮ್ಮಿಯಾಯಿತು
ಉರುಳುವ ಕಾಲ ಮಾಯಾವಿ ಸಂಭ್ರಮ ಹುಟ್ಟಿಸಿಯೇ ಯಾಮಾರಿಸುವುದು ಹೀಗೆ
3
ಹಣತೆ ಹಚ್ಚದೆ ನಾನೇ ಹಣತೆಯಾಗಬೇಕು ಅಂದುಕೊಂಡೆ
ಸುತ್ತಲೂ ಬೆಂಕಿ ಕಡ್ಡಿಪೆಟ್ಟಿಗೆ ಹಿಡಿದ ನೂರಾರು ಜನ ಕಂಡರು

Image result for paintings on light and darkness
4
ಮಗಳಿದ್ದಾಳೆ ಮನೆಯಲ್ಲಿ
ಬೇರೆ ದೀಪ ಹಚ್ಚಲೇಕೆ?
5
ಎಣ್ಣೆ ಹತ್ತಿ ಪಣತಿ ಎಲ್ಲಕ್ಕೂ ನಾಲ್ಕು ದುಡ್ಡು ಹೆಚ್ಚು ಎಣಿಸಿದೆ
ಆ ಮನೆಗಳಲ್ಲಿ ಬೆಳಕಾಯಿತು ನಾನು ದೀಪಾವಳಿ ಆಚರಿಸಿದೆ
Image result for paintings on light and darkness
6
ದೀಪವಾಗಲೊಲ್ಲದವರ ಓಣಿಯಲ್ಲಿ
ಬೀದಿದೀಪಗಳು ಕತ್ತಲನ್ನು ಬೆಳಗುತ್ತಿದ್ದವು
7
ಕೊನೆಗೂ ಕತ್ತಲು ಬೆಳಕನ್ನೇ ಕೊಟ್ಟಿತು
ಹೇಳು ತಮ್ಮ ಬೆಳಕು ಕೊನೆಗೇನು ಕೊಟ್ಟಿತು?

Image result for paintings on light and darkness
8
ಆ ಮನೆಯಿಂದ ಅವಳು ಈ ಮನೆಗೆ ನಡೆದುಬಂದಳು
ಆಹಾ ಆ ಮನೆ ಕತ್ತಲು ಈ ಮನೆ ಕತ್ತಲು ಎಷ್ಟೊಂದು ಭಿನ್ನ
9
ಚಿಕ್ಕ ಮನೆ ಕೂಡು ಕುಟುಂಬ
ಕತ್ತಲಿರದಿದ್ದರೆ ನಾ ಹುಟ್ಟುತ್ತಲೇ ಇರಲಿಲ್ಲವೇನೊ
10
ಬೆಳಕು ಶ್ರೇಷ್ಠ ಕತ್ತಲು ಕನಿಷ್ಠ
ಕಂಡೆಯಾ ಇದುವೇ ಇಂಡಿಯಾ
11
ರಾತ್ರಿ ಹಣತೆ ಸುಟ್ಟುಕೊಂಡಿತು ಹಗಲು ಸೂರ್ಯ
ಲೋಕವೆ ಇರುಳುಬೆಳಕಿನ ಸುಡುವ ಚರಿತ್ರೆ ಭಿನ್ನವಲ್ಲ
12
ಕತ್ತಲಲ್ಲಿ ಬೆಳಕಿರುವದು ಹಗಲಲ್ಲಿ ಕತ್ತಲಿರುವದು ಕಂಡಿತು
ಆಮೇಲೆ ಜನ ನಾನು ಮನುಷ್ಯನೆಂಬುದೇ ಮರೆತುಬಿಟ್ಟರು
13
ಹಣತೆ ಹಚ್ಚಿದಾಗ ನಾವು ಅಪರಿಚಿತರಂತೆ ಇದ್ದೆವು
ಹಣತೆ ಆರಿದಾಗ ಹೆಚ್ಚು ಹೆಚ್ಚು ಪರಿಚಿತರಾದೆವು
Image result for paintings on light and darkness
14
ತೊಟ್ಟಬಟ್ಟೆ ಬಿಚ್ಚಿದರೆ
ನೀನು ವಿಂಚುಹುಳು

Image result for paintings on light and darkness
15
ಅನುಮಾನವೇಕೆ ಇರುಳ ಮಗಳು ನೀನು
ನಿನ್ನ ಕೂಡಿದೆನೆಂದೇ ನನ್ನೊಳಗೆ ಬೆಳಕು ಹುಟ್ಟಿತು
16
ಹಣತೆ ಹಚ್ಚಿದರಷ್ಟೇ
ನಿನ್ನ ಮುಖ ನನಗೆ
ನನ್ನ ಮುಖ ನಿನಗೆ
ಕಾಣುವುದಾದರೆ
ಕ್ಷಮಿಸು ನಾನು
ಹಣತೆ ಹಚ್ಚಲಾರೆ

Friday, October 28, 2016

ಟಿಪ್ಪು: ಚರಿತ್ರೆಯ ಕಾಲದ ನಾಣ್ಯಡಾ. ಎಚ್. ಎಸ್. ಅನುಪಮಾ


ಬಡತನ, ನಿರುದ್ಯೋಗ, ಅನಕ್ಷರತೆ ಮುಂತಾದ ಸಕಲೆಂಟು ಸಾಮಾಜಿಕ, ಆರ್ಥಿಕ ಸಮಸ್ಯೆಗಳ ಜೊತೆಗೆ ಅಭದ್ರತೆ, ತಳಮಳ ಎದುರಿಸುತ್ತಿರುವ ಮುಸ್ಲಿಂ ಸಮುದಾಯಕ್ಕೆ ಸರ್ಕಾರ ಮಾಡಬೇಕಾದ್ದು ಬೇಕಾದಷ್ಟಿತ್ತು. ಮುಸ್ಲಿಂ ಸಮುದಾಯದ ಸಮಗ್ರ ಅಧ್ಯಯನ ನಡೆಸಿ ಸಾಚಾರ್ ಸಮಿತಿ ನೀಡಿದ ವರದಿಯನ್ನು ದಕ್ಷವಾಗಿ ಅನುಷ್ಠಾನಗೊಳಿಸಿದ್ದರೂ ಆ ಸಮುದಾಯದ ಸ್ಥಿತಿ ಉತ್ತಮಗೊಳ್ಳಬಹುದಿತ್ತು. ಆದರೆ ಜಾತಿಗೊಂದು ಜಯಂತಿ ನಿಗದಿಪಡಿಸಿ ಆ ಸಮುದಾಯವನ್ನೇ ಉದ್ಧಾರ ಮಾಡಿದೆವೆಂದು ಬೀಗುವ ಆಳುವವರಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವಂತಿರಲಿಲ್ಲ. ಇದುವರೆಗೆ ಕೆಲ ಸಂಘಸಂಸ್ಥೆಗಳು ಆಚರಿಸಿಕೊಂಡು ಬರುತ್ತಿದ್ದ ಟಿಪ್ಪು ಜಯಂತಿಯನ್ನು ಈ ಸಲದಿಂದ ಸರ್ಕಾರವೇ ಆಚರಿಸಲು ತೀರ್ಮಾನಿಸಿತು. ಮತ್ತಿನ್ನಾವ ಜಯಂತಿ, ಪುಣ್ಯತಿಥಿಗಳಲ್ಲೂ ಹೀಗಾಗಿರಲಿಲ್ಲ, ಟಿಪ್ಪು ಜಯಂತಿಯ ಆಸುಪಾಸು ಸಂಪೂರ್ಣ ವಿರುದ್ಧ ಕ್ರಿಯೆ, ಪ್ರತಿಕ್ರಿಯೆಗಳನ್ನು ಈ ನಾಡು ಕಂಡಿತು. ಮೈಸೂರು ಆಳಿದ ಅರಸನ ಆರಾಧನೆ, ನಿಂದನೆ ಎರಡೂ ನಡೆದವು. ಒಂದು ವರ್ಗವು ಟಿಪ್ಪುವನ್ನು ಅನನ್ಯ ದೇಶಪ್ರೇಮಿ, ಸೆಕ್ಯುಲರ್ ರಾಜ, ಜಮೀನ್ದಾರಿ ಪದ್ಧತಿ ಕೊನೆಗೊಳಿಸಲೆತ್ನಿಸಿದ ಕ್ರಾಂತಿಕಾರಿ ಸುಲ್ತಾನ, ಶ್ರಿಂಗೇರಿ-ನಂಜನಗೂಡು-ಮೇಲುಕೋಟೆ ಮುಂತಾದ ದೇವಾಲಯಗಳಿಗೆ ದತ್ತಿಕಾಣಿಕೆ ನೀಡಿದ ಸಹಿಷ್ಣುವೆಂದು ಬಿಂಬಿಸಿದರೆ; ಮತ್ತೊಂದು ವರ್ಗವು ಅವನು ಸೋತ ಪ್ರದೇಶಗಳಲ್ಲಿ ಮಾಡಿದ ಲೂಟಿ ಮತ್ತು ನಾಶವನ್ನು ನೆನಪಿಸಿಕೊಂಡು ಕಾಫಿರರನ್ನು ಸೋಲಿಸಿ ಹಿಂಸಿಸಿ ಇಸ್ಲಾಂ ಸಾಮ್ರಾಜ್ಯ ಕಟ್ಟಹೊರಟ ಮತಾಂಧ ಎಂದು ಜರೆಯಿತು.

ಭಿನ್ನ ಅಭಿಪ್ರಾಯಗಳು ಪ್ರಜಾಪ್ರಭುತ್ವದಲ್ಲಿ ಇರುವಂಥವೇ ಎಂದಿಟ್ಟುಕೊಂಡು ವಿರುದ್ಧ ಪ್ರತಿಕ್ರಿಯೆಗಳನ್ನು ಅತ್ತ ಸರಿಸುವಂತಿಲ್ಲ. ಧಾರ್ಮಿಕ ಅಸಹನೆ ಉತ್ತುಂಗ ಮುಟ್ಟಿರುವ ೨೦೧೫ರಲ್ಲಿ ಕನ್ನಡಿಗ ಮುಸ್ಲಿಮರಿಗೆ ಟಿಪ್ಪು ಸುಲ್ತಾನ್ ಮಾದರಿ ನಾಯಕನ ಗುಣಗಳ ಹೊಂದಿದ್ದನೆ? ವಸಾಹತುಶಾಹಿ ಕಾಲದ ರಾಜನಿಗೆ ಪ್ರಜಾಪ್ರಭುತ್ವ ಭಾರತಕ್ಕೆ ಮಾದರಿಯಾಗುವ ಸೆಕ್ಯುಲರ್ ಲಕ್ಷಣಗಳಿದ್ದವೆ? ಮುಸ್ಲಿಂ ಸಮುದಾಯದ ಬದುಕು ಸುಧಾರಿಸುವುದು ಆಳುವವರ ಇಂಥ ನಡೆಗಳಿಂದಲೇ? ಎಂದು ವಸ್ತುನಿಷ್ಠವಾಗಿ ನೋಡಬೇಕಾದ ಅವಶ್ಯಕತೆಯಿದೆ. ಏಕೆಂದರೆ ಕಾಲದ ನಡಿಗೆಯ ಯಾವುದೇ ಒಂದು ಬಿಂದುವಿನಲ್ಲಿ ಇಟ್ಟ ಹೆಜ್ಜೆ ಮತ್ತು ಆಯ್ಕೆ ತಪ್ಪಾದರೆ ಅದರ ಜವಾಬ್ದಾರಿಗಳನ್ನು ಆ ಕಾಲದ ಎಲ್ಲರೂ ಸಮವಾಗಿ ಹೊತ್ತುಕೊಳ್ಳಬೇಕಾಗುತ್ತದೆ.


ಟಿಪ್ಪು ಚರಿತ್ರೆಕಾಲದ ಒಂದು ನಾಣ್ಯ. ಈ ಮಾತು ಟಿಪ್ಪುವಿಗಷ್ಟೆ ಅಲ್ಲ, ಬಹುಪಾಲು ಚಾರಿತ್ರಿಕ ವ್ಯಕ್ತಿಗಳಿಗೆ, ಅದರಲ್ಲೂ ರಾಜರಿಗೆ ಅನ್ವಯಿಸುತ್ತದೆ. ಆ ನಾಣ್ಯಗಳಿಗೆ ಎರಡು ಭಿನ್ನ ಮುಖಗಳಿರುತ್ತವೆ. ಎರಡು ಮುಖಗಳನ್ನು ಆ ಕಾಲದ ಅಗತ್ಯವು ರೂಪುಗೊಳಿಸಿರುತ್ತದೆ. ಚರಿತ್ರೆ ಕಾಲದ ನೀತಿಕೋಶವೇ ಬೇರೆ. ನ್ಯಾಯ, ನೀತಿ ಎಂಬ ಪದಗಳ ಅರ್ಥವೇ ಬೇರೆ. ಅವನ್ನು ಇವತ್ತು ಎಳೆತರುವುದು, ಹೋಲಿಸುವುದು ಸಾಧುವಲ್ಲ. ಕೊನೆಗೂ ಚರಿತ್ರೆಯೆಂದರೆ ಏನೆಂದು ನಿರ್ಣಯವಾಗಬೇಕಾದ್ದು ಆಕರಗಳಿಂದ ಮಾತ್ರವಲ್ಲ, ನ್ಯಾಯಸೂಕ್ಷ್ಮದ ಮನಸುಗಳಲ್ಲೇ ಎಂದು ನೆನಪಿಸಿಕೊಳ್ಳುತ್ತ ಟಿಪ್ಪು ಸುಲ್ತಾನನ ಎರಡು ಭಿನ್ನ ವ್ಯಕ್ತಿತ್ವಗಳನ್ನು ಪೂರ್ವಗ್ರಹಗಳನಿಟ್ಟುಕೊಳ್ಳದ ಚರಿತ್ರೆಯ ಆಕರಗಳಿಂದ ಇಲ್ಲಿಡಲಾಗಿದೆ.


ನಾಣ್ಯ ಒಂದು: ಯುದ್ಧ-ಆಡಳಿತ

ಟಿಪ್ಪು ಮೈಸೂರಿನ ಆಳರಸರಲ್ಲಿ ಒಬ್ಬ. ಕ್ರಿ. ಶ. ೧೭೫೦, ನವೆಂಬರ್ ೨೦ರಂದು ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ಹುಟ್ಟಿದ. ಕೇವಲ ೪೯ ವರ್ಷ ಬದುಕಿದ ಅವನ ಶೌರ್ಯ, ಬಲಿದಾನ, ಸ್ವಾಭಿಮಾನ ಕುರಿತು ಕತೆಗಳೇ ಇವೆ. ಯುದ್ಧದ ನಾನಾ ಕಲೆಗಳಲ್ಲಿ ನಿಷ್ಣಾತರಾದ ಕುಟುಂಬದಿಂದ ಬಂದವ ಟಿಪ್ಪು. ಅಸಮರ್ಥ ಹಾಗೂ ಅದಕ್ಷ ಮೈಸೂರರಸನನ್ನು ಸಿಂಹಾಸನದಿಂದ ಕೆಳಗಿಳಿಸಿ, ತಾನು ಪ್ರವಾದಿ ಮಹಮದರ ಕುರೇಶಿ ಪಂಗಡದವನೆಂದು ಸಾರಿ ರಾಜನಾದ ಹೈದರಾಲಿಯ ಮಗ. ಟಿಪ್ಪುವಿನ ಅಜ್ಜ ಆರ್ಕಾಟ್ ನವಾಬನ ಸೇನೆಯಲ್ಲಿ ರಾಕೆಟ್ ಪಡೆಯ ಮುಖ್ಯಸ್ಥನಾಗಿದ್ದ. ಕಡಪಾ ಕೋಟೆಯ ಕಾವಲಿನ ಮುಖ್ಯಸ್ಥನ ಮಗಳು ಟಿಪ್ಪುವಿನ ಅಮ್ಮ. ಇಂಥ ವಾತಾವರಣದಲ್ಲಿ ಬೆಳೆದ ಟಿಪ್ಪುವಿಗೆ ಆಡಳಿತ, ಯುದ್ಧ, ವ್ಯೂಹ, ತಂತ್ರಗಾರಿಕೆ ಎಲ್ಲವೂ ಬಹು ಸಹಜವಾಗಿ ನೀರು ಕುಡಿದಂತೆ ಸಿದ್ಧಿಸಿತ್ತು.

ಅನಕ್ಷರಸ್ಥನಾಗಿದ್ದ ಹೈದರಾಲಿ ಮಗ ಟಿಪ್ಪುವಿಗೆ ಸಣ್ಣಂದಿನಿಂದಲೇ ಸಕಲ ವಿದ್ಯೆಗಳನ್ನು ಕಲಿಸುವ ವ್ಯವಸ್ಥೆ ಮಾಡಿದ. ಉರ್ದು, ಪರ್ಷಿಯನ್, ಕನ್ನಡ, ಅರೇಬಿಕ್, ಕುರಾನ್, ಇಸ್ಲಾಮೀ ನ್ಯಾಯಶಾಸ್ತ್ರ, ಕುದುರೆ ಸವಾರಿ, ತೋಪು ಚಲಾಯಿಸುವುದು ಮುಂತಾದವುಗಳನ್ನೆಲ್ಲ ಕಲಿಸಲಾಯಿತು. ಹಲವು ಪರಿಣತಿಗಳಲ್ಲಿ ಜ್ಞಾನ ಸಂಪಾದಿಸಿದ ಟಿಪ್ಪು ಹೊಸ ಮೂಲೂದಿ ಇಸ್ಲಾಮಿ ಪಂಚಾಂಗ ದಿನಗಣನೆಯನ್ನು ಚಾಲ್ತಿಗೆ ತಂದ.

ಮೈಸೂರು ತನ್ನ ತಂದೆಯ ಕೈವಶವಾಗುತ್ತಿದ್ದದ್ದನ್ನು ಟಿಪ್ಪು ಹದಿವಯಸ್ಸಿನಲ್ಲಿ ಗಮನಿಸುತ್ತಿದ್ದ. ರಾಜಕಾರಣದ ಒಳಹೊರಗುಗಳ ಅರಿಯುತ್ತ ತಾನೂ ರೂಪುಗೊಂಡ. ಹದಿವಯಸ್ಸಿನಲ್ಲಿಯೇ ಮೊದಲ ಮೈಸೂರು ಯುದ್ಧ, ಆರ್ಕಾಟ್ ಮೇಲಿನ ದಾಳಿಯಲ್ಲಿ ಭಾಗವಹಿಸಿ ಹದಿನೇಳರ ಹೊತ್ತಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಿದ್ದ. ಟಿಪ್ಪುವಿಗೆ ಯುದ್ಧವಿದ್ಯೆ ಹೇಳಿಕೊಟ್ಟವರು ಫ್ರೆಂಚ್ ಕಮ್ಯಾಂಡರುಗಳು. ೧೭೮೨ರಲ್ಲಿ ಎರಡನೆ ಮೈಸೂರು ಯುದ್ಧ ನಡೆಯುತ್ತಿರುವಾಗಲೇ ಕ್ಯಾನ್ಸರಿನಿಂದ ಹೈದರಾಲಿ ತೀರಿಕೊಂಡಾಗ ತಂದೆ ಅರ್ಧಕ್ಕೆ ಬಿಟ್ಟುಹೋದ ಯುದ್ಧ ಗೆದ್ದು ತನಗೆ ಅನುಕೂಲಕರವಾದ ಷರತ್ತು ವಿಧಿಸಿ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡ. ಹೀಗೆ ೩೨ ವರ್ಷದ ಟಿಪ್ಪು ವಿಶಾಲ ರಾಜ್ಯದ ಅಧಿಪತಿಯಾದ. ಬೆಂಗಳೂರಿನ ಲಾಲ್‌ಬಾಗನ್ನು ಪೂರ್ಣಗೊಳಿಸಿದ. ರಸ್ತೆ, ಕೆರೆಕಟ್ಟೆ, ಅರಮನೆಗಳ ನಿರ್ಮಿಸಿದ. ಮೈಸೂರು ರೇಶಿಮೆ ಉದ್ದಿಮೆಯಾಗಿ ಬೆಳೆಯಲು ಅನುವಾಗುವಂತೆ ಹೊಸ ತೆರನ ಕಂದಾಯ ವ್ಯವಸ್ಥೆ ಜಾರಿಗೆ ತಂದ. ಫಾತುಲ್ ಮುಜಾಹಿದೀನ್ ಎಂಬ ಮಿಲಿಟರಿ ಕೈಪಿಡಿ ಬರೆದ. ಪಾನ ನಿಷೇಧ ಜಾರಿಗೊಳಿಸಿದ.ಹೈದರಾಲಿ ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿ ಅದರ ಒಂದು ಪಡೆಯನ್ನೇ ಇಟ್ಟಿದ್ದರೆ, ಟಿಪ್ಪು ಕಬ್ಬಿಣದ ಹೊರಕವಚ ಹೊಂದಿದ ‘ಮೈಸೂರು ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿದ. ಮುಂದೆ ಚೂಪಾದ ಬ್ಲೇಡು ಕಟ್ಟಿ, ಕಬ್ಬಿಣದ ಕೇಸುಗಳೊಳಗೆ ಮದ್ದಿನಪುಡಿ ತುಂಬಿದ್ದರಿಂದ ಅವುಗಳ ದೂರಗಾಮಿತ್ವ ಎರಡು ಕಿ.ಮೀ.ನಷ್ಟು ಹೆಚ್ಚಾಯಿತು. ಮೊದಲು ಈ ರಾಕೆಟ್ಟುಗಳನ್ನು ಎದುರುಗೊಂಡಾಗ ಬ್ರಿಟಿಷರ ತಂತ್ರಜ್ಞಾನ ಅದಕಿಂತ ಹಿಂದಿತ್ತು. ಎಂದೇ ಮೊದಲ ಯುದ್ಧಗಳನ್ನು ಟಿಪ್ಪು ಗೆಲ್ಲಲು ಸಾಧ್ಯವಾಯಿತು. ರಾಜ್ಯದ ಗಡಿಗಳನ್ನು ದಕ್ಷಿಣ, ಪಶ್ಚಿಮದತ್ತ ವಿಸ್ತರಿಸಲು ಸುಲಭವಾಯಿತು.

ಆದರೆ..

ಒಂದು ಕಡೆ ರಾಜ್ಯದ ಗಡಿ ವಿಸ್ತಾರಗೊಳ್ಳತೊಡಗಿದ್ದರೆ ಮತ್ತೊಂದು ಕಡೆ ಸಂಕುಚಿತಗೊಳ್ಳತೊಡಗಿತ್ತು. ೧೭೮೬ರ ಹೊತ್ತಿಗೆ ಮರಾಠರಿಗೆ ಮತ್ತು ನಿಜಾಮನ ಸೇನೆಗೆ ಉತ್ತರ ಕರ್ನಾಟಕದ ಬಹುಭಾಗ ಬಿಟ್ಟುಕೊಡಬೇಕಾಯಿತು. ಮರಾಠ ಪೇಶ್ವೆ ಮಾಧವ ರಾಯನ ದಳಪತಿ ನಾನಾ ಫಡ್ನವೀಸನ ಸೇನೆ ಬದಾಮಿ, ಕಿತ್ತೂರು, ಗಜೇಂದ್ರಗಡದವರೆಗೆ ತುಂಗಭದ್ರಾನದಿ ತನಕದ ಪ್ರದೇಶವನ್ನು ಮೈಸೂರಿನಿಂದ ಮರುವಶಪಡಿಸಿಕೊಂಡಿತು. ಅದೋನಿಯು ಹೈದರಾಬಾದ್ ನಿಜಾಮನ ಪಾಲಾಯಿತು. ಮರಾಠರೊಡನೆ ಒಪ್ಪಂದವಾಗಿ ಟಿಪ್ಪುವು ಯುದ್ಧಖರ್ಚು ೪೮ ಲಕ್ಷ ರೂಪಾಯಿ, ವಾರ್ಷಿಕ ಕಪ್ಪ ೧೨ ಲಕ್ಷ ರೂಪಾಯಿ ಕೊಡಬೇಕಾಯಿತು. ಈ ಸೋಲಿನ ಸಿಟ್ಟಿನಿಂದ ಕುದಿಯುತ್ತಿದ್ದ ಟಿಪ್ಪು ಗಮನವನ್ನು ಮಲಬಾರಿನೆಡೆ ಹರಿಸಿದ. ಅತ್ತ ಮಲಬಾರಿಗೆ ದೊಡ್ಡ ಸೇನೆ ಒಯ್ದಾಗ ಇತ್ತ ಬ್ರಿಟಿಷರು ಮಿತ್ರಸೇನೆಯೊಡಗೂಡಿ ಮೂರನೇ ಮೈಸೂರು ಯುದ್ಧ ಕೆದರಿದರು. ಆ ಯುದ್ಧದಲ್ಲಿ ಸೋಲು ಖಚಿತವೆನಿಸತೊಡಗಿದಾಗ ಸೈನ್ಯಕ್ಕೆ ಅನ್ನನೀರು ಪೂರೈಕೆ ಸಿಗದಂತೆ ಮಾಡಿ ಒಪ್ಪಂದಕ್ಕೆ ಬರುವಂತೆ ಮಾಡಿದ. ಮಿತ್ರಸೇನೆಯೊಂದಿಗೆ ಒಪ್ಪಂದವೇನೋ ಆಯಿತು. ಆದರೆ ತನ್ನ ಅರ್ಧ ಪ್ರಾಂತ್ಯ ಬಿಟ್ಟುಕೊಟ್ಟು ೩ ಕೋಟಿ ೩೦ ಲಕ್ಷ ರೂಪಾಯಿ ಯುದ್ಧ ಖರ್ಚನ್ನು ಕೊಡಬೇಕಾಯಿತು. ಅಷ್ಟು ಹಣ ಸಂದಾಯವಾಗುವವರೆಗೆ ತನ್ನಿಬ್ಬರು ಮಕ್ಕಳನ್ನು ಲಾರ್ಡ್ ಕಾರ್ನ್‌ವಾಲೀಸನ ಬಳಿ ಮದರಾಸಿನಲ್ಲಿ ಒತ್ತೆಯಿರಿಸಿ ಎರಡು ಕಂತಿನಲ್ಲಿ ಪೂರ್ತಿ ಹಣ ಕೊಟ್ಟು ಮಕ್ಕಳನ್ನು ಬಿಡಿಸಿ ತರಬೇಕಾಯಿತು.


ಹೆತ್ತವಳ ಒಡಲ ಸಂಕಟವೇನಾಗಿತ್ತೋ, ಸ್ವಂತ ಮಕ್ಕಳ ಒತ್ತೆಯಿಟ್ಟದ್ದು ಅನನ್ಯ ದೇಶಪ್ರೇಮವೆಂದು ಕೊಂಡಾಡಲ್ಪಟ್ಟಿತು.

ಕೊನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆ ಕೋಟೆ ಒಡೆದು ಒಳ ಪ್ರವೇಶಿಸಿದಾಗ ಟಿಪ್ಪುವಿನ ಮಿಲಿಟರಿ ಸಲಹಾಕಾರನಾಗಿದ್ದ ಫ್ರೆಂಚ್ ಅಧಿಕಾರಿ ಸುರಕ್ಷಿತ ಜಾಗಕ್ಕೆ ಓಡಿಹೋಗುವಂತೆ ಅಥವಾ ಶರಣಾಗುವಂತೆ ಟಿಪ್ಪುವಿಗೆ ಹೇಳಿದ. ಆದರೆ ‘ಒಂದು ದಿನ ಹುಲಿಯಂತೆ ಬದುಕುವುದು, ಸಾವಿರವರ್ಷ ಕುರಿಯಂತೆ ಬದುಕಿರುವುದಕ್ಕಿಂತ ಉತ್ತಮವೆಂದು ಟಿಪ್ಪು ಹೋರಾಟವನ್ನೇ ಆಯ್ದುಕೊಂಡ.ಹುಲಿಯಂತೆ ಬದುಕಬೇಕೆಂದು ತಮ್ಮ ರಾಜ ಬಯಸಿದ್ದಕ್ಕೆ ಮೈಸೂರಿನ ೧೧,೦೦೦ ಸೈನಿಕರು ಪ್ರಾಣ ತೆರಬೇಕಾಯಿತು. ಕಾವೇರಿ ಕೆಂಪಾಗಿ ಹರಿಯಿತು.

ನಾಣ್ಯ ೨: ಸ್ವದೇಶಿ  - ಪರದೇಶಿ


ಯಾವ ಎರಡನೆ ಮೈಸೂರು ಯುದ್ಧದ ಗೆಲುವು ಟಿಪ್ಪುವನ್ನು ರಾಜನನ್ನಾಗಿಸಿತೊ ಅದೇ ಯುದ್ಧವು ಅವನ ಅತಿಗಳ ಕುರಿತೂ ಹೇಳುತ್ತದೆ. ಬ್ರಿಟಿಷರನ್ನೇನೋ ಸೋಲಿಸಲಾಯಿತು, ಆದರೆ ತಂಜಾವೂರನ್ನು ಟಿಪ್ಪುವಿನ ಪಡೆಗಳು ಬುಡಮಟ್ಟ ನಾಶಮಾಡಿದವು. ತಂಜಾವೂರು ಚೇತರಿಸಿಕೊಳ್ಳಲು ಒಂದು ಶತಮಾನ ಹಿಡಿಯಿತು. ದನಕರು, ಬೆಳೆ ನಾಶವಷ್ಟೆ ಅಲ್ಲ, ೧೨,೦೦೦ ಮಕ್ಕಳನ್ನು ಟಿಪ್ಪು ಅಪಹರಿಸಿದ ಎಂಬ ದಾಖಲಾತಿಯೂ ಇದೆ.

ವಸಾಹತುಶಾಹಿ ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ಹೋರಾಟಗಾರ ಟಿಪ್ಪು. ಆದರೆ ಅವ ಹೋರಾಡಿದ್ದು, ಖ್ಯಾತ ಮೈಸೂರು ರಾಕೆಟ್ಟುಗಳನ್ನು ಬಳಸಿದ್ದು ಕೇವಲ ಬ್ರಿಟಿಷರ ವಿರುದ್ಧ ಮಾತ್ರವಲ್ಲ; ಆಚೀಚಿನ ರಾಜರುಗಳಾದ ಮರಾಠರು, ತಂಜಾವೂರು-ಮಲಬಾರ್-ಶಿರಾ-ಬಿದನೂರು-ಕೊಡಗು-ತಿರುವಾಂಕೂರು ಆಳ್ವಿಕರು, ಅರ್ಕಾಟಿನ ನವಾಬ, ಹೈದರಾಬಾದಿನ ನಿಜಾಮ ಇವರ ವಿರುದ್ಧ. ಕೊನೆಯತನಕ ಟಿಪ್ಪುವಿನ ಕಡುವೈರಿಗಳು ಮರಾಠರು ಮತ್ತು ಹೈದರಾಬಾದಿನ ನಿಜಾಮ.  

ಗತವೈಭವದ ಕನವರಿಕೆಯಲ್ಲಿ ಕೊನೆಯುಸಿರೆಳೆಯುತ್ತಿದ್ದ ಮುಘಲ್ ಸಾಮ್ರಾಜ್ಯದ ದೊರೆ ಶಾ ಅಲಂಗೆ ಟಿಪ್ಪು ತಾನೇತಾನಾಗಿ ಅಧೀನತೆಯನ್ನು ಪ್ರದರ್ಶಿಸುತ್ತಿದ್ದ. ಶಾ ಅಲಂನನ್ನು ಹಿಜ್ರಾ ಒಬ್ಬ ಕುರುಡನನ್ನಾಗಿಸಿ ಪದಚ್ಯುತಗೊಳಿಸಿದ ನಂತರ ಟಿಪ್ಪು ಮರಾಠರನ್ನು ಸೋಲಿಸಲು ಆಫ್ಘನಿಸ್ತಾನದ ದುರಾನಿ ರಾಜರನ್ನು ಸಂಪರ್ಕಿಸಿದ. ಬ್ರಿಟಿಷರ ವಿರುದ್ಧ ಆಕ್ರಮಣಕ್ಕೆ ತುರ್ತು ಸಹಾಯ ಮಾಡುವಂತೆ ಟರ್ಕಿಯ ಒಟ್ಟೊಮನ್ ರಾಜರ ಸಹಾಯ ಕೇಳಿದ. ಆದರೆ ಇವರಿಗೆಲ್ಲ ರಷ್ಯಾದ ವಿರುದ್ಧ ಹೋರಾಡಲು ಬ್ರಿಟಿಷರ ಸಹಾಯ ಬೇಕಿದ್ದರಿಂದ ಟಿಪ್ಪುವಿಗೆ ಸಹಾಯ ಮಾಡಲಾರದೆ ಹೋದರು. ಕೊನೆಗೆ ಬ್ರಿಟಿಷರ ವಿರುದ್ಧ ಫ್ರೆಂಚ್ ಯುದ್ಧವೀರ ನೆಪೋಲಿಯನ್ ಬೋನಪಾರ್ಟೆಯ ಸಹಾಯಕ್ಕಾಗಿ ಪ್ರಯತ್ನಿಸಲಾಯಿತು.

ಈ ಸಂಕೀರ್ಣ ಸಂಬಂಧಗಳಲ್ಲಿ ಯಾರು ಸ್ವದೇಶಿ, ಯಾರು ಪರದೇಶಿ? ಅವೆಲ್ಲ ದೇಶಕಾಲಗಳಷ್ಟೇ ನಿರ್ಧರಿಸಬೇಕಾದ ಸಂಗತಿ.
Displaying Tippu.jpg
Displaying Tippu.jpg

ನಮ್ಮೂರು ಉತ್ತರಕನ್ನಡದ ಹೊನ್ನಾವರ ಕುರಿತು ವಸಾಹತುಶಾಹಿಗಳಿಗೆ, ಆದಿಲ್ ಶಾಹಿಗಳಿಗೆ, ಆಚೀಚಿನ ಪಾಳೆಯಪಟ್ಟುಗಳಿಗೆ, ಮೈಸೂರರಸರಿಗೆ ಬಹಳ ಆಕರ್ಷಣೆ. ಏಕೆಂದರೆ ಅದು ೨೦೦-೩೦೦ ಟನ್ ತೂಕದ ಹಡಗುಗಳನ್ನು ನಿಲ್ಲಿಸಬಲ್ಲ ಪ್ರಾಕೃತಿಕ ಬಂದರಾಗಿತ್ತು. ೧೭೬೩ರಲ್ಲಿ ಬಿದನೂರನ್ನು ತನ್ನ ಆಡಳಿತ ಕೇಂದ್ರವಾಗಿ ಮಾಡಿಕೊಂಡ ಹೈದರಾಲಿ ಹೊನ್ನಾವರ ಮತ್ತು ಮಂಗಳೂರಿನಲ್ಲಿ ನೌಕಾಸೈನ್ಯ ಇಟ್ಟ. ೧೭೬೯ರಲ್ಲಿ ಬ್ರಿಟಿಷ್ ಪಡೆ ಅವನ ವಿರುದ್ಧ ದಂಡೆತ್ತಿ ಬಂದಾಗ ಹೈದರಾಲಿಯ ಅಶ್ವದಳ ಅವನಿಗೇ ತಿರುಗಿ ಬಿದ್ದು ಹೊನ್ನಾವರ ಕೈತಪ್ಪಿ ಹೋಯಿತು. ಅದನ್ನು ಮತ್ತೆ ಹೈದರಾಲಿ ವಶಪಡಿಸಿಕೊಂಡ. ಆದರೆ ೧೭೮೪ರಲ್ಲಿ ಕ್ಯಾಪ್ಟನ್ ಟೋರಿಯಾನೋ ಎಂಬ ಬ್ರಿಟಿಷ್ ಸೈನ್ಯಾಧಿಕಾರಿ ಮೂರು ತಿಂಗಳ ಕಾಲ ಹೊನ್ನಾವರ ಬಂದರವನ್ನು ತನ್ನ ವಶದಲ್ಲಿ ಇಟ್ಟುಕೊಂಡಾಗ ಅವನಿಂದ ಹೊನ್ನಾವರವನ್ನು ಗೆದ್ದ ಟಿಪ್ಪು ಶಹರವನ್ನು ಸಂಪೂರ್ಣ ನಾಶಮಾಡಿದ. ಮೊದಲು ವ್ಯಾಪಾರೀ ಕೇಂದ್ರವಾಗಿ ಜನರಿಂದ ಗಿಜಿಗಿಜಿಗುಡುತ್ತಿದ್ದ ಬಂದರವು ಸುಟ್ಟು, ನಿರ್ಜನ ಸುಡುಗಾಡಿನಂತಾಯಿತು. ೧೭೯೯ರಲ್ಲಿ ಅವನ ಮರಣಾನಂತರ ಐದು ಅಂಗಡಿಗಳು ಹೊನ್ನಾವರದಲ್ಲಿ ತೆರೆಯಲ್ಪಟ್ಟವು. ೧೮೦೦ರಲ್ಲಿ ಒಂದೇಒಂದು ವಾಸದ ಮನೆಯೂ ಇಲ್ಲಿರಲಿಲ್ಲ. ೧೮೦೧ರಲ್ಲಿ ಬಂದಿದ್ದ ಪ್ರವಾಸಿ ಬುಕಾನನ್ ಅಲ್ಲಿಲ್ಲಿ ಅಡಗಿಕೊಂಡಿದ್ದ ವ್ಯಾಪಾರಿಗಳೆಲ್ಲ ಈಗ ಒಬ್ಬೊಬ್ಬರಾಗಿ ಹಿಂದಿರುಗಿ ಬರುತ್ತಿದ್ದಾರೆಂದು ಬರೆದ.

ತನ್ನ ರಾಜ್ಯದ ಗಡಿಯಾಚೆ ಇರುವ, ಬೇರೆ ಭಾಷೆ ಆಡುವ, ಬೇರೆ ದಿರಿಸು ತೊಡುವ, ತನ್ನ ದೇವರನ್ನು ನಂಬದ ಎಲ್ಲರೂ ಶತ್ರು/ಅನ್ಯ ಎಂಬ ಭಾವವೇ ರಾಷ್ಟ್ರೀಯತೆಯಾಗಿದ್ದ ಕಾಲದಲ್ಲಿ ಯಾವುದು ದೇಶಭಕ್ತಿ, ಯಾವುದು ದೇಶದ್ರೋಹ? ಅದನ್ನು ಈ ಕಾಲದಲ್ಲಿ ನಿರ್ಧರಿಸಬಹುದೆ?

ನಾಣ್ಯ ೩: ಧರ್ಮಾಂಧ - ಧರ್ಮ ಸಹಿಷ್ಣು

ಟಿಪ್ಪು ಹಿಂದೂ ಬಹುಸಂಖ್ಯಾತರ ಪ್ರದೇಶವನ್ನು ಆಳುತ್ತಿದ್ದ ಮುಸ್ಲಿಂ ರಾಜ. ಆಸ್ಥಾನದ ಮುಖ್ಯ ಸ್ಥಾನಗಳಲ್ಲಿ ಹಿಂದೂಗಳನ್ನು, ಅದರಲ್ಲೂ ಬ್ರಾಹ್ಮಣರನ್ನು ನೇಮಿಸಿಕೊಂಡಿದ್ದ. ಆತ ‘ಬ್ರಾಹ್ಮಣರ ಕುರಿತು ದ್ವೇಷವಿಲ್ಲದ ದೊರೆ ಎಂದು ಬಣ್ಣಿಸಲ್ಪಟ್ಟ. ಅದು ಹೈದರಾಲಿಯ ರಾಜನೀತಿಯಾಗಿತ್ತು. ದಿವಾನ್ ಪೂರ್ಣಯ್ಯನಿಂದ ಹಿಡಿದು ಖಜಾಂಚಿಯವರೆಗೆ ಬಹಳ ಜಾಗಗಳಲ್ಲಿ ಮುಸ್ಲಿಮೇತರರು ಆಸ್ಥಾನದ ಸೇವೆಯಲ್ಲಿದ್ದರು. ೧೫೬ ದೇವಾಲಯಗಳಿಗೆ ನಿಯಮಿತ ವಾರ್ಷಿಕ ದತ್ತಿ ನೀಡುತ್ತಿದ್ದ. ಎಷ್ಟೋ ದೇವಾಲಯಗಳಿಗೆ ಖಾಯಂ ಉತ್ಪನ್ನದ ಮಾರ್ಗವಾಗಿ ಭೂಮಿ ಉಂಬಳಿ ನೀಡಿದ. ನಂಜನಗೂಡು, ಮೇಲುಕೋಟೆ, ಶ್ರೀರಂಗಪಟ್ಟಣದ ದೇವಾಲಯಗಳೂ ಸೇರಿದಂತೆ ಹಲವು ದೇವಾಲಯಗಳಿಗೆ ಚಿನ್ನ ಬೆಳ್ಳಿ ಉಡುಗೊರೆ ನೀಡಿದ. ೧೭೯೧ರಲ್ಲಿ ಮರಾಠರು ಶ್ರಿಂಗೇರಿ ಮಠ ಮತ್ತು ದೇವಾಲಯದ ಮೇಲೆ ದಾಳಿ ಮಾಡಿ, ಹಲವರನ್ನು ಕೊಂದು, ಲೂಟಿ ಮಾಡಿದಾಗ ಮಠದ ಸ್ವಾಮಿಗಳು ಸಹಾಯ ಕೋರಿ ಟಿಪ್ಪುವಿನೊಡನೆ ಪತ್ರ ವ್ಯವಹಾರ ನಡೆಸಿದರು. ಟಿಪ್ಪು ರಕ್ಷಣೆ ನೀಡಿ ವಸ್ತುಗಳನ್ನು ದೇಣಿಗೆಯಾಗಿ ನೀಡಿದ. ಶ್ರೀರಂಗಪಟ್ಟಣದಲ್ಲಿ ಅವನ ಅರಮನೆಯ ಸನಿಹವೇ ಇದ್ದ ರಂಗನಾಥ ಮಂದಿರದ ಪೂಜಾಧ್ವನಿಯೂ, ಮಸೀದಿಯ ಕರೆಯೂ ಒಟ್ಟೊಟ್ಟು ಕೇಳಿಬರುತ್ತಿದ್ದವು.

ಈ ವಿವರಗಳು ತನ್ನ ರಾಜ್ಯದಲ್ಲಿ ಅವ ಧರ್ಮಸಹಿಷ್ಣುವಾಗಿದ್ದ ಎಂದು ತಿಳಿಸುತ್ತವೆ.

ಆದರೆ ಅವನೇ ಹೇಳಿಕೊಂಡಂತೆ ಆತ ಇಸ್ಲಾಮಿನಲ್ಲಿ ಗಾಢ ನಂಬಿಕೆಯಿಟ್ಟು ಅಲ್ಲಾಹುವಿನ ರಾಜ್ಯ ತರಬಯಸಿದ್ದ ಘಾಜಿ. ರಾಜ್ಯದೆಲ್ಲೆಡೆ ಸಾಧ್ಯವಾದಷ್ಟು ಮಸೀದಿ ನಿರ್ಮಾಣ ಮಾಡಿದ. ತಾನು ಗೆದ್ದ ಪ್ರದೇಶಗಳ ಕಾಫಿರರನ್ನು ಕೊಂದ ಬಗ್ಗೆ, ಅವರನ್ನು ‘ಮತಾಂತರದ ಗೌರವಕ್ಕೊಳಪಡಿಸಿದ್ದರ ಬಗೆಗೆ ಹಲವು ಪತ್ರಗಳಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಮುಘಲ್ ಸಾಮ್ರಾಜ್ಯ ಅವನತಿ ಕಾಣುವ ಹೊತ್ತಿಗೆ ಉಚ್ಛ್ರಾಯ ಸ್ಥಿತಿಗೆ ಬಂದ ಟಿಪ್ಪು ಒಂದು ವಿಶಾಲ ಮುಸ್ಲಿಂ ಸಾಮ್ರಾಜ್ಯ ಕಟ್ಟುವ ಕನಸು ಹೊಂದಿ ಬಾದಶಾಹ್ ಎಂದು ತನ್ನನ್ನೇ ತಾನು ಕರೆದುಕೊಂಡ. ಮಾರ‍್ಕ್ವೆಸ್ ಆಫ್ ವೆಲ್ಲೆಸ್ಲಿಗೆ ಆತ ಉಡುಗೊರೆ ನೀಡಿದ ಕತ್ತಿಯ ಮೇಲೆ ಅಲ್ಲಾನ ರಾಜ್ಯ ಸ್ಥಾಪನೆಗೆ ತನ್ನ ಪ್ರಯತ್ನಗಳನ್ನು ಉತ್ಪ್ರೇಕ್ಷೆಯಿಂದ ವರ್ಣಿಸಿದ್ದಾನೆ. ಶ್ರೀರಂಗಪಟ್ಟಣ ಅರಮನೆಯ ಆವರಣದ ಒಂದು ಬಂಡೆಯ ಮೇಲೆ ‘ಕಾಫಿರರು ನಾಶವಾಗಲಿ, ಅವರ ಆಯಸ್ಸು ಕಡಿಮೆಯಾಗಲಿ, ಕುರುಡಾಗಲಿ, ಅವಮಾನಗೊಂಡು ಮುಖ ಕರಿ ಆಗಲಿ.. ಇತ್ಯಾದಿ ಕೆತ್ತಲಾಗಿದೆ.


೧೭೮೪ರಲ್ಲಿ ಮಂಗಳೂರು ಒಪ್ಪಂದವಾದದ್ದೇ ಅಲ್ಲಿದ್ದ ಕ್ಯಾಥೊಲಿಕ್ ಕ್ರೈಸ್ತರನ್ನು ಶ್ರೀರಂಗಪಟ್ಟಣಕ್ಕೆ ಗಡೀಪಾರು ಮಾಡಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡ. ಥಾಮಸ್ ಮನ್ರೋ (ಮಂಗಳೂರು ಕಲೆಕ್ಟರ್) ಪ್ರಕಾರ ೬೦,೦೦೦ ಕ್ರೈಸ್ತರು ಬಂಧಿತರಾಗಿ ಶ್ರೀರಂಗಪಟ್ಟಣಕ್ಕೆ ಕಳಿಸಲ್ಪಟ್ಟರು. ೭೦೦೦ ಜನ ಪಾರಾದರು. ಆರು ವಾರ ಕಾಲ್ನಡಿಗೆಯಲ್ಲಿ ಘಟ್ಟ ಹತ್ತಿ ಶ್ರೀರಂಗಪಟ್ಟಣಕ್ಕೆ ಹೋದ ಬಂಧಿತರು ಅವನ ಸಾವಿನವರೆಗೂ ೧೫ ವರ್ಷ ಕಾಲ ಬಂಧಿತರಾಗಿಯೇ ಇದ್ದರು. ಬಂಧಿತರಲ್ಲಿ ಒಬ್ಬನಾಗಿದ್ದ ಬ್ರಿಟಿಷ್ ಅಧಿಕಾರಿ ಜೇಮ್ಸ್ ಸ್ಕರಿ ಪ್ರಕಾರ ೩೦,೦೦೦ ಜನರನ್ನು ಇಸ್ಲಾಮಿಗೆ ಮತಾಂತರಿಸಲಾಯ್ತು. (ಗೆಜೆಟಿಯರ್ ಪ್ರಕಾರ ೩೦,೦೦೦ ಜನರಿಗೆ ಬಲವಂತವಾಗಿ ಸುನ್ನತಿ ನಡೆಸಿ ಮೈಸೂರಿಗೆ ಕಳಿಸಲಾಯಿತು.) ಹೊತ್ತುತಂದ ಹೆಂಗಸರು, ಸಣ್ಣ ಹೆಣ್ಮಕ್ಕಳನ್ನು ಅವನ ಸೈನ್ಯದವರು ‘ಇಟ್ಟುಕೊಂಡರು ಅಥವಾ ಮದುವೆ ಮಾಡಿಕೊಂಡರು. ಪ್ರತಿರೋಧ ತೋರಿದವರ ಮೂಗು, ಕಿವಿ, ಮೇಲ್ದುಟಿ ಕತ್ತರಿಸಲಾಯಿತು. ಫಾದರ್ ಮಿರಾಂಡಾ ಸೇರಿದಂತೆ ೨೧ ಜನ ಪಾದ್ರಿಗಳನ್ನು ವಾಪಸು ಬಂದರೆ ನೇಣಿಗೇರಿಸುವುದಾಗಿ ಹೇಳಿ, ೨ ಲಕ್ಷ ರೂ. ದಂಡ ವಿಧಿಸಿ ಗೋವಾಕ್ಕೆ ಗಡೀಪಾರು ಮಾಡಲಾಯಿತು. ಮಂಗಳೂರಿನ ೨೭ ಚರ್ಚುಗಳನ್ನು ನೆಲಸಮ ಮಾಡಲಾಯಿತು. ಸ್ಕರಿ ನಂತರ ನೆನಪಿಸಿಕೊಳ್ಳುವಂತೆ ಬ್ರಿಟಿಷ್ ಸೈನಿಕರ ಮೇಲೆ ಅವನ ಸೇಡು ವಿಶೇಷವಾಗಿರುತ್ತಿತ್ತು. ಬಲವಂತದ ಸುನ್ನತಿಗೊಳಪಡಿಸಲಾಗುತ್ತಿತ್ತು. ಅವರು ಹೆಂಗಸರಂತೆ ಚೋಲಿ ಧರಿಸಿ ಆಸ್ಥಾನದಲ್ಲಿ ನರ್ತನ ಮಾಡಬೇಕಿತ್ತು. ಅವನು ಬಿಡುಗಡೆಯಾದಾಗ ಕುರ್ಚಿ ಮೇಲೆ ಕೂರುವುದು, ನೈಫ್ ಪೋರ‍್ಕ್ ಬಳಸುವುದನ್ನೇ ಮರೆತುಬಿಟ್ಟಿದ್ದೆ ಎಂದು ಹೇಳಿಕೊಂಡಿದ್ದಾನೆ.

ಮಲಬಾರಿನ, ತಂಜಾವೂರಿನವರ, ಕೊಡಗಿನವರ ಸಾಂಸ್ಕೃತಿಕ ನೆನಪುಗಳಲ್ಲಿ ಟಿಪ್ಪುವಿನ ಕೆಲವು ಉದಾತ್ತ ನಡವಳಿಕೆಗಳ ಉಲ್ಲೇಖವಿದ್ದರೂ, ಅವನ ಕ್ರೌರ್ಯದ ಕತೆಗಳ ಸಂಖ್ಯೆ ದೊಡ್ಡದಿದೆ. ೧೭೬೩ರಲ್ಲಿ ಹೈದರಾಲಿ ಮೊದಲ ಬಾರಿಗೆ ಮಲಬಾರನ್ನು ಆಕ್ರಮಿಸಿದಾಗ ಸಣ್ಣಪುಟ್ಟ ದೊರೆಗಳು ತಿರುವಾಂಕೂರಿಗೆ ಓಡಿಹೋದರು. ಕಲ್ಲಿಕೋಟೆಯ ಜಾಮೊರಿನ್ ದೊರೆ ತನ್ನ ಅರಮನೆಗೆ ಬೆಂಕಿ ಹಚ್ಚಿ ತಾನು ಆತ್ಮಹತ್ಯೆ ಮಾಡಿಕೊಂಡ. ನಾಯರ್ ಸಮುದಾಯವು ಟಿಪ್ಪುವಿನ ಯುದ್ಧ-ತಂತ್ರಗಳಲ್ಲಿ ಇನ್ನಿಲ್ಲದ ಹೊಡೆತ ತಿಂದಿತು. ಇತಿಹಾಸಕಾರರ ಪ್ರಕಾರ ಕೇರಳದ ಎಲ್ಲ ಸೈನಿಕರು ಹೆಚ್ಚುಕಮ್ಮಿ ನಾಯರ್ ಸಮುದಾಯದವರು. ಅವರ ಜನಸಂಖ್ಯೆ ಅಂದಿನ ಕೇರಳದ ಜನಸಂಖ್ಯೆಯ ಐದನೇ ಒಂದು ಭಾಗ. ಮಲಬಾರನ್ನು ಮೈಸೂರಿನ ಸೇನೆ ಸುತ್ತುವರೆದಾಗ ಆರು ರಾಜವಂಶಗಳು ಮತ್ತು ಬಹಳಷ್ಟು ನಾಯರ್ ಕುಟುಂಬಗಳು ತಿರುವಾಂಕೂರಿನ ‘ಧರ್ಮರಾಜನ ಆಶ್ರಯಕ್ಕೆ ಓಡಿಹೋದವು. ಧರ್ಮರಾಜನ ಪ್ರಬಲ ಕೋಟೆ ತಮ್ಮನ್ನು ಕಾಪಾಡೀತೆಂಬ ನಂಬಿಕೆ ಅವರದು. ಆದರೆ ೧೭೮೯ರ ಯುದ್ಧದಲ್ಲಿ ಆ ಕೋಟೆ ನುಚ್ಚುನೂರಾದಾಗ ಬಹಳಷ್ಟು ನಾಯರ್‌ಗಳು ಕಾಡಿಗೆ ಓಡಿಹೋದರು. ಕೆಲವರು ಸೈನಿಕರ ಕೈಗೆ ಸಿಕ್ಕು ಇಸ್ಲಾಮಿಗೆ ಮತಾಂತರಗೊಂಡರು. ಭೂಮಿ, ಶಸ್ತ್ರಾಸ್ತ್ರ, ಹಕ್ಕು ಕಳೆದುಕೊಂಡ ಕಾಡುಪಾಲಾದ ನಾಯರ್‌ಗಳು ಸುಮ್ಮನಿರಲಿಲ್ಲ. ಪದೇಪದೇ ಒಗ್ಗೂಡಿ ದಾಳಿ ನಡೆಸುತ್ತಿದ್ದರು. ಇದನ್ನು ಕೆ. ಎಂ. ಫಣಿಕ್ಕರ್ ಸ್ವಾತಂತ್ರ್ಯ ಹೋರಾಟ ಎಂದು ಕರೆಯುತ್ತಾರೆ. ಆಗ ಮಲಬಾರಿನಲ್ಲಿದ್ದ ಬಹುವಿವಾಹ ಮತ್ತು ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಟಿಪ್ಪು ನಿರ್ಬಂಧಿಸಿದ. ಒಂದಕ್ಕಿಂತ ಹೆಚ್ಚು ಮದುವೆಯಾದರೆ ಹೆಂಗಸರನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಗೊಳಿಸಲಾಗುವುದು ಎಂಬ ಬಹಿರಂಗ ಪ್ರಕಟಣೆ ಕೊಟ್ಟ. ೨೫ ವರ್ಷ ಇದು ಹಾಗೇ ಮುಂದುವರೆಯಿತು. ಬೇಕಲಕೋಟೆಯ ಗವರ್ನರ್ ಬುದ್ರೂಜ್ ಖಾನನಿಗೆ ಬರೆದ ಪತ್ರದಲ್ಲಿ ಟಿಪ್ಪು, ೪ ಲಕ್ಷ ಹಿಂದೂಗಳನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಿಸಲಾಗಿದ್ದು ತಿರುವಾಂಕೂರಿನ ರಾಮನ್ ನಾಯರನನ್ನೂ, ಅವನ ಪ್ರಜೆಗಳನ್ನೂ ಮತಾಂತರಗೊಳಿಸುವ ಕನಸೇ ರೋಮಾಂಚಕಾರಿ ಎಂದು ಹೇಳಿಕೊಂಡಿದ್ದಾನೆ.

ಆದರೆ ಟಿಪ್ಪುವಷ್ಟೇ ಅಲ್ಲ, ಆ ಕಾಲದ ಎಲ್ಲ ರಾಜರೂ ತಂತಮ್ಮ ಧರ್ಮ ರಕ್ಷಿಸುವ. ಧರ್ಮ ಕಾರ್ಯಗಳ ಉತ್ಪ್ರೇಕ್ಷಿಸಿ ಹೇಳುವ ಪರಿಪಾಠ ಇಟ್ಟುಕೊಂಡಿದ್ದರು. ಟಿಪ್ಪುವಿನಿಂದ ತಮ್ಮನ್ನು ಕಾಪಾಡುವನೆಂದು ಜನ ನಂಬಿದ ‘ಧರ್ಮರಾಜ - ಆಧುನಿಕ ತಿರುವಾಂಕೂರು ಜನಕ ಮಾರ್ತಾಂಡ ವರ್ಮನಾದರೂ ಎಂಥವನಾಗಿದ್ದ? ಆತ ಡಚ್ ವಸಾಹತುಶಾಹಿಯ ಅವನತಿಗೆ ನಿರ್ಣಾಯಕ ಕೊನೆ ಹಾಡಿದ ಭಾರತದ ರಾಜನೇನೋ ಹೌದು. ಆದರೆ ಅದಕ್ಕೂ ಮುನ್ನ ಪಟ್ಟವೇರಲು ಸೋದರ ಸಂಬಂಧಿಗಳ ಕಗ್ಗೊಲೆ ನಡೆಸಿ, ಅವರ ಹೆಂಡಿರನ್ನು ಮೀನುಗಾರರಿಗೆ ‘ಇಟ್ಟುಕೊಳ್ಳಲು ಕೊಟ್ಟು; ಅವರ ಅರಮನೆಗಳ ನಾಶಮಾಡಿ, ಅಲ್ಲಿ ಗುಂಡಿ ತೋಡಿಸಿ ಕೆರೆಕಟ್ಟೆ ಕಟ್ಟಿಸಿದ್ದ!

ಮಲಬಾರಿನ ಜನ ಮಾರ್ತಾಂಡವರ್ಮನ ಬೆಂಕಿಯಿಂದ ಮೈಸೂರಿನ ಟಿಪ್ಪು ಬಾಣಲೆಗೆ ಬಿದ್ದರು. ಇವರಲ್ಲಿ ಯಾರ ನಡೆ ಜನಪರ, ಯಾರ ನಡೆ ಜನವಿರೋಧಿ ಎಂದು ಈ ಕಾಲದಲ್ಲಿ ನಿಂತ ನಾವು ಹೇಳುವುದು?

ಕೊಡಗನ್ನು ವಶಪಡಿಸಿಕೊಳ್ಳಲು ಹೈದರಾಲಿ ಮತ್ತು ಟಿಪ್ಪು ಪದೇಪದೇ ಆಕ್ರಮಣ ನಡೆಸಿದರು. ಅದಕ್ಕೆ ಮುಖ್ಯ ಕಾರಣ ಕೊಡಗು ವಶವಾದರೆ ಮಂಗಳೂರು ಬಂದರಿನ ಒಡೆತನ ಸಿಗುವುದೆನ್ನುವುದು. ಆದರೆ ಸ್ವಾಭಿಮಾನಿ ಮತ್ತು ಸ್ವಾತಂತ್ರ್ಯಪ್ರೇಮಿ ಕೊಡವರು ಎಂದೂ ಮಣಿಯಲಿಲ್ಲ. ತಮ್ಮ ಗುಡ್ಡಬೆಟ್ಟಗಳ ನಾಡಿನಲ್ಲಿ ಗೆರಿಲ್ಲಾ ಯುದ್ಧತಂತ್ರಗಳ ಮೂಲಕ ಅವನ ಸೇನೆಯನ್ನು ಸದಾ ಮಣಿಸಿದರು. ಹೀಗಿರುತ್ತ ಸ್ನೇಹಹಸ್ತ ಚಾಚಿ ಟಿಪ್ಪು ಮಡಿಕೇರಿಗೆ ಹೋದ. ಈ ಸಮ್ಮಿಲನಕ್ಕೆ ಭಾರೀ ಸಂಖ್ಯೆಯ ಕೊಡವರು ರಾಜಧಾನಿಯಲ್ಲಿ ಸೇರಿದರು. ಆಗ ಇದ್ದಕ್ಕಿದ್ದಂತೆ ಅವರ ಮೇಲೆ ಕರ್ನೂಲಿನ ನವಾಬ ಸೇನೆಯೊಂದಿಗೆ ಎರಗಿದ. ಅವ ಟಿಪ್ಪುವಿನ ಗೆಳೆಯ, ಅದು ಟಿಪ್ಪುವಿನ ತಂತ್ರವೇ ಆಗಿತ್ತು. ೫೦೦ ಕೊಡವರು ಅಲ್ಲೆ ಸತ್ತರು. ೪೦,೦೦೦ ಜನ ಕಾಡಿಗೆ ಓಡಿದರು. ರಾಜನೊಡನೆ ಸಾವಿರಾರು ಜನರನ್ನು ಬಂಧಿಸಿ ಶ್ರೀರಂಗಪಟ್ಟಣಕ್ಕೊಯ್ಯಲಾಯಿತು. ಹಿಂಸೆ, ಸಾವು, ಬಲವಂತದ ಮತಾಂತರ.. ಈ ಸಂಖ್ಯೆ ಅವನ ಆಸ್ಥಾನ ಇತಿಹಾಸಕಾರರದೂ ಸೇರಿದಂತೆ ೭೦೦೦೦-೮೫೦೦೦ ನಡುವೆ ತೂಗಾಡುತ್ತದೆ. ಈ ಸಂಖ್ಯೆಗಳಲ್ಲಿ ಯಾವುದು ನಿಜ? ಯಾವುದು ಉತ್ಪ್ರೇಕ್ಷೆ? ಈ ದಾಖಲೆಗಳು ನಂಬಲರ್ಹವೆ?

ಒಟ್ಟಾರೆ ಚರಿತ್ರೆಯೊಂದು ಕಣಜದ ಗೂಡು. ಕೈಹಾಕಿದರೆ ಅವು ಕುಟುಕಿಯಾವೇ ಹೊರತು ಒಂದು ಹನಿ ಮಧುವೂ ದೊರೆಯಲಾರದು.

ರಾಜರ ಕಿಂಗ್‌ಸೈಜ್ ಅಹಮು: ಬಲಿಪಶು ಯಾರು?


ಇದು ನಾಣ್ಯದ ಎರಡು ಮುಖಗಳ ಅವಲೋಕನ. ಬಹುಶಃ ಚರಿತ್ರೆಯ ಯಾವ ಪುಟ ತೆರೆದರೂ ಅದಕ್ಕೆ ಎರಡೆರೆಡು ಅರ್ಥ, ಸಾಧ್ಯತೆಗಳು ಇದ್ದೇ ಇವೆ. ಮಧ್ಯಯುಗದಲ್ಲಿ ಈ ನೆಲವನ್ನಾಳಿದ ಛಪ್ಪನ್ನಾರು ನೃಪತಿಗಳಲ್ಲಿ ಯಾವುದೇ ರಾಜನ ಚರಿತ್ರೆ ತೆಗೆಯಿರಿ, ಅವರು ತಂತಮ್ಮ ಮನೆತನದವರನ್ನು/ರಾಜ್ಯದವರನ್ನು ಕೊಲ್ಲಿಸಿ ಪಟ್ಟಕ್ಕೆ ಬಂದಿದ್ದಾರೆ. ಹೆಂಗಸರ ಮೇಲೆ, ಅದರಲ್ಲೂ ಶತ್ರು ರಾಜ್ಯದ ಹೆಂಗಸರ ಮೇಲೆ ಇನ್ನಿಲ್ಲದಂತೆ ದೌರ್ಜನ್ಯವೆಸಗಿದ್ದಾರೆ. ವಿರೋಧಿ ರಾಜನ ಧರ್ಮ ಮತ್ತು ರಾಜಸ್ವದ ಕುರುಹುಗಳನ್ನು ನಿರ್ದಯವಾಗಿ ನಾಶ ಮಾಡಿದ್ದಾರೆ. ಎಲ್ಲೋ ಅಪರೂಪಕ್ಕೊಬ್ಬ ಛತ್ರಪತಿ ಶಾಹೂ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂಥವರನ್ನು ಬಿಟ್ಟರೆ ಎಲ್ಲ ರಾಷ್ಟ್ರೀಯತೆಗಳು ತಮ್ಮ ‘ಕುಲ ತಿಲಕರೆಂದು ಆರಾಧಿಸುವ ರಾಜರುಗಳು ಲೆಕ್ಕವಿಲ್ಲದಷ್ಟು ಹೆಂಗಸರು ವಿಧವೆಯರಾಗಲು; ಸತಿ ಹೋಗಲು ಕಾರಣರಾಗಿದ್ದಾರೆ. ರಾಜರ ದೇಶಪ್ರೇಮವೆಂಬ ವೈಯಕ್ತಿಕ ಪ್ರತಿಷ್ಠೆ ಕಾಯಲು ಯುದ್ಧ ಮಾಡಿ ಇನ್ನೆಷ್ಟೊ ಜನ ಅಂಗವಿಕಲರಾಗಿ, ಮತ್ತಿನ್ನೆಷ್ಟೊ ಬಡ, ರೈತಾಪಿ ಜನರು ಯುದ್ಧದ ಖರ್ಚು ತೆರಲು ಅರೆಹೊಟ್ಟೆಯಲ್ಲಿ ಸತ್ತಿದ್ದಾರೆ. ರಾಜರು ಕೊಟ್ಟ ಕೋಟಿಗಟ್ಟಲೆ ರೂಪಾಯಿ ದಂಡ, ಯುದ್ಧಖರ್ಚು ಎಲ್ಲಿಂದ ಬಂತು? ಅವೆಲ್ಲ ತನ್ನ ರಾಜ್ಯದ ಅಥವಾ ಗೆದ್ದ ರಾಜ್ಯದ ಬಡರೈತರನ್ನು, ಜನಸಾಮಾನ್ಯರನ್ನು ಸುಲಿದೇ ಬಂತು.

ಹೀಗೆ ರಾಜರುಗಳ ಕಿಂಗ್ ಸೈಜ್ ಅಹಮನ್ನು ಪೋಷಿಸಲು ಜನಸಾಮಾನ್ಯ ತೆತ್ತ ಬೆಲೆ ಗಮನಿಸಿದರೆ; ರಾಜತ್ವ, ಶೌರ್ಯ ಮತ್ತು ರಾಷ್ಟ್ರೀಯತೆಯ ಆಚೆಗೆ ಗಮನ ಹರಿಸಿದರೆ ಕೆಡುಕಿಲ್ಲದೆ ಯಾವ ರಾಜನ ಇತಿಹಾಸವೂ ಬಿಚ್ಚಿಕೊಳ್ಳಲು ಸಾಧ್ಯವಿಲ್ಲ. ಬಹುಶಃ ರಾಜ್ಯ, ಪಟ್ಟ, ಸಿಂಹಾಸನ ಗಳಿಸಿ ಉಳಿಸಿಕೊಳ್ಳಲು ಆ ಕಾಲದ ರಾಜರಿಗೆ ಅದು ಅವಶ್ಯವಾಗಿದ್ದಿರಲೂಬಹುದು. ಏಕೆಂದರೆ ಆಗಿನ್ನೂ ಮಾರ್ಕ್ಸ್, ಲಿಂಕನ್, ಗಾಂಧಿ, ಅಂಬೇಡ್ಕರ್, ಲೋಹಿಯಾ ಹುಟ್ಟಿರಲಿಲ್ಲ. ಆಗಿನ್ನೂ ಪ್ರಜಾಪ್ರಭುತ್ವದ ಕನಸು ಯಾರಿಗೂ ಬಿದ್ದಿರಲಿಲ್ಲ. ಅದರಲ್ಲೂ ಬುದ್ಧನ ಮರೆತ ಭಾರತವು ಆಂತರಿಕ ಯುದ್ಧಗಳಲ್ಲಿ ಹರಿಸಿದ ರಕ್ತಹೊಳೆ ಅರಬಿ ಸಾಗರವನ್ನೂ, ಬಂಗಾಳ ಕೊಲ್ಲಿಯನ್ನೂ, ಹಿಂದೂ ಸಾಗರವನ್ನೂ ಕೆಂಪಾಗಿಸಿತ್ತು.

ಇರಲಿ, ಅವರೆಲ್ಲ ಹಾಗಿದ್ದರು, ಆಗಿಹೋಯಿತು.

ಆದರೆ ಕರ್ನಾಟಕದ ಹಿಂದೂ/ಕ್ರೈಸ್ತ/ಮುಸ್ಲಿಂ ಧಾರ್ಮಿಕ ಸಮುದಾಯಗಳ ನೆನಪುಗಳಲ್ಲಿ ತದ್ವಿರುದ್ಧ ಚಿತ್ರಣ ಹೊಂದಿದ ಎಂದೋ ಆಳಿದ ರಾಜ ಟಿಪ್ಪುವನ್ನು ಇವತ್ತು ಮುಸ್ಲಿಮರಿಗೆ ಐಡೆಂಟಿಟಿ ಕೊಡುವ ನಾಯಕನಂತೆ ಬಿಂಬಿಸುವುದು ಎಷ್ಟು ಸರಿ?

ಚರಿತ್ರೆಯಲ್ಲಿರಬೇಕಾದವರನ್ನು ಅಲ್ಲಿ ಹಾಗೇ ಬಿಡದೆ ಅವರನ್ನು ಎತ್ತಿ ತಂದು ಧರ್ಮಾಂಧನೋ, ಧರ್ಮ ಸಹಿಷ್ಣುವೋ; ದೇಶಭಕ್ತನೋ ದೇಶದ್ರೋಹಿಯೋ ಎಂದು ಚರ್ಚಿಸುವುದು; ಚರ್ಚೆ ಹುಟ್ಟುಹಾಕುವುದು ಅಳಿದ ರಾಜನಿಗೂ ಶೋಭೆಯಲ್ಲ. ಪ್ರಜಾಪ್ರಭುತ್ವದ ಸರ್ಕಾರಕ್ಕೆ ಖಂಡಿತಾ ಶೋಭೆಯಲ್ಲ. ಟಿಪ್ಪುವಿಗೆ ಹಜರತ್ ಎಂದು ಸಂಬೋಧಿಸಿ ಜಯಂತಿ ಆಚರಿಸುವ ಸರ್ಕಾರದ ನಡೆ ಇತಿಹಾಸವನ್ನು ಕೋಮುವಾದೀಕರಣಗೊಳಿಸಲು ಸಹಾಯಮಾಡುವುದಷ್ಟೇ ಅಲ್ಲ, ವಸ್ತುನಿಷ್ಠವಾಗಿ ಇತಿಹಾಸವನ್ನು ತಿಳಿಯದಂತೆಯೂ ಮಾಡುತ್ತದೆ.

ಸಂಘಪರಿವಾರದ ಸಂಘಟನೆ, ಪಕ್ಷಗಳಿಗೆ ಮುಸಲ್ಮಾನರು ಎಂದರೆ ಅಬ್ದುಲ್ ಕಲಾಮರಂಥ ರುದ್ರವೀಣೆ ಬಾರಿಸುವ, ಸಂಸ್ಕೃತ ಕಲಿತು ವೇದ ಓದುವ, ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ ಗೋವುಗಳು ಬೇಕು. ಅದೇ ಸೆಕ್ಯುಲರ್ ಕಾಂಗ್ರೆಸ್ಸಿಗೆ ಸಂಘಪರಿವಾರವು ಖಂಡತುಂಡ ವಿರೋಧಿಸುವ ಟಿಪ್ಪುವಿನಂಥ ರಾಜನೇ ಏಕೆ ಬೇಕು? ಉಳಿದೆಲ್ಲ ಜಾತಿ, ಸಮುದಾಯಗಳಿಗೆ ವಾಲ್ಮೀಕಿ, ಕನಕ, ನಾರಾಯಣ ಗುರು, ಬಸವಣ್ಣನಂತಹ ಸಾಂಸ್ಕೃತಿಕ ಅಥವಾ ಸಮಾಜ ಸುಧಾರಣೆಗೆ ಶ್ರಮಿಸಿದ ಸುಧಾರಣಾವಾದಿ ನಾಯಕರಿದ್ದರೆ ಮುಸ್ಲಿಮರಿಗೆ ಮಾತ್ರ ಅಳಿದ ರಾಜನೊಬ್ಬನನ್ನು ಸಮುದಾಯದ ನಾಯಕನೆಂಬಂತೆ ಬಿಂಬಿಸುವುದು ಏಕೆ? ಷಿಯಾಸುನ್ನಿ, ಹಿಂದೂಮುಸ್ಲಿಂ ಭಾವೈಕ್ಯಕ್ಕೆ ಶ್ರಮಿಸಿದ ಬಿಜಾಪುರದ ದೊರೆ; ಗುಲಬರ್ಗಾದ ಸೂಫಿ ಬಂದೇ ನವಾಜರ ಶಿಷ್ಯ; ಕವಿ, ಕಲಾವಿದ ಇಬ್ರಾಹಿಂ ಆದಿಲ್ ಶಾಹ ಇವತ್ತು ಯಾರಿಗೂ ನೆನಪಾಗುತ್ತಿಲ್ಲ ಏಕೆ? ಶಿಶುನಾಳ ಶರೀಫರಾಗಲೀ, ಮುಸ್ಲಿಮರಲ್ಲಿ ಆಧುನಿಕ ಶಿಕ್ಷಣಕ್ಕೆ ಶ್ರಮಿಸಿದ ಸರ್ ಸಯ್ಯದ್ ಅಹ್ಮದ್ ಖಾನ್ ಅವರಾಗಲೀ, ವರ್ತಮಾನಕ್ಕೆ ತಕ್ಕಂತೆ ಇಸ್ಲಾಮನ್ನು ಪ್ರಸ್ತುತಗೊಳಿಸಿದ ಅಸ್ಘರ್ ಅಲಿ ಇಂಜಿನಿಯರರಾಗಲೀ ಅಥವಾ ಈ ನಾಡಿನ ಉದ್ದಗಲ ಸೌಹಾರ್ದ ಬಾಳ್ವೆಗೆ ಶ್ರಮಿಸಿದ; ಇವತ್ತಿಗೂ ಅಳಿದುಳಿದ ಸೌಹಾರ್ದದ ನಿಜಕುರುಹುಗಳಾದ ದರ್ಗಾದ ಸಂತರಾಗಲೀ ಯಾರಿಗೂ ಬೇಕಾಗಿಲ್ಲ ಏಕೆ?

ಇನ್ನಾದರೂ ರಕ್ತ ಪಿಪಾಸುತನವೇ ಸಿಂಹಾಸನದ ಆಧಾರವಾಗಿದ್ದ ರಾಜ-ಗೌಡ-ನಾಯಕ-ಸುಲ್ತಾನ-ದೊರೆಗಳನ್ನು ನಮ್ಮ ವಿಮಾನ ನಿಲ್ದಾಣ, ಪಾರ್ಕು, ರೈಲ್ವೇಸ್ಟೇಷನ್ನು, ರಸ್ತೆಗಳಿಗೆ ಹೆಸರಾಗಿ ಇಡುವ, ರಾಜಾರಾಧನೆ ನಡೆಸುವ ಪರಿಪಾಠ ನಿಲಿಸಿ ಅವರವರ ಗೋರಿಗಳಲ್ಲಿ ಅವರು ಆರಾಮಾಗಿ ಮಲಗಲು ಬಿಡಬೇಕು. ಈ ನೆಲದ ಸಾಂಸ್ಕೃತಿಕ ಎಳೆಗಳ ಕಾಪಿಟ್ಟ, ಸೌಹಾರ್ದ ಕಾಪಾಡಿದ ಹೊಸಚಹರೆಗಳನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು.

ಇವತ್ತು ಮುಸ್ಲಿಂ ಧರ್ಮ ಮತ್ತು ಸಮುದಾಯ ಹಿಂದೆಂದಿಗಿಂತ ಒಳಸಂಕಷ್ಟವನ್ನೆದುರಿಸುತ್ತಿದೆ. ವಿಶ್ವದ ಅತಿ ಹೆಚ್ಚು ಸಿರಿವಂತರು ಹಾಗೂ ಅತಿ ಹೆಚ್ಚು ಬಡವರು ಇಸ್ಲಾಮಿನ ಅನುಯಾಯಿಗಳಾಗಿದ್ದಾರೆ. ಒಂದೆಡೆ ಬಂಡವಾಳದಿಂದ ಹರಿದು ಬರುವ ದುಡ್ಡು ಮೈಗೂಡಿಸುವ ಆಧುನಿಕತೆ; ಮತ್ತೊಂದೆಡೆ ಯಾವುದೂ ಬದಲಾಗಬಾರದೆನ್ನುವ ಗಾಢ ನಂಬಿಕೆಯ ಧರ್ಮ - ಈ ಎರಡರ ಹಗ್ಗಜಗ್ಗಾಟದಲ್ಲಿ ಕೊನೆಗು ಬಲಿಯಾಗುತ್ತಿರುವುದು ಯಾವುದು ಹಾಗೂ ಯಾರು ಎನ್ನುವುದರ ಬಗೆಗೆ ಅಂತಾರಾಷ್ಟ್ರೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಸ್ಲಿಂ ಸಮಾಜ ಚಿಂತಿಸಬೇಕಿದೆ. ಅದರಲ್ಲೂ ಬಡ, ಕೆಳವರ್ಗದವರೇ ಹೆಚ್ಚಿರುವ ಭಾರತದ ಮುಸ್ಲಿಮರು ಈ ದೇಶದಲ್ಲಿ ಧರ್ಮವನ್ನು ಎಷ್ಟು, ಹೇಗೆ ಇಟ್ಟುಕೊಳ್ಳಬೇಕೆಂದು ಯೋಚಿಸಬೇಕಿದೆ.

ಹೀಗಿರುತ್ತ ಕರ್ನಾಟಕದ ಮುಸ್ಲಿಮರಿಗೆ ಟಿಪ್ಪು ಜಯಂತಿ ಆಚರಿಸುವುದು ನೆಮ್ಮದಿಯ ಭಾವ, ಸುರಕ್ಷಿತ ಭಾವ ಮೂಡಿಸುವುದೆಂಬ ಭ್ರಮೆ ಸರ್ಕಾರ, ಸಮಾಜಕ್ಕೆ ಇದ್ದರೆ ಅದು ಆತ್ಮಘಾತುಕ ಭೋಳೇತನವಲ್ಲದೆ ಮತ್ತೇನಲ್ಲ. ಇನ್ನಾದರೂ ಪ್ರಜಾಪ್ರಭುತ್ವ ದೇಶದ ಸೆಕ್ಯುಲರ್ ಸರ್ಕಾರಗಳು ಇಸ್ಲಾಂ ಸೇರಿದಂತೆ ಎಲ್ಲ ಧರ್ಮಗಳು ಮತ್ತು ಅದರ ಅನುಯಾಯಿಗಳಿಗೆ ಧರ್ಮವನ್ನು ಚಲನಶೀಲಗೊಳಿಸುವ ಅವಕಾಶ ಮಾಡಿಕೊಡಬೇಕು. ಒಳವಿಮರ್ಶೆ ಇಲ್ಲದೇ ಇರುವ ಯಾವುದೇ ಸಾಂಸ್ಥಿಕ ವ್ಯವಸ್ಥೆಯೂ ಜಡ್ಡುಗಟ್ಟಿ ಹೋಗುತ್ತದೆ. ಅದೇ ಹಾದಿಯಲ್ಲಿ ಧರ್ಮಗಳು ನಡೆಯದಂತೆ ತಡೆಯಲು ದಿಟ್ಟ ದನಿಗಳು ಕೇಳಲು ಅವಕಾಶ ಮಾಡಿಕೊಡಬೇಕು. ಅದಕ್ಕೆ ಪೂರಕವಾಗಿ ಶಿಕ್ಷಣ, ಉದ್ಯೋಗಾವಕಾಶ, ಸಮಾಜದ ಆಗುಹೋಗುಗಳಲ್ಲಿ ಒಳಗೊಳ್ಳುವಿಕೆ ಮುಂತಾದ ನಡೆಗಳು ಸಮುದಾಯವನ್ನು ಸುರಕ್ಷಿತ, ಸುಸ್ಥಿರ ಬದುಕಿಗೆ ಕೊಂಡೊಯ್ಯಬಲ್ಲವೇ ಹೊರತು ಜಾತಿ/ಧರ್ಮಕ್ಕೊಂದು ಜಯಂತಿ ಆಚರಿಸುವಂಥ ಸಾಂಕೇತಿಕ ಕ್ರಿಯೆಗಳಿಂದಲ್ಲ ಎಂದು ಆಳುವವರಿಗೆ ತಿಳಿಸಿಹೇಳಬೇಕು.
      

Thursday, October 20, 2016

ಚಲನೆ


Image result for ಬಸೂ
Image result for birds

ಗಾಳಿ ಚಲಿಸುತ್ತದೆ
ಸೂರ್ಯನ ಕಿರಣ
ಚಂದ್ರನ ಬೆಳ್ದಿಂಗಳು
ಹಣತೆಯ ಬೆಳಕು
ಹೂವಿನ ಗಂಧ
ನದಿಯ ನೀರು
ಚಲಿಸುವ ಪಟ್ಟಿಯಲ್ಲಿ
ಇನ್ನು ಅದೆಷ್ಟೋ..

ಎಂದೋ ಆರಂಭವಾದ
ಚಲಿಸುವ ಚರಿತ್ರೆಯಲ್ಲಿ
ದಾರಿ ತಪ್ಪಿದಕ್ಷರಗಳಿಲ್ಲ
ನಡಿಗೆಯ ಲೆಕ್ಕ
ಕವಲುಗಳ ಆಯ್ಕೆ
ಸೀಮೆಕಲ್ಲಿನ ಅಂಕಿ
ತಪ್ಪುವುದೇನಿದ್ದರೂ
ಯಾರೊ ಮಾಡಿಟ್ಟ
ಹಾದಿಯಲಿ ನಡೆವ ಹೆಜ್ಜೆಗಷ್ಟೇ

ಪಾಪ ಪುಣ್ಯ
ಪವಿತ್ರ ಅಪವಿತ್ರ
ಲಕ್ಷ್ಮಣರೇಖೆಯೊಳಗಷ್ಟೇ

ಗುಟುಕಿಗಾಗಿ ಬಾಯ್ದೆರೆದ ಮರಿ
ಕನಸರಳಿಸಿ ಕಾಯುವ ಸಹಜೋಡಿ
ತೆರೆಯುತಿದೆ ಹಕ್ಕಿಗಮನದ ಹಾದಿ

ರೆಕ್ಕೆ ಬಿಚ್ಚಿದ ಹಕ್ಕಿ
ಎಂದೂ ದಿಕ್ಕು ತಪ್ಪುವುದಿಲ್ಲ
ಯಾರೋ ಮಾಡಿಟ್ಟ 
ಹಾದಿಯಲದು ಹಾರುವುದಿಲ್ಲ

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...