Friday, November 11, 2016

ಮೆಹಂದಿ ಹೂಗಳು ಕಾದಂಬರಿಯ ಮೊದಲ ಮಾತು : ಗಾಯಗೊಂಡ ಸಮಾಜದಲ್ಲಿ ನಿಂತು
Image result for ಬಸವರಾಜ ಹೂಗಾರ - ಬಸವರಾಜ ಹೂಗಾರನಿನ್ನೆ ಮೊನ್ನೆ ಜಾತಿಯ ಕಾರಣಕ್ಕಾಗಿ ಗುಡಿಸಿಲಿನಲ್ಲಿ ಆಟವಾಡುತ್ತಿದ್ದ ಇಬ್ಬರು ಎಳೆಯ ಮಕ್ಕಳನ್ನು ಬೆಂಕಿ ಹಚ್ಟಿ ಸುಡಲಾಯಿತು. ಇವತ್ತು ಮತ್ತು ನಾಳೆ ನಮ್ಮೂರಿನಲ್ಲಿ ಹಬ್ಬ. ಪ್ರೀತಿಯ ಹಬ್ಬಗಳು ಇಂದು ಹಬ್ಬಗಳಾಗಿ ಉಳಿದಿಲ್ಲ. ಯಾವುದಾದರೂ ಹಬ್ಫ ಬಂದರೆ ಗಲಭೆ ಪ್ರಾರಂಭವಾದೀತೆಂದು ಭಯವಾಗುತ್ತದೆ. ತನ್ನ ಜಾತಿಯವನಲ್ಲದವನನ್ನು, ತನ್ನ ಧರ್ಮದವನಲ್ಲದವನನ್ನು ಹೀಗಳೆಯುವ ಹೀನ ಮನಸ್ಥಿತಿ ಬೆಳೆಯುತ್ತಿದೆ. ಸುಡುವ ಮಕ್ಕಳು, ಸುಟ್ಟ ಅಂಗಡಿಗಳು, ಸುಟ್ಟುಕೊಂಡ ಮನುಷ್ಯರು ನಮ್ಮನ್ನು ತಾಕುತ್ತಿಲ್ಲ ಎನ್ನುವುದೇ ಬಹುದೊಡ್ಠ ಸಂಕಟ. ಸಂಖ್ಯಾ ರಾಜಕಾರಣದ ಹೀನ ಸುಳಿ ಇದಕ್ಕೆಲ್ಲ ಮುಖ್ಯ ಕಾರಣ. ಇದು ಮನುಷ್ಯನ ಮನಸ್ಸನ್ನು ಹೊಲಸು ಮಾಡಿದೆ. ಗಲಭೆಯಾಯಿತೆಂದು ಆತಂಕವಾಯಿತು. ಗಲಭೆಯಲ್ಲಿ ಪಾಲ್ಗೊಂಡವರ ಪಟ್ಟಿ ನೋಡಿದೆ. ಅದರಲ್ಲಿ ನನ್ನ ಮಕ್ಕಳ ಹೆಸರಿತ್ತು.  ಸುಡುವ ಬೆಂಕಿಯಲಿ ಚೀರಾಡುತ್ತಲೇ ಪ್ರಾಣಬಿಟ್ಟ ಮಕ್ಕಳ ಸಾವಿನಲಿ, ಕೋಮುಗಲಭೆಯಲಿ ನೊಂದ ಬಡ ಜೀವಗಳ ಮೇಲೆ ನಡೆದ ದೌರ್ಜನ್ಯದಲಿ ನಾನೂ ಒಬ್ಬ ಪಾಲುದಾರ. ಯಾಕೆಂದರೆ ನಾನು ಈ ಸಮಾಜದಲ್ಲಿ ಬದುಕುತ್ತಿದ್ದೇನೆ. ಜವಾಬ್ದಾರಿ ಹೀನ ಸಮಾಜ ಬಲಿಷ್ಠ ರಾಜಕಾರಣವಾಗಿ ಬೆಳೆಯುತ್ತಿದೆ. ನಾನು ಅನಾಥನಾಗಿದ್ದೇನೆ. ನನ್ನ ಬರಹವೂ ಕೂಡಾ.

              ಒದು ಕಡೆ ಜಾತಿ ಇನ್ನೊಂದು ಕಡೆ ಧರ್ಮ ನನ್ನ ಮನೆ ಬಾಗಿಲಿಗೆ ಬಂದು ನಿಂತು ಬಿಟ್ಟಿವೆ. ನಾನು ನಾಳೆ ಬಾ ಎಂದು ಹೇಳುವಂತಿಲ್ಲ. ಯಾಕೆಂದರೆ ನಾನೂ ಅದರ ಭಾಗವಾಗಿದ್ದೇನೆ. ಈ ಭಾಗವಾಗಿಯೇ ಅನುಮಾನ ಬೆಳೆಯುತ್ತಿದೆ. ಅನುಮಾನ ಎನ್ನುವುದೇ ಒಂದು ದೊಡ್ಡ ದ್ರೋಹ. ಈ ವಿದ್ರೋಹಿ ಚಟುವಟಿಕೆಯಲಿ ಪ್ರತಿದಿನ ನಾನು ಪಾಲ್ಗೊಳ್ಳುತ್ತೇನೆ. ನಾವೆಲ್ಲ ಒಂದೇ ಎನ್ನುವುದರ ಒಳಗಡೆಯೇ ಇನ್ನೊಬ್ಬರು ಬೇರೆ ಎನ್ನುವ ಅರ್ಥವಿದೆ. ಜಾತಿ ವ್ಯವಸ್ಥೆಯ ಬೇರುಗಳು ಭಾರತದ ಬೇರೆ ಬೇರೆ ಭಾಗಗಳಲ್ಲಿ ಇರುವಂತೆ ಕರ್ನಾಟಕದಲ್ಲಿಯೂ ಅಷ್ಟೇ ಪ್ರಬಲವಾಗಿವೆ. ಆದರೆ ಧರ್ಮದ ವಿಷಯಕ್ಕೆ ಬಂದಾಗ ಕರ್ನಾಟಕ ಅದರಲ್ಲೂ ಉತ್ತರ ಕರ್ನಾಟಕ ಸೌಹಾರ್ದ ಪರಂಪರೆಯಲ್ಲಿ ಮುಂದಿದೆ. ಕೂಡು ಸಂಸ್ಕೃತಿ ಇಲ್ಲಿನ ಹಲವಾರು ಹಳ್ಳಿಗಳ ಬದುಕಿನ ಜೀವಾಳವಾಗಿದೆ.  ಇತ್ತೀಚಿನ ವರ್ಷಗಳಲ್ಲಿ ಇದು ಶಿಥಿಲಗೊಳ್ಳುತ್ತಿರುವುದು ಅಥವಾ ಶಿಥಿಲಗೊಂಡಿರುವುದು ಶ್ರೀಮಂತ ಪರಂಪರೆಯೊಂದು ನಾಶವಾಗಿ ಹೋದಹಾಗೆ ನಮಗೆ ಕಾಣುತ್ತದೆ.

                ಪಠ್ಯದ ಮುಖಾಂತರ ಇವುಗಳನ್ನು ಓದುವುದು ನಮ್ಮ ಹುಡುಗರಿಗೆ ಸಾಧ್ಯವಿಲ್ಲ. ಇದನ್ನು ಜೀವನ ಕ್ರಮದ ಮುಖಾಂತರವೇ ಕಲಿಯಬೇಕು. ಇಲ್ಲವೆ ಪಠ್ಯೇತರ ಓದಿನಿಂದ ತಿಳಿಯಬೇಕು. ಈ ಯಾವ ಹಾದಿಯೂ ನಮ್ಮ ಶಿಕ್ಷಣ ಕ್ರಮದಲ್ಲಿ ಇಲ್ಲ. ಇದೊಂದು ಅನಿವಾರ್ಯ ಪಠ್ಯವಾಗಿ ನಮ್ಮ ಶಿಕ್ಷಣ ಕ್ರಮಕ್ಕೆ ಕಾಣಲೇ ಇಲ್ಲ. ಈ ಜೀವನ ಕ್ರಮವನ್ನು ನಾವು ಪಠ್ಯವಾಗಿ ಬೆಳೆಸಲಿಲ್ಲ.  ವಿದ್ವಾಂಸರಾದ ಡಾ. ರಹಮತ್ ತರೀಕೆರೆಯವರು ಮಾತ್ರ ಇಂಥ ಕೂಡು ಸಂಸ್ಕೃತಿಯನ್ನು ಬೇರೆ ಬೇರೆ ನೆಲೆಗಳಲ್ಲಿ ಸಂಶೋಧಿಸಿ ಇದು ನಮ್ಮ ನಿಜವಾದ ಚರಿತ್ರೆ ಅಂತಾ ತೋರಿಸಿಕೊಟ್ಟರು. ಕೆದಕಿದಷ್ಟೂ ಬಹುಮೌಲ್ಯ ಹೇಳುವ ಈ ಪರಂಪರೆಯ ಆನಂದ ಅನುಭವಿಸುವವನಿಗೆ ಮಾತ್ರ ಗೊತ್ತು. ಕಣ್ಣು ರೆಪ್ಪೆಗಳು ಸುಳ್ಳು ಹೇಳುವುದಿಲ್ಲ. ಅವು ಪ್ರೀತಿಗಾಗಿ ಅಂಗಲಾಚಿವೆ. ವಿದ್ರೊಹದ ನಾಟಕ ಅನುದಿನವೂ ನೆಡೆದಿದೆ.

            ಗೆಳೆಯ ಬಿ ಶ್ರೀನಿವಾಸ ’ಮೆಹಂದಿ ಹೂ’ ಕಾದಂಬರಿಯ ಮೂಲಕ ಇಲ್ಲಿ ಸೌಹಾರ್ದ ಪರಂಪರೆಯ ಮೌಲ್ಯ ಹಾಗೂ ಅದರ ವಿಘಟನೆಯನ್ನು ಹೇಳ ಹೊರಟಿದ್ದಾರೆ. ಈಗಾಗಲೇ ಕಾವ್ಯ, ಕಥೆ ಬರೆದಿರುವ ಶ್ರೀನಿವಾಸರದು ಇದು ವೊದಲ ಕಾದಂಬರಿ. ಆಶಯದ ದೃಷ್ಟಿಯಿಂದ ಇದು ಜವಾಬ್ದಾರಿಯುತ ಕೆಲಸವೂ ಹೌದು. ಇದು ಲೇಖಕರ ಸಾಮಾಜಿಕ ಹೊಣೆಗಾರಿಕೆಯನ್ನು ಎತ್ತಿ ತೋರಿಸುತ್ತದೆ. ಮತೀಯವಾದ ವಿಜ್ರಂಬಿಸುತ್ತಿರುವ ಇಂಥ ಸಂದರ್ಭದಲ್ಲಿ ’ಮೆಹಂದಿ ಹೂ’ ಕಾದಂಬರಿ ಹೆಚ್ಚು ಪ್ರಸ್ತುತ ಎನ್ನುವುದು ನನ್ನ ಭಾವನೆ. ಇಂಥ ವಸ್ತುವನ್ನು ಕಾದಂಬರಿಗೆ ಆಯ್ಕೆ ಮಾಡಿಕೊಳ್ಳುವುದು ಮಡಿವಂತಿಕೆಯಾಗಿದೆ. ಬರಹಗಾರನನ್ನು ಪಿಕ್ಸ್ ಮಾಡಿಬಿಡುವ ಮನೋಭಾವ ಬೆಳೆಯುತ್ತಿದೆ. ಆದರೆ ಹೇಳಬೇಕಾದದ್ದನ್ನು ನಾವು ಹೇಳಲೇ ಬೇಕಾಗಿದೆ. ಒಂದು ಅಸಹನೀಯ ಮನೋಭಾವ ಬೆಳೆಯುತ್ತಿರುವ ಕಾಲಘಟ್ಟದಲ್ಲಿ ಬಹು ಸಂಸ್ಕೃತಿಯನ್ನು ಕಟ್ಟಿಕೊಡುವ ಜರೂರತ್ತನ್ನೂ ಕಾದಂಬರಿ ನಿರೂಪಿಸುತ್ತದೆ.

         ಸೌಹಾರ್ದತೆ ಕುರಿತು ಮಾತನಾಡುವುದೆಂದರೆ ಅದು ದೇಶಭಕ್ತಿಯ ಕುರಿತೇ ಮಾತನಾಡಿದ ಹಾಗೆ. ಶರೀಫ ಮತ್ತು ಬಸವ ಹುಟ್ಟಿದ ಈ ನೆಲದಲ್ಲಿ ಒಂದು ರೀತಿಯ ಆತಂಕ ಬೆಳೆಯುತ್ತಿರುವುದು ನೋವಿನ ಸಂಗತಿ. ’ಸಮಸ್ಯೆಗಳ ಕುರಿತು ಮಾತನಾಡುವುದಕ್ಕಿಂತಲೂ ಸೃಜನಶೀಲವಾಗಿ ಸಮಗ್ರತೆಯ ಕುರಿತು ಮಾತನಾಡಬೇಕು’ ಎನ್ನುವ ಮಾತನ್ನು ಇತ್ತೀಚಿಗೆ ವಿಮರ್ಶೆಕರೊಬ್ಬರು ಹೇಳಿದರು. ಇದೊಂದು ಗೋಣು ಹಾಕಿಸುವ ಕ್ರಮ. ಯಾಕೆಂದರೆ ನಮ್ಮ ಗೋಣುಗಳು ಸುಲಭವಾಗಿ ಅಳಗಾಡುತ್ತವೆ. ಯಾವುದರಿಂದ ನಾನು ಹೊರಗಿದ್ದೇನೆ. ನನ್ನಲ್ಲಿ ಒಂದು ಒಳಗೊಳ್ಳುವ ಕ್ರಮ ಇಲ್ಲದಿದ್ದರೆ ಇಂಥ ವಿಮರ್ಶೆಗಳು ಹುಟ್ಟಿಕೊಳ್ಳುತ್ತವೆ. ಒಳಗೊಳ್ಳುವ ಕ್ರಮವಿಲ್ಲದೆ ಸಮಗ್ರತೆ ಸಾಧ್ಯವಿಲ್ಲ. ಮಿತಿಗಳನ್ನು ಸಮರ್ಥಿಸುವ ದಾರಿಯಲ್ಲಿ ನಾವು ಇಂಥ ಚರಿತ್ರೆಗಳನ್ನು ನಿರಾಕರಣೆ ಮಾಡಿಕೊಂಡೇ ಬಂದಿದ್ದೇವೆ. ಇದೂ ಒಂದು ಅಸಹನೀಯ ಪರಂಪರೆ. ಈ ರೀತಿಯಾದ ಬೆಳವಣಿಗೆ ನಮ್ಮ ಕಣ್ಣೆದುರಿರುವಾಗ ನಮ್ಮ ಯುವ ತಲೆಮಾರು ಬರಹದ ಆಯ್ಕೆ ಕುರಿತು ಯೋಚಿಸಬೇಕು. ತಾನು ಬದುಕುವ ಸಮಾಜದಲ್ಲಿ ಆತಂಕಗಳು ಎದ್ದಾಗ ಲೇಖಕರಿಗೆ ಇರಬೇಕಾದ ಜವಾಬ್ದಾರಿಯನ್ನು ಕೂಡಾ ’ಮೆಹಂದಿ ಹೂ’ ಕಾದಂಬರಿ ಮೂಲಕ ಶ್ರೀನಿವಾಸ ಹೇಳಿದ್ದಾರೆ.

        ’ಮೆಹಂದಿ ಹೂ’ವಿನ ಎಲ್ಲ ಪಾತ್ರಗಳೂ ನಮ್ಮ ಊರಿನ ಪಾತ್ರಗಳೇ. ಈ ಕಾದಂಬರಿಯಲ್ಲಿ ಬರುವ ಶೇಕ್ಸಾಬು, ಕೌಸರಬಾನು, ಈರಕ್ಕ, ರಂಗಪ್ಪಣ್ಣ, ಶೇಕರಗೌಡ ನಮ್ಮ ನಡುವೆಯೇ ಇದ್ದಾರೆ.  ಶೇಕ್ಸಾಬು-ಶೇಕಣ್ಣ ಆಗೋದು ನಮ್ಮ ಪರಂಪರೆಯ ಭಾಗವೆ. ಹಳೆಯ ತಲೆಮಾರಿನ ಶೇಖರಗೌಡ ಇಲ್ಲಿ ಉದಾರವಾದಿಯಾಗಿದ್ದಾನೆ, ಶೇಖರಗೌಡನ ಮಗ ಮತೀಯವಾದಿಯಾಗಿ ಬೆಳೆಯುತ್ತಾನೆ. ಎಲ್ಲೊ ಒಂದು ಕಡೆ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣ ಸಾಮಾನ್ಯ ಮುಸ್ಲಿಂ ಕುಟುಂಬವನ್ನೂ ಅನುಮಾನದಿಂದ ನೋಡಲು ಕಾರಣವಾಗುತ್ತದೆ ಎನ್ನುವ ಸೂಕ್ಷ್ಮವನ್ನು ಕಾದಂಬರಿಯಲ್ಲಿ ಹೇಳಿದ್ದಾರೆ. ನಿರಾಕರಣೆ ಇವತ್ತು ಹಕ್ಕಾಗಿ ಬೆಳೆಯುತ್ತಿದೆ. ಸಾಬರು ಎನ್ನುವ ಶಬ್ದವನ್ನು ಆತಂಕವಾದಕ್ಕೆ ಸಮಾನವಾಗಿ ಬಳಸಲಾಗುತ್ತದೆ. ಅಂತರ್ಧರ್ಮಿಯ ಹುಡುಗ-ಹುಡುಗಿಯರು ಮಾತಾಡುವುದೂ ಕಷ್ಟವಾಗುತ್ತಿದೆ. ಎಲ್ಲನ್ನು ಬಿಟ್ಟು, ಇದು ಯಾವದೂ ಕಿರಿಕಿರಿ ಬೇಡವೆಂದು ಇಡಿ ಕುಟುಂಬ ಗುಳೆ ಹೋಗುವುದು ಒಂದು ದಿಕ್ಕೆಟ್ಟ ಸಮಾಜದ ಚಿತ್ರಣವನ್ನು ಕಟ್ಟಿಕೊಡುತ್ತದೆ.

           ಸಂಬಂಧಗಳ ನಾಶದಿಂದ ಸಮಾಜ ಹೆಚ್ಚು ಹೆಚ್ಚು ಗಾಯಗೊಂಡಿದೆ, ಗಾಯಗೊಳ್ಳುತ್ತಲೇ ಇದೆ. ಮುಲಾಮು ಹಚ್ಚದಿದ್ದರೂ ಪರವಾಯಿಲ್ಲ, ಗಾಯ ತನ್ನಷ್ಟಕ್ಕೆ ತಾನೇ ಮಾದೀತು. ಆದರೆ ಗಾಯ ಮಾಯುವುದಕ್ಕೆ ನಾವು ಬಿಡುವುದಿಲ್ಲ. ಗಾಯದ ಮೇಲೆ ಮತ್ತೆ ಗಾಯ ಮಾಡುತ್ತೇವೆ. ದೇಹದ ಗಾಯ ಸುಲಭವಾಗಿ ವಾಸಿಯಾದೀತು ಮನಸ್ಸಿನ ಗಾಯ?.

         ನಮ್ಮಲ್ಲಿ ಒಳ್ಳೆಯ ನಾಟಕ ನಿರ್ದೇಶಕರಿದ್ದಾರೆ. ’ಮೆಹಂದ ಹೂ’ ನಾಟಕಕ್ಕೆ ರೂಪಾಂತರಿಸಿಕೊಳ್ಳಲು ಹೇಳಿ ಮಾಡಿಸಿದಂತಿದೆ. ಜನರಿಗೆ ಸುಲಭವಾಗಿ ತಲುಪಿಸಬಹುದಾದ ಹಾಡು ಮತ್ತು ದೃಶ್ಯಗಳ ಮೂಲಕ ಪರಿಣಾಮಕಾರಿಯಾಗಿ ಈ ಕಾದಂಬರಿಯನ್ನು ನಾಟಕ ರೂಪದಲ್ಲಿ ತರಬಹುದು. ಪ್ರಸ್ತುತ ಸಂದರ್ಭದಲ್ಲಿ ಇದರ ಅಗತ್ಯ ಕೂಡ ಇದೆ.

          ಜನಪರ ಆಶಯಗಳಿಗೆ ದನಿಯಾಗಿ ನಮ್ಮ ಜವಾಬ್ದಾರಿಯನ್ನು ಜ್ಞಾಪಿಸಿಕೊಡುವ ಗೆಳೆತ ಬಿ ಶ್ರೀನಿವಾಸ ಉತ್ತಮ ಸಂಘಟಕರೂ ಹೌದು. ಕ್ಷೋಭಗೊಂಡ ಮನಸ್ಸು ತಳಮಳದಲ್ಲಿರುವಾಗ ಪ್ರೀತಿಯಿಂದ ಗೆಳೆಯನ ಈ ’ಮೆಹಂದಿ ಹೂ’ವನ್ನು ನಿಮ್ಮ ಉಡಿಯಲ್ಲಿ ಹಾಕುತ್ತಿದ್ದೇವೆ ಜೋಪಾನ!.
                           

                            

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...