Tuesday, November 15, 2016

ಗೀತಾ ವಸಂತ : ಎರಡು ಕವಿತೆಗಳು


Image result for ಗೀತಾ ವಸಂತ
ಬೀಜ

Image result for abstract art music


ಈ ಬೋಳುಗುಡ್ಡಗಳ
ನಿಟ್ಟುಸಿರ ಊರಿನಲಿ
ಉರಿವಸೂರ್ಯನ ಅವಚಿಕೊಂಡ
ಮಂಕು ಬೂದಿಯಂಥ ಮೋಡ
ಮಳೆಗೂ
ಕೊಚ್ಚಿಹೋಗುವ ಕಸುವಿಲ್ಲ
ಪಾಂಡುವಿನಂತೆ ನಿರ್ವೀರ್ಯ.

ಕುಂತಿಯಂತೆ ಕುಂತ ಭೂಮಿ
ಕಳ್ಳಬಸಿರಿನ ಕರ್ಣರ ಕೂಡ
ನಡುರಾತ್ರಿಯಲಿ ಪಿಸುಮಾತು
ಹಗಲಿಡೀ ಹರಗಿಟ್ಟ ಮಾನ
ಗರ್ಭದೊಳಗೆ
ಮೊಳೆತೇಳದ ಜೊಳ್ಳುಬೀಜ.

ಒಳಗೆ ತಿದಿಯೊತ್ತುತ್ತ
ಮಾರ್ದನಿಗೊಳ್ಳುತಿದೆ
ಗುಡ್ಡಗಳ ನಿಟ್ಟುಸಿರು
ಗುಹೆಗರ್ಭದ ನಗ್ನಸಾಧಕನ
ದಗ್ಧಭಾವ
ಸೋಕುತಿದೆ ಝಳವಾಗಿ
ಮೂಡುತಿದೆ ಕಣ್ಣ ಪಾಪೆಯಲಿ
ಭಗ್ನಪ್ರತಿಮೆಯ ಭಂಗಿ.

ಇದೆಯಂತೆ ಇದೇ ಗುಡ್ಡಗಳಲಿ
ಉಜ್ಜೀವಿಸುವ ಸಂಜೀವಿನಿ
ಪೊದೆಗಳಲಿ ಕತ್ತೆತ್ತಿ
ಬುಸುಗುಡುವ ಹಾವಿನ ನೆತ್ತಿ
ಸವರಿ ಸಾವಿನ ಕತ್ತಿ
ಯಿಂದ ಪಾರಾಗಬೇಕು
ಜೀವರಸ ಕುಡಿದು ಮತ್ತೇರಿ
ಹುಟ್ಟಬೇಕು ಮತ್ತೆಮತ್ತೆ.

ಕಂಪಿಸುತಿದೆ ಸಂತನ
ತಂಬೂರಿ ದನಿಗೆ ಪರಾಗ
ಸ್ಪರ್ಷಕೆ ಕಾದ ಪುಷ್ಪಗರ್ಭ.
ಸ್ಖಲಿಸುತಿವೆ ಗುಡ್ಡಗುಡ್ಡಗಳೆ
ಮೀಟಿದಂತೆ ನರನಾಡಿ
ವಿರಾಗದೆದೆಯಲಿ ಸಂಚರಿಸಿದೆ
ಹೊಸತೊಂದು ರಾಗ.

ತಂಬೂರಿಯ ಸೋರೆಬುರುಡೆಯೆ
ಮೊಳೆತು ಚಿಗಿತೇಳುತಿದೆ
ಬಳ್ಳಿ ಬಳ್ಳಿಯಲಿ ಹಸಿರುಕ್ಕಿ ಹೂತು
ಗೆಣ್ಣುಗೆಣ್ಣಿಗೆ ಮಿಡಿಗಾಯಿ ಜೋತು
ಹಣ್ಣಾಗುವುದನೆ ಕಾದಿದೆ ಹಕ್ಕಿ
ಸೃಷ್ಟಿಬೀಜವ ಆಯಲಿಕ್ಕೆ.
***ದಿಗಂಬರ

Image result for abstract art bahubali

ಕನಸಲ್ಲಿ ಸುಳಿದವನು
ಗೊಮ್ಮಟನಿರಬಹುದೆ ಗೆಳತಿ
ವಿಶಾಲಭುಜ ಹರವಾದ ಎದೆ
ಪ್ರಮಾಣಬದ್ಧ ಪುರುಷಶಿಲ್ಪ
ತೊಡೆಗಳಿಗೆ ತಳುಕುಹಾಕಿದ ಬಳ್ಳಿ
ಚಿಗಿತು ಹಸಿ ಹಸಿರಾಗಿ
ಬೆಟ್ಟದ ಬೋಳುನೆತ್ತಿಯಲಿ
ಅರಳಿದ ಜೀವಪುಷ್ಪ

ಕೈಯಲ್ಲಿ ಕೊಳಲಿತ್ತೆ
ಕೊರಳಲ್ಲಿ ಹಾವಿತ್ತೆ
ಮುಖತುಂಬ ಹುಣ್ಣಿಮೆ ಸೂಸುವ
ಬುದ್ಧನ ಮಂದಸ್ಮಿತವಿತ್ತೆ
ಕಣ್ಣೊಳಗೆ ತುಳುಕುವ
ಮಹಾವೀರನ ಕಾರುಣ್ಯವಿತ್ತೆ
ಅಥವಾ ಹಾವುಗೊಲ್ಲನ
ಹಸೀ ತುಂಟತನವಿತ್ತೆ
ಯಾರಿರಬಹುದೆ ಅವನು ಅಕ್ಕಾ?

ನಿನ್ನ ಕನಸಿನ ಗೊರವ
ನನ್ನ ಕನಸಿಗಿಳಿದನೆ ಮತ್ತೆ?
ನೀಟಾದ ಮಾಟ ಮೂಗಿನ ಮೇಲೆ
ಕೊನರಿದ ಕುಡಿಹುಬ್ಬು
ಕಣ್ಣ ಕಣಿವೆಯ ನಿಗೂಢ ಆಳ
ರೆಪ್ಪೆಗಳ ಸರ್ಪಗಾವಲಿನ
ಒಳಗೆ ಬೆಳಕಿನ ಮಣಿ
ಮಣಿತೊಲಗೆ ಮಿಡುಕುವ
ಮಾಯಾಜಗತ್ತು.

ಇದೇನು ಮುಖವೊ ಮಂಡಲವೋ
ಯಾವ ಶುಭ ದರುಶನದ
ಸೂಚನೆಯೊ ಕಾಣೆ ಕೆಳದಿ

ಬಾಯೊಳಗೆ ಬ್ರಹ್ಮಾಂಡ
ಅನ್ನಯಜ್ಞಕ್ಕೆ ಉಸಿರ ಆಜ್ಯ
ಹಾವುಏಣಿಯಾಟದ ಉನ್ಮತ್ತನೋಟದಲಿ
ಅರಳಿದ ನಂದನದ ತೋಟ
ಬಾಲಹಿಡಿದು ಸರಕ್ಕನೆ ಮೇಲೇರಿದರೆ
ಹೆಡೆಯ ನೆರಳಲ್ಲಿ ಸಮಾಧಿ

ಹಣೆಯ ಶಿಖರದ
ತುತ್ತ ತುದಿಯಲಿ ನೆತ್ತಿ
ಮೀರಿ ಹಾರಲಾಗದ ಪ್ರಾಣಪಕ್ಷಿ
ಮನದ ಹುದುಲಲಿ ಸಿಕ್ಕಿ
ಸುಳಿಯುತಿದೆ ಸುತ್ತಿಸುತ್ತಿ
ಕತ್ತೆತ್ತಿ ಕರೆಯುತಿದೆ ಕೋಟಿಸೂರ್ಯರ ಲೋಕ
ಬೆಟ್ಟದ ಹಂಗುಹರಿದು
ಹಾರಿಬಿಡುವನೆ ಆ ಜಂಗಮ
ಸೂತ್ರಕಳಚಿದ ಪಟದಂತೆ ಮೇಲೇರಿ
ಚಿಕ್ಕೆಯಾಗುವನೆ

ಮೊದಲೇ ದಿಗಂಬರನೀಗ
ಪೊರೆಕಳಚುತ್ತಿದ್ದಾನೆ
ಕರಗುತಿದೆ ಪುರುಷ ಶಿಲ್ಪ
ಅದು ಅವನೋ ಅವಳೋ
ಮನುಜನೋ ಪಕ್ಷಿಯೋ
ಅಕ್ಷಿಪಟಲದಾಚೆ ಮಾಟವಿಲ್ಲದ ನೋಟ
ಹಾರಿಹೋಗುವ ಮುನ್ನ ಅರೆಘಳಿಗೆ
ತಾಳುವಂತೆ ಹೇಳಬೇಕು ಅವಗೆ
ಕುಂಭ ಬೇಯುವವರೆಗೆ.
***

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...