Tuesday, November 15, 2016

ಪಿ. ಚಂದ್ರಿಕಾ : ಎರಡು ಕವಿತೆಗಳುImage result for ಪಿ. ಚಂದ್ರಿಕಾ


ಮಗ

Image result for abstract art on son


ಇವನು ಈಗ ಬೆಳೆದಿದ್ದಾನೆ
ಇವನ ಪುಟ್ಟ ಬಟ್ಟೆಗಳ ತೆಗೆದು ಮತ್ತೆ ಮಡಚಿಡುತ್ತೇನೆ!
ನೆಟ್ಟ ಗಿಡ ಮರವಾಗುವುದು ಯಾರಿಗಿಷ್ಟವಿಲ್ಲ?
ಆದರೂ ಅನ್ನಿಸುತ್ತದೆ ಇವನು ಬೆಳೆಯಲೇ ಬಾರದಿತ್ತು.
ಪುಟ್ಟ ಕಣ್ಣುಗಳ ಒಳಗೆ ಉಳಿದ ಮುಗ್ಧತೆಗೆ
ಅಡ್ಡಿಯಾಗುತ್ತಿರುವ ಚಿಗುರು ಗಡ್ಡ ಮೀಸೆ,
ಅಸಂಖ್ಯ ಪ್ರಶ್ನೆಗಳ ಇವನ
ಮಾತು ಈಗೀಗ ಕಡಿಮೆಯಾದರೂ,
ಕೇಳುವ ಒಂದು ಪ್ರಶ್ನೆಗೂ ನನ್ನಲ್ಲಿ ಉತ್ತರವಿಲ್ಲ.
ಬೆರಳುಗಳ ಮಡಚಿ ಹೇಳಿಕೊಟ್ಟ ಲೆಕ್ಕಕ್ಕೆ
ಇನ್ನೊಂದು ಲೆಕ್ಕ ಸೇರಿಸಿದಾಗ ತಬ್ಬಿಬ್ಬುಗೊಂಡ ನನ್ನನ್ನು ನೋಡಿ
ನಗುತ್ತಾ ಹೇಳುತ್ತಾನೆ,
’ನಿನಗೆ ಇಷ್ಟು ಸಣ್ಣದೂ ತಿಳಿಯುವುದಿಲ್ಲವಾ?’
ಹೊಕ್ಕಳಬಳ್ಳಿ ಕತ್ತರಿಸಿಕೊಂಡು
ನೆತ್ತರಲ್ಲಾಡಿದವ,
ಇಷ್ಟಿಷ್ಟು ಬೆಳೆದವ,
ಅತ್ತವ, ನಕ್ಕವ, ಹಟ ಮಾಡಿದವ,
ಗುರುತೇ ಹಿಡಿಯದಷ್ಟು ಎತ್ತರಕ್ಕೆ
ಬೆಳೆದ ಅನ್ನಿಸಿದಾಗೆಲ್ಲಾ,
ಟಿವಿಯ ಮೇಲೆ ಷೋಪೀಸ್‌ನ ಹಾಗೆ ಇಟ್ಟಿರುವ
ಇವನ ಮೊದಲ ಶೂಗಳನ್ನು ತೆಗೆಯುತ್ತೇನೆ.
’ಇದರಲ್ಲಿ ನನ್ನ ಒಂದು ಬೆರಳೂ ತೂರುವುದಿಲ್ಲ’
ಕಿಸಕ್ಕನೆ ನಗುತ್ತಾನೆ.
ಅಂಗಾಲ ಮೃದುತ್ವ ಅದರೊಳಗೆ ಕೈ ಆಡಿಸಿದಾಗ ಸಿಗುತ್ತದೆ,
ತಟ್ಟಡಿಯ ನೆನಪುಗಳು,
ಕೈಬೆರಳ ಆಸರೆ,
ಪುಟ್ಟ ತೋಳಿನ ಆಲಿಂಗನ,
ಕಥೆಗೆ ಹೂಂಗುಡುತಾ ನಿದ್ದೆಗೆ ಜಾರುವ
ಚಂದದ ಸುಖ
ದಿನ ಕಳೆದಂತೆ ಇಲ್ಲವಾದಾಗ,
ನೀರು ಚೆಲ್ಲದ ಹಾಗೆ ಮುದ್ದು ತುಟಿಗಳಲ್ಲಿ ಹೀರುತ್ತಿದ್ದ
ಇವನ ಕೊಳವೆಯ ಲೋಟವ ತೆಗೆಯುತ್ತೇನೆ...
ಹರಡಿಕೊಂಡಿದ್ದೇನೆ ಸುತ್ತಾ ಸಣ್ಣ ಪುಟ್ಟ ವಸ್ತುಗಳನ್ನು,
ಕಣ್ಣಿಟ್ಟು ಕಾಯುತ್ತೇನೆ
ಬೆಳೆದ ಇವನ ಮುಗ್ಧ ನಗು
ಎದೆಯಿಂದ ಜಾರಿ ಹೋಗದ ಹಾಗೆ!ಮೊದಲಗಿತ್ತಿ

Image result for abstract art on she

ಕಾಲಿಗೆ ಮದರಂಗಿ ಬಣ್ಣ ಕೊಡು
ಬಣ್ಣ ಕೊಡು ಏ ಭೂಮಿ,
ಕೆಬ್ಬೆ ಮಣ್ಣಿನ ತುಂಬಾ ಮಳೆ ಸುರಿದ ಜೌಗು,
ಹೆಜ್ಜೆ ಇಟ್ಟಲ್ಲೆಲ್ಲಾ ತೂರುವ ಕೆಸರು,
ಕಣ ಕಣದಿಂದಾದ ಮಣ್ಣ ದೇಹದ ಪುಳಕ,
ಕಾಲಿಗೆ ಮದರಂಗಿ ಬಣ್ಣ ಕೊಡು
ಬಣ್ಣ ಕೊಡು ಏ ಭೂಮಿ.

ನಾವು ಜೀವಕೆ ಪೂರ್ಣ,
ನಾವು ಭಾವಕೆ ಪೂರ್ಣ,
ನೀರ ಮಮತೆಯಲದ್ದಿ
ಗಾಳಿ ಗಂಧವ ಹೊದ್ದ
ಸಕಲಾತಿ ಸಮತೆಯು ಕೂಸುಗಳು.
ಇಲ್ಲಿ ಹುಳ, ಅಲ್ಲಿ ಹಾವು,
ಒಂದೊಂದು ಹಿಂಡು ನವಿಲು,
ಮುಂಗುಸಿ, ಕಾಡುಹಂದಿ
ಯಾರು ಯಾರಿಗೆ ಜೀವಾಧಾರ?
ಬಂದ ಬೆಳೆಯ ಕಾಯಲು
ಕವಣೆ ಕಲ್ಲನು ಕಟ್ಟಿ ತೂರಿ ಬಿಡುವಾಗ ರೊಯ್ಯ ರೊಯ್ಯನೆ
ಕಾಲಿಗೆ ಮದರಂಗಿ ಬಣ್ಣ ಕೊಡು
ಬಣ್ಣ ಕೊಡು ಏ ಭೂಮಿ

ಹದ ಬಂದು ಒಡಲು ಜೀಕಿ ಫಲವಾಗಿ
ಆಲ ಬೇಲದ ತುಂಬಾ ಮೂಲವಾಗಿದೆ ಸಹನೆ
ಬಿತ್ತಷ್ಟನೇ ಕೊಡುವಳೇ ಆ ತಾಯಿ ದಾನೇ?
ತೊಪ್ಪೆ, ಗಂಜಲ ಮೈಯ ವಾಸನೆಯ ಜೊತೆಯೆ ಬೆರೆತು,
ಬಿಸಿಲು ಮಳೆಗೆ ನೆನೆದು ನೆನೆದು,
ಸಾರವ ಹೀರಿ ನೆಟ್ಟ ಗಿಡ ನೆಡದ ಗಿಡ
ಎಲ್ಲವೂ ಸೊಂಪಾಗಿ ಬೆಳೆದು
ಉಸಿರು ಮಿಡಿಯುತ್ತವೆ!

ಕಂಪ್ಯೂಟರ್ ಮೇಲೆ ಓಡುವ ಕೈ
’ಇಷ್ಟು ಕೊಟ್ಟಿಗೆ ಗೊಬ್ಬರ, ಇಷ್ಟು ಯೂರಿಯಾ ಹಾಕು...’
ಅನ್ನವಾಗುವ ಮಣ್ಣೆ ವಿಷವುಂಡು ಫಲ ಕೊಟ್ಟೆ,
ಫಲ ಕೊಟ್ಟೂ ನಿಶ್ಫಲವಾದೆ!
ಕಲಿಸಿದೆ ನಿಲುವ ದೃಢತೆ ಹುಲ್ಲಿಗೆ,
ಕಾಲಿಗೆ ಮದರಂಗಿ ಬಣ್ಣ ಕೊಡು
ಬಣ್ಣ ಕೊಡು ಏ ಭೂಮಿ...            

1 comment:

  1. Melodious products of matured brain. God bless you Chandrika.

    ReplyDelete

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...