Wednesday, November 16, 2016

ಕೇಂದ್ರ ಸರ್ಕಾರ ಕಪ್ಪುಹಣದ ಕುಳಗಳ ರಕ್ಷಕನಂತಿದೆ!

Image result for ಟಿ ಕೆ ದಯಾನಂದ

ಟಿ ಕೆ ದಯಾನಂದ

ಜಗತ್ತಿನ ಮೂಲೆಮೂಲೆಯ ದೇಶಗಳ ಜರ್ನಲಿಸ್ಟ್ ಗಳು ಒಟ್ಟು ಸೇರಿ ಬಯಲಿಗೆಳೆದ" ಪನಾಮಾ ಪೇಪರ್ಸ್ ಲಿಸ್ಟ್ " ನೆನಪಿದೆಯ ? ದೇಶಕ್ಕೆ ಟ್ಯಾಕ್ಸ್ ವಂಚಿಸಿ ಪನಾಮಾ ದೇಶದ ಮೊಸಾಕ್ ಪೊನ್ಸೇಕ ಎಂಬ ತೆರಿಗೆಗಳ್ಳ ಸಂಸ್ಥೆಯೊಂದರ ಮೂಲಕ ಕಪ್ಪುಹಣವನ್ನು ಪ್ರೊಟೆಕ್ಟ್ ಮಾಡಿಕೊಳ್ಳುತ್ತಿದ್ದ ದೊಡ್ಡಜನರೆಲ್ಲ ದಾಖಲೆ ಸಮೇತ ಬಟಾಬಯಲಾದರು. ಇದರಲ್ಲಿ ಇಂಡಿಯಾದ 500ಕ್ಕೂ ಹೆಚ್ಚು ಮಂದಿ ಸಾಕ್ಷಿ ಸಮೇತ ಸಿಕ್ಕುಬಿದ್ದರು. ಇವರಲ್ಲಿ ಬಾಲಿವುಡ್ ನಟ ನಟಿಯರು, ಬ್ಯುಸಿನೆಸ್ ಟೈಕೂನ್ ಗಳು, ಕಾರ್ಪೊರೇಟ್ ದೈತ್ಯರೂ ಸೇರಿದ್ದರು.
ಎಲ್ಲ ದೇಶಗಳಂತೆ ಪನಾಮಾ ಪೇಪರ್ಸ್ ಲಿಸ್ಟ್ ನಲ್ಲಿದ್ದವರ ಮೇಲೆ ಇಂಡಿಯಾದ ಮೋದಿ ಸರ್ಕಾರವೂ ತನಿಖೆ ಶುರು ಮಾಡಲು ಹೊರಡ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯ, ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯುನಿಟ್, ಫಾರಿನ್ ಟ್ಯಾಕ್ಸ್ & ರಿಸರ್ಚ್ ಏಜೆನ್ಸಿಗಳನ್ನು ಸೇರಿಸಿ " ಮಲ್ಟಿ ಏಜೆನ್ಸಿ ಇನ್ವೆಸ್ಟಿಗೇಷನ್ ಟೀಂ" ಒಂದನ್ನು ರಚಿಸಲಾಯಿತು.
ಈ ಟೀಂ ಸಾಲದೆಂಬಂತೆ ಸುಪ್ರೀಂಕೋರ್ಟ್ ಕಪ್ಪುಹಣದ ತನಿಖೆಗಾಗಿ ನೇಮಿಸಿದ "ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಂ" ಪನಾಮಾ ಪೇಪರ್ಸ್ ಲಿಸ್ಟ್ ನಲ್ಲಿ ಬಯಲಾದ ಇಂಡಿಯನ್ ಟ್ಯಾಕ್ಸ್ ಕಳ್ಳ-ಕಳ್ಳಿಯರನ್ನ ಹಿಡಿದು ಶಿಕ್ಷಿಸಲು ಇನ್ನೊಂದು ತನಿಖಾತಂಡವನ್ನು ರೂಪಿಸಿತು. ಈ ತಂಡದಲ್ಲಿ " ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ರೆವಿನ್ಯೂ ಇಂಟೆಲಿಜೆನ್ಸ್, ಫೈನಾನ್ಷಿಯಲ್ ಫ್ರಾಡ್ ಮಾನಿಟರಿ ವಿಂಗ್ ಗಳಿದ್ದವು.
ಇವೆರಡು ಸೆಂಟ್ರಲ್ ಮಟ್ಟದ ಅತ್ಯುನ್ನತ ಅಧಿಕಾರ ಹೊಂದಿರುವ ಇನ್ವೆಸ್ಟಿಗೇಷನ್ ತಂಡಗಳೆರಡರ ಕೈಯಲ್ಲೂ ಪನಾಮಾದೇಶದಲ್ಲಿ ಕದ್ದು ಹೂಡಿಕೆಯಾದ ಇಂಡಿಯನ್ ತೆರಿಗೆಗಳ್ಳರ ಅಕ್ರಮಗಳ ಬಗ್ಗೆ ಸಾವಿರಾರು ಪುಟಗಳಷ್ಟು ಅಧಿಕೃತ ದಾಖಲೆಗಳಿದ್ದವು. ಅಕೌಂಟ್ ನಂಬರ್, ಕದ್ದ ತೆರಿಗೆಹಣವನ್ನು ಬಂಡವಾಳ ಹೂಡಿದ ಕಳ್ಳಕಂಪನಿಯ ಇಂಡಿಯನ್ ಮಾಲೀಕರ ಹೆಸರಲ್ಲಿದ್ದ ರಿಜಿಸ್ಟ್ರೇಷನ್ ದಾಖಲೆಗಳು ಪ್ರತಿಯೊಂದೂ ಇವೆರಡು ತನಿಖಾತಂಡಗಳ ಕೈಯಲ್ಲಿದ್ದವು.. ಇಷ್ಟೆಲ್ಲ ಆಗಿ ಇವತ್ತಿಗೆ ಹತ್ತತ್ತಿರ ವರ್ಷವಾಗುತ್ತ ಬಂತು..
ಇದೇ ಪನಾಮಾ ಹಗರಣ ಜಗತ್ತಿನ ತುಂಬೆಲ್ಲ ಕೋಲಾಹಲವೆಬ್ಬಿಸಿ ಐಸ್ ಲೆಂಡ್ ದೇಶದ ಅಧ್ಯಕ್ಷನೇ ಪದವಿ ಕಳೆದುಕೊಂಡ, ಸ್ಪೇನ್ ದೇಶದಲ್ಲಿ ಮಂತ್ರಿಗಳೇ ಪದಚ್ಯುತರಾದರು, ಹಾಂಗ್ ಕಾಂಗ್, ವೆನಿಜುವೆಲಾದ ಖ್ಯಾತ ಜರ್ನಲಿಸ್ಟ್ ಗಳೇ ಕೆಲಸ ಕಳೆದುಕೊಂಡರು, ಮತ್ತು ಇವರೆಲ್ಲರೂ ಸಾರ್ವಜನಿಕವಾಗಿ ಛೀಮಾರಿಗೊಳಗಾಗಿ, ಜನರೆದುರು ತಲೆ ಎತ್ತಿಕೊಂಡು ತಿರುಗಲೂ ಭಯಪಡುವಂತಾಯಿತು. ಹಂಗಾದ್ರೆ ನಮ್ ಇಂಡಿಯಾದಲ್ಲಿ ಏನಾಯ್ತು..
ಇಲ್ಲಿ ಉಲ್ಟಾ ಆಯ್ತು. ಭ್ರಷ್ಟಾಚಾರದ ಬಗ್ಗೆ ಪುಂಗಿ ಊದುವ ದೇಶಭಕ್ತರ ಸರ್ಕಾರದವರು ಇದ್ದಕ್ಕಿದ್ದಂತೆ ಮೂರ್ಛೆರೋಗ ಬಂದವರಂತೆ ಮಲಗಿಬಿಟ್ಟರು. ಪನಾಮಾ ಪೇಪರ್ಸ್ ಹಗರಣದಲ್ಲಿ ಇನ್ವಾಲ್ವ್ ಆದ ಯಾವೊಬ್ಬ ಟ್ಯಾಕ್ಸ್ ಕಳ್ಳನ ಮೇಲೂ ಮೋದಿ ಸರ್ಕಾರ ಮುಗಿಬೀಳಲೇ ಇಲ್ಲ, ಯಾವೊಬ್ಬನ ಅಕೌಂಟನ್ನೂ ಜಪ್ತಿ ಮಾಡಲಿಲ್ಲ, ಯಾವೊಬ್ಬನನ್ನೂ ಒದ್ದು ಜೈಲಿಗೆ ಹಾಕಲಿಲ್ಲ, ಯಾವ ಕಂಪನಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಿಲ್ಲ, ಯಾರೊಬ್ಬರಿಗೂ ಮೂರುಪೈಸೆಯಷ್ಟು ದಂಡವನ್ನೂ ವಿಧಿಸಲಿಲ್ಲ.. ಇಲ್ಲಿಯತನಕ ದಾಖಲೆಸಮೇತ ಸಿಕ್ಕಿಬಿದ್ದ ಈ ಟ್ಯಾಕ್ಸ್ ವಂಚಕರು ಸಣ್ಣ ತನಿಖೆಯೂ ಇಲ್ಲದೆ ರಾಜಾರೋಷವಾಗಿ ಬಂಗಲೆಗಳಲ್ಲಿ ಆರಾಮಾಗಿದ್ದಾರೆ.
ಕೈಯಲ್ಲಿ ಅಧಿಕೃತ ದಾಖಲೆಗಳಿದ್ದರೂ ಟ್ಯಾಕ್ಸ್ ಕಳ್ಳರನ್ನು ಮುಟ್ಟಲು ಧೈರ್ಯವಿಲ್ಲದ ದೇಶಭಕ್ತರ ಸರ್ಕಾರ.. ಕಪ್ಪುಹಣದ ವಿರುದ್ದ ಸಮರ ಸಾರಿದ್ದೇವೆ ಅಂದರೆ.. ಪ್ರೈಮರಿ ಸ್ಕೂಲ್ ಮಕ್ಕಳೂ ನಗುತ್ತವಷ್ಟೆ.. ಅಂದ್ಹಾಗೆ ಒಂದ್ಸಲ ದುಡ್ಡು ಚೇಂಜ್ ಮಾಡಿಕೊಂಡ ಮೇಲೆ ಬೆರಳಿಗೆ ಶಾಯಿ ಗುರುತು ಕಡ್ಡಾಯವಂತೆ.., ಶಾಯಿ ಗುರುತು ಇರೋರಿಗೆ ಮತ್ತೊಮ್ಮೆ ಹಣ ಬದಲಾವಣೆಗೆ ಅವಕಾಶ ನಿರಾಕರಿಸಲಾಗಿದೆಯಂತೆ ನಿಜವೇ? ಬಲ್ಲವರು ತಿಳಿಸಿ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...