Friday, February 17, 2017

ಪರಿಸರದ ಮೇಲೆ ಟ್ರಂಪ್ ಧಾಳಿImage result for ಶಿವಸುಂದರ್


ಅನು: ಶಿವಸುಂದರ್ ಪರಿಸರ ಕಾಲುಷ್ಯದಿಂದ ಉಂಟಾಗುತ್ತಿರುವ ಹವಾಮಾನ ಬದಲಾವಣೆಯನ್ನು ವೈಟ್ ಹೌಸ್ ನಿರಾಕರಿಸುತ್ತಿರುವುದು ವಿಶ್ವಕ್ಕೊಂದು ಕೆಟ್ಟ ಸುದ್ದಿ.

Image result for tramp


ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಇರಾಕ್, ಇರಾನ್, ಲಿಬ್ಯ, ಸೋಮಾಲಿಯ, ಸೂಡಾನ್, ಸಿರಿಯಾ ಮತ್ತು ಯೆಮೆನ್ ದೇಶಗಳ ನಾಗರಿಕರು ೯೦/೧೨೦ ದಿನಗಳ ಕಾಲ ಅಮೆರಿಕವನ್ನು ಪ್ರವೇಶಿಸದಂತೆ ಹೊರಡಿಸಿದ ಜನವರಿ ೨೭ ರ ಮುಸ್ಲಿಂ ಪ್ರತಿಬಂಧ ಆಡಳಿತಾತ್ಮಕ ಆದೇಶದ ಮೇಲೆಯೇ ಜಗತ್ತಿನ ಗಮನ ಕೇಂದ್ರೀಕರಣವಾಗಿದ್ದರಿಂದ, ಪರಿಸರ ನಿಯಂತ್ರಣ ಸಂಬಂಧೀ ವಿಷಯಗಳ ಮೇಲೆ ಗಾಢವಾದ ಪ್ರಭಾವ ಮಾಡುವ ಅವರ ಇತರ ಆಡಳಿತಾತ್ಮಕ ಆದೇಶಗಳು ಜನರ ಗಮನವನ್ನು ತಪ್ಪಿಸಿಕೊಂಡುಬಿಟ್ಟವು. ಯಾವರೀತಿ ವೀಸಾ ಬ್ಯಾನ್ ಎಂಬುದು ಪ್ರಪಂಚಾದ್ಯಂತ ತನ್ನ ಪರಿಣಾಮವನ್ನು ತೋರಬಲ್ಲದೋ, ಅದೇರೀತಿ ಪರಿಸರಕ್ಕೆ ಸಂಬಂಧಪಟ್ಟಂತೆ ಅವರ ಕೆಲವು ಕ್ರಮಗಳು ಜಾಗತಿಕ ಪರಿಣಾಮವನ್ನುಂಟು ಮಾಡಲಿವೆ. ಅದರಲ್ಲೂ ಹಸಿರು ಮನೆ ಅನಿಲ (Green House Gas- GHG) ಸೂಸಿಕೆಗೆ ಸಂಬಂಧಪಟ್ಟಂತೆ ಅವರು ಸದ್ಯ ತೆಗೆದುಕೊಳ್ಳುತ್ತಿರುವ ಮತ್ತು ಊಹಿಸಬಲ್ಲಂತೆ ಭವಿಷ್ಯದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳು ವಿಶೇಷವಾಗಿ ಕಳವಳಕಾರಿಯಾಗಿವೆ. ಅಮೆರಿಕವು ಈ ಸದ್ಯಕ್ಕೆ ಉಗುಳುತ್ತಿರುವ GHG ಯ ಪ್ರಮಾಣವನ್ನು ನೋಡುತ್ತಿದ್ದರೆ ಅದರಲ್ಲಿ ಯಾವುದೇ ಹೆಚ್ಚಳವಿರಲಿ ಈಗಿರುವ ಮಟ್ಟದಲ್ಲೇ ಉಳಿದುಕೊಂಡರೂ ಅದು ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಹೆಚ್ಚಳವನ್ನು ನಿಯಂತ್ರಿಸಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ.

ಪರಿಸರವಾದಿಗಳ ಬಗ್ಗೆ ಟ್ರಂಪ್‌ಗೆ ಇದ್ದಂಥ ತಿರಸ್ಕಾರ ಮನೋಭಾವ ಅವರ ಚುನಾವಣಾ ಪ್ರಚಾರದ ಸಂದರ್ಭದಿಂದಲೂ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹೀಗಾಗಿ ಯಾರನ್ನು ಅವರು ತಮ್ಮ ಸಲಹೆಗಾರರನ್ನಾಗಿ ನಿಯುಕ್ತಗೊಳಿಸಿಕೊಳ್ಳುತ್ತಿದ್ದಾರೆ ಎಂಬುದು ಅಂಥಾ ಆಶ್ಚರ್ಯವನ್ನೇನೂ ತರುತ್ತಿಲ್ಲ. ಉದಾಹರಣೆಗೆ ಸ್ಕಾಟ್ ಪ್ರುಯಿಟ್ ಅವರು ಪರಿಸರ ರಕ್ಷಣಾ ಏಜೆನ್ಸಿಯ (Environment Protection Agency-EPA) ಕಾರ್ಯಭಾರವನ್ನು ವಹಿಸಿಕೊಳ್ಳುವವರೆಗೆ ಮಾತ್ರ ಅದರ ಹಂಗಾಮಿ ಮುಖ್ಯಸ್ಥರಾಗಿರುವ ಮೈರಾನ್ ಎಬೆಲ್ ಅವರನ್ನು ಟ್ರಂಪ್ ತಮ್ಮ ಸಲಹೆಗಾರರನ್ನಾಗಿ ಮಾಡಿಕೊಂಡಿದ್ದಾರೆ. ಎಬೆಲ್ ಅವರು ಎಂಥಾ ಮಹಾಶಯರೆಂದರೆ ಅಮೆರಿಕದ ಅತ್ಯಂತ ಪ್ರತಿಗಾಮಿ ಕಾಂಪಿಟೇಟೀವ್ ಎಂಟರ್ಪ್ರೈಸ್ ಇನ್ಸ್ಟಿಟ್ಯೂಟ್ ನ ನಿರ್ದೇಶಕರಲ್ಲೊಬ್ಬರಾಗಿದ್ದು ಪರಿಸರ ಚಳವಳಿಯನ್ನು ಆಧುನಿಕ ಜಗತ್ತಿನಲ್ಲಿ ಸ್ವಾತಂತ್ರ್ಯ ಮತ್ತು ಸಮೃದ್ಧಿಗೆ ಅತ್ಯಂತ ದೊಡ್ಡ ಅಪಾಯವೆಂದು ಬಣ್ಣಿಸಿರುವುದು ದಾಖಲಾಗಿದೆ. ಮತ್ತೊಬ್ಬರಾದ ಪ್ರುಯಿಟ್ ಅವರು ಹವಾಮಾನ ಬದಲಾವಣೆಯನ್ನು ನಿರಾಕರಿಸುತ್ತಾರಲ್ಲದೆ ಒಕ್ಲಾಹಾಮ ರಾಜ್ಯದ ಅಟಾರ್ನಿ ಜನರಲ್ ಆಗಿದ್ದ ಕಾಲದಲ್ಲಿ ತೈಲ ಕಂಪನಿಗಳ ಪರವಾಗಿ  ಪರಿಸರ ರಕ್ಷಣಾ ಏಜೆನ್ಸಿಯ (EPA) ವಿರುದ್ಧವೇ ೧೪ ದಾವೆಗಳನ್ನು ಹೂಡಿದ್ದರು. ಇಂಥಾ ಜನಗಳೇ ಪರಿಸರವನ್ನು ಕಾಪಾಡಲು ನಿಯುಕ್ತರಾಗಿದ್ದಾರೆಂಬುದು ಭವಿಷ್ಯದಲ್ಲಿ ಏನು ಕಾದಿದೆ ಎಂಬುದಕ್ಕೆ ಸೂಚನೆಗಳಾಗಿವೆ.

ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದ ತರುಣದಲ್ಲೇ ಟ್ರಂಪ್ ತೆಗೆದುಕೊಂಡ ಕ್ರಮಗಳೆಂದರೆ EPA ಗೆ ಅನುದಾನ ತಡೆಹಿಡಿದಿದ್ದು (ವಾಸ್ತವವಾಗಿ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಈ ಸಂಸ್ಥೆಯನ್ನೇ ರದ್ದು ಮಾಡಬೇಕೆಂದು ಘೋಷಿಸಿದ್ದರು) ಮತ್ತು ೧೫೦೦೦ ಇಂಜನಿಯರ್ ಮತ್ತು ವಿಜ್ನಾನಿಗಳಿರುವ ಆ ಸಂಸ್ಥೆಯ ಸಿಬ್ಬಂದಿ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸಲು ಸೂಚಿಸಿರುವುದು. ಅಲ್ಲದೆ EPA ಸಿಬ್ಬಂದಿಗಳು ತಮ್ಮ ಸಂಶೋಧನೆಯ ಬಗ್ಗೆ ಮತ್ತದರ ಫಲಿತಾಂಶಗಳ ಕುರಿತು ಮಾಧ್ಯಮವನ್ನೂ ಒಳಗೊಂಡಂತೆ ಯಾರಜೊತೆಗೂ ಮಾತಾಡಬಾರದೆಂದು ಸಿಬ್ಬಂದಿಗಳ ಬಾಯಿಗೆ ಬೀಗ ಹಾಕುವ ಮತ್ತೊಂದು ಕಟ್ಟಪ್ಪಣೆಯನ್ನೂ ಹೊರಡಿಸಿದ್ದಾರೆ. ಇದರ ಅರ್ಥವೇನೆಂದರೆ, ಉದಾಹರಣೆಗೆ, GHG ಯ ಹೊರಸೂಸುವಿಕೆಯ ಇತ್ತೀಚಿನ ಪ್ರಮಾಣವೆಷ್ಟು ಎಂಬುದು ಸಾರ್ವಜನಿಕರಿಗೆ ಎಂದಿಗೂ ತಿಳಿಯುವುದೇ ಇಲ್ಲ. ಹಾಗೆಯೇ ವೈಟ್ ಹೌಸಿನ ಹವಾಮಾನ ಬದಲಾವಣೆಯ ಕುರಿತಾದ ಅಂತರ್ಜಾಲ ಪುಟದ ತಲೆಬರಹವನ್ನು An  America  First  Energy  Plan”  (ಮೊದಲು ಅಮೆರಿಕ- ಶಕ್ತಿ ಇಂಧನ ಯೋಜನೆ) ಎಂದು ಬದಲಾಯಿಸಲಾಗಿದೆಯಲ್ಲದೆ ಅದರಲ್ಲಿ ಹವಾಮಾನ ಬದಲಾವಣೆಯ ಪ್ರಸ್ತಾಪವೇ ಇಲ್ಲ. ಟ್ರಂಪ್ ಪ್ರಕಾರ ಈ ಶಕ್ತಿ ಇಂಧನ ಯೋಜನೆಯು, ಈವರೆಗೆ ನೆನೆಗುದಿಗೆ ಬಿದ್ದಿದ್ದ  ಅಮೆರಿಕ ಒಕ್ಕೂಟದ ಭೂಭಾಗದಲ್ಲಿರುವ ಸುಮಾರು ೫೦ ಟ್ರಿಲಿಯನ್ ಡಾಲರ್ ಮೌಲ್ಯದ ಜೇಡಿಪದರಗಲ್ಲು, ತೈಲ ಮತ್ತು ನೈಸರ್ಗಿಕ ಸಂಪನ್ಮೂಲ ಬಳಕೆಗೆ ಚಾಲ್ತಿ ನೀಡುತ್ತದೆ. ಮತ್ತೊಂದು ಮಾತಿನಲ್ಲಿ ಹೇಳುವುದಾದರೆ ಈ ಹಿಂದಿನ ಆಡಳಿತವು ಹವಾಮಾನ ಕ್ರಿಯಾ ಯೋಜನೆ ಮತ್ತು ಪರಿಶುದ್ಧ ಶಕ್ತಿಇಂಧನ ಯೋಜನೆಯಡಿ ಯಾವ್ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿತ್ತೋ ಅವೆಲ್ಲವನ್ನು ಟ್ರಂಪ್ ಆಡಳಿತ ಅತ್ಯಂತ ತ್ವರಿತವಾಗಿ ಕಿತ್ತುಹಾಕುತ್ತಿದೆ ಮತ್ತು  ಅಮೆರಿಕನ್ನರಿಗೆ ಹೆಚ್ಚೆಚ್ಚು ಉದ್ಯೋಗ ಮತ್ತು ಅತ್ಯಧಿಕ ಲಾಭಗಳನ್ನು ದಕ್ಕಿಸಿಕೊಳ್ಳಬಹುದೆಂಬ ನೆಪವೊಡ್ಡಿ ಭೂಗರ್ಭದ ಇಂಧನ ಉದ್ಯಮದ ಲಾಬಿಯು ಹೆಚ್ಚಿನ ನಿರ್ಬಂಧಗಳಿಲ್ಲದೆ ವ್ಯವಹಾರ ನಡೆಸಿಕೊಳ್ಳಲು ದಾರಿ ಮಾಡಿಕೊಡುತ್ತಿದೆ.

ಇದು ಕೇವಲ ಅಮೆರಿಕದ ಮೇಲೆ ಮಾತ್ರವಲ್ಲದೆ ಇಡೀ ವಿಶ್ವದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಲಿದೆ. ಹಸಿರುಮನೆ ಅನಿಲಗಳು (GHG) ಈ ಪ್ರಮಾಣದಲ್ಲಿ ಸಂಗ್ರಹವಾಗಲು ಔದ್ಯೋಗಿಕ ದೇಶಗಳೆ ಕಾರಣವೆಂದು ಗುರುತಿಸಿ ಆ ದೇಶಗಳ GHG ಹೊರಸೂಸುವಿಕೆಯ ಪ್ರಮಾಣದ ಮೇಲೆ ನಿರ್ಬಂಧ ಹೇರುತ್ತಿದ್ದ ಮತ್ತು ಕಾನೂನಾತ್ಮಕವಾಗಿ ಎಲ್ಲರೂ ಬದ್ಧರಿರಬೇಕಿದ್ದ ಕ್ಯೋಟೋ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಲೇ ಇಲ್ಲ. ಆದರೆ ೨೦೧೫ರಲ್ಲಿ, ಒಬಾಮಾ ಆಡಳಿತಾವಧಿಯಲ್ಲಿ ಹಸಿರುಮನೆ ಅನಿಲ ಸೂಸಿಕೆಯನ್ನು ಕಡಿತಗೊಳಿಸುವಲ್ಲಿ ಪ್ರತಿ ದೇಶವು ತನಗೆ ತಾನೇ ನಿಗದಿ ಪಡಿಸಿಕೊಳ್ಳುವ ಉದ್ದೇಶಿತ ರಾಷ್ಟ್ರೀಯವಾಗಿ ನಿಗದಿತಗೊಂಡ ಬದ್ಧತೆ (Intended Nationally Determined Commitments- INDCಒಪ್ಪಂದವನ್ನು ಮುಂದಿಟ್ಟ  ಪ್ಯಾರಿಸ್ ಒಪ್ಪಂದಕ್ಕೆ ಅಮೆರಿಕವು ಒಳಪಟ್ಟಿತು. ಅದರ ಪ್ರಕಾರ ಅಮೆರಿಕವು ೨೦೩೦ರ ವೇಳೆಗೆ ೨೦೦೫ರ ತನ್ನ ಕಾರ್ಬನ್ ಡಯಾಕ್ಸೈಡ್ ಸೂಸಿಕೆಯ ಶೇ.೩೦ರಷ್ಟನ್ನು ಕಡಿತಗೊಳಿಸುವುದಾಗಿ ವಚನವಿತ್ತಿದ್ದಲ್ಲದೆ ವರದಿಗಳ ಪ್ರಕಾರ ಈಗಾಗಲೇ ಈ ಗುರಿಯ ಶೇ.೨೭ರಷ್ಟನ್ನು ಸಾಧಿಸಿದೆ.

ಆದರೆ ಶೇ.೨೬ರಷ್ಟು GHG ಯನ್ನು ಹೊರಸೂಸುವ ಸಾರಿಗೆ ವ್ಯವಸ್ಥೆಯ ಮತ್ತು ಶೇ.೯ ರಷ್ಟು ಸೂಸಿಕೆಗೆ ಕಾರಣವಾಗುವ ಕೃಷಿ ಪದ್ಧತಿಯ ವಿಷಯದಲ್ಲಾಗಲೀ ಈವರೆಗೆ ಯಾವುದೇ ಗಣನೀಯ ಸುಧಾರಣೆಯಾಗಿಲ್ಲ.

ಟ್ರಂಪ್ ತನ್ನ ಚುನಾವಣಾ ಪ್ರಚಾರದಲ್ಲಿ ಬೆದರಿಸಿದಂತೆ ಅಮೆರಿಕ ಪ್ಯಾರಿಸ್ ಒಪ್ಪಂದದಿಂದ ಹೊರಬರದಿದ್ದರೂ, ಅದು ತನ್ನ ಬದ್ಧತೆಗಳಿಂದ ಹಿಂದೆ ಸರಿಯುವ ಎಲ್ಲಾ ಸಾಧ್ಯತೆಗಳಿವೆ. ವಿಶ್ವ ಸಂಪನ್ಮೂಲ ಸಂಸ್ಥೆ (World Resource Institute- WRIಪ್ರಕಾರ ಪ್ರಪಂಚದ ಎಲ್ಲಾ ದೇಶಗಳು ತಮ್ಮ ತಮ್ಮ ದೇಶಗಳ GHG ಸೂಸಿಕೆಯ ಪ್ರಮಾಣ ನಿಯಂತ್ರಣದ ಬಗ್ಗೆ ನೀಡಿದ ವಚನದಂತೆ ನಡೆದುಕೊಂಡರೂ ಜಗತ್ತಿನ ತಾಪಮಾನವೂ ೨ ಡಿಗ್ರಿ ಸೆಲ್ಷಿಯಸ್ನಷ್ಟು ಏರದಂತೆ ತಡೆಹಿಡಿಯುವುದು ಕಷ್ಟವಿದೆ. ಹೀಗಿರುವಾಗ ವಿಶ್ವದ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶವು ತನ್ನ ಬದ್ಧತೆಗಳ ಬಗ್ಗೆ ನಿಷ್ಕಾಳಜಿ ತೋರಲು ನಿರ್ಧರಿಸುವುದು ಅತ್ಯಂತ ಅಪಾಯಕಾರಿ ಪರಿಣಾಮವನ್ನುಂಟು ಮಾಡಲಿದೆ.

ಹವಾಮಾನ ಬದಲಾವಣೆಯನ್ನು ತಡೆಯುವದರ ಬಗೆಗೆ ಟ್ರಂಪ್ ತೋರುತ್ತಿರುವ ನಿಷ್ಕಾಳಜಿಯಷ್ಟೇ ಅಪಾಯಕಾರಿಯಾದದ್ದು ಈ ಸಂಬಂಧೀ ನಿಧಿಗೆ ತನ್ನ ಕೊಡುಗೆಯ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯ ಪ್ಯಾರಿಸ್ ಒಪ್ಪಂದದ ವೇಳೆ ಬಡ ದೇಶಗಳು ಹವಾಮಾನ ಬದಲಾವಣೆಗಳಿಗೆ ಹೊಂದಿಕೊಂಡು ಪರಿಶುದ್ಧ ಇಂಧನಗಳನ್ನು ಅಳವಡಿಸಿಕೊಳ್ಳಲು ಸಮರ್ಥರನ್ನಾಗಿಸುವ ಉದ್ದೇಶದಿಂದ ಸ್ಥಾಪಿಸಲಾಗುತ್ತಿರುವ ೧೦೦ ಬಿಲಿಯನ್ ಡಾಲರ್‌ಗಳ ವಿಶ್ವಸಂಸ್ಥೆಯ ಹಸಿರು ಹವಾಮಾನ ನಿಧಿಗೆ ೨೦೨೦ರ ವೇಳೆಗೆ ೩ ಬಿಲಿಯನ್ ಡಾಲರ್ ಕೊಡುಗೆ ನೀಡಲು ಅಮೆರಿಕ ಒಪ್ಪಿಕೊಂಡಿತ್ತು. ಈವರೆಗೆ ಅದು ಕೇವಲ ೫೦೦ ಮಿಲಿಯನ್ ಡಾಲರ್‌ಗಳನ್ನು ಮಾತ್ರ ಪಾವತಿಸಿದೆ. ಇದಕ್ಕೆ ಒಂದು ಕಾರಣ ರಿಪಬ್ಲಿಕನ್ನರೇ ಹೆಚ್ಚಿರುವ ಅಮೆರಿಕದ ಕಾಂಗ್ರೆಸ್ ಇದಕ್ಕೆ ತೋರುತ್ತಿರುವ ವಿರೋಧ. ಹವಾಮಾನ ಬದಲಾವಣೆಯ ವಿದ್ಯಮಾನದ ಕುರಿತು ಟ್ರಂಪ್ ಆಡಳಿತದ ಧೋರಣೆಯನ್ನು ನೋಡಿದರೆ ನಿಧಿಯ ಕೊಡುಗೆಯ ವಿಷಯದಲ್ಲಿ ಅಮೆರಿಕವು ತನ್ನ ಹೊಣೆಗಾರಿಕೆಯನ್ನು ನಿಭಾಯಿಸುವಂತೆ ತೋರುವುದಿಲ್ಲ.

ಹವಾಮಾನ ಬದಲಾವಣೆಯ ವಿದ್ಯಮಾನವನ್ನೇ ನಿರಾಕರಿಸುವ ವ್ಯಕ್ತಿ ವೈಟ್ ಹೌಸಿನಲ್ಲಿ ಕೂತಿರುವುದು ಜಗತ್ತಿಗೆ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಕೆಟ್ಟ ಸುದ್ದಿಯೆಂಬುದು ಹಲವು ರೀತಿಗಳಲ್ಲಿ ಅಭಿವ್ಯಕ್ತಗೊಳ್ಳುತ್ತಿದೆ.  ಮೊದಲಿಗೆ ಟ್ರಂಪ್ ಆಡಳಿತವು ಭೂಗರ್ಭ ಇಂಧನಗಳ ಬಳಕೆಯ ಹೆಚ್ಚಳವನ್ನು ಪ್ರೋತ್ಸಾಹಿಸುತ್ತದೆ. ಮತ್ತು ಆ ಮೂಲಕ ಎಲ್ಲಾ ಪರಿಸರ ಸಂಬಂಧೀ ನಿಯಂತ್ರಣಗಳಿಗೆ ಕವಡೆ ಕಿಮ್ಮತ್ತನ್ನೂ ಕೊಡುವುದಿಲ್ಲ.  ಹೀಗಾಗಿ ಪ್ಯಾರಿಸ್ ಒಪ್ಪಂದದಲ್ಲಿ ಅಮೆರಿಕವು GHG ಸೂಸಿಕೆಯ ನಿರ್ಬಂಧ ಪ್ರಮಾಣದ ಕುರಿತು ತನಗೇ ತಾನೇ ನಿಗದಿಪಡಿಸಿಕೊಂಡ ಮಟ್ಟವನ್ನು ಮುಟ್ಟುವುದಿಲ್ಲ. ಎರಡನೆಯದಾಗಿ, ಜಾಗತಿಕ ತಾಪಮಾನ ಏರಿಕೆಯಿಂದಾಗಿ ಪ್ರಾರಂಭಗೊಂದು ಈಗಾಗಲೇ ಮನೆಬಾಗಿಲನ್ನು ತಟ್ಟುತ್ತಿರುವ ಮಹಾನ್ ಪರಿಸರ ವಿಪತ್ತನ್ನು ತಡೆಯಲು ಜಾರಿಯಲ್ಲಿದ್ದ ಜಾಗತಿಕ ಪ್ರಯತ್ನಗಳಿಗೆ ಇದು ದೊಡ್ಡ ಹಿನ್ನೆಡೆಯನ್ನುಂತೂ ಮಾಡುತ್ತದೆ.

ಆಂಶಿಕವಾಗಿ ತಾನೂ ಕಾರಣವಾಗಿರುವ ಯುದ್ಧಗಳಿಂದ ಜರ್ಝರಿತವಾದ ದೇಶಗಳನ್ನು ತೊರೆದು ಆಶ್ರಯ ಕೋರಿ ಬರುತ್ತಿರುವ ಜನರಿಗೆ ಬಾಗಿಲು ಮುಚ್ಚಿ ವಾಪಸ್ ಅಟ್ಟುತ್ತಿರುವ ದೇಶವೇ, ಬಡದೇಶಗಳ ಕೋಟ್ಯಾಂತರ ಜನತೆಯನ್ನು ಪರಿಸರ ನಿರಾಶ್ರಿತರನ್ನಾಗಿಯೂ ಮಾಡುತ್ತಿರುವುದು ಎಂಥಾ ವಿಪರ್ಯಾಸ..

ಕೃಪೆ: Economic and Political Weekly
                                                                                                February 11, 2017, Vol 52, No. 6


No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...