Saturday, February 18, 2017

ಸಮ ಸಮಾಜಕ್ಕಾಗಿ ಸಂಘರ್ಷ

Image result for uma chakravarti


ಪ್ರೊ. ಉಮಾ ಚಕ್ರವರ್ತಿ

ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.

ನನಗೆ ಕನ್ನಡ ಮಾತನಾಡಲು ಬರುವುದಿಲ್ಲ. ಹಿಂದಿ ಭಾಷೆ ನಿಮ್ಮೆಲ್ಲರಿಗೂ ತಿಳಿಯುವುದರಿಂದ ಹಿಂದಿಯಲ್ಲಿ ಮಾತನಾಡುತ್ತೇನೆ. ಹಲವಾರು ವರ್ಷಗಳಿಂದ ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವುದುಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಸಮಾಜದಲ್ಲಿರುವ ತಾರತಮ್ಯಗಳನ್ನು ನಾವು ಒಪ್ಪುವುದಿಲ್ಲ ಹಾಗಾಗಿ ಸಮಾನತೆಯ ಸಮಾಜಕಟ್ಟಲು ಹೋರಾಡುತ್ತಿದ್ದೇವೆ. ಎಲ್ಲಿಯವರೆಗೆ ಸಮಾಜದಲ್ಲಿ ತಾರತಮ್ಯ ಕೊನೆಯಾಗಿ ಸಮಾನತೆ ಬರುವುದಿಲ್ಲವೋ, ಅಲ್ಲಿಯವರೆಗೂ ಬದಲಾವಣೆಗಾಗಿ ನಾವು ಮತ್ತು ಯುವಪೀಳಿಗೆಯವರು ಸೇರಿ ಹೋರಾಡಲೇಬೇಕಾಗಿದೆ.

ಸಮಾಜ ನಿರ್ಮಾಣವಾಗುವುದು ರಾಜಕೀಯ, ಆರ್ಥಿಕ ವ್ಯವಸ್ಥೆಯ ಆಧಾರದ ಮೇಲೆ. ಅದಕ್ಕನುಗುಣವಾಗಿ ರೀತಿನೀತಿಗಳು ನಿರ್ಮಾಣವಾಗುತ್ತವೆ. ರಾಜಕೀಯ, ಆರ್ಥಿಕ ವ್ಯವಸ್ಥೆ ಬದಲಾದಂತೆ ಈ ರೀತಿ ನೀತಿಗಳು ಬದಲಾಗುತ್ತವೆ. ನಾನು ಒಬ್ಬ ಇತಿಹಾಸಕಾರಳಾಗಿ ಈ ಬದಲಾವಣೆಯನ್ನು ಗುರುತಿಸುತ್ತೇನೆ. ನಾನು ಬೌದ್ಧಧರ್ಮವನ್ನು ಕುರಿತು ಸಂಶೋಧನೆ ಮಾಡಿದ್ದೇನೆ. ಕಾರಣ, ನಾನು ಚಿಕ್ಕ ವಯಸ್ಸಿನಲ್ಲಿರುವಾಗಲೇ ಅಂದರೆ ಹದಿನೈದು ವರ್ಷದವಳಾಗಿದ್ದಾಗ ಬೌದ್ಧಧರ್ಮದ ಬಗ್ಗೆ ನನಗೆ ಆಸಕ್ತಿ ಹುಟ್ಟಿತು. ಆಸಕ್ತಿಗೆ ಪ್ರೇರಣೆಯಾಗಿದ್ದು ೧೯೫೬ರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್‌ರವರು ಬೌದ್ಧಧರ್ಮ ಸ್ವೀಕರಿಸಿದ ಘಟನೆ. ಆ ಘಟನೆಯ ಬಗ್ಗೆ ಮೇಲ್ಜಾತಿಯ ಜನರು ಕುಪಿತರಾಗಿದ್ದರು. ಬಾಬಾಸಾಹೇಬರು ನಾನು ಯಾವ ಧರ್ಮದಲ್ಲಿ ಹುಟ್ಟಿದ್ದೇನೋ ಅದೇ ಧರ್ಮದಲ್ಲಿ ಸಾಯುವುದಿಲ್ಲ ಎಂದು ಘೋಷಿಸಿದ್ದರು. ಹಾಗಾಗಿ ಅವರು ಅಪಾರ ಹುಡುಕಾಟ ನಡೆಸಿ ನೈತಿಕ ದಾರಿಯಾಗಿದ್ದ ಬೌದ್ಧಧರ್ಮವನ್ನು ಸ್ವೀಕರಿಸಿದ್ದರು. ಈ ವಿಷಯ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿತ್ತು. ಆದ್ದರಿಂದಲೆ ನಾನು ಬೌದ್ಧಧರ್ಮದಲ್ಲಿ ಸಂಶೋಧನೆ ಮಾಡಿದೆ. ಎಂತಹ ವರ್ಗದ ಜನರನ್ನುಈ ಧರ್ಮ ಆಕರ್ಷಿಸಿತು ಮತ್ತು ಯಾವ ಶಸ್ತ್ರಾಸ್ತ್ರಗಳೂ ಇಲ್ಲದೆ ಚೈನ, ಕೊರಿಯಾ, ಜಪಾನ್‌ವರೆಗೂ ಹಬ್ಬಿತು ಎಂಬ ಬಗ್ಗೆ ನನಗೆ ಕುತೂಹಲವಿತ್ತು. ಜಾತಿ ವಿರೋಧಿ ಧ್ವನಿಯನ್ನು ಹುಡುಕುವುದು ನನ್ನ ಆಸಕ್ತಿಯಾಗಿತ್ತು. ಬೌದ್ಧ ಧರ್ಮವು ಒಂದು ಹೊಸ ಸಮಾಜದ ಕನಸನ್ನು ಹೊಂದಿತ್ತು. ಅಂದಿನ ಜಾತಿ ವ್ಯವಸ್ಥೆಯ ಸ್ವರೂಪ ಇಂದಿನಂತಿರಲಿಲ್ಲ. ಬುದ್ಧ ಹೆಚ್ಚಾಗಿ ವಾದ ಮಾಡಿರುವುದು ಬ್ರಾಹ್ಮಣಶಾಹಿಯೊಂದಿಗೆ. ಬ್ರಾಹ್ಮಣರು ಹುಟ್ಟಿನಿಂದಲೆ ಭಿನ್ನವಾಗಿದ್ದಾರೆ, ಬುದ್ದಿವಂತರಾಗಿದ್ದಾರೆ, ಉನ್ನತವಾಗಿದ್ದಾರೆ ಮತ್ತು ಉತ್ತಮರು ಎಂಬ ವಾದವನ್ನು ಬುದ್ಧ ನಿರಾಕರಿಸುತ್ತಿದ್ದನು.

ಜಾತಿ ಕುರಿತ ವಿಮರ್ಶೆ ೬ನೇ ಶತಮಾನದಿಂದಲೇ ಆರಂಭವಾಯಿತು ಎಂಬುದು ಬೌದ್ಧ ಇತಿಹಾಸದಲ್ಲಿ ಕಂಡುಬರುತ್ತದೆ. ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗ ಒಂದಿದ್ದರೆ ಮತ್ತೊಂದು ಆಳುವ ವರ್ಗವಾಗಿರುತ್ತದೆ. ತಾರತಮ್ಯವನ್ನು ಆಚರಿಸುವ ಜಾತಿ ವ್ಯವಸ್ಥೆಯನ್ನು ಯಾರೂ ಮಾನ್ಯ ಮಾಡುವುದಿಲ್ಲ. ತುಳಿತಕ್ಕೊಳಪಡುವುದನ್ನು, ತಾವು ಹೀನ, ಕೀಳು ಎಂದು ಭಾವಿಸುವುದನ್ನು ಸಮಾಜದಲ್ಲಿ ಯಾರೂ ಇಚ್ಛಿಸುವುದಿಲ್ಲ ಮತ್ತು ಒಪ್ಪಿಕೊಳ್ಳುವುದೂ ಇಲ್ಲ. ಅದನ್ನು ಅಧಿಕಾರದ ಬಲದಿಂದ ಜನರ ಮೇಲೆ ಹೇರಲಾಗಿದೆ, ಹಿಂಸೆಯ ಮೂಲಕ ಒಪ್ಪಿಸಲಾಗಿದೆ. ನಮ್ಮ ಸಮಾಜದಲ್ಲಿ ಅಧಿಕಾರ ಮತ್ತು ಬಲಪ್ರಯೋಗದಿಂದ ಅಮಾಯಕರನ್ನು ಹಿಂಸಿಸುವುದು ಕಾಲದಿಂದಲೂ ನಡೆದುಕೊಂಡೇ ಬಂದಿದೆ. ಜಾತಿಯ ವ್ಯವಸ್ಥೆಗೂ, ಪಿತೃಪ್ರಧಾನತೆಗೂ ಮತ್ತು ಲಿಂಗತಾರತಮ್ಯಕ್ಕೂ ಇರುವ ಸಂಬಂಧವನ್ನು ನಾನು ನನ್ನ ಸಂಶೋಧನಾ ಹುಡುಕಾಟದಲ್ಲಿ ಕಂಡುಕೊಂಡೆ. ಲಿಂಗತಾರತಮ್ಯಕ್ಕೆ ಜಾತೀಯತೆಯ ಮಾದರಿಯೇ ಕಾರಣವಾಗಿದೆ ಎಂಬುದನ್ನು ಸ್ತ್ರೀವಾದಿಗಳಾದ ನಾವು ಕಂಡುಕೊಂಡೆವು. ಜಾತಿ ಪ್ರಶ್ನೆಯನ್ನು ಪಿತೃಪ್ರಧಾನತೆಯ ಆಯಾಮದಲ್ಲಿ ಚರ್ಚೆ ಮಾಡಿದ್ದು, ಜಾತಿಕುರಿತ ಬೌದ್ಧಿಕ ಚರ್ಚೆಗೆ ನಾವು ಕೊಟ್ಟ ಬಹು ದೊಡ್ಡ ಕೊಡುಗೆಯಾಗಿದೆ.

ನಮ್ಮ ಸಮಾಜವು ಈಗಲೂ ಅಸಮಾನತೆಯಿಂದ ಕೂಡಿದೆ. ಎಲ್ಲಾ ಸಮಾಜಗಳಲ್ಲಿಯೂ ಮಹಿಳೆಯರ ಮೇಲೆ ಪಿತೃಪ್ರಧಾನತೆಯ ನಿಯಂತ್ರಣವಿತ್ತು. ಪಾಶ್ಚಿಮಾತ್ಯ ವರ್ಗಸಮಾಜವೂ ಇದಕ್ಕೆ ಹೊರತಾಗಿರಲ್ಲಿಲ್ಲ. ಈ ನಿಯಂತ್ರಣವು ಮಹಿಳೆಯರ ಪ್ರಜನನ ಸಾಮರ್ಥ್ಯದ ಮೇಲೆ ಹಿಡಿತ ಹೊಂದಿದೆ. ಪಿತೃಪ್ರಧಾನ ಸಮಾಜಕ್ಕೆ ಇಂತಹ ಹಿಡಿತ ಅವಶ್ಯಕವೂ ಆಗಿತ್ತು, ಹಾಗಾಗಿ ಜಾತಿ ಮತ್ತು ಲಿಂಗವನ್ನು ಒಂದುಗೂಡಿಸಿದ ರಚನೆಯನ್ನು ಮಾಡಿಕೊಳ್ಳಲಾಯಿತು. ಈ ರಚನೆಯು ಮಹಿಳೆಯರ ಮೇಲೆ ಅನೇಕ ಬಗೆಯ ನಿಯಂತ್ರಣಗಳನ್ನು ಸಾಧಿಸಿಕೊಳ್ಳಲು ಸಹಾಯಕವಾಯಿತು. ಈ ನಿಯಂತ್ರಣವು ಸಮಾಜದಲ್ಲಿ ಒಂದು ಮಾದರಿಯಾಗಿ ಬೆಳೆಯಿತು. ಬೆಳೆಯುತ್ತ ಮುಂದೆ ಜಾತಿ, ಲಿಂಗ, ವರ್ಗದ ಆಧಾರದ ಮೇಲೆ, ಸಂಪನ್ಮೂಲಗಳ ಮೇಲೆ ತನ್ನ ಹಿಡಿತ ಸಾಧಿಸಹತ್ತಿತು. ಜಾತಿವಾದಿ ಸಮಾಜದಲ್ಲಿ ಸಂಪನ್ಮೂಲಗಳು ಕೆಲವರ ಕೈಯಲ್ಲಿ ಮಾತ್ರ ಕ್ರೋಢೀಕರಣಗೊಂಡವು. ಯಾರ ಕೈಯಲ್ಲಿ ಸಂಪತ್ತಿನ ಒಡೆತನವಿತ್ತೊ ಅವರು ಅಧಿಕಾರ ಚಲಾಯಿಸುತ್ತಿದ್ದರು. ಯಾರು ಸಂಪತ್ತನ್ನು ಹೊಂದಿರಲಿಲ್ಲವೋ ಅವರು ಅಧಿಕಾರಸ್ಥರಿಗೆ ಅಧೀನರಾಗಿ ದುಡಿಯಬೇಕಾಗಿತ್ತು. ಹಾಗಾಗಿ ನಮ್ಮ ವರ್ಗ ಸಮಾಜದಲ್ಲಿ ಧ್ರುವೀಕರಣವಿದೆ. ಅಲ್ಲದೆ ಇದು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆದುಕೊಂಡು ಹೋಗುವಂತೆ ನಿರ್ದಿಷ್ಟ ಪಡಿಸಲಾಯಿತು. ಇದನ್ನು ಜಾತಿಯ ಹೆಸರಿನಲ್ಲಿ ಒಡೆತನ ಹೊಂದಿದವರು ಮುಂದುವರೆಸಿದರು. ಯಾವುದೇ ಅಧಿಕಾರವಾಗಲಿ, ಭೂಮಿಯ ಒಡೆತನವಾಗಲಿ ಇಲ್ಲದೆ ಭೂಮಿಯಲ್ಲಿ ದುಡಿಯಬೇಕಾದ ಜಾತಿಗಳಿಗೆ ಉತ್ಪಾದನಾ ಸಾಮಾಗ್ರಿಗಳ ಮೇಲೆ ಹಿಡಿತವಿರಲಿಲ್ಲ. ಅಧಿಕಾರ, ಭೂಮಿಯ ಒಡೆತನ, ಉತ್ಪಾದನಾ ಸಾಮಗ್ರಿಗಳ ಮೇಲಿನ ಹಿಡಿತ ಇಲ್ಲದವರು ಕೆಳವರ್ಗವಾಗಿ, ಕೆಳಜಾತಿಯಾಗಿ ಮೇಲ್ಜಾತಿಯ ಜನರ ಸೇವೆ ಮಾಡುವ ಗುಲಾಮರಾಗಿ, ದುಡಿಯುವ ವರ್ಗವಾಗಿ ಉಳಿಯುತ್ತವೆ. ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಿಕೊಂಡಂತಹ ಜಾತಿಯವರು ಒಡೆತನದ ಹಿನ್ನೆಲೆಯಲ್ಲಿ ರೂಪಿಸಿದ ನಿಯಮಗಳಿಗೆ ಸಂಪನ್ಮೂಲ ರಹಿತ ಜಾತಿಗಳು ಒಳಗಾಗುವಂತೆ ಮಾಡಲಾಯಿತು. ಸಂಪನ್ಮೂಲಗಳ ಮೇಲೆ ಹಿಡಿತ ಹೊಂದಿರುವವರು ನಿಯಮಗಳನ್ನು ರೂಪಿಸುಂತಹ ವ್ಯವಸ್ಥೆ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆದುಕೊಂಡು ಬಂದಿದೆ.

ಜಾತಿ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರವೂ ತುಂಬಾ ಮಹತ್ವದ್ದಾಗಿದೆ. ಮಹಿಳೆಯರು ತಮ್ಮ ಜಾತಿಗನುಗುಣವಾಗಿ ಮದುವೆಯಾಗಿ, ಮಕ್ಕಳನ್ನು ಮಾಡಿಕೊಳ್ಳುವ ನಿಯಮಗಳನ್ನು ಮಾಡಲಾಯಿತು. ಹೆಣ್ಣುಮಕ್ಕಳು ಜಾತಿ ಬಿಟ್ಟು ಮದುವೆಯಾಗುವುದು, ಕೆಳವರ್ಗದ ಜನರುತಮ್ಮ ಹಕ್ಕುಗಳಿಗಾಗಿ ಹೋರಾಡುವುದನ್ನು ಕಲಿಯುಗವೆಂದು ಕರೆಯಲಾಗುತ್ತದೆ. ಮಹಿಳೆಯರು ಮತ್ತು ಕೆಳವರ್ಗದ ಜನರು ತಮ್ಮ ಹಕ್ಕುಗಳಿಗಾಗಿ, ಸಮಸಮಾಜದ ನಿರ್ಮಾಣಕ್ಕಾಗಿ ಹೋರಾಡಲು ಸಿದ್ದರಾಗಿರುವ ಈ ಕಲಿಯುಗದಲ್ಲಿ ಅಂತಹ ಸಮಾಜ ನಿರ್ಮಾಣವಾದರೆ ಅಥವಾ ಅವರು ಪ್ರಬಲವಾಗಿ ಬೆಳೆದರೆ ಅದನ್ನು ಯಾವ ಧ್ವನಿಗಳು ವಿರೋಧಿಸುತ್ತವೆ ಎಂಬುದನ್ನು ಗಮನಿಸಬೇಕು. ಇಂತಹ ಕೆಳಜಾತಿಯ, ಮಹಿಳೆಯರ ಹೋರಾಟದ ಧ್ವನಿಗಳನ್ನು ಮುಖ್ಯವಾಹಿನಿಯ ವಿದ್ವಾಂಸರು, ಸಮಾಜ ಶಾಸ್ತ್ರಜ್ಞರು, ಚಿಂತಕರು, ಬರಹಗಾರರೆಲ್ಲರೂ ಗುರುತಿಸದೇ ಇರುವುದನ್ನು ನಾವು ಗಮನಿಸಬೇಕು. ನಾವು ಮಹಿಳಾವಾದಿಗಳು ಅಂತಹ ಧ್ವನಿಗಳನ್ನು ಎತ್ತಿಹಿಡಿಯಬೇಕು, ದಮನಿತರಿಗೆ ಧ್ವನಿ ನೀಡಬೇಕು. ನಮ್ಮ ಗ್ರಂಥಗಳಲ್ಲಿಯೂ ವಿರೋಧಿ ಧ್ವನಿಗಳಿವೆ, ಅವುಗಳನ್ನು ಗ್ರಂಥಗಳಲ್ಲಿಯೇ ಬಿಡಲಾಗಿದೆ.

ಒಂದು ವಿಷಯವನ್ನು ಕುರಿತಂತೆ ಸಂವಾದ ನಡೆಸುವ, ಯಾವುದೇ ವಿಷಯವನ್ನಾಗಲಿ ಚರ್ಚಿಸಿ ಅದಕ್ಕೆ ಎಲ್ಲರ ಸಮ್ಮತಿಯನ್ನು ಪಡೆಯುವ ಸಂಪ್ರದಾಯ ಬುದ್ಧನ ಕಾಲದಲ್ಲಿ ಇತ್ತು ಎಂಬುದನ್ನು ಬೌದ್ಧ ಗ್ರಂಥಗಳಲ್ಲಿ ಕಾಣಬಹುದು. ನಾನು ಬೌದ್ಧಧರ್ಮ ಕುರಿತು ಹೆಚ್ಚು ಓದಿರುವುದರಿಂದ, ತಿಳಿದುಕೊಂಡಿರುವುದರಿಂದ ಅಲ್ಲಿಯ ಉದಾಹರಣೆಗಳನ್ನೆ ತೆಗೆದುಕೊಳ್ಳುತ್ತೇನೆ. ಪ್ರಾಚೀನ ಕಾಲದಲ್ಲಿ ಸಮಾನತೆ ಇತ್ತೆಂದು ಹೇಳುವುದು ಅರ್ಥಹೀನ. ೬ನೇ ಶತಮಾನದಿಂದಲೇ ಮಹಿಳಾ ವಿರೋಧಿ ಧ್ವನಿಗಳು ಕೇಳಿಬಂದಿವೆ. ಹಾಗಾಗಿ ಮಹಿಳಾ ವಿರೋಧಿ ಧ್ವನಿ ಇವತ್ತಿನದಲ್ಲ ಅದಕ್ಕೆ ಪುರಾತನ ಇತಿಹಾಸವಿದೆ. ಈ ದಾಸ್ಯ ಪದ್ಧತಿ ಏಕಿದೆ? ಇದು ಏಕೆ ಭಿನ್ನವಾಗಿದೆ? ಎಂಬ ಪ್ರಶ್ನೆಗಳು ಮೊದಲಿನಿಂದಲೂ ಬಂದಿವೆ. ಮೈಲಿಗೆ ಮುಟ್ಟುವುದರಿಂದ ಮಾತ್ರ ಆಗುವುದಿಲ್ಲ. ಶೂದ್ರರು ತಮ್ಮನ್ನು ನೋಡಿದರು ಸಹ ಅಪವಿತ್ರರಾಗುತ್ತಾರೆಂದು ಬ್ರಾಹ್ಮಣರು ಭಾವಿಸುತ್ತಿದ್ದರು. ತಮ್ಮನ್ನು ತಾವು ಅತ್ಯಂತ ಜಾಣರೆಂದುಕೊಂಡ ಬ್ರಾಹ್ಮಣರು ಎಂತಹ ಮೂರ್ಖತನ ಮಾಡುತ್ತಾರೆಂದು ತಿಳಿಯಲು ಚಾಂಡಾಲನ ಕತೆಯನ್ನು ನೆನಪಿಸಿಕೊಳ್ಳಬಹುದು.

ಮತ್ತೊಂದು ಉದಾಹರಣೆಯನ್ನು ನೋಡಬಹುದು. ಒಬ್ಬ ದಾಸಿ ನೀರು ತುಂಬಲು ಬೆಳಗಿನ ಜಾವ ನದಿಗೆ ಹೋಗುತ್ತಿದ್ದಳು. ನದಿಯ ನೀರಿನಲ್ಲಿ ನಿತ್ಯವೂ ಒಬ್ಬ ಬ್ರಾಹ್ಮಣ ಮುಳುಗಿ ಸ್ನಾನ ಮಾಡುತ್ತಿದ್ದ. ಒಂದು ದಿನ ಆ ದಾಸಿ ಏಕೆ ಈ ಬೆಳಗಿನ ಥಂಡಿಯಲ್ಲಿ ದಿನವೂ ನದಿಯಲ್ಲಿ ಸ್ನಾನ ಮಾಡುತ್ತಿ ಎಂದು ಕೇಳಿದಳು. ಆಗ ಬ್ರಾಹ್ಮಣ ’ಪಾಪ ತೊಳೆದುಕೊಂಡು ಸ್ವರ್ಗಕ್ಕೆ ಹೋಗಲು’ ಎಂದು ಉತ್ತರಿಸಿದ. ಅದಕ್ಕವಳು ’ಓಹೋ, ಪಾಪ ಯಾವುದು, ಪುಣ್ಯ ಯಾವುದು, ಪಾಪವನ್ನಷ್ಟೇ ತೊಳೆಯಬೇಕು ಪುಣ್ಯವನ್ನಲ್ಲ ಎಂಬುದನ್ನು ತಿಳಿಯುವಷ್ಟು ಚಾಣಾಕ್ಷವಾಗಿದೆ ನೀರು! ಹಾಗಾದರೆ ನೀರಿನಲ್ಲಿರುವ ಕಡ್ಡಿ-ಕಸ, ಜಲಚರಗಳೆಲ್ಲವೂ ಸೀದಾ ಸ್ವರ್ಗಕ್ಕೆ ಹೋಗುವವರಲ್ಲವೇ?’ ಎಂದು ಕೇಳುತ್ತಾಳೆ.

ಆ ದಾಸಿಗೆ ಯಾರೂ ಏನನ್ನೂ ಹೇಳಿಕೊಟ್ಟಿರಲಿಲ್ಲ, ಅವಳೊಳಗಿನ ಸಾಮಾನ್ಯಜ್ಞಾನದಿಂದಲೇ ಪ್ರಶ್ನೆ ಮಾಡಿದ್ದಳು. ಅಂತಹ ಸಾಮಾನ್ಯಜ್ಞಾನ ನಮಗೆ ಸಿಕ್ಕ ಕೊಡುಗೆಯಾಗಿದೆ. ಜನ ಹೇಳುವುದನ್ನೆಲ್ಲ ನಾವು ಒಪ್ಪಬೇಕಾಗಿಲ್ಲ. ನಮಗೆ ಒಪ್ಪಿಗೆಯಾದರೆ ಮಾತ್ರ ಸ್ವೀಕರಿಸಬೇಕು. ನಾವೇ ಸ್ವಂತವಾಗಿ ಯೋಚಿಸುವ ಅಗತ್ಯವಿದೆ. ನಾನು ಹಿಂದೊಮ್ಮೆ ಸೂಫಿಗಳ ಕುರಿತು ಉಪನ್ಯಾಸ ನೀಡಿದ್ದೆ. ೧೪ನೇ, ೧೮ನೇ ಮತ್ತು ೨೦ನೇ ಶತಮಾನಗಳಲ್ಲಿ ಸಂತರು ಮತ್ತು ಸೂಫಿಗಳು ಸಾಮಾನ್ಯಜನರಲ್ಲಿನ ತಿಳುವಳಿಕೆ/ಜ್ಞಾನವನ್ನು ಬಳಸಿಕೊಂಡೇ ಬದಲಾವಣೆಯ ಬಗ್ಗೆ ಮಾತನಾಡಿದರು. ಜಾತಿತಾರತಮ್ಯವನ್ನು ಟೀಕೆ ಮಾಡಿದರು. ೧೨ ನೇ ಶತಮಾನದಲ್ಲಿಯೂ ಅಕ್ಕಮಹಾದೇವಿ ಮತ್ತು ಇತರ ಶರಣರು ಜಾತಿ, ಲಿಂಗ ತಾರತಮ್ಯವನ್ನು ಕಟುವಾಗಿ ಟೀಕಿಸಿದರು. ಹಾಲನ್ನು ಶುದ್ಧವೆನ್ನುತ್ತೇವೆ, ಕೆಲವು ಆಹಾರವನ್ನು ಶುದ್ಧವೆನ್ನುತ್ತೇವೆ, ಕೆಲವು ಆಹಾರವನ್ನು ಅಶುದ್ಧವೆನ್ನುತ್ತೇವೆ. ಜಾತಿಆಧಾರದ ಮೇಲೆ ಕೆಲವು ಆಹಾರಕ್ಕೆ ಅಶುದ್ಧತೆಯನ್ನು ತಗುಲಿಸಲಾಗಿದೆ. ಪಿತೃ ಪ್ರಧಾನತೆಯೂ ಸಹ ಲಿಂಗಾಧಾರಿತ ಶ್ರಮವಿಭಜನೆಯನ್ನು ಮಾಡಿ ಮಹಿಳೆಯರು ಮನೆಯೊಳಗೆ ಕೆಲಸ ಮಾಡಬೇಕು ಪುರುಷರು ಹೊರಗೆಕೆಲಸ ಮಾಡಬೇಕೆಂದು ನಿರ್ಬಂಧ ಹೇರಿತು. ಇದನ್ನು ವಿರೋಧಿಸುವ ಆಂದೋಲನ ಬುದ್ಧನ ಕಾಲದಿಂದಲೇ ಆರಂಭವಾಯಿತು.

ನಾಲ್ಕು ಗೋಡೆಗಳ ನಡುವೆ ಮಹಿಳೆಯರ ಧ್ವನಿಯನ್ನು ಬಂಧಿಸಬೇಡಿ, ಗಂಡಸರಿಂದಲೂ, ಕುಟುಂಬದಿಂದಲೂ ನಮಗೆ ಬಿಡುಗಡೆ ಬೇಕು ಎಂದು ಮಹಿಳೆಯರು ಬಹಳ ಹಿಂದಿನಿಂದಲೇ ಹೋರಾಟ ಆರಂಭಿಸಿದರು. ಒಂದು ಕತೆ ಇದೆ. ಒಬ್ಬ ಮಹಿಳೆ ಮರದ ಕೆಳಗೆ ಕೂತು ಧ್ಯಾನ ಮಾಡುತ್ತಿದ್ದಳು. ಮಾರಾ ಒಬ್ಬ ಪುರುಷನ ರೂಪದಲ್ಲಿ ಬಂದು ಅವಳನ್ನು ನೋಡಿ ’ಈ ಧ್ಯಾನವೆಲ್ಲಾ ನಿನಗೇಕೆ ಬೇಕು? ತುಂಬಾ ಬುದ್ದಿವಂತರು ಮಾಡುವ ಕೆಲಸವಿದು ನೀನೇಕೆ ಮಾಡಬೇಕು? ಅನ್ನದ ಅಗಳು ಬೆಂದಿದೆಯೋ ಅಥವಾ ಇಲ್ಲವೋ ಎಂದು ನೋಡಲು ಎರಡು ಬೆರಳಷ್ಟು ಜ್ಞಾನ ಸಾಕು’ಎಂದು ಕೇಳಿದನು. ಆಗ ಆಕೆ ’ನನಗೆ ಎರಡು ಬೆರಳಿನಷ್ಟು ಜ್ಞಾನ ಬೇಡ. ಆಕಾಶವನ್ನು ಹಿಡಿಯುವಷ್ಟು, ಮುಕ್ತಿ ಪಡೆಯುವ ಜ್ಞಾನಬೇಕು’ ಎಂದು ಅಡುಗೆ ಮನೆಯಲ್ಲಿರು ಎಂದು ಹೇಳಿದ ಪುರುಷನಿಗೆ ಉತ್ತರ ನೀಡಿದಳು. ನಾವು ಪಡೆಯಬೇಕೆಂದಿರುವ ಸ್ವಾತಂತ್ರ್ಯವೆಂದರೆ, ಜಾತೀಯತೆಯಿಂದ ಸ್ವಾತಂತ್ರ್ಯ, ಲಿಂಗ ತಾರತಮ್ಯದಿಂದ ಸ್ಯಾತಂತ್ರ್ಯ, ಯೋಚಿಸುವ ಸ್ವಾತಂತ್ರ್ಯ ನಮಗೆ ಬೇಕು, ಪ್ರಶ್ನಿಸುವ ಸ್ವಾತಂತ್ರ್ಯ ಬೇಕು.

ಈ ರೀತಿಯ ಬಿಡುಗಡೆಯ ಹೋರಾಟವನ್ನು ಮಹಿಳೆ ತುಂಬಾ ಸಮಯದಿಂದ ಮಾಡುತ್ತಾ ಬರುತ್ತಿದ್ದಾಳೆ. ಈ ಜಾತಿ, ವರ್ಗ, ಧರ್ಮ ಮತ್ತು ಪಿತೃಪ್ರಧಾನತೆಯ ಬಂಧನಗಳಿಂದ ಮುಕ್ತಿ ಪಡೆಯಲು ಬಿಡುಗಡೆಯ ದಾರಿಯನ್ನು ಹುಡುಕುತ್ತಿದ್ದಾಳೆ. ಆದರೆ ಈ ಸಂಘರ್ಷವಿನ್ನೂ ಕೊನೆಗೊಂಡಿಲ್ಲ. ಸಾವಿತ್ರಿ ಬಾ ಫುಲೆಯವರು ಒಬ್ಬ ಅಪಾರ ತಿಳುವಳಿಕೆಯುಳ್ಳ ಮಹಿಳೆಯಾಗಿದ್ದರು. ಇವರು ಹೆಣ್ಣು ಮಕ್ಕಳಿಗಾಗಿ ಮೊಟ್ಟಮೊದಲ ಶಾಲೆಯನ್ನು ಪ್ರಾರಂಭಿಸಿದರು. ಮಹಿಳೆಯರಿಗೆ ಶಿಕ್ಷಣ ಕೊಡುವುದರ ಮೂಲಕ ಅವರ ವೈಚಾರಿಕ ಪ್ರಜ್ಞೆಯನ್ನು ಬೆಳೆಸಲು ಹೋರಾಡಿದರು. ಜ್ಯೋತಿ ಬಾ ಫುಲೆಯವರು ಶಿಕ್ಷಣವನ್ನು ಮೂರನೇಕಣ್ಣು ಎಂದು ಹೇಳುತ್ತಿದ್ದರು. ವಿವೇಚನೆಯ ಕಣ್ಣನ್ನು ನಾವು ತೆರೆಯಬೇಕಾಗಿದೆ. ಶಿಕ್ಷಣವೆಂದರೆ ಅಕ್ಷರಜ್ಞಾನವಲ್ಲ, ಅದು ವಿವೇಚನಾ ಶಕ್ತಿಯನ್ನು ಬೆಳೆಸುವಂತದ್ದಾಗಬೇಕು. ಮೂರನೆ ಕಣ್ಣು ಎಂದರೆ ಬೌದ್ಧಿಕ ಶಕ್ತಿ. ವಿಶ್ವವಿದ್ಯಾಲಯದ ವೇದಿಕೆಯಿಂದ ಮಾತನಾಡುತ್ತಿದ್ದೇನೆ. ಇಂಥ ವೇದಿಕೆ ನಮಗೆ ಬಿಡುಗಡೆಯ ಹಾದಿಯನ್ನು ಹುಡುಕಲು ಬೇಕಾದ ವೈಚಾರಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೌದ್ಧಿಕ ಶಕ್ತಿಯನ್ನು ಬೆಳೆಸಲು ಮುಕ್ತವಾದ ವೇದಿಕೆ ಬೇಕು. ನಮ್ಮ ತಿಳುವಳಿಕೆಯನ್ನು ಬೆಳಸಿಕೊಳ್ಳಲು ಚರ್ಚೆ, ಸಂವಾದ, ವಿಮರ್ಶೆ ಬೇಕು. ಆದ್ದರಿಂದಲೇ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ, ಜವಹಾರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ, ಅಲಹಾಬಾದ್ ವಿಶ್ವವಿದ್ಯಾಲಯಗಳಲ್ಲಿ ಕೋಲಾಹಲ ಹುಟ್ಟಿಕೊಂಡಿದೆ. ಸಮಾನತೆಯ ಸಮಾಜ ಕಟ್ಟಬೇಕಾಗಿದೆ. ಜಾತಿವಾದ, ಪಿತೃಪ್ರಧಾನತೆ, ಅಧಿಕಾರಶಾಹಿ ಇಲ್ಲದ ಸಮಾಜಕ್ಕಾಗಿ ನಾವು ಸಂಘರ್ಷಮಾಡಬೇಕಿದೆ. ಎಲ್ಲದಮನಿತರನ್ನು ಮುಕ್ತಗೊಳಿಸಬೇಕು. ಅದಕ್ಕಾಗಿ ಒಂದುಗೂಡಿ ಮನ್ನಡೆಯಬೇಕಾಗಿದೆ. ಮಹಿಳಾ ದಿನಾಚರಣೆ ಪುರುಷಪ್ರಾಧಾನ್ಯತೆಯನ್ನಷ್ಟೇ ಅಲ್ಲ, ಎಲ್ಲಾ ಅಸಮಾನತೆಗಳನ್ನು ವಿರೋಧಿಸುತ್ತದೆ. ಆಗಲೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥಬರುವುದು.

ಕನ್ಹಯ್ಯಾನ ತಾಯಿ ಒಬ್ಬ ಅಂಗನವಾಡಿ ಕಾರ್ಯಕರ್ತೆ. ಆಕೆಯೂ ಹೋರಾಟ ಮಾಡುತ್ತಿದ್ದಾಳೆ, ಹೇಗಾದರೂ ಹೊಸ ಜೀವನಕ್ಕಾಗಿ, ಹೊಸ ಅವಕಾಶಕ್ಕಾಗಿ. ನಮ್ಮೆಲ್ಲರ ಹೋರಾಟ ನಾಳಿನ ಸಮಾಜವನ್ನು ಹೇಗೆ ಕಟ್ಟಬೇಕು, ಆ ಸಮಾಜದಲ್ಲಿ ನಾವು ತಲೆಎತ್ತಿ ಬದುಕುಬೇಕು ಎಂಬುದು. ಅದಕ್ಕಾಗಿ ನಾವೆಲ್ಲರೂ ಒಗ್ಗೂಡಿ ಸಂಘರ್ಷ ಮಾಡಬೇಕಾಗಿದೆ. ಇಂಥ ಭರವಸೆ, ಆಕಾಂಕ್ಷೆಯೊಂದಿಗೆ, ಸ್ತ್ರೀವಾದಿ ನೋಟ/ ದರ್ಶನದೊಂದಿಗೆ ಮುಂದೆ ಹೋಗೋಣ. ಆಗಲೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥಬರುವುದು ಎಂದು ಹೇಳಿ ನನ್ನ ಮಾತು ಮುಗಿಸುತ್ತೇನೆ.

(ಹಿಂದಿ ಭಾಷಣದ ಕನ್ನಡ ಬರಹ ರೂಪ: ಹಮೀದಾ ಬಾನು, ಅಥಣಿ)

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...