Sunday, February 19, 2017

ಮೊದಲ ಪ್ರೀತಿ

ರುಕ್ಮಿಣಿ ಎನ್


ಯಾರನ್ನೂ ಕಣ್ಣೆತ್ತಿ ನೋಡದ ಹುಡುಗಿ ನಾನು. ಅದು ಹ್ಯಾಗ ಬಂದೆಯೊ ಹುಡುಗ ನನ್ನ ಕಣ್ಣೆದುರಿಗೆನೆ. ನಿನ್ನನ್ನ ನೋಡಿದ ಕ್ಷಣದಿಂದ ಹಿಡಿಗಾತ್ರದ ನನ್ನ ಹೃದಯವನ್ನೆಲ್ಲ ನೀನೆ ಆಕ್ರಮಿಸಿ ಬಿಡುವುದಾ? ಹ್ಮ.. ಆಗಿನಿಂದ ಶುರುವಾಯಿಗಿದ್ದು ನನಗೆ ಕುಂತ್ರು ನಿಂತ್ರು ನಿಂದೆ ಧ್ಯಾನ. ನಾನು ನೀನು ಒಂದೇ ಬಸ್ಸಿನಿಂದ ಕಾಲೇಜಿಗೆ ಹೋಗುತ್ತಿದ್ವಿ. ಉಸಿರುಗಟ್ಟಿಸುವಷ್ಟು ರಶ್ ಇರುವ ಬಸ್ಸಿಗೆ ನಾನು ಒಗ್ಗಿಕೊಳ್ಳಲೇ ಬೇಕಿತ್ತು. ಯಾಕೆ ಗೊತ್ತಾ? ನೀ ಅದೇ ಬಸ್ನಲ್ಲಿ ಅಲ್ವೆನೋ ಬರ್ತಿದ್ದು.. ನೀ ಯಾವಾಗಲೂ ಆ ಬಸ್ಸಿನ ಬಾಗಿಲಿಗೆ ಜೋತು ಬಿದ್ದು ಬರ್ತಾ ಇದ್ದೆ. ಒಂದೊಂದು ಸಾರಿ  ನಿನ್ನ ಆ ಸ್ಥಿತಿ ನೋಡಲು ಆಗ್ತಾನೆ ಇರ್ಲಿಲ್ಲ. ಅಷ್ಟೊಂದು ಭೀಡಿರುವ ಜನಗಳ ಗದ್ದಲದಲ್ಲಿ ನೀನು ಬಿದ್ದುಬಿಟ್ಟರೆ? ಅಂತ ಆಗಾಗ ಈ ಹೆಣ್ಣೆದೆ ಢವ ಢವ ಎಂದು ಜೋರಾಗಿ ಹೊಡೆದುಕೊಳ್ತ ಇತ್ತು. ಅದಕ್ಕೇನೇ ಕಣೋ ಆ ನಿನ್ನ ಮುದ್ದಾದ ಮುಖ ಕಾಣುವಂತೆ ನಾನು ಕಿಟಕಿಗಳಿಗೆ ನೇರವಾಗಿ ನಿಲ್ಲುತ್ತಿದ್ದೆ. ಒಂದು ಕ್ಷಣ ಕೂಡ ನಿನ್ನನ್ನ ಕಾಣದೇ ಇದ್ರೆ  ಅದೆಷ್ಟು ತಳಮಳ!

ನಾನು ಕಾಲೇಜಿನಲ್ಲಿ ಯಾವಾಗಲೂ ಫಸ್ಟ್ ಬೆಂಚಿನಲ್ಲಿ ಕೂಡುತ್ತಿದ್ದೆ. ನೀನೋ.. ಲಾಸ್ಟ್ ಬೆಂಚರ್. ನಿನ್ನ ನೋಡಬೇಕು ಅನ್ಸಿದಾಗಲೆಲ್ಲ ಅದೇನೇನೋ ನೆಪ ಹುಡುಕಿ ನಿನ್ನ ಕಡೆಗೆ ಬರುತ್ತಿದ್ದೆ. ಒಂದು ಸಾರಿ ನಿನ್ನ ನೋಡೋಕೆ ಅಂತಾನೆ ನೀನಿರುವ ಕಡೆ ಬಂದಾಗ ಅಚಾನಕ್ಕಾಗಿ ನಿನ್ನ ಕೈ ನನ್ನ ಕೈಗೆ ತಾಕಿತ್ತು. ಎದೆಯಲ್ಲಿ ಮಿಂಚಿನ ವೇಗವೊಂದು ಸುಂಯೆಂದು ಹರಿದ ಅನುಭವ. ಲಬ್ ಡಬ್ ಎದೆಬಡಿತ ಪಕ್ಕದಲ್ಲಿರೋರಿಗೂ ಕೇಳಿಸಿರಬೇಕು. ಅಷ್ಟು ಜೋರಾಗಿ ಹೊಡೆದುಕೊಳ್ತ ಇತ್ತು. ಕೆಲವೊಮ್ಮೆ ನಿನ್ನನ್ನೇ ಹುಡುಕುತ್ತಿದ್ದ ನನ್ನ ಕಣ್ಣುಗಳಿಗೆ ಆಗಾಗ ನಿನ್ನ ಕಣ್ಣುಗಳು ನೇರವಾಗಿ ಕೂಡುವಾಗ ಸಿಕ್ಕಹಾಕೊಂಡೇನಾ? ಥತ್ತೇರಿ? ನಾಲಿಗೆ ಕಚ್ಚಿದವಳೇ ತಡ ನನ್ನ ಕಣ್ಣೆವೆಗಳು ನೆಲ ನೋಡುತ್ತಿದ್ದವು. ನಿನಗಾಗ ಈ ಪ್ರೀತಿ ಪ್ರೇಮದ ಘಮಲು ಹಿಡಿದಿರಲೇ ಇಲ್ಲ ಬಿಡು. ನೀನು, ನಿನ್ನ ಗೆಳೆಯರು ನಿನ್ನ ಪ್ರಪಂಚವೇ ಬೇರೆ ಇತ್ತು. ನೀನು ನಿನ್ನದೇ ಆದ ಹುಡುಗರ ಗ್ಯಾಂಗನಲ್ಲಿ ಬಾದಶಹ.
ಒಂದು ಕ್ಲಾಸ್ ಮುಗೀತು ಅಂತ ಅಂದ್ರೆ ಸಾಕು, ಗೆಳೆಯರೊಡನೆ ಹೊರನಡೆದು ಬೊಬ್ಬೆ ಹೊಡೆಯುವ ಚಾಳಿ ನಿನಗೆ. ಆವಾಗೆಲ್ಲ ಮನಸಲ್ಲಿ ಅದೆಷ್ಟು ಹಳಿತಿರ್ಲಿಲ್ಲ ನಾನು. ಕಣ್ಣೆದುರು ನೀನು ಇಲ್ವಲ್ಲ ಅಂತ ಕೋಪ ಬರ್ತಿತ್ತು. ಆ ಕೋಪ ನಿಂಗಷ್ಟೆ ಮೀಸಲು. ಹೋದರೇನು ಹುಡುಗ. ಆ ದೊಡ್ಡದಾದ ಕಿಟಕಿಯಲ್ಲಿ ನಿನ್ನ ತುಂಟತನ ಯಾವ ಕಷ್ಟವಿಲ್ಲದೆಯೂ ನನಗೆ ಕಾಣ ಸಿಗುತ್ತಿತ್ತು. ಅದೇನ್ ಹುಡುಗ್ರಪ್ಪ ನೀವು? ಅದೇನ್ ಮಾತಾಡ್ತಿದ್ರಿ ಅಷ್ಟೊಂದು? ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ರಲ್ಲ. ಕೆಲವು ಸಂಭಾಷಣೆಗಳನ್ನ ನಾನು ಕೇಳಿಸ್ಕೊಂಡು ಅದೆಷ್ಟು ಬಾರಿ ಒಳಗೊಳಗೆ ಮುಸಿ ಮುಸಿ ನಕ್ಕಿದ್ದಿದೆ.
ನಿನ್ನ ಮುಖ ನೋಡಿದಾಗಲೆಲ್ಲ ಹೂಮನಸು ಅರಳಿ ನಿಲ್ಲೋದು.. ನೀ ನಗುವಾಗಲೆಲ್ಲಾ ಕವಳಿಯಂತಹÀ ಕಣ್ಣುಗಳು ಇನ್ನಷ್ಟು ಹಿಗ್ಗಿ ನೀನು ಮತ್ತಷ್ಟು ಮುದ್ದಾಗಿ ಕಾಣುತ್ತಿದ್ದೆ. ಅದನ್ನ ನೋಡೋದೆ ಸೊಗಸು! ಎಲ್ಲೂ ಕಾಣದ ಬೆವರು, ಕುಡಿಮೀಸೆಗಳ ಮಧ್ಯವೇ ಸೂರ್ಯರಶ್ಮಿಗೆ ವಜ್ರದ ಹರಳಂತೆ ಫಳಫಳ ಹೊಳೆಯುವುದು. ನೀನು ನಗೋವಾಗಲೆಲ್ಲ ಎಡಗಲ್ಲದ ಮೇಲೆ ಡಿಂಪಲ್ ಬೀಳೋದು. ನನ್ನ ಕಿರುಬೆರಳನ್ನು ನಿನ್ನ ಗಲ್ಲದ ಮೇಲೆ ಹೊರಳಾಡಿಸಬೇಕು ಅನಿಸೋದು. ಆಗೆಲ್ಲ ನಿನ್ನೊಟ್ಟಿಗೆ ಕಲ್ಪನಾ ಲೋಕಕ್ಕೆ ಜಾರಿದ್ದೂ ಇದೆ.

4 ಘಂಟೆಯವರೆಗೂ ಕ್ಲಾಸ್ ಇರೋದು. ನೀನು 2 ಘಂಟೆಯವರೆಗೂ ಮಾತ್ರ ಕ್ಲಾಸ್ ಅಟೆಂಡ್ ಮಾಡ್ತಿದ್ದೆ. ನೀನಿಲ್ಲದ ಉಳಿದೆರಡು ಕ್ಲಾಸ್ ಅದೆಷ್ಟ್ ಬೋರ್ ಹೊಡಿಯೋದು. ಮಧ್ಯಾಹ್ನ ನನ್ನ ಮುಖ ಆಲ್‍ಮೋಸ್ಟ್ ಬಾಡಿಯೇ ಹೋಗೋದು. ಕೆಲವೊಮ್ಮೆ ಅಪ್ಪಿ ತಪ್ಪಿ ನೀನು ಕಾಲೇಜಿಗೆ ಬರದೇ ಇದ್ದಾಗ ಕ್ಲಾಸ್ ಎಲ್ಲ ಖಾಲಿ ಖಾಲಿ ಅನಿಸಿದ್ದೂ ಇದೆ. ನಿನ್ನನ್ನು ಇಷ್ಟೊಂದು ಹಚ್ಚಿಕೊಂಡೆನಾ? ನನಗೆ ಆಶ್ಚರ್ಯ ಅನಿಸೋದು.
ನನ್ನ ಕಂಗಳ ತುಂಬ, ನೆನಪುಗಳ ತುಂಬ, ಮನಸಿನ ತುಂಬಾ ನೀನೇ ಇದ್ದೆಯೊ. ಅದ್ಯಾವಾಗ ನಿನ್ನ ಪ್ರೀತ್ಸೋಕೆ ಶುರುವಿಟ್ಟೆನೊ ನನ್ನರಿವಿಗೆ ಇಂದೂ ಬಂದಿಲ್ಲ. ಆದ್ರೆ ಆ ಎರಡು ವರುಷಗಳಿಂದ ನನ್ನ ದಿನಚರಿ ನಿನ್ನಿಂದ ಶುರುವಾಗಿ ನಿನ್ನಿಂದಲೇ ಕೊನೆಗೊಳ್ಳುತ್ತಿತ್ತು. ನನ್ನುಸಿರಿಗೆ ನಿನ್ನೆಸರೇ ಬೆರೆಯಿತು. ಎರಡು ವರುಷ ಅದ್ ಹ್ಯಾಗ್ ಕಳೆಯಿತೋ ಗೊತ್ತಾಗ್ಲೆ ಇಲ್ಲ. ಇನ್ನು ಮುಂದೆ ನೀನೆಲ್ಲೋ ನಾನೆಲ್ಲೋ.. ಇನ್ನು ನಿನ್ನ ನೋಡದೆ ಹೇಗಿರಲಿ ಅನ್ನೋ ಚಿಂತೆ. ಆಟೋಗ್ರಾಫ್‍ನಲ್ಲಿ ನಿನ್ನ ಸೆಲ್ ನಂಬರ್ ಮೆನಷನ್ ಮಾಡಿದ್ದೀಯ. ಥ್ಯಾಂಕ್ಸ್ ಕಣೋ. ಆಗಾಗ ಕಾಲ್ ಮಾಡಿ ಅಟ್ ಲೀಸ್ಟ್ ನಿನ್ನ ಧ್ವನಿ ಕೇಳುವ ಭಾಗ್ಯವಾದರೂ ನನಗೆ ದೊರಕಿತಲ್ಲ. ಐ ಆಡ್‍ಮೈರ್ ಯೂ ಅಂತ ಇದ್ದಲ್ಲಿ ಐ ಲೈಕ್ ಯುವರ್ ನೇಚರ್ ಬಿಕಾಸ್ ಯೂ ಆರ್ ಸೊ ಸ್ವೀಟ್ ಅಂಡ್ ಕ್ಯೂಟ್ ಅಂತ ಬರೆದಿದ್ದೀಯ. ಓದಿ, ಇಡೀ ದಿನ ಜಂಪ್ ಮಾಡಿ ಕುಣಿದು ಸಂಭ್ರಮಿಸಿದೆ ಕಣೋ.

ಪಾಪದ ಹುಡುಗ ನೀನು! ನನ್ನ ಪ್ರೀತಿ ಕುರಿತು ಒಂಚೂರು ನಿನಗರಿವಿರಲಿಲ್ಲ. ನಿನಗರಿವಿಲ್ಲದೆಯೇ ನೀ ನನ್ನ ಅದೆಷ್ಟು ಖುಷಿಯಾಗಿಡುತ್ತಿದ್ದೆ. ಎರಡು ವರುಷಗಳ ಪ್ರತಿ ಘಳಿಗೆಗಳು ನನ್ನಲ್ಲಿ ಸುರಿಸಿದ ಒಲವ ಮಳೆ ಅಷ್ಟಿಷ್ಟಲ್ಲ. ದಿನವೂ ನಾ ಒಲವ ಮಳೆಯಲಿ ಮಿಂದು ಹೋದವಳು  ಕಣೋ. ಗುಪ್ತವಾಗಿ ಪ್ರಾಣದಂತೆ ನಿನ್ನನ್ನು ಪ್ರೀತಿಸಿದೆ. ಆದರೆ ಅದೇಕೋ ನನ್ನ ಪ್ರೀತಿಯನ್ನು ಹೇಳಿಕೊಳ್ಳಲು ಹಿಂಜರಿದು ಬಿಟ್ಟೆ. ಒಂದು ವೇಳೆ ನಿನಗೆ ನನ್ನ ಮೇಲೆ ಪ್ರೀತಿ ಇರದೆ ಹೋದರೆ? ಆ ಆತಂಕ ಬೇಡವೆಂದು. ಹೇಳಿಕೊಳ್ಳದಿದ್ದರೇನು ಹುಡುಗ, ಸ್ಡೀಟ್ ಸಿಕ್ಸಟೀನಿನ ನನ್ನ ಮೊದಲ ಪ್ರೀತಿ ಯಾವತ್ತೂ ಹಸಿರು.


2 comments:

  1. ನೆನಪುಗಳೇ ಹಾಗೆ, ಓದಿ ಖುಷಿ ಆಯಿತು. ಓದುಗರ ನೆನಪುಗಳ ಮೇಲೂ ಲಗ್ಗೆ ಹಾಕುವ ಶೈಲಿ ಅನನ್ಯ.

    ReplyDelete

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...