Friday, February 17, 2017

ವಿಜಯಪುರದ ಜೀವಪರ ಮಹಿಳಾ ಪರಂಪರೆ


Image result for du saraswathi kannada poet

-ದು. ಸರಸ್ವತಿಕಾಖಂಡಕಿ ಕೆಂಚಮ್ಮನೆಂಬ ಹೆಣ್ಣುಮಗಳು ದೇವದಾಸಿಯಾಗಿದ್ದಳು. ಬಬಲೇಶ್ವರದ ಸ್ವಾಮಿಯೊಬ್ಬರಿಂದ ದೀಕ್ಷೆ ಪಡೆದುಕೊಂಡು ತಾನು ಸಂಪಾದಿಸಿದ ಸಂಪತ್ತನ್ನೆಲ್ಲಾ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮೀಸಲಿಟ್ಟಳು. ಆಕೆ ತಾನು ಭಾಗವಹಿಸುತ್ತಿದ್ದ ಮದುವೆಯಲ್ಲಿ ಅದೆಷ್ಟು ದಾರಾಳವಾಗಿ ಹಣವನ್ನು ಉಡುಗೊರೆಯಾಗಿ ನೀಡುತ್ತಿದ್ದಳೆಂದರೆ ಅಷ್ಟು ಮೊತ್ತವನ್ನು ಕೊಡಲು ಮನಸ್ಸಿಲ್ಲದ ಶ್ರೀಮಂತರು ಅವಳು ಹೋಗುತ್ತಿದ್ದ ಮದುವೆಗಳಿಗೆ ಹೋಗುತ್ತಿರಲಿಲ್ಲವೆಂಬ ಕತೆಗಳಿವೆ.

ಇಟಗಿ ಭೀಮವ್ವ ಕಡುಬಡತನದ ಮನೆಯ ಹೆಣ್ಣುಮಗಳು. ಸಣ್ಣವಯಸ್ಸಿನಲ್ಲೇ ಆಕೆಯ ತಂದೆ ತೀರಿಹೋದಾಗ ಏನೂ ಅರಿಯದ ಭೀಮವ್ವ ಮತ್ತು ಅವಳ ತಾಯಿಯನ್ನು ಸಂಬಂಧಿಕರು ವಂಚಿಸಿ ಆಸ್ತಿಯನ್ನು ಕಿತ್ತುಕೊಂಡರು. ಸಾಕುವ ಶಕ್ತಿಯೂ ಇಲ್ಲದಂತಾದಾಗ ಅವಳ ತಾಯಿಯು ಮಗಳನ್ನು ಮಠದ ಶರಣರಿಗೆ ಒಪ್ಪಿಸುತ್ತಾಳೆ. ಅಲ್ಲಿ ಆಕೆ ದೀಕ್ಷೆ ಪಡೆದುಕೊಂಡು ಶಿವಶರಣೆಯಾಗುತ್ತಾಳೆ. ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾಳೆ. ಸ್ಥಳೀಯರಿಗೆ ನೂಲುವುದನ್ನು ಕಲಿಸುತ್ತಾಳೆ. ದೇಸಿ ವೈದ್ಯ ಮಾಡಿ ಕಾಯಿಲೆಗಳನ್ನು ವಾಸಿ ಮಾಡುತ್ತಾಳೆ. ಕಣ್ಣಿಲ್ಲದವರಿಗೆ ಕಣ್ಣು ಬರಿಸಿದಳೆಂಬ ಪ್ರತೀತಿಯೂ ಇದೆ. ಆಳವಾದ ಆಧ್ಯಾತ್ಮಿಕ ಹುಡುಕಾಟವಿದ್ದ ಆಕೆಯ ಮಾತುಗಳನ್ನು ಜನರು ಶ್ರದ್ದೆಯಿಂದ ಅನುಸರಿಸುತ್ತಿದ್ದರು.

ಸಂಖ್ ಗ್ರಾಮದ ಶಿವಶರಣೆ ದಾನಮ್ಮದೇವಿ ಜನಸೇವೆಗಾಗಿಯೇ ಪ್ರಸಿದ್ಧಳು. ವಿದ್ಯೆ ಕಲಿತ ಮೇಲೆ ಮನೆಯವರು ಮದುವೆಯಾಗಲು ಹೇಳಿದಾಗ ಕಲ್ಯಾಣದ ಬಸವಣ್ಣನನ್ನು ಕಂಡ ನಂತರ ನಾನು ಮದುವೆಯಾಗುವುದೆಂದು ಹೇಳಿ ಅಲ್ಲಿಗೆ ಹೊರಡುತ್ತಾಳೆ. ದಾರಿಯಲ್ಲಿ ಕಂಡ ಹುಷಾರಿಲ್ಲದ ವೃದ್ಧ ದಂಪತಿಗಳ ಸೇವೆಗೆಂದು ನಿಂತವಳು ಅಲ್ಲಿಯೇ ಜನರ ಸೇವೆ ಮಾಡಿಕೊಂಡು, ದಾಸೋಹ ಮಾಡಿಕೊಂಡು ಸಮೀಪದ ಗುಡ್ಡಾಪುರದಲ್ಲೆ ಉಳಿದುಬಿಡುತ್ತಾಳೆ. ವಿಷಯ ತಿಳಿದ ಬಸವಣ್ಣನೇ ಅವಳನ್ನು ನೋಡಲು ಅಲ್ಲಿಗೆ ಬರುತ್ತಾರೆ. ಪ್ರತೀಕಾರದ ಭಾವ ಎಳ್ಳಷ್ಟೂ ಇಲ್ಲದೆ ನಿಸ್ವಾರ್ಥ ಪ್ರೀತಿಯಿಂದ ಜನರನ್ನು ಹರಸುತ್ತಿದ್ದರಿಂದ ಬೇಡಿಕೊಂಡಿದ್ದನ್ನೆಲ್ಲ ನೆರವೇರಿಸುತ್ತಾಳೆ ಎಂಬ ನಂಬಿಕೆ ಜನಜನಿತವಾಗಿದೆ. ಈಗಲೂ ಗುಡ್ಡಾಪುರಕ್ಕೆ ಇಲ್ಲಿನ ಹೆಣ್ಣುಮಕ್ಕಳು ಕಾಲ್ನಡಿಗೆಯಲ್ಲಿ ನಡೆದು ಹೋಗುತ್ತಾರೆ. ನಡೆದು ಹೋಗುವವರೆಲ್ಲರಿಗೂ ತಿಂಡಿ, ಊಟ, ನೀರು, ಪಾನಕಗಳ ವ್ಯವಸ್ಥೆಯನ್ನು ಆಯಾ ಗ್ರಾಮದ ಜನರೇ ಉಚಿತವಾಗಿ ಒದಗಿಸುತ್ತಾರೆ.

ವಿಜಯಪುರದ ಬೀಳಗಿಯ ಅಮೀರಿಬಾಯಿ ಕರ್ನಾಟಕಿ ಹೆಸರಾಂತ ಹಿಂದೂಸ್ತಾನಿ ಹಾಗು ಕರ್ನಾಟಕ ಸಂಗೀತದ ಗಾಯಕಿಯಾಗಿದ್ದರು. ಇವರು ಹಾಡಿದ ’ವೈಷ್ಣವ ಜನತೊ...’ ಹಾಡನ್ನು ಗಾಂಧೀಜಿಯವರು ಅಪಾರವಾಗಿ ಮೆಚ್ಚಿಕೊಂಡಿದ್ದರು. ಇವರ ಹಾಡುಗಳು ಸ್ವಾತಂತ್ರ್ಯ ಹೋರಾಟದ ಪ್ರಭಾತ ಫೇರಿಗಳಲ್ಲಿ ಜನಪ್ರಿಯವಾಗಿದ್ದವು. ಇದಲ್ಲದೆ ಆಕೆ ಅದ್ಭುತವಾದ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆಯಾಗಿದ್ದರು. ಇವರ ಮಧುರವಾದ ಗಾಯನದಿಂದಾಗಿ ’ಕಿಸ್ಮತ್’ ಎಂಬ ಹಿಂದಿ ಚಲನಚಿತ್ರ ೩ ವರ್ಷ ೮ತಿಂಗಳುಗಳ ಕಾಲ ಓಡಿತ್ತು.

ಸಾಮರಸ್ಯ, ಸರ್ವಧರ್ಮ ಸಹಿಷ್ಣುತೆಯ ಪರಂಪರೆ

ದೇವಾಲಯಗಳು, ಮಸೀದಿಗಳು, ಬೌದ್ಧ-ಜೈನ ಚೈತ್ಯಾಲಯಗಳು, ಬಾವಿಗಳು, ಸ್ಮಾರಕಗಳ ನಗರವಾದ ವಿಜಯಪುರ ಸಾಮರಸ್ಯ ಹಾಗೂ ಸಹಿಷ್ಣುತೆಗೆ ಮನೆಮಾತಾಗಿದೆ. ವಚನಕಾರರು ಮತ್ತು ಸೂಫಿ ಸಂತರ ಬೀಡಾಗಿದೆ. ಹಿಂದೊಮ್ಮೆ ಐದು ನದಿಗಳ ನಾಡಾಗಿದ್ದ ವಿಜಯಪುರ ಹತ್ತಿ, ಜೋಳ, ದಾಳಿಂಬೆ ಮತ್ತು ದ್ರಾಕ್ಷಿಗೆ ಹೆಸರುವಾಸಿಯಗಿದೆ. ’ಡೋಣಿ ನದಿ ತುಂಬಿ ಹರದ್ರ ಓಣೆಲ್ಲ ಜ್ವಾಳ’ ಎಂಬ ಗಾದೆ ಇಲ್ಲಿ ಪ್ರಚಲಿತವಿದೆ.

ಇತಿಹಾಸ ಹೇಗಿರಬೇಕೆಂಬುದಕ್ಕೆ ಉದಾಹರಣೆಯಾಗಿ, ಮುಂಬೈ ನ್ಯಾಯಾಲಯದ ಇತಿಹಾಸವನ್ನು ಮುಂಬೈ ಗೆಜೆಟಿಯರ್‌ನಲ್ಲಿ ಬರೆಯುವ ಸಂದರ್ಭದಲ್ಲಿ ವಿಜಯಪುರ ರಾಜ ಆದಿಲ್ ಶಾಹಿಯ ಮಾತುಗಳನ್ನು ಉಲ್ಲೇಖಿಸಲಾಗಿದೆ. ಎತ್ತಣಿಂದೆತ್ತ ಸಂಬಂಧವಯ್ಯಾ ಎನಿಸಬಹುದು. ಅಲ್ಲಿ ಪ್ರಸ್ತಾಪಿಸಿರುವುದರ ಹಿಂದಿರುವ ಉದ್ದೇಶ ಮಹತ್ವವಾದುದು. ವಿಜಯಪುರದ ಇತಿಹಾಸವನ್ನು ಬರೆಯಲು ಇಬ್ರಾಹಿಂ ಆದಿಲ್ ಶಾಹಿಯು ಫರಿಷ್ತ ಎಂಬ ಇತಿಹಾಸಕಾರನನ್ನು ಕರೆಸಿ ಭಯ ಮತ್ತು ಹೊಗಳಿಕೆಯನ್ನು ಬಿಟ್ಟು ಇತಿಹಾಸವನ್ನು ಬರೆಯಬೇಕೆಂದು ಕೇಳಿದ. ಭಯ ಮತ್ತು ಹೊಗಳಿಕೆಯಿಂದ ಮುಕ್ತವಾಗಿದ್ದರೆ ಮಾತ್ರ ಇತಿಹಾಸ ವಸ್ತುನಿಷ್ಠವಾಗಬಲ್ಲದು ಎಂಬ ಅರಿವು ಆತನಿಗಿತ್ತು.

ಇಂತಿಪ್ಪ ಮಹಿಳಾ ಪರಂಪರೆ ಹಾಗೂ ಸಾಮರಸ್ಯದ ಇತಿಹಾಸ ಇರುವ ವಿಜಯಪುರದಲ್ಲಿ ಈ ಸಲದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು ನಡೆಯುತ್ತಿದೆ. ಸೋದರಿತ್ವ, ಸಮಾನತೆ, ವೈವಿಧ್ಯತೆಯನ್ನು ನಂಬುವ ಮಹಿಳಾ ಚಳವಳಿ ಮಹಿಳೆಯರ ಆತ್ಮಘನತೆ ಮತ್ತು ಮಾನವ ಹಕ್ಕುಗಳಿಗಾಗಿ ದನಿ ಎತ್ತುತ್ತಲೇ ಬಂದಿದೆ. ಅನ್ಯಾಯ, ಅಸಮಾನತೆಯ ವಿರುದ್ಧ ಪ್ರಬಲವಾದ ಪ್ರತಿರೋಧವನ್ನು ಒಡ್ಡಿದೆ. ಸಮಸಮಾಜದ ಆಶಯದತ್ತ ನಡೆಯಲು ಘನವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ನಡೆದ ದಾರಿ, ಪಡೆದ ಅನುಭವ, ಎದುರಿಸಿದ ಸಾಹಸ, ಗಳಿಸಿದ ಸಾರ್ಥಕತೆ ಇವೆಲ್ಲವನ್ನು ಒಟ್ಟು ಮಾಡಿ ಮಹಿಳಾ ಚೈತನ್ಯದ ದಿನವಾಗಿ ಮಾರ್ಚ್ ೮ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕಳೆದ ಮೂರು ವರ್ಷಗಳಿಂದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ನಡೆಸಿಕೊಂಡು ಬರುತ್ತಿದೆ. ಒಕ್ಕೂಟವು ಭಿನ್ನತೆ, ಭಿನ್ನಾಭಿಪ್ರಾಯಗಳೊಂದಿಗೆಯೇ ಒಟ್ಟಿಗೆ ಹೆಜ್ಜೆ ಇಡುತ್ತಿರುವುದು ಮಹತ್ವದ ವಿಷಯವಾಗಿದೆ. ವಿಚಾರ ಸಂಕಿರಣ, ಮೌನ ಪ್ರತಿಭಟನೆ, ರ‍್ಯಾಲಿ ಹಾಗು ಸಾರ್ವಜನಿಕ ಸಭೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನ ಮಾಡುತ್ತಿದೆ. ವಿಚಾರ ಸಂಕಿರಣಗಳಲ್ಲಿ ಯುವ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.


Image result for du saraswathi kannada poet


ಎಡರುತೊಡರುಗಳ ನಡುವೆಯೂ, ಭಿನ್ನಾಭಿಪ್ರಾಯಗಳ ನಡುವೆಯೂ, ದ್ವೇಷ, ಕ್ರೌರ್ಯ, ಹಿಂಸೆಯ ಕತ್ತಲಿಗೆ ಪ್ರೀತಿಯ ದೊಂದಿ ಹಿಡಿದು ಜೊತೆಯಾಗಿ ನಡೆಯಲು ಆರಂಭಿಸಿದ್ದೇವೆ. ನಡಿಗೆ ಮುಂದುವರೆದಿದೆ. ಈ ಸಲ ದೊಂದಿ ಹಿಡಿದು ನಡೆಸುತ್ತಿರುವವರು ವಿಜಯಪುರದ ಸೋದರಿಯರು.

ಆರೂ ಇಲ್ಲದವಳೆಂದು ಆಳಿಗೊಳಲು ಬೇಡ ಕಂಡೆಯಾ?
ಏನು ಮಾಡಿದಡೂ ಆನಂಜುವಳಲ್ಲ
ನೂಲಮರೆಯಲ್ಲಿ ಅಡಗಿತ್ತೆಂದು ಅಂಜುವರು, ಅಳುಕುವರು.
ಮನಮೆಚ್ಚದಭಿಮಾನಕ್ಕೆ ಆವುದು ಮರೆ ಹೇಳಾ? ಉಡಿಗೆಯ
ಸೆಳೆದುಕೊಂಡೆಡೆ, ಮುಚ್ಚಿದ ಸೀರೆ ಹೋದರೆ ಅಂಜುವರೆ ಮರುಳೆ?
ಚೆನ್ನಮಲ್ಲಿಕಾರ್ಜನಂಗೆ ಶರಣೆಂದು ನಂಬಿ ಮರೆಹೊಕ್ಕಡೆ
ಅಂಜಿ ನಿಂದುದಲ್ಲಾ!

ಎಂದ ನಾಡಿನ ಮಹಿಳೆಯರ ಸ್ಥೈರ್ಯ, ಚೈತನ್ಯಗಳ ಸಂಕೇತವಾದ ಅಕ್ಕಮಹಾದೇವಿ ಹಾಗೂ ವಿಜಯಪುರದ ಸಮರ್ಥ ಆಡಳಿತಗಾರಳಾಗಿದ್ದ ಚಾಂದ್ ಬೀಬೀ ಇವರ ನೆನಪಿಗೆ ಈ ಸಲದ ಮಹಿಳಾ ದಿನಾಚರಣೆಯನ್ನು ಅರ್ಪಿಸಲಾಗಿದೆ. ರಾಜಕೀಯ ಪ್ರಾತಿನಿಧ್ಯಕ್ಕಾಗಿ ಮಹಿಳೆಯರು ಹೋರಾಡುತ್ತಿರುವ ಈ ಸಂದರ್ಭದಲ್ಲಿ ವಿಜಯಪುರ ನಗರ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ, ಮಗನನ್ನು ಉತ್ತಮ ಅಭಿರುಚಿಯುಳ್ಳವನಾಗಿ ಮಾಡುವುದರಲ್ಲಿ ಮಹತ್ತರ ಪಾತ್ರವಹಿಸಿದ, ಕನ್ನಡ, ದಖ್ಖನಿ, ಪರ್ಷಿಯಾ, ಅರೆಬಿಕ್, ಟರ್ಕಿಷ್, ಮರಾಠಿ ಭಾಷೆಗಳನ್ನು ಬಲ್ಲವಳಾಗಿದ್ದ, ಉತ್ತಮ ಚಿತ್ರಕಲಾವಿದೆ ಹಾಗೂ ಸಿತಾರ್ ವಾದಕಿಯಾಗಿದ್ದ, ಮೊಗಲ್ ಸಾಮ್ರಾಜ್ಯದ ವಿರುದ್ಧ ಸ್ವಾಯತ್ತತೆಗಾಗಿ ವೀರಾವೇಶದಿಂದ ಹೋರಾಡಿದ, ಸಮರ್ಥಳಾಗಿದ್ದ ಕಾರಣಕ್ಕಾಗಿ ತನ್ನ ಆಸ್ಥಾನದ ಅಧಿಕಾರ ವಲಯದವರಿಂದಲೇ ಹತಳಾದ ಚಾಂದ್ ಬೀಬೀ ಬಹಳ ಮುಖ್ಯವಾಗುತ್ತಾಳೆ.

ಈ ಇಬ್ಬರು ಮಹಿಳೆಯರ ನೆನಪಿಗೆ ಈ ಸಲದ ಮಹಿಳಾ ದಿನಾಚರಣೆಯನ್ನು ವಿಜಯಪುರದ ಸೋದರಿಯರು ಅರ್ಪಿಸಿದ್ದಾರೆ. ಕೃಷಿ ಬಿಕ್ಕಟ್ಟಿನಲ್ಲಿ ನಲುಗುತ್ತಿರುವ ರೈತ ಮಹಿಳೆಯರು, ಅಪರಾಧೀಕರಣದಲ್ಲಿ ಸಿಲುಕಿಕೊಂಡಿರುವ ದೇವದಾಸಿ ಮಹಿಳೆಯರು, ಲೈಂಗಿಕ ಕಾರ್ಯಕರ್ತೆಯರು, ಲಿಂಗತ್ವ ಅಲ್ಪಸಂಖ್ಯಾತರು, ಬಾಲ್ಯವಿವಾಹ-ಮಾನವ ಸಾಗಣೆ-ಹಿಂಸೆಯಲ್ಲಿ ಸುರುಟುತ್ತಿರುವ ಮಕ್ಕಳು, ಭದ್ರತೆ ನೀಡಬೇಕಿದ್ದ ಕುಟುಂಬಗಳಲ್ಲೇ ಭೀತಿಯಿಂದ ಉಸಿರುಗಟ್ಟುತ್ತಿರುವ ಮಹಿಳೆಯರು, ಸಾಮರ್ಥ್ಯವಿದ್ದರೂ ರಾಜಕೀಯ ಪ್ರಾತಿನಿಧ್ಯ ಪಡೆಯದ ಮಹಿಳೆಯರನ್ನು ಕುರಿತ ವಿಚಾರ ಸಂಕಿರಣವನ್ನು ಮಾರ್ಚ್ ೮ರಂದು ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ಸುಮಾರು ಐದು ಸಾವಿರ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರೆಲ್ಲರಿಗು ಊಟ-ವಸತಿಯ ವ್ಯವಸ್ಥೆ ಒದಗಿಸಲು, ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಲು ಸಿದ್ಧತೆ ನಡೆದಿದೆ. ಸಿದ್ಧತಾ ಸಭೆಗಳು ನಡೆಯುತ್ತಿರುವುದು, ತನಗೆ ಸೂರೇ ಇರಬಾರದೆಂದು ಹೇಳಿದ, ವಿಜಯಪುರಕ್ಕೆ ಬಂದ ಮೊದಲ ಸಂತ ಹಜರತ್ ಕ್ವಾಜ ಸೈದ್ ಹಾಜಿ ರೂಮಿ ಬಾಬಾ ದರ್ಗಾದಲ್ಲಿ. ಸಹೃದಯರ, ಸಮಾನ ಮನಸ್ಕರ ಧನ ಸಹಾಯ ಹಾಗೂ ಬೆಂಬಲದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸಮಾನತೆ, ಜಾತ್ಯತೀತತೆಯನ್ನು ನಂಬುವ, ಈ ನಾಡಿನ ಬಹು ವೈವಿಧ್ಯತೆಯನ್ನು ಗೌರವಿಸುವ ಸುಮಾರು ಇನ್ನೂರಕ್ಕೂ ಹೆಚ್ಚಿನ ಸಂಘಟನೆಗಳು, ಸಂಸ್ಥೆಗಳು ಮತ್ತು ಹಲವಾರು ವ್ಯಕ್ತಿಗಳು ಒಕ್ಕೂಟದೊಂದಿಗೆ ಕೈಜೋಡಿಸಿವೆ. ಹಿಂಸೆ ಮುಕ್ತ, ಸಮಸಮಾಜದ ಕನಸಿರುವ, ಪ್ರೀತಿ ಕರುಣೆಯಲ್ಲಿ ನಂಬಿಕೆ ಇರುವವರೆಲ್ಲರಿಗೂ ಆತ್ಮೀಯ ಸ್ವಾಗತ.

ನಮ್ಮೊಂದಿಗೆ ಹೆಜ್ಜೆ ಹಾಕಲು ಸಹಸ್ರಾರು ಸಂಖ್ಯೆಯಲ್ಲಿ ಬನ್ನಿ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...