Saturday, February 18, 2017

ಸಾರ್ವತ್ರಿಕ ಮೂಲಭೂತ ಆದಾಯ (UBI)- ಪ್ರಸ್ತಾಪ

Image result for ಶಿವಸುಂದರ್

ಅನು: ಶಿವಸುಂದರ್ಅಸ್ಥಿತ್ವದಲ್ಲಿರುವ ಎಲ್ಲಾ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದನ್ನು ಆಧರಿಸಿದ ಸತ್ವಹೀನ ಸಾರ್ವತ್ರಿಕ ಮೂಲಭೂತ ಆದಾಯ (Universal Basic Income- UBIಯೋಜನೆ ವಿನಾಶಕಾರಿಯಾದದ್ದು


ಪ್ರಭುತ್ವವೊಂದು ತಾನಾಗಿಯೇ ಯಾವುದೇ ಶರತ್ತಿಲ್ಲದೆ ಎಲ್ಲರಿಗೂ ಜೀವಿಸಲು ಬೇಕಾದಷ್ಟು ಆದಾಯವನ್ನು ಕೊಡುವುದನ್ನು ಒಮ್ಮೆ ಊಹಿಸಿಕೊಳ್ಳಿ. ಇದರ ಜೊತೆಗೆ ಸಕ್ಷಮವಾದ ಕಾರ್ಯನಿರ್ವಹಣೆ ಹೊಂದಿರುವ ಸಾರ್ವಜನಿಕ ಸೇವೆಗಳೂ ಇದ್ದುಬಿಟ್ಟರೆ, ಜೀನ್ ದ್ರೇಝ್ ಮಾತಿನಲ್ಲೇ ಹೇಳುವುದಾದರೆ, ಘನತೆಯುಳ್ಳ ಬದುಕನ್ನು ಖಾತರಿ ಮಾಡುವ ದೋಷರಹಿತ ದಾರಿ ಯಾಗಿಬಿಡುತ್ತದೆ. ೨೦೧೬-೧೭ ರ ಆರ್ಥಿಕ ಸರ್ವೇಕ್ಷಣೆಯಲ್ಲಿ ಈ ಅಧ್ಯಾಯ ಸಾರ್ವತ್ರಿಕ ಮೂಲ ಆದಾಯ -ಮಹಾತ್ಮನೊಂದಿಗೆ ಮತ್ತು ಮಹಾತ್ಮನೊಳಗಿನ ಒಂದು ಸಂವಾದ ಎಂದು ಪ್ರಾರಂಭವಾಗುತ್ತದೆ. ಆದರೆ, ದುರದೃಷ್ಟವಶಾತ್, ಸರ್ಕಾರದ ಸ್ವಯಂವಿಧಿತ ವಿತ್ತೀಯ ಜಾಗೃತಿ ಯಿಂದಾಗಿ ಸಾರ್ವತ್ರಿಕವೂ  ಅಲ್ಲದ ಮೂಲಭೂತವೂ ಅಲ್ಲದ ಈ ಸಾರ್ವತ್ರಿಕ ಮೂಲಭೂತ ಆದಾಯ- UBI (Universal Basic Income)-  ಯೋಜನೆಯು ಜಾರಿಯಾಗಬೇಕೆಂದರೆ ಈವರೆಗಿನ ಅತ್ಯವಶ್ಯಕ ಸಾಮಾಜಿಕ ಕಲ್ಯಾಣ ಯೋಜನೆಗಳಾದ ಸಾರ್ವತ್ರಿಕ ಪಡಿತರ ಯೋಜನೆ, ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಮಧಾಹ್ನದ ಬಿಸಿಯೂಟ ಯೋಜನೆಗಳಂಥವುಗಳನ್ನು ರದ್ದುಪಡಿಸುವುದನ್ನು ಪೂರ್ವಶರತ್ತಾಗಿಸುತ್ತದೆ. ಹೀಗಾಗಿ ಈ ಪ್ರಸ್ತಾಪಿತ UBI ಯೋಜನೆಯು ಹೆಚ್ಚೆಂದರೆ ಜನಸಂಖ್ಯೆಯ ಒಂದು ಸಣ್ಣ ವಿಭಾಗಕ್ಕೆ ಒಂದು ಸಣ್ಣ ಮೊತ್ತವನ್ನು ಪರಿಹಾರವಾಗಿ ವರ್ಗಾಯಿಸುವ ಯೋಜನೆಯಷ್ಟೇ ಆಗಿದೆ. ಮತ್ತು ಅದನ್ನು ಮಾಡಬೇಕೆಂದರೂ ಸರ್ಕಾರವು ಆಹಾg ಸರಬರಾಜನ್ನು, ಖಾತರಿ ಉದ್ಯೋಗದ ದಿನಗಳನ್ನು ಮತ್ತು ಇತರ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು  ಒಂದೋ ಕಡಿತಗೊಳಿಸುವ ಅಥವಾ ರದ್ದು ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸಲಿದೆ.

ಇದರ ಹಿಂದಿನ ಆಶಯವೆಂದರೆ ಬಜೆಟ್ಟಿನ ತಟಸ್ಥತೆಯನ್ನು ಕಾಪಾಡಿಕೊಂಡೇ ಮತ್ತೊಂದನ್ನೂ ಸಾಧಿಸುವುದು. ಇದು UBI
ಯೋಜನೆಯ ಅತ್ಯಂತ ಅತಾರ್ಕಿಕ ಅಂಶವಾಗಿದೆ. ದೇಶವನ್ನು ಕಾಡುತ್ತಿರುವ ಭೀಕರ ಅಸಮಾನತೆಯ ಹಿನ್ನೆಲೆಯಲ್ಲಿ ನೋಡುವುದಾದರೆ ಒಂದು ಸರಿಯಾದ UBI ಗೆ ಬೇಕಾದ ವಿತ್ತೀಯ ಸಂಪನ್ಮೂಲವನ್ನು ಅತಿ ಶ್ರೀಮಂತರ ಸಂಪತ್ತು ಮತ್ತು ಆದಾಯಗಳ ಮೇಲೆ ತೆರಿಗೆ ಹಾಕುವುದರ ಮೂಲಕ ಮತ್ತು ಸಾಮಾಜಿಕವಾಗಿ  ಅಷ್ಟು ಅಪೇಕ್ಷಿತವಲ್ಲದ ಆರ್ಥಿಕ ಚಟುವಟಿಕೆಗಳ ಮೇಲೆ ಪರೋಕ್ಷ ತೆರಿಗೆಯನ್ನು ವಿಧಿಸುವ ಮೂಲಕ ರೂಢಿಸಿಕೊಳ್ಳಬಹುದು. ಜಗತ್ತಿನಲ್ಲೇ ಭಾರತವು ತೆರಿಗೆ ಮತ್ತು ಒಟ್ಟಾರೆ ಅಂತರಿಕ ಉತ್ಪಾದನೆ (ಜಿಡಿಪಿ) ನಡುವಿನ ಅನುಪಾತ ಜಗತ್ತಿನ ಇತರ ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಅತ್ಯಂತ ಕಡಿಮೆ. ಇದು ನೇರ ತೆರಿಗೆಯ ವಿಷಯದಲ್ಲಿ (ಕಾರ್ಪೊರೇಟ್ ತೆರಿಗೆ ಮತ್ತು ಆಸ್ತಿ ತೆರಿಗೆ ಎರಡು ಸೇರಿಕೊಂಡರೂ) ಇನ್ನೂ ಕಡಿಮೆ ಇದೆ. ಹೀಗಿರುವಾಗ ಏಕೆ ನಮ್ಮ ನೀತಿ ನಿರೂಪಕರು ಹೆಚ್ಚಿನ ತೆರಿಗೆ ಸಂಗ್ರಹಿಸಿಕೊಂಡು ಆ ಮೂಲಕ ವಿತ್ತೀಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ಆಧಾರದ ಮೇಲೆ ಒಂದು UBI ಯನ್ನು ಕಲ್ಪಿಸಿಕೊಳ್ಳಲಾರರು ಎಂಬುದು ಅರ್ಥವಾಗುವುದಿಲ್ಲ.


ಬದಲಿಗೆ ಆರ್ಥಿಕ ಸರ್ವೇಕ್ಷಣೆಯಲ್ಲಿ ಪರಿಕಲ್ಪಿಸಿಕೊಂಡಿರುವ UBI,  ಈ ಬಾಬತ್ತಿಗೆ ತಗಲಬಹುದಾದ ವಿತ್ತೀಯ ವೆಚ್ಚವನ್ನು ಕನಿಷ್ಟಗೊಳಿಸಿಕೊಂಡು ಸಮಾಜ ಕಲ್ಯಾಣ ಇಲಾಖೆಯ ಆಡಳಿತ ಯಂತ್ರಾಂಗವನ್ನು ತೆಳ್ಳಗಾಗಿಸುವುದನ್ನು ನೆಚ್ಚಿಕೊಂಡಿದೆ. UBI ಕುರಿತಾದ ಅಧ್ಯಾಯವು- ಪ್ರಸ್ತುತ ಭಾರತದ ಸಾಮಾಜಿಕ ಭದ್ರತಾ ವ್ಯವಸ್ಥೆಯು ಅತ್ಯಂತ ದೊಡ್ಡದಾಗಿದೆಯೆಂದೂ, ಅಸಮರ್ಥವಾಗಿದೆಯೆಂದೂ, ಬಹಳಷ್ಟು ಸಂದರ್ಭದಲ್ಲಿ ಸಂಪನ್ಮೂಲಗಳನ್ನು ಅಸಮರ್ಪಕವಾಗಿ ವಿತರಿಸುತ್ತದೆಂದೂ, ಈ ವಾಸ್ತವಗಳು ಸಮಾಜ ಕಲ್ಯಾಣಕ್ಕೆ ಸರಿಯಾದ ರೀತಿಯಲ್ಲಿ ಹಣವನ್ನು ವೆಚ್ಚಮಾಡುವ ದಾರಿಗಳನ್ನು ಹುಡುಕಲು ಗಂಭೀರವಾದ ಚಿಂತನೆಗೆ ಹಚ್ಚುತ್ತದೆಂದು ವಾದಿಸುತ್ತದೆ. ಹೇಗೆ ಬಡತನದಲ್ಲಿರುವ ಜಿಲ್ಲೆಗಳಲ್ಲಿನ ಆರು ಸಮಾಜ ಕಲ್ಯಾಣ ಯೋಜನೆಗಳಲ್ಲಿ  ಆಗುತ್ತಿರುವ ಕಲ್ಯಾಣ ವೆಚ್ಚಗಳ ಅನುಪಾತವು ಆ ಜಿಲ್ಲೆಗಳ ಬಡಜನರ ಅನುಪಾತಕ್ಕಿಂತ ಕಡಿಮೆ ಇದೆ ಎಂದು ಎರಡು ಸರಳೀಕೃತ ಕೋಷ್ಟಕಗಳನ್ನು ಸಾದರಪಡಿಸಿ ಹೇಗೆ ಈ ಕಲ್ಯಾಣ ಯೋಜನೆಗಳಲ್ಲಿ ಸಂಪನ್ಮೂಲಗಳ ಅಸಮರ್ಪಕ ವಿತರಣೆಯಾಗುತ್ತಿದೆಯೆಂದು ಸಾಬೀತುಪಡಿಸಲು ಅದು  ಯತ್ನಿಸುತ್ತದೆ. ಆರ್ಥಿಕ ಸರ್ವೇಕ್ಷಣೆಯ ಲೇಖಕರ ಪ್ರಕಾರ ಆ ಅಸಮತೋಲನವನ್ನು UBI ಸರಿಪಡಿಸುತ್ತದೆ. ಆದರೆ ಅಂಥಾ ತಿದ್ದುಪಡಿಗಳು ನೇರ ಹಣ ವರ್ಗಾವಣೆಯನ್ನು  ನಿರೀಕ್ಷಿಸುತ್ತದೆಯೇ ವಿನಃ UBI ಯನ್ನಲ್ಲ.

ಅಷ್ಟೇ ಅಲ್ಲ.  ಈ ಪ್ರತಿಯೊಂದು ಸಮಾಜ ಕಲ್ಯಾಣ ಯೋಜನೆಗಳ ಸ್ವರೂಪಗಳಲ್ಲೇ ಮಾರುಕಟ್ಟೆಯ ಅನಿಶ್ಚತೆಗಳ ಎದಿರು ದುರ್ಬಲ ವರ್ಗಗಳಿಗೆ ರಕ್ಷಣೆ ನೀಡುವ ಕ್ರಮಗಳು ಅಂತರ್ಗತವಾಗಿವೆ ಎಂಬುದನ್ನು ಕಡೆಗಣಿಸಬಾರದು. ಸಾರ್ವಜನಿಕ ಪಡಿತರ ಪದ್ಧತಿಯು ಕೃಷಿ ಸರಕು ಮಾರುಕಟ್ಟೆಯಲ್ಲಿ ಸರ್ಕಾರವು ಮಧ್ಯಪ್ರವೇಶಿಸುವುದರ ಮೂಲಕ ಐತಿಹಾಸಿಕವಾಗಿ ಒಂದು ಬಗೆಯ ಬೆಲೆ ಸ್ಥಿರೀಕರಣವನ್ನು ಮತ್ತು  ರೈತರಿಗೆ ಒಂದಷ್ಟು ಆದಾಯ ಖಾತರಿಯನ್ನು ಮಾಡಿರುವುದನ್ನು ಒಳಗೊಂಡಿದೆ. ಸರ್ಕಾರವು ರೈತರ ಬೆಳೆಯನ್ನು ಕೊಂಡುಕೊಳ್ಳುವ ವ್ಯವಸ್ಥೆ ಮತ್ತು ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಗಿರುವ ರಾಜಕೀಯ ಮಹತ್ವವೇ ಅಂಥಾ ಮಾರುಕಟ್ಟೆ ಮಧ್ಯಪ್ರವೇಶಗಳ ಮಹತ್ವದ ಅಭಿವ್ಯಕ್ತಿಯಾಗಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯು ಶಾಲಾ ನೊಂದಣಿಗೆ ಪ್ರೋತ್ಸಾಹ ನೀಡುವುದಲ್ಲದೆ ಅಗತ್ಯವಿರುವ ಪೋಷಕಾಂಶಗಳನ್ನೂ ಅಗತ್ಯವಿರುವ ವಯಸ್ಸಿನಲ್ಲಿ ದೊರಕಿಸುತ್ತದೆ.  ಮಹಾತ್ಮಗಾಂಧಿ ಗ್ರಾಮಿಣ ಉದ್ಯೋಗ ಖಾತರಿ ಯೋಜನೆಯು ಕನಿಷ್ಟ ದಿಗಳ ಕೂಲಿಯನ್ನು ಖಾತರಿಪಡಿಸುವುದು ಮಾತ್ರವಲ್ಲದೆ  ಸ್ಥಳೀಯವಾಗಿ ಯೋಜನೆಗೆ ತಕ್ಕಂತೆ ಸಾರ್ವಜನಿಕ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸುತ್ತದೆ ಮತ್ತು ನಿರ್ವಹಣೆ ಮಾಡುತ್ತದೆ, ಕೂಲಿಕೆಲಸ ಲಭ್ಯತೆಯು ಆಯಾ ಋತುನಿರ್ಧಾರಿತ ಕೆಲಸದ ಲಭ್ಯತೆಯ ಅತಂತ್ರತೆಯನ್ನು ತಪ್ಪಿಸುತ್ತದೆ ಮತ್ತು ಗ್ರಾಮೀಣ ಕೂಲಿ ವೇತನ ಮಾರುಕಟ್ಟೆಯಲ್ಲಿ ಕಾರ್ಮಿಕರಿಗೆ ಒಂದಷ್ಟು ಚೌಕಾಶಿ ಮಾಡುವಷ್ಟು ಬಲವನ್ನೂ ತಂದುಕೊಡುತ್ತದೆ.  ವಾಸ್ತವವಾಗಿ ಆರ್ಥಿಕ ಸರ್ವೇಕ್ಷಣೆಯು ಈ ವಿಷಯದ ಬಗ್ಗೆ  ಸಾರ್ವತ್ರಿಕ ಪಡಿತರ ಪದ್ಧತಿಯ ರದ್ಧತಿಯು ದ್ವಿದಳ ಧಾನ್ಯಗಳ ಮಾರುಕಟ್ಟೆ ಬೆಲೆಯನ್ನು ಹೆಚ್ಚಿಸಬಹುದು, ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕಡಿತಗೊಳಿಸುವುದರಿಂದ ಗ್ರಾಮೀಣ ದಿನಗೂಲಿಗಳ ಮಾರುಕಟ್ಟೆ ಕೂಲಿಬೆಲೆಯನ್ನು ತಗ್ಗಿಸಬಹುದು ಎಂದು ಮೇಲುಮೇಲಕ್ಕೆ ಉಲ್ಲೇಖಿಸಿದರೂ  ಹಾಗೆಯೇ ಮುಂದುವರೆದು ಇಂಥಾ ಮಧ್ಯಪ್ರವೇಶಗಳಿಗೆ ತದ್ವಿರುದ್ಧ ತರ್ಕವನ್ನು ಮುಂದಿಡುತ್ತದೆ.

೨೦೦೪-೦೫ ಮತ್ತು ೨೦೧೧-೧೨ರ ನಡುವೆ ಭಾರತೀಯ ಆಹಾರ ನಿಗಮದಿಂದ ಆಹಾರಧಾನ್ಯಗಳನ್ನು ಕೊಂಡೊಯ್ಯುವ ಪ್ರಮಾಣ ಶೇ.೭೧ರಷ್ಟು ಏರಿಕೆ ಕಂಡಿತು. ಮತ್ತು ಸಮರ್ಥ ಮತ್ತು ಸಕ್ಷಮ ಹಂಚಿಕೆಯ ಮೂಲಕ ಪಡಿತರ ಪದ್ಧತಿಯ ಮೂಲಕ ಕುಟುಂಬವಾರು ಆಹಾರ ಖರೀದಿಯ ಪ್ರಮಾಣ ಶೇ.೧೧೭ರಷ್ಟು ಏರಿಕೆಯಾಯಿತು. ಅದೇ ಸಮಯದಲ್ಲಿ ಸಾರ್ವತ್ರಿಕ ಪಡಿತರ ಪದ್ಧತಿಯಲ್ಲಿನ ಸೋರಿಕೆ ಶೇ.೫೪ರಿಂದ ಶೇ.೩೫ಕ್ಕೆ ಇಳಿಯಿತು. ಆರ್ಥಿಕ ಸರ್ವೇಕ್ಷಣೆಯು  ಪಡಿತರ ಸೋರಿಕೆಯ ಇಳಿಕೆಯ ಪ್ರಮಾಣವನ್ನು ೨೦೧೬ರವರೆಗೆ ಮುಂದಂದಾಜು ಮಾಡಿ ಶೇ.೨೦.೮ರಷ್ಟು ಇಳಿಕೆಯಾಗಿದೆಯೆಂದು ಊಹಿಸುತ್ತದೆ. ಇದು ಐದು ವರ್ಷಗಳಲ್ಲಿ ಆಗಿರಬಹುದಾದ ತಂತ್ರಜ್ನಾನ ಸುಧಾರಣೆ ಮತ್ತು ಪಡಿತರ ವ್ಯಾಪ್ತಿಯ ವಿಸ್ತರಣೆಯನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲದಿದ್ದರೂ ಆಗಿರಬಹುದಾದ ಸೋರಿಕೆ ಇಳಿಕೆ. ಗ್ರಾಮೀಣ ಕೂಲಿದರದಲ್ಲಿ ಏರಿಕೆಯಾಗಿರುವುದರಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗಖಾತರಿ ಯೋಜನೆಯ ಪಾಲೂ ಇದೆ. ಈ ಯೋಜನೆಯಡಿ ಗ್ರಾಮೀಣ ಮೂಲಭೂತ ಸೌಕರ್ಯ ಯೋಜನೆಗಳನ್ನು ಮತ್ತು ಇತ್ತೀಚಿನ ದಿನಗಳಲ್ಲಿ ಕೃಷಿ ಸಂಪತ್ತನ್ನೂ ಸೃಷ್ಟಿಸಲಾಗಿದೆಯೆಂಬುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ.

ಎಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ಈಗ ಸಾಮಾಜಿಕ ಕಲ್ಯಾಣದ ಸರಕು ಮತ್ತು  ಸೇವೆಗಳನ್ನು ಒದಗಿಸುವುದು ಕೇವಲ ದಕ್ಷಿಣ ರಾಜ್ಯಗಳಲ್ಲದೆ ಉತ್ತರದ ರಾಜ್ಯಗಳಲ್ಲೂ ರಾಜಕೀಯ ಮಹತ್ವದ ಸಂಗತಿಯಾಗುತ್ತಿದೆ. ವಾಸ್ತವವಾಗಿ ಪಡಿತರ ಮತ್ತು ಉದ್ಯೋಗ ಖಾತರಿ ಯೋಜನೆಗಳು ನಿಗದಿತ ಸಮುದಾಯವನ್ನು  ಹೆಚ್ಚೆಚ್ಚು ತಲುಪುತ್ತಿರುವುದು ಮಾತ್ರವಲ್ಲದೆ ಅದರೊಳಗಿನ ಸೋರಿಕೆ ಮತ್ತು ಭ್ರಷ್ತಾಚಾರಗಳೂ ಕಡಿಮೆಯಾಗುತ್ತಾ ಬರುತ್ತಿವೆ. ಇದನ್ನು ಬೇರೆ ರಾಜ್ಯಗಳು ಅನುಸರಿಸಬೇಕಾದ ಅಗತ್ಯವಿದೆ. ಸಾಕಷ್ಟು ಹೋರಾಟದ ಮೂಲಕ ಗಳಿಸಿಕೊಂಡ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಹಿಂಪಡೆದುಕೊಳ್ಳುವ ಯೋಜನೆಯನ್ನು ಅಂತರ್ಗತವಾಗಿ ಹೊಂದಿರುವ  UBI ಬಗ್ಗೆ  ಗಂಭೀರ ಚರ್ಚೆಗೆ ಕಾಲ ಕೂಡಿ ಬಂದಿದೆ ಎಂದು ಹೇಳುವುದು ಹಿಂದಿನ ಸಾಮಾಜಿಕ ಅನುಭವಗಳ ಮೂಲಕ ಗಳಿಸಿಕೊಂಡ ಫಲಗಳ ಆಧಾರದ ಮೇಲೆ ಭವಿಷ್ಯವನ್ನು ಕಟ್ಟಿಕೊಳ್ಳುವುದನ್ನು ನಿರಾಕರಿಸುತ್ತದೆ.  ಸಮಾಜ ಕಲ್ಯಾಣ ಯೋಜನೆಗಳ ಅನುಷ್ಠಾನವನ್ನು- ಫಲಾನುಭವಿಗಳನ್ನು ಪಾಲುದಾರರನ್ನಾಗಿ ಮಾಡುವ ಮೂಲಕ, ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತರಿಗೊಳಿಸುವ ಮೂಲಕ, ಸಂಬಂಧಪಟ್ಟ ಸರ್ಕಾರೇತರ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವ ಮೂಲಕ, ಒಂದಷ್ಟು ರಾಜಕೀಯ ಇಚ್ಚಾಶಕ್ತಿ ಮತ್ತು ಕ್ರಿಯಾಶೀಲ ಸ್ಥಳೀಯ ಆಡಳಿತ ವ್ಯವಸ್ಥೆಯ ಮೂಲಕ ಉತ್ತಮಗೊಳಿಸಬಹುದೆಂಬುದನ್ನು ಹಿಂದಿನ ದಶಕದ ಅನುಭವಗಳು ಎತ್ತಿತೋರಿಸುತ್ತವೆ.


ಕೃಪೆ: Economic and Political Weekly

                                                                                                    February 11, 2017, Vol 52, No. 6

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...