Thursday, March 23, 2017

2017 ರ ಮೇ ಸಾಹಿತ್ಯ ಮೇಳದ ಆಶಯ


2017 ಮೇ 6, 7 ರಂದು ಧಾರವಾಡದಲ್ಲಿ ನಡೆವ ಮೇ ಸಾಹಿತ್ಯ ಮೇಳದ ಆಶಯ ಹೀಗಿರಬೇಕೆಂದು ಅಂದುಕೊಂಡಿದ್ದೇವೆ. ಬದಲಾವಣೆಗಳು ಸೇರ್ಪಡೆಗಳು ಬೇಕು ಅನ್ನಿಸಿದರೆ ತಿಳಿಸಿ.. ಎಲ್ಲರೂ ಸೇರಿ ಜನಚಳುವಳಿಗೆ ಸನ್ನದ್ಧರಾಗಬೇಕಿದೆ.. ಪ್ರಜಾಪ್ರಭುತ್ವ ಉಳಿಸಲು ಪ್ಯಾಸಿಸಮ್ ಸಮಕಾಲೀನ ಚಹರೆಗಳನ್ನು ಗಮನಿಸಿ ಅದರ ವಿರುದ್ಧ ಬರಹಗಾರರು, ಕಲಾವಿದರು, ಜನಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿ/ನಿ ಯುವಜನರು ಮಹಿಳೆಯರು ಚಿಂತಕರು ಒಟ್ಟಾಗಿ ಇದು ಕೊನೆಯ ಯುದ್ಧ ಎಂಬಂತೆ ಹೋರಾಟಕ್ಕೆ ಇಳಿಯಬೇಕಿದೆ. ಜನತೆಯನ್ನು ಸಜ್ಜುಗೊಳಿಸಬೇಕಿದೆ.


ಸಂಗಾತಿಗಳೇ,

ನಾವು ಹಾಗೆ ಬಾಳಿದೆವು, ಬಾಳಲೆತ್ನಿಸಿದೆವು ಕೂಡಾ.

ಈ ನೆಲ ಬ್ರಿಟಿಷರ ನಂತರ ರಾಜಶಾಹಿ-ಪುರೋಹಿತಶಾಹಿ-ಜಮೀನ್ದಾರರ ಊಳಿಗಮಾನ್ಯ ವ್ಯವಸ್ಥೆಯನ್ನು ಮತ್ತೆ ಅಪ್ಪಿಕೊಳ್ಳದೇ ಪ್ರಜಾಪ್ರಭುತ್ವ ಮೌಲ್ಯಗಳ ನೆಲೆಯಾಗಬೇಕೆನ್ನುವುದು ಸಮಾನತೆಯ ಹೋರಾಟ ಕಟ್ಟಿದ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಹುಪಾಲು ಹಿರಿಯರ ಕನಸಾಗಿತ್ತು. ಈ ಆಶಯ ಹೊತ್ತೇ ಸಂವಿಧಾನ ರಚನೆಯಾಯಿತು. ಈ ನೆಲದ ಕಟ್ಟಕಡೆಯ ಮನುಷ್ಯನಿಗೂ ಸಂಪನ್ಮೂಲಗಳಿಗೆ ಅವಕಾಶವಿರಬೇಕು, ಬದುಕಿನ ಆಯ್ಕೆಗಳಿಗೆ ಅವಕಾಶವಿರಬೇಕೆಂದು ಹಲವು ಕಲ್ಯಾಣ ಕಾರ್ಯಕ್ರಮಗಳ ಯೋಜಿಸಲಾಯಿತು. ಪ್ರಜಾಪ್ರಭುತ್ವದ ಬಹುಮುಖ್ಯ ಲಕ್ಷಣ ಮುಕ್ತ ಅಭಿವ್ಯಕ್ತಿ. ಎಂದೇ ಮಾಧ್ಯಮಗಳಿಗೆ, ಪ್ರಜೆಗಳಿಗೆ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿ ಅಕ್ಷರದ ಹಕ್ಕು ಪ್ರತಿಯೊಬ್ಬರಿಗೂ ದೊರೆಯುವಂತೆ ಮಾಡಲಾಯಿತು. ಪ್ರತಿಯೊಬ್ಬ ಭಾರತೀಯನಿಗೂ ತನ್ನಿಚ್ಛೆಯ ಧರ್ಮ ಸ್ವೀಕರಿಸುವ, ಆಚರಿಸುವ, ಅನುಯಾಯಿಯಾಗುವ ಮುಕ್ತ ಅವಕಾಶ ಕಲ್ಪಿಸಲಾಯಿತು. ಈ ನೆಲ ಸರ್ವಧರ್ಮಗಳಿಗೆ ಸೇರಿದ ಜನರು ಸಹಬಾಳ್ವೆಯಿಂದ ಬದುಕಬಲ್ಲ ಸರ್ವಸಮಾನತೆಯ ನಾಡು ಆಗಬೇಕೆನ್ನುವುದೇ ನಮ್ಮ ಪೂರ್ವಸೂರಿಗಳು ಇಚ್ಛಿಸಿದ ‘ಸೆಕ್ಯುಲರ್’ ಸಮಾಜದ ಮೂಲಸ್ರೋತವಾಗಿತ್ತು.

ಆದರೆ ಈಗ ಏನಾಗಿದೆ? ಪ್ರಜಾಪ್ರಭುತ್ವ ಬಂದ, ಸಂವಿಧಾನ ಸ್ವೀಕರಿಸಿದ ೬೭ ವರ್ಷಗಳ ನಂತರ ದಿನದಿಂದ ದಿನಕ್ಕೆ ಡೆಮಾಕ್ರೆಟಿಕ್ ಮತ್ತು ಸೆಕ್ಯುಲರ್ ಮೌಲ್ಯಗಳು ಕುಸಿಯುತ್ತಿವೆ. ಜಾತಿ ಹೊಸ ಅವತಾರಗಳನ್ನೆತ್ತಿ ಕೆಲವರಿಗೆ ಅಪರಿಮಿತ ಅಧಿಕಾರ-ಅವಕಾಶವನ್ನೂ; ಹಲವರಿಗೆ ಬಂಧಿತ ಮನಸ್ಥಿತಿಯನ್ನೂ ಕೊಡಮಾಡಿದೆ. ಜಾತಿಯ ಕರಾಳತೆ ಎಷ್ಟೋ ಸೃಜನಶೀಲ, ಪ್ರತಿಭಾವಂತ ಮನಸುಗಳ ಕೊಲ್ಲುತ್ತಿದೆ. ಚುನಾವಣಾ ರಾಜಕಾರಣ ಹಿಡಿಯುತ್ತಿರುವ ದೆಸೆದಿಕ್ಕುಗಳ ನೋಡಿದರೆ ಈ ಹಿಂದೆ ವಿಶ್ವಕ್ಕೆ ಕಂಟಕಪ್ರಾಯರಾಗಿ ಬಂದುಹೋದ ಸರ್ವಾಧಿಕಾರಿಗಳು ಭಾರತದಲ್ಲಿ ಪುನರ್ಜನ್ಮವೆತ್ತಿ ಬಂದ ಅನುಮಾನವಾಗುವಂತಿದೆ. ಇವತ್ತು ಬಹುಸಂಖ್ಯಾತರ ದೊಡ್ಡ ಗಂಟಲಿನ ಅಬ್ಬರದ ಹಿಂದೆ ಅವಕಾಶಹೀನರು, ಅಂಚಿನವರು, ಅಲ್ಪಸಂಖ್ಯಾತರು ಅಧೀನವಾಗಿರಬೇಕೆಂಬ ಒತ್ತಾಯವಿದೆ. 

ನಿರಂಕುಶಾಧಿಕಾರ ನಮ್ಮನ್ನು ಎಂಥ ಅಪಾಯಕ್ಕೆ ದೂಡಿದೆ ಎಂದರೆ ಮುಕ್ತ ಅಭಿವ್ಯಕ್ತಿಗೆ ‘ಸಾವೇ ಗತಿ’ ಎನ್ನುವಂತೆ ವಿದ್ಯಮಾನಗಳು ಸಂಭವಿಸುತ್ತಿವೆ. ಪ್ರಾಣಭಯ, ಮುಖಕ್ಕೆ ಮಸಿ ಎರಚುವುದು, ಬಲವಂತದಿಂದ ಮೌನವಾಗಿಸುವುದು, ಹಿಂಸೆ, ಅತ್ಯಾಚಾರ, ಜಾತಿದೌರ್ಜನ್ಯ, ಅಸಹಿಷ್ಣುತೆ, ಬಡತನ, ಭಟ್ಟಂಗಿತನ, ಅವಕಾಶವಾದಿತನ ಎಲ್ಲವೂ ಹೆಚ್ಚುತ್ತಿದೆ. ಎದೆಯ ದಿಟ್ಟ ನುಡಿಗಳನ್ನು ಆಡುವ ಧೈರ್ಯ ಜನಸಾಮಾನ್ಯರಲ್ಲಿ ಕುಸಿಯುತ್ತಿರುವ ಸೂಚನೆಯಿದೆ. ಇವೆಲ್ಲದರ ವಿರುದ್ಧ ನ್ಯಾಯ ಕೇಳಿದರೆ; ‘ನನ್ನ ತಂದೆಯನ್ನು ಕೊಂದದ್ದು ಪಾಕಿಸ್ತಾನವಲ್ಲ, ಯುದ್ಧ’ ಎಂದು ಸತ್ಯ ಹೇಳಿದರೆ; ಆಜಾದಿ ಬೇಕು ಎಂದು ಘೋಷಣೆ ಕೂಗಿದರೆ ದೇಶದ್ರೋಹದ ಆಪಾದನೆ ಬೆನ್ನಿಗೇರುತ್ತದೆ. ಒಟ್ಟಿನಲ್ಲಿ ಪ್ರಜಾಪ್ರಭುತ್ವವೇ ನಾಶವಾಗುವ ಆತಂಕ ಎದುರಾಗಿದೆ

ದಿಕ್ಕೆಡಿಸುವ ಸಂಗತಿಯೆಂದರೆ ಇಂಥ ಆಗುಹೋಗುಗಳಿಗೆ ಜನಸಮುದಾಯ ತೋರುವ ನಿಷ್ಕ್ರಿಯತೆ ಹಾಗೂ ಮಾಧ್ಯಮಗಳ ಬೇಜವಾಬ್ದಾರಿತನ. ಮಾಧ್ಯಮಗಳು ಪ್ರಜಾಪ್ರಭುತ್ವ ಐದನೆಯ ಅಂಗವಾಗಿ ಜವಾಬ್ದಾರಿ ನಿರ್ವಹಿಸುವುದರ ಬದಲು ಅಂತಸ್ಸಾಕ್ಷಿ ಮಾರಿಕೊಂಡು ಪಟ್ಟಭದ್ರ ವ್ಯವಸ್ಥೆಯ ವಕಾಲತ್ತುದಾರರಾಗಿದ್ದಾರೆ. ಒಂದೆಡೆ ಮನುಷ್ಯ ರಕ್ತ ಬೀದಿಬೀದಿಯಲ್ಲಿ ಹರಿಯುತ್ತದೆ, ಇನ್ನೊಂದೆಡೆ ಗೋವುಗಳು ಪೂಜಿಸಲ್ಪಡುತ್ತವೆ. ಪ್ರತಿ ಕಾಲುಗಂಟೆಗೊಬ್ಬಳು ಅತ್ಯಾಚಾರಕ್ಕೊಳಗಾಗುತ್ತಾಳೆ, ಅದೃಶ್ಯ ‘ಭಾರತ ಮಾತೆ’ ಪೂಜಿಸಲ್ಪಡುತ್ತಾಳೆ. ಬಹುಸಂಖ್ಯಾತ ಸಾಮಾನ್ಯ ಮನುಷ್ಯರು ಹಸಿದರೇನು, ನರಳಿದರೇನು, ದಿಕ್ಕೆಟ್ಟರೇನು - ರಸ್ತೆಗಳು ಅರಳುತ್ತವೆ, ಹೈರೈಸುಗಳು ಏಳುತ್ತವೆ. ಮೂರ್ತಿಗಳು, ಸಂಕೇತಗಳು ವೈಭವೀಕರಣಕ್ಕೊಳಗಾಗುತ್ತವೆ.

ಇದು ಪ್ರತಿ ಹೆಜ್ಜೆಗೂ ಎಲ್ಲರ ಅನುಭವಕ್ಕೆ ನಿಲುಕುತ್ತಿದೆ. ಯಾವುದೂ ಸರಿಯಿಲ್ಲ ಎಂದು ಆಳದಲ್ಲಿ ಅನಿಸುತ್ತಿದೆ. ಆದರೂ ಅದನ್ನು ಗುರುತಿಸಲಾಗುತ್ತಿಲ್ಲ. ಯಾಕೆಂದರೆ ಅದಕ್ಕೆ ಧರ್ಮ-ಸಂಸ್ಕೃತಿ-ದೇಶಭಕ್ತಿ-ಸಂಸ್ಕೃತಿ-ಪರಂಪರೆ ಮುಂತಾದ ಮುಸುಕು- ಮುಖವಾಡಗಳು ನಿಜಸ್ಥಿತಿ ಅರಿಯದಂತೆ ಮಾಡಿವೆ. ಮುಖವಾಡಗಳನ್ನೆಲ್ಲ ಕಿತ್ತೊಗೆದಲ್ಲಿ ಜನರಿಗೆ ತಾವಿರುವ ವ್ಯವಸ್ಥೆಯ ನಿಜರೂಪದ ಅರಿವಾಗಿ ಬದಲಾವಣೆಯ ಯತ್ನಗಳಿಗೆ ಅವರ ಬೆಂಬಲ ಸಿಗಬಹುದಾಗಿದೆ. ಇಲ್ಲವಾದಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದವರು ಎಂಬ ಹುಸಿ ಹೆಮ್ಮೆಯಲ್ಲಿ ಕಳೆದುಹೋಗುತ್ತೇವೆ.  ಈ ನೆಲದ ಮೌಲ್ಯಗಳನ್ನು, ನ್ಯಾಯವನ್ನು, ಕನಸುಗಳನ್ನೂ ಕಳೆದುಕೊಳ್ಳುತ್ತೇವೆ. 

ಒಂದು ನಾಗರಿಕ ಸಮಾಜಕ್ಕೆ ಒದಗಬಹುದಾದ ದೊಡ್ಡ ಆಪತ್ತು ಜನರ ನಿಷ್ಕ್ರಿಯತೆ. ಅದು ಎಲ್ಲವನ್ನು ಸಹಿಸಿಕೊಳ್ಳುವ ನಿಷ್ಕ್ರಿಯತೆ, ಅನ್ಯಾಯ ಕಂಡೂ ಸುಮ್ಮನಿರುವ, ಆಸೆಯ ತೀವ್ರತೆ ಕಳೆದುಕೊಳ್ಳುವ ನಿಷ್ಕ್ರಿಯತೆ. ಅದಕ್ಕಿಂತಲೂ ಅಪಾಯ ಪಂಜಾಬಿನ ಕವಿ ‘ಪಾಶ್’ ಅವತಾರ್ ಸಿಂಗ್ ಸಂಧು ಹೇಳುವಂತೆ ‘ಕನಸುಗಳ ಸಾವು’. ಹಾಗಾಗದಂತೆ ನೋಡಿಕೊಳ್ಳುವುದು ಇವತ್ತು ಎಲ್ಲ ಜನಪರ ಸಾಹಿತಿ-ಕಲಾವಿದ-ಹೋರಾಟಗಾರರ ಆದ್ಯ ಕರ್ತವ್ಯವಾಗಿದೆ. 

ಈ ನಡುವೆ ಬಂದ ಐದು ರಾಜ್ಯಗಳ ಚುನಾವಣಾ ಫಲಿತಾಂಶ, ಆ ನಂತರದ ರಾಜಕೀಯ ಬೆಳವಣಿಗೆಗಳು ನಮಗೆ ಹೊಸ ಪಾಠಗಳ ಹೇಳುತ್ತಿವೆ. ನಮ್ಮ ನಾಳಿನ ಭವಿಷ್ಯ ಬರೆಯುವುದು ಇವತ್ತಿನ ರಾಜಕೀಯ ಆಯ್ಕೆಗಳೇ ಆಗಿರುವುದರಿಂದ ಆ ಕುರಿತು ಜನರನ್ನು ಎಚ್ಚರಿಸುವುದು, ಜಾಗೃತಿಗೊಳಿಸುವುದು ಹಾಗೂ ಮುಂದಿನ ದಾರಿಗಳ ಕುರಿತು ನಂನಮ್ಮಲ್ಲಿ ಚರ್ಚೆ-ಸಂವಾದಗಳ ಮೂಲಕ ಸ್ಪಷ್ಟ ಅಭಿಪ್ರಾಯ ಹೊಂದುವುದು ಅವಶ್ಯವಾಗಿದೆ.

ಇವೆಲ್ಲದರ ಹಿನ್ನೆಲೆಯಲ್ಲಿ ಜನತಂತ್ರ ಹಿಡಿದಿರುವ ದಿಕ್ಕುದಾರಿ ಯಾವುದು? ಅದನ್ನು ನೇರ್ಪಡಿಸುವ ಮಾರ್ಗ ಯಾವುದು? ಅದರಲ್ಲಿ ನಮ್ಮ ಪಾತ್ರವೇನು? ಸಾಹಿತ್ಯ ಅದನ್ನು ಹೇಗೆ ಗ್ರಹಿಸಿದೆ? ಮಾಧ್ಯಮಗಳು ಹೇಗೆ ಜನಾಭಿಪ್ರಾಯವನ್ನು ದಿಕ್ಕು ತಪ್ಪಿಸುವಂತೆ ರೂಪಿಸುತ್ತಿವೆ? ಮುಂತಾದ ವಿಷಯಗಳ ಕುರಿತು ಚರ್ಚಿಸಲು ಈ ಸಲದ ಮೇ ಸಾಹಿತ್ಯ ಮೇಳ ಆಯೋಜಿಸಲಾಗಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...