Wednesday, March 22, 2017

‘ಅಸ್ಪೃಶ್ಯತೆಯ ಸಮಸ್ಯೆ’ : ಭಗತ್ ಸಿಂಗ್

ಭಗತ್ ಸಿಂಗ್ ಅವರ ಜೈಲ್ ಡೈರಿ ಪುಸ್ತಕದ (ಸಂ : ಚಮನಲಾಲ್ ಕನ್ನಡಕ್ಕೆ : ಎಚ್ ಎಸ್ ಅನುಪಮಾ) ಒಂದು ಭಾಗ

ಪುಸ್ತಕದ ಬೆಲೆ 170 ರೂ

ಈ ವೇಳೆಗೆ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಎನ್ನಬಹುದಾದಂತಹ ಒಂದು ಘಟನೆ ಭಾರತದ ಮಧ್ಯ-ದಕ್ಷಿಣ ಭಾಗದಲ್ಲಿ ಸಂಭವಿಸಿತು. ಅದಾಗಲೇ ಡಾ. ಬಿ. ಆರ್. ಅಂಬೇಡ್ಕರ್ ವಿದೇಶದಲ್ಲಿ ವಿದ್ಯಾಭ್ಯಾಸ ಪೂರೈಸಿ ಬಂದವರು ದಮನಿತರ, ಅಸ್ಪೃಶ್ಯರ ಸಂಘಟನೆ ಮಾಡಿ ಹೋರಾಟದಲ್ಲಿ ತೊಡಗಿದ್ದರು. ಕಾನೂನು ಮಾನ್ಯ ಮಾಡಿದ್ದರೂ ಅಸ್ಪೃಶ್ಯರನ್ನು ನೀರು ಬಳಸದಂತೆ ತಡೆದಿದ್ದ ಮಹಾಡ್‌ನ ಚೌಡರ್ ಕೆರೆಯ ನೀರು ಮುಟ್ಟಲು, ಬಳಸಲು ಸಾವಿರಾರು ಜನರೊಡನೆ ೧೯೨೭, ಮಾರ್ಚ್ ೨೦ರಂದು ಹೋದರು. ಆದರೆ ಸವರ್ಣೀಯರು ಇದರ ವಿರುದ್ಧ ನಿಂತು ಮುಂಬೈ ಹೈಕೋರ್ಟಿನಲ್ಲಿ ಕೇಸು ದಾಖಲಾಯಿತು. ಅದೇ ವರ್ಷ ಡಿ. ೨೫ರಂದು ಮಹಾಡ್‌ನಲ್ಲಿ ಮನುಸ್ಮೃತಿ ಸುಡಲಾಯಿತು. ಇದರ ಮರುವರುಷ ಕ್ಯಾಥರೀನ್ ಮೇಯೋಳ ಮದರ್ ಇಂಡಿಯಾ ಪ್ರಕಟವಾಗಿ ಭಾರತದ ಒಳಗನ್ನು ಹೊರಗು ಮಾಡಿ ತೋರಿಸಿತ್ತು. ಅದೇ ವೇಳೆಗೆ, ೧೯೨೮, ಜೂನ್‌ನಲ್ಲಿ ಭಗತ್ ಒಂದು ಲೇಖನ ಬರೆದು ಅಸ್ಪೃಶ್ಯತೆಯ ಸಮಸ್ಯೆಗಳನ್ನು ಪರಿಶೀಲಿಸಿದ. ಅವರು ಸಂಘಟಿತ ಹೋರಾಟ ನಡೆಸಬೇಕಾದ ಅವಶ್ಯಕತೆ ಇದೆಯೆಂದು ಹೇಳುತ್ತಾ, ಅಸ್ಪೃಶ್ಯರಿಗೆ ಮತಾಂತರವಾಗಬೇಕೆನಿಸುವುದು ತುಂಬ ಸಹಜ ಎಂದೂ ಹೇಳಿದ. ಆವಾಗಿನ್ನೂ ಅಂಬೇಡ್ಕರ್ ‘ನಾನು ಹಿಂದೂ ಆಗಿ ಸಾಯಲಾರೆ’ ಎಂದು ಘೋಷಿಸಿರಲಿಲ್ಲ. ಆದರೆ ಭಗತ್ ಸಿಂಗ್ ಯೋಚನೆಗಳು ತೀವ್ರಗಾಮಿಯಾಗಿ ಅಂಬೇಡ್ಕರರ ಚಿಂತನೆಗಳಿಗೆ ಪೂರಕವಾಗಿಯೇ ಇದ್ದವು. ತನ್ನ ಬರಹದಲ್ಲಿ ಭಗತ್ ಹೀಗೆ ಹೇಳಿದ್ದಾನೆ:
‘ಸಮಾಜದ ತುರ್ತ ಅಗತ್ಯದ ಕೆಲಸ ಮಾಡುವವರಿಗೂ ಅಗೌರವ ತೋರಿಸಲಾಗುತ್ತದೆ. ನಾವು ಭಂಗಿಗಳನ್ನು ತಾತ್ಸಾರದಿಂದ ನೋಡುತ್ತೇವೆ. ನೇಕಾರರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತೇವೆ. ನಮ್ಮ ಏಳ್ಗೆಗೆ ಅಡ್ಡಗಾಲಾಗಿರುವುದು ಇದೇ.
ಅಸ್ಪೃಶ್ಯರು ಪ್ರತ್ಯೇಕವಾಗಿ ಸಂಘಟಿತರಾಗಿ, ಮುಸ್ಲಿಮರಂತೆಯೇ ಪ್ರತ್ಯೇಕ ಹಕ್ಕುಗಳನ್ನು ಮತಕ್ಷೇತ್ರವನ್ನು ಕೇಳುವುದು ಸರಿಯಾಗಿಯೇ ಇದೆ. ಒಂದೋ ಜಾತಿ ಆಧರಿತ ತಾರತಮ್ಯ ಸರಿಪಡಿಸಿ ಇಲ್ಲವೇ ಅವರಿಗೆ ವಿಶೇಷ ಹಕ್ಕುಗಳನ್ನು ನೀಡಿ. ಶಾಲೆ, ಕಾಲೇಜು, ರಸ್ತೆ, ಬಾವಿಗಳ ಬಳಕೆಗೆ ಅವರಿಗೂ ಸಮಾನ ಅವಕಾಶ ಸಿಗುವಂತೆ ಕೌನ್ಸಿಲುಗಳೂ, ಅಸೆಂಬ್ಲಿಗಳೂ ಪ್ರಯತ್ನಿಸಬೇಕು. ಬರೀ ಬಾಯಿ ಮಾತಿನಲ್ಲಲ್ಲದೆ ಸಾರ್ವಜನಿಕ ಸ್ಥಳಗಳಿಗೆ ಅಸ್ಪೃಶ್ಯರ ಜೊತೆ ಉಳಿದವರೂ ಹೋಗಬೇಕು. ಅವರ ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಆದರೆ ಧರ್ಮದ ಹೆಸರಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಕೂಗಾಡಿ ವಿರೋಧಿಸುವ ಅಸೆಂಬ್ಲಿ ಸದಸ್ಯರು ಅಸ್ಪೃಶ್ಯರನ್ನು ಅಪ್ಪಿಕೊಳ್ಳುವ ಧೈರ್ಯ ತೋರಿಯಾರೇ? ಎಂದೇ ಅಸ್ಪೃಶ್ಯರು ತಮ್ಮದೇ ಸಮುದಾಯದ ಪ್ರತಿನಿಧಿಯನ್ನು ಹೊಂದಿರಬೇಕಾದ ಅವಶ್ಯಕತೆಯಿದೆ. ಆಗಮಾತ್ರ ಅವರು ತಮಗಾಗಿ ಹೆಚ್ಚುವರಿ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಬಂಧುಗಳೇ, ಒಗ್ಗಟ್ಟಾಗಿ. ಆದರೆ ಅಧಿಕಾರಶಾಹಿಯ ಜಾಲದಲ್ಲಿ ಸಿಕ್ಕಿಬೀಳಬೇಡಿ. ಅವರು ನಿಮಗಾಗಿ ಸಹಾಯ ಹಸ್ತ ಚಾಚಲು ಸಿದ್ಧರಿರುವುದಿಲ್ಲ. ಬದಲಾಗಿ ತಮ್ಮ ಸಂಚಿಗೆ ನಿಮ್ಮನ್ನು ಹೇಗೆ ದಾಳವಾಗಿ ಬಳಸಬಹುದೆಂಬ ಲೆಕ್ಕಾಚಾರದಲ್ಲಿರುತ್ತಾರೆ. ನಿಮ್ಮ ಬಡತನ ಮತ್ತು ದಾಸ್ಯಕ್ಕೆ ನಿಜವಾದ ಕಾರಣ ಈ ಬಂಡವಾಳಶಾಹಿ ಅಧಿಕಾರಗಣವೇ ಆಗಿದೆ. ಎಂದೂ ಅವರೊಡನೆ ಒಂದುಗೂಡಬೇಡಿ. ಅವರ ತಂತ್ರಗಳ ಬಗೆಗೆ ಎಚ್ಚರವಿರಲಿ. ಆಗ ಎಲ್ಲ ಸರಿಯಾಗುತ್ತದೆ.
ಲಾತದ ಭೂತ ಮಾತಿಗೆ ಹೆದರುವುದಿಲ್ಲ. ಅಸ್ಪೃಶ್ಯವೆನಿಸಿಕೊಂಡ ಸಮುದಾಯದ ಬಂಧುಗಳೇ, ಒಂದಾಗಿ, ಸ್ವಾವಲಂಬಿಗಳಾಗಿ. ಆಗ ಇಡಿಯ ಸಮಾಜಕ್ಕೇ ಸವಾಲು ಹಾಕಿ ನೀವು ನಿಲ್ಲಬಲ್ಲಿರಿ. ಆಗ ಯಾರೂ ನಿಮ್ಮ ಹಕ್ಕುಗಳನ್ನು ನಿಮಗೆ ನಿರಾಕರಿಸಲಾರರು. ಬೇರೆಯವರು ನಿಮ್ಮನ್ನು ಮೋಸಗೊಳಿಸಲು ಬಿಡಬೇಡಿ. ಬೇರೆಯವರಿಂದ ಏನನ್ನೂ ನಿರೀಕ್ಷಿಸಲೂಬೇಡಿ. ಅಸ್ಪೃಶ್ಯರೆನಿಸಿಕೊಂಡ ಬಂಧುಗಳೇ, ನಿಜವಾದ ಜನಸೇವಕರೂ ಜನಬಂಧುಗಳೂ ಆಗಿರುವವರೇ, ಏಳಿ, ನಿಮ್ಮ ಚರಿತ್ರೆ ತಿಳಿಯಿರಿ. ಗುರು ಗೋವಿಂದ ಸಿಂಗರ ತೋಳ್ಬಲ ನೀವಲ್ಲದೆ ಬೇರಾರೂ ಆಗಿರಲಿಲ್ಲ. ನಿಮ್ಮ ಶಕ್ತಿಯಿಂದಲೇ ಶಿವಾಜಿ ಮಹಾರಾಜ ಅವನೇನು ಮಾಡಿರುವನೋ ಅದನ್ನು ಮಾಡಲು, ಇವತ್ತಿಗೂ ಇತಿಹಾಸದಲ್ಲಿ ಬದುಕಿರಲು ಸಾಧ್ಯವಾಯಿತು. ನಿಮ್ಮ ತ್ಯಾಗ ಬಂಗಾರದ ಅಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ. ಏಳಿ, ಯಾರು ಬಿಡುಗಡೆ ಹೊಂದಲಿದ್ದಾರೋ ಅವರೇ ಎದ್ದು ಹೊಡೆತ ಕೊಡಬೇಕು.’
ವರ್ಗವ್ಯವಸ್ಥೆಯೇ ಮನುಷ್ಯನ ಎಲ್ಲ ಸಮಸ್ಯೆಗಳ ಮೂಲ ಎಂದು ಭಾವಿಸುವ ಕಮ್ಯುನಿಸ್ಟ್ ಮನಸೊಂದು ಜಾತಿಯೂ ದಮನಕ್ಕೆ ಮುಖ್ಯ ಕಾರಣ ಎಂದು ಗುರುತಿಸಿತ್ತು. ಭಾರತದ ಕಮ್ಯುನಿಸ್ಟರು ಜಾತಿಪ್ರಶ್ನೆ ಗುರುತಿಸುವುದಕ್ಕೆ ತೆಗೆದುಕೊಂಡ ದಶಕಗಟ್ಟಲೆ ಅವಧಿಯನ್ನು ಹೋಲಿಸಿದರೆ ಭಗತ್ ಅಂದೇ ಜಾತಿಯು ಸಮಸ್ಯೆಗಳ ಮೂಲವೆಂದು ಗುರುತಿಸಿರುವುದು ವಿಶೇಷವೆನಿಸುತ್ತದೆ. ಅಂದು ವರ್ಗಮೂಲ ಚಳುವಳಿ ಕಟ್ಟಿದವರು ಜಾತಿಯೂ ಈ ದೇಶದ ಜನಸಾಮಾನ್ಯರ ದಮನಕ್ಕೆ ಮೂಲ ಕಾರಣ ಎಂದು ಗುರುತಿಸಿದ್ದರೆ; ಅಂಬೇಡ್ಕರರಂಥ ದಮನಿತ ಸಮುದಾಯದ ಸಶಸ್ತ ನಾಯಕರು ಆ ಚಳುವಳಿಯನ್ನು ಮುನ್ನಡೆಸುವುದಾಗಿದ್ದರೆ.. ಸ್ವಾತಂತ್ರ್ಯ ಹೋರಾಟ ಮತ್ತು ಅದರ ಪ್ರತಿಫಲದ ಸ್ವರೂಪವೇ ಬೇರೆಯೇ ಆಗಿರುತ್ತಿರಲಿಲ್ಲವೇ?

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...