Wednesday, March 22, 2017

ಚಿಲಿಯ ವಿಶ್ವನದಿ - ಪ್ಯಾಬ್ಲೊ ನೆರೂಡ

Image result for ಡಾ. ಎಚ್. ಅನುಪಮಾ,

- ಡಾ. ಎಚ್. ಅನುಪಮಾ, ಕವಲಕ್ಕಿ.


Image result for pablo neruda


ಪಾಬ್ಲೋ ನೆರೂಡ
Image result for ಓ ಎಲ್ ನಾಗಭೂಷಣ ಸ್ವಾಮಿ


ಓ ಎಲ್ ನಾಗಭೂಷಣ ಸ್ವಾಮಿ

ನಮ್ಮ ಪ್ರಕಾಶನ ಪ್ರಕಟಿಸುತ್ತಿರುವ ಹಿರಿಯ ಸಾಹಿತಿಗಳಾದ ಓ ಎಲ್ ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಪಾಬ್ಲೋ ನೆರೂಡನ 'ನೆನಪುಗಳು' ಆತ್ಮಕತೆ ಪುಸ್ತಕಕ್ಕೆ ಬರೆದ ಪ್ರಾಸ್ತಾವಿಕ ಮಾತುಗಳು

ಪುಸ್ತಕದ ಬೆಲೆ : 300 ರೂಪ್ರಸ್ತುತ ಭಾರತದ ಸಾಹಿತ್ಯಿಕ ವಲಯದಲ್ಲಿ ಹಲವು ತೆರನ ನಂಬಿಕೆಗಳು, ಧೋರಣೆಗಳು ಸ್ಪಷ್ಟವಾಗಿ ಕಂಡುಬರುತ್ತಿವೆ. ಕೆಲವರು ‘ಶುದ್ಧ ಸಾಹಿತಿ’ಗಳಾಗೇ ಉಳಿಯಬಯಸಿದರೆ ಮತ್ತೆ ಕೆಲವರು ತಂತಮ್ಮ ನಂಬಿಕೆ-ಸಿದ್ಧಾಂತಗಳಿಗೆ ನಿಷ್ಠರಾಗಿ ನಿಲ್ಲುತ್ತಾರೆ. ಕೆಲವು ಕವಿ ಕಲಾವಿದರು ಆರು ಹಾಕಿದರೆ ಅತ್ತೆ ಕಡೆ, ಮೂರು ಹಾಕಿದರೆ ಮಾವನ ಕಡೆ ಎನ್ನುವಂತಹ ಅವಕಾಶವಾದಿತನದ ಬೆನ್ನು ಬೀಳುತ್ತಾರೆ. ಬೀದಿಗೆ ಬಂದು ಘೋಷಣೆ ಕೂಗಿದರೆ, ಹೋರಾಟ ಮಾರ್ಗದಲ್ಲಿ ಎರಡು ಹೆಜ್ಜೆ ನಡೆದರೆ ‘ಶುದ್ಧ ಸಾಹಿತ್ಯ ಸಂವೇದನೆ’ಯ ಸೆಲೆ ಬತ್ತಿ ಹೋದೀತೆಂದು ಹೆದರಿ ದೂರ ಉಳಿವವರು ಒಂದೆಡೆ; ಜನರ ಸಂಘಟಿಸುತ್ತ, ಚಳುವಳಿಯಲ್ಲಿ ತೀವ್ರವಾಗಿ ತೊಡಗಿ, ಅದಕ್ಕೆ ಪೂರಕವಾಗಿಯಷ್ಟೇ ಬರೆಯುವ ಹೋರಾಟಗಾರ ಮನಸುಗಳು ಇನ್ನೊಂದೆಡೆ - ಇವರ ನಡುವೆ ಈಗ ಮತ್ತೂ ಒಂದು ಗುಂಪು ಬೆಳೆಯುತ್ತಿದೆ. ಅದು ಎಡಬಲಗಳ ಚರ್ಚೆಯ ಆಚೆಗೆ ಇರಬಯಸುತ್ತ ತನ್ನನ್ನು ತಾನು ‘ಮಧ್ಯಮ ಮಾರ್ಗಿ’ಯೆಂದು ಕರೆದುಕೊಳ್ಳುವ ಗುಂಪು. ಆದರೆ ಅವರದೇನು ಬುದ್ಧನ ಸುವರ್ಣಮಧ್ಯಮದಂತಹ ಪರ್ಯಾಯ ಮಾರ್ಗವಲ್ಲ, ಎಲ್ಲಿ ಬೇಕಾದರಲ್ಲಿ ಹಾರಿಬಿಡಲು ಸಾಧ್ಯಗೊಳಿಸುವ ಎಡಬಿಡಂಗಿತನದ ಮಾರ್ಗ ಅದು. 

ಈ ಕಾಲದ ಓಟವೇ ಹೀಗಿದೆ. ಸಕಲ ವೈರುಧ್ಯಗಳೂ ಕಣ್ಣಿಗೆ ರಾಚುವಷ್ಟು ಢಾಳಾಗಿ ಕಾಣುತ್ತಿವೆ. ಹೀಗಿರುತ್ತ ಸಾಹಿತ್ಯ, ರಾಜಕಾರಣ ಹಾಗೂ ಹೋರಾಟವನ್ನು ಸರಿದೂಗಿಸಿಕೊಂಡು ಕವಿಯಾಗಿರಲು ಸಾಧ್ಯ ಎಂದು ತೋರಿಸಿದ ಕೆಲವೇ ಮಾದರಿಗಳು ನಮ್ಮೆದುರಿಗಿವೆ. ಅಂಥವರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪಡೆದ ಚಿಲಿಯ ಕವಿ, ರಾಜಕಾರಣಿ, ವಾಗ್ಮಿ ಪ್ಯಾಬ್ಲೊ ನೆರೂಡ ಮುಖ್ಯನಾಗಿದ್ದಾನೆ. ಅವನ ದಾರಿಯ ಅವಲೋಕನವೂ ವರ್ತಮಾನಕ್ಕೆ ಬಹುಮುಖ್ಯವಾಗಿದೆ.

‘ಕವಿತೆಗಿಂತ ಅಪಾಯಕಾರಿಯಾದ ಯಾವುದೂ ಇಲ್ಲಿಲ್ಲ..’

ಚಿಲಿ ದೇಶದ ದಕ್ಷಿಣ ಪ್ರಾಂತ್ಯದ ರೆಯೆಸ್-ಬಸುವಾಲ್ತೊ ದಂಪತಿಗಳಿಗೆ ೧೯೦೪ರಲ್ಲಿ ನೆಫ್ತಾಲಿ ರಿಕಾರ್ದೊ ಎಲಿಯೆಸರ್ ಎಂಬ ಮಗು ಹುಟ್ಟಿತು. ಅವ ಹುಟ್ಟಿ ಒಂದು ತಿಂಗಳಿಗೆ ತಾಯಿಯನ್ನು ಕಳೆದುಕೊಂಡ. ಹತ್ತನೇ ವಯಸ್ಸಿಗೆ ಕಾವ್ಯ ಬರೆಯಲು ಮೊದಲು ಮಾಡಿದ. ಇಪ್ಪತ್ತನೇ ಶತಮಾನ ಕಂಡ ಅತ್ಯಂತ ಸಂವೇದನಾಶೀಲ ಹಾಗೂ ಅತ್ಯುತ್ತಮ ಕವಿ ಎಂದು; ‘ವಿಶ್ವಕವಿ’ ಎಂದು ಹಲವರಿಂದ ಹೊಗಳಿಕೆಗೆ ಭಾಜನನಾದ. ಅವನೇ ಕನ್ನಡಪ್ರಜ್ಞೆಗೆ ತುಂಬ ಹತ್ತಿರದವನಾಗಿರುವ ಪ್ಯಾಬ್ಲೊ ನೆರೂಡ. 

ನೆರೂಡ ಸಂಪೂರ್ಣ ಕಾವ್ಯಮಾರ್ಗಿ. ಯುದ್ಧ, ಸಂಸ್ಕೃತಿ, ಪ್ರೇಮ, ಸಂಬಂಧ, ಇತಿಹಾಸ, ಜನ, ನೆಲ, ಸ್ಮರಣಗೀತೆ ಮುಂತಾದ ಹಲವೆಂಟು ವಿಷಯ ಕುರಿತು ಕವಿತೆ ಬರೆದ. ಬದುಕಿನುದ್ದಕ್ಕೂ ಕವಿತೆಯನ್ನೇ ಬರೆದ. ಆನಂದದಲ್ಲೂ, ಆತಂಕದಲ್ಲೂ, ಒಂಟಿಯಾಗಿರುವಾಗಲೂ, ಜನಕೋಟಿಯಲ್ಲೊಬ್ಬನಾಗಿ ಮಿಳಿತವಾದಾಗಲೂ, ಪ್ರೇಮದಲ್ಲೂ, ವಿರಹ ಅನುಭವಿಸುವಾಗಲೂ, ಸಸ್ನೇಹದಲ್ಲಿ ಮೀಯುವಾಗಲೂ, ಬೆನ್ನಿಗಿರಿಸಿಕೊಂಡಾಗಲೂ - ವ್ಯಕ್ತ ಸಂವೇದನೆಗೆ ಕಾವ್ಯವೇ ತನ್ನ ಮಾರ್ಗ ಎಂದು ನಂಬಿದ. ನವನವೀನ ಪ್ರಯೋಗಗಳಲ್ಲಿ, ಹೊಸ ಶೈಲಿಯಲ್ಲಿ ಕವಿತೆಗಳನ್ನು ಬರೆದ. ಕವಿತೆಗಾಗಿಯೇ ನೊಬೆಲ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನೂ, ಅಪಾರ ಕಾವ್ಯಾಭಿಮಾನಿಗಳನ್ನೂ ಗಳಿಸಿದ. ಗಣಿಕಾರ್ಮಿಕರು, ಸರಕು ಮಾರ್ಕೆಟ್ಟಿನ ಹಮಾಲಿಗಳು, ಭೂಗತ ರೌಡಿಗಳು, ಕುರಿಕಾಯುವ ಹುಡುಗರಿಂದ ಹಿಡಿದು ಚೆಗೆವಾರ, ಪಿಕಾಸೊ, ಸ್ಟಾಲಿನ್ ತನಕ ಸಮಾಜದ ಎಲ್ಲ ಸ್ತರಗಳ ಜನರು ಅವನ ಕಾವ್ಯಾಭಿಮಾನಿಗಳಾಗಿದ್ದರು. ಬಹುಜನರಿಗಾಗಿ ಬರೆದ, ಬಾಳಿದ ಕವಿಯೆಂದೇ ಅವನ ಕವಿತೆಗಳು ಜನರ ಎದೆಯ ಹಾಡುಗಳಾಗಿ ಇಂದಿಗೂ ಜನಮನದಲ್ಲಿ ಸ್ಥಾಯಿಯಾಗಿವೆ. 

೧೦ನೇ ವಯಸ್ಸಿಗೆ ತನ್ನ ಮೊದಲ ಕವಿತೆ ಬರೆದ ನೆಫ್ತಾಲಿ ರಿಕಾರ್ದೊಗೆ ತಂದೆಯಿಂದ ಬರಹ ಕೃಷಿಗೆ ಪ್ರೋತ್ಸಾಹ ದೊರೆಯಲಿಲ್ಲ. ಸಮೀಪದ ಶಾಲೆಯ ಅಧ್ಯಾಪಕಿಯಾಗಿದ್ದ (ಮುಂದೆ ನೊಬೆಲ್ ಪಡೆದ) ಗೇಬ್ರಿಯೆಲಾ ಮಿಸ್ಟ್ರೆಲ್ ಆರಂಭದ ದಿನಗಳಲ್ಲಿ ಹುಡುಗನ ಬೆನ್ನುತಟ್ಟಿ ಪ್ರೋತ್ಸಾಹಿಸಿದಳು. ೧೩ನೇ ವಯಸ್ಸಿಗೆ ತನ್ನ ಮೊದಲ ಪ್ರಬಂಧವನ್ನು ಸ್ಥಳೀಯ ಪತ್ರಿಕೆಯೊಂದರಲ್ಲಿ ಹುಡುಗ ನೆಫ್ತಾಲಿ ತನ್ನದೇ ಹೆಸರಿನಲ್ಲಿ ಪ್ರಕಟಿಸಿದ. ೧೬ ವರ್ಷ ಕಳೆಯುವುದರಲ್ಲಿ ಅನೇಕ ಕವಿತೆಗಳನ್ನು ಬರೆದಿದ್ದ. ತಂದೆಗೆ ತಿಳಿಯದಂತೆ ಸಾಹಿತ್ಯಿಕ ಸ್ಪರ್ಧೆಯಲ್ಲಿ ಭಾಗವಹಿಸಲು ಕಾವ್ಯನಾಮದ ಹುಡುಕಾಟಕ್ಕೆ ತೊಡಗಿದ. ಜೆಕ್ ಕವಿ ಜಾನ್ ನೆರೂಡನ ಹೆಸರಿನ ಭಾಗವೊಂದನ್ನು ಸೇರಿಸಿಕೊಂಡು ‘ಪ್ಯಾಬ್ಲೊ ನೆರೂಡ’ ಎಂಬ ಕಾವ್ಯನಾಮ ಇಟ್ಟುಕೊಂಡ ಎಳೆಯ ಕವಿಗೆ ೧೯ ವರ್ಷ ತುಂಬುವುದರೊಳಗೆ ಮೊದಲ ಸಂಕಲನ ಬಂತು. ಪ್ರೇಮ ಕವಿತೆಗಳ ಪುಸ್ತಕದ ೧೦ ಲಕ್ಷ ಪ್ರತಿ ಮಾರಾಟವಾಯಿತು! 

ನಂತರ ನೆರೂಡ ಹಿಂದಿರುಗಿ ನೋಡಿದ್ದೇ ಇಲ್ಲ. ಜನಪ್ರಿಯತೆ ಮತ್ತು ಕಾವ್ಯಕೃಷಿ ಎರಡೂ ಅಬಾಧಿತವಾಗಿ ಮುಂದುವರೆದವು. ದಕ್ಷಿಣ ಅಮೆರಿಕ ಹಾಗೂ ಚಿಲಿ ತೀವ್ರ ಸಂಘರ್ಷ ಎದುರಿಸುತ್ತಿದ್ದ ಕಾಲಕ್ಕೆ ಸಾಕ್ಷಿಯಾಗಿ ನೆರೂಡನ ಕವಿತೆಗಳು ಸೃಷ್ಟಿಯಾದವು. ಎಲ್ಲೇ ಹೋದರೂ, ಯಾವ ಹುದ್ದೆಯನ್ನೇ ನಿರ್ವಹಿಸುತ್ತಿದ್ದರೂ ಕವಿತೆ ಬರೆಯುವುದು ನಿಲ್ಲಿಸಲಿಲ್ಲ. ಯಾವ ನೆಲದಲ್ಲಿದ್ದನೋ ಅಲ್ಲಿಯ ಸಾರಸತ್ವ, ಸಂಕಟಗಳನ್ನೆಲ್ಲ ಹೀರಿಕೊಂಡು ಕವಿತೆ ಬರೆದ. ಎಂದೇ ಜನವಿರೋಧಿ ಆಳ್ವಿಕರಿಗೆ ಅವು ಅಪಾಯಕಾರಿಯಾಗಿ ಕಂಡವು. ಒಮ್ಮೆ ಪೋಲೀಸರಿಂದ ಅವನ ಮನೆ ತಪಾಸಣೆಗೊಳಗಾದಾಗ, ‘ಮನೆಯಲ್ಲಿ ಎಲ್ಲಿ ಬೇಕಾದರೂ ಹುಡುಕಿ, ಕವಿತೆಗಿಂತ ಅಪಾಯಕಾರಿಯಾದ ಯಾವುದೂ ಇಲ್ಲಿಲ್ಲ..’ ಎಂದು ಹೇಳಿದ್ದ. 

ಆಸೆ ಮತ್ತು ಭರವಸೆಯ ಕುರುಹು ಎಂದು ಹಸಿರು ಬಣ್ಣದ ಶಾಯಿಯಲ್ಲೆ ಬರೆಯುತ್ತಿದ್ದ ಕನಸುಗಾರ ನೆರೂಡ ತನ್ನನ್ನು ತಾನು ಒಣನೆಲದಲ್ಲಿಯೂ ಹಾಯಿ ನಡೆಸುವ ನಾವಿಕ - ‘ನೇವಿಗೇಟರ್ ಆಫ್ ದಿ ಡ್ರೈ ಲ್ಯಾಂಡ್’ ಎಂದು ಕರೆದುಕೊಳ್ಳುತ್ತಿದ್ದ. ಒಂದು ದೇಶದ ನದಿಗಳು ಎಂದರೆ ಅಲ್ಲಿನ ಕವಿಗಳು ಎನ್ನುತ್ತಿದ್ದ ನೆರೂಡನಿಗೆ ಯಾವುದೇ ಸಮಾಜದ ಜೀವಸೆಲೆ ಅದರ ಕವಿ ಮನಸ್ಥಿತಿಯಲ್ಲಿರುತ್ತದೆ ಎಂಬ ಅಚಲ ವಿಶ್ವಾಸ. ಈ ಅರ್ಹತೆಯನ್ನು, ವಿಶ್ವಾಸವನ್ನು ಉಳಿಸಿಕೊಳ್ಳಲು ಕವಿಗಳು ನಿರಂತರ ಶ್ರಮಿಸಬೇಕಿದೆ. ಆ ದೃಷ್ಟಿಯಿಂದ ನೆರೂಡ ಯಶಸ್ವಿ ಕವಿ ಎನ್ನಬಹುದಾಗಿದೆ.

ರಾಜಕಾರಣಿ ನೆರೂಡ

ನೆರೂಡ ಕವಿಯಷ್ಟೆ ಆಗಿರಲಿಲ್ಲ, ಚಿಲಿ ಕಮ್ಯುನಿಸ್ಟ್ ಪಕ್ಷದ ಸದಸ್ಯ ಮತ್ತು ಸಕ್ರಿಯ ರಾಜಕಾರಣಿಯೂ ಆಗಿದ್ದ. ೧೯೪೫ರಲ್ಲಿ ಅಟಕಾಮ ಮರುಭೂಮಿಯ ಅಂತೋಫಗಸ್ತಾ, ತರಪಾಕಾ ಪ್ರದೇಶಗಳ ಜನಪ್ರತಿನಿಧಿ ಸೆನೆಟರ್ ಆದ. ಕೇವಲ ೨೩ ವರ್ಷದವನಾಗಿದ್ದಾಗ ಜೀವನ ನಿರ್ವಹಣೆಗಾಗಿ ರಾಜತಾಂತ್ರಿಕ ಹುದ್ದೆ ಒಪ್ಪಿಕೊಂಡ. ಚಿಲಿಯ ರಾಯಭಾರಿಯಾಗಿ ಮೊದಲು ರಂಗೂನಿನಲ್ಲಿ ನಂತರ ಬಟಾವಿಯ, ಸಿಂಗಪುರ, ಶ್ರೀಲಂಕಾ, ಮೆಕ್ಸಿಕೊ, ಸ್ಪೇನ್, ಅರ್ಜೆಂಟೀನಾಗಳಲ್ಲಿ ಕೆಲಸ ನಿರ್ವಹಿಸಿದ. 

ಸ್ಪೇನ್ ಅಂತರ್ಯುದ್ಧದ ಕಾಲದಲ್ಲಿ ಸಂಪೂರ್ಣ ರಾಜಕಾರಣಿಯೇ ಆದ ನೆರೂಡ, ೨೦೦೦ ಜನ ನಿರಾಶ್ರಿತರನ್ನು ಸ್ಪೇನಿಗೆ ಕಳಿಸಲು ರಹದಾರಿ ನೀಡಿದ. ಆ ಕಾಲದ ಬಹುಪಾಲು ಬುದ್ಧಿಜೀವಿ ಹೋರಾಟಗಾರರಂತೆ ಕಮ್ಯುನಿಸಂ ಅನ್ನು ಪ್ರೀತಿಸಿದ. ಲೆನಿನ್ ೨೦ನೇ ಶತಮಾನದ ಮಹಾನ್ ಮೇಧಾವಿ ಎಂದು ಹೆಸರಿಸಿದ. ನಾಜಿ ಜರ್ಮನಿಯನ್ನು ಸೋಲಿಸಿದ ಮತ್ತು ಕಮ್ಯುನಿಸ್ಟ್ ತತ್ವಗಳನ್ನು ಜನಬದುಕಿಗೆ, ಆಳ್ವಿಕೆಗೆ ತಂದ ಸ್ಟಾಲಿನ್ ಆತನಿಗೆ ಬಹು ಪ್ರಿಯನಾಗಿದ್ದ. ಹಲವು ಕವಿತೆಗಳು ಸ್ಟಾಲಿನ್‌ಗಾಗಿ ಬರೆಯಲ್ಪಟ್ಟವು. ಸ್ಟಾಲಿನ್ ಶಾಂತಿ ಪ್ರಶಸ್ತಿಯೂ ನೆರೂಡನಿಗೆ ಸಿಕ್ಕಿತು. ನೆರೂಡ ಸ್ಟಾಲಿನ್ನನ ಎಂತಹ ಕಟ್ಟಾಭಿಮಾನಿ ಎಂದರೆ ಆತನ ತಪ್ಪು ನಡೆಗಳನ್ನು ಸಾರ್ವಜನಿಕವಾಗಿ ಟೀಕಿಸಲು ಹಿಂಜರಿದ. ಕವಿ ಕಲಾವಿದರನ್ನು ಸ್ಟಾಲಿನ್ ಸರ್ವಾಧಿಕಾರಿಯಂತೆ ಹತ್ತಿಕ್ಕುತ್ತಿರುವಾಗ ಅವನ ಮೇಲಿದ್ದ ಭಕ್ತಿ ತುಂಬಿದ ಪ್ರೀತಿ ಸುಮ್ಮನಿರುವಂತೆ ಮಾಡಿತು. ಅದಕ್ಕಾಗಿ ನೆರೂಡ ತನ್ನವರಿಂದ ದೂಷಣೆಗೊಳಗಾಗುವಂತೆ ಆಯಿತು. ಆಕ್ಟೇವಿಯೊ ಪಾಜ್ ಮತ್ತಿತರ ಗೆಳೆಯರನ್ನು ಕವಿ ಕಳೆದುಕೊಳ್ಳಬೇಕಾಯಿತು. ಆದರೆ ತನ್ನ ಈ ನಡೆಯನ್ನು ತಾನೇ ಆಳವಾಗಿ ನೆರೂಡ ವಿಮರ್ಶಿಸಿಕೊಂಡಿರುವುದನ್ನು ಈ ಆತ್ಮಕತೆಯ ಕೆಲ ಭಾಗಗಳಲ್ಲಿ ಕಾಣಬಹುದು. 

೧೯೪೬ರಲ್ಲಿ ಚಿಲಿ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿತ್ತು. ಕಮ್ಯುನಿಸ್ಟ್ ಪಕ್ಷಗಳು ರ‍್ಯಾಡಿಕಲ್ ಪಾರ್ಟಿಯ ಗೇಬ್ರಿಯೆಲ್ ಗೊನ್ಸಾಲೆಸ್ ವಿಡೇಲಾನನ್ನು ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಿದವು. ಆತ ನೆರೂಡನನ್ನು ಚುನಾವಣಾ ಪ್ರಚಾರದ ಮ್ಯಾನೇಜರ್ ಆಗಿ ನೇಮಿಸಿಕೊಂಡ. ನೆರೂಡ ದೇಶಾದ್ಯಂತ ತಿರುಗಿ ವಿಡೇಲಾ ಗೆಲುವಿಗೆ ಕಾರಣನಾದರೂ ಅಧ್ಯಕ್ಷನಾದ ನಂತರ ವಿಡೇಲಾ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಿದ! ೨೬,೦೦೦ ಜನ ಪಕ್ಷದ ಕಾರ್ಯಕರ್ತರ ಮತದಾನ ಹಕ್ಕು ಕಿತ್ತುಕೊಳ್ಳಲಾಯಿತು. ಬಂಧನದ ಸಾಧ್ಯತೆಗಳು ದಟ್ಟವಾದಾಗ ಅನಿವಾರ್ಯವಾಗಿ ನೆರೂಡ ಭೂಗತನಾಗಬೇಕಾಯಿತು. ತನ್ನ ತಾಯ್ನೆಲದಲ್ಲಿಯೇ, ತನ್ನವರಿಂದಲೇ ಪ್ರಾಣಕ್ಕೆ ಅಪಾಯ ಬಂದೆರಗಿದಾಗ ತಲೆಮರೆಸಿಕೊಂಡು ದೇಶ ಬಿಟ್ಟು ತೆರಳಬೇಕಾಯಿತು. ೧೯೫೨ರಲ್ಲಿ ವಿಡೇಲಾನ ಅಂತಿಮ ದಿನಗಳಲ್ಲಿ ಚಿಲಿ ಸೋಷಿಯಲಿಸ್ಟ್ ಪಕ್ಷವು ಸಾಲ್ವಡಾರ್ ಅಲ್ಲಂಡೆಯನ್ನು ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿಸುವ ಪ್ರಯತ್ನದಲ್ಲಿದ್ದಾಗ ಅಲ್ಲಂಡೆಯ ಗೆಳೆಯ ನೆರೂಡ ಮತ್ತೆ ಚಿಲಿಗೆ ಬಂದ. ಆ ವೇಳೆಗೆ ಅವ ವಿಶ್ವದ ಪ್ರಸಿದ್ಧ ಕವಿ, ಎಡಪಂಥೀಯ ಚಿಂತಕನಾಗಿದ್ದ. ನಂತರ ಕೊನೆಯವರೆಗೂ ಚಿಲಿಯಲ್ಲೇ ಉಳಿದ.

ತನ್ನ ಜೀವಿತ ಕಾಲದಲ್ಲಿಯೇ ಇಬ್ಬರು ಆಪ್ತ ಗೆಳೆಯರನ್ನು - ಕವಿ ಫ್ರೆಡರಿಕೊ ಗಾರ್ಸಿಯಾ ಲೋರ್ಕಾ ಮತ್ತು ಚಿಲಿ ಅಧ್ಯಕ್ಷನಾಗಿದ್ದ ಸಾಲ್ವಡಾರ್ ಅಲ್ಲಂಡೆ (೧೯೭೩) - ಅವರ ಸಾವನ್ನು ನೋಡಬೇಕಾಯಿತು. ಪರಮ ಪ್ರಿಯ ಚೆಗೆವಾರ ಹತ್ಯೆ (೧೯೬೭) ಆದದ್ದಕ್ಕೆ ಸಾಕ್ಷಿಯಾಗಬೇಕಾಯಿತು. ಚಿಲಿ ದೇಶವನ್ನು ಸರ್ವಾಧಿಕಾರಿ ಪಿನೊಶೆ ಆಳತೊಡಗಿದ ಮೇಲೆ ಮಾರ್ಕ್ಸಿಸ್ಟ್ ಚಿಲಿಯ ಅವನ ಕನಸು ಭಗ್ನವಾಯಿತು. ಅವನ ಮನೆಗಳು ಪೊಲೀಸರಿಂದ ದಾಳಿಗೊಳಗಾದವು. ಅವನು ವಿಶ್ವವಿದ್ಯಾಲಯಕ್ಕೆ ನೀಡಿದ ಪುಸ್ತಕ-ವಸ್ತುಗಳನ್ನು ಪಡೆಯದಿರುವಂತೆ ಉನ್ನತಮಟ್ಟದ ಒತ್ತಡಗಳು ಬಂದವು. ಅವು ಕೊನೆಗೆ ಏನಾದವೋ ಇವತ್ತಿಗೂ ಗೊತ್ತಿಲ್ಲ. ನೆರೂಡನೇ ‘ಅವು ಕಡಲಾಳ ಸೇರಿರಬಹುದು ಅಥವಾ ಕಾಳಸಂತೆಯ ದಾರಿ ಹಿಡಿದಿರಬಹುದು’ ಎಂದು ನೊಂದುಕೊಂಡಿದ್ದ.

ಒಟ್ಟಾರೆ ಎಲ್ಲ ಸಂಕಟಗಳನ್ನೂ ಕವಿತೆಗಳಲ್ಲಿ ತೋಡಿಕೊಳ್ಳುತ್ತಲೇ, ಅದಕ್ಕೆ ಪರಿಹಾರವನ್ನು ರಾಜಕೀಯ ಆಯ್ಕೆಗಳಲ್ಲಿ ಹುಡುಕಿದ ನೆರೂಡ ಬದುಕಿನ ಸಕಲ ಏರಿಳಿತಗಳಿಗೆ ಎದೆಕೊಟ್ಟ ಕವಿ ಜೀವ ಎನ್ನಬಹುದು.

ಕಡು ವ್ಯಾಮೋಹಿ 

ವೈನ್ ಪ್ರಿಯ ನೆರೂಡ ಎಲ್ಲಿ ಹೋದರೂ ಚಿಲಿ ವೈನ್ ಒಯ್ಯುತ್ತಿದ್ದ. ಮನೆಗೆ ಬಂದ ಗೆಳೆಯರ ಬಳಗಕ್ಕೆ ವೈನ್ ಮತ್ತು ಕಾವ್ಯ ಸಮಾರಾಧನೆಯನ್ನು ಕಂಠಮಟ್ಟ ಮಾಡಿಸಿ ತಾನು ತೃಪ್ತಿ ಹೊಂದುತ್ತಿದ್ದ. ವೈನು ಬಗ್ಗಿಸುವ, ಕುಡಿಯುವ ಗಾಜಿನ, ಲೋಹದ ಆಕರ್ಷಕ ಕಂಟೇನರ್‌ಗಳ ದೊಡ್ಡ ಸಂಗ್ರಹವೇ ಅವನಲ್ಲಿತ್ತು. 

ಅವನಿಗೆ ಕಡಲು ಇಷ್ಟ. ‘ನನ್ನ ಕಿಟಕಿಯಿಂದ ಕಡಲನ್ನು ನಾನು ನೋಡುವ ಬದಲು ಕಡಲೇ ತನ್ನ ನೊರೆಯ ಸಾವಿರ ಕಣ್ಣುಗಳಿಂದ ನನ್ನ ನೋಡುತ್ತಿದೆ’ ಎನ್ನುತ್ತಿದ್ದ. ಅವನಿಗೆ ಹಡಗು ಇಷ್ಟ. ನಾವಿಕರು ಇಷ್ಟ. ಅವರ ಸಾಹಸಯಾನದ ಕತೆ ಕೇಳಲು ಇನ್ನೂ ಇಷ್ಟ. ಎಂದೇ ಕಡಲ ತೀರದಲ್ಲಿ ನಾವೆಯಂತೆ ಕಾಣುವ ಮನೆಗಳ ಕಟ್ಟಿ, ಬಿಳಿಯ ಮೀನಿನ ಚಿತ್ರವಿರುವ ನೀಲಿ ಬಾವುಟವನ್ನು ಹಾರಿಸಿದ. 

‘ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು’ ಎಂದು ಕುವೆಂಪು ಹೇಳಿದ್ದು ಕವಿಯ ಜೀವಚೈತನ್ಯ ಕುರಿತು. ತನಗಿಷ್ಟ ಬಂದಲ್ಲಿ ತನ್ನಿಷ್ಟದಂತೆ ಮನೆ ಕಟ್ಟಿ, ಅಮೂಲ್ಯವೆನಿಸುವುದನ್ನೆಲ್ಲ ತಂದು ಒಪ್ಪಓರಣಗೊಳಿಸಿ, ಅದರೊಡನೆ ಬದುಕುತ್ತ ನೆಮ್ಮದಿ ಕಂಡುಕೊಳ್ಳುವುದು ಮನುಷ್ಯ ಗುಣ. ಇದರಿಂದ ನೆರೂಡ ಹೊರತಾಗಿರಲಿಲ್ಲ. ರಾಜಧಾನಿ ಸೆಂಟಿಯಾಗೊದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳ ತಾಣವಾಗಿ ಅವನದೊಂದು ಮನೆಯಿತ್ತು. ಕಡಲ ತೀರದ ಶಾಂತತೆ ಬಯಸಿ ತನ್ನ ಗತವೈಭವವನ್ನು ನೆನಪಿಸಿಕೊಂಡು ಬಿಕ್ಕುತ್ತಿದ್ದ ವಾಲ್ಪರೈಸೊ ನಗರಕ್ಕೆ ಹೋಗಿ ಮತ್ತೊಂದು ಮನೆ ಕಟ್ಟಿದ. ನಂತರ ಜನ-ಸಮಾಜದ ಕಣ್ಣಿಗೆ ಬೀಳದಂತೆ ಬದುಕುವ ಅಡಗುದಾಣದಂತೆ ಇಸ್ಲಾ ನೆಗ್ರಾದ ಕಡಲ ದಂಡೆಯಲ್ಲೂ ಮನೆ ಕಟ್ಟಿದ. ತುಂಬ ಕಕ್ಕುಲಾತಿಯಿಂದ ಮನೆಗಳ ರೂಪಿಸಿದ ಹೆಣ್ಣು ಮನಸ್ಸು ನೆರೂಡನದು. ಬೊಂಬೆ, ಮಣಿ, ಕಪ್ಪೆಚಿಪ್ಪು, ಬಣ್ಣದ ಗಾಜುಗಳಿಂದ ಹಿಡಿದು ಪುಸ್ತಕ, ನಕಾಶೆ, ಕಡಲ ನಾವಿಕನ ದಿಕ್ಸೂಚಿಯವರೆಗೆ ಎಲ್ಲವನ್ನೂ ಸಂಗ್ರಹಿಸಿ ಮನೆಯಲ್ಲಿ ಜೋಡಿಸಿದ ನೆರೂಡ. 

ಅವನಷ್ಟು ವಸ್ತು ಮೋಹ ಇರುವವರು ತುಂಬ ಕಡಿಮೆ. ನೆರೂಡ ತನಗೆ ಬೇಕೆನಿಸಿದ ವಸ್ತುಗಳನ್ನು ಹೇಗಾದರೂ ಪಡೆಯುತ್ತಿದ್ದ. ಕಪ್ಪೆಚಿಪ್ಪುಗಳಂತೆಯೇ ಕವಿಯ ಬಳಿ ವಿಶಿಷ್ಟ ಬೊಂಬೆ ಸಂಗ್ರಹವೂ ಇತ್ತು! ಬೊಂಬೆಯಾಕಾರದ ವೈನ್ ಬಾಟಲು, ಬಾಟಲಿಯೊಳಗೆ ಹಡಗು ಕೂರಿಸಿದ ಬೊಂಬೆ, ಹಡಗಿನ ಮುಂಚೂಣಿಯಲ್ಲಿರುತ್ತಿದ್ದ ಫಿಗರ್ ಹೆಡ್ ಬೊಂಬೆ ಎಲ್ಲ ಇದ್ದವು. ಕವಿಗೇಕೆ ಬೊಂಬೆ? ಅವನ ಮಾತುಗಳಲ್ಲೇ ನಮ್ಮ ಅಚ್ಚರಿಗೆ ಉತ್ತರವಿದೆ: ‘ಆಟವಾಡದ ಮಗು ಮಗುವೇ ಅಲ್ಲ, ಆಟವಾಡದೇ ಬೆಳೆದ ವ್ಯಕ್ತಿಗಳು ತಮ್ಮೊಳಗಿನ ಮಗುವನ್ನು ಶಾಶ್ವತವಾಗಿ ಕಳೆದುಕೊಂಡಿರುತ್ತಾರೆ. ತಮ್ಮೊಳಗಿನ ಮಗುತನಕ್ಕೆ ಅಪರಿಚಿತರಾಗಿರುತ್ತಾರೆ. ನಾನು ನನ್ನ ಮನೆಯನ್ನು ಬೊಂಬೆಮನೆಯ ಹಾಗೆ ಕಟ್ಟಿದ್ದೇನೆ. ಬೆಳಗಿನಿಂದ ಸಂಜೆಯವರೆಗೆ ಆಡುತ್ತೇನೆ’.

ಇಂಥ ಮಗುತನವನ್ನು ಉಳಿಸಿಕೊಂಡಿದ್ದ ನೆರೂಡ ತನ್ನ ಅಭಿರುಚಿ, ಅವಶ್ಯಕತೆಗೆ ತಕ್ಕಂತೆ ಮೂರೂ ಮನೆಗಳನ್ನು ನಿರ್ಮಿಸಿದ. ವಿಶ್ವದ ಎಲ್ಲ ಭಾಗಗಳಿಂದ ಅಮೂಲ್ಯ ವಸ್ತುಗಳ ಹೆಕ್ಕಿ ತಂದು, ಮನೆಯಲ್ಲಿ ಪೇರಿಸಿರುವ ಕಾರಣ ಅವು ಅದ್ಭುತ ಮ್ಯೂಸಿಯಂಗಳೆನ್ನಲು ತಕ್ಕುದಾಗಿವೆ. ತಾನು ಮರಣದ ಬಳಿಕ ಹದ್ದಾಗಿ ಮನೆಯೊಳ ಬರುತ್ತೇನೆ ಎಂದು ಹೇಳುತ್ತಿದ್ದನಂತೆ. ಒಮ್ಮೆ ಕಿಟಕಿಯೆಲ್ಲ ಮುಚ್ಚಿದ್ದರೂ ಹೇಗೋ ಒಂದು ಹದ್ದು ಅವನ ಮನೆಯೊಳ ಬಂದಾಗ ನೆರೂಡನ ಗೆಳೆಯ ಡಾ. ವೆಲಾಸ್ಕೊ ಅಚ್ಚರಿಯಿಂದ ಕವಿಮಾತು ನೆನಪಿಸಿಕೊಂಡಿದ್ದ. 

‘ನಾನು ನನ್ನ ಮನೆ ಇಸ್ಲಾ ನೆಗ್ರಾವನ್ನು ಜನತೆಗೆ ಅರ್ಪಿಸುತ್ತಿದ್ದೇನೆ; ಒಂದಲ್ಲ ಒಂದು ದಿನ ಅದು ಯೂನಿಯನ್ ಮೀಟಿಂಗುಗಳ ಸ್ಥಳವಾಗುತ್ತದೆ, ಗಣಿ ಕಾರ್ಮಿಕರು, ರೈತರು ವಿಶ್ರಾಂತಿ ಪಡೆಯುವ ಜಾಗವಾಗುತ್ತದೆ. ಹೊಟ್ಟೆಯ ಕಿಚ್ಚಿನ ಜನರ ಮೇಲೆ ನನ್ನ ಕಾವ್ಯವು ತೀರಿಸಿಕೊಳ್ಳುವ ಪ್ರತೀಕಾರ ಅದು’ ಎಂದು ಹೇಳಿದ. ಜನಪರ ಹೋರಾಟಗಾರನೊಬ್ಬ ಇದಕ್ಕಿಂತ ಉದಾತ್ತವಾಗಿ ತನ್ನ ನೆಲೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ?

ಬದುಕಿನ ಇಂಥ ಎಲ್ಲ ಏಳುಬೀಳುಗಳ ನಡುವೆಯೂ ಅವ ಪ್ರೇಮಿಸಿದ, ಕಾಮಿಸಿದ, ಮದುವೆಯಾದ, ಕವಿತೆಗಳ ಹೆರುತ್ತ ಹೋದ. ಮೂರನೆಯ ಸಂಗಾತಿ ಮಟಿಲ್ಡ ಉರುಷಿಯ ಕೊನೆಗಾಲದವರೆಗೆ ಅವನೊಡನೆ ಇದ್ದಳು. ನೆರೂಡನ ಮನೆ, ವಸ್ತು, ಪುಸ್ತಕಗಳು ನಾಶವಾಗದೇ ಬರುವ ಪೀಳಿಗೆಯ ಅವಲೋಕನಕ್ಕೆ ಅವು ಉಳಿಯುವಂತೆ ಮಾಡುವಲ್ಲಿ ಮಟಿಲ್ಡ ಹಾಗೂ ನೆರೂಡ ಫೌಂಡೇಷನ್ನಿನ ಪಾತ್ರ ದೊಡ್ಡದಿದೆ. 

ಕೊನೆಯ ದಿನಗಳು 

ಗೆಳೆಯ ಅಲ್ಲಂಡೆಯ ಸಾವಿನಿಂದ ನೊಂದಿದ್ದ ನೆರೂಡನಿಗೆ ಪಿನೊಶೆ ಅಧಿಕಾರ ಕಿತ್ತುಕೊಂಡದ್ದು ಜರ್ಝರಿತಗೊಳ್ಳುವಂತೆ ಮಾಡಿತು. ಸರ್ವಾಧಿಕಾರಿಯು ಆಡಳಿತ ಹಿಡಿದ ಹನ್ನೆರೆಡು ದಿನಗಳಲ್ಲಿ ಕವಿಯ ದೇಹ ಇಹಲೋಕ ತ್ಯಜಸಿತು. ಕ್ಯಾನ್ಸರ್ ಉಲ್ಬಣಿಸಿ ಮರಣ ಸಂಭವಿಸಿತು ಎಂಬ ಹೇಳಿಕೆ ಹೊರಬಿದ್ದರೂ, ಆಸ್ಪತ್ರೆಯಲ್ಲಿ ಒಬ್ಬ ವೈದ್ಯ ಬಂದು ಹೊಟ್ಟೆಗೆ ಇಂಜೆಕ್ಷನ್ ಚುಚ್ಚಿ ಹೋದ ಆರೇ ತಾಸುಗಳಲ್ಲಿ ಕವಿ ಕೊನೆಯುಸಿರೆಳೆದಿದ್ದರಿಂದ ಅದು ಕೊಲೆ ಎಂಬ ಆರೋಪ ಕೇಳಿಬಂತು. ಅಭಿಮಾನಿಗಳು ದಂಗೆಯೆದ್ದರು. ಮರಣೋತ್ತರ ಶವಪರೀಕ್ಷೆ ಆಯಿತು, ವರದಿ ಬಂತು. ಕೆಲವರು ಕವಿಯ ಸಾವಿನ ಹಿಂದೆ ಆಳುವವರ ಕೈವಾಡವಿದೆ ಎಂದು ಬಲವಾಗಿ ಶಂಕಿಸಿದರು; ಇಲ್ಲ ಎಂದು ಪರಿಣಿತರೆಂದರು. ಕೊನೆಗೆ ಕವಿಯ ಅಂತ್ಯಸಂಸ್ಕಾರ ಸಾರ್ವಜನಿಕ ಸಮಾರಂಭವಾಗದಂತೆ ಪಿನೊಶೆ ಸರ್ಕಾರ ಅವಸರದಲ್ಲಿ ತಾನೇ ಮಾಡಿ ಮುಗಿಸಿತು.  

‘ಎಲ್ಲ ವಸ್ತುಗಳಿಗೂ ಕೊನೆಗೇನಾಗುವುದು? ಸಾವು ಮತ್ತು ಮರೆವು ಎರಗುವುದು’ ಎನ್ನುತ್ತಾನೆ ನೆರೂಡ. ಆದರೆ ಅವನ ಕವಿತೆಗಾಗಲೀ, ನೆನಪುಗಳಿಗಾಗಲೀ ಅವೆರಡೂ ಬಂದೆರಗಿಲ್ಲ. ಇದಕ್ಕೆ ಚಿಲಿ ಎಂಬ ಪುಟ್ಟ ದೇಶದ ಅವನ ಮನೆಗಳಿಗೆ ಪ್ರತಿನಿತ್ಯ ಬಂದುಹೋಗುವ ಕಾವ್ಯಾಭಿಮಾನಿಗಳು, ಜಗತ್ತಿನ ಹಲವೆಂಟು ಭಾಷೆಗಳಿಗೆ ಇವತ್ತಿಗೂ ಮತ್ತೆಮತ್ತೆ ಅನುವಾದಗೊಳ್ಳುತ್ತಲೇ ಇರುವ ಅವನ ಕವಿತೆಗಳೇ ಸಾಕ್ಷಿಯಾಗಿವೆ. 

ಅವನು ತನ್ನ ದೇಶದಲ್ಲಿ ಅತಿ ಪ್ರಖ್ಯಾತನಾಗಿದ್ದ, ಅತಿ ದ್ವೇಷದ ಬೆಂಕಿಗೆ ಸುಟ್ಟುಕೊಂಡವನೂ ಆಗಿದ್ದ. ಜಗತ್ತಿನಲ್ಲೆ ಪ್ರಸಿದ್ಧ ಕವಿಯಾಗಿದ್ದ. ನೆರೂಡನನ್ನು ಅವನ ಎಡಪಂಥೀಯ ಒಲವಿಗಾಗಿ, ರೊಮ್ಯಾಂಟಿಕ್ ಪ್ರೇಮಕವಿತೆಗಳಿಗಾಗಿ, ರಾಜಕಾರಣದ ಸ್ಪಷ್ಟತೆಗಾಗಿ, ಪ್ರಕೃತಿ ಪ್ರೇಮಕ್ಕಾಗಿ ಹೀಗೆ ನಾನಾ ಕಾರಣಗಳಿಗಾಗಿ ಆರಾಧಿಸುವವರಿದ್ದಾರೆ. ಆದರೆ ಕವಿತೆ, ಸಿದ್ಧಾಂತ, ವಿಚಾರಗಳಾಚೆಗೂ ಬೆಳೆದುನಿಂತ ಅನನ್ಯ ಸೃಜನಶೀಲ ವ್ಯಕ್ತಿತ್ವ ಅದು ಎನ್ನುವುದಷ್ಟೇ ಸತ್ಯವಾಗಿದೆ.

***

ನೆರೂಡನ ಜೀವನದ ವಿವರಗಳು ೧೯೭೩ರಲ್ಲಿ ಆತ್ಮಕತೆ ‘ಮೆಮಾಯರ‍್ಸ್’ ಆಗಿ ದಾಖಲಿಸಲ್ಪಟ್ಟಿತು. ಅದನ್ನು ‘ನೆನಪುಗಳು’ ಆಗಿ ನಮ್ಮೆಲ್ಲರ ಪ್ರೀತಿಯ ಓ. ಎಲ್. ನಾಗಭೂಷಣ ಸ್ವಾಮಿ ಸರ್ ಕನ್ನಡಕ್ಕೆ ತಂದಿದ್ದಾರೆ. ೨೦೧೬ರಲ್ಲಿ ಕುಟುಂಬ ಸಮೇತ ದಕ್ಷಿಣ ಅಮೆರಿಕಾ ಪ್ರವಾಸ ಹೋಗುವ ಹೊತ್ತಿಗೆ ಓಎಲ್ಲೆನ್ ಅವರ ಕನ್ನಡಾನುವಾದದ ಕರಡು ನನಗೆ ಸಿಕ್ಕಿತು. ಅದನ್ನು ಓದುತ್ತ ದ. ಅಮೆರಿಕಾ ತಿರುಗಿದ್ದು ಆ ನೆಲ, ಜನ, ಸಮಾಜಗಳು ಪರಿಚಿತ ಎನ್ನುವಂತೆ ಮಾಡಿ ಅವಿಸ್ಮರಣೀಯ ಅನುಭವ ನೀಡಿತು. ಎಂದೇ ಓಎಲ್ಲೆನ್ ಸರ್‌ಗೆ ವೈಯಕ್ತಿಕವಾಗಿ ನಾನು ಋಣಿ. 

ದೀರ್ಘ ಅನುವಾದಗಳನ್ನು ಮಾಡುವಲ್ಲಿ ಓಎಲ್ಲೆನ್ ಸರ್ ಅವರ ಸಾಹಿತ್ಯ ಪ್ರೀತಿ ಮತ್ತು ಬದ್ಧತೆ ಅನನ್ಯ. ಅವರಿಗೆ ಅನುವಾದ ಎಂದರೆ ಒಂದು ವ್ರತದಂತೆ. ಎಂದೇ ಅವರ ಅನುವಾದಗಳ ಓದೂ ಸುಲಲಿತ. ಈ ಪುಸ್ತಕದ ಓದು ಹತ್ತಾರು ಸಾವಿರ ಮೈಲಿ ದೂರದಲ್ಲಿ ನೂರು ವರ್ಷ ಕೆಳಗೆ ಹುಟ್ಟಿದ ವ್ಯಕ್ತಿಯೊಬ್ಬನ ಜೀವನ ಚರಿತ್ರೆ ಓದುತ್ತಿರುವ ಅನುಭವ ನೀಡದೆ, ಇಲ್ಲೇ ಈಗ ಬಾಳಿದವನ ಕಥನ ಓದಿದ ಅನುಭವ ನೀಡುತ್ತದೆ. ಈ ಅನುವಾದದ ಮೂಲಕ ಸೃಜನಶೀಲ ಮನಸುಗಳ ಸಂವೇದನೆಯನ್ನು ವಿಸ್ತಾರಗೊಳಿಸುವ ಮಹತ್ತರ ಕಾರ್ಯವನ್ನು ಮಾಡಿರುವ ಸರ್, ನಿಮಗೆ ಎಲ್ಲ ಕನ್ನಡ ಮನಸುಗಳ ಪರವಾಗಿ ಧನ್ಯವಾದಗಳು..

ಈ ಅನುವಾದ ಪ್ರಕಟಗೊಳ್ಳಲು ಅನುಮತಿಸಿದ ಪೆಂಗ್ವಿನ್ ಇಂಡಿಯಾ ಪ್ರಕಾಶನ ಸಂಸ್ಥೆ; ಪುಟವಿನ್ಯಾಸ ಮಾಡಿದ ಅರುಣ ಕುಮಾರ್ ಜಿ; ಅಂದವಾಗಿ ಮುದ್ರಿಸಿದ ಇಳಾ ಮುದ್ರಣದ ಗುರು ಮತ್ತು ಸಿಬ್ಬಂದಿ ವರ್ಗಕ್ಕೆ ಪ್ರಕಾಶನವು ಅಭಾರಿಯಾಗಿದೆ. ಕೊಂಡು ಓದುವ ಮೂಲಕ ಹಾಗೂ ಪರಿಚಿತರಿಗೆ ಕಾಣಿಕೆಯಾಗಿ ಪುಸ್ತಕಗಳನ್ನು ನೀಡುವ ಮೂಲಕ ಓದುವ ವಲಯ ಸೃಷ್ಟಿಸುತ್ತಿರುವ ಎಲ್ಲ ಓದುಗ ಬಂಧುಗಳಿಗೂ ನಾವು ಋಣಿಯಾಗಿದ್ದೇವೆ.


No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...