Wednesday, March 22, 2017

ಬಸವಣ್ಣ ಏಕೆ ಬೇಕು? : ನಿವೇದನೆ

Image result for ರಂಜಾನ್ ದರ್ಗಾ


ರಂಜಾನ್ ದರ್ಗಾ

ನಮ್ಮ ಪ್ರಕಾಶನವು ಪ್ರಕಟಿಸುತ್ತಿರುವ ರಂಜಾನ್ ದರ್ಗಾ ಅವರ  ಬಸವಣ್ಣ ಏಕೆ ಬೇಕು? ಹೊಸ ಪುಸ್ತಕಕ್ಕೆ ಅವರು ಬರೆದ ಮೊದಲ ಮಾತು

ಪುಸ್ತಕದ ಬೆಲೆ : 30 ರೂನಿವೇದನೆ

 ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ.
ಜಲ ಬಿಂದುವಿನ ವ್ಯವಹಾರ ಒಂದೇ,
ಆಸೆಯಾಮಿಷ ರೋಷ ಹರುಷ ವಿಷಯಾದಿಗಳೆಲ್ಲ ಒಂದೇ.
ಏನನೋದಿ ಏನ ಕೆಳಿ ಏನು ಫಲ?
ಕುಲಜನೆಂಬುದಕ್ಕೆ ಆವುದು ದೃಷ್ಟ?
ಸಪ್ತಧಾತು ಸಮಂ ಪಿಂಡಂ ಸಮಯೋನಿ ಸಮದ್ಭವಂ |
ಆತ್ಮ ಜೀವ ಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ || ಎಂದುದಾಗಿ,
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು.
                                               -ಬಸವಣ್ಣ

Image result for ಬಸವಣ್ಣ


 ಮಾನವರ ಹುಟ್ಟು ಮತ್ತು ಪ್ರವೃತ್ತಿಗಳು ಒಂದೇ ಆಗಿವೆ. ಉತ್ತಮ ಕುಲದಲ್ಲಿ ಹುಟ್ಟಿದವರು ಎಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ. ಜಾತಿಗಳು ಮೂಲದಲ್ಲಿ ಕಾಯಕಗಳೇ ಇವೆ. ಆದ್ದರಿಂದ ಜಾತಿಗಳು ಸ್ಥಗಿತಗೊಂಡ ವರ್ಗಗಳು. ಮಾನವ, ಕಬ್ಬಿಣದ ಕಾಯಕದ ಮೂಲಕ ಕಮ್ಮಾರನಾದ, ಬಟ್ಟೆ ಒಗೆಯುವ ಮೂಲಕ ಮಡಿವಾಳನಾದ, ಮಗ್ಗದ ಕೆಲಸದಲ್ಲಿ ತೊಡಗಿದ ಕಾರಣ ನೇಕಾರನಾದ, ವೇದವನ್ನು ಓದುವುದನ್ನೇ ಕಾಯಕ ಮಾಡಿಕೊಂಡು ವೈದಿಕನಾದ. ಎಲ್ಲರೂ ಒಂದೇ ತೆರನಾಗಿ ಜನಿಸಿದ್ದಾರೆ. ಬಾಯಿ, ಭುಜ, ತೊಡೆ, ಪಾದ, ಕರ್ಣ ಮುಂತಾದ ಅಂಗಾಂಗಗಳಿಂದ ಜನಿಸಿದವರು ಯಾರೂ ಇಲ್ಲ ಎಂದು ಬಸವಣ್ಣನವರು ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ.

 ಉಳ್ಳವರು ಮತ್ತು ಬಡವರು ಎಂಬ ವರ್ಗಗಳು ಸತ್ಯ, ಆದರೆ ಕುಲಗೋತ್ರಗಳು ಅಸತ್ಯ. ಜಾತಿಗಳನ್ನು ಅಲ್ಲಗಳೆದ ಬಸವಣ್ಣನವರು ಜಾತಿಗಳ ಮೂಲದ ಕಾಯಕಗಳನ್ನು ಎತ್ತಿ ಹಿಡಿದರು. ’ದೇವಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ! ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ಕೂಡಲಸಂಗಮದೇವಾ ಭಕ್ತರಲ್ಲಿ ಕುಲವನರಿಸಿದಡೆ ನಿಮ್ಮ ರಾಣಿವಾಸದಾಣೆ’ ಎಂದು ಬಸವಣ್ಣನವರು ಹೇಳುವ ಮೂಲಕ ಲಿಂಗವಂತರಲ್ಲಿ ಕುಲ ಜಾತಿಗಳಿಲ್ಲ, ಆದರೆ ಕಾಯಕಗಳಿವೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಯಾವ ಕಾಯಕವೂ ದೊಡ್ಡದಲ್ಲ, ಯಾವ ಕಾಯಕವೂ ಚಿಕ್ಕದಲ್ಲ. ಆದ್ದರಿಂದ ಲಿಂಗವಂತರು ಮನೆಗೆ ಬಂದಾಗ ಅವರ ಕಾಯಕ ಯಾವುದೆಂದು ಕೇಳುವುದಿಲ್ಲವೆಂದು ಬಸವಣ್ಣನವರು ಹೇಳುತ್ತಾರೆ. ಲಿಂಗವಂತ ಧರ್ಮದಲ್ಲಿ ಸಮಗಾರ, ಡೋಹರ, ಮಾದರ, ಮಡಿವಾಳ, ಅಂಬಿಗ ಮುಂತಾದವು ಕಾಯಕಗಳೇ ಹೊರತು ಜಾತಿಗಳಲ್ಲ. ಹೀಗೆ ಬಸವಣ್ಣನವರು ಜಾತಿಗಳನ್ನು ಅಲ್ಲಗಳೆಯುವ ಮೂಲಕ ಕಾಯಕಜೀವಿಗಳನ್ನು ಒಂದುಗೂಡಿಸಿ ದುಡಿಯುವ ವರ್ಗವಾಗಿಸಿದ್ದಾರೆ.

 ಇಷ್ಟಲಿಂಗದ ಮೂಲಕ ಎಲ್ಲ ಕಾಯಕಜೀವಿಗಳನ್ನು ಒಂದು ಮಾಡಿದ್ದು ಮಧ್ಯಯುಗದ ಮಹಾನ್ ಸಾಧನೆ. ಈ ಸಾಧನೆಯನ್ನು ಭಾರತೀಯ ಸಮಾಜ ಇಂದಿಗೂ ಸಾಧಿಸುವಲ್ಲಿ ವಿಫಲವಾದದ್ದು ರಾಷ್ಟ್ರೀಯ ದುರಂತವಾಗಿದೆ. ಭಾರತೀಯ ಕಾಯಕಜೀವಿಗಳು ವರ್ಗವಾಗಿ ಒಂದಾಗದೆ ಜಾತಿ ಉಪಜಾತಿಗಳ ಗುಂಪುಗಳಲ್ಲೇ ಉಳಿದುಕೊಂಡಿರುವುದರಿಂದ ಭಾರತದೇಶ ಜಾತಿವಾದಿಗಳ, ಕೋಮುವಾದಿಗಳ ಮತ್ತು ಉಗ್ರವಾದಿಗಳ ರಣರಂಗವಾಗುತ್ತಿದೆ. ಫ್ಯಾಸಿಸ್ಟ್ ಶಕ್ತಿಗಳು ಧರ್ಮದ ಹೆಸರಿನಲ್ಲಿ ತಮ್ಮ ವಿಕೃತ ರೂಪವನ್ನು ಪ್ರದರ್ಶಿಸುತ್ತಿವೆ. ಇಂಥ ಅಸಹನೀಯ ಸಂದರ್ಭದಲ್ಲಿ ಬಸವತತ್ತ್ವ ಈ ದೇಶವನ್ನು ಫ್ಯಾಸಿಸ್ಟರಿಂದ ರಕ್ಷಿಸುವ ಸಾಮರ್ಥ್ಯ ಹೊಂದಿದೆ. ಬಸವಣ್ಣನವರಿಗಿಂತ ಮೊದಲು ಇಂಥ ಜಾತಿಗಳನ್ನು ವರ್ಗವಾಗಿಸುವ ಐತಿಹಾಸಿಕ ಕಾರ್ಯವನ್ನು ಯಾರೂ ಮಾಡಿದ್ದಿಲ್ಲ ಎಂಬುದು ಗಮನಾರ್ಹವಾಗಿದೆ.

 ಬಸವತತ್ತ್ವಕ್ಕೆ ಮಹಾ ಪರಂಪರೆಯಿದೆ. ಮಹಾಭಾರತದ ಕಾಲದಲ್ಲೇ ಚಾರ್ವಾಕರು ಎಂದು ಕರೆಯಿಸಿಕೊಳ್ಳುವ ಲೋಕಾಯತರು ಶಾಂತಿ, ಸೌಹಾರ್ದ ಮತ್ತು ಸಮಾನತೆಗಾಗಿ ಧ್ವನಿ ಎತ್ತಿದ್ದಾರೆ. ಅವರು ಈ ಭೂಮಿಯ ಬಗ್ಗೆ ಸುಂದರವಾಗಿ ಮಾತನಾಡುತ್ತ ಚಾರ್ವಾಕರೆನಿಸಿದರು. ಈ ಲೋಕಕ್ಕೆ ಪ್ರಿಯರಾದ ಕಾರಣ ಲೋಕಾಯತರು ಎನಿಸಿದರು. ಲೋಕಾಯತರು ಹದ ಮಾಡಿದ ಸಾಮಾಜಿಕ ನ್ಯಾಯದ ಭೂಮಿಯಲ್ಲಿ ೨೬೦೦ ವರ್ಷಗಳಷ್ಟು ಹಿಂದೆಯೆ ಬುದ್ಧ ಮಾನವೀಯತೆಯ ಬೀಜ ಬಿತ್ತಿದ. ಆ ಮೊಳಕೆಯೊಡೆದ ಬೀಜವನ್ನು ಬಸವಣ್ಣ ೧೨ನೇ ಶತಮಾನದಲ್ಲಿ ಹೆಮ್ಮರವಾಗಿ ಬೆಳೆಸಿದರು. ನಂತರ ೨೦ನೇ ಶತಮಾನದಲ್ಲಿ ಅಂಬೇಡ್ಕರರು ಆ ಹೆಮ್ಮರದ ಫಲವನ್ನು ಸಂವಿಧಾನದ ರೂಪದಲ್ಲಿ ಕೊಟ್ಟರು.

 ಬುದ್ಧ, ಬಸವ, ಅಂಬೇಡ್ಕರರ ಅವೈದಿಕ ಮಾರ್ಗದರ್ಶನವನ್ನು ಭಾರತ ಕಡೆಗಣಿಸಿದರೆ ಅದು ವಿಕೃತಭಾರತವಾಗಿ ಮಾರ್ಪಡುತ್ತದೆ. ಇನ್ನೂ ಕಾಲ ಮಿಂಚಿಲ. ಈ ಮಹಾಪುರಷರು ಹಾಕಿಕೊಟ್ಟ ಮಾರ್ಗದಲ್ಲೇ ಮುಂದುವರಿಯುವುದರ ಮೂಲಕ ಭಾರತೀಯರು ಜಾತಿ ಮತ್ತು ವರ್ಗಗಳಿಲ್ಲದ ನವಸಮಾಜದ ನಿರ್ಮಾಣ ಮಾಡಬೇಕಿದೆ.

 ೧೨ನೇ ಶತಮಾನದಲ್ಲಿ ಬಸವಣ್ಣನವರು ಬಹಳಷ್ಟು ಮಹತ್ವದ ಕಾರ್ಯಸಾಧನೆ ಮಾಡಿದ್ದಾರೆ. ಕಾಯಕಜೀವಿಗಳು ಜಾತೀಯತೆಯಿಂದ ಹೊರ ಬಂದು ದುಡಿಯುವ ವರ್ಗವಾದಗಲೇ ವರ್ಗರಹಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂಬುದು ಅವರ ನಿಲವಾಗಿತ್ತು. ಐರೋಪ್ಯ ಖಂಡದ ಕಾರ್ಲ್ ಮಾರ್ಕ್ಸ್ ಅವರು ೧೯ನೇ ಶತಮಾನದಲ್ಲಿ ಇದೇ ಸತ್ಯವನ್ನು ವೈಜ್ಞಾನಿಕವಾಗಿ ಕಂಡು ಹಿಡಿದರು.

 ’ಸ್ಟೇಟ್ ವಿಲ್ ವಿದರ್ ಅವೆ’ (ಪ್ರಭುತ್ವ ನಾಶವಾಗಿ ಹೋಗುವುದು) ಎಂದು ಕಾರ್ಲ್ ಮಾರ್ಕ್ಸ್ ೧೯ನೇ ಶತಮಾನದಲ್ಲಿ ಹೇಳಿದರು. ಪ್ರಜಾಪ್ರಭುತ್ವದ ಬೇರುಗಳು ಪ್ರಭುತ್ವದ ಬೇರುಗಳಿಗಿಂತ ಆಳವಾಗಿದ್ದಾಗ ಮಾತ್ರ ಇದು ಸಾಧ್ಯ ಎಂದು ಅವರು ಎಚ್ಚರಿಸಿದರು. ನವಕಲ್ಯಾಣ(ಶರಣಸಂಕುಲ)ದಲ್ಲಿ ಕಾಯಕಜೀವಿಗಳ ಪ್ರಜಾಪ್ರಭುತ್ವವನ್ನು ಸೃಷ್ಟಿಸಿದ ಬಸವಣ್ಣನವರು ಅದನ್ನು ಸಬಲಗೊಳಿಸುವಲ್ಲಿ ಮಗ್ನರಾಗಿದ್ದರು. ರಾಜಪ್ರಭುತ್ವವವನ್ನು ನೇರವಾಗಿ ಎದುರಿಸುವ ಸಂದರ್ಭ ಅದಾಗಿರಲಿಲ್ಲ. ಆದರೆ ಶರಣರ ಜಾತಿವಿನಾಶ ಚಳವಳಿಯಿಂದ ಕಲ್ಯಾಣದ ರಾಜಪ್ರಭುತ್ವವ ಸಹಜವಾಗಿಯೆ ಶಿಥಿಲಗೊಳ್ಳತೊಡಗಿತು.

 ೧೨ನೇ ಶತಮಾನದಲ್ಲಿ ಊಳಿಗಮಾನ್ಯ ಪದ್ಧತಿಯ ಉತ್ಪಾದನಾ ವ್ಯವಸ್ಥೆಯಿತ್ತು. ಉತ್ಪಾದನಾ ಸಲಕರಣೆಗಳು ಕಾಯಕಜೀವಿಗಳ ಸೊತ್ತಾಗಿದ್ದವು. ಇಂಥ ಸಂದರ್ಭದಲ್ಲಿ ದುಡಿಯುವ ವರ್ಗವನ್ನು ಜಾತಿವ್ಯವಸ್ಥೆಯಿಂದ ಬಿಡಿಸಿ ವರ್ಗಪ್ರಜ್ಞೆಯನ್ನು ಮೂಡಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಅಲ್ಪಸಂಖ್ಯೆಯಲ್ಲಿದ್ದ ಶೋಷಕವರ್ಗ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ವರ್ಣಗಳಲ್ಲಿ ವಿಂಗಡಣೆಯಾಗಿತ್ತು. ಪಂಚಮರೂ ಸೇರಿದಂತೆ ಬಹುಸಂಖ್ಯೆಯಲ್ಲಿದ್ದ ಶೂದ್ರ ವರ್ಣ ವಿವಿಧ ಜಾತಿಗಳಲ್ಲಿ ವಿಂಗಡಣೆಯಾಗಿತ್ತು. ಇಂಥ ಸಂದರ್ಭದಲ್ಲಿ ಭಕ್ತಿಮಾರ್ಗದ ಮೂಲಕವೇ ಜನರನ್ನು ಒಂದುಗೂಡಿಸಲು ಸಾಧ್ಯ ಎಂಬುದನ್ನು ಬಸವಣ್ಣನವರು ಸಹಜವಾಗಿಯೆ ಅರ್ಥಮಾಡಿಕೊಂಡರು. ಬಸವಣ್ಣನವರ ಪರಿಕಲ್ಪನೆಯ ಭಕ್ತಿಯಲ್ಲಿ ವರ್ಣ, ಜಾತಿ ಮತ್ತು ವರ್ಗಗಳನ್ನು ಶಿಥಿಲಗೊಳಿಸುವ ಸಾಮರ್ಥ್ಯ ಇದೆ. ಆದರೆ ಒಂದು ತಲೆಮಾರಿನಲ್ಲೇ ಇದನ್ನೆಲ್ಲ ಸಾಧಿಸಲಿಕ್ಕಾಗದು. ಇದೊಂದು ನಿರಂತರ ಪ್ರಕ್ರಿಯೆಯಾಗಿರುವಂಥದ್ದು. ವರ್ಗಪ್ರಜ್ಞೆಯೊಂದಿಗೆ ಕಾಯಕಜೀವಿಗಳು ಒಂದಾಗಲೇ ಇದು ಸಾಧ್ಯ. ಅಂತೆಯೆ ಹಿಂಸೆಯ ಆ ಕಾಲಘಟ್ಟದಲ್ಲಿ ಅಹಿಂಸೆಯ ನೆಲೆಯಲ್ಲಿ ಭಾವನಾತ್ಮಕ ಸಮಾಜವೊಂದರ ನಿರ್ಮಾಣ ಮಾಡುವುದರ ಮೂಲಕ ರಾಜ್ಯಪ್ರಭುತ್ವಕ್ಕೆ ವಿಮುಖವಾಗುವುದು ಅನಿವಾರ್ಯವಾಗಿತ್ತು.

 ಸಂತರು, ದಾಸರು, ಅನುಭಾವಿ ಕವಿಗಳು ಮತ್ತು ದಕ್ಷಿಣ ಭಾರತಕ್ಕೆ ಬಂದ ಸೂಫಿಗಳು ಹಾಗೂ ಭಾರತದಲ್ಲಿ ಜನಿಸಿದ ಸೂಫಿಗಳೆಲ್ಲರೂ ೧೨ನೇ ಶತಮಾನದ ನಂತರದವರಾಗಿದ್ದಾರೆ. ಇವರಲ್ಲಿ ಕೆಲವರು ರಾಜಪ್ರಭುತ್ವಕ್ಕೆ ಮಾನವೀಯ ಮಾರ್ಗದರ್ಶನ ಮಾಡಲು ಬಯಸಿದರೆ ಬಹುಪಾಲು ಮಂದಿ ರಾಜಪ್ರಭುತ್ವಕ್ಕೆ ವಿಮುಖರಾದವರೇ ಇದ್ದಾರೆ.
 ಸಂತರನ್ನು ’ಮಹಾರಾಜ’ ಎಂದು ಕರೆಯಲಾಗುತ್ತಿದೆ. ಭಕ್ತಿಸಾಮ್ರಾಜ್ಯದ ಮಹಾರಾಜರಿವರು. ರಾಜಪ್ರಭುತ್ವಕ್ಕೆ ಆನುಭಾವಿಕ ನೆಲೆಯಲ್ಲಿ ಉತ್ತರನೀಡುತ್ತ ತಮ್ಮದೇ ಆದ ಜೀವನವಿಧಾನದೊಂದಿಗೆ ಅದಕ್ಕೆ ವಿಮುಖವಾಗಿಯೆ ಬಡವರಿಗೆ ಸಾಂತ್ವನದ ನೆಲೆಗಳನ್ನು ಗುರುತಿಸಿದವರು.

   ಗಾಳಿಯಲ್ಲಿ ತೇಲುವ ಟೊಳ್ಳುಮಾತುಗಳನ್ನು ರಂಜಕವಾಗಿ ಹೇಳುತ್ತ ಬಡವರನ್ನು ಭ್ರಮಾಲೋಕಕ್ಕೆ ಒಯ್ಯುವ ವರ್ತಮಾನದ ನಡೆದಾಡುವ ದೇವರುಗಳು ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡುತ್ತಿರುವುದರಿಂದ ಅವರೆಲ್ಲ ಭಕ್ತಿಪಂಥದವರ ರಾಜಪ್ರಭುತ್ವ ವಿರೋಧಿ ನಿಲವನ್ನು ಅರಿತುಕೊಳ್ಳಲು ಅಸಮರ್ಥರಾಗಿದ್ದಾರೆ.
 ಜಾತಿ ಮತ್ತು ವರ್ಗಗಳ ಮೇಲೆ ಅವಲಂಬಿಸಿರುವ ರಾಜ್ಯಶಕ್ತಿಯನ್ನು ಭಕ್ತಿಪಂಥ ಅಹಿಂಸಾತ್ಮಕವಾಗಿ ಎದುರಿಸುತ್ತಲೇ ಬಂದಿದೆ. ಅದರ ಮೂಲ ಸೆಲೆ ಶರಣರ ಚಳವಳಿಯಲ್ಲಿದೆ.

 ’ಊರ ಮುಂದೆ ಹಾಲ ಹಳ್ಳ ಹರಿಯುತ್ತಿರಲು ... ... ಬಿಜ್ಜಳನ ಭಂಡಾರವೆನಗೇಕಯ್ಯಾ.’, ’ಆನೀ ಬಿಜ್ಜಳನಿಗಂಜುವೆನೆ ಅಯ್ಯಾ’, ’ಭವಿ ಬಿಜ್ಜಳನ ಗದ್ದುಗೆ ಕೆಳಗೆ ಕುಳ್ಳಿರ್ದು ಓಲೈಸಿಹೆನೆಂದು ನುಡಿವರಯ್ಯಾ ಪ್ರಮಥರು.’, ’ಅರಸು ವಿಚಾರ, ಸಿರಿಯು ಶೃಂಗಾರ ಸ್ಥಿರವಲ್ಲ ಮಾನವಾ.’, ’ಅರಸರಿಯದ ಬಿಟ್ಟಿ’ ’ವ್ಯಾದನೊಂದು ಮೊಲವ ತಂದಡೆ ಸಲುವ ಹಾಗಕ್ಕೆ ಬಿಲಿವರಯ್ಯಾ (ಬೇಡನು ಮೊಲವನ್ನು ತಂದರೆ ಚಲಾವಣೆಯಲ್ಲಿರುವ ನಾಲ್ಕು ಕಾಸಿಗೆ ಖರೀದಿಸುವರು)., ನೆಲನಾಳ್ದನ ಹೆಣನೆಂದಡೆ ಒಂದಡಕೆಗೆ ಕೊಂಬವರಿಲ್ಲ ನೋಡಯ್ಯಾ.’, ’ಅರಸು ಪರಿವಾರ ಕೈವಾರ (ಹೊಗಳುಭಟ್ಟರು) ನೋಡಯ್ಯಾ.’ ’ಜೋಳವಾಳಿಂಗೆ (ಅನ್ನದ ಋಣಕ್ಕಾಗಿ) ಬಿಜ್ಜಳನಿಗೆ ಆಳಾದಡೇನು, ವೇಳೆವಾಳಿಂಗೆ (ಸಮರ್ಪಣಾ ಭಾವಕ್ಕೆ) ಕೂಡಿಕೊಂಡಿಪ್ಪ ಕೂಡಲಸಂಗಮದೇವ’ ಮುಂತಾದ ವಚನದ ಸಾಲುಗಳು, ಪ್ರಭುತ್ವದ ಬಗ್ಗೆ ಬಸವಣ್ಣನವರಿಗಿದ್ದ ನಿಲವಿನ ದ್ಯೋತಕಗಳಾಗಿವೆ. ಹಳೆ ವ್ಯವಸ್ಥೆಯ ಪ್ರಧಾನಿಯಾಗಿದ್ದುಕೊಂಡೂ ಹೊಸ ವ್ಯವಸ್ಥೆಯ ಹರಿಕಾರರಾಗಿದ್ದು ಬಸವಣ್ಣನವರ ಮಹಾ ಸಾಧನೆಯಾಗಿದೆ. ಇತಿಹಾಸದಲ್ಲಿ ಇಂಥ ಇನ್ನೊಂದು ಉದಾಹರಣೆ ಸಿಗುವುದಿಲ್ಲ.

 ಬಸವಣ್ಣನವರು ಬಿಜ್ಜಳ ರಾಜನ ವಿರುದ್ಧವಾಗಿರಲಿಲ್ಲ. ಆದರೆ ಹಿಂಸಾಮಯವಾದ ರಾಜ್ಯಶಕ್ತಿಯ ವಿರುದ್ಧವಾಗಿದ್ದರು. ಬಿಜ್ಜಳನ ಪ್ರಧಾನಿಯಾಗಿದ್ದುಕೊಂಡು ದೈನಂದಿನ ಕಾರ್ಯಗಳನ್ನೆಲ್ಲ ನಿಷ್ಠೆಯಿಂದ ಮಾಡುತ್ತ ಮತ್ತು ಕಾಯಕಜೀವಿಗಳನ್ನು ಹುರಿದುಂಬಿಸುತ್ತ ಪ್ರಾಮಾಣಿಕತೆಯನ್ನೇ ಉಸಿರಾಡಿದರು. ಕಾಯಕಜೀವಿಗಳು ಸ್ವಾವಲಂಬನೆಯ ಬದುಕು ಸಾಗಿಸುವುದರ ಮೂಲಕ ಪ್ರಜಾಶಕ್ತಿಯಾಗಿ ಬೆಳೆಯುವಂತೆ ನೋಡಿಕೊಂಡರು. ರಾಜ್ಯಶಕ್ತಿಯು ಯಾವುದೇ ರಕ್ತಕ್ರಾಂತಿಯಿಲ್ಲದೆ ಕುಸಿಯುವ ಪ್ರಸಂಗ ಬಂದೊದಗಿದೆ ಎಂದು ಮನುವಾದಿ ಪಟ್ಟಭದ್ರ ಹಿತಾಸಕ್ತಿಗಳು ಹಾಹಾಕಾರವೆಬ್ಬಿಸಿದವು. ಪ್ರಜಾಶಕ್ತಿಯ ಮೇಲೆ ದಾಳಿಯಾಗುವಂತೆ ನೋಡಿಕೊಂಡವು. ಶೋಷಣೆಯನ್ನು ಪ್ರತಿಪಾದಿಸುವ ವೈದಿಕಶಕ್ತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಮನುವಾದಿಗಳು ಹೀಗೆ ಶರಣರ ಮೇಲೆ ಅನ್ಯಾಯ ಮಾಡಿದರು. ಶರಣರ ಸಾವುನೋವಿಗೆ ಮೂಲ ಕಾರಣವಾದವು. ವೈದಿಕಧರ್ಮಸಿಂಹಾಸನ ಮತ್ತು ಅದಕ್ಕೆ ಪೂರಕವಾಗಿರುವ ರಾಜಸಿಂಹಾಸನದ ಉಳಿವಿಗಾಗಿ ಶ್ರಮಿಸಿದವು. ಪ್ರಜಾಶಕ್ತಿ ಮತ್ತು ರಾಜ್ಯಶಕ್ತಿ ಭಾರಿ ಪ್ರಮಾಣದಲ್ಲಿ ತದ್ವಿರುದ್ಧವಾಗುವಂಥ ಈ ಪ್ರಸಂಗ ಮಾನವ ಇತಿಹಾಸದಲ್ಲಿ ನಡೆದ ಮೊದಲ ಘಟನೆಯಾಗಿದೆ.

 ಜಾತಿಭೇದ, ವರ್ಣಭೇದ, ಲಿಂಗಭೇದ ಮತ್ತು ವರ್ಗಭೇದವಿಲ್ಲದ ಸ್ಥಿತಿಯಲ್ಲಿ ಮಾತ್ರ ಪ್ರಜಾಪ್ರಭುತ್ವ ನೆಲೆಗೊಳ್ಳಲು ಸಾಧ್ಯ ಎಂಬುದು ಬಸವಣ್ಣನವರ ದೃಢವಾದ ನಂಬಿಕೆಯಾಗಿತ್ತು ಎನ್ನುವುದಕ್ಕೆ ಅವರ ವಚನಗಳೇ ಸಾಕ್ಷಿಯಾಗಿವೆ. ಅಲ್ಲಿಯ ವರೆಗೆ ಜಗತ್ತಿನಲ್ಲಿ ಕೆಟ್ಟ ರಾಜನ ವಿರುದ್ಧ ಹೋರಾಡುತ್ತ ಒಳ್ಳೆಯ ರಾಜನನ್ನು ತರುವ ಸಂಪ್ರದಾಯವಿತ್ತು. ನಂತರ ಆತನೂ ಅಯೋಗ್ಯನೆಸಿದರೆ ಮತ್ತೆ ಹುಡುಕಾಟ ಪ್ರಾರಂಭವಾಗುತ್ತಿತ್ತು. ಇದು ಹೀಗೇ ನಿರಂತರವಾಗಿ ನಡೆದಿತ್ತು ಹೊರತಾಗಿ ರಾಜ್ಯಪ್ರಭುತ್ವಕ್ಕೆ ಪರ್ಯಾಯವಾಗಿ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯ ಕನಸನ್ನು ಯಾರೂ ಕಂಡಿರಲಿಲ್ಲ. ಆದ್ದರಿಂದಲೇ ಇಂಥ ಕನಸುಗಾರ ಬಸವಣ್ಣನವರು ನಮಗೆ ಮುಖ್ಯರೆನಿಸುತ್ತಾರೆ.

 ಬಸವಣ್ಣ ಏಕೆ ಬೇಕು? ಎಂಬುದನ್ನು ಈ ಕಾಲಮಾನದಲ್ಲಿ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುತ್ತ ಉತ್ತರ ಕಂಡುಕೊಳ್ಳಬೇಕಿದೆ. ಸುಲಿಗೆಕೋರರು ನಂಬಿಸುವ ಪ್ರಜಾಪ್ರಭುತ್ವದ ಜಾಗದಲ್ಲಿ ಜನರ ಪ್ರಜಾಪ್ರಭುತ್ವ ತರಬೇಕಿದೆ. ಅದಕ್ಕಾಗಿ ಮೊದಲಿಗೆ ಬಸವಣ್ಣನವರು ಆರಂಭಿಸಿದ ಜಾತಿವಿನಾಶ ಹೋರಾಟವನ್ನು ಮುಂದುವರಿಸಬೇಕಿದೆ.

 ೧೨ನೇ ಶತಮಾನದ ೨೧೧ ವಚನಕಾರರ ೧೪೯೩೪ ವಚನಗಳು ಸಿಕ್ಕಿವೆ. ಈ ವಚನಕಾರರಲ್ಲಿ ೩೩ ಮಂದಿ ವಚನಕಾರ್ತಿಯರಿದ್ದಾರೆ. ೫೬ ಮಂದಿ ಅಜ್ಞಾತ ವಚನಕಾರರಿದ್ದು ೧೨೨ ಮಂದಿ ವಚನಕಾರರಿದ್ದಾರೆ. ಈ ವಚನಕಾರರಲ್ಲಿ ಶೇಕಡಾ ೯೦ರಷ್ಟು ಜನ ವಿವಿಧ ಕಾಯಕಜೀವಿಗಳು, ದಲಿತ ಮೂಲದಿಂದ ಬಂದವರು ಮತ್ತು ಮಹಿಳೆಯರು ಇದ್ದಾರೆ. ೧೨ನೇ ಶತಮಾನದ ನಂತರ ಬಂದ ವಚನಕಾರರಲ್ಲಿ ಯಾವುದೇ ಕಾಯಕಜೀವಿಗಳ, ದಲಿತರ ಮತ್ತು ವಚನಕಾರ್ತಿಯರ ವಚನಗಳಿಲ್ಲ! (೧೫ನೇ ಶತಮಾನದ ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆಯ ಮೂರು ಸಾಲಿನ ಒಂದು ವಚನ ಮಾತ್ರ ಇದೆ.)
 ೧೨ನೇ ಶತಮಾನದ ನಂತರ ದಲಿತ, ಹಿಂದುಳಿದ ಮೊದಲಾದ ವಚನಕಾರರು ಮತ್ತು ವಚನಕಾರ್ತಿಯರು ಎಲ್ಲಿ ಹೋದರು? ಬೇರೆ ವಚನಕಾರರಿಗೆ ಸಿಕ್ಕ ಅವಕಾಶ ಅವರಿಗೇಕೆ ಸಿಗಲಿಲ್ಲ? ಅವರು ಬರೆಯುವ ವಾತಾವರಣವೇಕೆ ಸೃಷ್ಟಿಯಾಗಲಿಲ್ಲ? ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸುವ ಕಾಲ ಇದಾಗಿದೆ.

 ಬಸವಣ್ಣನವರ ಕಾಲದಲ್ಲಿ ಇದ್ದ ವಾತಾವರಣ ಸಂಪೂರ್ಣ ಬದಲಾಗಿ ಇಡೀ ಶರಣವ್ಯವಸ್ಥೆ ಮಠಮಾನ್ಯಗಳ ಹಿಡಿತದಲ್ಲಿ ಬಂದಿತು. ಮಹಾಮನೆ ಸಂಸ್ಕೃತಿಯ ಸ್ಥಾನದಲ್ಲಿ ಮಠಸಂಸ್ಕೃತಿ ವಿಜೃಂಭಿಸತೊಡಗಿತು. ಸ್ಥಾವರಲಿಂಗ ಚಿಗುರಿಸುವವರು ಮತ್ತೆ ಮುಂದೆ ಬಂದರು. ಮಹಿಳೆಯರಿಗೆ ಮತ್ತು ಒಟ್ಟಾರೆ ಕಾಯಕಜೀವಿಗಳಿಗೆ ಹಿನ್ನಡೆಯುಂಟಾಯಿತು. ಇದೇ ಸಮಾಜದೊಳಗಿನ ಪುರೋಹಿತಶಾಹಿಗಳು ವಚನಗಳನ್ನು ತಮ್ಮ  ಅನುಕೂಲಕ್ಕೆ ತಕ್ಕಂತೆ ತಿದ್ದಿದರು. ಅನೇಕ ಪ್ರಕ್ಷಿಪ್ತ ವಚನಗಳನ್ನು ಸೇರಿಸಿದರು. ಹೀಗೆಲ್ಲ ಮಾಡುವುದರ ಮೂಲಕ ಲಿಂಗಾಯತ ಮತ್ತು ವೀರಶೈವ ಎಂದು  ಗೊಂದಲ ಸೃಷ್ಟಿಸಿದರು.

 ಆ ಗೊಂದಲ ಇಂದಿಗೂ ಮುಂದುವರಿದಿದೆ. ವಚನಗಳ ಪರಿಷ್ಕರಣೆ ಮತ್ತು ಹೆಚ್ಚಿನ ಸಂಶೋಧನೆ ಈ ಕಾಲದ ಕಾರ್ಯವಾಗಬೇಕಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರ ಅಷ್ಟೇ ಅಲ್ಲದೆ, ಭಾಷಾವಿಜ್ಞಾನ, ಸಮಾಜವಿಜ್ಞಾನ, ಸಮಾಜಸೇವೆ, ಅರ್ಥವಿಜ್ಞಾನ, ಮನೋವಿಜ್ಞಾನ, ತತ್ತ್ವಜ್ಞಾನ, ಇತಿಹಾಸ ಮುಂತಾದ ವಿಭಾಗಗಳಲ್ಲಿ ಕೂಡ ಶರಣರ ಚಳವಳಿ ಮತ್ತು ವಚನಗಳು ಅಧ್ಯಯನದ ವಿಷಯಗಳಾಗಬೇಕಿದೆ.

 ನನ್ನ ಮೊಮ್ಮಗಳು ಅದಿತಿ ಮಗುವಾಗಿದ್ದಾಗಿನಿಂದಲೂ ಬಸವಣ್ಣನವರ ವಿವಿಧ ಭಾವಚಿತ್ರಗಳನ್ನು ನೋಡುತ್ತ ಬೆಳೆದವಳು. ಯಾವುದೇ ಪುಸ್ತಕದಲ್ಲಿ ಯಾವುದೇ ಪ್ರಕಾರದ ಬಸವಣ್ಣನವರ ಚಿತ್ರವಿದ್ದರೂ ತಂದು ತೋರಿಸುತ್ತ ’ಬಸಣ್ಣ’ ಎಂದು ಹೇಳುತ್ತಾಳೆ. ಬಸವಣ್ಣನವರ ಜೊತೆ ಮಾತನಾಡುವ ಬಯಕೆಯನ್ನು ನನ್ನ ಬಳಿ ಬಂದಾಗ ವ್ಯಕ್ತಪಡಿಸುತ್ತಲೇ ಇರುತ್ತಾಳೆ. ಅವಳು ಮಾತನಾಡಬೇಕು ಎಂದು ಹಟ ಮಾಡಿದಾಗಲೆಲ್ಲ ಕಲಬುರಗಿಯ ಸೋಮಣ್ಣ ನಡಕಟ್ಟಿ ಅವರು ಬಸವಣ್ಣನವರಾಗಿ ಮೊಬೈಲ್ ಮೂಲಕ ಮಾತನಾಡುತ್ತಾರೆ. ಧಾರವಾಡಕ್ಕೆ ಬಂದಾಗ ಪ್ರತಿಸಲವೂ ’ಬಸಣ್ಣ’ ಅವರನ್ನು ಧಾರವಾಡಕ್ಕೆ ಕರೆಯುತ್ತಿದ್ದಳು. ಈಗ ಅಮೆರಿಕದಿಂದ ಧಾರವಾಡಕ್ಕೆ ಬರುವವಳಿದ್ದಾಳೆ. ಅವಳಿಗಾಗಿ ಬಸವಣ್ಣನವರ ಕುರಿತು ಬರೆದ ಕವನವನ್ನು ಈ ಪುಸ್ತಕದ ಬ್ಲರ್ಬ್‌ಗೆ ಬಳಸಿರುವೆ.

 ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಲಡಾಯಿ ಪ್ರಕಾಶನದ ಬಸೂಗೆ ಕೃತಜ್ಞನಾಗಿದ್ದೇನೆ. ಅವರಿಗೆ ಶರಣುಶರಣಾರ್ಥಿ, ಲಾಲ್ ಸಲಾಂ ಮತ್ತು ಜೈ ಭೀಮ್.

ಧಾರವಾಡ                                                  
೨೨ .೦೩. ೨೦೧೭
No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...