Monday, July 24, 2017

ಎಚ್.ಕೆ.ಶರತ್ : ಕವಿತೆಗಳು

೧ 
ಮೇಡ್ ಇನ್...’ ಮುಖವಾಡದೊಳಗೆ...

Image result for made in india cartoon


ನೆತ್ತರ ತೇವ ಹೀರಿ
ಮಿದುವಾದ ಮಣ್ಣು ನೀವಿ
ರೂಪಿಸಿದ
ಗೊಂಬೆಯ ಮುದ್ದಿಸಲು
ನೆರೆದಿದೆ
ಉಳ್ಳವರ ಸಾಲು.

ಜಗದ ಮೂಲೆ ಮೂಲೆಗಳಲ್ಲೆಲ್ಲೋ
ಬೀಳುವ ಬಾಂಬುಗಳಿಗೆ
’ಮೇಡ್ ಇನ್ ....’ ಟ್ಯಾಗು
ತೂಗು ಹಾಕಿದವರೇ
ಜಗದ ಶಾಂತಿಗೆ
ಹಂಚುತ್ತಿದ್ದಾರೆ ತಮ್ಮ ಪಾಲು.

ತಮ್ಮೊಳಗಿನ ರಕ್ತ
ಒಳಗೇ ಬೆಚ್ಚಗಿರುವಾಗ
ಅವರಿವರ ನೆತ್ತರು ಹರಿದರೂ
ತತ್ತರಿಸದವರು,
ಇದೀಗ
ತಾವೇ ಎಲ್ಲರ ಕೈಗೂ
ತುರುಕಿದ ಬಂದೂಕು
ಕಿತ್ತುಕೊಳ್ಳುವ ಆತುರದಲ್ಲಿದ್ದಾರೆ.

’ಮೇಡ್ ಇನ್ ....’ ಎಂಬುದು
ಮುಖವಾಡವಷ್ಟೇ;
ಮುಖವಾಡದ ಒಳ ಬದಿಯಲ್ಲಿ
ಹುದುಗಿರುವ
ರಕ್ತ ಬಸಿದವರ ಚರಿತ್ರೆಗಳು
ಶಾಂತಿ ಯಾತ್ರೆಯಲಿ
ಪಾಲ್ಗೊಳ್ಳುವ ಉಮೇದಿನಲ್ಲಿವೆ.

ವಾಸ್ತವ
ಬಾಂಬು ಬಂದೂಕು ಧರ್ಮ ಯುದ್ಧಗಳ
ಉತ್ಸವದಲ್ಲಿ
ಕಾಲ್ತುಳಿತಕ್ಕೆ ಸಿಲುಕಿ ಸಾಯುತ್ತಿದೆ.
***


ಕ್ಷಮಿಸಿಬಿಡು ದಂಡೆಯೇ...

Image result for abstract paintings on see

ದಾಟಿಕೊಂಡೇ ಹೋಗಬೇಕಿರುವ
ದಂಡೆಯೇ,
ನಿನ್ನ ಮೇಲೂ ಮೋಹವಿದೆ.
ಈಜಲಿಂದೇ
ಇಲ್ಲಿಗೆ ಬಂದ
ಜೀವವಿದು,
ಕ್ಷಮಿಸಿ ಬಿಡು...
ಹಾರಬೇಕಿದೆ ನದಿಗೆ.

ನದಿಯೊಳಗೆ ಹಿಡಿದಿಡಲು
ಹೊರಟ ಉಸಿರು
ನನ್ನದೇ ಹಿಡಿತಕ್ಕೆ ಸಿಗದೇ
ನೀರೊಳಗೂ ಇಳಿದಿರಬಹುದು,
ನಿನ್ನೆಡೆಗೂ ಬರಬಹುದು.

ಉಸಿರಿರುವವರೆಗೂ
ನೀರಿನೊಡಲಿಗೆ
ನಿಟ್ಟುಸಿರು ಸುರಿಯುತ್ತೇನೆ.
ಆಮೇಲಿ,
ಮತ್ತೆ ನಿನ್ನ ಬಳಿಯೇ
ಬರುತ್ತೇನೆ,
ನಿನ್ನೊಳಗೇ ಉಳಿಯುತ್ತೇನೆ.

ಕ್ಷಮಿಸಿ ಬಿಡು ದಂಡೆಯೇ,
ಉಸಿರಾಡಬೇಕಿದೆ ನದಿಯೊಳಗೆ
ಉಸಿರು ನಿಂತ ಮೇಲಿ
ಬರುವೆನು ನಿನ್ನ ಅಡಿಗೆ!
***


೩ 
ಬೇಲಿ ಇರದ ಬಯಲು
Image result for abstract paintings on live without boundary


ಕಣ್ಣ ರೆಪ್ಪೆ ತೆರೆದು
ನಿದ್ರಿಸುವ ನೋವಿಗೆ
ಕಣ್ಣು ಮುಚ್ಚಿದವರದೇ
ಕನಸು

ನಿಂತ ಬಯಲಿಗೆ
ಬೇಲಿಯೇ ಇರದಿರುವಾಗ
ಬಯಲು ಏಕೆ
ಚಲಿಸಬೇಕು?

ನೋಡುವುದು ಮಾತ್ರವೇ
ಸತ್ಯವಾಗಿದ್ದರೆ
ಜಗತ್ತು ಸುಖವಾಗಿ
ಬಾಳುತ್ತಿತ್ತೇನೋ?

ಅಳುವುದಷ್ಟೇ ನೋವಾಗಿದ್ದರೆ
ಜೀವ
ನೆಮ್ಮದಿಯ ನಿಟ್ಟುಸಿರು
ಬಿಡುತ್ತಿತ್ತೇನೋ?

ದೂರವೇ ಉಳಿದವರಿಗೆ
ಒಳಗಿದ್ದೇವೆನ್ನುವ ಭ್ರಮೆ.
ಒಳಗಿದ್ದವರಿಗೆ
ಮಾತ್ರವೇ ತಿಳಿದಿದೆ
ಬೇಲಿ ಇರದ ಬಯಲಿನ
ಮಹಿಮೆ.
***


೪ 
ವರ್ತಮಾನದ ಮಾತು
Related image

ತೆರೆದಂತೆಲ್ಲ ಬೆತ್ತಲಾಗುತ್ತಲೇ ಇದೆ ಬದುಕು
ಭವಿಷ್ಯವೊಂದೇ ಇನ್ನೂ ಓದದ ಪುಸ್ತಕ

ತೋರಿಕೆಗಷ್ಟೇ ಆಪ್ತವಾಗುವ ಭಾಷೆ
ಒಳಮನಸ್ಸಿಗೆ ಇನ್ನೂ ಅರ್ಥವಾಗಿಲ್ಲ

ಓದಲು ನಿಲುಕದ ಮಾತು
ಕೇವಲ ವಾಚ್ಯ ಎನಿಸಬಹುದು

ಕದಿಯಲು ಸಿಗದ ಪ್ರೀತಿ
ಭ್ರಮೆಯೂ ಇರಬಹುದು

ಹೇಳುತ್ತ ಹೋದಂತೆಲ್ಲ ಹೊರ ಬರುವ
ನಾ ಅರಿಯದ ವೇದಾಂತಗಳು
ಒಂಥರ ಹೈಬ್ರಿಡ್ ತಳಿಗಳು

ಇತಿಹಾಸ ಗೊತ್ತಿಲ್ಲದವನ ವರ್ತಮಾನದ ಮಾತು
ಇಣುಕಿದಂತೆಲ್ಲ ಸಿಗಬಹುದು ತೂತು
***ದೇಶಪ್ರೇಮಿಯಾಗುವುದು ಎಷ್ಟು ಸುಲಭ!
Related image


ದೇಶಪ್ರೇಮಿಯಾಗುವುದು ಎಷ್ಟು ಸುಲಭ...
ಜೀವಗಳ ಮೇಲೆ ಎರಗುವ
ಬಂದೂಕಿನ
ಯಶೋಗಾಥೆ ಬಣ್ಣಿಸಿದರಾಯಿತು

ದೇಶಪ್ರೇಮಿಯಾಗುವುದು ಎಷ್ಟು ಸುಲಭ...
ಗಡಿಯಲ್ಲಿ ಸಿಡಿದ ಬಾಂಬಿಗೆ
ಸೊಂಟದ ಕೆಳಗೆ ಸ್ವಾಧೀನ ಕಳೆದುಕೊಂಡು
ಹಾಸಿಗೆ ಹಿಡಿದ
ಮಿಲಿಟರಿಯಲ್ಲಿದ್ದ ಪಕ್ಕದ ಮನೆ ಅಣ್ಣನಿಗೆ
ತ್ಯಾಗಿಯ ಪಟ್ಟ ನೀಡಿ
ಹುರಿದುಂಬಿಸಿದರಾಯಿತು

ದೇಶಪ್ರೇಮಿಯಾಗುವುದು ಎಷ್ಟು ಸುಲಭ...
ಕಣ್ಣೆದುರೇ ಸತ್ತ
ಅತ್ಯಾಚಾರಕ್ಕೀಡಾದ
ತಮ್ಮ ಮಕ್ಕಳ ಕಣ್ಣೀರಿಗೆ ಕರಗಿ
ಬೆತ್ತಲಾಗಿ ಪ್ರತಿಭಟಿಸುವವರಿಗೆ
ನಾಚಿಕೆ ಬಿಟ್ಟವರೆಂದರಾಯಿತು

ದೇಶಪ್ರೇಮಿಯಾಗುವುದು ಎಷ್ಟು ಸುಲಭ...
ಸಿನಿಮಾ ಮಂದಿರದಲ್ಲಿ
ಎದೆ ಉಬ್ಬಿಸಿ ನಿಂತು
ಗೀತೆ ಹಾಡಿದರಾಯಿತು

ಮನುಷ್ಯನಾಗುವುದೇ ಕಷ್ಟ!
ಯಾರನೋ ಕೊಲ್ಲಲೆಂದು ಹೊರ ಬಂದ ಗುಂಡಿಗೆ
ನಾವು ಎದೆ ಒಡ್ಡಬೇಕು.
ಹಾಸಿಗೆ ಹಿಡಿದವನ
ಹೇಲು ಉಚ್ಚೆ ಬಾಚಬೇಕು.
ಬೆತ್ತಲೆ ದೇಹ ನೋಡಿಯೂ
ಕಣ್ಣೀರಿಡಬೇಕು.
ಎದ್ದು ನಿಲ್ಲಲಾಗದವರ
ಒಡಲ ಹಾಡಿಗೆ ಕಿವಿಯಾಗಬೇಕು.

ಮನುಷ್ಯನಾಗುವುದೇ ಕಷ್ಟ!
ಯುದ್ಧದ ಉನ್ಮಾದ ತಲೆಗೇರದಂತೆ
ಎಚ್ಚರ ವಹಿಸಬೇಕು.
ಸುತ್ತಲಿನ ಕುಹಕಕ್ಕೆ
ನಗೆ ಕಕ್ಕಬೇಕು.
***

ಎಚ್.ಕೆ.ಶರತ್ ಮೂಲತಃ ಹಾಸನದವನು. ಓದಿದ್ದು ಎಂ.ಟೆಕ್. ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಣೆ. ’ಮೊದಲ ತೊದಲು’, ’ಬೆಳಕಿನ ಬೇಲಿ’, ’ಗೋಡೆಗಳ ನಡುವೆ’ ಹಾಗು ’ಕುಶಲೋಪರಿ’ ಪ್ರಕಟಿತ ಕೃತಿಗಳು. 

3 comments:

  1. ದೇಶಪ್ರೇಮಿಯಾಗುವುದು ಕವಿತೆ ಸಶಕ್ತವಾಗಿದೆ. ಭಾರತದ ವರ್ತಮಾನಕ್ಕೆ ಮುಖಾಮುಖಿಯಾಗಿದೆ.

    ReplyDelete
  2. ದೇಶಪ್ರೇಮಿಯಾಗುವುದು ಸುಲಭ ಮನುಷ್ಯನಾಗುವುದು ಕಷ್ಟ. ಈ ಕವಿತೆ ಪ್ರಸ್ತುತ ಸಂಗತಿಗಳಿಗೊಂದು ಸಶಕ್ತವಾದ ರೂಪಕವಾಗಿದೆ.

    ReplyDelete
  3. ಕವಿತೆಗಳು ಚೆನ್ನಾಗಿವೆ

    ReplyDelete

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...