Wednesday, July 19, 2017

ನೀಲಾ ಕೆ : ಕವಿತೆಗಳು


Image result for ನೀಲಾ ಕೆ


ಅವ್ವನೆಂಬ ಅಮೃತದ ನೆನಪು...

Image result for abstract paintings on moon and mather


ಈಗ ಅವ್ವನೆಂದರೆ
ಎಂದೂ ಮರೆಯದ
ಒಂದು ನೆನಪು
ಆರದ ಕಣ್ಣ ಹನಿ.
ಕರುಳು ಬಿಕ್ಕುವ ದನಿ
ಎಂದೂ  ಮುಗಿಯದ
ಎದೆಯೊಳಗಿನ
ನೆನಪ ಮೆರವಣಿಗೆ

ಅವ್ವನೆಂದರೆ ಈಗ
ಮಳೆ ನಿಂತ ಮೇಲೂ
ಹುಲ್ಲ ಗರಿಕೆ ತುದಿಗೆ
ಹೊಳೆಯುವ ಇಬ್ಬನಿ
ಮತ್ತ್ಯಾವತ್ತೂ ಅಳಿಯದ
ಮನದ ಹಾಳೆಯಲು
ಕೆತ್ತಿದ ಚಿತ್ತಾರದ ಹಾಲ ಹನಿ.
ಹಿತ್ತಲಿನ ನೆಲದ ತುಂಬ
ಹರವಿದ ಬಿಸಿ ಬಿಸಿ ಬೂದಿ
ಅವಳ ಬೆಚ್ಚನೆಯ ತೋಳುಗಳ
ನೆನಪಿಸುವ ಹುಡುಕಾಟದ ಹಾದಿ.
ಒಂದರ ಮೇಲೊಂದು ಆಶ್ರಯಿಸಿದ
ಸಾಲುಸಾಲು ಕುಳ್ಳುಗಳು
ಬಿಡದ ನಂಟಿನಂಥ ಬಂಧಗಳು
ಪ್ರತಿ ಕುಳ್ಳೂ ಅಪ್ಪಿಕೊಂಡ
ಅವ್ವನ ಅಂಗೈಯ ಗೆರೆಗಳು.
ಇನ್ನೂ ಆರಲಿಲ್ಲವಲ್ಲ ಹಸಿ ಹೆಂಡಿಯ ಘಮ
ಯಾಕೆಂದರೆ ಅದರಲ್ಲಿ ಬೆರೆತು
ಬೇರಿಲ್ಲದಂತೆ ಹನಿ ಹನಿ
ಅವಳ ಬೆವರ ಘಮ
ಮತ್ತು ತೊಟ್ಟಿಕ್ಕಿದ ಕಣ್ಣೀರು
ಎಲ್ಲವೂ ಅವ್ವನ ನೆನಪು.


ಎಲ್ಲಿ ಬಿಚ್ಚಿದರೂ ನೆನಪ ಬುತ್ತಿ
ಸಿಂಗಾರಗೊಂಡ ಸಂಸಾರ ರಥದ ಕಾಲು ಚಕ್ರ.
ಸವೆದು ಸವೆದು ಚಕ್ರದ ತಳ
ಫಳ ಫಳ ಹೊಳೆದಂತೆ.
ಚಕ್ರವ್ಯೂಹ ಭೇದಿಸುವ ಬತ್ತದ ಸಾಹಸ.
ಹನಿದಷ್ಟು ನೆಲಕೆ ಬೆವರು
ಮತ್ತೆ ಮತ್ತೆ ಬಾಯಾರುವ ಭುವಿ
ಎಷ್ಟು ನಾಲಿಗೆಗಳು ಇಳೆಯ ಗಂಟಲಿಗೆ?
ದಣಿದಳೇನು ಅವ್ವ?
ಕಸುವುಳ್ಳ ತೋಳುಗಳು
ಸಮುದ್ರದಂಥ ಹೃದಯ
ಅವಳ ಬತ್ತಳಿಕೆಯ ಬರಿದಾಗಿಸದ ಅಸ್ತ್ರಗಳು.

ಬಿಸಿಲ ಎದೆಗೆ ಸುರಿದಂಥ ಬೆಂಕಿ ಅಪ್ಪ
ಮಳೆಯ ಕೊಡ ಹೊತ್ತ ಅವ್ವ
ಆತಾಳ-ಪಾತಾಳದಿಂದಲೇ
ಹೆಡೆಯೆತ್ತಿದರೂ ಹಾವು ಹರಿತಗೊಂಡ ಹಲ್ಲು
ತುಂಬಿ ತುಳುಕಿದರೂ ವಿಷದ ಚೀಲ
ಒಡಲ ಕಿಡಿಯಿಂದಲೇ ಹುಟ್ಟಿಸಿದಳು
ಅಮೃತಧಾರೆ.

***ಈ ರಾತ್ರಿ ಹೀಗೇ ಇರಲಿ
Related image


ಈ ರಾತ್ರಿ ಹೀಗೇ ಇರಲಿ
ನಾಳೆಗಾಗಿ ಮಸೆಯಲಾದ
ಕತ್ತಿ ಚಾಕು ಬಾಕು
ಇಟ್ಟಲ್ಲೇ ಇಲ್ಲವಾಗಲಿ
ಕರಾಳ ಕತ್ತಲಲ್ಲಿ ಕಾಣದಾಗಲಿ.
ಮತೀಯ ಮನಸುಗಳ ಮೇಲೆ
ಮಹಲು ಕಟ್ಟುವ ಇರಾದೆಯ
ಕನಸುಗಳು ಕನಸಾಗಿಯೇ ಇರಲಿ
ಸ್ವಪ್ನ  ಪ್ರವಾಹದಲ್ಲಿ ಈಜಾಡಿ
ಬೆಳ್ಳಂಬೆಳಗಿಗೆ ಹೊಳಪು ಹೊಮ್ಮಿಸುವ ಕೂಸಿನ
ಎದೆಗುದಿಯ ತಳಮಳ ನೂರ್ಮಡಿಸುವ
ಪ್ರಳಯ ತಾಂಡವ ನಾಳೆ ನಡೆಯದಿರಲಿ
ಮುಂದೆಂದೂ ನಡೆಯದಿರಲಿ
ನೆಲ ಬಿರಿದು ಎಲ್ಲವೂ ಇಲ್ಲವಾಗಿ
ಮಣ್ಣ ಕಣದೊಂದಿಗೆ ಬೆರೆವ
ಬೆರೆತು ನೆಲದುದ್ದಕ್ಕೂ ಹರಿಯವ
ರಕ್ತದ ಅಹನ್ಯ ಹನಿಗಳು
ಯಾವ ದೇಹದ ಜೀವ ಬಿಂದುವೋ
ಯಾರು ಬಲ್ಲರು?
ಹಸುಗೂಸುಗಳ ರಕ್ತ ನದಿಯಲ್ಲಿ
ನಾಳೆಗಳ ಕಾಗದದ ದೋಣಿಗೆ
ಹುಟ್ಹಾಕುವ ನಾವಿಕರೋ ಅವರು
ಕಟುಕ ಕುಲದ ಕುಡಿಗಳು
ಧಾಳಿಕಾರಂಗೆ ಧರ್ಮವುಂಟೆ?
ಈ ಧಾಳಿಗೆ ಸರಿಸರ್ವಸ್ವ
ಭೂಮಂಡಲ ಲಯ-ವಿಲಯ
ಅದಕ್ಕಾಗಿ
ಈ ರಾತ್ರಿ ಹೀಗೇ ಇರಲಿ
ಬೆಳಗಿನ ಉರುಳಿಗೆ ಬಲಿಯಾಗದಿರಲಿ
ಕಡಲು ದಾಟಿ ಬಂದ ಬಂದೂಕುಗಳು
ಎದೆ ಸೀಳುವ ಗುಂಡುಗಳ ಮೇಲೆ
ನಾಳೆಗಳ ಹಸಿರಿನ ಹೆಸರು
ನಳನಳಿಸುವ ಚಿಗುರು, ಮೊಗ್ಗು ಹೂವು
ಹೊಳೆವ ಬೂಟಿನಡಿ ಹೊಸಕಲೆಂದೇ
ಸಂಚು ಸಜ್ಜಾಗಿದೆ ಈ ರಾತ್ರಿ..
ತತ್ಕಾರಣ
ಈ ರಾತ್ರಿ ಹೀಗೇ ಇರಲಿ
ದಿನವೆಲ್ಲ ಸೂರ್ಯನ  ಹೆಡ ಮುರಿದು
ಬೆನ್ನಿಗೆ ಬೆಳಕಾಗಿಸಿಕೊಂಡು
ಹಾದಿ-ಬೀದಿ ಸಂದು-ಗೊಂದಿಯೆಲ್ಲ ಜಾಲಾಡಿರುವರು
ಗುಡಿಸಲುಗಳ ಒಳಗಿಣುಕಿ
ಹೆಂಗಳೆಯರ ಹರೆಯಕ್ಕೆ ಕಣ್ಣಿಟ್ಟಿರುವರು
ಮುಮ್ತಾಜಳ ಮುಖದ ಗುರುತಿಟ್ಟು
ಬೆಳಗಾಗಲೆಂದು ಕಾದಿರುವರು
ಬೆಳಕು ಹರಿದರೆ ಸಾಕು
ಮಸೆದ ಕತ್ತಿಯಲುಗಿಗೆ
ಮನುಷ್ಯರ ರಕ್ತ ರುಚಿಯ ದಾಹ
ಈ ದಾಹ ಇಂಗಿ ಹೋಗಲಿ
ಈ ರಾತ್ರಿ ಹೀಗೇ ಮುಂದುವರೆಯಲಿ......
***ಮರಳಿ ನಿನ್ನಲ್ಲಿ......

Image result for abstract paintings on moon and mather


ಮತ್ತೆ ಮರಳಿರುವೆ ತಾಯೇ
ನನ್ನಿರುವಿಕೆಯ ಏಕೈಕ ಸಾಕ್ಷಿಯೇ
ನಿನ್ನೊಡಲ ತಂಪರಸಿ.
ಕಣ್ಬಿಡುವ ಹೊತ್ತಲ್ಲಿ ನೀ ಕೊಟ್ಟ ಜೀವ
ಮಿಡಿತದ ತಂತು ಹಿಡಿದು
ಹೊರಳಿ ಬಂದಿರುವೆ.
ಮರೆಯಲೇ ಇಲ್ಲ ನೋಡು
ಹವಳದ ತುಟಿಗಂಟಿದ ಹಾಲಿನ ಘಮ.
ಸವೆದು ಹೋಗಿದೆ ದಾರಿ
ಪಾದಗಳೂರಿ ನೆಲಕ್ಕೆ
ಕಣ್ಣ ರೆಪ್ಪೆಗೆ ಜೀಕುತ ಕನಸುಗಳು
ಜೋಕಾಲಿಯಾಡಿವೆ ಯಾರದೋ ಮನಸುಗಳು.
ಮುಖವಾಡಗಳೊ ಮುಖಗಳೋ.........
ಹೇಗೆ ಗುರುತಿಸಲಿ ತಾಯೇ
ಕರುಳ ಒಳಗಿನ ಕತ್ತರಿಯನು
ಬೆವರು ಮಾರುವ ಬಾಜಾರನು....
ಮೃದು ಬೆರಳಿಗಂಟಿದ ಯಮಪಾಶವನು

ಸೆರಗಿನಾಸರೆ ಬಯಸಿ
ಹುಡುಕಿ ಕಂಗೆಟ್ಟಿರುವೆ.
ಭರ್ತಿ ಜಾತ್ರೆಯಲ್ಲಿ ಕೈಬಿಟ್ಟು
ಎಲ್ಲಿ ಹೋಗಿರುವೆ ತಾಯೇ......
ಬೇಕಿಲ್ಲ ನನಗೆ
ಬಣ್ಣ ಬಣ್ಣದ ಬಲೂನುಗಳು.
ಮತ್ತೆ ಕ್ಷಣದಲ್ಲಿ ಕರಗುವ
ರುಚಿಕಟ್ಟು ಬೆಂಡು-ಬತ್ತಾಸೆಗಳ
ನಿನ್ನ ಕಿರು ಬೆರಳ ತುದಿಯೊಂದೇ
ಬದುಕ ಬೆಳಕೆನಗೆ.
ಯುಗಗಳೇ ಆದವು ಕ್ಷಣಗಳು
ಚಂದಿರನ ಬೆಳಕಲ್ಲಿ
ಚುಕ್ಕೆಗಳ ಹೊಳಪಲ್ಲಿ
ಸೂರ್ಯ ಕಿರಣಗಳ ಪ್ರಖರದಲ್ಲಿ
ಎಷ್ಟು ಹುಡುಕಲಿ ಕರುಳ ಕಣ್ಣಿಗಾಗಿ.....
ಸೆರಗ ಚುಂಗಿನಲಿ ಹಣೆಯ ಬೆವರೊರೆಸು
ದಾಹಗೊಂಡಿದೆ ಮಮತೆ.
ಮಡಿಲು ಬೇಕಿದೆ ಅದಕೆ. ಮುಖವಿಟ್ಟು ಬಿಕ್ಕಲು.
ಬಾಹುಗಳ ಬಿಚ್ಚಿ ಮುಗಿಲಗಲ
ಬಚ್ಚಿಟ್ಟುಕೊ ಎನ್ನ ಕಣ ಕಣವೂ..
ಮತ್ತೆ ಹುರಿಗೊಳಿಸು ಈ ನಿನ್ನ ಕೂಸನ್ನು
ನೀ ತೋರಿದತ್ತ ನಾ ನಡೆವೆ ನಿಲ್ಲದೆ.

ದಣಿವರಿಯದೇ ನಡೆಯಲೆಣಿಸಿದೆ ಅಂದು
ಕಲ್ಲು ಮುಳ್ಳುಗಳಿದ್ದವು ಹಾದಿಯಲಿ
ಇರಲಿ ಎಷ್ಟಾದರೂ..
ಆದರೆ
ಮುಳ್ಳುಗಳ ಮೊನಚರಳಿತ್ತು
ಹೂಗಿದು ಹೂವಿನ ರೇಕನು.
ಭೇಟಿಯಾದವು ಬೆಕ್ಕುಗಳು
ಅಗಿಯುತ ತಮ್ಮದೇ ಕರುಳ ಕುಡಿಗಳನು.
ಬೆಚ್ಚಿದೆ ನಾನು
ಹರಿತಗೊಂಡ ಕತ್ತಿಯ
ಮಲ್ಲಿಗೆಯಂಥ ಪೋಷಾಕಿಗೆ.
ರಕ್ತ ರೊಟ್ಟಿಯ ತುತ್ತು
ಗೇಣು ಹೊಟ್ಟೆಯ ಹಸಿವಿಗೆ.
ತಲ್ಲಣಿಸಿದೆ ನಾನು
ಅವ್ವನ ಸೀರೆ ನಿರಿಗೆಯ ತುಣುಕು
ಬಾವುಟ ಹಿಡಿದ ಬೆರಳುಗಳ ನಡುವೆ!
ಬೆವರುವುದ ಕಂಡೆ ತುಂಡು ಬಾವುಟ
ಸಾರುವ ಕಂಠ ಅಮುಕುವ ಕೈಗಳು
ಅಟ್ಟಹಾಸದ ಕೆಂಗಣ್ಣುಗಳು
ನಿಗಿನಿಗಿ ಮುಷ್ಠಿಗಳು
ಖಾಲಿ ಒಡಲಿನ ತಾಪ
ಕಂಪನದ ಕಣ್ಣೀರು
ಎಲ್ಲಿ ಹುಡುಕಲಿ ನನ್ನವರ?
ಕಿಕ್ಕಿರದ ಭೀಡಿನಲಿ.....

ಧಿಕ್ಕಾರದ ತಾಕತ್ತೆಲ್ಲವ
ಭುವನ-ಭವನಕೂ
ಏಕವಾಗಿ ಝೇಂಕರಿಸುವ ಹೊತ್ತಲ್ಲಿ
ಗೊತ್ತು ಗುರಿಯಿಲ್ಲದೆ ಹೊರಟವು
ಕುರುಡು ನೊಣಗಳ ದಂಡು
ಅರಮನೆಯ ಕುರ್ಚಿಗೆ
ಕಿರೀಟಕ್ಕೊಡ್ಡಲು ಮೆದುಳನು.

ನಡೆಯಲೇಬೇಕಾದ ಪಯಣವಿದು
ನೆಲದಲಡಗಿದ ನಡೆಯರಸಿ
ಮುಗಿಲೊಡಲ ಮಿಂಚರಸಿ
ಮಲ್ಲಿಗೆಯ ಎಸಳಿನ ಮೇಲೆ
ಮುಗಳ್ನಗುವ ಇಬ್ಬನಿಯ
ಜೊತೆಯಾಗಿ
ಮತ್ತೆ ಹೊರಡಲೇಬೇಕಿದೆ.
ಹೊರಳಿ ಬಂದಿರುವೆ ತಾಯಿ......
ಹರಸು ಎನ್ನನು
ಕರುಳಿಗಿನಿತು ಕರುಣೆಯಿಟ್ಟು
ಸಂಚಯಿಸಿ ಶಕ್ತಿ ಹೊಸ ಚೈತ್ರದಂತೆ.
***


ಜಲದ ಬಲೆ
Image result for abstract paintings on che


ಅಲ್ಲಿ
ಎದೆ ಕಲಕುವ ಕಣ್ಣ ಹನಿಗಳ
ಭಾಷ್ಪ ಬಿಂದುವಿಗೆ
ಭಾಷೆ ಬರೆವ ತಾಖತ್ತಿಲ್ಲದ ಸೂರ್ಯ 
ಮೋಡದ ಮರೆಗೆ ಜರಿದ 


ಅಲ್ಲಿ
ಒಡೆದ ಬದುಕಿನ
ಎಣಿಕೆಗೆಟುಕದ ಚೂರುಗಳ
ಪ್ರತಿ ತುಣುಕುಗಳಲಿ
ಕತ್ತಿಯಲುಗಿನ ಬಿಂಬಗಳು
ನೆಲದ ಬಿರುಕುಗಳ ನಡುವೆ
ಸಿಕ್ಕಿ ನರಳುವ
ಕರುಳ ಬಳ್ಳಿಯ ಹೆಣಿಕೆ.
ನೆಲದ ನೋವಿಗೆ ನಲುಗಿ
ಮುಗಿಲ ಚಂದ್ರಾಮ
ಹರಿಸದೆ ಹಾಲ್ದಿಂಗಳ
ಕತ್ತಲ ಕೋಟೆಯಲ್ಲಿ ಬಿಕ್ಕುತ್ತಿದ್ದ


ಅಲ್ಲಿ
ನೀರ ಮೈ ತುಂಬ
ಸಾವ ಕೈಗಳು
ಹನಿ ಹನಿಯೂ ಹರಿದಾಡಿ
ಹೊಳೆಯಲ್ಲೂ ಹುದುಗಿ
ಮಳೆಯಲ್ಲೂ ಅಡಗಿ
ಹಗಲು ರಾತ್ರಿಗಳ
ಮುರಿದಿಟ್ಟು ಮೂಲಯಲಿ
ಬಿಗಿದಪ್ಪಿ ಯಮಪಾಶ
ಜಲದ ಬಲೆ ಬೀಸಿ.

***


ಸಾವಿಲ್ಲದ ಸಂಗಾತಿ

Image result for abstract paintings on che


ಚೇ
ಯಾಕೇ ನೀನು ಮತ್ತೆ ಮತ್ತೆ
ನೆನಪಾಗುವುದು?
ಈ ಸರಳುಗಳಾಚೆಗೆ
ಉದಯಿಸುವ ಸೂರ್ಯನಂತ
ಪುಟ್ಟ ಬೆಳಕಿನ ಕಿರಣವೂ
ಇಲ್ಲಿ ಭೂಗರ್ಭದ ಜ್ವಾಲಯಂತೆ
ಬೆಳೆದು-ಬೆಳಗಿ
ನೀನು ನೆನಪಾಗುತ್ತಿ ಚೇ

ಬಸಿವ ಬೆವರ ಧಾರೆ
ಧಾರೆಗಟ್ಟಿ ಇಳಿದು ಹೊಳೆದು
ಒಮ್ಮೆ ನನ್ನ ಹನಿಯಾಗಿಸಿ
ಮತ್ತೆ ಸಮುದ್ರವಾಗಿಸಿ
ಮತ್ತೆ ಹನಿಯಾಗಿಸಿ
ನೀನು ನೆನಪಾಗುತ್ತಿ ಚೇ

ಸರಳುಗಳಿಂದ ಇಣುಕಿದೆ
ಕಾಳ ಕತ್ತಲೆ ಸೀಳುತ್ತ
ಸುರುಳಿ ಸುರುಳಿ ಹೊಗೆ
ಹರಿದು ಆವರಿಸಿದಂತೆ
ಮನದ ಮಾಮರ
ಅದು ಸಿಗಾರ್ ಹೊಗೆಯೇ
ಸುತ್ತಿ ಸುಳಿದಾಡಿದಂತೆ ಜಗದಗಲವೂ
ನೀನು ನೆನಪಾಗುತ್ತಿ ಚೇ

ನೀನು ಹೆಜ್ಜೆಯಿಟ್ಟಲೆಲ್ಲ
ಭೂಮಂಡಲದ ಗಡಿ-ಗೆರೆಗಳು
ಮಾಯವಾಗಿ
ಮುಗಿಲಗಲ ಕೆಂಬಾವುಟ
ಗಾಳಿಯೇ ತಾನಾಗಿ
ಬೆವರ ಭಾವಕೆ ಭಾಷೆಯಾಗಿ
ನೀನು ನೆನಪಾಗುತ್ತಿ ಚೇಜಗದಗಲ ಮುಗಿಲಗಲ
ಪಾತಾಳದಿಂದvತ್ತ
ಕಣ್ಣೀರ ತೊಡೆವ ಮನಗಳಿಗೆ
ಕಳ್ಳು-ಬಳ್ಳಿಯ
ಬಂಧ-ಸಂಬಂಧದ
ಬೆಸುಗೆ ಹೆಣೆದು
ಅಕಟಕಟಾ ಸಾಲದ ಶಬ್ದಗಳಾಚೆಗೂ
ನೀನು ನೆನಪಾಗುತ್ತಿ ಚೇ
***


No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...