Tuesday, July 18, 2017

ಸಂವರ್ತ 'ಸಾಹಿಲ್' : ಅನುವಾದಿತ ಕವಿತೆಗಳು


Image result for ಸಂವರ್ತ 'ಸಾಹಿಲ್'

 ಸಂವರ್ತ 'ಸಾಹಿಲ್'


ರಾಷ್ಟ್ರವಾದಿ 
Image result for soibam haripriya


 ~ ಸೊಯಿಬಂ ಹರಿಪ್ರಿಯಾ
ಎಲ್ಲಾ ಬಣ್ಣದ ರಾಷ್ಟ್ರವಾದಿ 
ನೀವೆಲ್ಲರೂ ನನ್ನ ಪಾಲಿಗೆ ಕೇಸರಿ 
ಸಾಧ್ಯವಿದ್ದಿದ್ದರೆ ಖಂಡಿತವಾಗಿಯೂ 
ನಿಮ್ಮೊಂದಿಗೆ ಮಾತುಕತೆಗೆ ಬರುತ್ತಿದ್ದೆ
ಚರ್ಚೆ ನೆಡೆಸುತ್ತಿದ್ದೆ
ಇಡೀ ಸಭಾಂಗಣವನ್ನೇ ತುಂಬಿಸುವಷ್ಟು 
ವಾದಗಳನ್ನು ಮಂಡಿಸುತಿದ್ದೆ.
ಆದರೆ ನಿಮ್ಮ ಮಾತು ತಲುಪುವುದೆಲ್ಲಾ
ಹೇಟ್ ಮೇಲ್ ರೂಪದಲ್ಲಿ
ಅರ್ಧ ರಾತ್ರಿಯಲ್ಲಿ
ನಕಲಿ ಹೆಸರು ಹೊತ್ತು
ಅಸಲಿ ಧಮಕಿ ನೀಡುತ್ತಾ

ನನ್ನ ಯೋನಿಯ ರಾಷ್ಟ್ರೀಯತೆ
ಯಾವುದು ಎಂದು ಕೇಳಿದ್ದೀರಿ
ಅದರ ಬಿರುಕಿನಲ್ಲಿ
ಸಮುದಾಯದ ಅಧಃಪತನ
ಎಂದು ಹೆದರಿದ್ದೀರಿ

ಹೌದು, ನೀನೆ ನಿಜವಾದ ಯುದ್ಧವೀರ
ಸ್ವಯಂಘೋಷಿತ ಯೋಧ

ನನ್ನ ಯೋನಿ 
ನನ್ನದೇ ಯುದ್ಧಭೂಮಿ
ನನ್ನ ದೇಹದ ಪ್ರತಿ ಅಂಗುಲ
ಪ್ರತಿ ಕಪ್ಪು ಛಾಯೆ ನನ್ನದೇ.

ವಿವೇಚನೆಗೂ ನಿನಗೂ 
ಎತ್ತಣಿಂದೆತ್ತವೂ ಸಂಬಂಧವಿಲ್ಲ
ಗೊತ್ತು
ಅದಕ್ಕೇ ನಿನ್ನ ಬಗ್ಗೆ
ಸಿಟ್ಟಿಲ್ಲ
ಕೇವಲ ಮರುಕ.
***


ಶವ ಇಲ್ಲವೆಂದಾದರೆ
~ ಸೊಯಿಬಂ ಹರಿಪ್ರಿಯಾ
Image result for soibam haripriya


ಶವ ಇಲ್ಲವೆಂದಾದರೆ ನಾವೇನು ಮಾಡಬೇಕು?
ಆತ ತರಬೇತಿ ಪಡೆಯಲು ಹೋದಲ್ಲಿಯೇ
ಇಲ್ಲವಾದ ಎಂದು ಹೇಳುವುದನ್ನು ಕೇಳಿದ್ದೇನೆ
ಬಾಂಗ್ಲಾದೇಶವೋ ಇಲ್ಲ ಬರ್ಮಾವೋ!
ಯಾವ ದಿನ ಅವನ ಶ್ರಾದ್ಧ ಮಾಡಬೇಕು?
ನಾವೇ ಆಯ್ದುಕೊಳ್ಳಬೇಕೇ?
ಇದು ದುರ್ನಾತ ಬೀರುವ ಹೆಣಕ್ಕಿಂತ ವಾಸಿಯೇ?
ನೆರೆಮನೆಯವರ ಮಗ 
ಮೂರು ದಿನ ಬಿಟ್ಟು ಸಿಕ್ಕಿದ್ದ
ಸಾವು ಹೊಲಸಾಗಿ ಮಾರ್ಪಟ್ಟಿತ್ತು.

ತಾಯಿ ಹೇಳುತ್ತಾಳೆ, "ಇಲ್ಲ ಅವನು ಇನ್ನೂ ಸತ್ತಿಲ್ಲ
ನನಗಿನ್ನೂ ಆತ ಪ್ರೇತಾತ್ಮವಾಗಿ ಕಾಣಿಸಿಲ್ಲ.
ಸತ್ತವರನ್ನು ಯಾವ ಗೋಡೆಯೂ ತಡೆಯುವುದಿಲ್ಲ
ಮರಳಲೇ ಬೇಕು ಆತ ಸತ್ತಿದ್ದರೆ."

ಹೆಣ ಇಲ್ಲದಿದ್ದರೆ
ಆಕೆ ಅರ್ಧ-ವಿಧವೆಯಲ್ಲ ಸಂಪೂರ್ಣ ವಿಧವೆ ಎಂದು 
ಆಕೆಗೆ ಹೇಗೆ ಸಮಜಾಯಿಸಬೇಕು?
ಈ ಅರ್ಧ-ಸಂಪೂರ್ಣ ಇವುಗಳ ಗೊಂದಲ
ಗಾದೆ ಮಾತಿನ ಗ್ಲಾಸಿನಲ್ಲಿ ಮಾತ್ರ ಅಂದುಕೊಂಡಿದ್ದೆಯಾ?

ಹೆಣ ಇಲ್ಲವೆಂದರೆ
ಇನ್ನೊಂದಾವುದೋ ಹೆಣವನ್ನು ತಂದು
ಇದೇ ಹೆಸರಿನಿಂದ ಕರೆದು 
ಅಂತ್ಯಕ್ರಿಯೆ ನೆಡೆಸಬಾರದೇ?

ಅದೆಷ್ಟೋ ಮಂದಿ ಮರಳಿ ಬರುತ್ತಾರೆ
ದಹನದ ನಂತರ ಎಂದೋ 
ಪುನರೋತ್ಥಾನದಂತೆ ಆಕರ್ಷಕವಾಗಿ ಅಲ್ಲದಿದ್ದರೂ
ಯಾವುದೇ ಪವಾಡಕ್ಕೆ ಕಡಿಮೆ ಇಲ್ಲ ಎಂಬಂತೆ.

ಮರಳಿದಾಗ ಎದುರಾಗುತ್ತಾರೆ
ನೋವಿಗೆ, ಸಂತಸಕ್ಕೆ
ಕೆಲವೊಮ್ಮೆ ಇವೆಲ್ಲಕ್ಕಿಂತಲೂ ಹೀನಾಯವಾದ
ಅನಾದಾರಕ್ಕೆ.

ನೋಡಿ ಕೆಲವೊಮ್ಮೆ ಹೆಣ ಇಲ್ಲದೆ ಹೋದರೆ
ನಮ್ಮಲ್ಲಿ ನಿರೀಕ್ಷೆ, ಭರವಸೆ ಮೂಡಿಸಿದಂತೆ.
***


ನನ್ನ ಕಾವ್ಯ
~ ತನ್ನ ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ಕಾಶ್ಮೀರದ ಕವಯತ್ರಿ 

Image result for soibam haripriya


ಸಂಶಯಿಸಬೇಡ ಪ್ರಶ್ನಿಸಬೇಡ ನನ್ನನು 
ಹೇಳುತೇನೆ ಕೇಳು ನನ್ನ ಕಾವ್ಯದ ಶಕ್ತಿಯ 
ನನ್ನ ಕಾವ್ಯವೊಂದು ಜಾದೂ ಅಲ್ಲವೇ ಅಲ್ಲ 
ಅದನ್ನು ಮೀರಿದ 
ಪವಾಡವನ್ನೇ  ತನ್ನೊಳಗೆ  ಇರಿಸಿಕೂಂಡ
ಕಾವ್ಯ ನನ್ನದು 

ನಿನ್ನ ಬಾಂಬುಗಳನ್ನು ಹಕ್ಕಿಯಾಗಿಸಬಲ್ಲದು
ನಿನ್ನ ಕಾಡತೂಸುಗಳನ್ನು ಪ್ರಾಸವಾಗಿಸಬಲ್ಲದು 
ನಿನ್ನ ಚಿತ್ರಹಿಂಸೆಯನ್ನು ಸ್ವರಸಮ್ಮೇಳನವಾಗಿಸಬಲ್ಲದು

ನಿನಗೆಂದೂ ಅರ್ಥವಾಗದು ನನ್ನ ಕಾವ್ಯ
ಆದರೂ ನಾನು ಹಾಡುವುದನ್ನು ನಿಲ್ಲಿಸುವುದಿಲ್ಲ
ಯಾಕೆಂದರದು ನಿನ್ನ ವಿಷವನ್ನು ನಿಷ್ಕ್ರಿಯೆಗೊಳಿಸಬಲ್ಲದು
ನಿನ್ನ ಸಂಸತ್ತನ್ನು ಬುಡಸಮೇತ ನಡುಗಿಸಬಲ್ಲದು

ನನ್ನ ಕಾವ್ಯ ನಿನ್ನ ಚರ್ಮವನ್ನು ಸಿಗಿದು
ನೀ ಬಚ್ಚಿಡುವ ನಿನ್ನ ಘೋರ ವಿಕಾರವನ್ನು ಬಿಚ್ಚಿಡಬಲ್ಲದು 

ಕಣ್ಣೀರನ್ನು ಪ್ರವಾಹವಾಗಿಸಬಲ್ಲದು ನನ್ನ ಕಾವ್ಯ
ಪ್ರವಾಹವನ್ನು ಚಂಡಮಾರುತವಾಗಿಸಬಲ್ಲದು
ಚಂಡಮಾರುತವನ್ನು ಹೊಸ ಮುಂಜಾವಿನ
ಸ್ವಾತಂತ್ರ ಮತ್ತು ಭರವಸೆಯಾಗಿಸಬಲ್ಲದು

ನಿನ್ನ ನಾಲಿಗೆಗೆ ರುಚಿಸದೆ ಹೋಗಬಹುದು ನನ್ನ ಕಾವ್ಯ
ಆದರೆ ನನ್ನ ಹೃದಯಕ್ಕೆ ಅದರ ಕಹಿಯೇ ಔಷದ

ನಿನ್ನ ಕಿವಿಗಳಿಗೆ ಹಾಯಾಗಿ ಕೇಳಿಸದೆ ಇರಬಹುದು
ಆದರೆ ಅವುಗಳ ತಪ್ಪಿದ ಪ್ರಾಸ ತಪ್ಪಿದ ಛಂದಸ್ಸು 
ನನ್ನ ಎದೆಯ ಬಡಿತವನ್ನು ಧ್ವನಿಸುತ್ತದೆ
ಅದು ನನ್ನ ಕನಸನ್ನು ಜೀವಂತವಾಗಿರಿಸುತ್ತದೆ
ಸ್ವಾತಂತ್ರದ ಕನಸು

ಎಚ್ಚರ!
ನನ್ನ ಕಾವ್ಯ ಸುಡಬಲ್ಲದು ನಿನ್ನನು 
ಹಾಗಾಗಿ ಓದು
ಗಮನವಿಟ್ಟು ಓದು
ಆಸ್ವಾದಿಸು
ನಿನ್ನ ದಬ್ಬಾಳಿಕೆಯ ಫಿರಂಗಿಯಿಂದ ಹೊರಮ್ಮಲಾರದ್ದು
ನನ್ನ ಬೇಗುದಿಯ ಗರ್ಭದಿಂದ ಹೊರಹೊಮ್ಮುವುದು.
***ಏಕಾಂಗಿಯಾಗಿ...
Image result for siavash kasrai persian


~ ಸಿಯಾವಶ್ ಕಸ್ರಾಯಿ (ಪರ್ಷಿಯನ್)
ಆಂಗ್ಲ ಅನುವಾದ: ಅಜೀಜ್ ಮಹದಿ
Image result for soibam haripriya


ಕಾಣದ ಅಜ್ಞಾತ ದಡದತ್ತ 
ತೇಲುತ್ತಾ ಸಾಗುತ್ತಾ
ಚಲಿಸುತ್ತಿದ್ದ ಎರಡು ಅಲೆಗಳು ನಾವಾಗಿದ್ದೆವು 
ಎರಡು ಅಲೆಗಳು ಜೊತೆಯಾಗಿ ಪಯಣಿಸುತ್ತಿದ್ದವು
ನಮ್ಮ ಬಿಡುಗಡೆ
ನಮ್ಮ ಅಗತ್ಯ
ನಮ್ಮ ಆರೋಹಣ
ಅವರೋಹಣ 
ಎಲ್ಲಾ ಜೊತೆಜೊತೆ
ಸಾಗಿದೆವು ಮುನ್ನುಗ್ಗಿದೆವು 
ಖುಷಿಖುಷಿಯಿಂದ
ಇಬ್ಬರ ಪ್ರಾಮಾಣಿಕ ಶಕ್ತಿಯಿಂದ
ಸಮುದ್ರದ ಮೇಲೆ ಓಡಾಡಿದೆವು 
ಅದೆಂಥಾ ಹುಮ್ಮಸ್ಸಿನಿಂದ
ಆದರೆ...
ಅದೊಂದು ರಾತ್ರಿ ಸುಂಟರಗಾಳಿ ಬೀಸಿ
ಆಕೆ ನನ್ನಿಂದ ದೂರವಾದಳು
ನಾನು ಪರಿತ್ಯಕ್ತನಾದೆ ಏಕಾಂಗಿಯಾದೆ 
ನಮ್ಮ ಮುತ್ತಿನ ಹಾರ ಹರಿದು ನೀರಲ್ಲಿ ಕಳೆದುಹೋಯಿತು
ಆ ಕ್ಷಣದಿಂದ 
ನನ್ನುಳಿದರ್ಧಕ್ಕಾಗಿ ಹುಡುಕಾಡುತ್ತದ್ದೇನೆ
ಹಗಲು ರಾತ್ರಿ ಎನ್ನದೆ
ಗ್ಲಾನಿ ತುಂಬಿದ ಸಾಗರದಲ್ಲಿ ಹುಡುಕಾಡುತ್ತಿದ್ದೇನೆ
ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಾ
ಆಕೆಯ ಹೆಸರು ಕೂಗುತ್ತಾ
ಏಕಾಂಗಿಯಾಗಿ...
***
ಕಾಡಿಗೆ ತನ್ನದೇ ಆದ ನೀತಿಸಂಹಿತೆಯಿದೆಯೆಂದು ಕೇಳಿದ್ದೇನೆ...
Image result for zehra nigah

-ಉರ್ದು ಮೂಲ: ಜೆಹರಾ ನಿಗಾಹ್
_Suna hai janglon ka bhi koi dastoor hota hai_

_Suna hai sher ka jub pet bhar jaaye_
_to woh hamla nahi kerta_
_darkhtoN ki ghani chauN main ja ker let jaata hai_

_Hawa ke tez jhonke jub darkhtoN ko hilate hain_
_to maina apne bacche chor ke_
_kawwe ke andon ko paron se tham leti hai_

_Suna hai ghonsle se koi_
_bachha gir pare to_
_sara jangal jaag jaata hai_

_Suna hai jub kisi naddi ke paani main_
_baye ke ghonsle ka gandumi saaya larzta hai_
_to naddi ki rupehli machlian use parosi maan leti hain_

_Koi toofan aa jaaye koi pul toot jaaye_
_to kisi lakri ke takhte per_
_ghilari, saanp, bakri aur cheetah saath hote hain_

_Suna hai janglon ka bhi koi dastoor hota hai_

_Khuda wanda, jaleel-o-mautabar,_
_daana-o-beena, munseef-o-akbar_
_mere is shahr main_ 
_ab janglon hi ka koi qanoon naafiz ker_

_Suna hai janglon ka bhi koi dastoor hota hai_
 
*We hear that even the jungle lives by certain codes*

*We hear that when the lion has eaten his fill*
*He does not attack*
*But goes and stretches out beneath the dense shade of trees.*

*We hear that even the jungle lives by certain codes*
                                                      
*We hear, when strong gusts of wind makes the tree shudder*
*The starling leaves her own children*
*To protect the crow’s egg with her wings*

*We hear that if a young bird falls out of the nest*
*All the jungle wakes up from sleep*

*We hear that even the jungle lives by certain codes*
*We hear that when in some river*
*The tawny shadow of the weaverbird’s nest trembles over the water’s surface*
*The silver fish of the river regard it their neighbor.*

*If a bridge collapses in cyclone*
*Then on a single plank of wood*
*The squirrel, snake, goat and the leopard all huddle together.*

*We hear that even the jungle lives by certain codes*

*O Lord! O Glorious revered one*
*O wise, just and mighty one*
*In this city of mine*
*At least put into practice some code of the jungle*
*Enforce some way of life.*

*We hear that even the jungle lives by certain codes*
 
*~* *Zehra Nigah*

ಕಾಡಿಗೆ ತನ್ನದೇ ಆದ ನೀತಿಸಂಹಿತೆಯಿದೆಯೆಂದು ಕೇಳಿದ್ದೇನೆ...

ಹೊಟ್ಟೆ ತುಂಬಿದ ಹುಲಿ
ಬೇಟೆಯಾಡುವುದಿಲ್ಲ ಎಂದು ಕೇಳಿದ್ದೇನೆ.
ಅದು ಸುಮ್ಮನೆ ಮರದ  ಕೆಳಗಡೆ ನೆರಳಿನಲ್ಲಿ
ವಿಶ್ರಮಿಸುತ್ತದೆ ಎಂದು ಕೇಳಿ ಬಲ್ಲೆ.

ಬೀಸುವ ಗಾಳಿ ಹೆಮ್ಮರವನ್ನೇ ಅಲುಗಾಡಿಸಿದಾಗ
ಮೈನ ತನ್ನ ಮರಿಗಳ ಅರೆಕ್ಷಣ ತೊರೆದು
ಕಾಗೆಯ ಮರಿಗಳಿಗೆ ರಕ್ಷಣೆ ನೀಡುತ್ತದೆ.

ಮರದಿ ಇರುವ ಗೂಡಿನಿಂದ ಒಂದು ಮರಿಯೂ ಜಾರಿದರೆ
ಕಾಡಿಗೆ ಕಾಡೇ ಎಚ್ಚೆತ್ತುಕೊಳ್ಳುತ್ತದೆ.

ಗೀಜಗನ ಗೂಡು ನದಿಯ ನೀರಿಗೆ ಸಮೀಪ ಜೋತಾಡುತ್ತಿದ್ದರೆ
ನದಿಯ ಮೀನುಗಳೆಲ್ಲ ಅದನ್ನು 
ತನ್ನ ನೆರೆಯವರು ಎಂದು ಭಾವಿಸುತ್ತದೆ.

ಬಿರುಗಾಳಿ ಬೀಸಿ ಸಂಕ ಮುರಿದಾಗ
ಒಂದೇ ಮರದ ದಿಮ್ಮಿಯ ಮೇಲೆ
ಅಳಿಲು, ಹಾವು, ಆಡು, ಚಿರತೆ ಒಟ್ಟಿಗಿರುತ್ತವೆ

ಕಾಡಿಗೂ ತನ್ನದೇ ಆದ ನಿಯಮವಿದೆಯೆಂದು ಕೇಳಿದ್ದೇನೆ.

ದೇವರೇ, ಪರಮ ಪೂಜ್ಯನೆ
ವಿವೆಕಿಯೇ, ಬಲಿಷ್ಟನೆ...
ನನ್ನೀ ಊರಿನಲ್ಲಿ
ಕಾಡಿನ ನಿಯಮವನ್ನಾದರೂ ಜಾರಿಗೆ ತಾ
ಬದುಕುವ ರೀತಿಯೊಂದನ್ನು ಕರುಣಿಸು.

ಕಾಡಿಗೂ ತನ್ನದೇ ಆದ ರೀತಿನೀತಿಗಳಿವೆ ಎಂದು ಕೇಳಿದ್ದೇನೆ.

***ಗಜಲ್
Image result for ahmad faraz

~ ಅಹ್ಮದ್ ಫರಾಜ್
Image result for abstract paintings on nights


ಕಳೆದ ಋತುವಿನಲ್ಲಿ ನನ್ನ ದಿನ ರಾತ್ರಿಗಳು ಹೀಗಿರಲಿಲ್ಲ
ಬೇಸರವಿತ್ತಾದರೂ ಇಷ್ಟೊಂದು ಬೇಸರಿಸಿಕೊಂಡಿರಲಿಲ್ಲ.

ಹೂವಿನಂತಾ ಮುಖಗಳು ಇಲ್ಲಿಯೂ ಅರಳಿಕೊಂಡಿದ್ದವು
ಈಗಿರುವ ಈ ಗೋಡೆ ಬಾಗಿಲು ಹೀಗೆ ಬಾಡಿಕೊಂಡಿರಲಿಲ್ಲ.

ಮತ್ತೆ ಭೇಟಿಯಾದರೆ ಸಂತಸ ಇಲ್ಲವೆಂದರೆ ಪರವಾಗಿಲ್ಲ
ನಮ್ಮಿಬ್ಬರ ಸ್ನೇಹ ಹೀಗೆ ತೀವ್ರತೆ ಕಳೆದುಕೊಂಡಿರಲಿಲ್ಲ.

ಸಾಂಗತ್ಯವೇ ಇಲ್ಲಿ ನನ್ನ ಜೀವ ಹೀರಿದ್ದಲ್ಲದೆ ವಿರಹವಲ್ಲ,
ಬದಲಾಗದ ಹಾದಿಯ ಸಂಗಾತಿ ಬದಲಾಗದೆ ಉಳಿಯಲಿಲ್ಲ.

ಬೇರೆ ಯಾರು ನಿನ್ನ ಬರುವಿಗಾಗಿ ಹೀಗೆ ಕಾಯುತ್ತಿದ್ದರು?
ದಾರಿಯಲ್ಲಿದ್ದ ಬೇರೆ ಯಾವ ಹಣತೆಗಳೂ ನನ್ನಂತಿರಲಿಲ್ಲ.

ಆಳಿದ ಮನಸ್ಸೇ ನಿನಗೆ ಅದ್ಹೇಗೆ ಸಮಾಧಾನ ಹೇಳಲಿ,
ನಿನ್ನ ಹಣೆಯ ಮೇಲೆ ಅದೃಷ್ಟದ ಚಿಕಿತ್ಸೆ ಬರೆಯಲಾಗಿಲ್ಲ.

ಆ ನಿರ್ದಯಿಯ ಈ ಉಪಕಾರಕ್ಕೆ ಸಮಾಧಾನ ಪಡು 'ಫರಾಜ್'
ನಿನ್ನ ಬಿಟ್ಟು ಆಕೆ ಇನ್ನಾರೊಂದಿಗೂ ಈ ರೀತಿ  ವ್ಯವಹರಿಸಲಿಲ್ಲ.

***ಗಜಲ್
Related image

~ ಮೋಮಿನ್ ಖಾನ್ ಮೋಮಿನ್

Image result for abstract paintings on nights


ನನ್ನ ನಿನ್ನ ಸಾಂಗತ್ಯದ ಹಿತ ನಿನಗೆ ನೆನಪಿದೆಯೋ ಇಲ್ಲವೋ
ಜೊತೆಗೂಡಿ ಬಾಳುವ ಶಪಥ ನಿನಗೆ ನೆನಪಿದೆಯೋ ಇಲ್ಲವೋ.

ನಿನ್ನ ಇಚ್ಛೆಗೆ ವಿರುದ್ಧವಾಗಿ ಅದೇನಾದರು ನಡೆದರೆ ಒಂದುವೇಳೆ,
ಹೇಳುವ ಮುನ್ನ ಮರೆಯುವ ಗುಣ ನಿನಗೆ ನೆನಪಿದೆಯೋ ಇಲ್ಲವೋ.

ಅದೆಷ್ಟೋ ಹಿಂದಿನ ಮಾತಿದು ನನಗೆ ಕೊಟ್ಟ ಮಾತಿನ ಕತೆಯಿದು,
ಮರೆತ ಮಾತು ಕೊಟ್ಟ ಆ ಕ್ಷಣ ನಿನಗೆ ನೆನಪಿದೆಯೋ ಇಲ್ಲವೋ.

ಅರ್ಥವಿಲ್ಲದ ದೂರು ಕಾರಣವಿಲ್ಲದ ಮುನಿಸು ಸುಳ್ಳುಪೊಳ್ಳು ಕಥೆಗಳು,
ಸಣ್ಣ ಸಣ್ಣ ಮಾತಿಗೂ ನಮ್ಮ ಆರ್ಭಟ ನಿನಗೆ ನಿನಪಿದೆಯೋ ಇಲ್ಲವೋ.

ನಾವೂ ಒಬ್ಬರನ್ನೊಬ್ಬರು ಬಯಸಿದ್ದೆವು ನಮ್ಮ ಒಡನಾಟದಲ್ಲಿ ಹಿಗ್ಗಿದ್ದೆವು,
ಹಿಂದೊಮ್ಮೆ ನಮ್ಮ ನಡುವಿದ್ದ ಆದರ ನಿನಗೆ ನೆನಪಿದೆಯೋ ಇಲ್ಲವೋ

ಆಕಸ್ಮಿಕವಾಗಿ ಸಿಕ್ಕಾಗೆಲ್ಲಾ ನಾವಿಬ್ಬರು ಪ್ರೀತಿಯ ಬಿಂಬಿಸುವ ಹಠದಲ್ಲಿ
ದೂರವ ದೂರುತ್ತಾ ಸುರಿಸಿದ ಬೈಗುಳ ನಿನಗೆ ನೆನಪಿದೆಯೋ ಇಲ್ಲವೋ.

ನನ್ನ ಬಗೆಗೆ ನಿನಗಿದ್ದ ಒಲವು ನನ್ನ ಮೇಲೆ ನೀ ಹರಸಿದ ಭಾವವು,
ನನ್ನ ನೆನಪೆಲ್ಲಾ ಇಂದಿಗೂ ಉಜ್ವಲ ನಿನಗೆ ನೆನಪಿದೆಯೋ ಇಲ್ಲವೋ.

ಸಿಕ್ಕಾಗ ನಾವು ಗೆಳೆಯರ ಜೊತೆಯಲ್ಲಿ ಸಂಜ್ಞೆ ಮಾಡುತ್ತಾ ಕಣ್ಣುಕಣ್ಣಲ್ಲಿ,
ಸಂತೆಯಲ್ಲೇ ಕಟ್ಟಿಕೊಂಡ ಏಕಾಂತ ನಿನಗೆ ನೆನಪಿದೆಯೋ ಇಲ್ಲವೋ.

ಮಿಲನದ ಸಂಧರ್ಭವನ್ನೆಲ್ಲಾ ಒಪ್ಪಿಗೆ ನೀಡದೆ ಹಾಳುಗೆಡವಿದ್ದು,
ಅಸಹಕಾರಕ್ಕೆ ಕೊಟ್ಟ ಎಲ್ಲ ಕಾರಣ ನಿನಗೆ ನೆನಪಿದೆಯೋ ಇಲ್ಲವೋ.

ನೀನು ಯಾರನ್ನು ನಿನ್ನ ಆಪ್ತ ನಿನ್ನ ಆತ್ಮೀಯ ಎಂದು ನಂಬಿದ್ದೆಯೋ,
ನಾನದೇ 'ಮೊಮಿನ್' ಅದೇ ಚೇತನ ನಿನಗೆ ನೆನಪಿದೆಯೋ ಇಲ್ಲವೋ.

***

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...