Monday, July 24, 2017

ಹೇಮಲತಾ : ಕವಿತೆಗಳು
1

Image result for abstract paintings on akkamahadeviಹೊಸಿಲ ಮಧ್ಯದಲಿ ಜಡೆ
ಬಿಚ್ಚಿ ಕುಳಿತಿರುವೆ ಕೇಳೆ ಅಕ್ಕ
ಅರಿವೆಯುಟ್ಟಿದ್ದರೂ ಕಣ್ಣಲ್ಲೇ 
ಬೆತ್ತಲಾಗಿಸಿದ್ದಾರೆ ಅರಿವು ಗೇಡಿಗಳು

ನಿನ್ನ ಚನ್ನಮಲ್ಲನಂಥವನಲ್ಲವೆ ನನ್ನವನು. 
ಅವನು ಕಲ್ಲಲ್ಲಿ ಅರಳಿದ ಜೀವ, 
ಇವ ಜೀವಂತ ಕಲ್ಲು

ಆಲಯದ ನೇಣುಗಂಬದ
ಕುಣಿಕೆ ಹೊತ್ತೆ ಬಯಲ 
ಕನಸ ಕಾಣುವ ನಿರೀಕ್ಷೆಯ 
ಕಣ್ಣಿಗೆ ಧೂಳು ಬಿದ್ದು ಮಂಜಾಗಿದೆ

ಕೇಶವನ್ನು ಅರಿವೆಯಾಗಿಸಿಕೊಳ್ಳುವುದು
ಸುಲಭವಿತ್ತೇನೆ, ಮುಳ್ಳಿನ ರಾಶಿಯನ್ನೇ 
ತಂದು ಮೈ ಮುಚ್ಚಿಹರು ನೋಡೆ

ದುರಿತ ಕಾಲದಲ್ಲಿ ಹೂ ಹಾದಿಯಲ್ಲೂ 
ಮುಳ್ಳುಗಳೇಳುವವು 
ನೆತ್ತರಿಗೆ ಬಣ್ಣವಿರಬಾರದಿತ್ತು
ಕಣೇ ಅಕ್ಕ

ತಮಸ್ಸಿನ ಕೋಟೆಯಿದು 
ಹೆಣ್ಣಿನ ಜಗತ್ತು
ಆತ್ಮಕ್ಕಷ್ಟೂ ಬೆಳಕ ತೋರಿಸೆ
ನಿನ್ನೊಳಗೆನ್ನ ಐಕೈಗೊಳಿಸೆ ಅಕ್ಕ ..!!
***


2
Image result for abstract paintings on akkamahadeviಗೋರಿಗಳ ನಡುವಲ್ಲಿ
ಜಾಗವೊಂದು ಹುಡುಕಿಟ್ಟು ಕೊಂಡಿದ್ದೆ..
ಜಗತ್ತಿನ ಅಸಂಖ್ಯಾತ ಕೈಗಳು
ಕಲ್ಲನ್ನು ಹಿಡಿದು ಇನ್ನಿಲ್ಲದ ಹುಮ್ಮಸ್ಸಿನಿಂದ ಬೀಸಲು
ಕಾಯುತಿತ್ತು

ನಾನು ಮುಟ್ಟಿನ ಬಗ್ಗೆ ಬರೆದೆ
ಹುಟ್ಟಿನ ಗುಟ್ಟನ್ನು ಬಗೆದೆ
ಒಡಲ ತುಂಬಾ ಹರಡಿದ ಬಸುರಿನ ಗೆರೆಗಳ ಬಗ್ಗೆ ವ್ಯಾಖ್ಯಾನಿಸಿದೆ.

ನನ್ನೊಳಗೆ ಬೆಳೆದ ಭ್ರೂಣವೆಂಬ
ಮಾಂಸದ ತುಂಡಿಗೆ ಎಲುಬು,
ಮಾಂಸ, ತಲೆಯಲ್ಲಿ ಮಿದುಳು
ಉಸಿರು ಕೊಟ್ಟು ಹೃದಯದ ಜಾಗವ ಖಾಲಿ ಬಿಟ್ಟೆ
 ಅಲ್ಲೊಂದು ಬಂಡೆ ಕಲ್ಲು ಬೆಳೆಯಿತು,  ಅಹಂ
ಹುಟ್ಟಿತು, ಕಟ್ಟಲೆಗಳ ಲೆಕ್ಕಾಚಾರ ಶುರುವಿಟ್ಟುಕೊಂಡಿತು

ಜೀವ ಒತ್ತೆಯಿಟ್ಟು ಸಾವಿಗೊಂದು ಮುತ್ತಿಟ್ಟದ್ದೇ ತಡ
ಹೆರಿಗೆ ಹಾಸಿಗೆಯಲ್ಲಿ
ಸಣ್ಣ ಭೂಕಂಪ, ಗಂಡು ಶಿಶುವೊಂದು ಗೆರೆ ಎಳೆಯಲು
ಬಳಪವೆಲ್ಲಿ ಎಂದು ಮುದ್ದಾಗಿ ಉಲಿಯುತಿತ್ತು..!!

***3
Related imageಕನಸು ಹಾಗೂ ನಿದ್ದೆಗೂ ನಡುವೆ
ಸ್ವಗತದ ಕಾಲವೊಂದು ಉದ್ಭವಿಸಿ
ಕಾವ್ಯದ ಮೋಹಕ್ಕೆ ಬೀಳುತ್ತೇನೆ

ಇರುಳ ಕಾರ್ಗತ್ತಲಲ್ಲಿ ಗೂಬೆಯ
ಹೊಳೆವ ಕಣ್ಣಿನಂತೆ ..
ಗೋರಿಗಳು ಅಪ್ಯಾಯಮಾನ ಎನಿಸುತ್ತವೆ..
ಧ್ವೇಷ ಅಸೂಯೆ ರೋಗ ರುಜಿನಗಳ ಮುಕ್ತ ಪ್ರಪಂಚದಲ್ಲಿ
ಹುಡುಕಿದರು ಅಸಹಿಷ್ಣುತೆ ಕಾಣುವುದಿಲ್ಲ

ದೊರೆಯೆಂದು ಅವನನ್ನು
ಸಂಭೋದಿಸಿದಾಗಲೆಲ್ಲ ಅವನಿಗೋ ಪುಳಕ, 
ಯಾವುದೋ ಜನ್ಮದ ಸೇಡಿನ 
ಗುಟ್ಟು ಅಂತರಂಗದಲ್ಲಿ ಗಹಗಹಿಸುತ್ತದೆ

ಇಕೋ ನೋಡಿ ಅವನ ಯುದ್ಧನ್ಮೋದ ,
ರಾಜ್ಯವನ್ನಷ್ಟೇ ಲೂಟಿ ಮಾಡಲಾರ 
ಸಾಲು ಸಾಲು ಸುಂದರಿಯರ ಯೋನಿಗಳನ್ನು 
ಛೇದಗೊಳಿಸಿ ರಕ್ತದೋಕುಳಿಯಾಡುತ್ತಾನೆ

ಇತ್ತ ಅಂತಃಪುರದ ರಾಣಿಯರ
ಒಂಟಿ ನಿಟ್ಟುಸಿರುಗಳು 
ಪ್ರೇಮದ ಹುಡುಕಾಟದಲ್ಲಿ 
ಗುಟ್ಟುಗಳು ಮಾತ್ರ ಹಾದರದ ಹೆಸರಿನಲ್ಲಿ
ಗೋಡೆಗಳ ದಾಟುತ್ತವೆ.
ಅಮಾಯಕರ ತಲೆಗಳು ಉರುಳುತ್ತವೆ..

ತಥ್ ನಿನ್ನ ಇತಿಹಾಸಕ್ಕಿಷ್ಟು
ಹಸಿದು ಬಂದವನ ಮುಂದೇನು
ಕಿಣಿ ಕಿಣಿ ಉಂಡು ತೃಪ್ತಿಗೊಳ್ಳುತ್ತಾನೆ 
ಗಾಳಿಗೆ ಗುದ್ದಿ ಕೈ ನೋವಾಗುತ್ತದೆ

ಇರುಳ ಕಣ್ಣಿಗೆ ಮತ್ತೆ ಮುತ್ತಿಡುತ್ತಾ ಗೋರಿಯನ್ನು
ಬಗೆಯುತ್ತೇನೆ ..!!
***4

Related imageಆತ್ಮವೊಂದು ದೇಹವೆರಡು
ಎಂದವರು
ಇಂದು ಎದುರಾ ಬದರಾ 
ಕುಳಿತಿದ್ದಾರೆ ಅಪರಿಚಿತರಂತೆ 

ಅವನ ನಿರ್ಲಿಪ್ತ
ಕಣ್ಣಿನಲಿ ಇಣುಕಿದಾಗ
ಮುದುಕಿಯಾಕರ ಕಂಡು
ಬೆಚ್ಚಿ ಬೀಳುತ್ತಾಳೆ

ಕಣ್ಣ ಕೆಳಗಿನ ನೆರಿಗೆ
ಒಣಗಿದ ತುಟಿ, ಮನಸ್ಸಿಗೇ 
ಮುಪ್ಪಡಿರದ ಮೇಲೆ
ಅಲ್ಮೆರದ ಕಾಸ್ಮೆಟಿಕ್ಸ್ ಗಳು
‌ವ್ಯಂಗ್ಯವಾಡಿದಂತಾಗುತ್ತೆ

ಲೋಕದ ಕನ್ನಡಿಯಲ್ಲಿ 
ಪ್ರೀತಿ ಆಕರ್ಷಣೆ ಅಷ್ಟೆ
ಅವಳು ದೇಹ ಹೃದಯವಾಗಿಸಿಕೊಂಡರೆ
ಅವ ಹೃದಯವನ್ನು 

ಕನ್ನಡಿಯಾಗಿಸಿಕೊಂಡಿದ್ದಾನೆ

ಮಾತಿನಲ್ಲೇ ಉನ್ಮಾದಕ್ಕೇರುತ್ತಿದವನು
ಸ್ಪರ್ಶಕ್ಕೂ ಮಂಜುಗಡ್ಡೆಯ
ರೂಪ ತಾಳುತ್ತಾನೆ

ಎಲ್ಲಾ ಕಾಲಕೂ ನೆರಳು
ಹಿಂಬಾಲಿಸುವುದಿಲ್ಲಾ
ಒಮ್ಮೊಮ್ಮೆ ಮುಂದಿರುತ್ತದೆ

ಆತ್ಮಕ್ಕೆ ಪಟ್ಟಿ ಕಟ್ಟಿಕೊಂಡವರ 
ಮುಂದೆ, ಆತ್ಮಸೌಂದರ್ಯಕೆ
ಬೆಲೆಯುಂಟೆ ..!!
***
5

Image result for abstract paintings on akk


ಪಾತ್ರೆಯೊಳಗಿನ ನೀರಿಗೆ 
ಎಷ್ಟೇ ಉರಿ ಹೆಚ್ಚಿಸು
ಕುದಿಯುವವರೆಗಷ್ಟೇ..
ಆಮೇಲೇನಿದ್ದರೂ ಕರಗುವುದಷ್ಟೇ
   
 ***

ಒಳಗಿನ ವೈಕಲ್ಯಕ್ಕೆ 
ನಮ್ಮಾತ್ಮಕೆ ಸುಳ್ಳು ಹೆಣೆಯುವ
ನಾವು, ಪ್ರಪಂಚವೇ ಮುಖವಾಡ 
ಎಂದು ನಿರಾಳವಾಗಿ ಆರೋಪಿಸುತ್ತೇವೆ

***

ಬೊಜ್ಜು ಮೈಯ ನೆನಪಾಗಿ 
ತಟ್ಟೆ ತುಂಬಾ ಅನ್ನ ಪಕ್ಕಕ್ಕಿಟ್ಟು
ಒಣ ರೊಟ್ಟಿಗೆ ಕೈ ಹಚ್ಚುತ್ತೇನೆ.
ಊಟಕ್ಕಿಲ್ಲದಾಗ ಡಯೆಟ್ ಎಂದು 
ಗೆಳತಿಯರಿಗೆ ಸುಳ್ಳು
ಹೇಳಿದ ಬಾಲ್ಯ ನೆನಪಿಗೆ ಬರುತ್ತದೆ

***

ಮೇಲೇರಿದಂತೆಲ್ಲ ಸಣ್ಣದಾಗಿ
ಕಾಣುತ್ತಾನಲ್ಲ ಎಂದು ಕೊಂಡೆ
ಅವನಿದ್ದಲ್ಲಿಂದ ನಾನು ಹಾಗೆ 
ಕಾಣುವೇ ಎಂಬ
ಸತ್ಯ  ಈಗ ಮನಗಂಡೆ

***

ಜಗತ್ತಿನ ಕಣ್ಣು ಕತ್ತಲಾದಾಗ
ಬೆಕ್ಕಿನ ಮೇಲೆ ಆರೋಪ ಹೊರೆಸಲಾಯ್ತು..
ಬೆಕ್ಕು ಕಣ್ಣುಮುಚ್ಚಿಕೊಂಡು
ಹಾಲು ಕುಡಿದು ಹೋಯ್ತು

***


ಹೇಮಲತಾ ಹುಟ್ಟಿದ್ದು ಬೆಂಗಳೂರು, ಮದುವೆಯ ನಂತರ ಕೆಲವು ವರ್ಷ ಭದ್ರಾವತಿಯಲ್ಲಿ ವಾಸ.
ಪಿಯುಸಿ ಸೇರುತ್ತಿದ್ದಂತೆ ಮದುವೆ ಆದ ಕಾರಣ ವಿಧ್ಯಾಭ್ಯಾಸ ಸ್ಥಗಿತ.  ಮಕ್ಕಳಾದ ನಂತರ ಅಂಚೆ ತೆರಪಿನಲ್ಲಿ ಕನ್ನಡ  ಎಂಎ ಪದವಿ.
ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿ. ಅದರಲ್ಲೂ ಕಾವ್ಯ ಪ್ರಕಾರ ಅಚ್ಚು ಮೆಚ್ಚು.
ಎರಡು ಕವನ ಸಂಕಲನಗಳು ಪ್ರಕಟಗೊಂಡಿವೆ. ಮೊದಲೆನೆಯದು "ಭಾವ ಭಾಮಿನಿ", ಎರಡನೆಯ ಸಂಕಲನ " ಕಳಚಿಟ್ಟಿದ್ದೇನೆ ಇದೋ ನಿರ್ವಾಣ ".

1 comment:

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...