Monday, July 24, 2017

ನಾಡ ಧ್ವಜ ಮತ್ತು ದೇಶ

ಬಸವರಾಜು ಬಿ.ಸಿ

Image result for ನಾಡ ಧ್ವಜ


ನಾವೆಲ್ಲಾ ಈ ದೇಶದ ಮಕ್ಕಳು. ಈ ನಮ್ಮ ದೇಶ ಭಾರತ ಅಂದ್ರೆ ನಮಗೆಲ್ಲಾ ಅಚ್ಚುಮೆಚ್ಚು. ಅದಕ್ಕಾಗಿಯೇ ನಮ್ಮ ಭಾರತ ದೇಶ ಇಡೀ ಪ್ರಪಂಚದಲ್ಲಿಯೇ ಸದೃಢವಾದ, ಶಕ್ತಿಶಾಲಿ ದೇಶವಾಗಲಿ ಅಂತ ನಾವೆಲ್ಲಾ ಬಯಸ್ತೀವಿ. ನಿಮಗೆಲ್ಲಾ ಗೊತ್ತಿರೋ ಹಾಗೆ ಈ ದೇಶ ಅನೇಕ ರಾಜ್ಯಗಳು ಸೇರಿ ಆಗಿರೋ ಅಂತಹುದು. ಹಾಗಾಗಿ   ನಮ್ಮ ದೇಶ ಸಮೃದ್ಧವಾಗಿ ಬೆಳೆಯಬೇಕು ಅಂದರೆ, ನಮ್ಮ ರಾಜ್ಯಗಳು ಸದೃಢವಾಗಬೇಕು.
ನಮ್ಮ ರಾಜ್ಯ, ನಮ್ಮ ನಾಡು ಸದೃಢವಾಗಬೇಕು ಅಂದ್ರೆ, ನಮ್ಮಲ್ಲಿ ನಾಡಿಗಾಗಿ ದುಡಿಯುವ ಮನಸ್ಸಿರಬೇಕು. ಈ ನಾಡಿಗಾಗಿ ದುಡಿಯುವ ಮನಸ್ಸು ಬರುವುದು ನಮಗೆ ನಮ್ಮ ನಾಡಿನ ಜೊತೆ ಒಂದು ಭಾವನಾತ್ಮಕ ಸಂಬಂಧ ಇದ್ದಾಗ ಮಾತ್ರ. ಈ ಭಾವನಾತ್ಮಕ ನಂಟು ಆಳವಾಗಿ ನಮ್ಮೊಳಗೆ ಬೇರೂರಬೇಕಾದರೆ ಮೊದಲ ಕಾರಣ ನಮ್ಮ ಭಾಷೆ. ನಾವು ನಮ್ಮ ಭಾಷೆಯನ್ನು ವ್ಯಾಪಕವಾಗಿ ಬಳಸುತ್ತಾ ಮತ್ತು ಬೆಳೆಸುತ್ತಾ ( ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಮುಖವಾಗಿ ) ಹೋದಂತೆ ನಮಗೆ ನಾಡಿನ ಜೊತೆಗೆ ಒಂದು ಅವಿನಾಭಾವ ಸಂಬಂಧ ಬೆಳೆಯುತ್ತಾ ಹೋಗುತ್ತೆ. 
ಎರಡನೇಯದು ನಮ್ಮ ನಾಡಿನ ಮಹತ್ವವನ್ನು ಮತ್ತು ಘನತೆಯನ್ನು ಸಾರುವ ಮೂಲಕ ನಮ್ಮಲ್ಲಿ ನಾಡಪ್ರಜ್ಞೆಯನ್ನು ಎಚ್ಚರದಲ್ಲಿಟ್ಟಿರುವ ನಮ್ಮ ನಾಡಗೀತೆ. ಹಾಗೂ ನಮ್ಮೆಲ್ಲರ ಒಗ್ಗಟ್ಟಿನ, ಭಾಷಾ ಮತ್ತು ಸಾಂಸ್ಕೃತಿಕ  ಏಕತೆಯ ಸಂಕೇತವಾದ ನಾಡಧ್ವಜ. ನಮ್ಮ ದೇಶದ ಹೆಮ್ಮೆಯ ಪ್ರತೀಕವಾಗಿ ಹೇಗೆ ನಮ್ನ ರಾಷ್ಟ್ರಧ್ವಜ ಹಾರಿಸ್ತೀವೋ ಹಾಗೆಯೇ ನಮ್ಮ ನಾಡ ಹೆಮ್ಮೆಯ ಪ್ರತೀಕವಾಗಿ ನಾಡಧ್ವಜವೂ ಬೇಕು. 
ಹೀಗೆ ನಾಡಭಾಷೆ, ನಾಡಗೀತೆ, ನಾಡಧ್ವಜ ( ಇನ್ನೂ ಹಲವು ಪೂರಕವಾದ ಸಂಗತಿಗಳನ್ನು ಸೇರಿಸುತ್ತಾ ಹೋಗಬಹುದು ) ನಮ್ಮ ಮತ್ತು ನಾಡಿನ ಮಧ್ಯೆ ಒಂದು ಗಟ್ಟಯಾದ ಬಿಡಿಸಲಾರದ ಭಾವನಾತ್ಮಕ ಸಂಬಂಧ ಬೆಳೆಸುತ್ತಾ ಹೋಗುತ್ತವೆ. ಈ ಸಂಬಂಧ ಗಟ್ಟಿಯಾಗಿರುವಾಗ ನಮ್ಮ ಕೆಲಸಗಳು ಈ ನಾಡಿನ ತನ್ಮೂಲಕ ಈ ದೇಶದ ಅಭಿವೃದ್ಧಿಗೆ ಪೂರಕವಾಗಿರುತ್ತವೆ.
Image result for ನಾಡ ಧ್ವಜಆದರೆ ಇತ್ತೀಚೆಗೆ ನಮ್ಮ ನಾಡಧ್ವಜವನ್ನು ಅಧಿಕೃತ ಅಂದರೆ ಕಾನೂನು ಬದ್ಧ ಮಾಡಲು ಹೊರಟ ಸರ್ಕಾರದ ನಡೆಗೆ ಕೆಲ ಅಪಸ್ವರಗಳು ಎದ್ದಿವೆ 
೧) ಇದರಿಂದ ಒಕ್ಕೂಟ ವ್ಯವಸ್ಥೆಗೆ, ದೇಶದ ಐಕ್ಯತೆಗೆ ಧಕ್ಕೆಯಾಗುತ್ತದೆ.

ಒಂದು ರಾಜ್ಯ ತನ್ನದೇ ಧ್ವಜ ಹೊಂದಿದ ತಕ್ಷಣ ದೇಶದ ಐಕ್ಯತೆಗೆ ಧಕ್ಕೆ ಬರುತ್ತದೆ ಎನ್ನುವುದು ಶುದ್ದ ಸುಳ್ಳು. ಇವತ್ತು ಅಮೆರಿಕಾ ಮತ್ತು ಯೂರೋಪಿನ ಕೆಲ ದೇಶಗಳಲ್ಲಿ ಪ್ರತಿ ರಾಜ್ಯಕ್ಕೂ ಅದರದೇ ಧ್ವಜವಿದೆ. ಆದರೆ ಆ ಯಾವ ದೇಶದಲ್ಲೂ ನಮ್ಮ ಭಾರತದ ಒಂದೆರಡು ರಾಜ್ಯಗಳಲ್ಲಿರುವಷ್ಟು ಕೂಡ ಪ್ರತ್ಯೇಕತೆಯ ಕೂಗಿಲ್ಲ. ಅದರಲ್ಲೂ ನಾವು ಕನ್ನಡಿಗರು ನಮ್ಮ ಮಹಾ ಮಾನವತಾವಾದಿ ಕವಿ ಕುವೆಂಪು ಬರೆದಿರುವ *" *ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ "* ಎಂಬ ಗೀತೆಯನ್ನೇ ಅಧಿಕೃತ ನಾಡಗೀತೆಯಾಗಿ ಹೊಂದಿರುವವರು. 
( ನಮ್ಮಲ್ಲಿ ಕನ್ನಡ ಮಾತೆಯನ್ನು ಮಾತ್ರ ಸ್ತುತಿಸುವ ನೂರಾರು ಗೀತೆಗಳಿದ್ದಾಗ್ಯೂ). ಬಾವುಟ ( ಆಗಲೇ ಇದೆ, ಅದಕ್ಕೆ ಈಗ ಕಾನೂನಿನ ಮಾನ್ಯತೆಗೆ ಪ್ರಯತ್ನ ಅಷ್ಟೆ)  ಇದ್ದ ತಕ್ಷಣ ಒಕ್ಕೂಟ ಒಡೆಯುತ್ತದೆ ಅನ್ನುವುದು ಒಂದು ಅಜ್ಞಾನದ ಮತ್ತು ಉಡಾಫೆಯ ಮಾತಷ್ಟೆ. ಯಾಕೆಂದರೆ, ನಮ್ಮ ದೇಶ ಕೇವಲ ಒಂದು ಬಾವುಟದ ಅಧಿಕೃತತೆಯಿಂದ ನಾಶವಾಗುವಷ್ಟು ದುರ್ಬಲವಲ್ಲ.

೨) ನಮ್ಮ ಬಾವುಟ ವರ್ಷಗಳಿಂದ ಜನಮಾನಸದಲ್ಲಿ ನೆಲೆಯಾಗಿದೆ. ಹಾಗಿರುವಾಗ ಅದಕ್ಕೆ ಅಧಿಕೃತತೆ ಅಂದರೆ ಕಾನೂನಿನ ಮಾನ್ಯತೆ ಅಂತ ಯಾಕೆ ಬೇಕು?

ಜನಮಾನಸದಲ್ಲಿ ನೆಲೆಯಾಗಿದೆ ನಿಜ, ಇದು ನಮ್ಮ ಅಧಿಕೃತ ಬಾವುಟ ಅಲ್ಲ   ಅಂತ ಗೊತ್ತಿಲ್ಲದೆಯೂ ಜನ ಬಳಸ್ತಿದಾರೆ ನಿಜ.

ಆಕಸ್ಮಾತ್ ಮುಂದೆ ಯಾವತ್ತೋ ಯಾರೋ ವ್ಯಕ್ತಿ ಅಥವಾ ಯಾವುದೋ ಸಂಘಟನೆ ಇದು ತನ್ನ ಬಾವುಟ ಎಂದು ಕೋರ್ಟಿನಲ್ಲಿ ಯಾವುದಾದರೂ ಸಾಕ್ಷಿ ತೋರಿಸಿ ಸಾಧಿಸಿದರೆ, ನಾವು ನಮ್ಮ ಮನಸ್ಸಲ್ಲಿ ನೆಲೆನಿಂತಿರುವ ಬಾವುಟವನ್ನು ಬಳಸುವಂತಿಲ್ಲ.
ಈ ಅಪಾಯ ನಮಗೆ ಬೇಕೆ?

ನಮ್ಮ ಬಾವುಟ ಅಧಿಕೃತ ಅಲ್ಲದಿರುವಾಗ, ಬೇರೆ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳು ನಮ್ಮ ಬಾವುಟವನ್ನೇ ಹೋಲುವಂತ ಬಾವುಟ ಬಳಸಿದರೆ ನಾವು ಕೇಳುವಂತಿಲ್ಲ. ಆಗ ನಮ್ಮ ಬಾವುಟದ ವಿಶಿಷ್ಟತೆ ಎಲ್ಲಿ ಉಳಿಯುತ್ತದೆ? 

ಈ ಎಲ್ಲ ಕಾರಣಗಳಿಂದ ನಾಡಧ್ವಜವನ್ನು ಅಧಿಕೃತಗೊಳಿಸುವುದು ನಮ್ಮ ನಾಡಿನ ಸ್ವಾಭಿಮಾನದ ಮತ್ತು ಅನನ್ಯತೆಯ ದೃಷ್ಟಿಯಿಂದ ಸರಿ ಎಂದು ನನ್ನ ಅನಿಸಿಕೆ.

1 comment:

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...