Monday, May 21, 2018

ನಮ್ಮ ಪ್ರಶಸ್ತಿ ಪುರಸ್ಕೃತರು..ದಣಿವರಿಯದ ಸಮಾಜಮುಖಿ - ಕೆ. ನೀಲಾ

೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಹೆಸರು. ಸಮಸಮಾಜದ ಕನಸಿಟ್ಟುಕೊಂಡು ಬರಹಗಾರ್ತಿ, ವಾಗ್ಮಿ, ಸಂಘಟಕಿ, ಕಲಾವಿದೆ ಹಾಗೂ ಮಹಿಳಾ ಹೋರಾಟಗಾರ್ತಿಯಾಗಿ ಕಳೆದ ಮೂರು ದಶಕಗಳಿಂದ ಅವರ ಚಟುವಟಿಕೆಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರು, ಅದೇ ಸಂಘಟನೆಯ ಕೇಂದ್ರ ಸಮಿತಿಯ ಸದಸ್ಯರು, ಪ್ರಜ್ಞಾ ಕಾನೂನು ಸಲಹಾ ಸಮಿತಿ, ಗುಲ್ಬರ್ಗಾದ ಕಾರ್ಯದರ್ಶಿಯಾಗಿ, ಅನೇಕ ಜನಪರ, ಅರ್ಥಪೂರ್ಣ ಹೋರಾಟ ಮತ್ತು ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
೧೯೮೯ ಮಾರ್ಚ್ ೨೧ ರಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ ಬೀದರಿನಲ್ಲಿ ಆರಂಭಗೊಂಡಾಗಿನಿಂದ ನೀಲಾ ಅದರ ಭಾಗಿಯಾಗಿದ್ದಾರೆ. ಬೀದರಿನಲ್ಲಿ ನೂರಾರು ಮಹಿಳೆಯರ ಮೆರವಣಿಗೆ ನಡೆಸಿ ರೇಷನ್ ಕಾರ್ಡು, ನೀರಿನ ವ್ಯವಸ್ಥೆ, ಶೌಚಾಲಯ, ಸ್ಲಂ ನಿವಾಸಿಗಳಿಗೆ ವಸತಿ ಮತ್ತು ನಾಗರಿಕ ಸೌಲಭ್ಯ ಇತ್ಯಾದಿ ಹಕ್ಕೊತ್ತಾಯಗಳನ್ನಿಟ್ಟುಕೊಂಡು ಹೋರಾಟ ನಡೆಸಿದರು. ಕೆಲವು ತಿಂಗಳ ನಿರಂತರ ಹೋರಾಟದ ತರುವಾಯ ಸ್ಲಮ್ ನಿವಾಸಿಗಳಿಗೆ ವಸತಿ ನಿವೇಶನ ವಿತರಿಸಲಾಯಿತು. ರೇಶನ್ ಕಾರ್ಡುಗಳೂ ದೊರೆತವು. ಎರಡನೆ ಹೋರಾಟವಾಗಿ ಬಸ್ಸುಗಳಲ್ಲಿ ಮಹಿಳೆಯರಿಗೆ ಸೀಟುಗಳನ್ನು ಮೀಸಲಿರಿಸಲು ಆಗ್ರಹಿಸಿ ಸಹಿ ಸಂಗ್ರಹ ಚಳುವಳಿ ನಡೆಸಿದರು. ಮೂರನೆ ಹೋರಾಟವು ವರದಕ್ಷಿಣೆ ವಿರೋಧಿ ಆಂದೋಲನ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿ ಹೋರಾಟವಾಗಿ ರೂಪುಗೊಂಡಿತು. ಜೊತೆಗೆ ಸಾಹಿತ್ಯಿಕ ಚಟುವಟಿಕೆಯಲ್ಲಿ ಮಹಿಳೆಯರನ್ನು ತೊಡಗಿಸಲು ಪ್ರಯತ್ನಿಸಿದರು. ಬಹುಭಾಷಾ ಕವಿಗೋಷ್ಠಿ, ಕೋಮುಸೌಹಾರ್ದತೆಗಾಗಿ ರಂಗಮೇಳದಂತ ಕಾರ‍್ಯಕ್ರಮಗಳನ್ನು ಮಹಿಳಾ ಸಂಘಟನೆಯ ವತಿಯಿಂದ ರೂಪಿಸಿದರು. ವಿಶ್ವ ಸುಂದರಿ ಸ್ಪರ್ಧೆಯನ್ನು ವಿರೋಧಿಸಿ, ದಲಿತ ಮಹಿಳೆ ಮತ್ತು ದೇವದಾಸಿ ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ ಚಳುವಳಿ ನಡೆಸಿದರು. ೨೦೦೦ ಫೆಬ್ರವರಿ ತಿಂಗಳಲ್ಲಿ ತೊಗರಿ ಕಣಜ ಗುಲಬರ್ಗಾದಲ್ಲಿ ತೊಗರಿಗೆ ಬೆಂಬಲ ಬೆಲೆ ಕೊಡಬೇಕು, ತೊಗರಿ ಬೋರ್ಡ್ ರಚಿಸಬೇಕು, ತೊಗರಿ ಆಮದು ನಿಲ್ಲಿಸಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಕರ್ನಾಟಕ ಪ್ರಾಂತ್ಯ ರೈತ ಸಂಘ ನಡೆಸುತ್ತಿರುವ ಹೋರಾಟ ಬೆಂಬಲಿಸಿ ಚಳುವಳಿಯಲ್ಲಿ ಧುಮುಕಿದರು. ಬಂಧಿಸಲ್ಪಟ್ಟ ರೈತರ ಕೈಗೆ ಕೋಳ ಹಾಕಿರುವುದನ್ನು ಪ್ರತಿಭಟಿಸಿ ಹೋರಾಟ ನಡೆಸಿದಾಗ ಪೋಲಿಸ್ ಲಾಠಿ ಚಾರ್ಜ್ ಎದುರಿಸಬೇಕಾಯ್ತು. ಆಗ ಬಂಧಿಸಲ್ಪಟ್ಟ ನೀಲಾ ಹತ್ತು ದಿನಗಳ ಕಾಲ ಜೈಲುವಾಸ ಅನುಭವಿಸಿದರು. ಆ ಹೊತ್ತಿನಲ್ಲಿ ಜೈಲಿನಲ್ಲಿದ್ದ ಕಾಲವನ್ನೂ ಸುಮ್ಮನೇ ವ್ಯಯಿಸದೆ ಮಹಿಳಾ ಕೈದಿಗಳನ್ನು ಸಂದರ್ಶಿಸಿ ಜಾಗತೀಕರಣದ ದುಷ್ಪರಿಣಾಮಗಳ ಕುರಿತು ’ಬದುಕು ಬಂದಿಖಾನೆ’ ಎಂಬ ಪುಸ್ತಕ ಬರೆದರು.
ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಮೂಲಕ ಮಹಿಳಾಪರ ಕಾನೂನುಗಳ ಕುರಿತು ಜಾಗೃತಿ, ಹೋರಾಟ ಮುಂದುವರೆಸಿದರು. ಮಹಿಳಾಪರ ಕಾನೂನು ಕಮ್ಮಟ ನಡೆಸಿದರು. ಮಹಿಳೆ ಮತ್ತು ಹೆಂಗೂಸುಗಳ ಸಂಖ್ಯೆಯು ಗಂಭೀರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ’ಹೆಣ್ಣುಮಗು ಉಳಿಸಿ ಮಾನವ ಕುಲ ರಕ್ಷಿಸಿ’ ಎಂಬ ಘೋಷಣೆಯಡಿ ಕವಿಗೋಷ್ಠಿ, ಪುಸ್ತಕ ಪ್ರಕಟಣೆ, ಜಾಗೃತಿ ಸಮಾವೇಶಗಳು, ೨೧ ದಿನಗಳ ಜಾಥಾ ಹಮ್ಮಿಕೊಂಡರು. ಹಂಪಿ ಕನ್ನಡ ವಿವಿಯೊಂದಿಗೆ ಸಂಯುಕ್ತವಾಗಿ ಹೆಣ್ಣು ಭ್ರೂಣ ಹತ್ಯೆ ತಡೆ ಕಾರ‍್ಯಾಗಾರಗಳನ್ನು ನಡೆಸಿದರು. ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಮೂಲಕ ಪ್ರತಿ ತಿಂಗಳ ಎರಡನೆ ಶನಿವಾರದಂದು ಉಚಿತ ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ವರದಕ್ಷಿಣೆಗಾಗಿ ನಡೆಯುವ ದೌರ್ಜನ್ಯ, ಅತ್ಯಾಚಾರ, ಕೊಲೆ, ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಿಂಸೆ ಮುಂತಾದ ಪ್ರಕರಣಗಳನ್ನು ಕೈಗೆತ್ತಿಕೊಂಡು ಹೋರಾಡುತ್ತಿದ್ದಾರೆ. ಸಂಘಟನೆಯ ನೆರವಿನಿಂದ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಿ ಅನವಶ್ಯಕವಾಗಿ ಮುರಿದು ಹೋಗುವ ಸಂಸಾರಗಳಲ್ಲಿ ಸಾಮರಸ್ಯ ತರಲು ಸಾಧ್ಯವಾಗಿದೆ.
ಉದ್ಯೋಗ ಮೂಲಭೂತ ಹಕ್ಕಾಗಬೇಕು ಎಂದು ಚಳುವಳಿ ಸಂಘಟಿಸಿದರು. ದೇಶಾದ್ಯಂತ ಅವರ ಸಂಘಟನೆ ನಡೆಸಿದ ಹೋರಾಟದ ಭಾಗವಾಗಿ ೨೦೦೫ರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯು ಜಾರಿಯಾಯಿತು. ನೀಲಾ ಬೀದರ್ ಜಿಲ್ಲೆಯ ಜವಾಬ್ದಾರಿ ವಹಿಸಿಕೊಂಡು ಅನೇಕ ಗ್ರಾಮಗಳಲ್ಲಿ ಕೃಷಿ ಕೂಲಿಕಾರರನ್ನು ಸಂಘಟಿಸಿದರು. ಜಾಗೃತ ಸಮಾವೇಶಗಳು, ಹೋರಾಟಗಳು ನಡೆದವು. ಮಾಹಿತಿ ಹಕ್ಕು ಕಾನೂನನ್ನು ಸಮರ್ಪಕವಾಗಿ ಬಳಸಿಕೊಂಡು ಕೆಲಸ ಪಡೆಯಲಾಯಿತು.
ಕೊನೆಮೊದಲಿರದ ಸಂಘಟನಾತ್ಮಕ ಚಟುವಟಿಕೆಗಳ ಜೊತೆಗೆ ಅವರು ಉತ್ತಮ ಬರಹಗಾರ್ತಿಯೂ ಹೌದು. ಅವರಿಗೆ ಸಂದ ಮನ್ನಣೆಗಳೂ ಹಲವು. ಅವರ ಪ್ರಕಟಿತ ಕೃತಿಗಳು ಇವು:
೧. ಬದುಕ ಬೀದಿಯ ಪಯಣ, (ಸಂಯುಕ್ತ ಕವನ ಸಂಕಲನ) ೧೯೯೫
೨. ಬದುಕು ಬಂದೀಖಾನೆ, (ಜೈಲು ಅನುಭವದ ಕಥನಗಳು), ೨೦೦೧
೩. ಮಹಿಳೆ: ಸಮಸ್ಯೆ ಸವಾಲುಗಳು, ಪ್ರಚಾರೋಪನ್ಯಾಸ ಮಾಲೆ. ಕಿರು ಹೊತ್ತಿಗೆ.
೪. ಜ್ಯೋತಿಯೊಳಗಣ ಕಾಂತಿ, (ಕಥಾ ಸಂಕಲನ) ೨೦೦೯
೫. ನೆಲದ ಪಿಸು ಮಾತು, (ಅಂಕಣ ಬರಹ ಸಂಗ್ರಹ)೨೦೦೯
೬. ನೆಲದ ನಂಟು (ಸಂಪಾದನೆ), ನರೇಗಾ ಅನುಷ್ಟಾನದ ಕೈಪಿಡಿ ೨೦೧೦
೭. ತಿಪ್ಪೆಯನರಸಿ ಮತ್ತು ಇತರೆ ಕತೆಗಳು, (ಕಥಾ ಸಂಕಲನ)೨೦೧೦
೮. ಬಾಳ ಕೌದಿ, ಅಂಕಣ ಬರಹಗಳು, ಪಲ್ಲವ ಪ್ರಕಾಶನ ಚನ್ನಪಟ್ಟಣ ೨೦೧೪.
೯. ರೈಲು ಚಿತ್ರಗಳು (ಪ್ರವಾಸ ಕಥನ), (ಅಚ್ಚಿನಲ್ಲಿ)
ಪ್ರಶಸ್ತಿ \ ಬಹುಮಾನ
’ಕೊಂದಹರುಳಿದರೆ’ ಕತೆಗೆ ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ರಾಜಪುರೋಹಿತ ದತ್ತಿ ಪುರಸ್ಕಾರ, ಚಿನ್ನದ ಪದಕದೊಂದಿಗೆ. ಪ್ರಥಮ ಬಹುಮಾನ ಬಂತು. ೨೦೦೯ರ ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಕಥಾ ಸ್ಪರ್ಧೆಯಲ್ಲಿ ’ನೆಲ ತಳವಾರನಾದರೆ’ ಕತೆಯು ಮೆಚ್ಚುಗೆ ಕತೆಯಾಗಿದೆ. ಮಾತೋಶ್ರಿ ಮಹಾದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನದ ಅಮ್ಮ ಪ್ರಶಸ್ತಿ ೨೦೦೯ರಲ್ಲಿ ದೊರೆಯಿತು. ೨೦೧೦ರ ಪ್ರಜಾವಾಣಿ ದೀಪಾವಳಿ ಸಂಭ್ರಮದ ಕಥಾಸ್ಪರ್ಧೆಯಲ್ಲಿ ’ತಿಪ್ಪೆಯನರಸಿ’ ಕತೆಗೆ ದ್ವಿತೀಯ ಬಹುಮಾನ ಬಂತು. ೨೦೧೧ರಲ್ಲಿ ಶ್ರೀಮತಿ ಯಶೋಧಾ ರಾಗೌ ಟ್ರಸ್ಟ್ ಮೈಸೂರು ವತಿಯಿಂದ ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ ದೊರೆತಿದೆ. ೨೦೧೧ರಲ್ಲಿ ಕರ್ನಾಟಕ ಲೇಖಕಿಯರ ಸಂಘದಿಂದ ಸುಧಾಮೂರ್ತಿ ದತ್ತಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯಿಂದ ೨೦೧೨-೧೩ನೇ ಸಾಲಿನ ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ, ೨೦೧೨ರಲ್ಲಿ ಉರಿಲಿಂಗ ಪೆದ್ದಿ ಟ್ರಸ್ಟ್ ಬೇಲೂರು ಇವರಿಂದ ಬೀದರ ಜಿಲ್ಲಾ ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ೨೦೧೨ರಲ್ಲಿ ಸಂಧ್ಯಾ ಸಾಹಿತ್ಯ ವೇದಿಕೆ ಶಹಾಪೂರ ವತಿಯಿಂದ ’ಹಾಲುಗಲ್ಲದ ಮೀಸೆ’ ಕತೆಗೆ ಮೇವುಂಡಿ ಮಲ್ಹಾರಿ ಮಕ್ಕಳ ಕಥಾ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರಿಂದ ೨೦೧೨-೧೩ ನೇ ಸಾಲಿನ ದತ್ತಿನಿಧಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಬೀದರದಲ್ಲಿ ೨೦೧೩ರಲ್ಲಿ ನಡೆಸಿದ ಎರಡು ದಿನ ನಡೆದ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ, ೨೦೧೪-೧೫ ನೇ ಸಾಲಿನಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಮುಂತಾಗಿ ನಾನಾ ಗೌರವ, ಮನ್ನಣೆ, ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದು ಈಗ ‘ಬಂಡ್ರಿ ಸಮಾಜಮುಖಿ ಶ್ರಮಜೀವಿ’ ಪ್ರಶಸ್ತಿಯು ಧಾರವಾಡದಲ್ಲಿ ೨೦೧೮, ಮೇ ೨೭ರಂದು ನೀಡಲಾಗುತ್ತಿದೆ.


ಯುವ ಕವಿ ಎಚ್. ಲಕ್ಷ್ಮೀನಾರಾಯಣಸ್ವಾಮಿ
೧೯೮೭ ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಯವರು ಬೆಂಗಳೂರು ವಿ.ವಿ ಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಈಗ ಅಲ್ಲಿಯೇ ಹಿರಿಯ ಸಂಶೋಧನಾ ವಿದ್ಯಾರ್ಥಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ’ಗೆಳತಿ ಮತ್ತೊಮ್ಮೆ ಯೋಚಿಸು’ ’ಮುಟ್ಟಿನ ನೆತ್ತರಲ್ಲಿ’ ’ಉರಿವ ಕೆಂಡದ ಸೆರಗು’ ಕವನ ಸಂಕಲನಗಳೂ, ’ಜಾಲಿಮರದ ಜೋಳಿಗೆಯಲ್ಲಿ’ ಎಂಬ ಖಂಡಕಾವ್ಯ ಕೃತಿಯೂ ಹೊರಬಂದಿದ್ದು, ಅವರ ’ತೊಗಲ ಚೀಲದ ಕರ್ಣ’ ಕೃತಿಗೆ ೨೦೧೭ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಲಭಿಸಿದೆ. ’ಬಹುಪರಾಕಿನ ಸಂತೆಯೊಳಗೆ’ ವಿಮರ್ಶಾ ಕೃತಿ ಹಾಗೂ ಡಾ. ಎಸ್ ಎನ್ ಲಕ್ಷ್ಮೀನಾರಾಯಣ ಭಟ್ಟರ ಕುರಿತಾದ ಕಿರು ಹೊತ್ತಿಗೆಯನ್ನು ಪ್ರಕಟಿಸಿದ್ದಾರೆ. ಬೆಂಗಳೂರು ಸಾರಿಗೆ ಸಂಸ್ಥೆ ನೀಡುವ ಅರಳು ಸಾಹಿತ್ಯ ಪ್ರಶಸ್ತಿ, ದಲಿತ ಪುಸ್ತಕ ಪ್ರಶಸ್ತಿ ಹಾಗೂ ಮುಳ್ಳೂರು ನಾಗರಾಜು ಕಾವ್ಯ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ’ಕುವೆಂಪು ಯುವ ಕವಿ ಪ್ರಶಸ್ತಿ’ಗಳು ಇವರ ಕೃತಿಗಳಿಗೆ ಸಂದಿವೆ.
೨೦೧೭ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಬೆಂಗಳೂರಿನಲ್ಲಿ ಎಚ್. ಲಕ್ಷ್ಮೀನಾರಾಯಣ ಸ್ವಾಮಿಯವರ ’ತೊಗಲ ಚೀಲದ ಕರ್ಣ’ ಕೃತಿಗೆ ಲಭಿಸಿದೆ. ಪ್ರಶಸ್ತಿಯು ೫ ಸಾವಿರ ನಗದು ಮತ್ತು ಪ್ರಶಸ್ತಿ ಪಲಕವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ಮೇ ತಿಂಗಳಿನ ೨೬,೨೭ರಂದು ಧಾರವಾಡದಲ್ಲಿ ಜರುಲಿರುವ "ಮೇ ಸಾಹಿತ್ಯ ಮೇಳ"ದಲ್ಲಿ ಹಿರಿಯ ಕವಿ ಸಮಾಜವಾದಿ ಚಿಂತಕರಾದ ಕಾಳೇಗೌಡ ನಾಗವಾರ ಅವರು ಪ್ರದಾನ ಮಾಡುವರು.

Monday, February 12, 2018

ರೇಣುಕಾ ನಿಡಗುಂದಿ ; ಎರಡು ಕವಿತೆಗಳು

ಬೇಕು ನೀನು...
Image result for abstract painting on love pain


ಇರಬೇಕು ನೀನು ಹೀಗೇ
ನನ್ನ ಛಿದ್ರಗೊಂಡ ಆತ್ಮದ ತುಣುಕುಗಳನ್ನ 
ಫಳ ಫಳ ಉಜ್ಜಿ ಕನ್ನಡಿಯಂತೆ
ಆಗಾಗ
ನನ್ನೆದುರು ನಿಲ್ಲಿಸಿ
ಮತ್ತೆ ಮತ್ತೆ ಕತ್ತುಕೊಂಕಿಸಿ ನೋಡಿಕೊಳ್ಳಲು 
ಬೇಕು ನೀ ನನಗೆ...
ಸದ್ದಿಲ್ಲದ ಬಾಗಿಲಲ್ಲಿ
ಗಾಳಿಯ ಸದ್ದಿಗೂ ಚಡಪಡಿಸುವ 
ಚಿಲಕದ ಕೊಂಡಿಗೇ ಸಿಕ್ಕಿಹೋದ
ಹಳೇ ನಂಟುಗಳ ನೇವರಿಸಿ 
ಗಂಟು ಬಿಡಿಸಿ
ತಾಳೆ ಹಾಕಲು ಹೀಗೇ
ಇರಬೇಕು ನೀನು.
ಇರದ ಘಳಿಗೆಗಳ ಸಾಲದಲ್ಲೂ
ಸಾಲದೇ
ಮತ್ತೆ ಮತ್ತೆ ಸೋಲುವ 
ಬಯಕೆಗಳು
ಹುತ್ತ ಕಟ್ಟಿಹೋದ ಕಾಲದ ಪದರಿನಲ್ಲೂ
ಹಂಚಿಹೋದ ನರಳಿಕೆಗಳು ಅತ್ತಲೂ 
ಇತ್ತಲೂ
ಸುಮ್ಮನೇ ಹರಡಿಕೊಂಡ ಬೇರುಗಳನ್ನು 
ಕೊಂಬೆಗಳ ಮೇಲಿನ ಗೂಡನ್ನೂ 
ನೋಡಲು
ಇರಬೇಕು ನೀ ನನ್ನ ಬಳಿ ಹೀಗೇ......
***


ಮಾತು
Image result for abstract painting on love pain


ಬಾ ನಲ್ಲ, ಇಂದಾದರೂ ಮಾತಾಡೋಣ

ನಿನ್ನ ಹೃದಯದ ಉದ್ಯಾನದಲಿ
ಹಸಿರು ಆಸೆಗಳ ಎಲೆಗಳಂತೆ
ಮಾತುಗಳು ಯಾವಾಗ ಚಿಗುರಿದರೂ
ನೀನು ಅದೇ ಮಾತನ್ನು ಚುವುಟುತ್ತಿದ್ದೆ....

ಒಂದೊಂದೂ ನಾಜೂಕಿನ ಮಾತನ್ನು ಬಚ್ಚಿಟ್ಟೆ
ಒಂದೊಂದೂ ಎಲೆಯನು ಒಣಗಲು ಬಿಟ್ಟೆ..

ಮಣ್ಣಿನ ಈ ಒಲೆಯಿಂದ
ನಾವೊಂದು ಕಿಡಿಯನ್ನು ಹುಡುಕೋಣ
ಒಂದೆರಡು ಸಲ ಗಾಳಿ ಊದೋಣ
ಆರುತ್ತಿರುವ ಕಟ್ಟಿಗೆ ಮತ್ತೆ ಹೊತ್ತಿಕೊಳ್ಳಲಿ.!

ಮಣ್ಣಿನ ಈ ಒಲೆಯಿಂದ
ಪ್ರೇಮದ ಕಾವು ಪಿಸುಗುಡಲಿ
ನನ್ನ ದೇಹದ ಮಡಿಕೆಯಲ್ಲಿ
ಹೃದಯದ ನೀರು ಕುದಿಯುತ್ತಿದೆ...

ಬಾ ನಲ್ಲ, ಇಂದು ಕಟ್ಟಿಟ್ಟ ಗಂಟು ಬಿಚ್ಚೋಣ

ಹಸಿರು ಚಹದ ಎಲೆಗಳಂತೆ
ಅವೇ ಮುರಿದು ಕಳೆದ ಮಾತುಗಳನ್ನು
ಅವೇ ಒಣ ಜೋಪಾನದ ಮಾತುಗಳನ್ನು
ಈ ನೀರಲ್ಲಿ ಹಾಕಿ ನೋಡು
ಇದರ ಬಣ್ಣ ಬದಲಿಸಿ ನೋಡು ..!

ಬಿಸಿ ಗುಟುಕೊಂದ ನೀನು ಕುಡಿ
ಬಿಸಿ ಗುಟುಕೊಂದ ನಾನೂ ಕುಡಿವೆ

ಆಯುಷ್ಯದ ಗ್ರೀಷ್ಮವನ್ನಂತೂ ನಾವು ಕಳೆದವು
ಆಯುಷ್ಯದ ಶಿಶಿರವನ್ನೀಗ ಕಳೆಯಲಾಗದು ...

ಅಮೃತಾ ಪ್ರೀತಂ
ಅನು : ರೇಣುಕಾ ನಿಡಗುಂದಿ

Thursday, February 08, 2018

ಆರ್ಥಿಕತೆ ಮತ್ತು ಜನತೆಅನುಶಿವಸುಂದರ್  
                                                                                               
ಕೃಪೆ: Economic and Political weekly                                                     Feb 3,  2018. Vol. 53. No. 5       
                                                                                                           ಆರ್ಥಿಕ ಸಮೀಕ್ಷೆಯ ಅಲಂಕಾರಿಕ ಮಾತುಗಳೇನೇ ಇದ್ದರೂ ಆರ್ಥಿಕತೆಯ ಸ್ಥಿತಿಗತಿ ಮತ್ತು ಜನತೆಯ ಪರಿಸ್ಥಿತಿ ಎರಡೂ ಕೆಟ್ಟದಾಗಿದೆ.


ಬಜೆಟ್ಟಿಗೆ ಮುನ್ನ ಸರ್ಕಾರವು ಹೊರತಂದಿರುವ ಭಾರತದ ಆರ್ಥಿಕ ಸಮೀಕ್ಷೆ-೨೦೧೭-೧೮ ಪ್ರಕಾರ ೨೦೧೭-೧೮ರಲ್ಲಿ ಭಾರತದ ನೈಜ ಜಿಡಿಪಿ ಅಭಿವೃದ್ಧಿ ದರ ಶೇ..೭೫ ಅಗಿದ್ದು, ೨೦೧೮-೧೯ರಲ್ಲಿ ಶೇ.-.೫ರಷ್ಟಾಗಬಹುದು. ಇದರ ಜೊತೆಗೆ ೨೦೧೪-೧೫ ಮತ್ತು ೨೦೧೬-೧೭ರ ನಡುವೆ  ಭಾರತದ ಜಿಡಿಪಿಯ ಸರಾಸರಿ ಅಭಿವೃದ್ಧಿ ದರ ಶೇ..೫ರಷ್ಟಿತ್ತೆಂದು ಕೇಂದ್ರೀಯ ಅಂಕಿಅಂಶಗಳ ಇಲಾಖೆಯ ಹೇಳುತ್ತದೆ. ಇವೆರಡೂ ಅಂಕಿಅಂಶಗಳನ್ನು ನಂಬುವುದೇ ಆದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೆಂದಾಗುತ್ತದೆ. ಇದಲ್ಲದೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನಿಫ್ಟಿ-೫೦ ಸೂಚ್ಯಂಕಗಳಲ್ಲಿನ ಸತತ ಏರಿಕೆಗಳು ತೋರಿಸುವಂತೆ ಶೇರು ಮಾರುಕಟ್ಟೆ ಸತತ ಏರಿಕೆಯನ್ನು ಕಾಣುತ್ತಾ ಉತ್ಕರ್ಷದಲ್ಲಿದೆ. ಆರ್ಥಿಕ ಸಮೀಕ್ಷೆಯ ಶಿಫಾರಸ್ಸಿನ ಪ್ರಕಾರ ಭಾರತವು ತನ್ನ ತೀವ್ರಗತಿಯ ಆರ್ಥಿಕ ಪ್ರಗತಿಯನ್ನು ಮುಂದುವರೆಸಿಕೊಂಡು ಹೋಗಬೇಕೆಂದರೆ ಅದನ್ನು ಆಗುಮಾಡುವ ಎರಡು ಇಂಜಿನ್ಗಳಾದ ಖಾಸಗಿ ಹೂಡಿಕೆ ಮತ್ತು ರಫ್ತುಗಳ ಅಭಿವೃದ್ಧಿಗೆ ಸೂಕ್ತವಾದ ವಾತಾವರಣವನ್ನು ಒದಗಿಸಬೇಕು. ಸಮೀಕ್ಷೆಯ ಕರ್ತೃಗಳು ಭಾರತವು ೨೦೦೩- ಮತ್ತು ೨೦೦೭-೦೮ರ ಅವಧಿಯಲ್ಲಿ ಕಂಡಂಥ ಅಧಿಕ ಏರಿಕೆ ದರವನ್ನು ಮುಟ್ಟಬೇಕು ಮಾತ್ರವಲ್ಲದೆ ದರವನ್ನು ದೀರ್ಘಕಾಲ ಉಳಿಸಿಕೊಳ್ಳಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅದು ಹೇಗೆ ಸಾಧ್ಯವಾದೀತೆಂಬುದು ಅವರಿಗೆ ತಿಳಿದಂತಿಲ್ಲ. ಅದನ್ನು ತಿಳಿಯಬೇಕೆಂದರೆ ಅಧಿಕ ಅಭಿವೃದ್ಧಿದರವು ಏಕೆ ಇಲ್ಲದಂತಾಯಿತು ಮತ್ತು ಅದರೊಳಗಿದ್ದ ಬಗೆಹರಿಯಲಾದಂಥ ಸಮಸ್ಯೆಗಳೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕಿರುತ್ತದೆ. ಆರ್ಥಿಕ ಸಮೀಕ್ಷೆಯಲ್ಲಿ ಇತರ ದೇಶಗಳಲ್ಲಿ ಹೂಡಿಕೆ ಮತ್ತು ಉಳಿತಾಯಗಳು ಇಳಿಮುಖವಾಗಿದ್ದಕ್ಕೆ ಕಾರಣವೇನೆಂಬುದನ್ನು ತಿಳಿದು ಕೊಳ್ಳುವ ಪ್ರಯತ್ನವಿದೆಯಾಗಲೀ ಭಾರತದಲ್ಲಿನ ಅನುಭವಗಳನ್ನು ಅರಿಯುವ ಪ್ರಯತ್ನಗಳಾಗಿಲ್ಲ.

ಆರ್ಥಿಕ ಸಮೀಕ್ಷೆಯಲ್ಲಿನ ಅಂಕಿಅಂಶಗಳನ್ನು ಗಮನಿಸಿ ಹೇಳುವುದಾದರೆ ಆರ್ಥಿಕತೆಯ ಸರಬರಾಜು ಮತ್ತು ಬೇಡಿಕೆಯ ವಲಯಗಳಲ್ಲಿ ಮೊದಲು ಬೇಡಿಕೆಯ ಕಡೆಯಿಂದ ನೋಡುವುದಾದಲ್ಲಿ ಬಂಡವಾಳ ಹೂಡಿಕೆಯು ಗಣನೀಯವಾಗಿ ಕುಸಿದಿದೆ. ಆದರೂ ಅದು ಜಿಡಿಪಿ ಬೆಳವಣಿಗೆಯ ದರದ ಮೇಲೆ ಅಷ್ಟೇ ತೀವ್ರವಾಗಿ ಪರಿಣಾಮಬೀರಿಲ್ಲ. ಆದರೆ ಬಂಡವಾಳ-ಉತ್ಪಾದನೆಯ ಅನುಪಾತದ ಪ್ರಮಾಣವು ತೀವ್ರವಾಗಿ ಕಡಿಮೆಯಾಗಿದ್ದರೆ ಮಾತ್ರ ಜಿಡಿಪಿ ಅಭಿವೃದ್ಧಿ ದರದ ಬಗ್ಗೆ ಸಮೀಕ್ಷೆಯ ಅಧಿಕೃತತೆಯನ್ನು ನಂಬಬಹುದಾಗಿತ್ತು. ಆದರೆ ಅನುಪಾತವು ಕಡಿಮೆಯಾಗಿದೆಯೆಂದು ಹೇಳಬಲ್ಲ ಯಾವುದೇ ಬೆಳವಣಿಗೆಗಳು ಆಗಿಲ್ಲ. ಬಂಡವಾಳ ಹೂಡಿಕೆಯ ಅಂಕಿಅಂಶಗಳು ಲಭ್ಯವಿರುವುದು ಕೇವಲ ೨೦೧೫-೧೬ ಸಾಲಿನವರೆಗೆ ಮಾತ್ರ. ಜಿಡಿಪಿಯ ಅನುಪಾತದಲ್ಲಿ ಬಂಡವಾ ಹೂಡಿಕೆ-ಒಟ್ಟಾರೆ ಬಂಡವಾಳ ಸೃಷ್ಟಿಯ ಪ್ರಮಾಣವು ೨೦೧೧-೧೨ರಲ್ಲಿ ಶೇ.೩೯ರಷ್ಟಿದ್ದದ್ದು ೨೦೧೫-೧೬ರಲ್ಲಿ ಶೇ.೩೩.೩ಕ್ಕೆ ಕುಸಿದಿದೆ. ಅದು ೨೦೧೬-೧೭ರಲ್ಲಿ ಇನ್ನೂ ಶೇಕಡಾ ರಷ್ಟು ಕುಸಿತವನ್ನು ಕಂಡಿದೆ. ದೇಶದ ಆರ್ಥಿಕತೆಯೆ ಬೆಳವಣಿಗೆಯ ಇಂಜಿನ್ ಖಾಸಗಿ ಕಾರ್ಪೊರೇಟ್ ಬಂಡವಾಳ ಹೂಡಿಕೆಯೇ ಆಗಿರುವಾಗ ಸಾಲಿನಲ್ಲೂ ಇದರ  ಪ್ರಮಾಣ ಇನ್ನಷ್ಟು ಕಡಿಮೆಯೇ ಆಗುವ ಸಾಧ್ಯತೆಯೇ ಹೆಚ್ಚಾಗಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ ಖಾಸಗಿ ಕಂಪನಿಗಳು ಎದುರಿಸುತ್ತಿರುವ ಸಾಲ ಮರುಪಾವತಿಸಲಾಗದ ಬಿಕ್ಕಟ್ಟು ಹಾಗೂ ಸಾರ್ವಜನಿಕ ಬ್ಯಾಂಕುಗಳು ಎದುರಿಸುತ್ತಿರುವ ಕೆಟ್ಟ ಸಾಲದ ಸಮಸ್ಯೆಗಳೆ ಬಂಡವಾಳ ಹೂಡಿಕೆಯಲ್ಲಿ ಆಗಿರುವ ಕುಸಿತಕ್ಕೆ ಕಾರಣ.

ಆದರೆ ಕೀನ್ಸ್ ಹೇಳುವಂತೆ ನೈಜ ಆರ್ಥಿಕತೆಯಲ್ಲಿ ಬಂಡವಾಳ ಹೂಡಿಕೆಯ ಪ್ರವೃತ್ತಿಯನ್ನು ಹೆಚ್ಚಿಸುವಂತೆ ಮಾಡಬೇಕಾದ ಬೇಡಿಕೆ ರಂಗದ ಪರಿಸ್ಥಿತಿಯೇನು? ೨೦೦೩- ಮತ್ತು ೨೦೦೭-೮ರ ಅವಧಿಯಲ್ಲಿ ಬಂಡವಾಳ ಹೂಡಿಕೆಯ ಪ್ರವೃತ್ತಿಯನ್ನು ಹೆಚ್ಚಿಸಿದ್ದು ದೇಶದ ಆಸ್ತಿಪಾಸ್ತಿಗಳನ್ನು ಅಗ್ಗದ ದರದಲ್ಲಿ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ದೊರೆಯುವಂತೆ ಮಾಡಿದ್ದು. ಇದಕ್ಕೆ ಕಾರಣ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಬಿಡಿಗಾಸಿಗೆ ಖಾಸಗೀಕರಣ ಮಾಡುವ ನೀತಿಗಳನ್ನು ಜಾರಿಗೆ ತಂದದ್ದು. ನಂತರದಲ್ಲಿ ಯುಪಿಎ ಸರ್ಕಾರ ಸಹ ದೇಶದ ಖನಿಜ, ಅರಣ್ಯ, ಕಲ್ಲಿದ್ದಲುಟೆಲಿಕಾಂ ತರಂಗಾಂತರಗಳಾನ್ನೂ ಒಳಗೊಂಡಂತೆ ದೇಶದ ಸಂಪನ್ಮೂಲಗಳನ್ನು ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಅಗ್ಗದ ದರಗಳಿಗೆ ಪರಭಾರೆ ಮಾಡುವುದನ್ನು ಮುಂದುವರೆಸಿತು. ಇದರ ಜೊತೆ ಕಾರ್ಪೊರೇಟ್ ಕಂಪನಿಗಳು ಲಾಭದಾಯಕವಲ್ಲ ಎಂದು ಭಾವಿಸುವ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯ ಮೂಲಭೂತ ಸೌಕರ್ಯ ಯೋಜನೆಗಳಿಗೆ (ಪಿಪಿಪಿ) ವಯಬಿಲಿಟಿ ಗ್ಯಾಪ್ ಫಂಡಿಂಗ್ (ಲಾಭದಾಯಕತೆ ಕೊರತೆಯನ್ನು ತುಂಬುವ ಅನುದಾನ) ಹೆಸರಿನಲ್ಲಿ ದೊಡ್ಡ ಮೊತ್ತದ ಬಂಡವಾಳ ಸಬ್ಸಿಡಿ ಒದಗಿಸಿದ್ದು ಬೇರೆ ನಡೆಯಿತು. ಆದರೆ ಬಯಲಾದ ಭ್ರಷ್ಟಾಚಾರಗಳು ಮತ್ತು ಸಾರ್ವಜನಿಕರ ಪ್ರತಿರೋಧಗಳ ಕಾರಣದಿಂದಾಗಿ ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಸಂಪನ್ಮೂಲ ಪರಭಾರೆ ಮಾಡುವ ನೀತಿಗಳನ್ನು ರಾಜಕೀಯವಾಗಿ ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಒಂದು ವೇಳೆ ೨೦೧೯ರ ಚುನಾವಣೆಯಲ್ಲಿ ನರೇಂದ್ರ ಮೋದಿ ಸರ್ಕಾರವೇ ಅಧಿಕಾರಕ್ಕೆ ಬಂದರೆ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಅಗ್ಗದ ಬೆಲೆಗೆ ಕಾರ್ಪೊರೇಟ್ ಕಂಪನಿಗಳಿಗೆ ವ್ಯೂಹಾತ್ಮಕವಾಗಿ ಮಾರುವ ಹಳೆಯ ಎನ್ಡಿಎ ಸರ್ಕಾರದ ನೀತಿಗಳನ್ನು ಮುಂದುವರೆಸುವರೇ?

ಉತ್ಪಾದಕ ಕ್ಷೇತ್ರದಲ್ಲಿ ಒಟ್ಟಾರೆ ಮೌಲ್ಯ ಸಂಚಯನ (ಜಿವಿಎ) ಅಂಕಿಅಂಶಗಳು ೨೦೧೭-೧೮ರ ಎರಡನೇ ತ್ರೈಮಾಸಿಕದಲ್ಲಿ ಸ್ವಲ್ಪ ವೃದ್ಧಿಯನ್ನು ಕಂಡಿದ್ದರೂ ೨೦೧೫-೧೬ರ ಕೊನೆಯ ತ್ರೈಮಾಸಿಕದಿಂದ ಸತತ ಇಳಿಮುಖವನ್ನೂ ತೋರುತ್ತಿರುವುದು ಗಂಭೀರವಾದ ಸಂಗತಿಯಾಗಿದೆ. ಇದಕ್ಕೆ ಭೂಮಿ ಬೆಲೆಯು ಗಗನಕ್ಕೇರುತ್ತಿರುವುದು ಮತ್ತು ಸಾಲ ಮರುಪಾವತಿ ಸಮಸ್ಯೆಗಳಿಂದಾಗಿ ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುತ್ತಿರುವುದನ್ನು ತತ್ಕ್ಷಣದ ಕಾರಣಗಳೆಂದು ಸೂಚಿಸಲಾಗುತ್ತಿದೆ. ಆದರೆ ಆಮದು ಸರಕುಗಳು ಒಡ್ಡುತ್ತಿರ್ರುವ ಸ್ಪರ್ಧೆಯು ಉದ್ಯಮಗಳ ಮಾರಾಟದ ಆದಾಯದ ಮೇಲೂ, ಸಾಮರ್ಥ್ಯದ ಬಳಕೆಯ ಮೇಲೂ ತೀವ್ರವಾದ ಪರಿಣಾಮವನ್ನು ಉಂಟುಮಾಡಿದೆ. ಹೀಗಾಗಿ ಅವುಗಳ ಲಾಭಾಂಶವು ಕಡಿಮೆಯಾಗುತ್ತಿದೆ. ಇದು ಅವುಗಳ ಲಾಭದ ದರದ ನಿರೀಕ್ಷೆಯ ಮೇಲೂ ಹಾಗೂ ಮೂಲಕ ಹೂಡಿಕೆಯ ಪ್ರವೃತ್ತಿಯ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತಿದೆ. ಅಷ್ಟು ಮಾತ್ರವಲ್ಲದೆ ೨೦೧೬-೧೭ ಮತ್ತು ೨೦೧೭-೧೮ರಲ್ಲಿ ನಿರ್ಮಾಣ ಕ್ಷೇತ್ರದ ಜಿವಿಎ ನಲ್ಲೂ ಅಭಿವೃದ್ಧಿ ಕಂಡುಬರುತ್ತಿಲ್ಲ. ಇದರಿಂದಾಗಿ ಉಕ್ಕು, ಸಿಮೆಂಟ್, ಉದ್ಯೋಗ ಮತ್ತಿತರ ಭೌತಿಕ ಒಳಸುರಿಗಳ ಬೇಡಿಕೆಯ ಮೇಲೂ ನಕಾರಾತ್ಮಕ ಪರಿಣಾಮವನ್ನೂ ಬೀರಿದೆ. ಪರಿಣಾಮವಾಗಿ ಕೈಗಾರಿಕೆಗಳ ನಿರೀಕ್ಷಿತ ಲಾಭದ ದರಗಳು ಮತ್ತು ಹೂಡಿಕೆಗಳು ಕಡಿಮೆಯಾಗಿವೆ.

೨೦೧೬-೧೭ರ ಕೊನೆಯ ತ್ರೈಮಾಸಿಕದ ನಂತರದಲ್ಲಿ ಕೃಷಿಯಲ್ಲೂ ಜಿವಿಎ ಅಭಿವೃದ್ಧಿ ದರ ಹೊಡೆತವನ್ನನುಭವಿಸಿದೆ. ಆರ್ಥಿಕ ಸಮೀಕ್ಷೆಯು ೨೦೧೭-೧೮ರ ಎರಡನೇ ಅವಧಿಯಲ್ಲಿ ಕೃಷಿಯು ಚೇತರಿಸಿಕೊಳ್ಳುತ್ತದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದೆ. ಆದರೆ ಹಾಗಾಗಬೇಕೆಂದರೆ ಅಹಾರ ಧಾನ್ಯ ಮತ್ತು ವಾಣಿಜ್ಯ ಬೆಳಗಳೆರಡಕ್ಕೂ ಲಾಭದಾಯಕ ದರಗಳನ್ನು ಖಾತರಿಪಡಿಸುವ ವ್ಯವಸ್ಥೆಯು ಪುನಶ್ಚೇತನಗೊಳ್ಳಬೇಕು. ಅಷ್ಟು ಮಾತ್ರವಲ್ಲದೆ ವಾಣಿಜ್ಯಬೆಳೆಗಳ ಮಾರಾಟ ನಿಗಮಗಳ ಮಾರುಕಟ್ಟೆ ವ್ಯವಹಾರಗಳು ನವೀಕರಣಗೊಳ್ಳಬೇಕು. ರೈತರ ಸಾಲ ಪರಿಹಾರದ ಜೊತೆಜೊತೆಗೆ ಇಂಥಾ ಬೆಲೆ ಬೆಂಬಲದ ಯೋಜನೆಗಳು ಜೊತೆಗೂಡಬೇಕು. ರೈತಾಪಿಯ ಸಾಲ ಮನ್ನ ಮಾಡುವುದು ಒಂದು ನೈತಿಕ ಅವಘಡಕ್ಕೆ ದಾರಿಮಾಡಿಕೊಡಬಹುದೆಂಬ ಆತಂಕವನ್ನು ಕೆಲವರು ವ್ಯಕ್ತಪಡಿಸುತ್ತಾರೆ. ಆದರೆ ಅದೇ ಮಹಾಶಯರುಗಳು ಕೈಗಾರಿಕೋದ್ಯಮಿಗಳು, ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದಿದ್ದರೂ, ಸಾಲ ಮನ್ನ ಯೋಜನೆಗಳ ಫಲಾನುಭವಿಗಳಾಗುತ್ತಲೇ ಇರುವುದರ ಬಗ್ಗೆ ಚಕಾರವೆತ್ತುವುದಿಲ್ಲ. ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದ ಉದ್ಯಮಿಗಳಿಗೆ ಸೀಮಿತ ಹೊಣೆಗಾರಿಕೆ (ಲಿಮಿಟೆಡ್ ಲಯಬಿಲಿಟಿ) ಸೌಲಭ್ಯಗಳು ದೊರೆಯದಂತೆ ಕಂಪನಿ ಕಾನೂನುಗಳಿಗೆ ತಿದ್ದುಪಡಿ ತರಬೇಕೆಂದು ಸಲಹೆ ಮಾಡಿದರೆ ಸಾಕು ಇವರೆಲ್ಲರೂ ತಿರುಗಿಬೀಳುತ್ತಾರೆ.

ಸ್ವಲ್ಪ ಹಿಂದೆ, ಎಂದರೆ, ಸಾರ್ವಜನಿಕ ಜೀವನದಲ್ಲಿ ಅಪ್ರಾಮಾಣಿಕತೆಯು ಇಂದಿನ ಮಟ್ಟವನ್ನು ತಲುಪಿರದ ಕಾಲದಲ್ಲಿ, ಬ್ರೆಜಿಲ್ ದೇಶದಲ್ಲಿ ಸೇನಾಡಳಿತವು ಇದ್ದ ಸಂದರ್ಭದಲ್ಲಿ ಅದರ ಅಧ್ಯಕ್ಷರು ಒಮ್ಮೆ ಅಮೆರಿಕಕ್ಕೆ ಭೇಟಿ ನೀಡಿದಾಗ ಪತ್ರಕರ್ತರು ಬ್ರೆಜಿಲ್ನ್ ಆರ್ಥಿಕತೆಯ ಸ್ಥಿತಿಗತಿ ಹೇಗಿದೆಯೆಂದು ಅವರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಅವರುನನ್ನ ದೇಶದಲ್ಲಿ ಆರ್ಥಿಕತೆಯ ಸ್ಥಿತಿಗತಿ ಚೆನ್ನಾಗಿಯೇ ಇದೆ. ಆದರೆ ಜನತೆಯ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಉತ್ತರಿಸುತ್ತಾರೆ. ಮೋದಿ ಸರ್ಕಾರವು ಜಾರಿಗೆ ತಂದ ನೋಟು ನಿಷೇಧ ಮತ್ತು ಜಿಎಸ್ಟಿಯೆಂಬ ಕ್ರಮಗಳು ಅಸಂಘಟಿತ ವಲಯದ ಜನಜೀವನದ ಮೇಲೆ ಆಘಾತಕಾರವಾದ ದಾಳಿ ಮಾಡಿದ್ದರೂ ಅದನ್ನು ಆಟದ ಸ್ವರೂಪವನ್ನೇ ಬದಲಿಸಿದ ಮಹತ್ವದ ಕ್ರಮಗಳೆಂದು ಕೊಚ್ಚಿಕೊಳ್ಳಲಾಗುತ್ತದೆ. ಆವರ ಪ್ರಕಾರ ಇವುಗಳ ಒಂದೇ ಒಂದು ಅನುದ್ದೇಶಿತ ನಕಾರಾತ್ಮಕ ಪರಿಣಾಮವೆಂದರೆ ಜಿಡಿಪಿ ಬೆಳವಣಿಗೆಯ ದರಗಳಲ್ಲಿ ಒಂದು ಸಣ್ಣ ಇಳಿತವಾಗಿರುವುದು. ಆದರೆ ಉದ್ಯೋಗ ಮತ್ತು ಜೀವನೋಪಾಯಗಳ ಮೇಲೆ ಅದು ಮಾಡಿರುವ ನಕಾರಾತ್ಮಕ ಪರಿಣಾಮಗಳನ್ನು ಸಂಪೂರ್ಣವಾಗಿ ಅಲಕ್ಷ್ಯ ಮಾಡಲಾಗುತ್ತಿದೆ.

ಪತ್ರಿಕೆಯ ಅಂಕಣಗಳಲ್ಲಿ ನೋಟು ನಿಷೇಧದಿಂದ ಜನಸಾಮಾನ್ಯರ ಬದುಕಿನ ಮೇಲಾಗಿರುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಚರ್ಚಿಸಿದ್ದೇವೆ. ಆದರೂ ಜಿಎಸ್ಟಿ ಯು ಹೇಗೆ ಅಸಂಘಟಿತ ಕ್ಷೇತ್ರವನ್ನು ಹಿಂಡುತ್ತಿದೆ ಎಂಬ ಬಗ್ಗೆ ಒಂದೆರಡು ಮಾತುಗಳು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. ಜಿಎಸ್ಟಿಯು ಅಸಂಘಟಿತ ಕ್ಷೇತ್ರದ ಉದ್ಯಮಗಳ ವಹಿವಾಟು ಮಾಡುವ ವೆಚ್ಚವನ್ನು ಹೆಚ್ಚಿಸಿದೆ ಮತ್ತು ಜಿಎಸ್ಟಿ ಮರುಪಾವತಿಗೆ ಕಾಯುವ ವೆಚ್ಚವನ್ನು ಹೆಚ್ಚಿಸಿದೆ. ಅಲ್ಲದೆ ಅಸಂಘಟಿತ ಕ್ಷೇತ್ರವನ್ನು ತೆರಿಗೆ ಬಲೆಯೊಳಗೆ ತಂದುಕೊಂಡು ಖಾಸಗಿ ಕಾರ್ಪೊರೇಟ್ ಕಂಪನಿಗಳ ಮೇಲಿನ ಪರೋಕ್ಷ ತೆರಿಗೆ ಭಾರವನ್ನು ಕಡಿಮೆ ಮಾಡಲಾಗಿದೆ. ಕೃಷಿ ಕ್ಷೇತ್ರವನ್ನೂ ಒಳಗೊಂಡಂತೆ ಅಸಂಘಟಿತ ಕ್ಷೇತ್ರವು ಜಿಡಿಪಿಗೆ ಶೇ.೪೫ರಷ್ಟು ಕೊಡುಗೆಯನ್ನು ನೀಡುತ್ತಿದ್ದು ಶೇ.೭೫ ರಷ್ಟು ಕಾರ್ಮಿಕರನ್ನು ಹೊಂದಿದೆ. ಈಗ ಕೃಷಿಯೇತರ ಅಸಂಘಟಿತ ಕ್ಷೇತ್ರದ ಗಣನೀಯ ಪ್ರಮಾಣದ ವಹಿವಾಟನ್ನು ಜಿಎಸ್ಟಿ ವ್ಯಾಪ್ತಿಯೊಳಗೆ ತಂದುಕೊಂಡಿರುವುದರಿಂದ ಅತ್ಯಂತ ಸೂಕ್ಷ್ಮ ಆರ್ಥಿಕ ಪರಿಸ್ಥಿತಿಯಲ್ಲಿ ವ್ಯವಹರಿಸುತ್ತಿದ್ದ ಕ್ಷೇತ್ರದ ಬಹುಪಾಲು ವಹಿವಾಟುಗಳೇ ಅಸುನೀಗುವ ಸಾಧ್ಯತೆಗಳು ಹೆಚ್ಚಿವೆ, ಇದರಿಂದ ಉದ್ಯೋಗಗಳಿಗೆ ಮತ್ತು ಜೀವನೋಪಾಯಗಳಿಗೆ ಹುದೊಡ್ಡ ಹೊಡೆತ ಬೀಳಲಿದೆ.

ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು (ಇಂಟರ್ ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್) ಹೊರತಂದಿರುವ ಜಾಗತಿಕ ಹಸಿವು ಸೂಚ್ಯಂಕ: ಹಸಿವಿನ ಅಸಮಾನತೆಗಳು-೨೦೧೭ (೨೦೧೭ ಗ್ಲೋಬಲ್ ಹಂಗರ್ ಇಂಡೆಕ್ಸ್: ದಿ ಇನ್ಈಕ್ವಾಲಿಟೀಸ್ ಆಫ್ ಹಂಗರ್) ಪ್ರಕಾರ ಭಾರತದಲ್ಲಿನ ಐದು ವರ್ಷದೊಳಗಿನ ಮಕ್ಕಳು ಎದುರಿಸುತ್ತಿರುವ ಅಪೌಷ್ಟಿಕತೆ, ದೇಹದ ಬೆಳವಣಿಗೆಯಾಗದಿರುವುದು, ಬಲಹೀನತೆ ಮತ್ತು ಸಾವುಗಳ ಪ್ರಮಾಣವು ಬಂಗ್ಲಾದೇಶ ಮತ್ತು ಕೆಲವು ಆಫ್ರಿಕಾ ದೇಶಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಭಾರತದಲ್ಲಿ ಅಗತ್ಯವಿರುವಷ್ಟು ಕ್ಯಾಲೋರಿ ಆಹಾರವನ್ನು ಸೇವಿಸದಿರುವುದರಿಂದ ಶೇ.೩೮ರಷ್ಟು ಮಕ್ಕಳ ದೇಹದ ಬೆಳವಣಿಗೆಯು ಸರಿಯಾಗಿ ಆಗದೆ ಬೆಳೆಯಬೇಕಾದ ಎತ್ತರಕ್ಕೆ ಬೆಳೆಯುವುದೇ ಇಲ್ಲ. ಮೇಲಿನ ಜಾಗತಿಕ ಹಸಿವು ವರದಿಯನ್ನು ಉಲ್ಲೇಖಿಸುವ ಆರ್ಥಿಕ ಸಮೀಕ್ಷೆಯು ಭಾರತದಲ್ಲಿ ಖಾಯಿಲೆಯ ಭಾರವನ್ನು ಹೆಚ್ಚಿಸುವ ಅತಿ ದೊಡ್ಡ (ಶೇ.೧೪.) ಅಂಶವೆಂದರೆ ಅಪೌಷ್ಟಿಕತೆಯೆಂದು ಒಪ್ಪಿಕೊಳ್ಳುತ್ತದೆ. ಇನ್ನೂ ದೊಡ್ಡ ಸಮಸ್ಯೆಯೆಂದರೆ ಬಡತನ, ಸಂಕಷ್ಟಗಳು ಮತ್ತು ದಾರಿದ್ರ್ಯಗಳ ವಿಶಾಲ ಸಾಗರದಲ್ಲಿ ಸಂಪತ್ತು, ಐಷಾರಾಮ, ಮತ್ತು ನಾಗರಿಕತೆಗಳ ದ್ವೀಪಗಳು ಸೃಷ್ಟಿಯಾಗಿರುವುದು. ಗ್ರಾಮೀಣ ಪ್ರದೇಶದ / ಭಾಗದಷ್ಟು ಜನರು ದೈನಂದಿನ ಅಗತ್ಯವಾಗಿರುವ ೨೪೦೦ ಕ್ಯಾಲೋರಿಗಳಷ್ಟು ಶಕ್ತಿಯನ್ನು ನೀಡುವ  ಆಹಾರಕ್ಕಾಗಿ ಮತ್ತು ನಗರ ಪ್ರದೇಶದಲ್ಲಿ / ಭಾಗದಷ್ಟು ಜನರು ೨೧೦೦ ಕ್ಯಾಲೋರಿಯಷ್ಟು ಆಹಾರಕ್ಕಾಗಿ ಅಗತ್ಯವಿರುವಷ್ಟು ವೆಚ್ಚವನ್ನು ಮಾಡಲಾಗದ ಪರಿಸ್ಥಿಯಲ್ಲಿದ್ದಾರೆ. ಇವರ ಪರಿಸ್ಥಿತಿಗಳನ್ನು ಭಾರತ ಸಮಾಜದ ಮತ್ತೊಂದು ತುದಿಯಲ್ಲಿರುವ ೧೦೦ ಡಾಲರ್ ಬಿಲಿಯನಾಧೀಶರ ಅಭೂತಪೂರ್ವ ಐಷಾರಾಮಗಳೊಂದಿಗೆ ಹೋಲಿಸಿ ನೋಡಬೇಕು. ಕಾರಣಕ್ಕಾಗಿಯೇ ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆ (ಐಸಿಡಿಎಸ್) ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳಿಗೆ (ನರೇಗ) ಅಗತ್ಯವಿರುವಷ್ಟು ಸಂಪನ್ಮೂಲಗಳನ್ನು ಒದಗಿಸಬೇಕಾಗಿರುವುದು ಅತ್ಯವಶ್ಯವಾಗಿದೆ.

ಆರ್ಥಿಕ ಸಮೀಕ್ಷೆಯ ಜಿಡಿಪಿ ಮತ್ತು ಜಿವಿಎ ಬಗೆಗಿನ ವಿಶ್ವಾಸಕ್ಕೆ ಯೋಗ್ಯವಲ್ಲದ ಅಂಕಿಅಂಶಗಳು, ಅಭಿವೃದ್ಧಿಯ ಬಗೆಗಿನ ಅದರ ಗೀಳು, ಅಭಿವೃದ್ಧಿ ಪ್ರಕ್ರಿಯೆಗಳು ಏಕೆ ದಾರಿ ತಪ್ಪುತ್ತಿವೆ ಮತ್ತು ಅದನ್ನು ಸರಿದಾರಿಗೆ ತರುವುದು ಹೇಗೆ ಎಂಬ ಬಗ್ಗೆ ಅದರ ತಿಳವಳಿಕೆಗಳು, ಸುಲಭವಾಗಿ ಭಾರತದಲ್ಲಿ ಉದ್ಯಮ ನಡೆಸುವಂತಾಗಲು ಮತ್ತೊಂದು ಮಜಲನ್ನು ಮುಟ್ಟಲು ಅದು ತೋರುತ್ತಿರುವ ಕಾತರಗಳು, ಹವಾಮಾನ ಬದಲಾವಣೆ ಮತ್ತು ಲಿಂಗ ಅಸಮಾನತೆಯ ಬಗ್ಗೆ ಅದರ ಬಾಯುಪಚಾರದ ಮಾತುಗಳೆಲ್ಲವು ಬಜೆಟ್ಟಿನಲ್ಲಿದೆ. ಆದರೂ ಅದರ ಮುಖ್ಯ ಉದ್ದೇಶ  ಮಾತ್ರ ಬಂಡವಾಳ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವುದೇ ಆಗಿದೆ. ಆದರೆ ವಾಸ್ತವದಲ್ಲಿ ದೇಶದ ಆರ್ಥಿಕತೆಯ ಸ್ಥಿತಿಗತಿಗಳೂ ಚೆನ್ನಾಗಿಲ್ಲ. ಜನರ ಪರಿಸ್ಥಿತಿಗಳೂ ಚೆನ್ನಾಗಿಲ್ಲ.

                                                                                          ***                                    
                                    (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation)


ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...